ಮಿರಗಿನ ಮಳೆ

ಲೇಖನ

ಮಿರಗಿನ ಮಳೆ

ರೇಖಾ ರಂಗನಾಥ

ಒಂದೇ ಸಮ ಬಿಟ್ಟು ಬಿಡದೆ ಸುರಿದ ಮಿರಗಿನ ಮಳೆಗೆ ಇಂದು ಕೊಂಚ ಬಿಡುವು.ಕಳೆ ತುಂಬಿ ತುಳಕೋ ಇಳೆ ನೋಡಲೆಂದೆ   ಸೂರ್ಯರಶ್ಮಿ ಅವತರಿಸಿದ್ದವು. ದಿನ ಪೂರ್ತಿ ಕೈಯಲ್ಲೆಯಿದ್ದು, ಊಟ ಮಾಡುವಾಗಲೂ ಪಕ್ಕದಲ್ಲೆಯಿದ್ದು, ರಾತ್ರಿಗೆಲ್ಲ ಮೇಸಜ್ಗಳನ್ನು ಓದಿ ಉತ್ತರಿಸಿಯೇ ದಣಿದು, ಕಣ್ಣು ರೆಪ್ಪೆ ಎಳೆದು ಎಡತಾಕಿ ಮುಚ್ಚುವಾಗ ಮೊಬೈಲ ದೂರ ಸರಿಸಿ ಹಾಸಿಗೆ ಕಾಣುತ್ತಿದ್ದಿದ್ದು.ನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಮೊಬೈಲ ಕಳೆದೆರಡು ತಿಂಗಳಿನಿಂದಲೂ ಗೋಡೆ ಕಪಾಟಿನಲ್ಲಿ ಬೆಚ್ಚಗೆ ಕರ್ಚಿಫವೊಂದರ ಹೊದಿಕೆಯಲ್ಲಿ ಪ್ರಪಂಚದ ಗೊಡವೆ ಕಳೆದುಕೊಂಡು ಅನಾಥ ಅಂಗಾತಾಗಿದೆ. ಇಲ್ಲಿಗೆ ಬರುವಾಗ ಅಕ್ಕ ತಲುಪಿದ ತಕ್ಷಣ ಕಾಲ್ ಮಾಡು ಅಂದಿದ್ಲು; ತಲುಪಿದ್ದು ತಿಳಿಸಿದ್ದೆ. ಮತ್ತೆ ಮತ್ತೆ ಕಾಲ್ ಮಾಡ್ತಿರು ಅಂದ್ಲು, “ಹುಂ” ಎಂದೆ….ಮತ್ತೆ ಮಾತಾಡಲೇ ಇಲ್ಲ. ಮಾತಾಡಬಾರದು ಅಂತೇನಿಲ್ಲ, ಮನಸ್ಸಾಗಿಲ್ಲ ಮತ್ತೆ ಮಾತಾಡೋಕೆ. ಹೊಟ್ಟೆಲಿ ಬಚ್ಚಿಟ್ಟ ಸಂಕಟ ದುತ್ತ ಅಂತ ಆಚೆ ಬರುತ್ತೆ. ದುಃಖದ ಒರತೆ ತೋಡಿದಷ್ಟು ತುಂಬುತ್ತೆ. ನನ್ನ ಗೋಳು ನನ್ನ ಕರ್ಮ.ಎಷ್ಟು ಅಂತ ತೋಡುವುದು ,ಅಭಿಮಾನ ಅಡ್ಡಿ ಬರುತ್ತೆ. ಇವತ್ತಿನ ಹೊಟ್ಟೆ ಹಸಿವು ತೀರಿದೆ.ಅಕ್ಕನೊಟ್ಟಿಗೆ ಮಾತಾಡ ಬೇಕೆನಿಸಿದೆ. ಅದಕ್ಕೂ ಇನ್ನೊಬ್ಬರ ಮನೆ ಕರೆಂಟು ಬಳುವಳಿಯಿಂದಲೇ ಮೊಬೈಲ ಚಾರ್ಜ ಆಗ್ಬೇಕು. ನೆಟ್ ವರ್ಕ ಸಿಗಬೇಕಿದ್ರೆ ಪರ್ಲಾಂಗ ದೂರ ಹೊಗಬೇಕು.ಸದ್ಯಕ್ಕೆ ಅವಳೊಬ್ಬಳದೆ ತುಸು ಆಸರೆ.

       ಅಪ್ಪ ಸ್ವರ್ಗದ ಮೆಟ್ಟಿಲು ತುಳಿದು ಎಂಟು ವರ್ಷನೇ ಕಳೆದೋಯ್ತು. ಅಮ್ಮ ಇದಾಳೆ.  ಮಿರಗಿನ ಮಳೆಲಿ ನನ್ನ ಕಣ್ಣೀರು ಕರಗಿ ಹರಿದು ಹಳ್ಳ ಕೊಳ್ಳ ನದಿ ದಾಟಿ ಸಾಗರ ಸೇರುವಾಗಲೆಲ್ಲ ದಣಿದ ಕಣ್ಣುಗಳಿಗೆ ಒರಗಲು ಆಸರೆಯಾಗಿ ಅಮ್ಮನ ಹೆಗಲು ಬೇಕಿತ್ತು; ನನ್ನೊಟ್ಟಿಗೆ ಅಮ್ಮನ ಕರೆ ತಂದ್ದಿದ್ದು. ಇದ್ದೊಬ್ಬ ಅಣ್ಣ ಫ್ಯಾಕ್ಟರಿ ಕೆಲಸ ಅಂತ ಪಟ್ಟಣ ಸೇರಿದ್ದ. ಈಗ ಕಳೆದ ಹಲವು ತಿಂಗಳಿಂದ ಕೊರೊನಾ… ಲಾಕ್ ಡೌನ…ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ತಿಂಗಳಲ್ಲಿ ಹದಿನೈದು ದಿನ ಕೆಲಸ. ದಿನಗೂಲಿಯಂತೆ ಸಂಬಳ. ಕೆಲಸವಿಲ್ಲದ ಸಮಯಕ್ಕೆ ಸಂಬಳವಿಲ್ಲ. ಅವನ ಸಂಸಾರ ನೊಗ ಭಾರ ಹೊರುವುದು ಅವನಿಗೆ ಕಷ್ಟಕರ. ಅಪ್ಪ ಹಳ್ಳಿಲ್ಲಿದ್ರು ತಕ್ಕಮಟ್ಟಿಗೆ ಮಕ್ಕಳನ್ನೆಲ್ಲ ವಿಧ್ಯಾವಂತರನ್ನಾಗಿಸಿದ್ದ. ಅವರ ಬದುಕಿಗೆ ಅವರ ಓದೇ ದಾರಿಯಾಗಿತ್ತು. ಬದುಕು ಕಟ್ಟಿಕೊಳ್ಳಲು ಎಲ್ರೂ ಪಟ್ಟಣ ಸೇರಿದ್ರು. ಅವರವರ ಜೀವನೋಪಾಯಕ್ಕೆ ಯಾವುದೇ ತೊಂದ್ರೆಯಿರಲಿಲ್ಲ. ಹೆಚ್ಚಿನದಕ್ಕೆ ಕಾಸು ಚೆಲ್ಲುವಂತಿರಲಿಲ್ಲ. ಒಟ್ಟಾರೆಯಾಗಿ ಅವರವರ ಸಂಸಾರದಲ್ಲಿ ಅವರು ಸುಖಿಯಾಗಿದ್ರು.

           ವುಹಾನನಲ್ಲಿ ಹುಟ್ಟಿದ ಕೊರೊನಾ ಭಾರತಕ್ಕೂ ಒಕ್ಕರಿಸಿತು. ಗಾಳಿಲಿ ವಿಷಕಾರಿ ಅನಿಲ ಹರಡುವಂತೆ ದಿನದಿನಕ್ಕೂ ಹೆಚ್ಚಾಗತನೇ ಹೋಯ್ತು. ದೀಡಿರನೆ ಒಂದು ದಿನ ಲಾಕ್ ಡೌನ ಅಂತ ಘೋಷಣೆಯಾಯ್ತು. ನಾನು ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ನರ್ಸರಿ ಸ್ಕೂಲ ಟೀಚರ ಆಗಿದ್ದೆ. ಮಗ ಸುಚೇತ ನಾಲ್ಕು ವರ್ಷದವನು. ನನ್ನವರು ಬಾಣಸಿಗರು. ಮದುವೆ, ನಿಶ್ಚಿತಾರ್ಥ,ಅರಕ್ಷತೆ,ಗೃಹಪ್ರವೇಶ,ಹುಟ್ಟು ಹಬ್ಬ, ನಿವೃತ್ತಿ ಹೊಂದಿದವರಿಗೆ ಬೀಳ್ಕೊಡುಗೆ ಹೀಗೆ ಒಂದಲ್ಲ ಒಂದು ಕಾರ್ಯಕ್ರಮಗಳು ಪಟ್ಟಣದಲ್ಲಿ ಇದ್ದೆ ಇರುತ್ತಿತ್ತು.ಕೈ ತುಂಬ ಸಂಬಳದೊಟ್ಟಿಗೆ ಆಗಾಗ  ಕಾರ್ಯಕ್ರಮದ ಸಿಹಿ ಅಡುಗೆ ,ತರಹೇವಾರಿ ಭಕ್ಷಗಳೆಲ್ಲದು ಅಡುಗೆ ಮನೆ ಪಾತ್ರೆಲಿ ಉಂಡು ಮಿಕ್ಕುವುದು. ಹಳ್ಳಿಲೆಲ್ಲ ಮಿಕ್ಕುವಂತಿದ್ರೆ; ಚಿಕ್ಕಪ್ಪ, ದೊಡಮ್ಮ, ಮಾವ, ಅಂತ್ಲೆ ಕರಿತಾನೇ ಯಾವ ಧರ್ಮದವರಾದ್ರು ನಮ್ಮ ಬಂಧುಗಳಾಗ್ತಾರೆ, ಅವರಿಗೆಲ್ಲ ಹಂಚಬಹುದು. ಪಟ್ಟಣದ ಕಥೆನೇ ಬೇರೆ. ಸಂಬಂಧಗಳ ಬೆಲೆ ಗೊತ್ತಿಲ್ಲದೆಯಿರೋ ಮುಂಡಗಳು. ಲಾಕ್ ಡೌನ ನಂತರ ಮದುವೆ,ಮುಂಜಿ,ಎಲ್ಲ ಕಾರ್ಯಕ್ರಮಗಳು ನಿಂತು ಹೋಯ್ತು.ಅನಿವಾರ್ಯವಿದ್ದಲ್ಲಿ ಮೂವತ್ತು-ನಲವತ್ತರಷ್ಟು ತಮ್ಮ ಬಂಧುಗಳ ಮಧ್ಯೆಕಾರ್ಯಕ್ರಮ ನಡೆಸುವ ಅವಕಾಶವಿತ್ತು.ಸಧ್ಯದ ಪರಸ್ಥಿತಿಲಿ ಬಾಣಸಿಗರನ್ನು ಯಾರು ಕರೆಯುತ್ತಿಲ್ಲ.ಮನೇಲಿದ್ದ ಅನುಭವಸ್ಥರೊಂದಿಗೆ ನಳಪಾಕ ಸಿದ್ಧವಾಗುತ್ತೆ.ಬಾಣಸಿಗರೆಲ್ಲ ತಮ್ಮ ಖಾಲಿ ಪಾತ್ರೆ-ಪಗಡ ಹಿಡಿದು ಕೂರುವಂತಾಗಿದೆ.ಶಾಲಾ-ಕಾಲೇಜು ತರಗತಿಗಳು ನಡೆಯದೇ ಬಾಗಿಲು ಜಡಿದು ಕೂತಿವೆ. ಪುಟ್ಟ ಮಕ್ಕಳು ,ಚೆಲ್ಲಾಟ..ಕೊರೊನಾ ಅರ್ಥ ಮಾಡಿಕೊಳ್ಳದಿರುವ ಅರಳುವ ಮನಸ್ಸುಗಳು.ಹತ್ತು ಹೆತ್ತಾಗಲು ಒಂದೇ ತರ ಪ್ರೀತಿ ತೋರುವ ತಂದೆ-ತಾಯಿಗಳಿಗೆ ,ಈಗಿರುವ ಒಂದು-ಎರಡು ಅತಿ ಎನ್ನುವಷ್ಟರ ಮಟ್ಟಿಗೆ ಅಂಗೈಯಲ್ಲಿಟ್ಟು ಜೋಪಾನ ಮಾಡುವ ಮನಸ್ಥಿಗೆ ಸರ್ಕಾರ ಒಂದು ವೇಳೆ ಶಾಲೆ ತೆರೆದರು ಪಾಲಕರು ಕಳಿಸಲು ಸಿದ್ಧರಿಲ್ಲ.ಅಲ್ಲಿಗೆ ಈ ವರ್ಷದಲ್ಲಿ ನರ್ಸರಿ ಶಾಲೆಗಳು ತೆರೆಯುವ ಸಂಭವ ಅತಿ ಕಡಿಮೆ.ಪಟ್ಟಣದಲ್ಲಿ ನಾನು ನರ್ಸರಿ ಶಾಲೆ ಅವರು ಬಾಣಸಿಗರು,ಒಟ್ಟಿನಲ್ಲಿ ಜೀವನೋಪಾಯ ಸಾಂಗವಾಗಿಯೆ ನಡೆದಿತ್ತು.ದಿಡೀರ ಲಾಕ್ ಡೌನ ಆದ ಬಳಿಕ ನನಗೆ ಶಾಲೆ,ಅವರ ಬಾಣಸಿಗತ ನೆಲೆಗುದಿಗೆ ಬಿತ್ತು.ಪುಟ್ಟ ಮನೆನೇ ಬಾಡಿಗೆ ಪಡೆದದ್ದು,ಕಡಿಮೆ ಎಂದಾಗಲು ಐದು ಸಾವಿರ ರೂಪಾಯಿ ಬಾಡಿಗೆ.ಕರೆಂಟು ಬಿಲ್ಲು ಎಳನೂರ ರಿಂದ ಎಂಟನೂರು, ಸಿಲೆಂಡರ ದುಡ್ಡು ಆರನೂರ ನಲವತೈದು,ನೀರಿನ ಬಿಲ್ಲು ಹಾಲು ಕಿರಾಣಿ,ಇದ್ದಕ್ಕಿದ್ದಂತೆ ಕೆಲವು ಸಾರೆ ಅನಾರೋಗ್ಯ ತಪ್ಪುವುದು.ಇವೆಲ್ಲದಕ್ಕೂ ಹಣ ಹೊಂದಿಸಲೆ ಬೇಕಾದ ಅನಿವಾರ್ಯತೆ. ನಮ್ಮಿಬ್ಬರ ದುಡಿಮೆ ಆಯಾ ತಿಂಗಳ ಖರ್ಚಿಗೆ ಅಂತ ಸರಿ ಹೋಗುವುದು. ಸ್ವಲ್ಪ ಮಿಕ್ಕಿಸಿ ಸುಚೇತನ ವಿಧ್ಯಾಭ್ಯಾಸಕ್ಕೆ ಕೂಡಿಡುವುದು.ದಿನಗಳು ಉರಳುತ್ತಿದ್ದವು.ದುಡಿಮೆ ಇರೋದು ಜೀವನ ಸಾಗೋದು.

                ಲಾಕ್ ಡೌನ ನಂತರ ಪಟ್ಟಣ ಬಿಟ್ಟು ಹಳ್ಳಿ ಸೇರಿದ್ದು.ಅಲ್ಪ ಸಲ್ಪ ಜಮೀನಿತ್ತು.ಅಣ್ಣನಿಗೆ ಫ್ಯಾಕ್ಟರಿ ಕೆಲಸ; ಹಳ್ಳಿಕಡೆ ತಲೆಹಾಕಿರಲಿಲ್ಲ. ಗಂಡ ಮಕ್ಕಳೊಂದಿಗೆ ಸ್ಥಿತಿವಂತಳಾಗಿದ್ದ ಅಕ್ಕನ ಬದುಕು ಜೇನುಗೂಡು. ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳಲಾಗದೇ ಹದಿನೆಂಟು ವರುಷಗಳ ಬಳಿಕ ಕೆಟ್ಟು ಹಳ್ಳಿ ಸೇರಬೇಕಾದ ಬದುಕು ನನ್ನದು.ತೀರ್ಥಹಳ್ಳಿಯಿಂದ ಮುಂದೆ ಹದಿನೆಂಟು ಇಪ್ಪತ್ತು ಕಿಲೋ ಮೀಟರ ದೂರದಲ್ಲಿ ನಮ್ಮ ಹಳ್ಳಿ.ಪೂರ ಮಲೆನಾಡು.ಮಳೆ ಧೋ ಎನ್ನುತ್ತೆ..ಹರಿದ ನಮ್ಮ ಕಣ್ಣೀರು ಕಾಣದಂತೆ.ಅಜ್ಜ ಕಟ್ಟಿಸಿದ ಹಳೆ ಮನೆ,ಸುಣ್ಣ ಬಣ್ಣ ವಾಸ ಆರೈಕೆ ಇಲ್ಲದೆ ಮಣ್ಣಿನ ಮನೆ ಕರಗುತಿದೆ.ಅಲ್ಲಲ್ಲಿ ಡಂಬು ಬಿದ್ದು ಇಲಿ ಹೆಗ್ಗಣಗಳು ಮನೆಯೊಳಗೆ ವಾಸ್ತವ್ಯ ಹೂಡಿವೆ.ಸುರಿಯೋ ಮಳೆಗೆ ಸೋರೋ ಮನೆಲಿ ಹತ್ತಾರು ಕಡೆ ಪಾತ್ರೆ ಪಗಡ ಇಟ್ಟದ್ದಾಯಿತು.ಧೋ… ಸುರಿಯೋ ಮಳೆಗೆ ನೀರು ತುಂಬಿ ಮನೆ ಕೆರೆಯಂತಾಗಿದೆ.ಸುಚೇತ ಕಾಗದದ ದೋಣಿ ತೇಲಿ ಬಿಡ್ತಾನೆ.ಹುಟ್ಟಿದಾಗಿನಿಂದಲೂ ಅವನಿಗೆ ಅಸ್ತಮಾ.ಎಷ್ಟು ಸಾಧ್ಯವೋ ಅಷ್ಟು ಅವನನ್ನ ಬೆಚ್ಚಗೆ ಇಡಬೇಕು.ಅಲ್ಲಿ ಮಳೆ ಶುರುವಾಗುತ್ತಿದ್ದಂತೆ ಇಲ್ಲಿ ಇವನ ಮೂಗು ಜಿನಗುತ್ತೆ.ಕಫ,ಕೆಮ್ಮು,ಮಳೆಗಾಲ ಕಳೆಯುವಷ್ಟರಲ್ಲಿ ಅವನ ಔಷದೋಪಚಾರವೇ ಸಾಕಷ್ಟಿರುತ್ತೆ.ಇನ್ನು ಅಮ್ಮ…ನನ್ನ ಕಣ್ಣೀರಿಗೆ ಹೆಗಲಾಗಲೆಂದೆ ಕರೆ ತಂದೆ.ಅವಳ ನೋವಿಗೆ ನಾನು ಆಸರೆ ಆಗಬೇಕಲ್ಲವಾ?…ಅವಳ ಮಂಡಿನೋವು ,ಕಾಲು ನೋವು,ಬೆನ್ನು ನೋವು,ಅದೆಲ್ಲದಕ್ಕೂ ಆಗಬೇಕಲ್ಲವಾ ಔಷದೋಪಚಾರ.ವಾಸವಾಗಿದ್ದ ಇಲಿ, ಹೆಗ್ಗಣಗಳನ್ನ ಓಡಿಸಿ ಸೋರುವ ಮನೆ ಮಲಗಲಾದ್ರು ಬೆಚ್ಚಗಿರಲೆಂದು ಉಳಿಸಿದ ಹಣದಲ್ಲಿ ಮನೆ ರೀಪೇರಿ ಅಂತ ಆಯ್ತು.ಅಲ್ಲಿಗೆ ಇಡಿಗಂಟು ಕರಗ್ತು.ಹದಿನೆಂಟು ವರುಷ ವಾರಸದಾರರು ಇಲ್ಲದನೆ ಇರೋ ಅಲ್ಪ ಸ್ವಲ್ಪ ಜಮೀನಿನಲ್ಲಿ ಕಸ ಕಾಡಂತೆ ಬೆಳೆದು ಕೂತಿದೆ.ಕಂಡವರ ಎಮ್ಮೆ ಕಟ್ಟಲೋ ,ಅವರ ಬಳಕೆಗೆ ಗಡ್ಡಾ ತೋಡಿ ನಮ್ಮ ಬಳಕೆಗೆ ಬಾರದಾಗಿದ್ದು,ಕಣ್ಣೇದುರೆ ಸಂಕಟ ಹುಟ್ಟಿಸುತ್ತೆ.ಮತ್ತೆ ಕೆಲವರು ಎಲ್ಲದು ಸವರಿ ತಮ್ಮದಾಗಿಸಿಕೊಳ್ಳೊ ಹುನ್ನಾರು ಹೂಡಿದ್ದಿದೆ.

       ಜಮೀನು ಕೆಲಸವೆಲ್ಲ ಅನುಭವಕ್ಕೆ ಇಲ್ಲದ್ದು .ಕೂಲಿ ಆಳಿಟ್ಟು ಕಳೆ ತೆಗೆದು ಹದ  ಮಾಡೋಣವೆಂದರೆ ದಿನಗೂಲಿ ಮೂನ್ನುರು ರೂಪಾಯಿ,ಅದನ್ನ ಎಲ್ಲಿಂದ ಹುಟ್ಟು ಹಾಕೋದು? ನಾವೇ ಮಾಡಿದರಾಯಿತು…ಕಂದ್ಲಿ,ಸಲಿಕೆ,ಗುದ್ಲಿ,ಹಿಡಿದು ನಿಂತರೆ ಮುಂದೆ ಕಳೆ ತೆಗೆದು ಮುಗಿಸುವದರಲ್ಲಿ ಹಿಂದೆ ಬೆಳೆದು ನಿಲ್ಲುತ್ತೆ.ಇದ್ದಕ್ಕಿದ್ದಂತೆ ಕೃಷಿ ಕೆಲಸ ಬಾರದ್ದು,ಒಗ್ಗದ್ದು,ತಿಳಿಯದು…ಕಲಿತು ಕೃಷಿ ನೆಟ್ಟು ಬೆಳೆ ಕೊಯ್ದು ಉಂಬೋವರಿಗೂ ಈಗ ಹೊಟ್ಟೆಗೆ ಎನು ಉಂಬುವುದು? ಹಸಿವಾದ್ರು ಯಾಕೆ ಇಟ್ಟಿದ್ದಾನೆ ಆ ಭಗವಂತ!

   ಮನೆ ಬಾಡಿಗೆಯಿಲ್ಲ.ಮನೆ ಹತ್ತಿರದಲ್ಲಿ ಕರೆಂಟ ಕಂಬನೆ ಇಲ್ಲಾ..ಕರೆಂಟ ಇಲ್ದನೆ ಮನೆ ಕತ್ಲು.ಇನ್ನು ಕರೆಂಟ ಬಿಲ್ಲಿನ ಮಾತೆಲ್ಲಿ.ಸುತ್ತ ಕಾಡು ಹಸಿ ಕಟ್ಟಿಗೆನೆ ಗುಡ್ಡೆ ಹಾಕಿ ಕಣ್ಣು ಕೆಂಪಗೆ ಊದಿಕೊಳ್ಳೊವರೆಗೂ ಊದಿ ಊದಿ ಒಲೆ ಕತ್ತಿಸೋದು.ಇನ್ನು ಸಿಲೆಂಡರಿಗೆ ಕಾಸು ಹೊಂದಿಸುವ ಅವಶ್ಯಕತೆಯಿಲ್ಲ. ನಲ್ಲಿಯಿಲ್ಲ; ನೀರಿನ ಬಿಲ್ಲು ಇಲ್ಲ.ಹಳ್ಳಿ ಜೀವನದಲ್ಲಿ ಖರ್ಚು ಕಡಿಮೆನೆ.ಹಾಗಾಗಿಯೆ ಗಂಟು-ಮೂಟೆ ಸಮೇತ ಇಲ್ಲಿ ಬಂದಿದ್ದು.ಆದ್ರೆ ಹೊಟ್ಟೆಗೆ ಹಿಟ್ಟು ಬೇಕಲ್ಲ. ಕೆಲಸ ಇಲ್ಲಾ ಅಂತಾದ ಮೇಲೆ ಕಿರಾಣಿ ಅಂಗಡಿಲಿ ಸಾಲಕ್ಕೆ ಅಂತ ದಿನಸಿ ಯಾರ ಕೊಡ್ತಾರೆ? ಅವರು ಕೊಡ್ಲಿಕ್ಕೆ ಒಂದು ದಿನವೋ? ಎರಡ ದಿನವೋ? ಎಷ್ಟು ತಿಂಗಳೋ,ವರುಷವೋ? ಹೀಗೆ ಅಂತ ಯಾರಿಗೂ ತಿಳಿದಿಲ್ಲ.ದಿನಸಿ ಅಂಗಡಿಯವನು ದಿನಸಿ ಕೊಡಲ್ಲ ಅಂದ್ಬಿಟ್ಟ. ಅಂಗಳದಲ್ಲಿ ಆಡೋ ಹುಡುಗ ಸುಚೇತ..ಅಮ್ಮಾ ಹಸಿವು..ಹಸಿವು..ಅಂತಾನೇ ಇರ‍್ತಾನೆ.ಮದುವೆ ಮುಂಜಿಮನೆ ಹಬ್ಬದಡುಗೆ ಉಂಡು ಅಭ್ಯಾಸವಾಗಿದೆ.ಇಗ ಬಾಯಿ ಚಪಲ.ಹತ್ತು ರೂಪಾಯಿ ಬಿಸ್ಕತ್ತ ಪ್ಯಾಕೆಟಗೂ ಯೋಚಿಸೋ ಪರಿಸ್ಥಿತಿ. ಕೆಲಸ ಸಿಗೋವರೆಗೂ ಬಿ.ಪಿ.ಎಲ್.ರೇಷನ ಕಾರ್ಡ ಹೊಂದಿದ್ರೆ ಅಕ್ಕಿ, ಗೋಧಿ, ಎಣ್ಣೆ ಸರ್ಕಾರ ನೀಡೊ ತುಸು ಸವಲತ್ತಾದ್ರು ದಕ್ಕುವುದು.ಹೊಟ್ಟೆ ಹೊರೆಯುವ ಭಾರಕ್ಕೆ ಆಸರೆಗಾಗಿ ಬಿ.ಪಿ.ಎಲ್. ರೇಷನ ಕಾರ್ಡಗೆ ಒರಗಿ ನಿಲ್ಲೊ ಆಲೋಚನೆ ಮೂಡಿತ್ತು.ಇ ಮೊದಲಿದ್ದ ಎ.ಪಿ.ಎಲ್ ರೇಷನ ಕಾರ್ಡನ್ನು ಉಮೇಶಣ್ಣನಿಗೆ ಎಷ್ಟೋ ಗೋಗರೆದರು ಯಾವುದೇ ಕಾರಣಕ್ಕೂ ಬದಲಾಯಿಸದೇ ಹೋದ.ದೇಶನೇ ಕೊಳ್ಳೆ ಹೊಡೆದು ವೀದೇಶದಲ್ಲಿ ಕೂತು ರಾಜನಂಗೆ ಮೆರಿತಾರೆ.ಧರ್ಮಕ್ಕೆ ಸರ್ಕಾರದ್ದು ತಿಂದು ಬದುಕ್ತೇವೆ ಅಂದ್ರೆ ಕಲ್ಲ ಹಾಕ್ತಾರೆ.ತೇಪೆ ಹಾಕಿದ ಬಟ್ಟೆ ತೊಟ್ಟು ಬದುಕು ಬೀದಿಗೆ ಬಂದ್ರೆ ತೇಪೆಗುಂಟ ಹೊಲುಗೆ ಎಲ್ಲರ ಕಣ್ಣಿಗೆ ರಾಚುತ್ತೆ.ಅವರ ಹಸಿವು ಕಾಣುತ್ತೆ. ಮರ್ಯಾದೆ ಪ್ರಶ್ನೆ ..ಇರೋ ಬಟ್ಟೆಗಳನ್ನ ನೀಟಾಗಿ ತೊಟ್ಟು ಮಾನ ಮುಚ್ಚಿಕೊಂಡಾಗ ಅದರ ಹಿಂದೆ ಹಸಿದ ಹೊಟ್ಟೆ ಯಾರಿಗೂ ಕಾಣೋದಿಲ್ಲ.ದುಡಿಮೆ ಕೇಳಬಹುದು,ಅಭಿಮಾನ ಬಿಟ್ಟು ಭಿಕ್ಷೆ ಹೇಗೆ ಕೇಳೋದು? ದುಡಿಮೆನೆ ಇಲ್ಲಾ ಅಂತಾದ್ರೆ,ಎಲ್ಲಿಯು ಬಿಡಿಗಾಸು ಸಾಲಾನು ಹುಟ್ಟಲ್ಲ. ನಾಲ್ಕು ತುತ್ತಿನ ಚೀಲ ತುಂಬಿಸಬೇಕು.

        ಅಮ್ಮನ ಜೊತೆ ಕಾಡಲ್ಲಿ ಅಲಿತೇನೆ.ಇಗಿನ್ನು ಶ್ರಾವಣ ಶುರುವಾಗಿದೆ.ಗಣೇಶ ಚತುರ್ಥಿವರೆಗೂ ಮಲ್ಲಿಗೆ ಮೊಗ್ಗಂತೆ ಬೆಳ್ಳಗೆ ಅಣುಬೆ ಮೊಳೆತಿರ‍್ತಾವೆ,ಅವನ್ನು ಹುಡುಕತೇವೆ. ಒಂದು ಸಾರೆ ಅರಳಿದ ಜಾಗದಲ್ಲೆ ಮೂರು ದಿನ ಹುಟ್ಟುತಾವೆ. ಅಲ್ಲಿಗೆ ಮೂರು ದಿನ ಊಟದ ಚಿಂತೆಯಿಲ್ಲ. ಮತ್ತೆ ಬೇರೆಡೆ ಹುಡುಕುವುದು.ಅಣಬೆ ಮುಗಿತಾ..ಕಳಲೆ ಹುಡುಕೋದು, ಅದು ಸಿಗದಿದ್ದಾಗ ; ಕೆರೆಯಿದೆ ಮೀನು ಹಿಡಿಯೋದು.ಜೊತೆಗೆ ಅಮ್ಮ ಇರ‍್ತಾಳೆ.ಗಾಳ ಹಾಕಿ ಕೂತು ಕಾಯ್ತೆವೆ. ಒಂದೇ ಬಾರಿಗೆ     ದಕ್ಕೋದಿಲ್ಲವೆ? ಗಂಟೆ ಗಂಟಲೇ ಕಾಯಬೇಕು.ಪ್ರಪಂಚ ಮರೆತು ಏಕಾಗ್ರತೆ ಕೊಟ್ಟಾಗ ಮೀನು ಗಾಳಕ್ಕೆ ಬೀಳುತ್ತೆ.ಪ್ರಪಂಚ ಮರೆತಷ್ಟು ಮೆದಳು ಕೊಳೆಯೋದು ತಪ್ಪುತ್ತೆ. ನೆಮ್ಮದಿ ಅನಿಸಿ ನಿರಾಳ ಭಾವ ತುಂಬುತ್ತೆ.ಮೀನು ಗಾಳಕ್ಕೆ ಬಿತ್ತೋ…ಪ್ರಪಂಚ ಗೆದ್ದ ಸಂಭ್ರಮ.ಮತ್ತೊಂದು ಮೀನು ಹಿಡಿಯಲು ಮತ್ತೊಂದು ಗಂಟೆ ಕೂರು,ಅಲ್ಲಿಗೆ ನಾಲ್ಕೊ-ಐದೋ ಮೀನು ಸಿಕ್ಕರೆ ಅವತ್ತಿನ ಹಸಿವು ತೀರಿತು.ಆ ದಿನ ಪೂರ್ಣ ಮೆದುಳು ಕೊಳೆತಕ್ಕೂ ವಿರಾಮ ದಕ್ಕಿದಂತಾಯಿತು.

          ಉರಿದು ತಣ್ಣಗಾದ ಬೂದಿ ಹಿಡಿದು ಒಲೆ ಹೊತ್ತಿಸೋ ಸಾಹಸ.ಅದರಲ್ಲಿನೇ ಮನೆ ಬೆಳಕಾಗಿಸಿ ಬದುಕು ಕಟ್ಟಿಕೊಳ್ಳೊ ಆಸೆ.ಸತ್ಯ ಅಂದ್ರೆ ಬದುಕು ಸತ್ತು ಬಿದ್ದಿದೆ.ಜೀವವಿರುವ ದೇಹ ಹೆಣವಾಗಿ ಕಾಡ್ತಾಯಿದೆ.ಮಣ್ಣೋಳು ಮಣ್ಣಾಗೋವರೆಗು ದೇಹ, ಮನಸ್ಸು ಕೊಳೆತು ನಾರದಂತೆ ಸುಗಂಧ ದ್ರವ್ಯಗಳನ್ನು ಸಿಂಪಡಿಸಿ ಕಾಯ್ದಿಡಬೇಕು.ತುಸು ಅಲಂಕಾರ ಮಲ್ಲಿಗೆ ಮುಡಿದು ನೆಮ್ಮದಿಯ ಸೋಗು ಅಪ್ಪಬೇಕು.ನನ್ನದು ಒಂದು ಬದುಕೇ…”ಸತ್ತ ಬದುಕಿನಲ್ಲಿ ಜೀವವಿರುವ ಹೆಣ ಕಾಯುವುದು…”

                                       ***************************

Leave a Reply

Back To Top