ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

ಸಮಾಜ ಕಾರ್ಯಕರ್ತೆ

“ಡಾರ್ಲಿಂಗ್ ಆಫ್ ದಿ ಆರ್ಮಿ”

ಮೇರಿ ಕ್ಲಬ್‍ವಾಲಾ ಜಾಧವ್(1909-1975)

ಮೇರಿ ಕ್ಲಬ್‍ವಾಲಾ ಅವರು 1909ರಲ್ಲಿ ಅಂದಿನ ಮದ್ರಾಸ್ ರಾಜ್ಯದ ಉದಕಮಂಡಲದಲ್ಲಿ (ಊಟಿ) ಜನಿಸಿದರು. ಇವರ ತಂದೆ ರುಸ್ತು ಪಟೇಲ್. ತಾಯಿ ಆಲ್‍ಮೈ. ತಂದೆಯವರು ಅಂದಿನ ಮದ್ರಾಸಿನ 300 ಸದಸ್ಯರಿರುವ ಶಕ್ತಿಯುತ ಪಾರ್ಸಿ ಸಮುದಾಯದ ಸದಸ್ಯರಾಗಿದ್ದರು. ಮೇರಿಯವರು ತಮ್ಮ ಶಿಕ್ಷಣವನ್ನು ಮದ್ರಾಸಿನಲ್ಲಿಯೇ ಪಡೆದರು. ಮೇರಿಯವರು ತಮ್ಮ 18ನೇ ವಯಸ್ಸಿನಲ್ಲಿ ನೊಗಿ ಕ್ಲಬ್‍ವಾಲಾರವರನ್ನು ಮದುವೆಯಾದರು. 1930ರಲ್ಲಿ ಇವರಿಗೆ ಖುಸ್ರು ಎಂಬ ಮಗ ಜನಿಸಿದನು. ಮೇರಿಯವರ ಪತಿಯು 1935ರಲ್ಲಿ ಅನಾರೋಗ್ಯದಿಂದ ನಿಧನರಾದರು. ಪತಿಯ ನಿಧನದ ನಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಚಂದ್ರಕಾಂತ್ ಕೆ ಜಾದವ ಅವರ ಪರಿಚಯವಾಗಿ ಅನಂತರ ದಿನಗಳಲ್ಲಿ ಅವರೊಂದಿಗೆ ವಿವಾಹವಾದರು.

1942ರಲ್ಲಿ ನಡೆದ ಎರಡನೆಯ ಮಹಾಯುದ್ಧದ ಸಮಯದಲ್ಲಿ ಮೇರಿಯವರು ಭಾರತೀಯ ಅತಿಥ್ಯಾ ಸಮಿತಿಯನ್ನು ಸ್ಥಾಪಿಸಿದರು. ಈ ಸಮಿತಿಯ ಮೂಲಕ ಹಲವು ಜನರಿಗೆ ಸಹಾಯ ಮಾಡಿದರು. ಯುದ್ಧದ ಸಮಯದಲ್ಲಿ ಮದ್ರಾಸಿನಲ್ಲಿ ಮತ್ತು ಅದರ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಭಾರತೀಯ ಸೈನಿಕರನ್ನು ನಿಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ತುಂಬಾ ಕಡಿಮೆ ಮಟ್ಟದ ಸೌಲಭ್ಯಗಳು ಇದ್ದವು. ಹಾಗಾಗಿ ಮೇರಿ ಕ್ಲಬ್ ವಾಲಾ ಅವರು ಎಲ್ಲಾ ಸಮುದಾಯದ ಮಹಿಳೆಯರನ್ನು ಒಂದು ಕಡೆ ಸೇರಿಸಿ ಮಹಿಳೆಯರನ್ನು ಮೊಬೈಲ್ ಕ್ಯಾಂಟಿನ್, ಆಸ್ಪತ್ರೆಗಳ ಬೇಟಿ, ಡೈವರ್ಷನಲ್ ಥೆರಪಿ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಮಹಿಳೆಯರ ಮನವೋಲಿಸಿದರು.

‘ಭಾರತೀಯ ಆತಿಥ್ಯಾ ಸಮಿತಿಯು’ ಯುದ್ಧ ನಿಧಿಗೆಗಾಗಿ ದೇಣಿಗೆ ಸಂಗ್ರಹಿಸಿತು. ಅದಕ್ಕೆ ಜನರು ಉದಾರವಾಗಿ ದೇಣಿಗೆಯನ್ನು ನೀಡಿದರು. ಈ ದೇಣಿಗೆಯಿಂದ ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಪುನರ್‍ವಸತಿಗೊಳಿಸಲು ಸಹಾಯ ಮಾಡುವ ಮೂಲಕ ಕೆಲಸವನ್ನು ಮುಂದುವರೆಸಿತು. ಸೈನ್ಯವು ಯುದ್ಧದಲ್ಲಿ ವಿಜಯವನ್ನು ಗಳಿಸಿದ ನಂತರ ಮೇರಿಯವರು ಜಪಾನಿನ ಖಡ್ಗವನ್ನು ತಮ್ಮ ಪ್ರಯತ್ನಗಳ ಮೆಚ್ಚುಗೆಗಾಗಿ ಪಡೆದರು. ಮೇರಿ ಕ್ಲಬ್‍ವಾಲಾ ಅವರನ್ನು “ಡಾರ್ಲಿಂಗ್ ಆಫ್ ದಿ ಆರ್ಮಿ” ಎಂದು ಜನರಲ್ ಕರಿಯಪ್ಪ ಅವರು ಕರೆದರು.

ಮೇರಿಯವರು 1952ರಲ್ಲಿ ಮದ್ರಾಸ್ ಸ್ಕೂಲ್ ಆಫ್ ಸೋಷಿಯಲ್ ವರ್ಕ್‍ನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ಮೊದಲ ಸಾಮಾಜಿಕ ಕಾರ್ಯಶಾಲೆಯನ್ನು ಸ್ಥಾಪಿಸಿದರು. ಇದು ಭಾರತದಲ್ಲಿ ಎರಡನೆಯದಾಗಿದೆ. ಸಾಮಾಜಿಕ ಕಾರ್ಯಶಾಲೆಯನ್ನು ಮೊದಲು ಟಾಟಾ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಮುಂಬೈನಲ್ಲಿ ಪ್ರಾರಂಭಿಸಿತು.

1956ರಲ್ಲಿ ಮೇರಿಯವರನ್ನು ಮದ್ರಾಸ್ ಜಿಲ್ಲಾ ಆಡಳಿತವು ಒಂದು ವರ್ಷದ ಅವಧಿಯವರೆಗೆ ಶ್ರೀ ಎಲ್.ಇ ಕ್ಯಾಸ್ಟಲ್ ಆಗಿ ನೇಮಿಸಿದರು ಮತ್ತು ಎಡಿನ ಬರ್ಗ್ ಡ್ಯೂರ್ ಅವರು ಮದ್ರಾಸ್‍ಗೆ ಭೇಟಿ ನೀಡಿದಾಗ ಮೇರಿಯವರನ್ನು ಗೌರವಿಸಿದರು.

ಮೇರಿಯವರಿಗೆ ಸಂದ ಪ್ರಶಸ್ತಿಗಳು: 1) ಆರ್ಡರ್ ಆಫ್ ದಿ ಬ್ರಿಟೀಷ್ ಎಂಪೈರ್(ಎಂಬಿಇ) 2) ಪದ್ಮಶ್ರಿ 1955 ರಲ್ಲಿ ಪಡೆದರು. 3) ಪದ್ಮಭೂಷಣ 1968ರಲ್ಲಿ ಪಡೆದರು. 4) ಪದ್ಮವಿಭೂಷಣ್, ಭಾರತದ ಎರಡನೆ ಅತ್ಯನತ್ತ ನಾಗರೀಕ ಗೌರವನ್ನು 1975 ರಲ್ಲಿ ಪಡೆದರು. ಅದೇ ವರ್ಷ ಮರಣ ಹೊಂದಿದರು.

ಮೇರಿಯವರು ಅನೇಕ ಎನ್‍ಜಿಓಗಳನ್ನು ಚೆನೈ ಮತ್ತು ಭಾರತದ ಹಲವಡೆ ಸ್ಥಾಪಿಸಿದರು. ದೇಶದ ಹಲವು ಹಳೆಯ ಸಂಘಟಿತ ಸಂಘಟನೆಯ ಸ್ಥಾಪನೆಯ ಗೌರವ ಇವರಿಗೆ ಸಲ್ಲುತ್ತದೆ. ಮೇರಿಯವರು ಸ್ಥಾಪಿಸಿದ ಗಿಲ್ಡ್ ಆಫ್ ಸರ್ವಿಸವು ಸುಮಾರು ಒಂದು ಡಜನ್‍ಗಿಂತಲು ಅಧಿಕ ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ. ಮಹಿಳೆಯರ ಸಾಕ್ಷರತೆ, ಅನಾಥಾಶ್ರಮಗಳು, ಅಂಗವಿಕಲರ ಆರೈಕೆ ಮತ್ತು ಪುನರ್ ವಸತಿ ಇತ್ಯಾದಿಗಳ ಕುರಿತು ಇವರು ಕಾರ್ಯನಿರ್ವಹಿಸಿದರು.


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

Leave a Reply

Back To Top