ಹಣ್ಣು ಮಾರುವ ಹುಡುಗಿ ಮತ್ತು ನಾನು

ಕಾವ್ಯಯಾನ

ಹಣ್ಣು ಮಾರುವ ಹುಡುಗಿ ಮತ್ತು ನಾನು

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

“ಹಣ್ಣು ಬೇಕಾ ಹಣ್ಣು
ಸೇಬು, ಪೇರಲ,ಮೊಸಂಬಿ..
ತಾಜಾ ಹಣ್ಣುಗಳು
ಕೇವಲ ಕೆಲವೆ ರೂಪಾಯಿಗಳು”

ಸದಾ ಜನಜಂಗುಳಿಯಿಂದ
ಗೀಜಿಗುಡುವ
ಬಸ್ ಸ್ಟ್ಯಾಂಡಿನ ಪ್ಲಾಟ್ ಫಾರಂಗೆ
ಬಸ್ಸು ಬರುತ್ತಿದ್ದಂತೆಯೇ..

ಆ.. ಹುಡುಗಿ ಬಸ್ಸನೇರಿ
ಗೋಗೆರೆಯುತ್ತಾಳೆ.
“ಒಳ್ಳೆಯ ಹಣ್ಣು ಒಳ್ಳೆಯ ಆರೋಗ್ಯಕ್ಕೆ..”

ಒಳ್ಳೆಯದು ನಮ್ಮ ಮುಂದೆ ಬಂದರೂ..
ವ್ಯಂಗ್ಯ, ತಿರಸ್ಕಾರದ ನೋಟ
ಅವಳೆಡೆಗೆ.
ಅವಳೋ..ಬಿಟ್ಟು ಬಿಡದೆ
ಕಾಡುತ್ತಾಳೆ
“ಹಣ್ಣು ತಗೋಳ್ಳಿ” ಎಂದು.

ನಾವು ಹಣ್ಣು ತಿಂದು
ಆರೋಗ್ಯವಾಗಿದ್ದರೆ,
ಅವಳ ಹಸಿವು ನೀಗುವುದು..!
ಅವಳಪ್ಪನ ಗೂರಲು ರೋಗಕ್ಕೆ
ಔಷಧ ಸಿಗುವುದು.

ಅಗೋ ತಾಜಾ ಬೇಕೆ ನಿಮಗೆ..?

“ಅಯ್ಯೋ ಹೋಗಮ್ಮ ನಮಗೆ ಬೇಡ,
ಇಷ್ಟ ಹಣ್ಣಿಗೆ,ಅಷ್ಟಾ ದುಡ್ಡಾ..?
ಹಣ್ಣು ಸರಿಯಾಗಿಲ್ಲ
ಮೆತ್ತಗಾಗಿವೆ,ಬೇಡ ಬಿಡು..”

ಎನ್ನುತ್ತಲೇ ಹೆಣ್ಣಿಗೋ
ಹಣ್ಣಿಗೋ ಕೈಹಾಕುವ
ಖದೀಮರೂ ಉಂಟು
ಛೇ..ಕರಳು ಚೂರುಗೂಡಲಿಲ್ಲ

ನೂರಾರು ತಕರಾರುಗಳಿಗೆ
ತರಹೇವಾರಿ ಉತ್ತರ ಅವಳದು.

ರಾತ್ರಿ ಪೇಟೆ ತುಂಬಾ ಹುಡುಕಿ
ಬಾಟಲ್ ಮದ್ಯ ತರಲು ಹೋಗಿ
ಹಚ್ಚಿದ ಲೇಬಲ್ ಗಿಂತ
ಎರಡು ಪಟ್ಟು ಹೆಚ್ಚಿಗೆ ಕೊಟ್ಟು
ಗುಟುಕರಿಸುತ್ತಾ..
ಕುಡಿಯುವಾಗ ಒಂದೊಂದೇ
ಕರಳು ಚೂರುಗುಟ್ಟಿದ್ದರೂ
ಕಬರಿಲ್ಲ ನಮಗೆ.

ಆಗ ತಟ್ಟನೇ
ನೆನಪಾಗುತ್ತಾಳೆ ಹಣ್ಣು ಮಾರುವ ಹುಡುಗಿ.

ಹಣ್ಣು ಮಾರುವ ಹುಡುಗಿ
ಮೊನ್ನೆಯಿಂದ ಕಾಣುತ್ತಿಲ್ಲ..!!
ಹುಡುಕಾಡಿದೆ ತಡಕಾಡಿದೆ
ಹಮಾಲಿ ಬಾಬಾನನ್ನು ಕೇಳಿದೆ.

ಅವನೆಂದ,
“ಹಣ್ಣು ಹಣ್ಣಾದ ಅವರಪ್ಪ
ನಿನ್ನೆ ಮಣ್ಣಾಗಿ ಹೋದ
ಬಾಲ್ಯದಲ್ಲೇ ತಾಯಿಯನ್ನು
ಕಳೆದುಕೊಂಡ ಬಾಲೆಗೆ
ಹಣ್ಣುಗಳೇ ಜೀವನಾಧಾರ”

ನಾನು ನಿಂತಲೇ..ಕುಸಿದು ಹೋದೆ..

ಹಣ್ಣು ಮಾರುವ ಹುಡುಗಿ
ನೆನಪಾದಾಗಲ್ಲೆಲ್ಲ..‌
“ಹಣ್ಣಮ್ಮ ಸೇಬು ಹಣ್ಣಮ್ಮಾ…”


Leave a Reply

Back To Top