ಅಂಕಣ ಬರಹ
ತೊರೆಯ ಹರಿವು
‘ಶ್ವಾನ ಸಮಾಚಾರ’
ಆ ದಿನ ಮನೆಯಿಂದ ಕಚೇರಿಗೆ ಹೊರಟಿದ್ದೆ. ಗೇಟು ತೆರೆದು ಹೊರಗೆ ಕಾಲಿಡಬೇಕು, ಆಫೀಸಿನ ಕಾರಿನ ಚಕ್ರ ಪಚಕ್ ಎಂದು ಅದರ ಮೇಲೆ.. ‘ಛೀ.. ಎಂಥಾ ಕತೆ ಆಯ್ತು, ಯಾಕಾದ್ರೂ ಇದನ್ನ ನೋಡಿದ್ನೋ..’ ಎಂದು ಮನಸ್ಸು ಹೇಸಿತು. ‘ಅರೆ! ಇದಕೆ ಮನಸು ಏಕೆ ಕಹಿ ಮಾಡ್ಕೋಬೇಕು? ನಾನು ಕೂರೋದು ಕಾರಿನ ಒಳಗಲ್ಲವೇ?’ ಎಂದು ಸಮಾಧಾನ ಹೇಳಿಕೊಂಡ್ರೂ ಆ ಗಲೀಜನ್ನು ಹೊತ್ತು ಊರಲೆಲ್ಲಾ ಮೆರವಣಿಗೆ ಆಗಬೇಕೆ? ಛೀ..ಎಂದು ಹೇವರಿಕೆ ಆಯ್ತು. ಡ್ರೈವರ್ ಅವರಿಗೆ ಹೇಳಿ ಚಕ್ರಕ್ಕೆ ಗಲೀಜು ಹೋಗುವಷ್ಟು ನೀರು ಹಾಕಿಸಿ, ಹೊರಟೆ. ಆದರೂ ಮನಸ್ಸಿಗೆ ಸಮಾಧಾನ ಆಗಿರಲಿಲ್ಲ.
ಕಾರು ಮುಂದೆ ಓಡುತ್ತಿತ್ತು, ಮನಸ್ಸಲ್ಲಿ ದಾಸ ಶ್ರೇಷ್ಠರ ಕೀರ್ತನೆ…
“ ಡೊಂಕು ಬಾಲದ ನಾಯಕರೆ
ನೀವೇನೂಟವ ಮಾಡಿದಿರಿ…” ಗುನುಗುವಂತಾಯ್ತು.
ದಾಸವರೇಣ್ಯರ ಕ್ಷಮೆ ಕೋರಿಕೊಂಡು,
ವ್ಯಘ್ರಗೊಂಡ ಮನಸ್ಸಲ್ಲಿ ಕೀರ್ತನೆಯನ್ನು ಹೀಗೆ ತಿದ್ದಿಕೊಂಡು ಗುನುಗಿದೆ,
“ಡೊಂಕುಬಾಲದ ಮಾಲೀಕರೇ..
ವಾಯು ವಿಹಾರಕೆ ಎಲ್ಲಿಗೆ ಹೊರಟಿದಿರಿ?
ಅವರಿವರ ಮನೆಗಳ ಅರಸುತಾ..
ನೀವೆಲ್ಲಿಗೆ; ‘ಗಲ್ಲಿ’ಗೆ ಹೋಗಿರುವಿರಿ..?”
ಮತ್ತೇನು ಮಾಡುವುದು ಹೇಳಿ?! ಪಾಪ, ಯಾವ ಬೀದಿ ನಾಯಿಯೂ ತಾವು ಓಡಾಡುವ ಬಡಾವಣೆ-ಬೀದಿಯ ಮನೆಗಳ ಮುಂದೆ ಗಲೀಜು ಮಾಡುವುದನ್ನು ನಾನು ಕಣ್ಣಾರೆ ಕಂಡಿಲ್ಲ; ಆ ಸುದ್ದಿ ಕಿವಿಯಾರೆ ಕೇಳಿಲ್ಲ. ಆದರೆ, ಅದೇ ಹೊತ್ತಿನಲ್ಲಿ, ಬಹಳ ಮುತುವರ್ಜಿಯಿಂದ ಇಂಪೋರ್ಟೆಡ್ ಬೆಲ್ಟು ಹಾಕಿ, ದಷ್ಟಪುಷ್ಟವಾಗಿ ಸಾಕಿದ ಸಾವಿರಾರು ರೂ ಬೆಲೆ ಬಾಳುವ ದೇಶೀ-ವಿದೇಶಿ ತಳಿಯ ನಾಯಿಗಳನ್ನು… ಸ್ಸಾರಿ, ಡಾಗಿ, ಪಪ್ಪೀಗಳನ್ನು ಟಾಕುಟೀಕಿನಿಂದ ವಾಕಿಂಗ್ ಕರೆತರುವ ಸೋಕಾಲ್ಡ್ ಸಭ್ಯ ನಾಗರಿಕರು; ಎಲ್ಲರ ಮನೆ ಮುಂದೆ (ತಮ್ಮ ಮನೆ ಹೊರತುಪಡಿಸಿ ಎಂದು ವಿಶೇಷವಾಗಿ ಹೇಳಬೇಕಿಲ್ಲ) ಮಲ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸುತ್ತಾರೆ. ಹಾಗಾಗಿ ‘ಏನು ನಿಮ್ಮ ಸಮಾಚಾರ?’ ಎಂದು ಡೊಂಕು ಬಾಲ ಸಾಕಿದ ಡೊಂಕು ಮನಸ್ಸಿನ ಮಾಲೀಕರಿಗೆ ಕೇಳುವುದೇ ಉತ್ತಮ.
ಇನ್ನು, ಬೆಳಗ್ಗಿನ ಆ ಘಟನೆಯಿಂದ ಬಹಳ ಬೇಜಾರಾದದ್ದು ನಿಜವೇ. ಆದರದನ್ನು ಕಚೇರಿ ಕೆಲಸದ ನಡುವೆ ಮರೆತ ಹಾಗೆ ಆಗಿತ್ತು. ಆದರೆ ಸಂಜೆ ಮನೆಗೆ ಮರಳಿದಾಗ ನಮ್ಮ ಬಡಾವಣೆಗೆ ಮಾತ್ರ ಸುರಿದ ಮಳೆ, ಆ ಗಲೀಜನ್ನು ಮತ್ತಷ್ಟು ಹರಡಿ ರಾಡಿ ಮಾಡಿತ್ತು. ಅದಾಗಲೇ ಸಾಕಷ್ಟು ವಾಹನಗಳೂ ಅದರ ಮೇಲೆ ಹರಿದಾಡಿ ರಸ್ತೆಯೆಲ್ಲಾ ಸಾರಿಸಿಬಿಟ್ಟಂತೆ ಆಗಿತ್ತು. ಒಟ್ಟಿನಲ್ಲಿ ನನ್ನ ಮನಸ್ಸು ಕ್ಷುದ್ರಗೊಂಡಿತ್ತು. ನಾನು ಮನೆಗೆ ಮರಳಿದ್ದು ಗೊತ್ತಾಗುತ್ತಿದ್ದಂತಯೇ.., ವೆರಾಂಡಾದ ಕಿಟಕಿಯಿಂದ ನನ್ನನ್ನು ನೋಡಿದ ಮಕ್ಕಳು, ‘ಅಮ್ಮ ಬಂದರೆಂದು’ ಕೂಗಿ ಮುಂಬಾಗಿಲು ತೆರೆದು ಓಡಿಬಂದರು. ಮುದ್ದು ಮಕ್ಕಳನ್ನು ಪ್ರೀತಿಯಿಂದ ಅಪ್ಪಿ ಮಾತನಾಡಿಸುವುದಕ್ಕೂ ಮೊದಲೇ.., “ಛೀ, ಥೂ.. ದೂರ ನಿಲ್ಲಿ, ಅಲ್ಲೇ ಗೇಟಿನ ಬಳಿ ಕಲ್ಲಿನ ಮೇಲಿರಿ. ರಸ್ತೆಗೆ ಕಾಲಿಡಬೇಡಿ..” ಎಂದು ಬೊಬ್ಬೆ ಹೊಡೆದೆ.
ಪಾಪ, ಮಕ್ಳು ಗಾಬರಿಬಿದ್ದರು. ‘ಅಮ್ಮ ಏಕೆ ಕಿರುಚುತ್ತಿದ್ದಾರೆ?!’. ಅಯೋಮಯವಾದ ಅವರ ಮುಖ ನೋಡಿದ್ಮೇಲೆ, ಅವರ ಮೇಲೆ ರೇಗಿದ್ದಕ್ಕೆ ಬೇಜಾರಾಯ್ತು. ‘ನಾಯಿ ಗಲೀಜು ಇತ್ತು ಕಣ್ರಪ್ಪಾ, ಅದ್ಕೇ ಚಪ್ಪಲಿ ಹಾಕ್ದೇ ಹಾಗೇ ರೋಡಿಗೆ ಓಡಿಬರ್ಬೇಡಿ ಅಂತ ಕೂಗಿದ್ದು’ ಎಂದು ಹೇಳಿದ ಮೇಲೆ “ಛೀ..” ಎಂದು ಮುಖ ಸಿಂಡರಿಸುವ ಸರದಿ ಅವರದ್ದಾಯ್ತು.
ಹೀಗೆ ನನ್ನ ಆ ದಿನದ ಆನಂದವನ್ನು ಕಸಿದ ನಾಯಿ ಸಾಕಿದವರು ಸಂಜೆಗೆ ಯಾವ ರಸ್ತೆಯಲ್ಲಿ ತಮ್ಮ‘ಪೆಟ್’ ಜೊತೆ ವಾಕಿಂಗ್ ಹೋಗಿ ಯಾರ ಮನೆಯ ಮುಂದೆ ಗಲೀಜು ಹಾಕಿಸಿ ಬರುತ್ತಾರೋ ಎಂದು ಮನಸ್ಸಿಗೆ ಬೇಡದ ಚಿಂತೆ ಹತ್ತಿಸಿಕೊಂಡು ಆ ದಿನ ಕಳೆದೆ.
ಮತ್ತೊಮ್ಮೆ ಹೀಗಾಯ್ತು, ಬೆಳಿಗ್ಗೆ ಬಾಲ್ಕನಿಯಿಂದ ಹೊರಗೆ ನೋಡುತ್ತಿದ್ದಂತೆಯೇ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಬಳಿ, ಕಾಲೆತ್ತುತ್ತಿದ್ದ ದಢೂತಿ ನಾಯಿ ಹಾಗೂ ಅದರ ಮಾಲಿಕರು ಕಂಡರು. “ಹೇ..ಹಲೋ… ಹಲೋ… ಏನ್ರೀ ಇದು?! ನಿಮ್ಮ ಮನೆ ಮುಂದೆ ಮಾಡಿಸಿಕೊಳ್ರಿ, ಹೋಗ್ರಿ. ಬೇರೆಯವರ ಮನೆ ಮುಂದೆ ಗಲೀಜು ಮಾಡಿಸ್ತಿದ್ದೀರಲ್ಲಾ. ನಿಮಗೆ ಜ್ಞಾನ ಇಲ್ವೇನ್ರೀ..?” ಎಂದು ಅಬ್ಬರಿಸಿ ಬೊಬ್ಬಿರಿದೆ. “ನೋ ನೋ ಇಟ್ಸ್ ಡುಯಿಂಗ್ ನಥಿಂಗ್” ಎಂದು ಆಸಾಮಿ ಬಹಳ ಸಮಾಧಾನ ಹಾಗೂ ಆತ್ಮವಿಶ್ವಾಸದಿಂದ ಹೇಳಿದರು. ಅವರೊಡನಿದ್ದ ಆ ಸ್ವಾಮಿನಿಷ್ಠ ಮಾತ್ರ ನನ್ನ ಆರ್ಭಟ ಕೇಳಿ, ‘’ಅಬ್ಬರಿಸಿ ಬೊಬ್ಬಿರಿದರೆ ಇಲ್ಲಾರಿಗೂ ಭಯವಿಲ್ಲಾ..’’ ಎಂದು ಕಿಲುಬು ಕಾಸಿನ ಕಿಮ್ಮತ್ತನ್ನೂ ಕೊಡದೆ, “ಬಂಟಿ, ನೋ ನೋ” ಎನ್ನುತ್ತಿರುವ ತನ್ನ ಯಜಮಾನನ ಮುಖ ನೋಡಿತು. ಬಹುಶಃ ಅದಕ್ಕೆ ಆಗಿದ್ದ ಅವಸರಕ್ಕೆ ನಮ್ಮ ಮಾತು ಅಪಸ್ವರವಾಗಿ ಕೇಳಿ ಬಂದಿರಬೇಕು. ತಾನು ನಿಂತ ಜಾಗದಿಂದ ಮತ್ತೊಂದು ಅಡಿಯನ್ನೂ ಮುಂದಿಡದೆ ನಿಂತಲ್ಲೇ ಮಲವಿಸರ್ಜಿಸಿ ಬಿಟ್ಟಿತು. ಆ ಕ್ಷಣಕ್ಕೆ ಭೂಮಿ ಮೇಲಿನ ಅತ್ಯಂತ ನಿಕೃಷ್ಟ, ಅಸಹಾಯಕ ಜೀವಿ ಆಗ ನಾನಾಗಿದ್ದೆ. ಹೀಗೆ ಅಸಹಾಯಕಳಾದ ನನ್ನನ್ನು ನೋಡುತ್ತಾ, ‘’ಮಾಡೋದು ಮಾಡ್ತು, ಇನ್ನು ನೀನೇನು ಮಾಡ್ಕೋತೀಯ?” ಅನ್ನೋ ಹಾಗೆ, ಓನರ್ ಆಸಾಮಿ, ನಾಯಿಯೊಂದಿಗೆ ವಾಕಿಂಗ್ ಕಂಟಿನ್ಯೂ ಮಾಡಿದರು. ಆದರೆ ಆ ದಿನ ಒಂದು ಸತ್ಯ ಮನದಟ್ಟಾಯ್ತು. ನಾಯಿ ಕಂತ್ರಿ ಆದ್ರೇನು ವಿಲಾಯ್ತಿ ಆದ್ರೇನು? ಅದಕ್ಕೆ ಕನ್ನಡವೂ ಬರಲ್ಲ ಇಂಗ್ಲೀಶೂ ಬರಲ್ಲ ಅಂತ!
ತಂತಮ್ಮ ಮನೆ ಬಿಟ್ಟು ಬೇರೆ ಕಡೆ ತಮ್ಮ ಮುದ್ದಿನ ‘ಪೆಟ್’ ಮೈಭಾರ ಇಳಿಸಿಕೊಂಡು ನಿರುಮ್ಮಳಾಗುವುದನ್ನು ನೋಡಿ ಶ್ವಾನಾಧಿಪತಿಗಳು ಸಂಪ್ರೀತರಾಗಬಹುದು ಹಾಗೂ ಅವರ ಮನೆ ಮುಂದೆ ಮಾತ್ರ ಸ್ವಚ್ಛವಾಗಿ ಇರೋದನ್ನು ಕಂಡು ತಮ್ಮ ಚಾಣಾಕ್ಷ ಕಾರ್ಯಚತುರತೆಗೆ ಸಂತೋಷ ಪಡಬಹುದು. ಆದರೆ ದಿನದ ಬೆಳಗ್ಗಿನಿಂದ ಸಂಜೆಯವರೆಗೆ ಮನೆಗಳ ಮುಂದೆ ಇಂತಹ ಅಸಹ್ಯವನ್ನು ಕಾಣುವ ಬೇರೆ ಮನೆಯವರು, ಇಲ್ಲಾ ದಾರಿಹೋಕರು ತಮ್ಮ ಮನಸ್ಸಿಗೆ ಆಗುವ ವ್ಯಥೆಯ ಬಗ್ಗೆ ಯಾರಲ್ಲಿ ದುಃಖ ತೋಡಿಕೊಳ್ಳಬೇಕು ಹೇಳಿ?!
ಆದರೆ, ಪ್ರತಿದಿನ ಈ ರೀತಿ ಮುಜುಗರ ಪಡುವ ಸರದಿ ಬೆಂಗಳೂರಿನಂತಹ ಅನಾಥ ನಗರದಲ್ಲಿ ಯಾರಿಗಾದರೂ ಆಗಿಯೇ ಆಗಿರುತ್ತದೆ. ಇಲ್ಲದಿದ್ದರೆ ಅವರು ಆ ದಿನದ ಹಿಂದಿನ ಮಧ್ಯರಾತ್ರಿ ನಿದ್ದೆಗಣ್ಣಿನಲ್ಲಿ ನಗರಕ್ಕೆ ಬಂದವರಾಗಿರುತ್ತಾರೆ. ಅವರಿಗೆ ಹೇಳಬೇಕೆನಿಸುವ ಮಾತು (ಮಹಾಕವಿಯ ಕ್ಷಮೆ ಕೋರುತ್ತಾ..) ‘‘ಸೂಳ್ ಪಡೆಯಲಪ್ಪುದು ಕಾಣಾ.. ಮಹಾನಗರ ಶ್ವಾನ ದುರ್ಗಂಧ ದರ್ಶನದೊಳ್…!”
ಇನ್ನು ನಗರಗಳಲ್ಲಿ ‘ಸಾಕಿದ ನಾಯಿ’ಯ ಮಾಲೀಕರುಗಳ ಬಳಿ ಕನ್ನಡದಲ್ಲಿ, ‘ನಿಮ್ಮನೆ ನಾಯಿ’ ಎಂದು ಹೇಳೋದು ಮಹಾಪರಾಧ! ಸಾವಿರಾರು ರೂಪಾಯಿ ಪೀಕಿ ತಮ್ಮ ಅಂತಸ್ತಿಗೆ ಒಗ್ಗುವ ಜಾತಿ- ಕುಲೋತ್ತಮ- ಶ್ರೇಷ್ಠತಮ ತಳಿಯನ್ನು ಅವರು ತಲಾಶು ಮಾಡಿ ಮನೆ ತುಂಬಿಸಿ ಕೊಂಡಿರುತ್ತಾರೆ. ಅಲ್ಲದೇ ಅವುಗಳಿಗೆ ವಿಶಲ್, ಮ್ಯಾಕ್ಸ್, ಬರ್ಫಿ, ಬಂಟಿ, ಚಾರ್ಲಿ, ಓಸ್ಕರ್… ಹೀಗೆ ಬಹಳ ಸ್ಟ್ಯಾಂಡರ್ಡ್ ಹೆಸರುಗಳ ನಾಮಕರಣ ಆಗಿರುತ್ತದೆ. ಹಾಗಾಗಿ, ‘ನಿಮ್ಮ ನಾಯಿ ಹೇಗಿದೆ?’ ಎಂದೇನಾದರೂ ನಾವು ಕೇಳಿಬಿಟ್ಟರೆ, ಆ ಕ್ಷಣದಿಂದ ಅವರ ವಿಶ್ವಾಸ ವಲಯದಿಂದ ಹೊರಬಿದ್ದಿರುತ್ತೇವೆ. ಅಪರೂಪದ ಹೆಸರುಗಳನ್ನಿಡಲು ಅವುಗಳ ಯಜಮಾನರು ಅಂತರ್ಜಾಲ ಶೋಧಿಸಿ, ಸ್ನೇಹಿತರು ಬಂಧು ಬಳಗದೊಡನೆ ಚೆಂದದ ನಾಮಕರಣ ಶಾಸ್ತ್ರವನ್ನೂ ಮಾಡಿರುತ್ತಾರೆ. ವರ್ಷಾನುವರ್ಷ ಅಧಿಕೃತ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.
ಉಳ್ಳವರು ತಮ್ಮ ಪರಮಾಪ್ತ ‘ಡಾಗಿ’ಯ ದೇಖರೇಖಿಯನ್ನು, ದಿನಕ್ಕಿಷ್ಟು ಗಂಟೆಗಳ ಕಾಲ ಅವುಗಳನ್ನು ಲಾಲಿಸಿ, ಪಾಲಿಸಿ, ಸುತ್ತಾಡಿಸಿ, ಮುದ್ದಾಡಿಸಿ ಹೋಗಬೇಕೆಂಬ ಷರತ್ತಿನ ಮೇಲೆ ಅಧಿಕತಮ ಕೂಲಿ ಕೊಟ್ಟು ಒಬ್ಬ ಆಳನ್ನು ನೇಮಿಸಿಕೊಂಡಿರುತ್ತಾರೆ. ಅವರಿಗೆ ನಾಯಿ ಸಾಕುವುದೇ ವಿಶೇಷ ಕೆಲಸ. ಒಮ್ಮೊಮ್ಮೆ ಒಂದೇ ಮನೆಯಲ್ಲಿ ಸಾಕಿದ ಮೂರು ನಾಲ್ಕು ಹೆವೀವೇಯ್ಟ್ ನಾಯಿಗಳನ್ನು ವಾಯುವಿಹಾರಕ್ಕೆ ಕರೆದು ತರುವವರನ್ನು ನೋಡಿದರೆ ನನಗೆ ಸಖೇದಾಶ್ಚರ್ಯ ಆಗುತ್ತದೆ. ಒಮ್ಮೆ ನಾನು ನನ್ನ ಪತಿಯೂ ಹೊರಗೆ ಹೋಗುತ್ತಿರುವಾಗ, ನಾಲ್ಕು ದಢೂತಿ ನಾಯಿಗಳನ್ನು ದಪ್ಪ ಕಬ್ಬಿಣದ ಸರಪಳಿಗೆ ಸೇರಿಸಿಕೊಂಡು ಅವು ಎಳೆದತ್ತ ತಾನೇ ಅಕ್ಷರಶಃ ತೂರಾಡಿ, ಹಾರಿ ಹೋಗುತ್ತಿದ್ದ ಒಬ್ಬ ನರಪೇತಲನನ್ನು ನೋಡಿದೆವು. ನಾನು ಕುತೂಹಲಕ್ಕೆ, “ಒಂದು ನಾಯಿ ಮೇಯಿಸಲು ತಿಂಗಳಿಗೆ ಎಷ್ಟು ಕೂಲಿ ಕೊಡಬಹುದು?” ಎಂದೆ. “ದೊಡ್ಡ ನಾಯಿಗಳಿಗೆ ಸ್ನಾನ, ಊಟ, ವಾಕಿಂಗ್ ಎಂದೆಲ್ಲಾ ಸೇರಿ ಸುಮಾರು ಮೂರುನಾಲ್ಕು ಐದು ಸಾವಿರ ಕೊಡಬಹುದೇನೋ” ಎಂದರು. ಆತನ ನಾಯಿಪಾಡು ನೋಡಿ, “ಇದು ಬಹಳ ಕಡಿಮೆಯೇ” ಎಂದೆ. “ಒಂದು ನಾಯಿಗೆ ಅಷ್ಟು ಕೊಡುತ್ತಾರೆ..” ಎಂದಾಗ ಆಶ್ಚರ್ಯಪಟ್ಟಿದ್ದೆ! ಒಂದು ನಾಯಿಗೆ ತಿಂಗಳಿಗೆ ಕನಿಷ್ಟ ನಾಲ್ಕು ಸಾವಿರ ಕೊಡುವುದಾದರೆ, ನಾಲ್ಕು ನಾಯಿ ಸಾಕಲು – ಹದಿನಾರು ಸಾವಿರ!! ‘ಆ ನಾಯಿಯಿಂದ ಕಡಿಸಿಕೊಂಡರೆ ಆ ಹನ್ನೆರಡು ಸಾವಿರ ಡಾಕ್ಟರರ ಕಿಸೆಗೆ ಅಷ್ಟೂ ಹಣ ಹಾಕಬೇಕು’ ಎಂದು ನನ್ನವರು ನಕ್ಕಾಗ ನನ್ನ ಕಾಲು ಸರಸರ ಮನೆ ಹಾದಿತುಳಿಯಿತು.
ಮಾಲೀಕರು ಪ್ರವಾಸ ಹೋಗುವ ಪ್ರಸಂಗ ಬಂದಾಗ, ಅನುಕೂಲ ಇದ್ದರೆ, ತಮ್ಮ ಜೊತೆಯಲ್ಲೇ ತಮ್ಮ ‘ಪೆಟ್’ಗಳನ್ನೂ ಕರೆದುಕೊಂಡು ಹೋಗುತ್ತಾರೆ. ಇಲ್ಲದಿದ್ದರೆ, ತಾವು ಹಿಂದಿರುಗಿ ಬರೋವರೆಗೂ ಅವುಗಳನ್ನು ಬಹಳ ಜೋಪಾನ ನೋಡಿಕೊಳ್ಳುವ ಟ್ರಸ್ಟೆಡ್, ರಿಜಿಸ್ಟರ್ಡ್ ಸಂಘ-ಸಂಸ್ಥೆಗಳಲ್ಲಿ ನಿಗದಿತ ಶುಲ್ಕ ಪಾವತಿ ಮಾಡಿ ಅವುಗಳನ್ನು ಬಿಟ್ಟುಹೋಗುವ ಅನುಕೂಲ ಕಲ್ಪಿಸಿಕೊಂಡಿರುತ್ತಾರೆ.
ಸಾಕು ನಾಯಿಗಳ ಸುತ್ತಾಟ ಎಂದರೆ, ಕೇವಲ ಕಾಲ್ನಡಿಗೆಯ ವಾಕಿಂಗಿನ ಓಡಾಟವಲ್ಲ. ಅವುಗಳನ್ನು ಲಕ್ಷಾಂತರ ಮೌಲ್ಯಗಳ ವಾಹನಗಳಲ್ಲೂ ಓಡಾಡಿಸುತ್ತಾರೆ. ಅವುಗಳಿಗೆಂದೇ ಇರುವ ವಿಶೇಷ ಫುಡ್ಡುಗಳನ್ನೇ ಹಾಕುತ್ತಾರೆ. ಅದಕ್ಕೆ ಯಾವುದೋ ಕಿತ್ತೋದ ಅಲ್ಯುಮೀನಿಯಂ ಅಥವಾ ಪ್ಲಾಸ್ಟಿಕ್ಕಿನ ಪ್ಲೇಟುಗಳನ್ನು ಬಳಸುವುದಿಲ್ಲ. ಥಳಥಳ ಹೊಳೆಯುವ ಫಳಫಳ ಮಿರುಗುವ ನಾನಾ ಬಗೆಯ ಬಣ್ಣ, ಆಕಾರಗಳಲ್ಲಿ ಸಿಗುವ ಪಾತ್ರೆಗಳೇ ಆಗಬೇಕು. ಅವುಗಳ ಮೈ ತಿಕ್ಕಿ ತೊಳೆಯಲು ಘಮ್ಮೆನುವ ಶ್ಯಾಂಪೂ- ಸೋಪುಗಳನೇ ಕೊಳ್ಳಬೇಕು. ಇನ್ನು ಕಾಯಿಲೆ ಬಿದ್ದರೆ, ಗಾಯಗೊಂಡರೆ ಸಾವಿರಾರು ರೂಪಾಯಿಗಳಿಗೆ ಮೋಸವಿಲ್ಲದಂತೆ ಬಿಲ್ ನೀಡುವ ‘ಪೆಟ್ ಕ್ಲಿನಿಕ್ಕು’ಗಳೂ, ‘ಪೆಟ್ ಶಾಪು’ಗಳೂ ನಗರದ ಬಹುತೇಕ ಎಲ್ಲಾ ಪ್ರತಿಷ್ಠಿತ ಬಡಾವಣೆಗಳ ಅವಿಭಾಜ್ಯ ಅಂಗವಾಗಿ ತಲೆ ಎತ್ತಲೇ ಬೇಕು. ಹೀಗೆ ಶ್ರೀಮಂತ ಒಡೆಯರ ಸ್ಟೇಟಸ್ ಮೇಲೇರಿಸುವ ಹಾಗೂ ಅವರಿಂದ ಆಯಾಚಿತವಾಗಿ ರಾಜೋಪಚಾರಗಳನು ಪಡೆಯುತ್ತಿರುವ ಯೋಗ್ಯ ನಾಯಿಗಳ ಯೋಗ ಕಂಡವರು ‘ತಾವಾದರೂ ಒಂದು ನಾಯಾಗಬಾರದಿತ್ತೇ..!’ ಎಂದು ಒಮ್ಮೆಯಾದರೂ ಕೊರಗದೆ ಇರಲಾರರು.
ಸುಮ್ಮನೆ ಕಾಟಾಚಾರಕ್ಕೆ ಶ್ವಾನದೇವನನ್ನು ಯಕಶ್ಚಿತ್ ನಾಯಿ ಎಂದು ತಾತ್ಸಾರ ಮಾಡುವಂತೆಯೇ ಇಲ್ಲ. ಸಾಕ್ಷಾತ್ ಯಮರಾಯನೇ ಆ ವೇಷದಲ್ಲಿ ಸಶರೀರಿ ಆಗಿ ಧರ್ಮರಾಯನೊಡನೆ ಸ್ವರ್ಗಾರೋಹಣ ಮಾಡಿದ ಕತೆ ನೆನಪು ಮಾಡಿಕೊಳ್ಳೋಣ. ಅತಿಲೋಕ ಧೀಮಂತ ಸುಂದರಿ ದ್ರೌಪದೀ ಸಮೇತ ಭೀಮಾರ್ಜುನ, ನಕುಲ ಸಹದೇವರೂ ಸಹ ಈ ಪರೀಕ್ಷೆಯಲ್ಲಿ ಸೋತರೆಂಬುದು ಮರೆಯಬಾರದ ಕತೆ. ಇನ್ನು ವಿಶ್ವಾಮಿತ್ರ ಮುನಿ ಬರಗಾಲದಲ್ಲಿ ಬರಗೆಟ್ಟ ಹಾಗೆ ಶ್ವಾನವನ್ನೇ ಶ್ವಪಾಕ ಮಾಡಿದ ಕತೆಯೂ ಇಲ್ಲವೇ!?
ನಗರಗಳಲ್ಲಿ ಬೀದಿ ನಾಯಿಗಳಿಗೇನು ಬರವೇ? ಅವುಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಿ, ಗುರುತಿಗೆ ಕಿವಿ ಕತ್ತರಿಸಿ ಪುನಃ ಹಿಡಿದು ತಂದ ಬೀದಿಯಲ್ಲೇ ಬಿಟ್ಟು ಹೋಗುವ ನಗರ ಪಾಲಿಕೆಯವರ ಬುದ್ಧಿವಂತಿಕೆಯೂ ಸಮಾಜ ಸೇವೆಯೂ ವಿಮರ್ಶಾರ್ಹವೇ… ಯಾರ ಮನೆಯನ್ನೂ ಕಾವಲು ಕಾಯದ ಇಂತಹ ನಾಯಿಗಳು ಅನ್ನವನ್ನು ಕಂಡು ಎಷ್ಟು ವರ್ಷಗಳಾಗಿರುತ್ತದೆಯೋ! ಏಕೆಂದರೆ, ಬೇಕರಿಯ ಬಿಸ್ಕೆಟ್ಟು ಬನ್ನುಗಳನ್ನು ತಿಂದೂ ತಿಂದೂ ಮನೆಯಲ್ಲಿ ಮಾಡಿದ ಸಪ್ಪೆ ಅನ್ನ ತಿಂದು ಅವುಗಳ ಆರೋಗ್ಯಸ್ಥಿತಿ ಸ್ಥಿರವಾಗಿರಲು ಹೇಗೆ ಸಾಧ್ಯ?
ವಿದೇಶಗಳಲ್ಲಿ ನಾಯಿಯೊಂದಿಗೆ ಹೊರಗೆ ಹೋದಾಗ ಮಾಲೀಕರು ಕಡ್ಡಾಯವಾಗಿ ಕೈಚೀಲ, ಕೈಗವಸು ತೆಗೆದುಕೊಂಡು ಹೋಗಬೇಕೆನ್ನುವ ನಿಯಮವಿದೆಯಂತೆ. ಅದು ವಿಸರ್ಜಿಸಿದ ತ್ಯಾಜ್ಯವನ್ನು ಅವರು ಸಂಗ್ರಹಿಸಿಕೊಳ್ಳಬೇಕು ಅಥವಾ ಅಲ್ಲಿರುವ ನಿರ್ದಿಷ್ಟ ಕಸದ ಬುಟ್ಟಿಗೆ ಹಾಕಬೇಕು. ಇಲ್ಲದಿದ್ದರೆ ಮಾಲೀಕರಿಗೆ ಭಾರಿ ಮೊತ್ತದ ದಂಡ ಅಥವಾ ಕಠಿಣ ಸಜೆಗಳನ್ನು ಅಲ್ಲಿ ವಿಧಿಸಲಾಗುವುದಂತೆ. ನಮ್ಮಲ್ಲೂ ಈ ರೀತಿ ಕಾನೂನು ಜಾರಿಗೆ ಬಂದರೆ..!? ಬಂದರೆ ಏನು, ಕೆಲವು ಮಹಾನಗರ ಪಾಲಿಕೆ ಅಥವಾ ಪೌರಾಡಳಿತ ಕಚೇರಿಗಳ ನಿಯಮಗಳಲ್ಲಿ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ‘ದಂಡನಾರ್ಹ ಅಪರಾಧ’ ಎಂದು ಪರಿಗಣಿಸಲಾಗಿದೆ. ಆದರೆ ಈ ಬಗೆಯ ಕಾನೂನುಗಳು ಜಾರಿಗೆ ಬರುವುದು ಹೇಗೆ ಮತ್ತು ಯಾರಿಂದ ಎಂಬುದು ಮಾತ್ರ ಯಕ್ಷಪ್ರಶ್ನೆ….
ಕೆಲವೊಮ್ಮೆ ವೈಯಕ್ತಿಕ ದ್ವೇಷಕ್ಕೂ ಸಾಕು ಪ್ರಾಣಿಗಳು ಬಲಿಯಾಗುತ್ತವೆ. ವಿಷ ಉಣಿಸಿಯೋ, ಅಪಘಾತ ಮಾಡಿಸಿಯೋ ಕೊಲ್ಲುವುದು ಮನುಷ್ಯರಾದವರು ಮಾತ್ರ ಮಾಡಬಹುದಾದ ನೀಚ ಕ್ರಿಯೆ. ಮತ್ತೆ ಕೆಲವು ಕಡೆ ತಮಗೆ ಆಗದವರ ಮೇಲೆ ನಾಯಿಗಳನ್ನು ‘ಚೂ..’ ಬಿಟ್ಟು ಕಚ್ಚಿಸುವುದೂ ಉಂಟೆಂಬ ವಿಷಯ ಗೊತ್ತಾದಾಗ ಭಯವಾಗುತ್ತದೆ.
ವಿಶ್ವದಾದ್ಯಂತ ಸುಮಾರು ಮುನ್ನೂರಕ್ಕೂ ಮಿಕ್ಕ ಶ್ವಾನ ತಳಿಗಳಿವೆಯಂತೆ. ಮನುಷ್ಯ ಪ್ರಾಣಿಗಳ ಬಾಂಧವ್ಯದ ವಿಚಾರದಲ್ಲಿ ನಾಯಿಗಳಿಗೆ ನೀಡಿರುವ ಅಗ್ರಸ್ಥಾನ ಬೇರೆ ಯಾವುದಕ್ಕೂ ಇಲ್ಲ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಆತಗೂರಿನಲ್ಲಿ ಒಡೆಯನ ಪ್ರಾಣ ಕಾಯ್ದು ವೀರಮರಣ ಅಪ್ಪಿದ ‘ಕಾಳಿ’ ಎಂಬ ನಾಯಿಯ ಮೇಲೆ ಬರೆಸಿದ ವೀರಶಾಸನವೂ ಸಹ ಇಂಥ ವಿಷಯವನ್ನು ಮತ್ತಷ್ಟು ಗಟ್ಟಿಮಾಡುತ್ತದೆ. ಹಾಗೆಯೇ ಹಿಂದಿರುಗಿ ಬರಲಾರದ ಒಡೆಯ ಬರುವನೆಂದೇ ತನ್ನ ಜೀವಮಾನಪೂರ್ತಿ ರೈಲು ನಿಲ್ದಾಣಕ್ಕೆ ನಿಗದಿತ ಸಮಯದಲ್ಲಿ ಬಂದು ಕಾಯುತ್ತಿದ್ದ ಜಪಾನಿನ ‘ಹಚಿಕೋ’, ಹಿಮಚ್ಛಾದಿತ ಪರ್ವತ ವಲಯದಲ್ಲಿ ತನ್ನೂರಿನ ಮಕ್ಕಳ ಆರೋಗ್ಯ ಸುರಕ್ಷತೆಗಾಗಿ ಲಸಿಕೆ ತರಲು ಕಿಲೋಮೀಟರ್ ಗಟ್ಟಲೆ ಹಿಮದಲ್ಲಿ ಓಡಿದ ಆಲಾಸ್ಕಾದ ‘ಟೋಗೋ’, ಮಾನವರ ವೈಜ್ಞಾನಿಕ ಕುತೂಹಲ- ಸಾಹಸಗಳ ವಿಸ್ತರಣೆಯ ಸಲುವಾಗಿ ತನ್ನ ಜೀವನವನ್ನೇ ಮುಡುಪಿಟ್ಟು ಬಾಹ್ಯಾಕಾಶಕ್ಕೆ ಹಾರಿದ ನಾಸಾದ ‘ಲೈಕಾ’… ಒಂದೇ ಎರಡೇ ಜಗತ್ತಿನ ತುಂಬಾ ಇಂತಹ ಹಲವು ಸಾವಿರ ಸ್ವಾಮಿನಿಷ್ಠ ಶ್ವಾನಗಳ ಉದಾಹರಣೆ ಕಾಣಬಹುದು. ಈಗಲೂ ಪೊಲೀಸ್, ಮಿಲಿಟರಿ, ಬಾಂಬ್ ನಿಷ್ಕ್ರಿಯ ದಳ,
ರಹಸ್ಯಬೇಧನೆ, ರಕ್ಷಣಾ ವ್ಯವಸ್ಥೆ ಮೊದಲಾದ ವಲಯಗಳಲ್ಲಿ ಚಾಕಚಕ್ಯತೆಯಿಂದ ಕೆಲಸ ಮಾಡುವ ವಿವಿಧ ಶ್ವಾನ ತಳಿಗಳಿವೆ. ನಮ್ಮ ಕರುನಾಡಿನ ‘ಮುಧೋಳ’ ತಳಿ ಇಂತಹ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಅನಾದಿ ಕಾಲದಿಂದಲೂ ಬೇಟೆಗಾಗಿ ಕಾಡಲೆಯುತ್ತಿದ್ದ ಮಾನವನ ಮೊದಲ ಸಂಗಾತಿಯೂ ನಾಯಿಗಳೇ..
ನಾವಾದರೂ ಅಷ್ಟೇ ಒಂದು ತುತ್ತು ಅನ್ನವೋ, ನಾಲ್ಕು ಬಿಸ್ಕೆಟ್ಟು ಬ್ರೆಡ್ಡಿನ ತುಂಡುಗಳನ್ನೋ ಹಾಕಿಬಿಟ್ಟರೆ ನಮ್ಮ ಹಿಂದು ಮುಂದೆಯೇ ಬಾಲ ಆಡಿಸುತ್ತಾ ಸುಳಿಯುವ ನಾಯಿಗಳನ್ನು ಪ್ರತ್ಯಕ್ಷ ಕಾಣಬಹುದು. ಆಗೆಲ್ಲಾ ಅವುಗಳ ನಿಷ್ಕಾಮ ಪ್ರೀತಿಗೆ ನಮ್ಮ ಮನಸ್ಸು ಸೋಲದಿರದೇ? ಮನೆಯ ಸದಸ್ಯನಂತೆ ಇರುವ ಸಾಕು ನಾಯಿ ಮರಣ ಅಪ್ಪಿದರೆ ಆಗುವ ನೋವು, ಕಾಡುವ ದುಃಖ ಆತ್ಮಬಂಧುವನ್ನು ಕಳೆದುಕೊಂಡಾಗ ಇರುವಂತೆಯೇ ಇರುತ್ತದೆ.
ಈ ಲೇಖನದಲ್ಲಿ ಹೇಳಲು ಹೊರಟಿರುವುದು ಇಷ್ಟೇ. ಶ್ವಾನ ಪ್ರೇಮ ಒಳ್ಳೆಯದ್ದು ಹಾಗೂ ಗೌರವಪೂರ್ಣವಾದುದು. ಆದರೆ, ನಮ್ಮ ನಡೆ ಸಮಾಜದ ಇತರೆ ನಾಗರಿಕರ ಜೀವನ ದುರ್ಭರಗೊಳಿಸುವಂತೆ ಇರಬಾರದು. ಬೇರೆ ಸಹ ಜೀವಿಗಳಿಗೆ ಮುಜುಗರ ಆಗದಂತೆ, ಪ್ರಾಣಿಗಳನ್ನು ಸಾಕುವುದರ ಜೊತೆಗೆ, ಅದರೊಡನೆ ಬರುವ ಇತರೆ ಎಲ್ಲಾ ಜವಾಬ್ದಾರಿಗಳನ್ನೂ ಸೂಕ್ತವಾಗಿ ನಿಭಾಯಿಸುವ ನಾಗರಿಕ ನಡವಳಿಕೆಯನ್ನು ಮನುಷ್ಯರಾದ ನಾವು ತುರ್ತು ರೂಢಿಸಿಕೊಂಡು, ಸರ್ವರಿಗೂ ಸಹ್ಯವಾಗುವ ಸಮಾಜವನ್ನು ನಿರ್ಮಿಸಿಕೊಳ್ಳಬೇಕು.
ವಸುಂಧರಾ ಕದಲೂರು.
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ