ಕಥೆ
ನಿರಾಕರಣ
ಎಸ್.ನಾಗಶ್ರೀ
ರಾಮಕ್ಕನವರು ಅವರ ರೇಷ್ಮೆಸೀರೆಗಳನ್ನೆಲ್ಲಾ ನೆಂಟರಿಷ್ಟರಿಗೆ, ಆಪ್ತರಿಗೆ ಹಂಚಿ ಇನ್ನು ಮೇಲೇನಿದ್ದರೂ ಹತ್ತಿ ಸೀರೆಯಷ್ಟೇ ಉಡುವುದೆಂಬ ನಿರ್ಧಾರ ಪ್ರಕಟಿಸಿದಾಗ ಅವರಿಗೆ ಎಪ್ಪತ್ತೈದಾಗಿತ್ತು. ಹಾಲಿಗೆ ಅರಿಶಿನ ಬೆರೆಸಿದಂತಹ ಮೈಬಣ್ಣ, ಕಡುಗಪ್ಪು ಕಣ್ಣು, ತುಸು ಉದ್ದವಾದ ಮೂಗು, ತುಂಬುದುಟಿ, ಪುಟ್ಟ ಚೆಂಡಿನ ಗಾತ್ರದ ತುರುಬಿನ ರಾಮಕ್ಕ ನೋಡಿದರೆ, ಮತ್ತೆ ತಿರುಗಿ ನೋಡಬೇಕೆನ್ನಿಸುವ ಲಕ್ಷಣವಂತೆ. ಮುತ್ತೈದೆಯಾಗಿದ್ದಾಗಿನ ಕಾಲದಲ್ಲಿ ಮಹಾಲಕ್ಷ್ಮಿಯೇ ಎಂದು ಜನ ಕೈಯೆತ್ತಿ ಮುಗಿಯುತ್ತಿದ್ದರಂತೆ. ಕರಿಮಣಿ ಸರ, ಕಾಲುಂಗುರ ತೆಗೆದರೂ ಚಿನ್ನದ ಸರ, ವಜ್ರದ ಮೂಗುತಿ, ಚಿನ್ನದ ಎರಡೆರಡು ಬಳೆ ಧರಿಸಿದ ರಾಮಕ್ಕನವರ ಪ್ರಭೆ ಇದ್ದ ಹಾಗೇ ಇತ್ತು. ಐವತ್ತನೆಯ ವಯಸ್ಸಿನಲ್ಲಿ ಗಂಡ ತೀರಿಕೊಂಡಾಗ ಬೆಳೆದ ಮಕ್ಕಳಿದ್ದರು. ಹೆಣ್ಣುಮಕ್ಕಳ ಮದುವೆಯಾಗಿತ್ತು. ಮೂರು ಗಂಡುಮಕ್ಕಳಿಗೆ ಮುತುವರ್ಜಿಯಿಂದ ಒಳ್ಳೆ ಕಡೆ ಹೆಣ್ಣು ತಂದು ಮದುವೆ ಮಾಡಿ, ಮೊಮ್ಮಕ್ಕಳನ್ನು ಲಾಲಿಸಿ, ಹೆಮ್ಮೆಯಿಂದ ಹರಸುವುದರಲ್ಲಿ ಕಾಲ ಮುಂದಕ್ಕೆ ಓಡಿದ್ದು ಸುಳ್ಳೆನಿಸುತ್ತಿತ್ತು.
ತನಗಿಂತ ಇಪ್ಪತ್ತು ವರ್ಷ ಹಿರಿಯನಾದ ಹುಡುಗನಿಗೆ ಮೂರನೆ ಹೆಂಡತಿಯಾಗಿ ರಮಾ ಮದುವೆಯಾಗಿ ಬಂದಾಗ, ಮನೆ ತುಂಬಾ ಅತ್ತೆ, ಮಾವ, ಓರಗಿತ್ತಿ, ಭಾವಂದಿರು, ಮೈದುನರು ಮತ್ತು ಅವರ ಮಕ್ಕಳು. ಇವರಿಗೆ ಮದುವೆಯಾಗಿ ಬಂದ ಹೆಂಡಿರಿಬ್ಬರೂ ಚೊಚ್ಚಲ ಹೆರಿಗೆಯಲ್ಲಿ ತೀರಿಕೊಂಡಿದ್ದರು. ತಾಯಿ ದಿಕ್ಕಿಲ್ಲದ ಮನೆಯ ಹಿರಿ ಹುಡುಗಿ ಅಂತ ಮಾವನವರು ಸ್ವಲ್ಪ ಹೆಚ್ಚೇ ಪ್ರೀತಿ ತೋರಿಸುತ್ತಿದ್ದರು. ಗಂಡನಿಗೆ ಹದಿನಾಲ್ಕರ ಎಳೆ ಹುಡುಗಿ ತನ್ನನ್ನು ನಂಬಿ ಬಂದಿದ್ದಾಳಲ್ಲ ಎಂಬ ಕನಿಕರ. ದುಡ್ಡಿಗೆ ಬಡತನವಿಲ್ಲದ ಮನೆ. ರೂಪವತಿ ಹೆಂಡತಿ. ಹೆಂಡತಿಗೆ ಇಷ್ಟವಾಗಬಹುದೆಂದು ತರತರದ ಸೀರೆ, ಕುಪ್ಪುಸದ ಬಟ್ಟೆ ತಂದು ತಂದು ಹಾಕುತ್ತಿದ್ದರು. ಮೈಮೇಲೆ ಒಂದು ಜೊತೆ , ದಂಡದ ಮೇಲೆ ಒಂದು ಜೊತೆ ಎಂದು ಎಣಿಸಿದಂತೆ ಬಟ್ಟೆಯಿದ್ದ ಅಮ್ಮನ ಮನೆಗಿಂತ ಈ ಮನೆ ಖುಷಿ ಕೊಡುತ್ತಿತ್ತು. ಅದೇ ಖುಷಿಯಲ್ಲೇ ಹದಿನಾರನೇ ವಯಸ್ಸಿನಲ್ಲಿ ಚೊಚ್ಚಲ ಬಸುರಿಯೆಂದು ತಿಳಿದಾಗ, ಅಪ್ಪನಿಗೆ ಆನಂದ. ಅತ್ತೆ ಮನೆಯಲ್ಲಿ ಆತಂಕ. ಪ್ರತಿದಿನ ಪೂಜೆ, ಹರಕೆಗಳ ಬಾಬತ್ತು. ಬಹಳ ಮುಗ್ಧ ಮನಸ್ಸಿನ ರಮಾಗೆ ಆನಂದ, ಆತಂಕಗಳಾವುದೂ ಅಷ್ಟಾಗಿ ತಟ್ಟದಿದ್ದರೂ, ಒಂದೊಮ್ಮೆ ತಾನೂ ಹೆರಿಗೆಯಲ್ಲಿ ಸತ್ತರೆ ಎಂಬ ಭಯ ಆಗಾಗ ಆವರಿಸುತ್ತಿತ್ತು. ಆದರೆ ಜೋತಿಷಿಯಾದ ಅಪ್ಪನೇ ಹೇಳುತ್ತಿದ್ದಂತೆ ದೀರ್ಘಾಯುಷ್ಯ ದ ಜಾತಕ ನನ್ನದು ಎಂಬ ಧೈರ್ಯ ಸಾಂತ್ವನ ನೀಡುತ್ತಿತ್ತು. ಅಂತೂ ಹೆರಿಗೆ ಸುಸೂತ್ರವಾಗಿ ಮಗು ಬಾಣಂತಿ ಮನೆಗೆ ಬಂದಾಗ ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು. ಬಹಳ ಮುದ್ದಿನಿಂದ ಮಗಳಿಗೆ ‘ಆನಂದಿ’ ಎಂದು ಕರೆದರು. ಹಿರಿಮಗಳಾದ್ದರಿಂದ ತಮ್ಮ, ತಂಗಿಯರ ಜವಾಬ್ದಾರಿಯೂ ಹೆಗಲೇರಿ ರಮಾ , ಎಲ್ಲರ ಬಾಯಲ್ಲೂ ರಮಕ್ಕ, ರಮಕ್ಕ ಅಂತ ಕರೆಸಿಕೊಳ್ತಾ ಕಡೆಗೆ ನಾಲಿಗೆ ಹೊರಳಿದಂತೆ ರಾಮಕ್ಕನಾದಳು. ರಮಾದೇವಿಯೆಂಬ ಹೆಸರು ಹದಿನಾರನೇ ವಯಸ್ಸಿಗೇ ಕಳಚಿಕೊಂಡಿತು. ಗಂಡ ಮಾತ್ರ ಆಗಾಗ ದೇವಿ…ದೇವಿ…ಎಂದುಸುರುತ್ತಾ ಹತ್ತಿರವಾದ ಕ್ಷಣಗಳು ಆಗೀಗ ನೆನಪಾಗಿ ಕಣ್ತುಂಬುವುದು.ತುಂಬಿದ ಸಂಸಾರದ ಕಟ್ಟುಪಾಡು, ತವರಿಗೆ ಆಸರೆಯಾಗಬೇಕಾದ ಅನಿವಾರ್ಯ, ತನ್ನ ಆರು ಮಕ್ಕಳ ಜವಾಬ್ದಾರಿ, ವಯಸ್ಸಿನಲ್ಲಿ ತುಂಬಾ ಹಿರಿಯನೆನನ್ನಿಸುವ ಗಂಡ ಇವುಗಳಲ್ಲಿ ಮುಳುಗೇಳುತ್ತಾ ರಾಮಕ್ಕ ವಯಸ್ಸಿಗೆ ಮೀರಿದ ಪ್ರಬುದ್ಧತೆ ಸಂಪಾದಿಸಿಕೊಂಡಿದ್ದಳು. ತೆರೆದ ಕಣ್ಣು, ಕಿವಿಗಳಿಂದ ಜಗತ್ತನ್ನು ನೋಡುತ್ತಲಿದ್ದರೆ ಸಾಕು. ಯಾವ ವಿದ್ಯಾಭ್ಯಾಸವೂ ನೀಡದಷ್ಟು ವಿವೇಕವನ್ನು ಜಗತ್ತು ಕಲಿಸುತ್ತದೆಂದು ನಂಬಿದ್ದಳು. ಅದರಂತೆಯೇ ರಕ್ತಗತವಾಗಿದ್ದ ಧೈರ್ಯ, ಏನಾದರೂ ಸಾಧಿಸಿಬಿಡುವ ಛಾತಿಯಿಂದಲೂ ಮನೆಯಲ್ಲಿ ಗೌರವ, ಪ್ರತ್ಯೇಕ ಸ್ಥಾನವನ್ನು ಗಳಿಸಿದ್ದ ಆಕೆಯ ಮಾತಿಗೆ ಎದುರಾಡುವರೇ ಇರಲಿಲ್ಲ. ಈಗಲೂ ಒಂದು ಬೀರು ಭರ್ತಿಯಿದ್ದ ಕಂಚಿ, ಬನಾರಸಿ, ಇಳಕಲ್, ಮೊಳಕಾಲ್ಮೂರು, ಮೈಸೂರ್ ಸಿಲ್ಕ್ ಸೀರೆಗಳನ್ನು ಎಲ್ಲರಿಗೂ ಹಂಚುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸಲಾಗಲಿಲ್ಲ. ಎಪ್ಪತ್ತು ಎಂಭತ್ತು ಸೀರೆಗಳು ಒಂದೊಂದೂ ಐದಾರು ಸಾವಿರಕ್ಕೆ ಕಮ್ಮಿ ಹೇಗಾದೀತು? ಅದರಲ್ಲೂ ಹಳೆ ಸೀರೆಗಳ ಅಂಚಿನಲ್ಲಿ ಬೆಳ್ಳಿ, ಬಂಗಾರವಿರದೆ ಇರುತ್ತದೆಯೇ? ಮನುಷ್ಯನಿಗೆ ಎಷ್ಟು ಆಸ್ತಿಪಾಸ್ತಿಯಿದ್ದರೂ ಹೆತ್ತವರ ಸ್ವತ್ತು ಪರರ ಪಾಲಾಗುವುದನ್ನು ನೋಡಿ ಸಹಿಸಲು ಸಾಧ್ಯವೇ? ರಾಮಕ್ಕನವರ ಈ ದಿಢೀರ್ ಬದಲಾವಣೆ ಅಷ್ಟು ಸುಲಭಕ್ಕೆ ಯಾರಿಗೂ ನಿಲುಕಲಿಲ್ಲ.
ನಿನ್ನೆ ಮೊನ್ನೆಯವರೆಗೂ ಕುಟುಂಬದ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕಡೆಗೆ ಒಂದು ಹೋಟೆಲ್ಗೆ ಹೋಗುವಾಗಲೂ ರೇಷ್ಮೆ ಸೀರೆ, ಅದಕ್ಕೊಪ್ಪುವ ರವಿಕೆ, ಎರಡೆಳೆ ಚಿನ್ನದ ಸರದ ಜೊತೆಗೆ ಮುತ್ತಿನ ಸರ, ಅಥವಾ ಹವಳದ ಸರ ತೊಟ್ಟು ಒಂದು ಬಗೆಯ ಗಾಂಭೀರ್ಯದಿಂದ ನಡೆದು ಬರುತ್ತಿದ್ದ ತಮ್ಮ ತಾಯಿ ಈಗ ಸಾದಾ ಸೀರೆ ಬಿಟ್ಟು ಮತ್ಯಾವುದೂ ಬೇಡವೆಂದಿದ್ದು ಗುಲ್ಲಾಗಿತ್ತು. ಮೂವರು ಸೊಸೆಯರು ತಮ್ಮಲ್ಲೂ ಸೀರೆಗಳ ರಾಶಿ ಹೊಂದಿದ್ದರೂ, ಅವರು ತಮ್ಮ ಮಕ್ಕಳ ಚೌಲ, ಉಪನಯನ, ಮದುವೆ, ಗೃಹಪ್ರವೇಶ ಇತ್ಯಾದಿಗಳಲ್ಲಿ ಪಾದಪೂಜೆಗೆಂದು ನಾಲ್ಕಾರು ಅಂಗಡಿ ಸುತ್ತಿ, ಸಾವಿರಾರು ರುಪಾಯಿ ಖರ್ಚು ಮಾಡಿ ತಂದ ಸೀರೆಗಳನ್ನು ಬೇಕೆಂದವರಿಗೆ ಕೊಟ್ಟುಬಿಡುತ್ತಿರುವುದು ಸರಿ ಕಂಡಿರಲಿಲ್ಲ. ಇನ್ನು ಕೆಲವು ಸೀರೆಗಳು ಕೊಡುವುದಾದರೆ ತಮಗೇ ಕೊಡಲಿ ಎನ್ನಿಸುವಷ್ಟು ಚೆಂದಿದ್ದವು. ಗಿಣಿಹಸುರಿಗೆ ಗಾಢನೀಲಿ ಅಂಚಿದ್ದ ಕಂಚಿ ಸೀರೆ, ನೇರಳೆ ಬಣ್ಣದ ಬನಾರಸಿ ಸೀರೆ, ಹತ್ತಾರು ಬಣ್ಣದ ಮೈಸೂರ್ ಸಿಲ್ಕ್ ಗಳ ಮೇಲೆ ಆಸೆಯಿಟ್ಟುಕೊಂಡಿದ್ದ ಸೊಸೆಯರು ಆಡಲೂ ಆಗದೆ , ಸುಮ್ಮನಿರಲೂ ಆಗದೆ ತಳಮಳಿಸುವಾಗಲೇ ರಾಮಕ್ಕನವರು ಸೊಸೆಯರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದು ಶನಿವಾರ ತಾವಿರುವಲ್ಲಿಗೆ ಬನ್ನಿರೆಂದು ಕರೆದರು.
ಏನಿದ್ದರೂ ಫೋನಿನಲ್ಲಿ ವಾರಕ್ಕೊಂದೆರಡು ಸಲ ತಮ್ಮತಮ್ಮಲ್ಲೇ ಮಾತಾಡಿಕೊಂಡಿರುತ್ತಿದ್ದ ಸೊಸೆಯರು, ಹೆಣ್ಣು ಮಕ್ಕಳು ಒಟ್ಟಾಗಿ ಸೇರಿ ಆರುತಿಂಗಳ ಮೇಲೇ ಆಗಿತ್ತು. ಆನಂದಿ ತೀರಿಕೊಂಡಾಗ ತಿಥಿ, ವೈಕುಂಠ ಅಂತ ಹೋದ ಹದಿನೈದು ದಿನಗಳೊಳಗೆ ಜೊತೆಯಾಗಿ ಹೋಗಿ ಬಂದಿದ್ದಷ್ಟೇ. ಆಮೇಲೆ ಸಿಗುವ ಸಂದರ್ಭ ಒದಗಿಬರಲಿಲ್ಲ. ಮಾತು ಹೇಗೆ ತಿರುಗಿದರೂ ಆನಂದಿಯ ವಿಷಯಕ್ಕೇ ಬಂದು ನಿಂತು ನಿರ್ವಾತ ಕವಿಯುತ್ತಿತ್ತು. ಆ ಮುಜುಗರದಿಂದ ಪಾರಾಗಲೋ ಎಂಬಂತೆ ಮೇಲೆಮೇಲೆ ಕುಶಲ ಸಂಭಾಷಣೆ ನಡೆಸಿ ಫೋನಿಟ್ಟುಬಿಡುವ ದಾರಿ ಹಿತವಾಗಿತ್ತು. ಈಗ ಶುರುವಾದ ಸೀರೆ ವಿವಾದ ಮತ್ತು ರಾಮಕ್ಕನ ಕರೆ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ಕೂಡ ಒಳಿತೇ ಆಯಿತು.
ರಾಮಕ್ಕರ ಆರು ಮಕ್ಕಳ ಪೈಕಿ ಆನಂದಿಯೇ ವಿಭಿನ್ನ. ಮೌನಿ. ಧಾರಾಳಿ. ಆದರೆ ಸದಾ ಕೊರಗನ್ನು ಹಚ್ಚಿಕೊಂಡೇ ಬಾಳಿದ ಹೆಣ್ಣು. ಒಳ್ಳೆಯ ಗಂಡ, ಮುದ್ದಾದ ಮಕ್ಕಳು, ಸ್ವಂತ ಮನೆ, ಸ್ವಾತಂತ್ರ್ಯ ಎಲ್ಲ ಇದ್ದೂ ತಾನು ಕನಸಿದ್ದ ಬಾಳು ಇದಲ್ಲ ಎಂದು ನಿರಾಕರಣೆಯಲ್ಲೇ ದಿನದೂಡಿದಳು. ಅಮ್ಮನೊಂದಿಗೆ ಆಡಿದ ಕೆಲವೇ ಮಾತುಗಳಲ್ಲೂ ಅತೃಪ್ತಿಯ ಅಂಶಗಳಿದ್ದವೇ ಹೊರತು ಜೀವನಪ್ರೀತಿಯಲ್ಲ. ಆನಂದಿಯ ಮುಖದಲ್ಲಿ ನಗುವನ್ನು ಮೂಡಿಸಲು ರಾಮಕ್ಕ ಪಟ್ಟಪಾಡು ಒಂದೆರಡಲ್ಲ. ಅವಳಿಗಿಷ್ಟದ ತಿಂಡಿ, ಬಟ್ಟೆ, ಪ್ರವಾಸ, ನೆಮ್ಮದಿ ತರಬಹುದಾದ ಮಾತು, ಸಂಗೀತ, ಬೆಚ್ಚನೆ ತವರು ಎಲ್ಲವನ್ನೂ ಪ್ರಯತ್ನಿಸಿ ಕಡೆಗೆ ಮಾನಸಿಕ ವೈದ್ಯರ ಹತ್ತಿರವೂ ತೋರಿಸಿ , ಚಿಕಿತ್ಸೆಯಾಯಿತು. ಔಷಧಿಯ ಪ್ರಭಾವದಿಂದ ಸ್ವಲ್ಪ ಚೇತರಿಕೆ ಕಂಡಂತಾದರೂ ಮತ್ತೆ ಯಥಾಸ್ಥಿತಿಗೆ ಮರಳುತ್ತಿದ್ದ ಮಗಳು ಜೀವನದ ಸವಾಲಾಗಿದ್ದಳು.ಅವಳಿಗೆಂದು ಆಸೆಯಿಂದ ಕೊಂಡುಹೋದ ತಿಂಡಿ, ಹಣ್ಣು, ಬಟ್ಟೆ, ಒಡವೆ ಯಾವುದನ್ನೂ ಆಕೆ ತನಗಾಗಿ ಉಳಿಸಿಕೊಳ್ಳುತ್ತಲೇ ಇರಲಿಲ್ಲ. ಎಲ್ಲವನ್ನೂ ಹಂಚಿ, ತಾನು ಮಾತ್ರ ಹಿಡಿಯನ್ನ, ನಾಲ್ಕಾರು ಸಾದಾ ಸೀರೆ, ಮಂಕಾದ ರವಿಕೆಯಲ್ಲೇ ಜೀವನ ಸವೆಸಿಬಿಟ್ಟಳು. ಏಕೆಂದು ಘಟ್ಟಿಸಿ ಕೇಳುವಂತಿಲ್ಲ. ನನಗೇನು ರೂಪ, ವಿದ್ಯೆ, ಅಧಿಕಾರ ಇದೆಯೇ? ನಿನ್ನಂತೆ ಮೆರೆಯಲು… ಕೊಟ್ಟ ಮೇಲೆ ಅದು ನನ್ನದೆನ್ನುವ ಹಾಗಿದ್ರೆ ಕೊಡು. ಇಲ್ಲದಿದ್ದರೆ ತರುವ ಉಸಾಬರಿಯೇ ನಿನಗೆ ಬೇಡವೆನ್ನುತ್ತಿದ್ದಳು. ಸಮಾರಂಭಗಳಲ್ಲಿ ಉಳಿದವರೆಲ್ಲಾ ಮಿಂಚುತ್ತಿದ್ದರೆ, ತಾನೊಂದು ಮೂಲೆಯಲ್ಲಿ ಇವರಾರಿಗೂ ಸಂಬಂಧಿಸಿಯೇ ಇಲ್ಲವೆಂಬ ನಿರ್ಲಿಪ್ತ ಭಾವದಲ್ಲಿ ಕುಳಿತಿರುತ್ತಿದ್ದಳು. ನಾನು ಹಳೆಸೀರೆಯುಟ್ಟು ಬರುವುದು ನಿಮಗೆ ಇರುಸುಮುರುಸಾದೀತೆಂದು ಜನ ಸೇರುವಲ್ಲಿಗೆ ಬರುವುದನ್ನೇ ಬಿಟ್ಟಳು. ಒಂಟಿಯಾಗಿರುತ್ತ ಅದೇನನ್ನು ಧೇನಿಸುತ್ತಿದ್ದಳೋ? ಮಗಳೇ ಆದರೂ ರಾಮಕ್ಕನಿಗೆ ಅವಳ ಅಂತರಂಗವನ್ನು ಅರಿಯುವುದು ಅಸಾಧ್ಯ. ಉಳಿದೈದು ಮಕ್ಕಳಿಗೆ ಸೇರಿ ತೋರುವ ಕಾಳಜಿಗಿಂತ ಎರಡು ಪಟ್ಟು ಹೆಚ್ಚೇ ಕಾಳಜಿ ತೋರಿದರೂ, ಆನಂದಿಗೆ ಪ್ರಸನ್ನತೆಯಿರಲಿಲ್ಲ. ಇದ್ದಕ್ಕಿದ್ದಂತೆ ಹೃದಯ ಸ್ತಂಭನವುಂಟಾಗಿ ತೀರಿಕೊಂಡ ಆಕೆಯ ಸಾವು ರಾಮಕ್ಕನನ್ನು ಬಲವಾಗಿ ತಟ್ಟಿತ್ತು. ಐವತ್ತೊಂಭತ್ತು ಸಾಯುವ ವಯಸ್ಸೇ? ಎಪ್ಪತ್ತೈದರ ತನಗೇ ಈ ಬದುಕಿನ ಸವಿಯನ್ನು ಇನ್ನಷ್ಟು ಸವಿಯಬೇಕೆನ್ನಿಸುವಾಗ ನಿರಾಕರಣೆಯಲ್ಲೇ ಬದುಕು ದೂಡಿದ ಆಕೆ ಅನುಭವಿಸಿದ್ದಾದರೂ ಏನನ್ನು? ಬದುಕಿನ ಹಂಬಲ ಅಪರೂಪವೇ? ತನ್ನನ್ನು ಈ ಬದುಕಿಗೆ ಕಟ್ಟಿಹಾಕಿರುವುದಾದರೂ ಏನು? ವಯಸ್ಸಾದಂತೆ ಮೋಹ ಕಳಚಿಕೊಳ್ಳಬೇಕೆನ್ನುತ್ತಾರೆ. ತನಗೇಕೆ ವೈರಾಗ್ಯ ಸೋಕಿಲ್ಲ? ಹೀಗೆ ನೂರಾರು ಪ್ರಶ್ನೆಗಳು ತಲೆತಿನ್ನುತ್ತಿತ್ತು.
ಇದುವರೆಗೂ ಕೂಡಿಟ್ಟುಕೊಳ್ಳುವುದರಲ್ಲಿ, ಉಂಡುಟ್ಟು ಸಂಭ್ರಮಿಸುವುದರಲ್ಲಿ ಕಳೆದ ಕಾಲದ ಬಗ್ಗೆ ವಿಷಾದವಿಟ್ಟುಕೊಳ್ಳದೆ, ಮುಂದೆ ಸರಳವಾಗುತ್ತಾ ಸಾಗಲು ಪ್ರಯತ್ನಿಸಬೇಕೆನ್ನಿಸಿತು. ಆನಂದಿಯ ಸಾವು , ತನ್ನ ಮೊದಲ ಕರುಳಕೂಸಿನ ಅಗಲುವಿಕೆ ತನ್ನ ಬದುಕಿನ ಮತ್ತೊಂದು ತಿರುವು. ಉದಾರವಾಗಿ ಕೊಡುವುದರಲ್ಲಿ ತೃಪ್ತಿಯನ್ನು ಕಂಡಿದ್ದ, ಮೌನವಾಗಿ ಕಾರ್ಯ ಸಾಧಿಸುತ್ತಿದ್ದ ಮಗಳು ಬದುಕಿನ ಸವಾಲಾಗಿರಲಿಲ್ಲ. ಗುರುವಾಗಿದ್ದಳೆನ್ನಿಸಿ ಗಂಟಲುಬ್ಬಿ ಬಂದಿತು. ಅವಳಿದ್ದಷ್ಟು ದಿನವೂ ಅವಳಿಗೆ ಹೊರಗಿನಿಂದ ನೆಮ್ಮದಿಯನ್ನು ಹುಡುಕಿಕೊಡುವ ಸಕಲ ಸಾಹಸಗಳನ್ನು ಮಾಡಿದೆನೇ ಹೊರತು, ಅವಳಾಗಿಯೇ ಬದುಕನ್ನು ಅರ್ಥೈಸಿಕೊಳ್ಳಲು ಬಿಡಲೇ ಇಲ್ಲವೆನಿಸಿತು. ಅಥವಾ ಅವಳು ಕಂಡುಕೊಂಡಿದ್ದ ಅರ್ಥವನ್ನು ತನಗೆ ದಾಟಿಸದೆ ಹೊರಟಳೇನೋ ಎಂದು ವ್ಯಥೆಯಾಯಿತು.
ತನಗೆಂದು ಏನನ್ನೂ ಶೇಖರಿಸದೆ, ಇರುವಾಗಲೇ ಎಲ್ಲವನ್ನೂ ಕೊಟ್ಟು ಹಾಯಾಗಿ ಹೊರಟುಬಿಟ್ಟ ಮಗಳು ಬಾಳಿ ಹೋದ ಪಾಠವನ್ನು ಕಲಿಯಲು ರಾಮಕ್ಕ ಮನಸ್ಸು ಮಾಡಿದ್ದಳು.
ಮಕ್ಕಳು , ಸೊಸೆ, ಮೊಮ್ಮಕ್ಕಳೆಲ್ಲಾ ಸೇರಿ ಅಂದು ಹಬ್ಬದ ವಾತಾವರಣ ಮೂಡಿತ್ತು. ಹತ್ತು ಹದಿನೈದು ಸೀರೆಗಳನ್ನು ಅವರಿವರಿಗೆ ಕೊಟ್ಟಿದ್ದರು ಬಿಟ್ಟರೆ ಬಹುಪಾಲು ಸೀರೆಗಳು ಬೀರುವಿನಲ್ಲಿ ಭದ್ರವಾಗಿ ಕೂತಿದ್ದವು. ಬಂದವರಿಗೆಲ್ಲಾ ಅವರಿಗಿಷ್ಟದ ಸೀರೆ ಆಯ್ದುಕೊಳ್ಳುವಂತೆ ಸೂಚಿಸಿ, ಅವರ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ ಹೋದಂತೆ ಅತ್ಯಂತ ಸಂತೃಪ್ತ ಭಾವ ಮೈದುಂಬಿತ್ತು. ಬದುಕು ಮಗ್ಗುಲು ಬದಲಿಸುತ್ತಿತ್ತು.
……..
ಚೆನ್ನಾಗಿದೆ.
ಒಳ್ಳೆಯ ಕಥೆ
ಧನ್ಯವಾದಗಳು
Good one nagashree
Thank u Madhura
ತುಂಬಾ ಚೆನ್ನಾಗಿದೆ….. ಓದುತ್ತಲೇ ಗಂಟಲುಬ್ಬಿ ಬಂತು
ಧನ್ಯವಾದಗಳು ಮೇಡಂ