ಅಂಕಣ ಸಂಗಾತಿ

ತೊರೆಯ ಹರಿವು

ಅನುಭವ ಸಂಪಾದನೆ

ಸದಾ ಯಾವುದಾದರೊಂದು ಹೊಸ ಹಾದಿ, ಹೊಸ ತಿರುವುಗಳು ಪ್ರಯಾಣಿಕರಿಗೆ ಸಿಗಲೇಬೇಕು. ಆದರೆ, ಸುಮ್ಮನೆ ಒಂದೆಡೆ ನೆಲೆನಿಂತವರಿಗೆ ಹೊಸತುಗಳು ಲಭಿಸಲು ಹೇಗೆ ಸಾಧ್ಯ? ಅದೇ ಮುಂಜಾವು, ಅದೇ ಮಧ್ಯಾಹ್ನ ಕಡೆಗೆ ಅದೇ ಇಳಿಸಂಜೆ; ದಿನದ ಕೊನೆಗೆ ಒಂದು ಗಾಢಮೌನದ ಕತ್ತಲು. ಇಷ್ಟೇ….! ಆದರೆ, ಇಂಥಾ ಸೀಮಿತ ದಿನಚರಿಯಲ್ಲೂ ಹೊಸತು ಕಾಣುವ ಜನರಿಗೆ ಮುಂಜಾವಿನ ಕೆಮ್ಮುಗಿಲ ಆಕಾರ ಬದಲಾಗಿರುವುದೋ, ಹಕ್ಕಿ ಹಿಂಡಿನ ಹೊಸ ಸಾಲೋ, ಹೊಸ ಉಲಿಯೋ, ಹೂಕುಂದದ ನವ ಕುಸುಮವೋ, ಮಧ್ಯಾಹ್ನದ ನಡು ಬಿಸಿಲಿನಲಿ ಹೊಳೆವ ಬೆಳ್ಳನೆ ಮೋಡಗಳೋ, ಇಳಿಸಂಜೆಯ ಗಾಳಿ ಹೊತ್ತು ತಂದ ಬೇಲಿ ಮೇಲಿನ ಹೊಸ ಹೂವಿನ ಕಂಪೋ, ನೀರವ ರಾತ್ರಿಗಳ ಜೀರುಂಡೆ ಉಲಿಯೋ.. ಕಾಣಸಿಗುವುದು ಸತ್ಯ.

   ಇದನ್ನೇ ಕವಿಗಳು ದರ್ಶನ, ಕಾಣ್ಕೆ ಎಂದರೆ, ಸಂತರು ಜ್ಞಾನೋದಯ ಎಂದರು; ಸಂಶೋಧಕರು ಸಂಶೋಧನೆ, ಆವಿಷ್ಕಾರ ಎಂದರೆ, ಶಿಕ್ಷಕರು ಪಾಠ ಎಂದರು; ಅಡುಗೆ ತಜ್ಞರು ಪಾಕ ಎಂದರೆ, ಕಲಾವಿದರು ಕಲಾತ್ಮಕತೆ ಎಂದರು; ಸಾಮಾನ್ಯರು ದೈವ ನಿಯಾಮ ಎಂದರೆ; ಆಧ್ಯಾತ್ಮಿಗಳು ಇದೇ ಪರಮಾತ್ಮ ಎಂದರು…, ಹೀಗೆ ಯಾರು ಏನನ್ನು ಕಾಣಲು ಇಚ್ಛಿಸಿರುತ್ತಾರೆಯೋ ಅವರಿಗೆ ಅದು ಅವರು ಕಾಣಬಯಸುವ ರೂಪದಲ್ಲಿಯೇ ಲಭ್ಯವಾಗಿರುತ್ತದೆ. ಗ್ರಹಿಸಿಕೊಳ್ಳುವವರಿಗೆ ಅದು ಅರಿವಾಗುತ್ತದೆ.

  ತೃಪ್ತಿ ಎನ್ನುವುದಕ್ಕೂ ಇದೇ ಅಳತೆಗೋಲನ್ನು ಬಳಸಬೇಕು. ಲೌಕಿಕದವರು ಸಾಮಾನ್ಯವಾಗಿ ವಸ್ತು ರೂಪದ ಚರಸ್ಥಿರಾಸ್ತಿಗಳಿಗೆ ತೃಪ್ತರಾದರೆ; ಅಲೌಕಿಕ ಮನಸ್ಥಿತಿಯವರು ಆತ್ಮೋನ್ನತಿಯನ್ನು ಸಾಧಿಸಿ ತೃಪ್ತಿ ಹೊಂದಲು ಬಯಸುತ್ತಾರೆ. ಸಾಮಾನ್ಯ ತಿಳಿವಳಿಕೆಯಲ್ಲಿ ತೃಪ್ತಿ ಅಥವಾ ನೆಮ್ಮದಿಯನ್ನು ಬೇರೆ ಬೇರೆ ರೀತಿಗಳಲ್ಲಿ ಅರ್ಥೈಸಿಕೊಂಡು ವ್ಯಾಖ್ಯಾನಿಸಿದರೆ, ವಿಶೇಷಾರ್ಥದ ವ್ಯಾಖ್ಯಾನಗಳನ್ನೂ ಮಾಡಬಹುದು. ಹಾಗಾಗಿ, ಯಾವುದನ್ನೂ ‘ಇದಂಇತ್ಥಂ’ ಎಂದು ಮುಗಿಸುವಂತಿಲ್ಲ. ಹಾಗಾಗಿಯೇ ಲೋಕಜ್ಞಾನವು ನಾನಾರ್ಥಕ್ಕೆ ಒಳಪಡುತ್ತದೆ. 

   ‘ದೇಶ ಸುತ್ತು ಕೋಶ ಓದು’ ಎನ್ನುತ್ತಿದ್ದುದು ಇಂಥಾ ಅನುಭವ ಗಳಿಸಲಿಕ್ಕಾಗಿಯೇ ಎನ್ನುವುದರಲ್ಲಿ ಸಂಶಯವಿಲ್ಲ. ಸೀಮಿತ ಜೀವನವು ಸಂಕುಚಿತ ಅರ್ಥವನ್ನು ದಕ್ಕಿಸಿಕೊಂಡು ಸಮಸ್ಯೆಗಳನ್ನು ಕಗ್ಗಂಟು ಮಾಡಿಕೊಂಡರೆ, ಆ ಕಗ್ಗಂಟು ಬಿಡಿಸಿಕೊಳ್ಳುವ ತಾಳ್ಮೆಯಾಗಲೀ ಜಾಣ್ಮೆಯನ್ನಾಗಲೀ ದಕ್ಕಿಸಿಕೊಳ್ಳಲಾರದ ಜೀವವು ಹಲವು ಅನಾಹುತಗಳನ್ನು ಮಾಡಿಕೊಳ್ಳಬಹುದು. ಇದರಿಂದ ಪ್ರಾಣಕ್ಕೇ ಎರವಾಗಬಹುದು. 

   ಹೊರ ಜಗತ್ತು ಎಷ್ಟು ವಿಶಾಲ ಹಾಗೂ ನಾವು ಅದರ ನಡುವಲ್ಲಿ ಎಷ್ಟು ಅಲ್ಪರು ಎನ್ನುವುದನ್ನು ಪ್ರವಾಸಗಳು ತಿಳಿಸಿಕೊಡುತ್ತವೆ. ಹಾಗೆಯೇ ನಮಗೆ ಬೃಹದಾಕಾರವಾಗಿ ತೋರುವ ನಮ್ಮ ಸಮಸ್ಯೆಗಳು ಈ ಜಗತ್ತಿನಲ್ಲಿ ಅದೆಷ್ಟು ನಗಣ್ಯ ಎಂಬುದೂ ಸಹ ಅರಿವಾಗಿ, ನಾವು ಯಾವುದನ್ನು ಕಡುಕಷ್ಟವೆಂದು ತಿಳಿದು ಇದರ ವಿರುದ್ಧ ಹೋರಾಡುತ್ತಿರುವೆವೋ ಈಗ ಅದರ ಅಲ್ಪತೆಗಾಗಿ ನಶ್ವರತೆಗಾಗಿ ನಗುವಂತಾಗುತ್ತದೆ. 

  ಇದು ಸಮಸ್ಯೆಯ ವಿಚಾರವಾಗಿಯಲ್ಲ. ನಮ್ಮಲ್ಲಿರುವ ಅಹಂಕಾರವನ್ನು ಮುರಿಯಲೂ ಸಹ ಹೊರ ಜಗತ್ತಿನ ಅರಿವು ನಮಗಾಗಬೇಕು. ‘ನಾನು, ಹೋದರೆ ಹೋಗಬಹುದು’ ಎಂಬುದು ಕೋಶದ ಓದಿನಿಂದಲೂ ಸುತ್ತಾಟದಿಂದಲೂ ಅನುಭವಕ್ಕೆ ಬರುವುದು. ನಾನೆಂಬ ಅಹಂಕಾರದ ಅಮಲಿನಿಂದ ಬಿಡಿಸಿಕೊಂಡು ವಾಸ್ತವಕ್ಕೆ ಪ್ರವೇಶಿಕೆ ಪಡೆಯುವುದು ಎಲ್ಲರಿಗೂ ಸಾಧ್ಯವಾಗದ ವಿಚಾರ. ಭ್ರಮೆಯ ಪರಾಧೀನವಾಗಿ  ಬದುಕುವುದಕ್ಕೂ ವಾಸ್ತವದ ಅರಿವಿನಲ್ಲಿ ಬೆಳೆಯುವುದಕ್ಕೂ ಅಗಾಧ ವ್ಯತ್ಯಾಸವಿದೆ. ಭ್ರಮೆಯು ನಾವೇ ಕಟ್ಟಿಕೊಂಡ ನೀರ್ಗುಳ್ಳೆ. ಯಾವ ಕ್ಷಣಕ್ಕೂ ಒಡೆಯಬಹುದು. ಅದು ಒಡೆದರೆ..!? ಸುತ್ತಲಿನ ನಿಜ ಜಗತ್ತು ನಾವು ಕಟ್ಟಿಕೊಂಡು ಬದುಕುತ್ತಿದ್ದ ಹಸಿ ಜಗತ್ತನ್ನು ಅಪಹಾಸ್ಯ ಮಾಡಬಹುದು. ಈ ಅವಮಾನವನ್ನು ತಾಳಲಾರದೆಯೂ ಅನಾಹುತಗಳಾಗಬಹುದು. ಹಾಗಾಗಿ ವಾಸ್ತವಕ್ಕೆ ಹತ್ತಿರ ಬದುಕುವುದು ಮುಖ್ಯ. 

ವಾಸ್ತವದ ಬದುಕು ಕೊಡುವ ಎಚ್ಚರವನ್ನೇ ಅನುಭವ ಎನ್ನುವುದು. ಅನುಭವಕ್ಕಿಂತ ಮಿಗಿಲಾದ ಪಾಠ ಮತ್ತೊಂದಿಲ್ಲ. ‘ಅರಿವೇ ಗುರು’. ಅಂತರಂಗದ ದನಿ ಆಲಿಸುವುದನ್ನು ಅರಿತರೆ, ಹೆಚ್ಚಿನ ತಪ್ಪುಗಳೂ, ಹಾನಿ-ಅನಾಹುತಗಳೂ ಆಗುವುದನ್ನು ತಪ್ಪಿಸಬಹುದು. ಆದರೆ, ಅಪಾರ ಜಾಣ ಕಿವುಡರಾದ ನಾವು ಯಾವ ನಿಜದ ನುಡಿಗೆ ಕಿವಿಗೊಡಬೇಕೋ ಅದನ್ನು ಬಿಟ್ಟು ಬಿಡುತ್ತೇವೆ. ಉತ್ತೇಜನಕಾರಿಯಾದ ಹಸಿ ಸುಳ್ಳಿಗೆ ಸಕಲೇಂದ್ರಿಯವನ್ನೂ ತೆರೆದಿಡುತ್ತೇವೆ. ನುಡಿದಂತೆ ನಡೆ ಇರದ, ನುಡಿಯೊಳಗಾಗಿ ನಡೆಯದ ನಾವು ಲಿಂಗ ಮೆಚ್ಚಿ ಅಹುದಹುದು ಎನ್ನುವುದಿರಲಿ, ನಮ್ಮಂತರಂಗದಲ್ಲಿ ಲಿಂಗವೆಂಬ ಪೂಜ್ಯ ಭಾವಕ್ಕಾದರೂ ಎಡೆ ಕೊಟ್ಟಿರುತ್ತೇವೆಯೋ..!?

ಕೆಲವೊಮ್ಮೆ ಇಂಥ ಹಲವು ಭಾವಗಳ ಸುಳಿಯೊಳಗೆ ಸಿಲುಕಿ ಮುಳುಗಿ, ಮೇಲೇರಲಾರದೆ ಉಸಿರುಗಟ್ಟಿದ ಅನುಭವವು ಉಂಟಾಗಿ ತೊಳಲಾಡುವಂತಾಗುತ್ತದೆ. ಎಲ್ಲರೂ ಎಂಥದ್ದೋ ಒಂದು ದಾರಿ ಹಿಡಿದು ಸುಖವಾಗಿರುವಾಗ ನಮಗೇಕೆ ಬೇಕಿತ್ತು ಇಂಥಾ ಬೇರೆ ದಾರಿ ಎಂದು ಬೇಸರವಾಗುವುದುಂಟು… ಆದರ್ಶಗಳು, ಮೌಲ್ಯಗಳು, ನೈತಿಕ ವಿಚಾರಗಳು ನಮ್ಮನ್ನು ಕಲುಷಿತಗೊಳಿಸದಷ್ಟು ಗಟ್ಟಿ ಬೇರಾಗಿ ನಮ್ಮೊಳಗೆ ಬೇರೂರಿರುವಾಗ ಬದಲಾಗುವುದು ಅಷ್ಟು ಸುಲಭವಲ್ಲ. ಏಕೆಂದರೆ, ಭೂಮಿ ಮೇಲೆ ಒಳ್ಳೆಯವರು ಕೆಟ್ಟವರು ಯಾರೊಬ್ಬರೂ ಸಹ ಶಾಶ್ವತರಲ್ಲದಿರಬಹುದು. ಆದರೆ, ಸತ್ತ ಮೇಲೂ ಉಳಿಯುವುದು ಹೆಸರಿಗೆ ಅಂಟಿಕೊಂಡು ಬರುವ ವಿಶೇಷಣಗಳು. ಈ ನಾಮವಿಶೇಷ ವಿಶೇಷಣಗಳ ಬಿರುದಾವಳಿಯನ್ನು ಧರಿಸುವುದಕ್ಕೂ ಮುನ್ನ ಮಕ್ಕಳ ಕಣ್ಣಲ್ಲಿ ನಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎನ್ನುವುದನ್ನು ಒಂದು ಬಾರಿ ಅವರ ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಬೇಕಿದೆ. ಕನ್ನಡಿಯ ಮುಂದೆ ನಿಂತು ನಮ್ಮನ್ನೂ ನಾವು ನೋಡಿಕೊಳ್ಳಬೇಕಿದೆ…
-------------------------------------

ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Leave a Reply

Back To Top