ಅಂಕಣ ಬರಹ

ಗಜಲ್ ಲೋಕ

ಬಕ್ಕಳರ ಗಜಲ್ ಯಾನ

ಗಜಲ್ ಲೋಕದ ತಾರೆಗಳೆಲ್ಲರಿಗೂಮಲ್ಲಿ ದಿಲ್ ಸೆ ನಮಸ್ಕಾರಗಳು…‌

ಕಳೆದ ವಾರದಂತೆ ವಾರವೂ ಮತ್ತೊಬ್ಬ ಗಜಲ್ ಕಾರರ ಪರಿಚಯದೊಂದಿಗೆ ತಮ್ಮ ಮುಂದೆ ನಿಂತಿರುವೆನು..!!

ನಾನು ಕವಿತೆಗಳನ್ನು ಬರೆಯುವುದು ಯಾರ ಹೊಗಳಿಕೆಗಾಗಿ ಅಲ್ಲ

ನನ್ನ ಕವಿತೆಯಲ್ಲಿ ಅರ್ಥವಿಲ್ಲದಿದ್ದರೆ ನನಗದು ಚಿಂತೆಯೇ ಅಲ್ಲ

                    –ಮಿರ್ಜಾ ಗಾಲಿಬ್

              ಕಾವ್ಯಲೋಕವು ಆಗಸದ ತಾರೆಗಳಂತೆ ಅಸಂಖ್ಯಾತ ಪ್ರಕಾರಗಳಿಂದ ಮಡುಗಟ್ಟಿದೆ. ಅವುಗಳಲ್ಲಿ ‘ದೃವತಾರೆ’ಯಂತೆ ಹೊಳೆಯುತಿರುವುದು ಮಾತ್ರ ಗಜಲ್ ಎಂಬ ಕಾಂತಾ ಸಂಮ್ಮಿತೆಯ ಕನ್ನಿಕೆ!! ಹೆಣ್ಣಿಗೆ ಸೋಲದ ಗಂಡು ಇಲ್ಲ ಎಂಬಂತೆ ಗಜಲ್ ಅಷ್ಟೊಂದು ಆಕರ್ಷಕ ರೂಪವಾಗಿ ಪರಿಣಮಿಸಿ ಬಿಟ್ಟಿದೆ ಗಜಲ್ ಕಾರರಲ್ಲಿ ಹಾಗೂ ಓದುಗರಲ್ಲಿ. ಗಜಲ್ ಎಂದರೆ ಶಬ್ಧಾರ್ಥಗಳನ್ನು ಅತಿಕ್ರಮಿಸಿದ ಮೇಲೆ ಉಳಿಯುವ ನಿಶ್ಶಬ್ಧ ಮೌನ!! ಅದೊಂದು ಪರಿಪೂರ್ಣತೆಯೆಡೆಗೆ ಸಾಗುವ ನಾದ ಮಾಧುರ್ಯ. ಕಾರಣ, ಪರಿಪೂರ್ಣತೆಯ ಗೀಳಿನ ಬೆನ್ನು ಹತ್ತಿದವನು ಮೃತಪ್ರಾಯನಾಗುತ್ತಾನೆ…!! ಕನ್ನಡ ಗಜಲ್ ಪರಂಪರೆ ಅರ್ಧ ಶತಮಾನದ ಹರೆಯದಲ್ಲಿದೆ. ಈ ಯೌವ್ವನದ ನಡಿಗೆಯ ನಡುವೆ ಬಾಲ್ಯಾವಸ್ಥೆಯ ಅಂಬೆಗಾಲು, ಹೊಸತನದ ಪ್ರಯೋಗಗಳ ಕಡೆ ಗಮನ ಹರಿಸಬೇಕಾಗಿದೆ. ಆ ಕಾಲಘಟ್ಟದಲ್ಲಿ ನಿಂತು ಅಂದಿನ ಗಜಲ್ ಗಳೊಂದಿಗೆ ಅನುಸಂಧಾನ ಮಾಡಬೇಕಾದ ಸಂಕ್ರಮಣ ಸ್ಥಿತಿಯಲ್ಲಿ ನಾವಿದ್ದೇವೆ. ಗಜಲ್ ಎಂದಾಗ ನಮಗೆ ಥಟ್ಟನೆ ನೆನಪಾಗುವುದು ನಿಜಾಮರ ಹೆಜ್ಜೆ ಗುರುತುಗಳು ಇರುವ ಹೈದರಾಬಾದ್ ಕರ್ನಾಟಕ ಪ್ರದೇಶ!! ಆದರೆ ಇದರೊಂದಿಗೆ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಗಜಲ್ ನ ಸಾಯಾವನ್ನು ಗುರುತಿಸಬಹುದು. ಆ ನಿಟ್ಟಿನಲ್ಲಿ 1992 ರ ಮೇ 16ರಂದು ಲೋಕಾರ್ಪಣೆಗೊಂಡ ಜಿ. ಸುಬ್ರಾಯ ಭಟ್ ಬಕ್ಕಳ ಅವರ “ಬಕ್ಕಳರ ಗಝಲ್ ಗಳು” ಎಂಬ ಗಜಲ್ ಶೀರ್ಷಿಕೆ ಹೊತ್ತ ಪುಸ್ತಕ!! ಈ ಸಂಕಲನದ ಮುನ್ನುಡಿಯಲ್ಲಿ “ಕನ್ನಡದಲ್ಲಿ ಗಝಲ್ ಗಳದ್ದೇ ಇಡಿಯಾಗಿ ಒಂದು ಸ್ವತಂತ್ರ ಸಂಗ್ರಹ ಬರುತ್ತಿರುವುದು ಪ್ರಾಯಶಃ ಇದೇ ಮೊದಲು” ಎಂದು ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿಯವರು ಉದ್ಗರಿಸಿದ್ದಾರೆ!! ಮುಂದೆ ಇದೇ ಸಂಕಲನವು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ವತಿಯಿಂದ 2004 ರಲ್ಲಿ ದ್ವಿತೀಯ ಮುದ್ರಣವನ್ನು ಕಂಡಿದೆ. ಗಜಲ್ ಕಾವ್ಯದ ಮೂಲಭೂತ ಅಂಗಗಳಾದ ಮತ್ಲಾ, ಮಕ್ತಾ, ಕಾಫಿಯ ಹಾಗೂ ರದೀಫ್ ಗಳ ಹೊರತಾಗಿಯೂ ಈ ಕೃತಿಯು ಗಜಲ್ ಪರಪಂಚದಲ್ಲಿ ಗಝಲ್ ಶೀರ್ಷಿಕೆ ಹೊತ್ತ ಮೊದಲ ಸಂಗ್ರಹವಾಗಿದೆ!! ಗಜಲ್ ಹೆದ್ದಾರಿಯಲ್ಲಿ ಇದೊಂದು ಆರಂಭದ ಮೈಲಿಗಲ್ಲು!!

        ಸುಬ್ರಾಯ ಭಟ್ ಬಕ್ಕಳ ಅವರು 1966ರಲ್ಲಿ ಜನಿಸಿದ್ದಾರೆ. ಅವರ ಪ್ರಾಥಮಿಕ ಶಿಕ್ಷಣ ಹುಲೇಕಲ್ ನಲ್ಲಿ, ಪಿ.ಯು.ಸಿ ಶಿರಸಿಯಲ್ಲಿ ಹಾಗೂ ಬಿ.ಎ. ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮುಗಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಉತ್ತಮ ಕೆಲಸವನ್ನು ಮಾಡಿ, ಅವಿರೋಧ ಆಯ್ಕೆಯೂ ಆಗಿರುವುದು ಅವರ ಹೆಗ್ಗಳಿಕೆ ಆಗಿದೆ! ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.‌ “ಉಳುಮೆ”, “ಜನಮಾಧ್ಯಮ”, ಎಂಬ ಹಲವು ಮಾಸಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. ‘ಬಕ್ಕಳ ಪ್ರಿಂಟ್ ಮೀಡಿಯಾ’ ದಿಂದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2007ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಯಶಸ್ವಿಯಾಗಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದಾರೆ!! ಸದ್ಯ ಇವರು ಸುಮುಖ ಟಿವಿಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯಕ್ಕಿಂತಲೂ ವಿಶೇಷವಾಗಿ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡ ಬಕ್ಕಳ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ!! ಗಜಲ್ ಸಂಕಲನ ಹೊರತಾಗಿ ‘ಕುಬ್ಲಾ’, ‘ಬಾರೋ ವಸಂತ’, ‘ಬಕ್ಕಳ ಶಾಸ್ತ್ರೀಯ ಸಸ್ಯೋದ್ಯಾನವನ’, ‘ಮಣ್ಣ ನೆನಪಿನ ಮೇಲೆ’, ಎಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

      “ಬಕ್ಕಳರ ಗಝಲ್ ಗಳು” ಎಂಬ ಸಂಕಲನ ಪ್ರಕಟಿಸುವುದಕ್ಕಿಂತಲೂ ಮುಂಚೆ ‘ಮಣ್ಣ ನೆನಪಿನ ಮೇಲೆ’ ಎಂಬ ಕವನ ಸಂಕಲನದಲ್ಲಿಯೂ ಬಕ್ಕಳ ಅವರು ತಮ್ಮ ಕೆಲವು ಗಜಲ್ ಗಳನ್ನು ಪ್ರಕಟಿಸಿದ್ದಾರೆ. ಇನ್ನೂ “ಬಕ್ಕಳರ ಗಝಲ್ ಗಳು” ಕೃತಿಯಲ್ಲಿ 30 ಶೀರ್ಷಿಕೆಯಾಧಾರಿತ ಗಜಲ್ ಗಳಿವೆ. ಈ ಕೃತಿಯ ಬೆನ್ನುಡಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರು ಬಕ್ಕಳ ಅವರ ಗಜಲ್ ನ ವಿಷಯವಸ್ತು ಕುರಿತು ” ಸಾಂಸ್ಕೃತಿಕ ಒತ್ತಡ ಮತ್ತು ಹೊಣೆಯ ಆಯಾಮ ಗಜಲ್ ಗಳಲ್ಲಿ ಬರಬೇಕು” ಎಂದಿದ್ದಾರೆ. ಗಜಲ್ ನ ಆರಂಭ ಹಂತದಲ್ಲಿ ಗಜಲ್ ಕಾರರಾದ ಬಕ್ಕಳ ಅವರು ಬೆಮತ್ಲಾ, ಬೆಮಕ್ತಾ ಗಜಲ್ ಗಳನ್ನು ಬರೆದಿದ್ದಾರೆ.

ಹೋಗು ಹೋಗು ಮರೆಯದ ನೆನಪಲ್ಲಿ

ಅದೆಷ್ಟು ಕಾಡುವೆ ಮೂಡಬಾರದೆ ಚಂದ್ರ

ಎಂಬ ಷೇರ್ ಪ್ರೀತಿಯಲ್ಲಿನ ಮುನಿಸನ್ನು ವ್ಯಕ್ತಪಡಿಸುತ್ತದೆ. ಪ್ರೀತಿಯಲ್ಲಿ ‘ಕಾಡುವಿಕೆ’ ಕೂಡ ಪ್ರೀತಿಯ ಒಂದು ಬಗೆ.  ಆ ಕಾಡುವಿಕೆಯಲ್ಲಿಯೂ ಒಂದು ರೀತಿಯ ಅನುಭವ ಮುದ ನೀಡುತ್ತದೆ. ಇದು ಪ್ರತಿ ಪ್ರೇಮಿಗಳ ಪಿಸುಮಾತಾಗಿದೆ.

       ‘ಲಜ್ಜೆ ಎಂಬುದು ನಂಬಿಕೆಯ ಮುಖ್ಯ ಭಾಗವಾಗಿದೆ’ ಎನ್ನುತ್ತಾರೆ ಪ್ರವಾದಿಯವರು. ಈ ಹಿನ್ನೆಲೆಯಲ್ಲಿ ನಾಚಿಕೆಯು ಮನುಷ್ಯನನ್ನು ಕರಗಿಸುತ್ತದೆ. ಜೊತೆಗೆ ಅವನ ಒಳ ಅಂಗಾಂಗಗಳನ್ನೂ ಕರಗಿಸುತ್ತದೆ!! ಈ ನೆಲೆಯಲ್ಲಿ ಬಕ್ಕಳ ಅವರ ಈ ಷೇರ್ ಗಮನಿಸಬಹುದು.

ಹೇಳಿ ಬಿಡಲೇನು ಸ್ಪರ್ಶದಾಚೆಗಿನ ಜಗತ್ತು

ನಾಚಿದರು ಒಲವು ಅಲ್ಲೆ ಹುಟ್ಟು ನೀನಿರುವ ರಾತ್ರಿ

ಇದರೊಂದಿಗೆ ಹಲವು ಗಜಲ್ ಗಳು ಮನಸ್ಸಿಗೆ ಮುದ ನೀಡುತ್ತವೆ. ಸದ್ಯ ಇವರು ತಮ್ಮ ಎರಡನೆಯ ಗಜಲ್ ಸಂಕಲನದ ಪ್ರಕಟಣೆಯಲ್ಲಿ ನಿರತರಾಗಿದ್ದಾರೆ. ಇವರಿಂದ ಇನ್ನೂ ಹೆಚ್ಚು ಹೆಚ್ಚು ಗಜಲ್ ಸಂಕಲನಗಳು ಹೊರ ಬರಲಿ ಎಂದು ಶುಭ ಕೋರುವೆನು..!!

ಮತ್ತೆ ಮುಂದಿನ ಗುರುವಾರ ಮತ್ತೊಬ್ಬ ಗಜಲ್ ಗೋ ಅವರೊಂದಿಗೆ ಬರುವೆ… ಅಲ್ಲಿಯವರೆಗೆ ಅಲ್ವಿದಾ…, ನಮಸ್ಕಾರಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ.

One thought on “

  1. ತುಂಬು ಹೃದಯದ ಧನ್ಯವಾದಗಳು ಸರ್ ಜೀ

Leave a Reply

Back To Top