ದ್ವೇಷಕ್ಕೆ ಹಲವು ಮುಖ : ಪ್ರೀತಿಗೆ ಒಂದು ಮುಖ
ಅವನು ಇವನನ್ನು ಕಂಡ ಕೂಡಲೇ ಹಲ್ಲು ಹಲ್ಲು ಕಡಿಯುತ್ತಾನೆ, ಬೈಯುತ್ತಾನೆ, ದ್ವೇಷಕಾರುತಲೆ ಇರುತ್ತಾನೆ..!

 ಅವಳು ಒಡಹುಟ್ಟಿದ ಮಗನನ್ನು ಕಂಡರೂ ಸದಾ ಬಯ್ಯುತ್ತಾಳೆ,  “ನಾನು ಹೇಳಿದಂತೆ ಆಗಲಿಲ್ಲವಲ್ಲ ಎಂದು ಹಪಾಹಪಿಸುತ್ತಾಳೆ..!

 ಅಂದು, ಅಂಗುಲಿಮಾಲ ಭಗವಾನ್ ಬುದ್ಧನ ಬಳಿ ಬಂದು,  “ಭಗವಾನ,  ಜನರು ನನಗೆ ಕಲ್ಲಿನಿಂದ ಹೊಡೆಯುತ್ತಾರೆ. ಛೀ.. ಥೂ.. ಬಯ್ಯುತ್ತಾರೆ” ಎಂದು ಕಣ್ಣೀರು ಸುರಿಸುತ್ತಾ, ಭಗವಾನ್ ಬುದ್ಧನೆದುರು ನಿಲ್ಲುತ್ತಾನೆ.  ಆಗ ಭಗವಾನ್ ಬುದ್ಧ ಮುಗುಳ್ನಗುತ್ತಾ,  “ಮಗನೇ, ನೀನು ಏನನ್ನು ಜಗತ್ತಿಗೆ ಕೊಟ್ಟಿರುವೆಯೋ ಮರಳಿ ಜಗತ್ತು  ನಿನಗೆ ಅದನ್ನೇ ಕೊಡುತ್ತದೆ,  ನೀನು ಅದನ್ನು ಪ್ರೀತಿಯಿಂದ ಸ್ವೀಕರಿಸಬೇಕು ಅಷ್ಟೇ..”! ಎಂದು ಮುಗುಳ್ನಗುತ್ತಾನೆ.

 ಮೇಲಿನ ಮೂರು ಪ್ರಕರಣಗಳು ಬೇರೆ ಬೇರೆಯಾಗಿದ್ದರೂ ಕೂಡ ವಾಸ್ತವಿಕವಾಗಿ ಅವು ಒಂದೇ ಆಯಾಮವನ್ನು ಹೊಂದಿವೆ. ಮನುಷ್ಯನ ಆಯುಷ್ಯ ದೀರ್ಘವಲ್ಲ. ಇರುವ ಸ್ವಲ್ಪ ಸಮಯದಲ್ಲಿಯೇ ಪ್ರೀತಿಯಿಂದ ಬದುಕಬೇಕು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಾರದಷ್ಟು ದ್ವೇಷ, ಇರ್ಷೆ,  ಆಕ್ರೋಶ ವ್ಯಕ್ತಪಡಿಸುತ್ತಲೇ,  ಸದಾ ಹಲ್ಲು ಮಸೆಯುತ್ತಲೆ ಜೀವನವನ್ನು ದುಡುತ್ತಾ ಹೋದರೆ…?  ಅದರಿಂದ ನಷ್ಟವಾಗುವುದು ದ್ವೇಷ ಮಾಡಿದವರಿಗೆ.  ಏಕೆಂದರೆ ವೈಜ್ಞಾನಿಕವಾಗಿ ದ್ವೇಷ ಮಾಡುವ ವ್ಯಕ್ತಿಯ ನರಗಳು ಸಡಿಲಗೊಳ್ಳುತ್ತವೆ. ರಕ್ತಸಂಚಲನ ಹೆಚ್ಚಾಗುತ್ತದೆ. ಮೆದುಳು ತನ್ನ ಕ್ರಿಯಾಶೀಲತೆಯನ್ನು ಅತಿ ಹೆಚ್ಚು ಮಾಡುತ್ತದೆ. ಇದರಿಂದ ಸಹಜವಾಗಿ ತಮ್ಮ ಕಾರ್ಯ ಕಲಾಪಗಳನ್ನು ಮಾಡುತ್ತಿದ್ದ ನಮ್ಮ ಅಂಗವ್ಯೂಹಗಳು ತಮ್ಮ ಕ್ರಿಯಾಶೀಲತೆಯನ್ನು ಹೆಚ್ಚು ಮಾಡಿ ಅವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತವೆ.

 ಮನುಷ್ಯನಾದವನು ಇನ್ನೊಬ್ಬರಿಗೆ ಏನನ್ನು ಬಯಸುತ್ತಾನೆಯೋ ಮರಳಿ ಅವನಿಗೆ ಅದೇ ದಕ್ಕುತ್ತದೆ. ನಾನು ಇನ್ನೊಬ್ಬರನ್ನು ಯಾವುದೋ ಒಂದು ಸಣ್ಣ ಕಾರಣಕ್ಕಾಗಿ ದ್ವೇಷಿಸುತ್ತಲೇ ಹೋದರೆ, ದ್ವೇಷ ಬೆಳೆಯುತ್ತಲೇ ಹೋಗುತ್ತದೆ. ‘ಕ್ಷಮಿಸುವ ಗುಣ’ ಬರುವುದೇ ಇಲ್ಲ..! ಯಾರು ಸದಾ ಸೇಡಿಗಾಗಿ ಹಪಾಹಪಿಸುತ್ತಾರೋ ಅವರೇ ಮೊದಲು ಬಲಿಯಾಗುವುದು.  ಈ ಸಿದ್ಧಾಂತವನ್ನು ನಾವು ಮನಸ್ಸಿನೊಳಗಿಟ್ಟುಕೊಂಡು ನಮ್ಮ ಬದುಕಿನ ಪಥವನ್ನು ಬದಲಾಯಿಸಿಕೊಳ್ಳಬೇಕು. ಮೇಲಿನ ಉದಾಹರಣೆಯಲ್ಲಿ ಭಗವಾನ್ ಬುದ್ಧ ಬಹಳ ಸ್ಪಷ್ಟವಾಗಿ ಅಂಗುಲಿಮಾಲನಿಗೆ ಮಾತೊಂದು ಹೇಳುತ್ತಾರೆ. 

“ನೀನು ಜಗತ್ತಿಗೆ ಏನನ್ನು ಕೊಟ್ಟಿರುವೆಯೋ : ವಾಪಸು ಜಗತ್ತು ನಿನಗೆ ಅದನ್ನೇ ಕೊಡುತ್ತದೆ. ನಿಜ, ಜಗತ್ತಿಗೆ ನಾವು ದ್ವೇಷವನ್ನು ಕೊಟ್ಟರೆ ಮರಳಿ ದ್ವೇಷವನ್ನೇ ಕೊಡುತ್ತದೆ. ನಾವು ಪ್ರೀತಿಯನ್ನು ಕೊಟ್ಟರೆ ಜಗತ್ತು ಮರಳಿ ಪ್ರೀತಿಯನ್ನೇ ಕೊಡುತ್ತದೆ.  ಹಾಗಾಗಿ ಜಗತ್ತಿಗೆ ನಾವು ಸದಾ ಮುಗುಳ್ನಗುತ್ತಾ ಪ್ರೀತಿಯಿಂದ ಸಮಾಜದಲ್ಲಿ ಬೆರೆಯಬೇಕಾಗಿದೆ ಇಲ್ಲದೆ ಹೋದರೆ ಈ ಜಗತ್ತು ದ್ವೇಷದ ಗುಡ್ಡೆಯಾಗಿ ಆಕ್ರೋಶದಿಂದ ಕುದಿಯುತ್ತಾ ಹೋಗುತ್ತದೆ.
ಬಾಲ್ಯದಲ್ಲಿ ಸಹೋದರ ಸಹೋದರಿಯರು ಪ್ರೀತಿಯಿಂದ ಜೀವನ ಕಟ್ಟಿಕೊಂಡು, ಕಷ್ಟ ಸುಖದಲ್ಲಿ ಆದವರು ಬರು ಬರುತ್ತಾ ದಾಯಾದಿ ಕಲಹದಿಂದ ಆಸ್ತಿಗಾಗಿ ಸೇಡು, ಆಕ್ರೋಶ ಬೆಳೆಸಿಕೊಳ್ಳುವುದು ನಿಜವಾಗಲೂ ಒಳ್ಳೆಯದಲ್ಲ.

ಜೀವನದಲ್ಲಿ ಮಹತ್ವಕಾಂಕ್ಷೆ ಇರಬೇಕು. ನಿಜ, ಆದರೆ ಸಂಬಂಧಗಳನ್ನು ಹಾಳು ಮಾಡಿಕೊಂಡು ದ್ವೇಷವನ್ನು ಬೆಳೆಸಿಕೊಂಡು ಅಸ್ತಿಗಾಗಿ ಸದಾ ದ್ವೇಷಕಾರುತ್ತಲೇ ಇರುವುದಲ್ಲ.  ತಮ್ಮನನ್ನು ಕಂಡರೆ ಅಣ್ಣನಿಗೆ ಆಗುವುದಿಲ್ಲ : ಅಣ್ಣನನ್ನು ಕಂಡರೆ ತಮ್ಮನಿಗೆ ಆಗುವುದಿಲ್ಲ.  ಸಹೋದರ ಸಹೋದರಿಯರು ಆಸ್ತಿ ವಿಷಯವಾಗಿ ನ್ಯಾಯಾಲಯಕ್ಕೆ ಹೋಗುವುದು. ಸಂಬಂಧಗಳಿಗೆ ಬೆಲೆ ಕೊಡಲಾರದ ನಾವುಗಳು, ನ್ಯಾಯಾಲಯಕ್ಕೆ ಹೋದ ನಂತರ ಆಸ್ತಿ ವಿಷಯವಾಗಿ ವಕೀಲರು ನಮ್ಮ ನಮ್ಮ ಹಣವನ್ನು ಕೀಳುವುದರ ಜೊತೆಗೆ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ ಎನ್ನುವುದು ನೆನಪಿರಲಿ. ನ್ಯಾಯಾಲಯದ ಆವರಣದಲ್ಲಿ ಒಬ್ಬರಿಗೊಬ್ಬರು ಮುಖ ನೋಡಿದರೂ ಮಾತನಾಡಲಾರೆ ಎಷ್ಟೋ ದ್ವೇಷ ಕಾರುತ್ತೇವೆ..! ಎದುರು ಬದುರಾದರೂ ಮುಖ ನೋಡಲಾರದಷ್ಟು ಸೇಡು ಸೆರಿಸಿಕೊಳ್ಳುತ್ತೇವೆ.  ಆದರೆ ಒಂದು ನೆನಪಿರಲಿ ಸ್ನೇಹಿತರೆ,

‘ಬಾಂಧವ್ಯ’ ಎನ್ನುವುದು ಬಹುದೊಡ್ಡ ಸಂಪತ್ತು. ಅದನ್ನು ಕಳೆದುಕೊಂಡರೆ ನಮಗೆ ಮತ್ತೊಂದು ಸಿಗುವುದಿಲ್ಲ.  ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಬೇಕು. ದ್ವೇಷದಿಂದಲ್ಲ..!  ದ್ವೇಷಕ್ಕೆ ಹಲವು ಮುಖಗಳಿವೆ. ಆಸ್ತಿ, ಸೇಡು, ಆಕ್ರೋಶ, ದ್ವೇಷ, ಅಸೂಯೆ, ಆದರೆ ಪ್ರೀತಿಗೆ ಯಾವುದೇ ಮುಖಗಳಿಲ್ಲ..! ಅದು ಒಂದೇ ಮುಖ ಅದು ಪ್ರೀತಿ.  ಪ್ರೀತಿಯನ್ನು ಪ್ರೀತಿಗೆ ಸರಿಸಾಟಿ.  ನಾವು ಯಾವುದನ್ನು ಬಾಂಧವ್ಯ ಎನ್ನುತ್ತೇವೆಯೋ, ಅದೇ ಪ್ರೀತಿ.  ಪ್ರೀತಿಯನ್ನು ಬೇರೆ ಯಾವುದಕ್ಕೂ ಹೋಲಿಸಲು ಅಸಾಧ್ಯ.  ಅಂತಹ ಪ್ರೀತಿಯನ್ನು ಸಂಬಂಧಗಳ ಬಾಂಧವ್ಯದೊಳಗೆ ಮಮತೆಯನ್ನು ಕೊಡುತ್ತಾ, ಬಹು ಜತನದಿಂದ ಕಾಪಾಡಬೇಕು. 
ಬದುಕಿನುದ್ದಕ್ಕೂ ತಂದೆ ತಾಯಿಗಳಿಗೆ ಮುದ್ದಿನ ಮಕ್ಕಳಾಗುವುಂತೆ,  ನಾವು ಅಣ್ಣನಿಗೆ ಪ್ರೀತಿಯ ತಮ್ಮನಾಗಿ,  ಪ್ರೀತಿಯ ತಮ್ಮನಿಗೆ ಪ್ರೀತಿಯ ಅಣ್ಣನಾಗಿ, ಪ್ರೀತಿಯ ಸಹೋದರಿಯರಿಗೆ ಸಹೋದರರಾಗಿ ಬದುಕನ್ನು ಕಟ್ಟಬೇಕು.  “ನಾನು ನನ್ನದು” ಎನ್ನುವುದು ಕೇವಲ ನಮ್ಮ ಅಲ್ಪಾಯುಷ್ಯದಲ್ಲಿ ಮಾತ್ರ..! ನೆನಪುಗಳ ಮೆರವಣಿಗೆಯಲ್ಲಿ ಪ್ರೀತಿಯೇ ಅಂತಿಮ ಸತ್ಯ.  ಕವಿವಾಣಿಯಂತೆ, 

“ಪ್ರೀತಿ ಇಲ್ಲದ ಮೇಲೆ ನಾನು ದ್ವೇಷವನ್ನು ಮಾಡುವುದಿಲ್ಲ..” ಎನ್ನುವ ಮಾತು ನಿತ್ಯ ಸತ್ಯ. ನಾವೆಲ್ಲರೂ ಪ್ರೀತಿಯಿಂದ ಬದುಕನ್ನು ಕಟ್ಟಿಕೊಳ್ಳೋಣ ಎಂದು ಬಯಸುವೆ.


Leave a Reply

Back To Top