ಅಂಕಣ

ನೆಲಸಂಪಿಗೆ

(ಐದನೇ ಕಂತು)

ನಮ್ಮ ನಡುವಿನ  ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು  ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

ಇರುಳಲೋಕದ ಗಾನಗಂಧರ್ವರು

     ಗಾಢ ಕತ್ತಲು ಅಥವಾ ಬೆಳದಿಂಗಳು ಜಗವನ್ನು ತುಂಬಿದ ರಾತ್ರಿಗಳ ಕುರಿತು ಯೋಚಿಸಿದಾಗೆಲ್ಲ ಮೊತ್ತಮೊದಲು ಕಣ್ಣಮುಂದೆ ಬರುವುದು ಗೆಣಸಿನ ಗದ್ದೆ, ಬೆರ್ಚಪ್ಪ, ಹಳ್ಳಿಮನೆ, ಕಬ್ಬಿನಾಲೆಗಳನ್ನು ಒಳಗೊಂಡ ರೂಪಕದಂಥಾ ಒಂದು ಪ್ರಪಂಚ. ಉದ್ದಾನುದ್ದ ಬಯಲುಗಳು, ಸುತ್ತುವರೆದ ದಟ್ಟ ಕಾಡುಗಳ ನಡುವೆ ಬೆಚ್ಚಗೆ ಮಲಗಿದ ಮನೆಗಳು… ಕೃಷಿ ಬದುಕನ್ನು ಅವಲಂಬಿಸಿದ ಶ್ರಮಜೀವಿಗಳ ಹಳ್ಳಿ. ಹಗಲಿಡೀ ಮೈಮುರಿಯುವ ಕೆಲಸ; ಮುಸ್ಸಂಜೆಯಾದೊಡನೆ ಚಿಮಣಿ ದೀಪಗಳಿಗೆ ಸೀಮೆಎಣ್ಣೆ ತುಂಬಿ, ಬತ್ತಿಯ ಕರಿ ತೆಗೆದು ದೀಪ ಬೆಳಗಿಸಿ ಹೊಟ್ಟೆಗೆ ಗಂಜಿ- ಕಚ್ಚಿಕೊಳ್ಳಲು ಎಂತಾದರೂ ಪದಾರ್ಥ ಅಟ್ಟು, ಉಂಡು ನಿದ್ದೆಹೋಗುವ ಪ್ರತಿನಿತ್ಯದ ಸರಳ ದಿನಚರಿ ! ನಿಸರ್ಗವೆಂಬ ನಿಸರ್ಗದೊಂದಿಗೆ ತಾದಾತ್ಮ್ಯ ಬೆಳೆಸಿಕೊಂಡು ಸಹಜವಾಗಿ, ಸ್ವಾವಲಂಬನೆಯಿಂದ ಬದುಕುವ ಪರಿಯೇ ಅಂದಿನ ಜನಜೀವನದ ಬಹುದೊಡ್ಡ ಶಕ್ತಿ.

    ವಿಚಿತ್ರವೆಂದರೆ ಎಷ್ಟೊಂದು ವಿಧ ವಿಧದ ಮುಖವಾಡಗಳನ್ನು ಧರಿಸಿದ ಮನುಷ್ಯರನ್ನು ಕಂಡ ಮೇಲೆ ಈಗ ಬೆರ್ಚಪ್ಪನದು ಆಸಕ್ತಿದಾಯಕ ವ್ಯಕ್ತಿತ್ವ ಅನಿಸುತ್ತದೆ ! ಹಗಲಿನ ಉರಿಬಿಸಿಲು, ಹಕ್ಕಿಗಳ ಸ್ಪರ್ಶಕ್ಕೆ ಮೈಯ್ಯಾಗುವ ಬೆರ್ಚಪ್ಪ ಇರುಳಿನ ಗಾಢಕತ್ತಲನ್ನು ಹೀರುತ್ತ, ಬೆಳದಿಂಗಳನ್ನು ಕುಡಿಯುತ್ತ ಖುಷಿಯಾಗಿರುತ್ತಾನೆ ಎಂದು ಕಲ್ಪಿಸಿಕೊಳ್ಳುತ್ತೇನೆ! ಆದರೆ ಹಾಗೆ ಆರಾಮಾಗಿರಲು ಬೆರ್ಚಪ್ಪನಿಗೆ ಸಮಯವೆಲ್ಲಿದೆ? ಅವನ ಮುಖ್ಯ ಕೆಲಸವಿರುವುದೇ ರಾತ್ರಿಗಳಲ್ಲಿ! ನಡುರಾತ್ರಿ ಗದ್ದೆಗೆ ಇಳಿಯುವ ಕಾಡುಹಂದಿ, ಜಿಂಕೆ, ನರಿ, ನವಿಲು ಮುಂತಾದ ಜೀವಾದಿಗಳನ್ನು ಹೆದರಿಸಿ ಓಡಿಸುವುದು  ಅವನೇ ತಾನೇ? ಇನ್ನು, ಗುಡ್ಡೆಹೆಗ್ಳ, ಹಾವು, ಹರಣೆ ಮುಂತಾದ ಪುಟ್ಟ ಪ್ರಾಣಿಗಳ ಬುದ್ಧಿ-ಭಾವಗಳಿಗೆ ಅವನು ಗೋಚರವಾಗುತ್ತಾನೋ ಇಲ್ಲವೋ ತಿಳಿದಿಲ್ಲ! ಇಂತಹ ಬೆರ್ಚಪ್ಪನ ಪರಿಚಯ ಹಳ್ಳಿಯಲ್ಲಿ ಬೆಳೆದ ಎಲ್ಲರಿಗೂ ಇದ್ದೇ ಇದೆ. ನಮ್ಮೂರಲ್ಲಿ ಮೊದಲೆಲ್ಲ ಬೆರ್ಚಪ್ಪನನ್ನು ತಯಾರಿಸುವಾಗ ರೈತರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು. ಕೆಲವರು ಬೆರ್ಚಪ್ಪನಿಗೆ ಮಡಕೆ ಮುಖವನ್ನು ಸಿಕ್ಕಿಸುವುದುಂಟು. ಕರಿ ಮಡಕೆಗೆ ಬಿಳಿ ಬಣ್ಣದಲ್ಲಿ ದ್ವಾಳ್ ಕಣ್ಣು, ಮೊಂಡು ಮೂಗು, ಅಗಲ ಬಾಯಿ, ದೊಡ್ಡ ಹಲ್ಲುಗಳನ್ನು ವಿಕಾರವಾಗಿ ಬಿಡಿಸುವುದು. ದೇಹದ ಭಾಗಕ್ಕೆ ಮರದ ಒಣ ಕಾಂಡ ಅಥವಾ ಅಡಕೆ ದಬ್ಬೆ, ಹುಲ್ಲು, ಹುಲ್ಲಿನ ಚಂಡೆಗಳನ್ನು ಕಟ್ಟುವುದು. ಮನುಷ್ಯನ ಆಕಾರಕ್ಕೆ ತಂದು ಡೊಳ್ಳ್ ಹೊಟ್ಟೆ ಮಾಡಿ ಮೇಲೆ ಬೆಳ್ಳನೆಯ ಅಂಗಿ ತೊಡಿಸುವುದು. ಮನೆಯ ಯಾರಾದರೂ ಹಾಕಿಬಿಟ್ಟು, ಒಂದು ಕಾಲದಲ್ಲಿ ಬಿಳಿ ಬಣ್ಣಕ್ಕಿದ್ದ ಹರ್ಕಟೆ ಅಂಗಿಯೇ ಬೆರ್ಚಪ್ಪನ ಅತ್ಯುತ್ತಮ ಪೋಷಾಕು! ಇನ್ನು ಕೆಲವರು ಮಡಕೆಯ ಬದಲಿಗೆ ತಲೆಯ ಭಾಗಕ್ಕೂ ಹುಲ್ಲಿನ ಚಂಡೆಯನ್ನೆ ಮಾಡಿ ಕಟ್ಟುತ್ತಾರೆ. ಹೀಗೆ ಅಲಂಕೃತಗೊಂಡು ಗೆಣಸು ಅಥವಾ ಬತ್ತದ ಗದ್ದೆಯಲ್ಲಿ ಸ್ಥಾಪಿತನಾಗುವ ಬೆರ್ಚಪ್ಪನ ಒಂದೇ ಒಂದು ಕೆಲಸವೆಂದರೆ ಹಗಲು ರಾತ್ರಿ ಹಕ್ಕಿ-ಪಕ್ಷಿ, ಜೀವಾದಿಗಳನ್ನು ಓಡಿಸುವುದು! ಮಾಡಲು ಕೆಲಸವಿಲ್ಲದೆ ವಿರಾಮವಾಗಿರುವಂತೆ ಕಾಣುವ ನಮ್ಮೀ ಬೆರ್ಚಪ್ಪನಿಗೆ ಇಪ್ಪತ್ತನಾಲ್ಕು ಗಂಟೆಯೂ ಬಿಡುವಿಲ್ಲದ ಕೆಲಸ! ನಮ್ಮ ಮುದೂರಿ ಬೈಲಿನಿಂದ ಹಾಲಾಡಿ ಪೇಟೆಗೆ ಹೋಗುವ ದಾರಿಯಲ್ಲಿ ‘ಹಂದ್‌ಕೋಡ್ಲ್’ ಎಂಬ ದೊಡ್ಡ ಬಯಲು ಸಿಗುತ್ತದೆ. ಶಾಲೆಗೆ ಹೋಗುವಾಗ ಬೆರ್ಚಪ್ಪರನ್ನು ನೋಡುತ್ತ, ಚರ್ಚಿಸುತ್ತ ಬೇಸರ ಕಳೆದುಕೊಳ್ಳುತ್ತಿದ್ದೆವು. ಕೆಲವು ಕಡೆ ಬೋಳು ಕೋಲಿಗೊಂದು ಮಡಕೆ ತಲೆ ಸಿಕ್ಕಿಸಿ ಅದೇ ‘ಬೆರ್ಚಪ್ಪ’ನೆಂದು ನಿಲ್ಲಿಸುತ್ತಿದ್ದುದೂ ಉಂಟು. ನಮ್ಮನೆ ಹತ್ತಿರದ ಗೆಣಸಿನ ಗದ್ದೆಗಳಲ್ಲಿ ಬೆಳ್ಳಗೆ ಹೊಳೆಯುವ ಬೆರ್ಚಪ್ಪ ಸದಾ ನಗುತ್ತಿರುವಂತೆ, ಅವನೂ ಒಬ್ಬ ಮನುಷ್ಯನಂತೆ ಬಾಲ್ಯದ ಕಣ್ಣುಗಳಿಗೆ ಕಂಡದ್ದು ಈಗಲೂ ಹಾಗೆಯೇ ಉಳಿದುಕೊಂಡಿದೆ!

    ಬೆರ್ಚಪ್ಪನಷ್ಟೇ ನೆನಪಿಗೆ ಬರುವುದು ‘ಹಳ್ಳಿಮನೆ’ (ಮಾಳ). ರಾತ್ರಿಹೊತ್ತು ಗದ್ದೆಗಳಿಗೆ ದಾಳಿಯಿಡುವ ಪ್ರಾಣಿಗಳನ್ನು ಹೆದರಿಸಿ ಓಡಿಸಲು ಮನೆಯ ಯಾರಾದರೊಬ್ಬರು ಗದ್ದೆಯಲ್ಲೇ ಮಲಗಲು ಮಾಡಿಕೊಳ್ಳುವ ವ್ಯವಸ್ಥೆಯಿದು. ಇದನ್ನು ‘ಮನುಷ್ಯರ ಗೂಡು’ ಎಂದು ಕರೆಯಬಹುದಾದಷ್ಟು ಪುಟ್ಟದಿದು. ಗದ್ದೆಯ ಮಧ್ಯೆ ನಾಲ್ಕು ಕಂಬಗಳನ್ನು ಹುಗಿದು ಅದಕ್ಕೆ ಅಟ್ಟಣಿಗೆ ಕಟ್ಟುತ್ತಾರೆ. ಆಮೇಲೆ ಸುತ್ತಲೂ ಮರೆ, ಒಂದು ಸಣ್ಣ ತಟ್ಟಿಬಾಗಿಲು ನಿರ್ಮಿಸುವುದು. ಮೇಲೊಂದು ಮಾಡು. ಇದೆಲ್ಲದಕ್ಕೂ ಬಳಸುವ ಸಾಮಗ್ರಿಗಳೆಂದರೆ ಮರ, ಅಡಕೆ ಅಥವಾ ಬಿದಿರಿನ ದಬ್ಬೆಗಳು, ತೆಂಗಿನ ಮಡ್ಲು ಮತ್ತು ಅಡಕೆಸೋಗೆ, ಒಂದಷ್ಟು ತೆಂಗಿನ ನಾರಿನಿಂದ ಮಾಡಿದ ಹುರಿಹಗ್ಗ. ಮನೆಯ ಸುತ್ತಮುತ್ತ ಸಿಗುವ ವಸ್ತುಗಳನ್ನು ಉಪಯೋಗಿಸಿ ಹಳ್ಳಿಮನೆಯನ್ನು ಸುಲಭವಾಗಿ ಮಾಡಿಕೊಳ್ಳುತ್ತಾರೆ ರೈತರು. ಇದರೊಳಗೆ ಒಬ್ಬರು; ಹೆಚ್ಚೆಂದರೆ ಇಬ್ಬರು ಮಲಗುವಷ್ಟು ಜಾಗ ಇರುತ್ತದೆ. ಈ ಹಳ್ಳಿಮನೆಗೆ ಡಬ್ಬ, ಕೋಲನ್ನು ತಗುಲಿ ಹಾಕುತ್ತಾರೆ. ಜೀವಾದಿಗಳು ಬಂದಾಗ ಅಥವಾ ಬರುವ ಮೊದಲೇ ಹೆದರಿಸಲು ಆಗಾಗ ಡಬ್ಬ ಬಡಿಯುತ್ತಿರಬೇಕಾಗುತ್ತದೆ. ಬತ್ತದ ಸುಗ್ಗಿ ಬೆಳೆ, ನಂತರದ ಗೆಣಸು, ಮೆಣಸು, ಅವ್ಡೆ, ನೆಲಗಡಲೆ, ಎಳ್ಳು, ತರಕಾರಿ ಬೆಳೆಗಳ ಸಮಯದಲ್ಲಿ ಮನೆಯ ಗಂಡಸೊಬ್ಬರು ಹಳ್ಳಿಮನೆಯಲ್ಲಿ ಮಲಗಿ ಕಾವಲು ಕಾಯುತ್ತಾರೆ. ಅಲ್ಲಿ ಮಲಗಿದವರಿಗೆ ರಾತ್ರಿಯಿಡೀ ನಿದ್ದೆಯಿಲ್ಲ! ಇಂತಹ ಹಳ್ಳಿಮನೆಯಲ್ಲಿ ಒಂದು ರಾತ್ರಿಯಾದರೂ ಗದ್ದೆ ಕಾದು, ಪ್ರಾಣಿಗಳನ್ನು ಹತ್ತಿರದಿಂದ ನೋಡಬೇಕೆಂಬ ಉಮೇದು ಬಾಲ್ಯದಲ್ಲಿತ್ತು. ಆದರೆ ನಮ್ಮನೆಯಲ್ಲಿ ಹಳ್ಳಿಮನೆ ಹಾಕುತ್ತಿರಲಿಲ್ಲ. ಅದಲ್ಲದೆ ಇಂಥಹ ವಿಚಾರಗಳನ್ನೆಲ್ಲ ಮನೆಯಲ್ಲಿ ಹೇಳಿ ನಗೆಪಾಟಲಿಗೀಡಾಗುವ ಧೈರ‍್ಯವೂ ಇರಲಿಲ್ಲ.

ಎಂಟೂವರೆ-ಒಂಬತ್ತು ಗಂಟೆಗೆಲ್ಲ ಅಜ್ಜಿಯ ಒತ್ತಿನಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ ಆ ದಿನಗಳಲ್ಲಿ ನಡುರಾತ್ರಿ ಕಳೆದ ನಂತರ ಎಚ್ಚರಾದಾಗ ಒಮ್ಮೊಮ್ಮೆ ಹಳ್ಳಿಮನೆಯಲ್ಲಿ ಮಲಗಿದವರು, ಡಬ್ಬ ಬಡಿಯುವ, ‘ಹಿಡ್ಡಿಡ್ಡೀ’ ಎಂದು ಕೂಗು ಹಾಕುವ ಶಬ್ದಗಳು ಕೇಳಿ ರೋಮಾಂಚನವಾಗುತ್ತಿತ್ತು. ಇಂಥಹ ಸದ್ದುಗಳು ಬಾಲ್ಯವೆಂಬ ಮಾಯಾಲೋಕದ ಮಹಾಕಾವ್ಯಗಳು ಎನ್ನಲು ಯಾವ ಅಡ್ಡಿಯೂ ಇಲ್ಲ!

     ಆಗೆಲ್ಲ ಗದ್ದೆ ಹೂಟಿ ಮಾಡುವ ಹೊತ್ತಲ್ಲಿ ಕಾಳು-ಬೆಳ್ಳು ಹೋರಿಗಳಿಗೆ ಆಯಾಸ ಆಗಬಾರದೆಂದೋ ಅಥವಾ ಹೂಟಿ ಮಾಡುವವರೇ ತಮ್ಮ ಬೇಸರ ಕಳೆದುಕೊಳ್ಳಲೋ ಸುಶ್ರಾವ್ಯವಾಗಿ ‘ಓವೋʼ ಎಂದು ಒಳಾಲ್ ಹಾಕುತ್ತಿದ್ದರು. ಕೆಲವೊಮ್ಮೆ ಹಾಡುಗಳನ್ನು ಹೇಳುತ್ತಿದ್ದರು. ಆ ಹಾಡಿನಲ್ಲಿ ನನಗೆ ಅರ್ಥವಾಗುತ್ತಿದ್ದುದು ಕಾಳು-ಬೆಳ್ಳು ಹೋರಿಗಳ ಹೆಸರುಗಳು ಮಾತ್ರ! ಯಾಕೆಂದರೆ ಹಾಡು ಇರುತ್ತಿದ್ದುದು ಕುಡುಬಿ ಭಾಷೆಯಲ್ಲಿ. ನಮ್ಮೂರಿನ ಅತ್ಯಂತ ಸಿಟ್ಟಿನ ಮನುಷ್ಯ ಬೆಳ್ಳನಾಯ್ಕನೂ ಆಗಾಗ ಹಾಡು ಹೇಳುತ್ತಿದ್ದುದನ್ನು ಕೇಳಿದ ಅದೃಷ್ಟಶಾಲಿ ನಾನು! ‘ಮಾತೆಂದರೆ ಬಯ್ಗುಳ’ ಎಂದು ತಿಳಿದುಕೊಂಡಿದ್ದ ಸಿಡುಕು ಮುಖದ ಬೆಳ್ಳನಾಯ್ಕನೆಂಬ ಬೆಳ್ಳನಾಯ್ಕನೇ ಹಾಡು ಹೇಳುವುದೆಂದರೆ ಅದು ಸಾಮಾನ್ಯ ವಿಷಯವೇನೂ ಅಲ್ಲ! ಹಾಗೆ ಹಾಡುವಾಗ ಮುಖದಲ್ಲಿ ಹೌದೋ ಅಲ್ಲವೋ ಎಂಬಂತೆ ನಗುವಿನ ಗೆರೆ ತೇಲುತ್ತಿದ್ದುದು ಮತ್ತೊಂದು ವಿಶೇಷ. ಮುದೂರಿಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಕಬ್ಬಿನಾಲೆ(ಆಲೆಮನೆ)ಯಲ್ಲಿ ಗಾಣ ಹೊತ್ತು ತಿರುಗುವ ಕೋಣಗಳಿಗೂ ಆಯಾಸವಾಗುತ್ತಿದ್ದುದು ಸಹಜ. ಹಾಗೆಂದೇ ಅಲ್ಲಿಯೂ ಹಗಲು ರಾತ್ರಿಯೆನ್ನದೆ ಯಾವುದೋ ಹಾಡನ್ನು ಹಾಡುತ್ತಿದ್ದರು ಮತ್ತದು ನೀರವ ರಾತ್ರಿಗಳಲ್ಲಿ ಗದ್ದೆಗಳನ್ನು ದಾಟಿ ಬಂದು ಮುಸುಕಿನೊಳಗೆ ಮಲಗಿದ ನನ್ನ ಕಿವಿಯನ್ನು ತಲುಪುತ್ತಿತ್ತು; ಬೆಳದಿಂಗಳ ಲೋಕದ ಕಿನ್ನರರು ಪದ ಹಾಡಿದಂತೆ!

ಕಬ್ಬಿನಾಲೆ ಎಂದಾಗ ಮೊದಲು ನೆನಪಾಗುವುದು ಸಿಹಿಕಬ್ಬು, ಕಬ್ಬಿನಹಾಲು, ಕೊಪ್ಪರಿಗೆ ಬೆಲ್ಲದ ಸವಿ, ಬೃಹತ್ ಗಾತ್ರದ ಒಲೆ, ಕೊಪ್ಪರಿಗೆ, ನಿಗಿ ನಿಗಿ ಬೆಂಕಿ ಮತ್ತು ನರಿಗಳು!  ಪಾಪ, ಸುತ್ತಮುತ್ತಲಿನ ಹಾಡಿಗಳಲ್ಲಿ ಕೂತು ಆ ದಿನ ಎಷ್ಟು ಅಳುತ್ತಿದ್ದವೋ ಏನೋ! ಗದ್ದೆ ಭರ್ತಿ ತುಂಬಿನಿಂತ ಕಬ್ಬನ್ನು ಕಡಿದು ನಾವು ಮನುಷ್ಯರು ಬೆಲ್ಲ ಮಾಡಿ ಡಬ್ಬಕ್ಕೆ ತುಂಬಿಟ್ಟುಕೊಂಡರೆ ಅವಾದರೂ ಏನು ಮಾಡಬೇಕು?!  ಆದರೆ ನಮ್ಮಂತೆ ಸ್ವಾರ್ಥಿಗಳಲ್ಲದ ನರಿಗಳು ಮುಂದಿನ ವರ್ಷವೂ ಮತ್ತೆ ಬಂದು ಕಬ್ಬು ತಿಂದು ಸುಶ್ರಾವ್ಯವಾಗಿ ‘ಕೂ ಕೂ ಕೂ’ ಹಾಡುತ್ತಿದ್ದವು. ನಾನು, ನನ್ನಂಥಾ ಪುಟ್ಟ ಮಕ್ಕಳು ಈ ಸಂಗೀತವನ್ನು ಕಿವಿ ತುಂಬಾ ತುಂಬಿಕೊಂಡು ಕನಸು, ಕಲ್ಪನೆಯ ಬೀದಿಗಳಲ್ಲಿ ಅಲೆಯುತ್ತಾ ಭಾವಕೋಶವನ್ನು ಬೆಳೆಸಿಕೊಂಡು ಜಾಣರಾಗುತ್ತಿದ್ದೆವು! ಏಡಿ, ಕೋಳಿ, ಮೊಲ ಮುಂತಾದುವನ್ನು ತಿನ್ನುವ ಮಾಂಸಾಹಾರಿ ನರಿಗಳಿಗೆ ಕಬ್ಬಿನಂಥಾ ಸಪ್ಪೆ(ಸಿಹಿ!) ‘ಸಸ್ಯ’ವನ್ನು ತಿನ್ನಲು ಕಲಿಸಿದ್ದು ಯಾರು ಎಂಬ ಪ್ರಶ್ನೆ ಸದಾ ಕಾಲ ನನ್ನೊಳಗೆ ಕೊರೆಯುತ್ತದೆ! ಈಗಲೂ ಅಪರೂಪಕ್ಕೊಮ್ಮೆ ನರಿಗಳ ಹಾಡು ಕೇಳಲು ಸಿಕ್ಕು ಹೃದಯ ಕುಣಿದಾಡುತ್ತದೆ! ‘ಮಾಂತ್ರಿಕ ಸಂಗೀತಗಾರ’ ಎಂಬ ಬಿರುದನ್ನು ಕೊಡುವುದಿದ್ದರೆ ನಮ್ಮೂರಿನ ನರಿಗಳಿಗೇ ಕೊಟ್ಟು ಋಣ ತೀರಿಸಬೇಕೆಂದು ನಾನು ಶಿಫಾರಸ್ಸು ಮಾಡುತ್ತೇನೆ!

    ದಟ್ಟ ಕಾಡಿನ ಹೆಮ್ಮರಗಳಲ್ಲಿ ವಾಸಿಸುತ್ತಾ ರಾತ್ರಿಗಳನ್ನು ಮತ್ತಷ್ಟು ನಿಗೂಢವಾಗಿಸುವ ಗುಮ್ಮಗಳ ಕೂಗು ಈಗ ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಆಗೆಲ್ಲ ಪುಟಾಣಿ ಮಕ್ಕಳಿಗೆ ಭಯ ಹುಟ್ಟಿಸುತ್ತಾ ಕೂಗುತ್ತಿದ್ದವು. ಮುದೂರಿಗೆ ಕತ್ತಲಿಳಿಯಿತೆಂದರೆ ಗುಮ್ಮಗಳ ಸಂಭಾಷಣೆ ಶುರುವಾಯಿತೆಂದೇ ಲೆಕ್ಕ. ಅದರಲ್ಲೂ ಮಳೆಗಾಲದ, ತಿಂಗಾಳ್ ಬೆಳಕಿನ ರಾತ್ರಿಗಳು ಇವುಗಳಿಗೆ ಪ್ರಶಸ್ತ. ‘ಪ್ರೇಮ ಸಂಭಾಷಣೆ’ಗೆ ಅತ್ಯುತ್ತಮ ಉದಾಹರಣೆ ಕೊಡುವುದಿದ್ದರೆ ಇವುಗಳ ‘ಹೂಂ’ ‘ಊಂಹೂಂಹೂಂ’ ಎಂಬ ಪ್ರೀತಿ ಮಾತನ್ನು ಉದಾಹರಿಸಬಹುದು. ದ್ವಾಳ್ ಕಣ್ಣು, ದೆವ್ವದಂತಾ ಮುಸುಕುಧಾರಿ ದೇಹದೊಂದಿಗೆ ಗುಮ್ಮನ ಚಿತ್ರ ಬಿಡಿಸುತ್ತಿದ್ದ ನಾನು ಗುಮ್ಮನೆಂದರೆ ದೆವ್ವ, ಭೂತದ ತರದ್ದೇ ‘ಏನೋ ಒಂದು’ ಎಂದು ಕಲ್ಪಿಸಿಕೊಂಡಿದ್ದೆ! ಇದೊಂದು ಹಕ್ಕಿ ಎಂದು ತಿಳಿಯಬೇಕಾದರೆ ಬಹಳ ಸಮಯವೇ ಹಿಡಿಯಿತು. ಇಂಥಾ ಗುಮ್ಹಕ್ಕಿ ಕೂಗದಿರಲಿ ಎಂದು ಸಣ್ಣದಿರುವಾಗ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ! ಯಾಕೆಂದರೆ ರಾತ್ರಿ ಮಲಗುವ ಮುಂಚೆ ಅಡುಗೆಮನೆಯಿಂದ ಅಮ್ಮನ ಕರೆ ಬರುತ್ತಿತ್ತು. “ಒಂದ್ ಲೋಟ ಹಾಲ್ ಕುಡ್ಕಂಡ್ ಹೋಗ್ ವಿಜೀ” ಎಂದು. ಅದೇ ಸಮಯದಲ್ಲಿ ಹಟಮಾರಿ ಗುಮ್ಮಗಳು ತೋಟದಲ್ಲೇ ಕೂತು ಕೂಗಿ ಹಾಲು ಕುಡಿಯಲು ಹೋಗದಂತೆ ತಡೆಯುತ್ತಿದ್ದವು!  ಬಹುಹಿಂದೆ ನಾನು ಹುಟ್ಟುವುದಕ್ಕೂ ಮೊದಲೇ ನಡೆದ ಘಟನೆಯೊಂದನ್ನು ಅಮ್ಮಮ್ಮ ಹೇಳುತ್ತಿದ್ದರು. ಆಗೊಮ್ಮೆ  ಮನೆಯ ಚಿಟ್ಟೆ(ದಂಡೆ)ಗೆ ತಾಗಿಕೊಂಡಿರುವ ತೆಂಗಿನಮರದಲ್ಲೇ ಕುಳಿತು ಕೂಗುವ ಧೈರ‍್ಯವನ್ನು ಗುಮ್ಮಗಳೆರಡು ತೋರಿಸಿದ್ದವಂತೆ! ಸುತ್ತಮುತ್ತಲಿನ ಮನೆಗಳಿಗೆ ಏನೋ ಅಪಶಕುನ ಬಡಿಯುತ್ತದೆಂದು ಆಗ ಕಳವಳವಾಯಿತು. ಆದರೆ ಅಮ್ಮಮ್ಮ ಇದ್ಯಾವುದಕ್ಕೂ ಸೊಪ್ಪು ಹಾಕದೆ ಗಟ್ಟಿತನದಿಂದ ಸನ್ನಿವೇಶವನ್ನು ನಿಭಾಯಿಸಿದರು. ‘ಮನೆಮುಂದಾದರೂ ಕೂಗಲಿ, ಬೇಕಾದರೆ ಮನೆಮೇಲೇ ಕೂತು ಕೂಗಲಿ…ನಾನೇನೂ ಹೆದರುವುದಿಲ್ಲ; ಅಪಶಕುನವೂ ಆತಿಲ್ಲೆ, ಎಂತದೂ ಆತಿಲ್ಲೆ’ ಎಂದುಕೊಂಡು ಸುಮ್ಮನೆ ಇದ್ದುಬಿಟ್ಟರು!

 ‘ಜಕ್ಣಿಹಕ್ಕಿ’ ಮತ್ತು ‘ಭೂತ್ ಹಕ್ಕಿ’ ಎಂದು ನಮ್ಮೂರಿನವರು ಹೆಸರಿಸುವ ಇನ್ನೆರಡು ಹಕ್ಕಿಗಳು ಕೂಡಾ ಗೂಬೆಗಳ ಪ್ರಭೇದಗಳೇ ಎಂದು ಇತ್ತೀಚೆಗೆ ತಿಳಿಯಿತು. ಮೊದಲೆಲ್ಲ ‘ಊಂಹೂಂಹೂಂ’ ಎಂಬಂತಹ ಸ್ವರವೊಂದರಲ್ಲೇ ಗೂಬೆ ಕೂಗುವುದು ಎಂಬ ತಪ್ಪು ಕಲ್ಪನೆಯಿತ್ತು!  ನೂರ ಮೂವತ್ತಮೂರು ಪ್ರಭೇದದ ಗೂಬೆಗಳಿವೆ; ಅವುಗಳಲ್ಲಿ ಕೆಲವು ತೀರಾ ವಿಚಿತ್ರವಾಗಿ, ಭಯಾನಕವಾಗಿ ಕೂಗುತ್ತವೆ ಎಂದು ಕ್ರಮೇಣ ತಿಳಿಯಿತು. ‘ಊಂಹೂಂ’ ಎಂದು ಕೂಗುವ ಮಾಮೂಲು ಗುಮ್ಮವೇ ಮೀನು ಗೂಬೆ(ಬ್ರೌನ್ ಫಿಶ್ ಔಲ್). ಮನುಷ್ಯರ ಧ್ವನಿಯನ್ನು ಹೋಲುವಂತೆ, ಹೆದರಿಕೆ ಹುಟ್ಟಿಸುವಂತೆ ಕೂಗುವ ‘ಭೂತ್ ಹಕ್ಕಿ’ಯೇ ‘ಗ್ರೇಟ್ ಹಾರ್ನ್ಡ್ ಔಲ್’. ಇನ್ನು‌, ಮತ್ತಷ್ಟು ಭಯಾನಕವಾಗಿ ಕೂಗಿ ನರನಾಡಿಗಳಲ್ಲಿ ನಿಗೂಢ ಛಳಕೊಂದನ್ನು ಹುಟ್ಟಿಸುವ ‘ಜಕ್ಣಿಹಕ್ಕಿ’ಯೇ ‘ಫಾರೆಸ್ಟ್ ಈಗಲ್ ಔಲ್’. ಜಕ್ಣಿಹಕ್ಕಿ ಮತ್ತು ಬೂತ್‌ಹಕ್ಕಿಯ ಕೂಗು ಕೇಳುವುದು ತುಂಬಾ ಅಪರೂಪ. ಅಂದರೆ ಈ ಗೂಬೆಗಳು ದಟ್ಟಕಾಡಿನೊಳಗೆ ವಾಸಿಸುತ್ತವೆ. ಅದಲ್ಲದೆ, ಈಗ ಈ ಎಲ್ಲಾ ಪ್ರಕಾರದ ಗೂಬೆಗಳೂ ತೀರಾ ವಿರಳವಾಗಿವೆ. ಹಲವು ಪ್ರಭೇದದ ಗೂಬೆಗಳ ಕೂಗನ್ನು ಯೂಟ್ಯೂಬಿನ ವಿಡಿಯೋಗಳಲ್ಲಿ ಕೇಳಬಹುದು. ಪ್ರತಿರಾತ್ರಿ ಕಾಲುಗಂಟೆಯಾದರೂ ಇವುಗಳನ್ನು ಕೇಳುವುದು ರೂಢಿಯಾಗಿದೆ. ಆದರೆ ಎಷ್ಟೆಂದರೂ ಗಾಢರಾತ್ರಿಯ ಕಾಡುಗಳಲ್ಲಿ ಇವು ಕೂಗುವುದನ್ನು ಕೇಳಲು ಸಾಧ್ಯವಾದರೆ ಅದೇ ಎಲ್ಲಕ್ಕಿಂತ ಹೆಚ್ಚಿನ ರೋಮಾಂಚನ. ಇತ್ತೀಚೆಗೆ ರಾತ್ರಿ ಎಂಟುಗಂಟೆಯ ಹೊತ್ತಿಗೆ ದಿನದ ನಡಿಗೆಗೆಂದು ಹೋದಾಗ ಅಂತಹ ಪುಳಕ, ಅಚ್ಚರಿ ನನ್ನದಾಯಿತು. ರಸ್ತೆಯಿಂದ ಸ್ವಲ್ಪ ಒಳಭಾಗದ ದೂರ ಬೆಟ್ಟದ ಕಡೆಯಿಂದ ಗ್ರೇಟ್ ಹಾರ್ನ್ಡ್ ಔಲ್ ಅಥವಾ ಕೊಂಬಿನ ಗೂಬೆಯ ಅಚಾನಕ್ ಕೂಗು ಕೇಳಿ ಅಲ್ಲೇ ಕಾಲುಗಂಟೆ ನಿಂತು ಆಲಿಸಿ ಮನಸ್ಸಿನ ತುಂಬ ತುಂಬಿಕೊಂಡದ್ದಾಯಿತು. ಹಾಗೆಯೇ ಮೂರ್ನಾಲ್ಕು ವರ್ಷಗಳ ಹಿಂದೆ ಮುದೂರಿ ಮನೆಯಲ್ಲಿ ಮತ್ತು ನಿಸರ್ಗಧಾಮವೊಂದರಲ್ಲಿ ಮೀನು ಗೂಬೆಯ ‘ಊಂಹೂಂಹೂಂ’ ದನಿ ಕೇಳಿಸಿತ್ತು! ಗುಮ್ಮಗಳ ತುಸು ಭಿನ್ನವಾದ ಕಣ್ಣು, ಕತ್ತು, ಮುಖ, ಜೀವನ ಶೈಲಿ, ರಾತ್ರಿ ಸಂಚಾರ ಇವೆಲ್ಲವೂ ಅವುಗಳಿಗೆ ‘ಅಪಶಕುನ’ವೆಂಬ ಬಿರುದು ತಂದುಕೊಟ್ಟಿದೆ. ಆದರೆ ಪಕ್ಷಿಪ್ರಿಯರ ಮುದ್ದುಹಕ್ಕಿಯಿದು. ಗುಮ್ಮನ ಕೂಗು; ಬದುಕಿನ ಮರೆಯಲಾಗದ ಸದ್ದುಗಳಲ್ಲಿ ಮೊದಲನೆಯದ್ದು ಮತ್ತು ಅತ್ಯಂತ ಇಷ್ಟದ್ದು.

    ನಮ್ಮೂರಿನ ರಾತ್ರಿಗಳ ಮತ್ತೊಂದು ವಿಶೇಷವೆಂದರೆ ನತ್ತಿಂಗದ ಮೊಳಗು. ಸಾಮಾನ್ಯವಾಗಿ ಇರುಳಿನ ಮೊದಲ ಪಾದ, ಬೆಳಗಿನ ಜಾವದ ಹೊತ್ತಲ್ಲಿ ಕೂಗುವ ಹಕ್ಕಿಯಿದು. ಇದರ ಕೂಗನ್ನು ‘ಧ್ಯಾನಿಯ ಮೊಳಗು’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ನೀರಿಗೆ ಕಲ್ಲುಹಾಕಿದಂತೆ ಬಿಟ್ಟು ಬಿಟ್ಟು ಕೂಗುತ್ತಾ ಇಡೀ ಊರನ್ನೇ ಧ್ಯಾನಕ್ಕೆ ದೂಡುವ ನೈಟ್ಜಾರ್; ʼನತ್ತಿಂಗ’ದ ಕೂಗು ಚಿರಪರಿಚಿತವೇ ಆದರೂ ಈ ಪಕ್ಷಿಯನ್ನು ಎಂದೂ ಕಂಡಿಲ್ಲ. ‘ಕುರುಡುಗುಪ್ಪಟೆ’ ಹಕ್ಕಿ ಎಂದೂ ಕರೆಸಿಕೊಳ್ಳುವ ನತ್ತಿಂಗ ಪೊದೆಗಳಲ್ಲಿ, ನೆಲದ ಮಟ್ಟದಲ್ಲಿ ವಾಸಿಸುವ ಹಕ್ಕಿ. ಹಳ್ಳಿ, ಸಣ್ಣಪೇಟೆಯ ಹಾಡಿಯ ಹತ್ತಿರ ವಾಸಿಸುವ ಪ್ರತಿಯೊಬ್ಬರೂ ಇದರ ಕೂಗನ್ನು ಕೇಳಿಯೇ ಇರುತ್ತಾರೆ. ನಮ್ಮ ಮುದೂರಿಯ ಮೌನಧ್ಯಾನದ ಏಕಾಂತದ ಕತ್ತಲಲ್ಲಿ ನೀರಿಗೆ ಕಲ್ಲು ಹಾಕಿದಂತೆ ಕೂಗುತ್ತಾ ಮಾಯಕದ ಲೋಕಕ್ಕೆ ಕರೆದೊಯ್ಯುತ್ತಿದ್ದ ನತ್ತಿಂಗ ಇಲ್ಲಿ ಮೂಡಬಿದ್ರೆಯಲ್ಲೂ ಅಂತದ್ದೇ ವಾತಾವರಣ ನಿರ್ಮಿಸಿದೆ. ಕೆಲವು ಸಮಯದಲ್ಲಂತೂ ಬೆಳಗ್ಗೆ ಒಂಬತ್ತು-ಹತ್ತುಗಂಟೆಯ ಹೊತ್ತಿಗೂ ಕೂಗುತ್ತಿರುತ್ತದೆ! ಇಲ್ಲಿನ ಪೇಟೆಯಿಂದ ಮೂರ್ನಾಲ್ಕು ಕಿಲೋಮೀಟರ್ ದೂರದ ‘ಕಾನ’ ಎಂಬ ಊರಿನಲ್ಲಿ ಸಂಜೆಯಿಳಿಯುತ್ತಿದ್ದಂತೆಯೇ ಇದರ ಕೂಗನ್ನು ಕೇಳಿದ್ದೇನೆ. ಹಾಗೇ; ಧಡಲ್ಲನೆ ಹಾರಿ ಓಡುವ ನವಿಲಿನ ಹಿಂಡಿನ ‘ಮ್ಯಾಂವೋ’ ಎಂಬ ಕೇಕೆ, ಕಾಡುಕೋಳಿಯ ‘ತೆಕ್ ತೆಕ್’ ಕೂಗೂ ಈ ಪ್ರದೇಶದಲ್ಲಿ ಸದಾ ಇರುತ್ತದೆ.

    ಬೆಳದಿಂಗಳ ರಾತ್ರಿಗಳಲ್ಲಿ ಟ್ರೀಂ ಟ್ರೀಂ ಟ್ರೀಂ ಎಂದು ಸದ್ದು ಮಾಡುತ್ತಾ ಹೊರಡುವ ಜೋಡಿ ಟಿಟ್ಟಿಭಗಳ ಮಾತು ಇನ್ನೊಂದು ಇರುಳ ಧ್ಯಾನ. ನಮ್ಮೂರಲ್ಲಿ ಇವುಗಳನ್ನು ‘ಟ್ಯಾಂಟ್ರಕ್ಕಿ’ ಎನ್ನುತ್ತೇವೆ. ಹಾಗೇ ಉದ್ದುದ್ದ ಕೈಕಾಲು-ಸಪೂರ ಶರೀರ ಹೊಂದಿದವರನ್ನು ‘ಟ್ಯಾಂಟ್ರಕ್ಕಿ ಕೈಕಾಲ್’ ಎಂದು ಪ್ರೀತಿಯಿಂದ ಹಿಲಾಲು ಹಿಡಿಯುತ್ತಾರೆ. ಟಿಟ್ಟಿಭ ಬೆಳದಿಂಗಳಲ್ಲಿ ಆಹಾರ ಹುಡುಕಲು ಹೊರಡುತ್ತದಂತೆ. ಅಂತಹ ಸಂದರ್ಭದಲ್ಲಿ ಶಾಂತವಾಗಿ ಕೇಳುವ ಇದರ ಕೂಗು ಕೆಲವೊಮ್ಮೆ ಉದ್ವಿಗ್ನಕ್ಕೆ ಒಳಗಾದಂತೆ ವೇಗವಾಗಿರುತ್ತದೆ. ಹಳ್ಳಿಯವರು ಹೇಳುವ ಪ್ರಕಾರ ಇದು ಬಲು ಜಂಭದ ಹಕ್ಕಿ. ತನ್ನ ಸಪೂರ ಕಾಲುಗಳನ್ನು ಆಕಾಶದ ಕಡೆ ಚಾಚಿ ಮಲಗುತ್ತದಂತೆ. ಕಾರಣ ಕೇಳಿದರೆ, “ನಾನು ಮಲಗಿದಾಗ ಆಕಾಶ ಬಿದ್ದುಬಿಟ್ಟರೆ ಗತಿಯೇನು? ಹಾಗಾಗಿ ನನ್ನ ಕಾಲನ್ನೇ ‘ಊಂತ್’ ಕೊಟ್ಟು ಜಗತ್ತನ್ನು ಕಾಪಾಡುತ್ತೇನೆ” ಎನ್ನುತ್ತದಂತೆ! ಟಿಟ್ಟಿಭ ಎತ್ತರದ ಜಾಗದಲ್ಲಿ ಮೊಟ್ಟೆಯಿಟ್ಟರೆ ಆ ವರ್ಷ ಪ್ರವಾಹ, ನೆರೆ ಬರುತ್ತದೆ ಎಂಬ ನಂಬಿಕೆಯೂ ಇದೆ. ನಮ್ಮ ಟ್ಯಾಂಟ್ರಕ್ಕಿ, ಕವಿಗಳ ಭಾಷೆಯಲ್ಲಿ ‘ತೇನೆಹಕ್ಕಿ’! ತನ್ನ ಕವಿತೆಗಳಲ್ಲಿ ತೇನೆಹಕ್ಕಿಗಳ ಉಲ್ಲೇಖ ತರದ ಕವಿಯೇ ಅಪರೂಪ ಎಂದರೂ ಉತ್ಪ್ರೇಕ್ಷೆಯಾಗಲಾರದು! ಟಿಟ್ಟಿಭದ ಹಾಡು ಕೇಳಿದಾಗೆಲ್ಲ ಓಡಿಬಂದು ಅಂಗಳದ ಬೆಳದಿಂಗಳ ಜಗವನ್ನು ಕಣ್ತುಂಬಿಕೊಳ್ಳುವುದು ಒಂದು ಅಭ್ಯಾಸವೇ ಆಗಿಹೋಗಿದೆ!

“ಹುಂಡ್‌ಕೋಳ್ಹಕ್ಕಿ ಮಗಿನ್ ಮೀಸಿ ಮನ್ಸತ್ತ್ ಕಾಣಿ ಮಕ್ಳೇ” ಎಂದು ಕತ್ತಲು ಕವಿಯುವ ಸಂಜೆಯ ಹೊತ್ತಿಗೆ ಆಚೆಮನೆ ದೊಡ್ಡಮ್ಮ ಕರೆದು ಹೇಳುವುದಿತ್ತು. “ಹುಂಡುಕೋಳಿ(Water hen) ಮಗುವನ್ನು ಸ್ನಾನ ಮಾಡಿಸಿ ಮಲಗಿಸುತ್ತಿದೆ, ನೋಡಿ ಮಕ್ಕಳೇ” ಎನ್ನುವುದು ಅವರ ಮಾತಿನ ತಾತ್ಪರ್ಯ. ಹೌದು, ನಮ್ಮನೆ ಹತ್ತಿರದ ತೋಡು, ನೀರು ತುಂಬಿದ ಗದ್ದೆಗಳ ಕಡೆಯಿಂದ ಇಳಿಸಂಜೆ, ಬೆಳಗಿನ ಜಾವದ ಸಮಯಕ್ಕೆ ಹುಂಡುಕೋಳಿಯ ಧ್ವನಿ ಕೇಳಿಬರುತ್ತಿತ್ತು. ಬೆಕ್ಕು ಹಿತವಾಗಿ ಗುರುಗುಟ್ಟುತ್ತಾ ಮರಿಗಳನ್ನು ಸಮಾಧಾನ ಮಾಡುವ ವಿಧಾನದಂತೆಯೇ ಹುಂಡುಕೋಳಿಯ ಸ್ವರದಲ್ಲೂ ಏನೋ ವಿಚಿತ್ರ ಮಮತೆ, ಜೋಗುಳ! ಮರಿಗಳನ್ನು ತಟ್ಟಿ ಮಲಗಿಸುತ್ತಿದೆಯೆಂಬ ಭ್ರಮೆಯಾಗುತ್ತದೆ! ವಿಶಿಷ್ಟವಾದ ಇದರ ಧ್ವನಿ ಕೇಳಿ ಬಂದೊಡನೆ ಪ್ರಜ್ಞೆಗೆ ನಿಲುಕುವುದು ನೀರು, ಗದ್ದೆ, ತೋಡು, ಜೊಂಡುಹುಲ್ಲು, ಮುಂಡ್ಕನ ಹಿಂಡ್ಲು, ನೀರಿನ ಸಸ್ಯಗಳು, ಕೆಸರು ಇತ್ಯಾದಿ. ಬಿಳಿ, ಕಪ್ಪು ಮಿಶ್ರಿತ, ದಡಬಡನೆ ಓಡುವ ಅಂಜುಕುಳಿ ಹಕ್ಕಿಯ ನೋಟ, ಅದರ ಹಾಡು ನೊಸ್ಟಾಲ್ಬಿಯಾದ ಪ್ರಮುಖ ಭಾಗವಾಗಿದೆ. ಈಗ ನಾಲ್ಕು ವರ್ಷಗಳ ಕೆಳಗೆ ನಾವಿದ್ದ ಮನೆಯ ಹತ್ತಿರದಲ್ಲೇ ಕೆಲ ಸಮಯ ಸಂಜೆ, ರಾತ್ರಿಗಳಲ್ಲಿ ಇದರ ಧ್ವನಿ ಕೇಳಿಬರುತ್ತಿತ್ತು! ಅಲ್ಲೇ ಹತ್ತಿರದಲ್ಲೆಲ್ಲೋ ನೀರಿನ ಜಾಗ ಇತ್ತೇನೋ!

    ಮನೆಯೆದುರಿನ ಕೊಟ್ಟಿಗೆಯ ಅಟ್ಟದಲ್ಲಿ ಒಣಗಿಸಿಟ್ಟ ಹಣ್ಣಡಕೆಯನ್ನು ರಾತ್ರಿ ಬೆಳಗಾಗುವುದರೊಳಗೆ ಕಚ್ಚಿ ಕಚ್ಚಿ ಅರೆಬರೆ ತಿಂದು ನೆಲದ ತುಂಬ ಬಿಸಾಕಿಡುತ್ತಿದ್ದ ಬಾವಲಿಗಳ ಕೂಗು, ಹಾಡಿಯಿಂದ ಆಗಾಗ ಕೇಳುತ್ತಿದ್ದ ಮಂಗಗಳ ಕಿರುಚಾಟ, ಮ್ವಾಳ ಬೆಕ್ಕುಗಳ ಭೀಕರ ಜಗಳ; ವಿಚಿತ್ರವಾದ-ಭಯಪಡಿಸುವ ಕೂಗು, ತನ್ನ ನೀಳ ದನಿಯೊಂದಿಗೆ ಜಾವಕ್ಕೊಮ್ಮೆ ರಾಗ ಹೊರಡಿಸುವ ಕೋಳಿಹುಂಜದ ಹಾಡು, ತೆಂಗಿನ ಹೆಡೆ-ಕಾಯಿ-ಚಂಡ್ಪಳೆ ಬಿದ್ದಾಗ ಆಗುವ ‘ಧಡ್’ ಎಂಬ ಸಪ್ಪಳ ಮುಂತಾದುವೆಲ್ಲ ಬಾಲ್ಯದ ಜೋಗುಳವೇ ಆಗಿದ್ದವು. ಹಂಡ, ಹುಂಡ, ಕರಿಯ, ಕೆಂಪ, ಮೋತಿ, ಟಾಮಿ ನಾಯಿಗಳ ಬೊಳ್ಳು-ಬೊಗಳುಗಳಂತೂ ಇರದ ರಾತ್ರಿಗಳೇ ಇಲ್ಲ. ಮಳೆಗಾಲದ ಇರುಳುಗಳಲ್ಲಿ ಮನೆಯೆದುರಿನ ಗದ್ದೆಯ ಕಪ್ಪೆ-ಕೀಟಗಳು ಹೊರಡಿಸುತ್ತಿದ್ದ ಸಮೂಹ ಗಾಯನ ಮೆದುಳಿನಿಂದ ಅಳಿಸಿಹೋಗುವಂತದ್ದೇ ಅಲ್ಲ… ಹಾಗೇ ಗ್ವಾಂಕ್ರ್ ಕಪ್ಪೆಯ ವಿಭಿನ್ನವಾದ ಹಾಡೂ! ಮಳೆಗಾಲದ ರಾತ್ರಿಗಳ ಈ ಕಪ್ಪೆ-ಕೀಟ ಸದ್ದು ಎಷ್ಟು ಅಭ್ಯಾಸವಾಗಿ ಬಿಟ್ಟಿದೆಯೆಂದರೆ, ಅದಿಲ್ಲದ ನಿದ್ದೆ ನಿದ್ದೆಯೇ ಅಲ್ಲ ಎಂಬಷ್ಟು! ಬೇರೆ ಊರುಗಳಿಗೆ ಹೋಗಿ ನೆಲೆನಿಂತಿದ್ದಾಗ ಮಳೆಗಾಲದ ಬಣ ಬಣ ರಾತ್ರಿಗಳು ಸಹಿಸಲಸಾಧ್ಯವಾಗಿದ್ದವು. ಹಾಗೇ ನಾಲ್ಕು ತಿಂಗಳು ‘ಜೈಲʼ ಸುರಿಯುವ ಮಳೆಯ ಶಬ್ದವೂ ಕರಾವಳಿ, ಮಲೆನಾಡಿನಲ್ಲಿ ಬೆಳೆದ ಎಲ್ಲರಿಗೂ ಬದುಕಿನ ಒಂದು ಭಾಗವೇ ಆಗಿಬಿಟ್ಟಿರುತ್ತದೆ; ಇದರೊಂದಿಗೆ ಚಳಿಗಾಲದ ಹನಿ ಬೀಳುವ ಟಪ್ ಟಪ್ ಸದ್ದು ಕೂಡಾ! ಬಯಲು ಸೀಮೆಯಲ್ಲಿದ್ದಾಗ ಅಲ್ಲಿಯ ವಿಶಿಷ್ಟ ಚಳಿ ಈ  ಕೊರತೆಯನ್ನು ತುಂಬಿಕೊಡುವುದರಲ್ಲಿ ಸಫಲವಾಗಿತ್ತು!

      ಈ ಎಲ್ಲ ಶಬ್ದಗಳು ಇರುಳಿನ ಗಾಢತೆ, ಗೂಢತೆಯನ್ನು ಹೆಚ್ಚಿಸಿ ಹೊಸ ಆಯಾಮ, ವಿಸ್ತಾರವನ್ನು ಕಲ್ಪಿಸಿವೆ. ಈಗಿನ ನಮ್ಮ ‘ಸೂರಕ್ಕಿಮನೆ’ಯಲ್ಲಿ  ನಾನು ಬರೆಯುವ-ಓದುವ, ಮಲಗುವ ಕೋಣೆಯಿಂದ ಬರೀ ಮಾರು ದೂರದ ಕಂಪೌಂಡ್ ದಾಟಿದರೆ ಪಕ್ಕದ ಮನೆಯವರ ನಾಯಿಮನೆಗಳು! ಅಲ್ಲಿ ಮೂರು ನಾಯಿಗಳಿವೆ. ರಾತ್ರಿಹೊತ್ತು ಈ ಮೂವರ ಸಮೂಹ ಸಂಗೀತದ ಸುಖ ಸವಿಯುತ್ತ ನಾವೆಲ್ಲರೂ ಸ್ವಸ್ಥ ನಿದ್ದೆಗೆ ಜಾರುತ್ತೇವೆ. ಕೆಲವೊಮ್ಮೆ ನತ್ತಿಂಗ, ತುಂಟ ಬೆಕ್ಕುಗಳು, ಟಿಟ್ಟಿಭಗಳು-ಶ್ರುತಿಯೊದಗಿಸುತ್ತವೆ… ಮಳೆಗಾಲದಲ್ಲಂತೂ ‘ಮಳೆಜೋಗುಳ’ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ!

**

ವಿಜಯಶ್ರೀ ಹಾಲಾಡಿ

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

Leave a Reply

Back To Top