ತುಮುಲಗಳು

ಪುಸ್ತಕ ಸಂಗಾತಿ

ತುಮುಲಗಳು

ಹಿರಿಯ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರ ಕವನ ಸಂಕಲನವಾದ ” ತುಮುಲಗಳು ” ಹೆಸರೇ ತಿಳಿಸುವ ಹಾಗೆ ಅಂತರಾಳದ ಬೇಗುದಿಗಳನ್ನ, ತಳಮಳವನ್ನ ಹೊರ ಹಾಕುವ ಪ್ರಕ್ರಿಯೆಯಾಗಿ ಮೂಡಿ ಬಂದ ಸಂಕಲನವಾಗಿದೆ. ಅವರೇ ಬರೆದ ಹಾಗೆ ನನ್ನನ್ನು ಪ್ರೀತಿಸಿದ, ದ್ವೇಷಿಸಿದ, ಜೊತೆಯಾದ, ತೊರೆದ, ಗೌರವಿಸಿದ, ಅವಮಾನಿಸಿದ, ಪ್ರೋತ್ಸಾಹಿಸಿದ, ಹೀಗಳೆದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ಹೇಳುವುದರಲ್ಲೇ ಅವರ ತುಮುಲಗಳನ್ನ ಅರ್ಥೈಸಿಕೊಳ್ಳಬಹುದು. ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರ ಕೆಲವು ಬರಹಗಳನ್ನ ಫೇಸ್ಬುಕ್ ನಲ್ಲಿ ಗಮನಿಸುತ್ತಲೇ ಬಂದಿರುವ ನಾನು ಅವರು ಆಲ್ಬರ್ಟ್ ಕಾಮೂ ಅವರ The Fall – “ಪತನ” ಕೃತಿಯನ್ನ ಕನ್ನಡಕ್ಕೆ ತಂದಿದ್ದನ್ನ ಗಮನಿಸಿ ಪುಸ್ತಕ ತರಿಸಿಕೊಂಡ ನನಗೆ “ತುಮುಲಗಳು” ಅಚ್ಚರಿಯಾಗೆ ಬಂದಿತ್ತು. ಆಮೇಲೆ ತಿಳಿಯಿತು ಇವರು ಕಾಮೂ ಅವರ ಕೃತಿಯನ್ನೇ  ಅನುವಾದಿಸಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೂ ಅವರ ಕವನ ಸಂಕಲನಕ್ಕೂ ಅವಿನಾಭಾವ ಸಂಬಂಧವನ್ನ ಗುರುತಿಸಿದೆ.

   ವೈಯುಕ್ತಿಕವಾಗಿ ಕವಿತೆಗಳಲ್ಲಿ ಪ್ರೀತಿ-ಪ್ರೇಮಗಳ ಹೊರತಾಗಿ ಏನಾದರೂ ಇದೆಯೇ ಎಂಬುದನ್ನ ಹುಡುಕುವ ಮನೋಭಾವದವನಾದ ನನಗೆ “ತುಮುಲಗಳು” ಮೋಸ ಮಾಡಿಲ್ಲ. ವಾಸ್ತವದ ಜೊತೆ ಜೊತೆಗೆ ಅಸಂಗತ ಬದುಕಿನ ನೆಲೆಗಳನ್ನ ಶಬ್ದಗಳಲ್ಲಿ ಹಿಡಿದಿಡುವ ಕವಿತೆಗಾಗಿ ಹಾತೊರೆವ ಮನಸ್ಸುಗಳಿಗೆ ಈ ಸಂಕಲನದ ಕವಿತೆಗಳು ಮೋಸ ಮಾಡಲಾರವು.

  ಬದುಕನ್ನ ಬೆರಗಿನಿಂದ ನೋಡುವ, ಅಲ್ಲಿನ ಸಂಗತಿಗಳನ್ನ ಅಂತರಾಳದಲ್ಲಿ ಒರೆಗೆ ಹಚ್ಚಿ ಅವಲೋಕಿಸುವ, ನಿರ್ಭೀತಿಯಿಂದ  ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಗುಣ, ಪೂರ್ವಾಗ್ರಹಕ್ಕೆ ಒಳಗಾಗದೇ ವಿಚಾರಗಳನ್ನ ಗ್ರಹಿಸುವ, ಶಾಶ್ವತವಾದವನ್ನ ಅಲ್ಲಗಳೆಯುತ್ತಲೇ ಒಂಟಿತನ, ಸಾವನ್ನ ಕುರಿತಾದ ಕೆಲವು ಭಾವನೆಗಳು  ನಾನೇ ಬರೆಯಬೇಕಂದುಕೊಂಡಿದ್ದ ಆದರೆ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರು ಬರೆದಿದ್ದಾರೆ ಎಂಬ ನಿರಾಳ ಭಾವ ಇಲ್ಲಿನ ಕವಿತೆಗಳದ್ದು.

  ಮೊದಲ ಕವಿತೆಯಲ್ಲೇ ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುವ ಸಾಲುಗಳನ್ನ ಕಾಣಬಹುದು.

ನನಗೆ ಹುಚ್ಚು ಹಿಡಿದ ದಿನ

ಎಲ್ಲ ಸ್ಪಷ್ಟವಾಗಿತ್ತು

ಅಲ್ಲಿಯವರೆಗೆ ನಾನು

ಬದುಕಿನ ಅರ್ಥ ಹುಡುಕುತ್ತಿದ್ದೆ

ಒಳತುಕೆಡುಕುಗಳನ್ನ ತೂಗಿ ನೋಡುತ್ತಿದ್ದೆ

ಬೇಕು ಬೇಡಗಳನ್ನ ಅಳೆದು ನೋಡುತ್ತಿದ್ದೆ

….ಲೆಕ್ಕ ಅಳತೆಗಳೆಲ್ಲ ತಪ್ಪಿ

ನನ್ನನ್ನು ಗೇಲಿ ಮಾಡತೊಡಗಿದ್ದವು

ಬದುಕನ್ನ ಇಡಿಯಾಗಿ ಅಪ್ಪಬೇಕೆಂದು

ಅಂದು ತೋಳಗಲಿಸಿನಿಂತೆ

ಆಮೇಲೆ ನನಗೆ ಹುಚ್ಚು ಹಿಡಿಯಿತು…”

ಇಲ್ಲಿ ಬದುಕನ್ನ ಇಡಿಯಾಗಿ ಅಪ್ಪಬೇಕೆಂದು ಕೈ ತೋಳುಗಳನ್ನ ಅಗಲಿಸಿ ಹೊರಟ ಕವಿಗೆ ಕೊನೆಗೆ ಹುಚ್ಚುತನದ ಬದುಕಿನಿಂದ ಬಿಡುಗಡೆ ಹೇಗೆ ಅಸಾಧ್ಯವಾಯಿತು ಎಂಬುದನ್ನ ಮಾರ್ಮಿಕವಾಗೇ ಹೇಳುತ್ತದೆ. ಹೀಗೆ ಕವಿಯ ಮನಸ್ಸಿನ ಒಂದು ನಿರ್ದಿಷ್ಟ ಘಟನೆಯ ಸಾಲುಗಳು ಸಾರ್ವರ್ತ್ರಿಕ ಬದುಕನ್ನೇ ಬಿಂಬಿಸುವ ವಸ್ತುನಿಷ್ಠತೆಯನ್ನ ಪ್ರತಿನಿಧಿಸುತ್ತವೆ. ಇದು ಇವರ ಕವಿತೆಗಳ ಹೆಚ್ಚುಗಾರಿಕೆ. ಮತ್ತೊಂದು ಕವನದಲ್ಲಿ,

ನಡೆಯಬಾರದ ಹಳೆಯ ದಾರಿಗಳಲ್ಲಿ,

ಕನಸುಗಳ ಬಂಡಿ ಮುಗ್ಗರಿಸಿ ಮುಕ್ಕಾದ,

ಕ್ರೂರ ತಿರುವುಗಳಲ್ಲಿ

ಹೊಂಚು ಹಾಕಿ ಕುಳಿತ

ನೆನಪುಗಳ ಪ್ರೇತಗಳೆದುರು

ನಿಲ್ಲಬಾರದು ಹೋಗಿ ಲಜ್ಜೆಗೆಟ್ಟು ಬಗ್ಗಿ,

ಹೀಗೆಂದುಕೊಳ್ಳುತ್ತೇನೆ ಪ್ರತೀ ಸಾರಿ,

ಅದೇ ಹಾದಿಗಳ ಅದೇ ತಿರುವುಗಳಲ್ಲಿ,

ಅವೇ ಪ್ರೇತಗಳು ಸುತ್ತಲೂ ಕುಣಿವಾಗ

ನೋವಿನಲಿ ಕುಗ್ಗಿ…”

  ಹೀಗೆ ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಬವಣೆಗಳನ್ನ ಎದುರಿಸಲು ಮನಸ್ಸಿನ ತಲ್ಲಣಗಳನ್ನ ಪ್ರತಿಮೆಗಳ ಮೂಲಕ ಚಿತ್ರಿಸುವುದು ಸುಲಭವೂ ಅಲ್ಲ.

 ಮತ್ತೊಂದು ಕವನದಲ್ಲಿ,

 “ಬದುಕು ಕುಸಿದು

ಕಣ್ಣೆದುರಿನಲ್ಲೇ ಮಣ್ಣಾಗುತ್ತಿರುವಾಗ

ಮತ್ತೇನೂ ಮಾಡಲಾಗದೆ ನಾನು

ಕುಣಿಯುತ್ತ, ಹೊರಳಾಡುತ್ತ,

ಕೇಕೆ ಹಾಕುತ್ತಾ,

ಮಕ್ಕಳಂತೆ,

ಮಣ್ಣಾಡತೊಡಗಿದೆ…”

   ಈ ಸಾಲುಗಳು ಪ್ರತಿಯೊಬ್ಬನ ಬದುಕಿನಲಿ ಧುತ್ತೆಂದು ಎಗರಿ ಬರುವ  ಸಂಗತಿಗಳಿಗೆ ಮನುಷ್ಯ ಹೇಗೆ ಅಸಹಾಯಕನಾಗಿರುವನು ಎಂಬುದನ್ನ ಮನೋಜ್ಞವಾಗಿ ಬಿಂಬಿಸುತ್ತವೆ. ಕೊನೆಗೆ ‘ಮಕ್ಕಳಂತೆ ಮನ್ನಾಡತೊಡಗಿದೆ’ ಎಂಬ ಮಾತುಗಳೇ ನಮ್ಮನ್ನ ಮಗುವಿನಂತಹ ಅಸಹಾಯಕತೆಯನ್ನ ಅನಿವಾರ್ಯವಾಗಿ ಮೈಗೂಡಿಸಿಕೊಳ್ಳಬೇಕಾದ ಪರಿಸ್ಥಿತಿಗೆ ತಂದೊಡ್ಡುತ್ತವೆ.

ಮತ್ತೊಂದು ಕವಿತೆಯಲ್ಲಿ  ಬದುಕಿನ ಬಗ್ಗೆ ಇದೇ ಭಾವವನ್ನ ಮೂಡಿಸುವ ಅದ್ಭುತ ಸಾಲುಗಳಿವೆ. ಜೊತೆಗೆ ಗ್ರೀಕ್ ಪೌರಾಣಿಕತೆಯಲ್ಲಿ ಕಂಡುಬರುವ ನಾಟಕಗಳ ವಿಚಿತ್ರ ಪಾತ್ರವಾದ ಟೈರಿಶೀಯಸ್ ಎಂಬುವವನನ್ನು ಈ ಅಸಂಗತ ಪರಿಸ್ಥಿತಿಗಳಿಗೆ ತಗೆದುಕೊಂಡಿರುವುದು ಅವರ ಕವನ ಮತ್ತಷ್ಟು ಗಮ್ಯವಾಗಿ ಮೂಡಿಬರಲು ಕಾರಣವಾಗಿದೆ.

ಹತಾಶೆಯ ಬಿಸಿಲಿನಲಿ

ಒಣಗಿ ಬಿರಿದಿದೆ ನೆಲ

ತೇವಗೊಳಿಸಲು ಭರವಸೆಯ

ಒಂದು ಹನಿಯೂ ಇಲ್ಲ..

ಬಾ ಇಲ್ಲಿ  ಮತ್ತೊಮ್ಮೆ ಟೈರಿಶೀಯಸ್,

ಜಗದ ಒಗಟುಗಳನ್ನೆಲ್ಲ ಬಿಡಿಸುವವ ನೀನು,

ಆದಿ ಅಂತ್ಯಗಳನ್ನೆಲ್ಲ ಮೊದಲೇ ಕಂಡವನು….”

ಮಗದೊಂದು ಕವಿತೆಯಲ್ಲಿ ಕವಿಯ ಮನಸ್ಸಿನ ತಲ್ಲಣಗಳನ್ನು ಸ್ಪಷ್ಟವಾಗೇ ಅರಿಯಹುದು –

ಪ್ರಶಾಂತ ಸರೋವರದಲ್ಲಿಯೂ

ಏಳುವವು ಒಮ್ಮೊಮ್ಮ

ಬಿರುಗಾಳಿ, ಸುತ್ತಿ ಸುಳಿವ ಅಲೆಗಳು

ಮುಸ್ಸಂಜೆಯಲಿ ಕಾಗೆಗಳ ಗದ್ದಲದ ಹಾಗೆ

ಏನು ಕೂಗುವೆ, ಏಕೆ ಕೂಗುವೆ,

ಕಾಗೆಗೂ ತಿಳಿಯದೇನೋ…! “

ಇನ್ನೂ ಕೆಲವು ಕವಿತೆಗಲ್ಲಿ ಕವಿಯು  ತನ್ನ ಸಮಾಜಕ್ಕೆ ಏನೋ ಹೇಳಲೇಬೇಕು ಎಂಬ ಇರಾದೆಯಿಂದ ಪೆನ್ನು ಹಿಡಿದು ಕೂತಿದ್ದಾನೆ ಎಂಬ ಭಾವನೆ ಕಾಣುವುದು,

ಮಧ್ಯರಾತ್ರಿಯ ಖಾಲಿರಸ್ತೆಗಳ

ಬೀದಿದೀಪಗಳ ಬೆಳಕಿನಲ್ಲಿ

ಪ್ರೇತಗಳ ನೆರಳು ಸುಳಿದಾಡುವಂತೆ

ಇತಿಹಾಸದ ದಟ್ಟ

ನಿರ್ಜನ ಹೆದ್ದಾರಿಯಲ್ಲಿ

ಮಾಯೆಯ ನೆರಳು ಮೂಡುತ್ತದೆ

ಸತ್ಯಕ್ಕೆ ದನಿಯಾದ ಗಂಟಲುಗಳು ರಸ್ತೆಯಲ್ಲೆಲ್ಲೋ ಕಳೆದು ಹೋದರೂ

ಮೊಳಗುತ್ತಲೇ ಇರುವ ಕೂಗು

ಓಗೊಡಲು ಬಾಯಿ ತೆರೆದರೆ

ಗಂಟಲುಬ್ಬುತ್ತದೆ

ಕಣ್ಣಿನ ದುಗುಡ ನೀರಾಗಿ

ಸತ್ಯ ಅಗೋಚರವಾಗುತ್ತದೆ..

ಪ್ರೇತಗಳ ನೆರಳು ಸುಳಿದಾಡುತ್ತದೆ…”

ಇನ್ನೊಂದು ಕವಿತೆಯಲ್ಲಿ ನಾಯಿಯ ರೂಪಕವನ್ನ

ಸೂಚ್ಯವಾಗಿ  ಮನುಷ್ಯನಿಗೆ ಅನ್ವಯವಾಗುವಂತಹ ಸಾಲುಗಳನ್ನ ಕಾಣಬಹುದು,

ಕೊಳಕು ಚರಂಡಿಗಳಲ್ಲಿ

ಕುಂಟುತ್ತ ಓಡುವ ನಾಯಿ

ಮೂಸುತ್ತಿದೆ ಕೇಸರನ್ನು

ಕಸದ ತೊಟ್ಟಿಗಳಲ್ಲಿ

ಹಳಸಿದ ನಿಧಿಗಳಿಗಾಗಿ

ಕೆದಕಿ ನೋಡುತ್ತಿದೆ

ಪಿಸುರುಗಟ್ಟಿದ ಕಣ್ಣಿನಿಂದ

….ನಾಳೆ ಸಾಯುವ ನಾಯಿಗೆ ಇಂದು ರೊಟ್ಟಿ ತಿನ್ನುವ ಆಸೆ

ಇನ್ನೊಂದು ಕವನದ ಸಾಲುಗಳಲ್ಲಿ ಬೆತ್ತಲು ಮನಸ್ಸಿನ ಹಸಿ ಹಸಿ ಭಾವಗಳು ಮನೋಜ್ಞನವಾಗಿ ಮೂಡಿಬಂದಿವೆ ಈ ಸಲುಗಳಂತೂ ನನಗೆ ತುಸು ಹೆಚ್ಚೇ ಇಷ್ಟವಾಗಿವೆ. ಕಾರಣ ನಮ್ಮ ‘ಮನಸ್ಸು ಸತ್ತಿರುವ ಕನಸುಗಳ ರುದ್ರಭೂಮಿಯಾಗಿದೆ’ ಎಂದು ಹೇಳಬೇಕಾದರೆ ಮನುಷ್ಯನ ಬದುಕು ಇಷ್ಟು ಅಸಹನೀಯವೇ ಎಂಬ ಬೆರಗು ಮೂಡದೇ ಇರದು.

ಮನದ ಮೂಲೆಗಳಿಂದ

ಹೊರಹೊಮ್ಮುವುದು ಆಗಾಗ

ಉಸಿರುಗಟ್ಟುವ ದುರ್ಗಂಧ,

ಅಲ್ಲಿ ಆಳಗಳಲ್ಲಿ

ಕೊಳೆತು ನಾರುತ್ತಿರುವ

ಕನಸುಗಳ ಕಳೇಬರಗಳಿಂದ;

ಆಗ ಅರಿವಾಗುವುದು,

ನಗುವ ಹೂಗಳ ನಂದನವಲ್ಲ

ಮನಸು ಇಂದು

ಸತ್ತ ಕನಸುಗಳ ರುದ್ರಭೂಮಿ…”

ಇನ್ನೂ ಕೆಲವು ಸಾಲುಗಳು ಮನಸ್ಸಿಗೆ ಮುದ ನೀಡುವ ಹಾಗೇ ದೇಹಕ್ಕೂ ಮನಸ್ಸಿಗೂ ವಯಸ್ಸಿನ ಅರಿವನ್ನ ಮೂಡಿಸುವ ಜೊತೆಗೆ ನೆನಪುಗಳ ಹಾವಳಿಗಳನ್ನ ತೆರೆದಿಡುತ್ತ ತುಟಿಯಂಚಲಿ ನಗು ಮೂಡಿಸುತ ಹೌದು ಹೌದು.. ನಂದೂ ಅದೇ ಕತೆ ಅಂದುಕೊಂಡ ಸಾಲುಗಳು ಕಾಣುತ್ತವೆ..

ದಟ್ಟ ಕಪ್ಪಿನ ನಡುವೆ ಅಲ್ಲಲ್ಲಿ

ಎದ್ದು ಕಾಣುವ, ಕಂಡು ನಗುವ

ಹೀಗೆ ಅನೇಕ ಹೇಳಲೇಬೇಕಾದ ಸಾಲುಗಳು ಹಲವಿವೆ ಈ ಸಂಕಲನದಲ್ಲಿ. ಒಮ್ಮೆ ಕೊಂಡು ಓದಿಬಿಡಿ. ಜೊತೆಗೆ ನಮ್ಮದೇ ಭವಾನುರಾಗದಲ್ಲಿ ಮೀಯುವ ಅವಕಾಶವನ್ನೂ ಕಳೆದುಕೊಳ್ಳಬೇಡಿ. ಕವಿ ಬರೆದ ಮೇಲೆ ಅದರ ಭಾವಗಳು ನಮ್ಮವೇ ಆಗಿರುವ ಕೆಲವು ಸಲುಗಳೂ ಎಲ್ಲರ ಕವಿತೆಗಳಲ್ಲಿ ಬಂದರೂ ಈ ಅಸಂಗತ ಬದುಕಿನ ತುಮುಲಗಳನ್ನ ಹಿಡಿದಿಡುವ ಸಾಲುಗಳು ಕಾಣುವುದು ಅಪರೂಪ.  ಈ ಸಂಕಲನಕ್ಕೆ ಚಂದದ ಮುನ್ನುಡಿ ಬರೆದವರು ಮೂಡ್ನಾಕೋಡು ವಿಶ್ವನಾಥ್ ಹಾಗೇ  ಬೆನ್ನುಡಿ ಬರೆದ ಶೌರಿ ಬಿ. ಪಿ. ಅವರು ಹೇಳುವ ಹಾಗೆ ಇಂದು ನಮ್ಮನ್ನು ಆವರಿಸಿರುವ ಸಾಮಾಜಿಕ ಹಾಗೂ ಬೌದ್ಧಿಕ ವಿಷಾದದ ಸ್ಥಿತಿಯನ್ನು ಈ ಕವಿತೆಗಳು ಮಾತಾಡುತ್ತವೆ ಎಂಬುದು ಉತ್ಪ್ರೇಕ್ಷೆ ಏನೂ ಅಲ್ಲ.

ಹಾಗಾಗಿ ಅಲ್ಬರ್ಟ್ ಕಾಮೂ ಪುಸ್ತಕದ ಜೊತೆಗೆ ಅಮೂಲ್ಯ ಕವಿತೆಗಳ ಗುಚ್ಚವನ್ನ ಕಳಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರಿಗೆ ಧನ್ಯವಾದಗಳು.


ಡಾ. ವಸಂತಕುಮಾರ ಎಸ್. ಕಡ್ಲಿಮಟ್ಟಿ

Leave a Reply

Back To Top