ಕಡೇ ಮಾತು

ಕಾವ್ಯಯಾನ

ಕಡೇ ಮಾತು

ವಿಭಾ ಪುರೋಹಿತ

ತಡೆಯಬೇಡ ಗೆಳತಿ
ಅಳೆಯಬೇಡ
ಪಾವತಿಸಬೇಡ
ಕಡ ಕೊಟ್ಟಾದರೂ
ಕ್ಷಣಗಳ ಕರೆತರುವೆ

ಊರದೇವರ ಮುಂದೆ
ಬಲದ ತಿರುವಿನಲ್ಲಿ
ಮೀನು ಬಾಜಾರಿನಲಿ
ಒತ್ತಡದ ಕೆಲಸದಲ್ಲಿ
ಫೋನು ಎತ್ತಿದ್ದೇ ತಡ
ಕಡೆಗೆ ಮಾಡುವೆನೆಂದು
ಕೊರಳ ಕತ್ತರಿಸುತ್ತಾಳೆ

ಕಡೇ ಮಾತಿಂದ
ಭಾವನೆಗಳ ಭಾಗಿಸಿದರೂ
ನಿಶ್ಶೇಷವಾಗಲಾರೆ
ಕಡಗೋಲು ಆಡಿಸಿದಂತೆ
ಚಡಪಡಿಸಿ
ಉದಿಸಲಾರದ ನವನೀತ
ತುಟಿಯಲ್ಲಿ ಕಮರಿ
ಕವಿತೆಯಾಗದೇ ಒಣಗಿ
ಉಳಿದ ಮಾತುಗಳ ಚರಟ
ಕಥೆಯ ಬರೆಸುವಹಾಗೆ
ಲೋಟದಲಿ ನಿರ್ಜಲ
ನಿಟ್ಟುಸಿರನ್ನೇ ಗಟಗಟ
ಕುಡಿಸಿದಳು
ಹುಳಿತೇಗು ಹೂಂಕರಿಸಿದಾಗ
ಮಥಿಸದ ಮಾತುಗಳ
ಅಜೀರ್ಣತೆ ಅರ್ಥವಾಗಿದ್ದು

ಗೆಳೆತನವೆಂದರೆ
ಬರೀ ಕೆನೆಗಟ್ಟುವದಲ್ಲ
ಕವಿತನದಲಿ ಘಂಮೆನುವ
ಘೃತವಲ್ಲವೇ…..

***************************

Leave a Reply

Back To Top