ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—41

ಆತ್ಮಾನುಸಂಧಾನ

ಅಧ್ಯಾಪಕ ವೃತ್ತಿಯ ಆರಂಭದ ದಿನಗಳು

೧೯೭೫ ರ ಜುಲೈ ಒಂದರಂದು  ನಾನು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕರ್ತವ್ಯಕ್ಕೆ ಹಾಜರಾದೆ. ಅಂದು ನನ್ನ ಜೊತೆಯಲ್ಲಿಯೇ ನಮ್ಮ ನಾಡು ಮಾಸ್ಕೇರಿಯವರೇ ಆದ ಶ್ರೀ ಎನ್.ಎಚ್.ನಾಯಕ. ಜೀವಶಾಸ್ತ್ರ ವಿಭಾಗಕ್ಕೆ, ಅಂಕೋಲಾ ತಾಲೂಕಿನ ಬಾಸಗೋಡಿನ ಶ್ರೀ ವಿ.ಆರ್.ಕಾಮತ ರಸಾಯನ ಶಾಸ್ತ್ರ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿದರು.

ನಮ್ಮ ಕಾಲೇಜಿನ ಆಡಳಿತ ಕಚೇರಿಯಲ್ಲಿ ನಮ್ಮ ಹಾಜರಾತಿಯ ಪ್ರಕ್ರಿಯೆ ನಡೆಯುವಾಗ ಬಹುತೇಕ ಎಲ್ಲ ಸಿಬ್ಬಂದಿಗಳ ಕೌತುಕದ ದೃಷ್ಠಿಯೊಂದು ನನ್ನ ಮೇಲೆ ಇರುವುದು ಸ್ಪಷ್ಟವಾಗಿ ನನ್ನ ಗಮನಕ್ಕೆ ಬರುತ್ತ ನನಗೆ ಅತೀವ ಮುಜುಗರವನ್ನುಂಟು ಮಾಡುತ್ತಿತ್ತು. ಇತರರ ಅಂಕಪಟ್ಟಿ ಮತ್ತಿತರ ದಾಖಲಾತಿಗಳನ್ನು ಸಹಜವಾಗಿ ಪರಿಶೀಲಿಸಿ ಹಾಜರು ಪಡಿಸಿಕೊಳ್ಳುವ ಆಫೀಸು ಸಿಬ್ಬಂದಿ ನನ್ನನ್ನು ಅಪಾದ ಮಸ್ತಕ ಮತ್ತೆ ಮತ್ತೆ ಪರಿಶೀಲಿಸಿ ನನ್ನ ದೈಹಿಕ ಚಹರೆಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ನೋಡುತ್ತಲೇ ನಾನು ಬೇಡ ಬೇಡವೆಂದರೂ ಬೆವೆತು ಹೋಗಿದ್ದೆ.

ಕೇವಲ ಉಪ್ಪಿನಾಗರ, ಕಲ್ಲು ಕಣಿಗಳ ಕಾಯಕದಲ್ಲಿ ಬದುಕು ಕಟ್ಟಿಕೊಂಡ ಆಗೇರ ಸಮುದಾಯದ ಈ ಹುಡುಗ ತುಂಬಿದ ತರಗತಿಗಳನ್ನು ಹೇಗೆ ನಿಭಾಯಿಸಬಲ್ಲ? ಎಂಬ ಪ್ರಶ್ನೆಯ ಕುತೂಹಲದಲ್ಲಿಯೇ ಅವರೆಲ್ಲರೂ ನನ್ನ ಸಮಗ್ರ ಚಹರೆಯ ಪರೀಕ್ಷೆಗೆ ಇಳಿದಂತೆ ತೋರುತ್ತಿತ್ತು. ಅಚ್ಚರಿಯೆಂದರೆ ಈ ಪರಿಸರದ ಸೂಕ್ಷ್ಮ ವನ್ನು ನಾನು ಮಾತ್ರವೇ ಗಮನಿಸಿದೆ ಎನ್ನುವಂತೆಯೂ ಇರಲಿಲ್ಲ. ಕಚೇರಿಗೆ ಸಂಬಂಧಿಸದೆ ಅಲ್ಲಿದ್ದ ಇತರರಿಗೂ ಈ ಅನುಭವ ತಟ್ಟಿದೆ ಎಂಬುದು ನನಗೆ ಆ ಬಳಿಕ ತಿಳಿಯಿತು.

ಬೇರೆ ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಕಚೇರಿಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಸನ್ನಿವೇಶದ ಸೂಕ್ಷ್ಮ ವನ್ನು ನನ್ನಂತೆಯೇ ಗ್ರಹಿಸಿದ್ದರು. ಕಚೇರಿಯಲ್ಲಿ ಕೌಂಟರಿನ ಆಚೆ ನಿಂತು ನಮ್ಮ ಹಾಜರಾತಿ ಪ್ರಕ್ರಿಯೆಯನ್ನು ಗಮನಿಸುತ್ತಿದ್ದ ಹಿರಿಯ ಶಿಕ್ಷಕ ಮಹನೀಯರಿಗೂ ಇದೇ ಅನುಭವವಾಗಿದ್ದು ನಮ್ಮ ತಂದೆಯವರನ್ನು ಭೇಟಿಯಾದಾಗ ಕಚೇರಿಯ ದೃಶ್ಯಾವಳಿಗಳನ್ನು ತಾವು ಕಂಡಂತೆಯೇ ವಿವರಿಸಿದ್ದಾರೆ. ಇದರ ಪರಿಣಾಮ ಅಂದಿನ ಸನ್ನಿವೇಶದ ಹಿಂದಿರುವ ಭಾವನೆಗಳು ಮತ್ತದರ ಕಾರಣಗಳು ಇಂದಿಗೂ ನನ್ನ ಸ್ಮರಣೆಯಲ್ಲಿ ಜೋಪಾನವಾಗಿಯೇ ಉಳಿದುಕೊಂಡವು.

ಇದನ್ನು ನಾನಿಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೇ…

ಅಂದಿನ ಸಾಮಾಜಿಕ ವಾಸ್ತವದಲ್ಲಿ ಸಮಾಜದ ಕಟ್ಟಕಡೆಯ ಸಮುದಾಯವನ್ನು ಗಮನಿಸುವ ರೀತಿಗಳು ಹೇಗಿದ್ದವು? ಮತ್ತು ಇಂಥಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸುವ ನನ್ನಂಥವನ ಮುಂದಿರುವ ಸವಾಲುಗಳು ಯಾವವು? ಎಂಬುದನ್ನು ಗ್ರಹಿಸುವುದಕ್ಕಾಗಿ ಮಾತ್ರ ಇದನ್ನು ನಾನಿಲ್ಲಿ ಪ್ರಸ್ತಾಪಿಸಿದ್ದೇನೆ.

ಅಧ್ಯಾಪಕ ವಲಯದಲ್ಲಿ ವ್ಯತಿರಿಕ್ತ ಎನ್ನಿಸುವ ಯಾವ ಸನ್ನಿವೇಶಗಳೂ ನನಗೆ ಕಾಣಿಸಲಿಲ್ಲ. ಬಹಳಷ್ಟು ಜನ ಅಧ್ಯಾಪಕರು ನನಗೆ ಪಾಠ ಹೇಳಿದ ಗುರುಗಳೇ ಆಗಿದ್ದರು. ಸಮಾನ ವಯಸ್ಕರಲ್ಲಿ ನನಗಿಂತ ಒಂದಾರು ತಿಂಗಳು ಮೊದಲೇ ಉಪನ್ಯಾಸಕರಾಗಿ ತೊಡಗಿಸಿಕೊಂಡ ಇಂಗ್ಲಿಷ್ ವಿಭಾಗದ ಎಸ್.ಎಚ್.ನಾಯಕ ಮತ್ತು ಎನ್.ವಿ.ನಾಯಕ ಪ್ರೀತಿಯ ಸ್ನೇಹಿತರೇ ಆದರು. ಇದೆಲ್ಲವೂ ನನಗೆ ಲವಲವಿಕೆಯಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಲು ಪ್ರೇರಣೆಯಾದವು.

ತರಗತಿಗೆ ಪೂರಕವಾದ ಪಠ್ಯ-ಪುಸ್ತಕ ಮತ್ತು ವೇಳಾ ಪತ್ರಿಕೆ ಹಂಚುವಿಕೆಯಲ್ಲೂ ನನ್ನ ಹಿರಿಯ ಅಧ್ಯಾಪಕರು ನನ್ನ ವಿನಂತಿಯನ್ನು ಮನ್ನಿಸಿ ಅವಕಾಶ ನೀಡಿದರು. ವಿಭಾಗ ಮುಖ್ಯಸ್ಥರಾದ ವಿ.ಎ.ಜೋಷಿಯವರಾಗಲೀ, ಸಹ ಅಧ್ಯಾಪಕರಾದ ಕೇ.ವಿ. ನಾಯಕರಾಗಲೀ ಈರ್ವರೂ ನನಗೆ ಕಲಿಸಿದ ಗುರುಗಳೇ ಆದುದರಿಂದ ನನ್ನ ಕುರಿತು ಪ್ರೀತಿಯ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಲೇ ನನ್ನ ನೆರವಿಗೆ ನಿಂತರು.

ಆರಂಭದ ದಿನಗಳಲ್ಲಿ ಪ್ರತಿ ತರಗತಿಯ ಪಾಠಕ್ಕೆ ಬೇಕಾದ ಸಿದ್ಧತೆ, ಪೂರಕ ವಿಷಯಗಳ ಸಂಗ್ರಹ ಎಲ್ಲವನ್ನೂ ಟಿಪ್ಪಣಿಯಾಗಿ ಬರೆದುಕೊಂಡು ನನ್ನ ಇಬ್ಬರೂ ಗುರುಗಳಿಗೆ ತೋರಿಸಿ ಅವರ ಸಲಹೆ ಸೂಚನೆಗೊಂದಿಗೆ ಪರಿಷ್ಕರಿಸಿಕೊಂಡೇ ತರಗತಿಗೆ ಹೋಗುತ್ತಿದ್ದೆ. ಕನ್ನಡೇತರ ಹಿಂದಿ, ಸಂಸ್ಕೃತ, ಇಂಗ್ಲೀಷ್ ವಿಷಯಗಳ ಕುರಿತಾಗಿಯೂ ನನ್ನ ಹಿರಿಯ ಗುರುಗಳೊಡನೆ ಚರ್ಚಿಸುತ್ತಿದ್ದೆ. ಹಿಂದಿಯ ಕೆ.ಪಿ. ಕುಲಕರ್ಣಿ, ಸಂಸ್ಕೃತ ಮತ್ತು ಕ್ರೀಡಾ ವಿಷಯವಾಗಿ ಪ್ರೊ.ಎಂ.ಪಿ.ಭಟ್ಟ, ಇಂಗ್ಲೀಷಿಗೆ ಸಂಬಂಧಿಸಿ ಪ್ರೊ.ಎಂ.ಎನ್ ಡಂಬಳ್ ಮತ್ತು ಗೆಳೆಯ ಎಸ್.ಎಚ್.ನಾಯಕ ಅಗತ್ಯ ಮಾಹಿತಿಗಳನ್ನು ಎಲ್ಲ ಸಂದರ್ಭಗಳಲ್ಲೂ ನೀಡುತ್ತಿದ್ದರು. ನಾನೇ ಓದಿ ಸಂಗ್ರಹಿಸಿಕೊಳ್ಳಲು ಗ್ರಂಥ ಭಂಡಾರದಲ್ಲಿ ಸಮೃದ್ಧ ಪುಸ್ತಕ ಸಂಗ್ರಹವೂ ಇತ್ತು. ಅಲ್ಲಿನ ಗ್ರಂಥಪಾಲಕ ಎಸ್.ಆರ್.ಉಡುಪಿಯವರಾಗಲೀ, ಅವರ ಸಹಾಯಕರಾಗಿದ್ದ ಹಿರಿಯ ಲೇಖಕ ಶ್ಯಾಮ ಹುದ್ದಾರರಾಗಲಿ ನಾನು ಬಯಸಿದ ಪುಸ್ತಕವನ್ನು ಹುಡುಕಿಕೊಡುವಲ್ಲಿ ತುಂಬಾ ಮುತುವರ್ಜಿಯಿಂದ ಸಹಕರಿಸುತ್ತಿದ್ದರು.

ಅಂದಿನ ದಿನಗಳಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುತ್ತಿತ್ತು. ಅದರಲ್ಲಿಯೂ ಕನ್ನಡ ವಿಷಯ ಆಯ್ಕೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಆಸಕ್ತಿ ಹೊಂದಿರುತ್ತಿದ್ದರು. ಕೆಲವು ತರಗತಿಗಳಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಪಾಠ ಮುಗಿದು ಚರ್ಚೆಯ ಸಮಯವಿದ್ದರೆ ಹಲವರು ಹಲಬಗೆಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದಕ್ಕೆ ಸಮರ್ಪಕ ಉತ್ತರ ಹೇಳಲೂ ಸಿದ್ಧತೆ ಇರಬೇಕು. ಈ ಎಲ್ಲ ಎಚ್ಚರದಿಂದಲೇ ನಾನು ಹೆಜ್ಜೆ ಹೆಜ್ಜೆಗೂ ನನ್ನನ್ನು ಪರಿಷ್ಕರಿಸಿಕೊಳ್ಳುವುದು ಅನಿವಾರ್ಯವೂ ಆಯಿತು.

ನನ್ನ ಯಕ್ಷಗಾನ ಕಲೆಯ ಅಭಿರುಚಿ ಮತ್ತು ಅನುಭವಗಳು ಸ್ಪಷ್ಟವಾದ ಮಾತುಗಾರಿಕೆಗೆ ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದ್ದೂ ಸುಳ್ಳಲ್ಲ. ಅದಕ್ಕೆ ಪೂರಕವಾಗಿ ದೈವಾನುಗ್ರಹದಿಂದ ದೊರೆತ ನನ್ನ ಕಂಠತ್ರಾಣವೂ ನಾನು ನನ್ನ ಪಾಠಕ್ರಮದಲ್ಲಿ ಶಿಸ್ತು ಮತ್ತು ಆಕರ್ಷಣೆಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಯಿತು.

ಆದರೂ ಬಹುದೊಡ್ಡ ವಿದ್ಯಾರ್ಥಿ ಸಮುದಾಯದಲ್ಲಿ ನಮ್ಮ ಕಣ್ಣಳತೆಗೆ ಮೀರಿ ಅಲ್ಲಿ ಇಲ್ಲಿ ಆತಂಕಪಡುವ ಸಣ್ಣಪುಟ್ಟ ಕಿತಾಪತಿಗಳೂ ನಡೆಯುತ್ತಿದ್ದವು. ಒಂದೊಂದು ಗಂಟೆಯ ತರಗತಿ, ಒಂದಾದ ಮೇಲೊಂದರಂತೆ ದಿನವೂ ನಾಲ್ಕು ಗಂಟೆಗಳ ಕಾಲ ಪಾಠ ಮಾಡುವ ಧಾವಂತದಲ್ಲಿ ನಾನು ಬೆವೆತು ಹೋಗುತ್ತಿದ್ದೆ. ಇಂಥ ಸ್ಥಿತಿಯಲ್ಲಿ ತರಗತಿಯನ್ನು ಪ್ರವೇಶಿಸಿದ ನನ್ನನ್ನು ನೋಡಿ ಕೆಲವು ವಿದ್ಯಾರ್ಥಿಗಳು “ಅದೆ ಕಲ್ಲ ಖಣಿಗೆ ಹೋಗಿ ಸೀದಾ ಬಂದ ನೋಡು…..”  ಎಂದೋ “ಉಪ್ಪಿನಾಗರದಲ್ಲಿ ಉಪ್ಪು ತೆಗೆದು ಹಾಕೇ ಬಂದನೇನೋ…” ಎಂದೂ ನನ್ನ ಜಾತಿ ಕಸುಬನ್ನು ಎತ್ತಿ ಉದ್ಗರಿಸುವುದನ್ನು ಕೆಲವು ವಿದ್ಯಾರ್ಥಿಗಳೇ ಬಂದು ನನಗೆ ಹೇಳುತ್ತಿದ್ದರು.

ಅದನ್ನು ಕೇಳುವಾಗ ತುಂಬ ಸಂಕಟದ ಅನುಭವವಾಗುತ್ತಿದ್ದರೂ ಕ್ರಮೇಣ ಅವೆಲ್ಲ ‘ಸಾಮಾನ್ಯ’ವೆಂದೇ ಜೀರ್ಣಿಸಿಕೊಳ್ಳುವುದನ್ನು ರೂಢಿಮಾಡಿಕೊಂಡೆ. ಉದ್ಯೋಗ ಆರಂಭಿಸಿದ ಬಳಿಕ ಕೆಲವು ದಿನ ಊರಿಂದಲೇ ಬಸ್ಸಿನಲ್ಲಿ ಬಂದು ಹೋಗುತ್ತಿದ್ದೆ. ಆದರೆ ಅಂಕೋಲೆಯಲ್ಲಿಯೇ ಒಂದು ಬಾಡಿಗೆ ಮನೆಮಾಡಿಕೊಂಡು ಉಳಿಯುವುದು ತುಂಬಾ ಅನಿವಾರ್ಯವೆನ್ನಿಸಿತು. ಇದೇ ಉದ್ದೇಶದಿಂದ ಬಾಡಿಗೆ ಮನೆಯೊಂದರ ಅನ್ವೇಷಣೆಗೆ ತೊಡಗಿದೆ. ಹಲವಾರು ಕಡೆಗಳಲ್ಲಿ ವಿಚಾರಿಸಿದರೂ ಏನಾದರೊಂದು ಕಾರಣ ನೀಡಿ ವಿಷಾದ ವ್ಯಕ್ತಪಡಿಸುತ್ತಿದ್ದರು. ಬಹಳ ಪ್ರಯತ್ನದ ಬಳಿಕ ಜಾತೀಯ ಕಾರಣವೇ ಇಲ್ಲಿನ ನಿರಾಕರಣೆಯ ಹಿಂದಿನ ರಹಸ್ಯವೆಂದು ಅರಿವಾಯಿತು.

ಆ ದಿನಗಳಲ್ಲಿ ನನ್ನ ಜಾತಿ ಬಂಧುಗಳಲ್ಲಿ ಸುವ್ಯವಸ್ಥಿತ ಮನೆಗಳೂ ಇರಲಿಲ್ಲ. ಬಹುತೇಕ ಹುಲ್ಲಿನ ಛಾವಣಿ ಹೊಂದಿದ ಗುಡಿಸಲುಗಳೇ ಅಧಿಕ ಸಂಖ್ಯೆಯಲ್ಲಿ ಇದ್ದವು. ಅಪರೂಪದ ಕೆಲವು ಹಂಚಿನ ಮನೆಗಳಿದ್ದರೂ ಬಾಡಿಗೆಗೆ ಬಿಟ್ಟುಕೊಡುವಷ್ಟು ಸ್ಥಳಾವಕಾಶಗಳೂ ಇರುತ್ತಿರಲಿಲ್ಲ. ಇದರಿಂದ ಮನೆ ದೊರಕಿಸುವುದೇ ದುಸ್ತರವಾಯಿತು. ಅಂಥ ಸಂದರ್ಭದಲ್ಲಿ ಅಂಕೋಲೆಯಲ್ಲಿ ಎಕ್ಸೆಸೈಜ್ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ ಸಮೀಪದ ಹಾರವಾಡಾ ಊರಿನ ನಾಗಪ್ಪ ಆಗೇರ ಎಂಬ ಗ್ರಹಸ್ಥರು “ಜಾತಿಯ ಕಾರಣದಿಂದಲೇ ನಮಗೆ ಯಾರೂ ಮನೆ ಬಾಡಿಗೆ ಕೊಡಲು ಒಪ್ಪುವುದಿಲ್ಲ. ನೀವು ಮುಸ್ಲಿಂರ ಮನೆಗಳಲ್ಲಿ ಕೇಳಿ ನೋಡಿ ಸಿಗಬಹುದು…” ಎಂದು ಸಲಹೆ ನೀಡಿದರು.

ನನಗೆ ಮುಸ್ಲಿಂ ಸಮುದಾಯದ ಕುರಿತು ಅಷ್ಟೊಂದು ಪ್ರೀತಿ-ವಿಶ್ವಾಸಗಳಿರಲಿಲ್ಲ. ಅದಕ್ಕೆ ಕಾರಣವೇನೋ ತಿಳಿಯದು. ಬಾಲ್ಯದಲ್ಲಿಯೇ ಬನವಾಸಿಯಲ್ಲಿ ಖಾಜಿ ಮಾಸ್ತರರ ಅನುಕಂಪವನ್ನೂ, ಮುಲ್ಕೀ ಅಭ್ಯಾಸ ಮಾಡುವಾಗ ಗಂಗಾವಳಿಯ ಅಬ್ದುಲ್ ಮಾಸ್ತರರ ಪ್ರೀತ್ಯಾದರಗಳನ್ನು ಅನುಭವಿಸಿದ್ದೆ ಆದರೂ ಮುಸ್ಲಿಂ ಸಮುದಾಯದ ಕುರಿತು ಕಾರಣವೇ ಇಲ್ಲದ ಭಯದಿಂದ ಆತಂಕ ಪಡುತ್ತಿದ್ದೆ.

ಆದರೀಗ ಪರಿಸ್ಥಿತಿಯ ಅನಿವಾರ್ಯತೆಯಿಂದ ಮುಸ್ಲಿಂರು ಹೆಚ್ಚು ನೆಲೆಸಿದ “ಮುಲ್ಲಾಬಾಡ” ಎಂಬ ಏರಿಯಾದಲ್ಲಿ ಮನೆ ಹುಡುಕಲು ನಿರ್ಧರಿಸಿದೆ. ಕೊನೆಗೆ ಸ್ವಜಾತಿ ಬಂಧು ನಾಗಪ್ಪ ಆಗೇರ ಎಂಬ ಗೆಳೆಯನಿಂದಲೇ ಒಂದು ಮನೆ ದೊರಕಿಸುವಲ್ಲಿ ಸಫಲನಾದೆ.

ಬಂದರ ರಸ್ತೆಯ ಒಂದು ಅಂಚಿನಿಂದ ಆರಂಭಗೊಳ್ಳುವ “ಮುಲ್ಲಾಬಾಡ” ಎಂಬ ಮುಸ್ಲಿಂರ ನೆಲೆಯಲ್ಲಿ “ನಿಜಾಮ ಸಾಬ ಮತ್ತು ಆಶಾಬಿ ನಿಜಾಮ ಖಾನ” ಎಂಬ ವೃದ್ದ ದಂಪತಿಗಳ ಬಾಡಿಗೆ ಮನೆಯೊಂದು ಸುಲಭವಾಗಿ ದೊರೆಯಿತು. ಮನೆಯ ಅಂಗಳದಲ್ಲಿಯೇ ಸಾರ್ವಜನಿಕ ಬಾವಿ, ಮನೆಯ ಹಿಂಭಾಗದಲ್ಲಿ ಶೌಚಗ್ರಹ ಇತ್ಯಾದಿ ಅನುಕೂಲಗಳಿದ್ದವು. ವೃದ್ಧ ನಿಜಾಮ ಸಾಹೇಬರು ಸನಿಹದ ಕುಂಬಾರಕೇರಿಯಲ್ಲಿ ಪಾತ್ರೆ ರಿಪೇರಿ, ಕಲಾಯಿ ಇತ್ಯಾದಿ ಮಾಡಿಕೊಡುವ ಸಣ್ಣ ವರ್ಕ್ಶಾಪ್ ಇಟ್ಟುಕೊಂಡಿದ್ದರು. ನನಗೆ ನೀಡಿದಂತೆಯೇ ಮತ್ತೆರಡು ಕುಟುಂಬಗಳಿಗೆ ಬಾಡಿಗೆ ಮನೆ ನೀಡಿದುದರಿಂದ ವೃದ್ಧ ದಂಪತಿಗಳಿಗೆ ಆದಾಯಕ್ಕೆ ಕೊರತೆಯೇನೂ ಇರಲಿಲ್ಲ. ಮೊಮ್ಮಕ್ಕಳಲ್ಲಿ ಹೈಸ್ಕೂಲು ಓದು ಮುಗಿಸಿದ ‘ನೂರಜಹಾನ’ ಎಂಬ ಹುಡುಗಿ ಅವಳ ತಮ್ಮ ‘ರಫೀಕ್ ಶೇಖ್’ ಎಂಬ ಪ್ರಾಥಮಿಕ ಶಾಲೆ ಕಲಿಯುವ ಹುಡುಗ ಅಜ್ಜ-ಅಜ್ಜಿಯ ಜೊತೆಯಲ್ಲೇ ಉಳಿದು ಅವರಿಗೆ ನೆರವಾಗುತ್ತಿದ್ದರು.

ತಿಂಗಳಿಗೆ ಮೂವತ್ತು ರೂಪಾಯಿಗಳ ಬಾಡಿಗೆಯ ಕರಾರಿನ ಮೇಲೆ ನನ್ನ ಬಾಡಿಗೆ ಮನೆಯ ವಾಸ್ತವ್ಯ ಆರಂಭವಾಯಿತು.

**************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

One thought on “

  1. ಸರ,
    ತಮ್ಮ ಅನುಭವ ಅಪಾರ ಮನೆಯ ಕುರಿತು ತಿಳಿಸಿದಂತೆ ನಮಗೆ
    ಅನುಭವಕ್ಕೆ ಬಂದಿದೆ ಸರ. ಮುಂದಿನ ವಿಷಯ ಓದುವ ಕುತೂಹಲದಲ್ಲಿ ಇದ್ದೇವೆ.

Leave a Reply

Back To Top