ಅಂಕಣ ಬರಹ

ತೊರೆಯ ಹರಿವು

ಅಮ್ಮನಾಗಿ ಬರೆಯುವಾಗ

270 The Mother ideas in 2021 | mother, mothers love, mother and child

ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ ಇರುವುದಿಲ್ಲ. 

   ಸೃಜನಶೀಲ ಬರವಣಿಗೆಗೆ ಹೊತ್ತುಗೊತ್ತಿನ ಕಟ್ಟುಪಾಡು ಇರುವುದಿಲ್ಲ. ಯಾವುದೇ ನಿರ್ದಿಷ್ಟವಾದ ನಿರ್ಧರಣೆಯಿಲ್ಲದೇ ಬರುವ ಹಲವು ಭಾವಗಳನ್ನು ಆಗಲೇ ಬರಹಕ್ಕೆ ಇಳಿಸಬೇಕಾದುದು ಬರಹಗಾರರಿಗೆ ಇರಬೇಕಾದ ಅನಿವಾರ್ಯದ ಸ್ಥಿತಿ. ಆದರೆ, ದೈನಂದಿನ ಕೆಲಸ ಕಾರ್ಯಗಳನ್ನು ಒತ್ತಟ್ಟಿಗಿಟ್ಟು ನನ್ನಂಥವರಿಗೆ ದಿಢೀರನೆ ಬರೆಯಲಾಗುವುದಿಲ್ಲ. ಹಾಗೆಂದು, ಮೂಡಿ ಬಂದ ಭಾವನೆಗಳನ್ನು, ಕ್ಷಣದಲ್ಲಿ ಮಿಂಚುವ ವಿಚಾರಗಳನ್ನು ಎಷ್ಟು ಹೊತ್ತು ನೆನಪಿನಲ್ಲಿಟ್ಟುಕೊಂಡು ಬಿಡುವು ಸಿಕ್ಕ ಅನಂತರ ಬರೆಯಲು ಸಾಧ್ಯ? 

   ಸೃಜನಶೀಲ ಬರವಣಿಗೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ತಿಣುಕಾಡಿ ಬರೆದರೆ ಅದರಷ್ಟು ಪೇಲವವಾದ ವಿಚಾರ ಮತ್ತೊಂದಿರುವುದಿಲ್ಲ.  ಹಾಗೆಂದು ಹಠ ಹಿಡಿದೇ ಬರೆದೆವೆಂದರೆ, ಮತ್ತೊಮ್ಮೆ ನಮಗೇ ಓದಲಾಗುವುದಿಲ್ಲ. ಸಹಜವಾಗಿ ಮೋಡಗಟ್ಟಿ ಮಳೆಗರೆಯುವಂತೆ ಭಾವನೆ- ವಿಚಾರಗಳು ಹರಳುಗಟ್ಟಿ ಬರಹವಾಗಬೇಕು. ಮೋಡ ಬಿತ್ತನೆಯಿಂದ ಕೃತಕ ಮಳೆ ಎಷ್ಟು ತರಿಸಲಾದೀತು? ಹಾಗೆಯೇ ಸೃಜನಾತ್ಮಕ ಬರಹವಣಿಗೆಯನ್ನು ಕೃತಕವಾಗಿ ಮಾಡಲಾಗದು. ಹೇಗೋ ತಿಣುಕಾಡಿ ಬರೆದರೂ, ಅದು ಭ್ರಮನಿರಸನ ಉಂಟು ಮಾಡುವಷ್ಟು ಭಾವತೀವ್ರತೆಯ ಕೊರತೆಯಿಂದ ತುಂಬಿಕೊಂಡಿರಬಹುದು.  

 ವೈಯಕ್ತಿಕವಾಗಿ ಹೇಳಬೇಕೆಂದರೆ, ಬರವಣಿಗೆಗೆ ತೊಡಗುವಾಗ ಕಚೇರಿ ಕೆಲಸ, ಮನೆವಾರ್ತೆಯ ಬಹುಮುಖ್ಯ ಅಗತ್ಯಗಳನ್ನು ಮೊದಲಿಗೆ ಪೂರೈಸಿಬಿಡುತ್ತೇನೆ. ಏಕೆಂದರೆ, ಬರೆಯುವಾಗ ಒತ್ತಡ ರಹಿತ ಪರಿಸ್ಥಿತಿ ಬಹಳ ಅಗತ್ಯ. ಸಾಮಾಜಿಕ ಜವಾಬ್ದಾರಿಯ ನಿರ್ವಹಣೆ ಮಾಡುವುದು ಯಾರಿಗಾದರೂ ಮೊದಲ ಆದ್ಯತೆ ಆಗಿರಲೇಬೇಕು. ಹಲವಾರು ಜನ ಕೇಳುತ್ತಾರೆ, ಕಚೇರಿ, ಮನೆ, ಪುಟ್ಟಮಕ್ಕಳು ಇವನ್ನೆಲ್ಲಾ ನಿಭಾಯಿಸಿಕೊಂಡು ಹೇಗೆ ಇತರೆ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯ?! ಎಂದು. ಅದಕ್ಕೆ ನನ್ನ ಒಂದೇ ಉತ್ತರ, ‘ಮನಸ್ಸಿದ್ದರೆ ಮಾರ್ಗ ‘ ಹಾಗೂ ನಮ್ಮ ಇತರೆ ಅನಗತ್ಯದ ಒತ್ತಡಗಳನ್ನು, ಅಮುಖ್ಯ ವಿಚಾರಗಳನ್ನು, ಇತರೆ ಏನೆಲ್ಲಾ ಅವಸರಗಳನ್ನು ಅನಾಮತ್ತಾಗಿ ಪಕ್ಕಕ್ಕೆ ಸರಿಸಿ ಬಿಡಬೇಕೆಂದು. ಒಂದು ವೈಯಕ್ತಿಕ ಶಿಸ್ತನ್ನು ರೂಢಿಸಿಕೊಂಡರೆ ಹಾಗೂ ಮನೆಮಂದಿಯ ಸಹಕಾರ ದೊರಕಿಸಿಕೊಂಡರೆ ಅಸಾಧ್ಯವಾದುದು ಯಾವುದೂ ಇಲ್ಲ.  ಆದರೂ, ಏನೆಲ್ಲವನ್ನೂ ಅನಾಮತ್ತಾಗಿ ಪಕ್ಕಕ್ಕೆ ಸರಿಸಬಲ್ಲೆನಾದರೂ, ಮಕ್ಕಳ ಸಣ್ಣ ಬೇಡಿಕೆಗಳನ್ನು, ಅವರೊಡನೆ ಕಳೆಯಬಹುದಾದ ದಿವ್ಯ ಗಳಿಗೆಗಳನ್ನು  ನಿರಾಕರಿಸುವ ಧೈರ್ಯವನ್ನು ನಾನು ಮಾಡುವುದು  ಕಡಿಮೆಯೇ.. ಏಕೆಂದರೆ, ಮಕ್ಕಳೆಂದರೆ ನನನಗಷ್ಟೇ ಅಲ್ಲ ಸಮಾಜಕ್ಕೆ ಸೇರಿದ ಪ್ರಜೆಗಳು. ಹಾಗಾಗಿ ಅವರನ್ನು ಜವಾಬ್ದಾರಿಯುತರನ್ನಾಗಿ ಬೆಳೆಸಬೇಕಾದ ಪ್ರಜ್ಞೆಯೂ ಆಂತರ್ಯದಲ್ಲಿ ಕೆಲಸ ಮಾಡುತ್ತಿರುತ್ತದೆ.

   ಹೀಗೆ, ಭವದ ಮಕ್ಕಳತ್ತ ಚಿತ್ತ ನೆಟ್ಚಾಗ ಮನದಲ್ಲಿ ಮೂಡಿದ್ದ ‘ಭಾವ’ವೆಂಬ ಹೊಸದಾಗಿ ಜನ್ಮ ತಳೆಯುವ ಆಸೆಯಲ್ಲಿದ್ದ ‘ಬರಹದ ಕೂಸು’  ನನ್ನ ಮೇಲೆ ಮುನಿದುಕೊಂಡದ್ದು ಬೆರಳೆಣಿಕೆಯ ಬಾರಿಯಲ್ಲ. 

        ಚೆಂದದ ಅನುಭೂತಿ ಮೂಡಿಯೂ ಬರೆಯಲಾಗದೇ ಮರೆಯಾದ ಅನನ್ಯ ಭಾವಗಳು, ಕಲ್ಪನೆಗಳು ಅವೆಷ್ಟೋ..!!! ಯಾವಾಗಲೋ ಹೊಳೆದ ನನ್ನಷ್ಟಕ್ಕೆ ಅತ್ಯುತ್ತಮ ಎನಿಸುವ ಸಾಲುಗಳನ್ನು, ಮೋಹ ಉಕ್ಕಿಸುವ ಬರಹ ರೂಪಗಳನ್ನು ಮಕ್ಕಳ ಸಲುವಾಗಿ ನಾನು ಮರೆತು ಬಿಡಬೇಕಾಗುತ್ತದೆ. ಹಲವು ಬಾರಿ ಒಂದು ಸಣ್ಣ ಟಿಪ್ಪಣಿಯನ್ನೂ ಮಾಡಿಕೊಳ್ಳಲೂ ಆಗಿರುವುದಿಲ್ಲ.  ಆಗೆಲ್ಲಾ ಬರವಣಿಗಾಗಿಯೇ ಬದುಕು ಮುಡಿಪಿಟ್ಟವರನ್ನು ನೆನೆದುಕೊಂಡಿದ್ದೇನೆ. ಬರವಣಿಗೆಯವ್ಲಿರುವ ಲೇಖಕರ ಮಕ್ಕಳನ್ನು ನಿಭಾಯಿಸುವ ಪತಿ/ಮಡದಿ, ಮೂಡು ಬರಿಸಿಕೊಳ್ಳಲು ಅವರು ಮೊರೆ ಹೋಗುವ ತಿರುಗಾಟಗಳು, ಮೋಜು-ಮಸ್ತಿಗಳು, ಅನಾಯಾಸವಾಗಿ ಸಿಕ್ಕಿಬಿಡುವ ಸಮಯಾನುಕೂಲಗಳು (ಇವೆಲ್ಲಾ ವಿಶೇಷವಾಗಿ ಪುರುಷ ಲೇಖಕರಿಗೆ) ಹೀಗೆ… ಇಂಥವೆಲ್ಲಾ ನೆನೆದಾಗ ನನ್ನಂತಹ ಹವ್ಯಾಸಿ ಮಹಿಳಾ ಬರಹಗಾರರಿಗೆ ಆಪ್ತ ಸಮಯ ಎನ್ನುವುದು ಗಗನ ಕುಸುಮವಲ್ಲದೇ ಮತ್ತೇನು..? ಎನಿಸುತ್ತದೆ. 

      ವೃತ್ತಿ ಪ್ರವೃತ್ತಿಗಳ ನಡುವೆ ಮನೆ-ಮಕ್ಕಳ ಜವಾಬ್ದಾರಿಗಳನ್ನು  ಮರೆಯುವಂತೆಯೇ ಇಲ್ಲವಲ್ಲ. ಹಾಗೇನಾದರು ಆದರೆ  ಅದೆಲ್ಲಿಯೋ ಮರೆಯಾಗಿರುವ ‘ನಾನು ಒಳ್ಳೆ ಅಮ್ಮ ಅಲ್ಲ’, ‘ಮಕ್ಕಳಿಗೆ ಕ್ವಾಲಿಟಿ ಟೈಂ ಕೊಡುತ್ತಿಲ್ಲ’  ಎಂಬ ಛದ್ಮವೇಷದಲ್ಲಿರುವ  ‘ಅಪರಾಧಿ’ ಪ್ರಜ್ಞೆಯೊಂದು ಬಂದು ತಲೆಯೊಳಗೆ ಕುಳಿತು ಕೆಲವೊಮ್ಮೆ ಇನ್ನಿಲ್ಲದಂತೆ ಕಾಡುತ್ತಾ ಹಿಂಸಿಸುತ್ತದೆ.  

   ಅಲ್ಲದೇ ಹಲವು ಬಾರಿ,  ಓದಲು ಬರೆಯಲು ಕುಳಿತಾಗ ಮಕ್ಕಳೇ ಹತ್ತಿರ ಬಂದು  ಆಟಕ್ಕೋ  ಮತ್ತೊಂದಕ್ಕೋ ಕರೆಯುತ್ತಾರೆ. ಬೆಳಗ್ಗಿಂದಲೂ  ಮನೆಯ ಹೊರಗೇ ಇರುವ ನಾನು, ಮನೆಗೆ ಬಂದ ಮೇಲೂ ಅವರಿಂದ ದೂರ ಇರುವುದನ್ನು ಒಪ್ಪಲು ಅವರು ಸಿದ್ಧರಿರುವುದಿಲ್ಲ.  ನಾನು ಅವರ ಅಮ್ಮ. ಅವರಿಗೆ ಬೇಕಾದಾಗ ಈ ಅಮ್ಮ ಸಿಗಬೇಕು. ಅವರ ಅಮ್ಮ ಅವರಿಗೆ ಬೇಕು ಅಷ್ಟೇ… ಇದೇ ಅವರ ಅಂತಿಮ ಡಿಮ್ಯಾಂಡ್. ಹೀಗಾಗಿ  ಮನೆಗೆ ಬಂದ ಮೇಲೆಯೂ ನಾನು ನನಗಾಗಿ  ಸ್ಪೇಸ್ ಅಪೇಕ್ಷಿಸಲು ಸಾಧ್ಯವಾಗದು. ಹಾಗೇನಾದರು ಮಾಡಿದರೆ ಮಕ್ಕಳೇ ನನ್ನ ಮೇಲೆ ಕೋಪಿಸಿಕೊಂಡು ದೂಷಿಸದೇ ಇರಲಾರು. ಆ ಅನುಭವಗಳೂ ಸಾಕಷ್ಟು ಆಗಿವೆ..

     ಹೀಗೆ ಬರೆಯಬೇಕೆಂದು ಕುಳಿತಾಗ ಹಲವಾರು ಬಾರಿ  ಅನಾನುಕೂಲಗಳು ಆಗುವುದು ಹೌದು. ತಕ್ಷಣಕ್ಕೆ ಹೊಳೆಯು ಆ ಪದ, ಆ ಸಾಲು ಮನದಿಂದ ಮರೆಯಾಗಬಹುದು. ಜೊತೆಗೆ ಆ ಭಾವತೀವ್ರತೆಯೂ ಕೊನೆಯಾಗಬಹುದು. 

ಹಾಗೆಂದು ಮಕ್ಕಳನ್ನು ಅಪರಾಧಿ ಸ್ಥಾನದಲ್ಲಿಟ್ಟು ನೋಡಲಾರೆ. ಎಷ್ಟಾದರು ನಾನು ಅಮ್ಮನಲ್ಲವೇ.. ಬರೆಯಲಾಗದ ಬಹಳಷ್ಟು ಸಮಯದಲ್ಲಿ  ನನ್ನ  ಇಬ್ಬರು ಮಕ್ಕಳೂ ನನ್ನ ಮತ್ತೊಂದು ಬಗೆಯ ಬರಹದ ಪ್ರಸ್ತುತಿಗಳೇ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು ಹೆಣ್ಣು, ಮಿಗಿಲಾಗಿ ಅಮ್ಮ…. 


 ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

One thought on “

Leave a Reply

Back To Top