ಅಂಕಣ ಸಂಗಾತಿ

ಗಜಲ್ ಲೋಕ

ಗಜಲ್ ಪಡಸಾಲೆಯಲ್ಲಿ ಅರುಣೋದಯ

ಹಲೋ..

ನನ್ನ ಎಲ್ಲ ಕನ್ನಡದ ಮನಸ್ಸುಗಳಿಗೆ ಈ ಕನ್ನಡಿಗನ ಹೃದಯಾಂತರಾಳದ ಶುಭಕಾಮನೆಗಳು. ಪ್ರತಿ ವಾರದಂತೆ ಈ ವಾರವೂ ಸಹ ಒಬ್ಬ ಗಜಲ್ ಸಾಧಕರ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗಿದ್ದೇನೆ.

ಹಕ್ಕಿಗಳೂ ವಾಸಿಸುವುದಿಲ್ಲ ಪರರ ಮನೆಗಳಲ್ಲಿ

ನಮ್ಮ ವಯಸ್ಸೇ ಕಳೆಯಿತು ಬಾಡಿಗೆಯ ಮನೆಗಳಲ್ಲಿ

                          –ಮುನೀಸ್ ಬರೇಲ್ ವಿ

       ಈ ಭೂಮಂಡಲದಲ್ಲಿ ಮನುಷ್ಯ ತನ್ನ ಮನದ ಏರಿಳಿತದಿಂದಾಗಿ ವಿಶೇಷವಾದ ಸ್ಥಾನವನ್ನು ಹೊಂದಿದ್ದಾನೆ. ಇಂತಹ ಮನುಷ್ಯನ ಮನಸ್ಸನ್ನು ತಣಿಸುವ, ದಣಿದ ಮನಸ್ಸಿಗೆ ಆಹ್ಲಾದ ನೀಡುವ ಕೆಲಸ ಯಾವುದಾದರೂ ಮಾಡುತ್ತಾ ಇದೆಯೆಂದರೆ ನಿಸ್ಸಂದೇಹವಾಗಿ ಅದು ಕಾವ್ಯ ಮಾತ್ರ! ಇದು ತಾಯಿಯಂತೆ ಆಶೀರ್ವದಿಸುವ ದಿವ್ಯ ಔಷಧಿಯಾಗಿದೆ. ಈ ಎಲ್ಲ ಮಾತುಗಳು ಮೃದು ಧೋರಣೆಯನ್ನೆ ತನ್ನ ಉಸಿರಾಗಿಸಿಕೊಂಡಿರುವ ಗಜಲ್ ಸಾಹಿತ್ಯ ಪ್ರಕಾರಕ್ಕೆ ಹೆಚ್ಚು ಅನ್ವಯವಾಗುತ್ತದೆ. ಅಂತೆಯೇ ಹಿಂದಿಯ ಪ್ರಸಿದ್ಧ ಬರಹಗಾರ, ಚಿಂತಕ ಕಮಲೇಶ್ವರ್ ಅವರು ಗಜಲ್ ಕುರಿತು ಹೇಳಿರುವ ಈ ಮಾತನ್ನು ಇಲ್ಲಿ ದಾಖಲಿಸುತಿದ್ದೇನೆ. “ಗಜಲ್ ಧರ್ಮ, ಭಾಷೆ ಹಾಗೂ ವರ್ಗಗಳ ಎಲ್ಲೆ ಮೀರಿ ಸಂವಹನಗೊಳ್ಳುವ ಕೊಳಲಿನ ನಾದ ಹೊಂದಿದೆ.” ಇದು ಅಮ್ಮನ ಕರುಣೆ ಪಡೆದು, ಮನುಷ್ಯರಿಗೆ ಮಾನವ ದೀಕ್ಷೆ ಕೊಡುತ್ತ ನಮ್ಮ ನಡುವೆ ಇರುವ ಹಲವು ರೀತಿಯ ಗೋಡೆಗಳನ್ನು ಉರುಳಿಸಿ ಸರ್ವರನ್ನೂ ಒಳಗೊಂಡು ಮುನ್ನಡೆಸುವ ದಾರಿ ದೀಪವಾಗಿದೆ. ಗಜಲ್ ಎಲ್ಲರಿಗಾಗಿ, ಎಲ್ಲರಿಂದ ಎನ್ನುವ ಸಾರ್ವತ್ರಿಕ ಸಂದೇಶದೊಂದಿಗೆ ಇಂದು ವಿಶ್ವ ಪರ್ಯಟನವನ್ನು ಮಾಡುತ್ತಿದೆ. ಇಂತಹ ಅಮೃತಸೆಲೆಯ ಆರಾಧಕರೂ, ಗಜಲ್ ಅನ್ನು ಮಾತೆಯಂತೆ ಪ್ರೀತಿಸುವ ಗಜಲ್ ಗೋ ಎಂದರೆ ಕೊಪ್ಪಳದ ಶ್ರೀಮತಿ ಅರುಣಾ ನರೇಂದ್ರ ಅವರು!!

             ಬಾಗಲಕೋಟ ಜಿಲ್ಲೆಯ ಬೊಮ್ಮಣಗಿಯಲ್ಲಿ ಭೀಮಪ್ಪ ಜೂಡಿ ಮತ್ತು ಶಾವಂತ್ರೆಮ್ಮ ಜೂಡಿ ದಂಪತಿಗಳಿಗೆ ಮಗಳಾಗಿ ಜನಿಸಿದ ಅರುಣಾ ಅವರದು ಹೋರಾಟದ ಬದುಕು. ಬಡತನ, ಹಸಿವು, ಅವಮಾನಗಳನ್ನು ಸಹಿಸಿಕೊಂಡು ದಿಟ್ಟ ಹೆಜ್ಜೆ ಇಟ್ಟು ಬದುಕಿದ ಪರಿ ಅಭಿನಂದನೀಯ ಹಾಗೂ ಅನುಕರಣೀಯ. ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಶಿಕ್ಷಣ ಪೂರೈಸಿದ ಇವರು 1989 ರಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಏಕೋಪಾಧ್ಯಾಯ ಶಾಲೆಯ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿ, 2007 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರಸಪ್ಪಯ್ಯನ ಮಠ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದು, ನಂತರ 2010ರಲ್ಲಿ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಬಡತಿ ಹೊಂದಿ ಹಿಂದಿ ಶಿಕ್ಷಕರಾಗಿ ; ಪ್ರಸ್ತುತ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಿನ್ನಾಳದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸೇವೆಯನ್ನು ಮಾಡುತ್ತಲೆ ಕನ್ನಡದಲ್ಲಿ ಎಂ.ಎ. ಹಾಗೂ ಹಿಂದಿಯಲ್ಲಿ ಎಂ.ಎ., ಬಿ.ಇಡಿ. ಪದವಿಗಳನ್ನು ಪಡೆದಿದ್ದಾರೆ. ಇದು ಅವರ ಜ್ಞಾನದ ತೃಷೆಯನ್ನು ಪ್ರತಿಬಿಂಬಿಸುತ್ತದೆ. ಮಕ್ಕಳ ಮನಸ್ಸನ್ನು ಅರಿತು, ಗೆದ್ದು ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತ, ಅವರಿಗೆ ‘ಸಾಂಸ್ಕೃತಿಕ ಅಮ್ಮ’ ಆಗಿ ಅವರಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯಲ್ಲಿ ಆಸಕ್ತಿ ಮೂಡಿಸಿದ್ದಾರೆ, ಮೂಡಿಸುತಿದ್ದಾರೆ. ಇದಕ್ಕೆ ಅವರು ಮಕ್ಕಳ ಸಾಹಿತ್ಯ ಲೋಕಕ್ಕೆ ನೀಡಿದ ‘ಮುದ್ದಿನ ಗಿಣಿ,’ ‘ಪಾಟಿ ಚೀಲ,’ ‘ಅಮ್ಮನ ಸೆರಗು’, ‘ಮುತ್ತಿನ ರಾಶಿ,….ದಂತಹ ಅನುಪಮ ಕೃತಿಗಳ ಕೊಡುಗೆಯೆ ಸಾಕ್ಷಿ! ಇವುಗಳೊಂದಿಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿಯೂ ಕೃಷಿ ಮಾಡಿದ್ದಾರೆ. ಅವುಗಳೆಂದರೆ ‘ಧೀರ ಬೀರೇಶ್ವರ’ ಎನ್ನುವ ಆಧುನಿಕ ವಚನ ಸಂಕಲನ, ‘ರಸದ ತೆನಿ’ ಎಂಬ ಹಾಯಿಕು ಸಂಕಲನ, ಹಾಗೂ “ಮಾತು ಮೌನದ ನಡುವೆ”, “ಹಿಮದೊಡಲ ಬೆಂಕಿ”,

“ಆತ್ಮಸಖೀ” ಅನ್ನುವ ಗಜಲ್ ಸಂಕಲನಗಳನ್ನು ಕನ್ನಡ ಗಜಲ್ ಪರಂಪರೆಗೆ ಅರ್ಪಿಸಿದ್ದಾರೆ. ಕಲೆ, ಸಾಹಿತ್ಯ, ಸಂಗೀತ ಮತ್ತು ಅಭಿನಯದಲ್ಲಿ ಆಸಕ್ತಿ ಹೊಂದಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ‘ಸಾಂಸ್ಕೃತಿಕ ರಾಯಭಾರಿ’ಯಾಗಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಅಖಿಲ ಕರ್ನಾಟಕ ಶಿಕ್ಷಕರ ಸಂಘದಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ,

ಪಂ.ಪುಟ್ಟರಾಜ ಸಾಹಿತ್ಯ ಪ್ರಶಸ್ತಿ,ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ದತ್ತಿ ಪ್ರಶಸ್ತಿ, ಬಿ.ಎಂ.ಶ್ರೀ ಪ್ರತಿಷ್ಠಾನ ಬೆಂಗಳೂರು ‘ಸಾವಿತ್ರಮ್ಮ ದತ್ತಿ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ದತ್ತಿ ಪ್ರಶಸ್ತಿ, ಮಧುರ ಚೆನ್ನ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಸಿಂಧು ಪ್ರಶಸ್ತಿ…ಯಂತಹ ಹತ್ತು ಹಲವಾರು ಪ್ರಶಸ್ತಿ, ಪುರಸ್ಕಾರಗಳು, ಗೌರವ ಸನ್ಮಾನಗಳು ಶ್ರೀಯುತರಿಗೆ ಲಭಿಸಿವೆ!! 

       “ಉರ್ದು ಕವಿತಾ ಕೀ ಆನ್, ಶಾನ್ ಔರ್ ಜಾನ್ ಕಹಿ ಹೈ ತೊ, ವಹ್ ಗಜಲ್ ಮೆ ಹೈ” ಎನ್ನುವುದು ಗಜಲ್ ಬಗ್ಗೆ ಹೇಳಿರುವ ಸುಂದರವಾದ ಮಾತು. ಉರ್ದು ಕಾವ್ಯದ ಜೀವಾಳವಾದ ಗಜಲ್ ಇಂದು ಕನ್ನಡಮ್ಮನ ಮಡಿಲಲ್ಲಿ ಗರಿ ಬಿಚ್ಚಿ ಆಡುತಿದೆ. ಈ ಕಾರಣಕ್ಕಾಗಿಯೇ ಗಜಲ್ ಗೆ ಭಾಷೆ-ಪ್ರದೇಶ-ಜನಾಂಗದ ಹಂಗಿಲ್ಲ! ನವೀರಾದ ಭಾವ ಗುಚ್ಛವನ್ನು ಅಭಿವ್ಯಕ್ತಿಸಲು ಇದೊಂದು ಉತ್ತಮವಾದ ಸಾಧನವಾಗಿದೆ. ಇದರೊಂದಿಗೆ ಸಂಕಟದ ಅಭಿವ್ಯಕ್ತಿಯೂ ಆಗಿದೆ. ಆಂತರಿಕ ಭಾವನೆಗಳ ತುಡಿತವಾಗುವುದರ ಜೊತೆಗೆ ಬಾಹ್ಯ ಸಂಘರ್ಷದ ಅಭಿವ್ಯಕ್ತಿಯೂ ಆಗಿದೆ. ಇದು ಹೃದ್ಯವಾಗಿದ್ದು, ಆಕರ್ಷಕವೂ-ಕುತೂಹಲದಿಂದವೂ ಕೂಡಿದೆ. ಇದು ತಿಳಿ ಹೇಳುವ ಉಪದೇಶವಲ್ಲ, ಆಜ್ಞಾಪಿಸುವ ರಾಜಾಜ್ಞೆಯಲ್ಲ ; ಸ್ಪಷ್ಟ ಪಡಿಸುವ ಒಣ ವರದಿಯಂತೂ ಅಲ್ಲವೆ ಅಲ್ಲ. ಇದೊಂದು ಅನುಭಾವದ ಆಲಿಂಗನ. ಇಲ್ಲಿ ಅನುಭಾವ ಎಂದರೆ ಅಂತರಂಗದ ಮುತ್ತು. ಇಲ್ಲಿಯ ಅನುಭಾವ ಕೇವಲ ಪಾರಮಾರ್ಥಿಕವಾಗಿರದೆ ಲೌಕಿಕವನ್ನೂ ಬೆಳಗಿಸುವ, ಬೆಳೆಸುವ ಸುಂದರ ಮಾಧ್ಯಮವಾಗಿದೆ. ಹೀಗಾಗಿಯೇ ಇದು ಅಂತರಂಗದ ರತ್ನದ ಜೊತೆಗೆ ಬಹಿರಂಗದ ಕಟ್ಟುವಿಕೆಯೂ ಆಗಿದೆ. ಈ ನೆಲೆಯಲ್ಲಿ ಗಜಲ್ ಗೋ ಅರುಣಾ ನರೇಂದ್ರ ಅವರ ಗಜಲ್ ಗಳು ತುಂಬಾ ಆಪ್ತವೆನಿಸುತ್ತವೆ. ಅನುಭವದ ಪಕ್ವತೆಯೇ ನಿಜವಾದ ಅನುಭಾವವೆಂದು ಸಾರುತ್ತವೆ.

ಹುಟ್ಟಿ ಸಾಯುವ ಜನರಿಗೇನು ಗೊತ್ತಿದೆ ಸತ್ ಚಿತ್ ಆನಂದದ ಸುಖ

ಸುಖವಾಗಿರು ಜ್ಞಾನದ ಬೆಳಕಲ್ಲಿ ಆತ್ಮದರಮನೆ ಬಿಟ್ಟು ಹೊರಗೆ ಬರಬೇಡ

ಈ ಮೇಲಿನ ಷೇರ್ ಅರುಣಾ ನರೇಂದ್ರ ಅವರ ಆಧ್ಯಾತ್ಮದ ತುಡಿತವನ್ನು ಸಾರುತ್ತದೆ. ಜೀವನವೆಂದರೆ ಕೇವಲ ಹುಟ್ಟಿ ಸಾಯುವುದಲ್ಲ, ಈ ಜನನ-ಮರಣದ ಆಚೆಯೊಂದು ಬದುಕಿದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಸಾರಹೀನ ಸಂಸಾರದಲ್ಲಿಯೇ ಮುಳುಗುವುದಕ್ಕಿಂತಲೂ ಸತ್ ಚಿತ್ ಆನಂದದ ಶೋಧದಲ್ಲಿ ಇರಬೇಕು ಎನ್ನುತ್ತದೆ. ಈ ಕಾರಣಕ್ಕಾಗಿಯೇ ಅವರಿಗೆ ಆತ್ಮದಲ್ಲೊಂದು ಅರಮನೆ ಕಾಣಿಸುತ್ತದೆ. ಇದಕ್ಕೆಲ್ಲ ನಂಬಿಕೆ ಬೇಕು. ನಂಬಿಕೆಯ ಹೊರತು ಯಾವುದೂ ಸಾಧ್ಯವಿಲ್ಲ.‌ ಇಲ್ಲಿ ಸೂಫಿ ಹಕೀಂ ಸನಾಯಿಯವರ ಪ್ರಸಿದ್ಧ ಷೇರ್ ಒಂದನ್ನು ಉಲ್ಲೇಖಿಸುವುದು ಔಚಿತ್ಯ ಎನಿಸುತ್ತದೆ.

ನಂಬಿಕೆಯ ಜತೆ ನಿನ್ನಲಿ ಅಪನಂಬಿಕೆಯೂ ಇದ್ದರೆ

ದೇವರನು ಕಾಣುವುದು ಅಸಂಭವವೆಂದೇ ತಿಳಿ

       ಕರ್ಮ ಮತ್ತು ಋಣಾನುಬಂಧ ಇವೆರಡು ಆಧ್ಯಾತ್ಮಿಕ ಬೆಳಕೂ ಹೌದು, ಮಾನವನ ಅಸಹಾಯಕತೆಯ ಕತ್ತಲು ಹೌದೂ!! ಜನ್ಮ ಜನ್ಮಾಂತರಗಳ ಸಂಬಂಧಗಳಿಗಿಂತಲೂ ನಮ್ಮ ಮುಂದೆ, ನಮ್ಮೊಂದಿಗಿರುವ ಸಂಬಂಧವೇ ಅಮೂಲ್ಯ ಹಾಗೂ ಅನನ್ಯ. ಅವುಗಳ ಕಡೆಗೆ ಹೆಚ್ಚಿನ ಆಸ್ಥೆ ವಹಿಸಬೇಕು ಎಂಬುದು ಗಜಲ್ ಗೋ ಅವರ ಅಭಿಪ್ಸೆ ಆಗಿದೆ. ಈ ನೆಲೆಯಲ್ಲಿ ಅವರ ಈ ಒಂದು ಷೇರ್ ಮುನ್ನೆಲೆಗೆ ಬರುತ್ತದೆ.

ಜನ್ಮ ಜನ್ಮದ ಋಣಾನುಬಂಧದ ಒಣ ಮಾತೇಕೆ ಆಡುತ್ತಿ

ಜನ್ಮಕ್ಕೆ ಸಾಕು ಕರ್ಮದ ಬುತ್ತಿ ಬಿಚ್ಚಿ ಉಣಿಸಿಬಿಡು

ಈ ಒಂದು ಜನ್ಮದ ಜೀವನವನ್ನು ಜೀವಿಸಬೇಕಿದೆ ಎನ್ನುವ ವಾಸ್ತವದ ಪ್ರತಿಧ್ವನಿ ಇಲ್ಲಿದೆ. ‘ಕರ್ಮಗಳ ಫಲ ಜನ್ಮಜನಾಂತರ’ ಎಂಬ ಸಿದ್ಧ ಉತ್ತರವನ್ನು ಅಲ್ಲಗಳೆಯುತ್ತ ‘ಕರ್ಮದ ಫಲ ಈ ಜನ್ಮದಲ್ಲಿಯೇ ಉಣಿಸಿಬಿಡು’ ಎನ್ನುವ ತೀಕ್ಷಣತೆ ಈ ಮೇಲಿನ ಷೇರ್ ತನ್ನ ಮಡಿಲೊಳಗೆ ಕಾಪಿಟ್ಟುಕೊಂಡಿದೆ!! ಮಾನವನ ಬಾಹ್ಯ ಹಾಗೂ ಆಂತರಿಕ ಸತ್ಯಗಳ ಹೊಂದಾಣಿಕೆಯ ಜೊತೆಗೆ ಈ ಭವದ ಬದುಕಿಗೆ ತಮ್ಮ ನಿಷ್ಠೆಯನ್ನು ತೋರಿಸಿರುವುದು ಮನದಟ್ಟಾಗುತ್ತದೆ.

         ಶ್ರೀಮತಿ ಅರುಣಾ ನರೇಂದ್ರ ಅವರ ಗಜಲ್ ಗಳು ಪ್ರೀತಿ, ಪ್ರೇಮ, ವಿರಹದೊಂದಿಗೆ ತಾತ್ವಿಕ ಚಿಂತನೆಯ ಆಯಾಮಗಳನ್ನು ತೆರೆದಿಡುತ್ತವೆ. ಪ್ರೀತಿ ಪ್ರೇಮಿಗಳೊಂದಿಗೆ ಲೋಕಾನುಭವ, ಜೀವನಾನುಭವಗಳಿಂದ ತೇಯ್ದ ಸಿರಿಗಂಧವಾಗಿ ಪರಿಮಳ ಸೂಸುತ್ತವೆ. ಇಶ್ಕ್-ಎ-ಮಜಾಜಿ ಮತ್ತು ಇಶ್ಕ್-ಎ-ಹಕೀಕಿ ಎರಡರ ಭಾವ ಸಂಗಮ ಇವರ ಗಜಲ್ ಗಳ ವೈಶಿಷ್ಟ್ಯವಾಗಿದೆ.‌ ಇವರಿಂದ ಗಜಲ್ ಕೃಷಿ ನಿರಂತರವಾಗಿ ಸಾಗಲಿ, ಗಜಲ್ ಕ್ಷೇತ್ರ ಸಮೃದ್ಧವಾಗಲಿ ; ಮತ್ತಷ್ಟು ಮೊಗೆದಷ್ಟೂ ಸಂಕಲನಗಳು ಪ್ರಕಟವಾಗಲಿ ಎಂದು ಶುಭ ಕೋರುತ್ತೇನೆ.

ಪ್ರಪಂಚದಲ್ಲಿ ಸುಖದುಃಖಗಳೆರಡೂ ಇವೆ

ಸುಖ ಒಬ್ಬನಿಗಿದ್ದರೆ ನಾಲ್ವರಿಗೆ ದುಃಖವಿದೆ

                                     –ಜೌಕ್

ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ನಿಮ್ಮ ನೆಚ್ಚಿನ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೂ ಧನ್ಯವಾದಗಳು…


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅರುಣಾ ಅವರ ಪರಿಚಯ ಇಬ್ಬರಿಗೂ ಹಾರ್ದಿಕ ಅಭಿನಂದನೆಗಳು

Leave a Reply

Back To Top