ದಾರಾವಾಹಿ

ಆವರ್ತನ

ಅದ್ಯಾಯ-32

Abstract art speaks to your brain, evokes abstract and far away feelings

ಶಂಕರನ ದೊಡ್ಡಾಸ್ತಿಕೆಯನ್ನೂ ಮತ್ತು ಅವನಲ್ಲಿ ಈಚೀಚೆಗೆ ನಾಡಿನ ದೈವ ದೇವರುಗಳ ಮೇಲೆ ಮೂಡಿದ್ದ ಭಯಭಕ್ತಿಯನ್ನೂ ಕಾಣುತ್ತ ಬರುತ್ತಿದ್ದ ಅವನ ಹಳೆಯ ದೋಸ್ತಿ ‘ಕೋಳಿಪಡೆ ಪ್ರವೀಣ’ ನೆಂದೇ ಪ್ರಖ್ಯಾತನಾದ ಮಸಣದಗುಡ್ಡೆಯ ಪ್ರವೀಣನೂ ಅವನತ್ತ ಆಕರ್ಷಿತನಾಗಿದ್ದ. ನಲವತ್ತರ ಹರೆಯದ ಬಲಿಷ್ಠ ದೇಹದ, ಕಂದುಬಣ್ಣದ ಐದು ಮುಕ್ಕಾಲು ಅಡಿ ಎತ್ತರದ ಸ್ಫುರದ್ರೂಪಿ ಪ್ರವೀಣನ ದಂಧೆಯು ಊರ ಮತ್ತು ಪರವೂರ ಕೋಳಿ ಅಂಕಗಳಿಗೆ ವಿವಿಧ ಜಾತಿ ಹಾಗೂ ಬಣ್ಣದ ಕೋಳಿಗಳನ್ನು ಕೊಂಡು ಹೋಗುವುದು. ಅಲ್ಲಿ ತನಗೆ ಬೇಕಾದ ಕೋಳಿಗಳೊಂದಿಗೆ ತನ್ನ ಕೋಳಿಗಳನ್ನು ಜೋಡಿ ಮಾಡಿ ಅವನ್ನು ಕಾಳಗಕ್ಕೆ ಬಿಟ್ಟು ಹಣ ಸಂಪಾದಿಸುವುದು. ಅದಿಲ್ಲದಿದ್ದರೆ ಆ ಅಂಕಗಳಲ್ಲಿ ಇತರ ಕೋಳಿಗಳ ಮೇಲೆ ಜೂಜು ಕಟ್ಟಿಯೂ ಗಳಿಸುವುದು ಮತ್ತು ಅಂಕದ ಕದನಕ್ಕೆಂದೇ ಪ್ರಸಿದ್ಧಿ ಪಡೆದ ತಮಿಳುನಾಡಿನ ಈರೋಡ್ ಕೋಳಿಗಳನ್ನು ತಂದು ಸಾಕಿ ಬೆಳೆಸುತ್ತ ಮಾರಾಟ ಮಾಡಿ ಲಕ್ಷಗಟ್ಟಲೆ ಸಂಪಾದಿಸುವುದು ಅವನ ಇಷ್ಟದ ಹಾಗೂ ಸ್ವತಂತ್ರ ಉದ್ಯೋಗ. ಆದ್ದರಿಂದ ಶಂಕರನಷ್ಟು ಅಲ್ಲದಿದ್ದರೂ ಅವನೂ ಒಂದುಮಟ್ಟಿಗೆ ಶ್ರೀಮಂತನೇ ಆಗಿದ್ದ.

   ಆದರೆ ತಾನು ಕೇವಲ ಕೋಳಿ ಅಂಕದಿಂದಲೇ ಸಂಪಾದಿಸುವುದೆಂದರೆ ಜನರು ತನ್ನನ್ನು ಹಗುರವಾಗಿ ಕಾಣುತ್ತಾರೆ ಎಂದೊಮ್ಮೆ ಅವನಿಗೇ ಅನ್ನಿಸಿದ್ದರಿಂದ ಆ ಕೂಡಲೇ ಅವನು ತೋರ್ಪಡಿಕೆಗೂ, ಕಾಲಾಹರಣಕ್ಕೂ ಎಂಬಂತೆ ಮಸಣದಗುಡ್ಡೆಯ ಸಮೀಪದಲ್ಲಿ ದೊಡ್ಡದೊಂದು ದಿನಸಿ ಅಂಗಡಿಯನ್ನು ತೆರೆದ ಮತ್ತದನ್ನು ನೋಡಿಕೊಳ್ಳಲು ತನ್ನ ತಂಗಿಯ ಮಗ ಶ್ರೀನಿವಾಸನನ್ನು ಇಟ್ಟುಕೊಂಡ. ಹಾಗಾಗಿ ದಿನಾ ಸಂಜೆಯ ಹೊತ್ತಿಗೆ ಅಂಗಡಿಗೆ ಬರುವವನು ಒಳಗಿನ ರಹಸ್ಯ ಕೋಣೆಯೊಂದರಲ್ಲಿ ಕೋಳಿ ಅಂಕದ ವ್ಯವಹಾರ ನಡೆಸುವ ಇನ್ನು ಕೆಲವು ಆಪ್ತರೊಂದಿಗೆ ಕುಳಿತು ಹರಟುತ್ತ ಅಲ್ಲೇ ಮೂಗಿನ ಮಟ್ಟ ಬೀರು, ವಿಸ್ಕಿ ಹೀರುವುದು ಅವನ ನಿತ್ಯದ ಅಭ್ಯಾಸವಾಗಿತ್ತು. ಬೆಂಬಿಡದೆ ಕೆಲವು ಬಾಟಲಿ ಬೀರುಗಳು ಹೊಟ್ಟೆ ಸೇರುತ್ತ ಗಳಿಗೆಗೊಮ್ಮೆ ತುಂಬಿಕೊಳ್ಳುತ್ತಿದ್ದ ಮೂತ್ರೋದಕವನ್ನು ಅವನು ತನ್ನ ಅಂಗಡಿಯ ಶೌಚಾಲಯದಲ್ಲಿ ಹುಯ್ಯಲು ಇಷ್ಟಪಡುವವನಲ್ಲ. ಬದಲಿಗೆ ಅಲ್ಲೇ ಸಮೀಪವಿದ್ದ ಮಸಣದಗುಡ್ಡೆಯ ಒಂದು ಮೂಲೆಯಲ್ಲಿ ಸಣ್ಣ ಕುರುಚಲು ಹಾಡಿಯೊಳಗಿದ್ದ ಪೊದೆಯೊಂದರತ್ತ ಹೋಗಿ ಆಕಾಶದತ್ತ ಮುಖವೆತ್ತಿ, ಆಹ್ಹಾ…! ಎಂದು ಮೈಜುಮ್ಮೆನಿಸಿಕೊಳ್ಳುತ್ತ ಮೂತ್ರಕೋಶವನ್ನು ಖಾಲಿ ಮಾಡಿ ಬರುವ ವಾಡಿಕೆಯಿಟ್ಟುಕೊಂಡಿದ್ದ.

   ಹೀಗೆ, ಆವತ್ತೊಂದು ದಿನ ಸಂಜೆಯೂ ಕುಡಿದು ಮತ್ತನಾದ ಪ್ರವೀಣ ಮೂತ್ರ ಹುಯ್ಯಲು ತನ್ನ ಮಾಮೂಲಿ ಜಾಗಕ್ಕೆ ಹೊರಟ. ಮರುದಿನ ಸಂಜೆ ಮರ್ಣೆಹಳ್ಳಿಯಲ್ಲಿ ನಡೆಯಲಿದ್ದ ದೊಡ್ಡ ಮಟ್ಟದ ಕೋಳಿ ಅಂಕದ ಕುರಿತು ಯೋಚಿಸುತ್ತ ಎಂದಿನ ಪೊದೆಯತ್ತ ಹೋಗಿ ಮೂತ್ರ ಹುಯ್ಯತೊಡಗಿದ. ಅಷ್ಟರಲ್ಲಿ, ‘ಹೋಯ್, ಹೋಯ್… ನೀವೆಂಥದು ಪ್ರವೀಣಣ್ಣಾ ಛೇ, ಛೇ…?!’ ಎಂದು ಅಲ್ಲಿನ ಪೌರಕಾರ್ಮಿಕರ ಸರಕಾರಿ ಕಾಲೋನಿಯ ಸುರೇಶ ತಾನೂ ಅಮಲೇರಿದ್ದವನು, ಪ್ರವೀಣನ ಹಿಂದೆ ಬಂದು ನಿಂತುಕೊಂಡು ಆತಂಕದಿಂದ ಉದ್ಗರಿಸಿದ. ನಾಳೆಯ ಅಂಕದಲ್ಲಿ ಸೆಣಸಲಿದ್ದ ತನ್ನ ಫೈಟರ್ ಹುಂಜಕ್ಕೆ ಹೊಸ ಬಾಳನ್ನೇ (ಕತ್ತಿ) ಕಟ್ಟಲು ಬಾಳು ಕಟ್ಟುವವನಿಗೆ ಸೂಚಿಸಬೇಕೆಂದುಕೊಳ್ಳುತ್ತ ಮೂತ್ರ ಹುಯ್ಯುತ್ತಿದ್ದ ಪ್ರವೀಣ ಸುರೇಶನ ಕೂಗಿಗೆ ಬೆಚ್ಚಿಬಿದ್ದ. ತಟಕ್ಕನೆ ಅವನ ಮೂತ್ರ ಕಟ್ಟಿತು. ರಪ್ಪನೆ ತಿರುಗಿ ನೋಡಿದ. ಕುಡುಕ ಸುರೇಶ ನಿಂತಿದ್ದ. ಪ್ರವೀಣನಿಗೆ ಕೆಟ್ಟ ಸಿಟ್ಟು ಬಂತು.

‘ಥೂ! ಬೇವರ್ಸಿ…ಹೋಗಾ ಆಚೆಗೇ! ಎಂಥ ಮಾಡುವುದು ಅಂತ ಕಣ್ಣು ಕಾಣುವುದಿಲ್ಲವಾ ನಿಂಗೆ…?’ ಎಂದು ಗುಡುಗಿದವನು, ಸತ್ತು ಹೋದವನೆಲ್ಲಾದರೂ…! ಎಂದು ಗೊಣಗಿಕೊಳ್ಳುತ್ತ ತನ್ನ ಸೊಂಟವನ್ನೊಮ್ಮೆ ಬಲವಾಗಿ ಅಲ್ಲಾಡಿಸುವ ಮೂಲಕ ಅದಾಗಲೇ ಜಠರದತ್ತ ರವಾನೆಯಾಗಿದ್ದ ಮೂತ್ರವನ್ನು ಮತ್ತೆ ಕಷ್ಟಪಟ್ಟು ಬರಿಸಿಕೊಂಡು ಹುಯ್ಯತೊಡಗಿದ. ಪ್ರವೀಣನ ಅಹಂಕಾರವನ್ನೂ ಮತ್ತು ಅವನು ಯಾರ ಮೇಲಾದರೂ ಕೆರಳಿ ಜಗಳಕ್ಕೆ ನಿಂತನೆಂದರೆ ಮಾತಿಗಿಂತ ಮೊದಲು ಅವನ ಕೈಕಾಲುಗಳೇ ಮಾತಾಡುತ್ತಿದ್ದುದನ್ನೂ ಕಂಡಿದ್ದ ಹಾಗೂ ಒಂದೆರಡು ಬಾರಿ ತಾನೂ ಅನುಭವಿಸಿದ್ದ ಸುರೇಶನಿಗೆ ಅವನ ಕೋಪ ಕಂಡು ಒಮ್ಮೆಲೆ ಭಯವಾಯಿತು. ಆದ್ದರಿಂದ ಎರಡು ಹೆಜ್ಜೆ ಹಿಂದೆ ಸರಿದವನು, ‘ಛೇ! ಹಾಗಲ್ಲ ಪ್ರವೀಣಣ್ಣ… ನೀವು ಮೂತ್ರ ಮಾಡುತ್ತಿರುವ ಜಾಗ ಯಾವುದು ಅಂತ ಗೊತ್ತುಂಟಾ ನಿಮಗೇ…?’ ಎಂದು ಆಪ್ತಬಾಂಧವನಂಥ ಭಾವದಿಂದ ಹೇಳಿದ. ಅಷ್ಟರಲ್ಲಿ ಪ್ರವೀಣ ಮುಕ್ಕಾಲು ಭಾಗ ಮೂತ್ರವನ್ನು ಹುಯ್ದು ಸ್ಥಿಮಿತಕ್ಕೆ ಬಂದಿದ್ದವನು, ‘ನಿನ್ನ ಜಾಗವನ್ನು ಕಟ್ಟಿಕೊಂಡು ನನಗೇನಾಗಬೇಕಿದೆ ಮಾರಾಯಾ. ಎಂಥ ಕೊಪ್ಪರಿಗೆ ಉಂಟಾ ಇಲ್ಲಿ? ಇದ್ದರೆ ನೀನೇ ಇಟ್ಟುಕೊಂಡು ಮಜಾ ಮಾಡು ಹೋಗ್!’ ಎಂದು ಪ್ಯಾಂಟಿನ ಝಿಬ್ ಎಳೆದುಕೊಳ್ಳುತ್ತ ಹೇಳಿದ.

   ಅಷ್ಟು ಕೇಳಿದ ಸುರೇಶನಿಗೂ ಕುದಿಯಿತು. ಕೊಪ್ಪರಿಗೆಯೋ, ಖಜಾನೆಯೋ ಅಂಥ ಈಗಲೇ ಗೊತ್ತಾಗುತ್ತದೆ ಬೋಳಿಮಗನೇ, ಸ್ವಲ್ಪ ಇರು. ನಿನ್ನ ಅಹಂಕಾರ ಇಳಿಸುತ್ತೇನೆ! ಎಂದು ಮನಸ್ಸಿನಲ್ಲೇ ಬೈದವನು ವ್ಯಂಗ್ಯವಾಗಿ ನಗುತ್ತ, ‘ಕೊಪ್ಪರಿಗೆಯಲ್ಲ ಪ್ರವೀಣಣ್ಣ ಅದಕ್ಕಿಂತಲೂ ದೊಡ್ಡದೇನೋ ಇದೆ. ಅದನ್ನು ನೀವೇ ಕಣ್ಣಾರೆ ನೋಡಬೇಕು. ಆ ಪೊದೆಯನ್ನು ಸ್ವಲ್ಪ ಸರಿಸಿ ನೋಡಿಯಲ್ಲವಾ? ಇಷ್ಟು ವರ್ಷಗಳಿಂದ ಮಸಣದಗುಡ್ಡೆಯಲ್ಲಿದ್ದೀರಿ. ಇನ್ನೂ ನಿಮಗೆ ಎಲ್ಲೆಲ್ಲಿ ಏನೇನಿದೆ ಅಂತ ಗೊತ್ತಾಗಲಿಲ್ಲವಲ್ಲ…!’ ಎಂದು ತಾನೂ ಅಸಡ್ಡೆಯಿಂದ ಅಂದವನು ಮುಂದೆ ಬಂದು ನಶೆಯಿಂದ ತೇಲಾಡುತ್ತಿದ್ದ ತನ್ನ ಒಣಕಲು ಸೊಂಟದಿಂದ ಪೊದೆಯನ್ನು ಜಗ್ಗಿ ನಿಂತು, ‘ಬನ್ನಿ ಬನ್ನಿ. ಏನಿದೆ ಅಂತ ನೀವೇ ನೋಡಿ?’ ಎನ್ನುತ್ತ ಅಲ್ಲಿನ ರಹಸ್ಯವನ್ನು ಬಯಲುಗೊಳಿಸಿದ. ಆಗ ಪ್ರವೀಣನಲ್ಲಿ ಮೆಲ್ಲನೆ ಅಳುಕು ಹುಟ್ಟಿತು. ಮೆತ್ತಗೆ ಅತ್ತ ಇಣುಕಿದ. ಆದರೆ ಅಲ್ಲಿನ ದೃಶ್ಯವನ್ನು ಕಂಡ ಅವನೆದೆ ಧಸಕ್ ಎಂದಿತು. ಕೂಡಲೇ ಪೊದೆಯನ್ನು ಬಲವಾಗಿ ಸರಿಸಿದವನು ಅಮಲೇರಿ ಮಸುಕು ಮಸುಕಾಗಿ ಕಾಣಿಸುತ್ತಿದ್ದ ಕೆಂಪು ಕಣ್ಣುಗಳನ್ನು ಉಜ್ಜಿ ನೋಡಿದ. ಅಲ್ಲಿ ಸುಮಾರು ದೂರದಲ್ಲಿ ಕೆಲವು ಹಳೇಯ ಮುರ ಕಲ್ಲುಗಳಿದ್ದವು.

‘ಯಬ್ಬಾ, ದೇವರೇ! ಇದೆಂಥದು ಮಾರಾಯಾ. ನಾಗನಕಲ್ಲಿನ ಹಾಗೆಯಿದೆಯಲ್ಲ…!’ ಎಂದು ಭೀತಿಯಿಂದ ಉದ್ಗರಿಸಿದ.

‘ನಾಗನ ಕಲ್ಲಿನ ಹಾಗೆ ಇರುವುದು ಎಂಥದು ಕರ್ಮವಾ…? ಹಿಂದಿನ ಕಾಲದ ನಾಗನ ಕಲ್ಲುಗಳೇ ಪ್ರವೀಣಣ್ಣ…!’ ಎಂದು ಸುರೇಶ ಅಬ್ಬರಿಸಿ ಸಿಡುಕಿದ.

‘ಅರೇರೇ, ಇದು ಯಾವಾಗ ಇಲ್ಲಿಗೆ ಬಂತು ಮಾರಾಯಾ…!?’ ಎಂದು ಪ್ರವೀಣ ವಿಸ್ಮಯದಿಂದಲೂ ಪಾಪಭೀತಿಯಿಂದಲೂ ಹುಬ್ಬುಗಂಟಿಕ್ಕಿ ಪ್ರಶ್ನಿಸಿದ. ಅವನ ದೈನೇಸಿ ಸ್ಥಿತಿಯನ್ನು ಕಂಡ ಸುರೇಶ ಒಳಗೊಳಗೇ ಖುಷಿಗೊಂಡು ನಗುತ್ತ, ‘ಯಾವಾಗ ಅಂದರೆ? ನನ್ನ ಅಪ್ಪನ, ಅಪ್ಪನ ಅಪ್ಪಂದಿರು ಹುಟ್ಟುವುದಕ್ಕಿಂತ ಮುಂಚೆಯೇ ಈ ಕಲ್ಲುಗಳು ಇಲ್ಲಿದ್ದುವು ಅಂತ ಅವರೇ ಹೇಳುತ್ತಿದ್ದರು!’ ಎಂದವನು ಪೊದೆಯನ್ನು ಬಿಟ್ಟು ಈಚೆಗೆ ಬಂದ.

   ಪ್ರವೀಣ ಇನ್ನಷ್ಟು ಬಿಳಿಚಿಕೊಂಡ. ಅದನ್ನು ಗಮನಿಸಿದ ಸುರೇಶನಿಗೆ ಅವನನ್ನು ಬೆದರಿಸಲು ಮತ್ತಷ್ಟು ಉತ್ಸಾಹ ಬಂತು. ‘ಇಲ್ಲಿನ ಕಥೆ ನನಗೆ ಸ್ವಲ್ಪ ಸ್ವಲ್ಪ ನೆನಪಿದೆ. ಹೇಳುತ್ತೇನೆ ಕೇಳಿ’ ಎಂದ ಕಥೆಯಾರಂಭಿಸಿದ. ‘ಒಂದು ಕಾಲದಲ್ಲಿ ಇಲ್ಲೊಂದು ಕಾರ್ನಿಕದ ನಾಗಸಾನ (ನಾಗಬನ) ಇತ್ತಂತೆ. ಅದನ್ನು ಕೊಂಕಣಿಗರ ಕುಟುಂಬವೊಂದು ನಂಬಿ ಪೂಜಿಸಿಕೊಂಡು ಬರುತ್ತಿತ್ತಂತೆ. ಆಮೇಲೆ ಅವರ ಮಕ್ಕಳು, ಮೊಮ್ಮಕ್ಕಳು ಬೆಳೆದು ಕುಟುಂಬ ದೊಡ್ಡದಾಗಿ ಹೆಚ್ಚಿನವರು ದೇಶಾಂತರ ಹೊರಟು ಹೋದರಂತೆ. ಹಾಗಾಗಿ ಮೂಲದ ಹಿರಿಯರು ಸತ್ತ ಮೇಲೆ ಈ ಜಾಗ ಪಾಳು ಬಿದ್ದಿತಂತೆ. ಮುಂದೆ ಸರ್ಕಾರವು ಅದನ್ನು ಸ್ವಾಧೀನಪಡಿಸಿಕೊಂಡು ಶ್ಮಶಾನ ಮಾಡಿತಂತೆ. ಹಾಗಾಗಿ ಈ ನಾಗಸಾನವೂ ಹಾಳು ಬಿದ್ದಿತಂತೆ. ನಮ್ಮ ವಠಾರದಲ್ಲಿ ಎಲ್ಲಾದರೂ ಮೈಲಿಗೆಯಾದರೆ ಅಥವಾ ಯಾರದ್ದಾದರೂ ಹರಕೆ, ಗಿರಕೆ ಬಾಕಿಯಿದ್ದರೆ ಈ ಬನದ ದೊಡ್ಡದೊಂದು ಸೈಂಧವ ನಾಗನು ಬಂದು ನಾಲ್ಕು ದಿನ ಎಲ್ಲರ ಮನೆಯಂಗಳದಲ್ಲೂ ಸುತ್ತಾಡಿ ನೆನಪಿಸಿಕೊಟ್ಟು ಹೋಗುತ್ತಾನೆ. ಆದರೆ ಅವನು ಬರುವ ಕಾರಣ ನಮಗೆ ಗೊತ್ತಾಗದೆ ಕೆಲವು ಸಲ ಅವನನ್ನು ಹೆದರಿಸಿ ಓಡಿಸಿದ್ದೆವು. ಆಮೇಲೆ ಏನಾಯ್ತು ಗೊತ್ತುಂಟಾ? ಇದ್ದಕ್ಕಿದ್ದ ಹಾಗೆ ನಮ್ಮಲ್ಲಿ ಕೆಲವರಿಗೆ ಕಣ್ಣಿನ ದೋಷ, ಹುಳಕಜ್ಜಿ ಮತ್ತು ಬೇರೆಲ್ಲ ಚರ್ಮದ ತೊಂದರೆಗಳು ಕಾಣಿಸಿಕೊಳ್ಳಲು ಶುರುವಾದವು. ಅದರಿಂದ ನಮ್ಮವರು ಕಂಗಾಲಾಗಿ, ಹಿರಿಯರ ಸಲಹೆಯಂತೆ ನಮ್ಮ ಮೂಲಸ್ಥಾನಕ್ಕೆ ಹರಕೆ ಹೊತ್ತುಕೊಂಡು ಕ್ಷಮೆ ಕೇಳಿಕೊಂಡೆವು. ಬಳಿಕ ನಮ್ಮ ಹಿರಿಯಳೊಬ್ಬಳು ನಾಟಿಮದ್ದು ಕೊಡುವವಳಿದ್ದಾಳೆ. ಅವಳಿಂದ ಮದ್ದು ಮಾಡಿಸಿದ ನಂತರ ಆ ದೋಷಗಳು ನಿವಾರಣೆಯಾದದ್ದು ಇವತ್ತಿಗೂ ನನಗೆ ಚೆನ್ನಾಗಿ ನೆನಪಿದೆ!’ ಎಂದು ಸುರೇಶ ಪ್ರವೀಣನ ಭಯವನ್ನು ದುಪ್ಪಟ್ಟು ಮಾಡಲೆಂದೇ ಬನದ ಚರಿತ್ರೆಯನ್ನು ಬಣ್ಣಿಸಿದ. ಅಷ್ಟು ಕೇಳಿದ ಪ್ರವೀಣನ ನಶೆ ಸಂಪೂರ್ಣ ಇಳಿದುಬಿಟ್ಟಿತು. ತಾನು ಆವರೆಗೆ ನಾಗಬನದ ಮೇಲೆ ಎಸಗುತ್ತಿದ್ದ ಅಪಚಾರವನ್ನು ನೆನೆದು ನರಳಾಡಿದ.

   ಸದಾ ವ್ಯಂಗ್ಯ, ಅಸಡ್ಡೆಯ ನಗುವಿರುತ್ತಿದ್ದ ಪ್ರವೀಣನ ಗುಂಡಗಿನ ಮುಖದಲ್ಲಿ ಪುಕ್ಕಲುತನ ಕುಣಿಯತೊಡಗಿದ್ದನ್ನು ಗಮನಿಸಿದ ಸುರೇಶ ಬಹಳ ಖುಷಿಪಟ್ಟ. ದಬ್ಬಾಳಿಕೆ, ಅಪ್ರಾಮಾಣಿಕತೆಯಿಂದ ಮೆರೆಯುತ್ತ ಕೆಳವರ್ಗದವರನ್ನೂ ಬಡವರನ್ನೂ ತುಚ್ಛವಾಗಿ ಕಾಣುತ್ತಿದ್ದ ಅವನ ಮೇಲೆ ಸುರೇಶನಿಗೆ ಹಿಂದಿನಿಂದಲೂ ದ್ವೇಷವಿತ್ತು. ಅದರ ಪ್ರತಿಕಾರವನ್ನು ಈ ಮೂಲಕ ತೀರಿಸಿಕೊಂಡವನು ಸ್ವಲ್ಪ ಹಗುರವಾದ. ಈ ಕಾರಣದಿಂದಲಾದರೂ ಬಡ್ಡೀಮಗ ತನಗೆ ಮರ್ಯಾದೆ ಕೊಡುವಂತಾಗಬೇಕು ಎಂದುಕೊಂಡವನು, ‘ಹ್ಞೂಂ ಆದದ್ದು ಆಯ್ತು ಪ್ರವೀಣಣ್ಣ. ತಿಳಿಯದೆ ಆದ ತಪ್ಪಿಗೆ ನಾಗನಿಂದ ಕ್ಷಮೆಯಿದೆಯಂತೆ. ನೀವು ನಾಳೆನೇ ಹೋಗಿ ಯಾವುದಾದರೂ ಜೋಯಿಸರಲ್ಲಿ ಪ್ರಶ್ನೆಯಿಟ್ಟು ಕೇಳಿ, ಪರಿಹಾರ ಮಾಡಿಸಿಕೊಳ್ಳಿ! ಅವರಿಗೆ ಈ ಸಾನದ ಮಾಹಿತಿ ಬೇಕಿದ್ದರೆ ನಾನೇ ಕೊಡುತ್ತೇನೆ!’ ಎಂದು ಗತ್ತಿನಿಂದ ಹೇಳಿ ತೂರಾಡುತ್ತ ಹೊರಟು ಹೋದ. ಪ್ರವೀಣ ಪೂರಾ ಅಶಾಂತನಾಗಿದ್ದವನಿಗೆ ಅದೇ ಮನಸ್ಥಿತಿಯಲ್ಲಿ ಇನ್ನೊಂದು ಸಂಗತಿಯೂ ನೆನಪಾಯಿತು. ಓಹೋ, ಅದಕ್ಕೇ ಇರಬೇಕು ಕೆಲವು ಕಾಲದ ಹಿಂದೆ ನಾಗರಹಾವೊಂದು ಅಂಗಡಿಯೊಳಗೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದುದು! ಎಂದು ತಳಮಳಿಸುತ್ತ ಮನೆಯತ್ತ ನಡೆದ.

   ಆದರೆ ಈ ಘಟನೆಯನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತ ಕೆಲವು ದಿನಗಳನ್ನು ಕಳೆದ. ಆವತ್ತೊಂದು ದಿನ ಬೆಳಗ್ಗೆದ್ದು ಪಾಯಿಕಾನೆಗೆ ಹೋಗಿ ಕುಳಿತ. ಆಕಸ್ಮತ್ತಾಗಿ ಅವನ ದೃಷ್ಟಿ ತನ್ನ ಮರ್ಮಾಂಗದತ್ತ ನೆಟ್ಟಿತು. ಅದರ ಸುತ್ತಲೂ ಮತ್ತು ತೊಡೆಯ ಸಂದುಗಳಲ್ಲೂ ಕೆಂಪಗೆ ದಪ್ಪದಪ್ಪನೆಯ ಉಬ್ಬಿದ ಗಾಯಗಳಂತೆ ಕಂಡವು. ಬೆಚ್ಚಿಬಿದ್ದ! ಮಲ ಮೂತ್ರ ಕಟ್ಟಿತು. ಸಹನೆ ತಂದುಕೊಂಡು ಯೋಚಿಸಿದ. ಅರೆರೇ, ಈ ಹುಳಕಜ್ಜಿ ನಂಗೆ ಹಿಂದಿನಿಂದಲೂ ಇತ್ತಲ್ಲವಾ? ಎಂದುಕೊಂಡ. ಹೌದು ಇತ್ತು. ಆದರೆ ಇಷ್ಟೊಂದು ಕೆಂಪಗಾಗಿ ಎದ್ದು ಕಾಣುವಂತಿರಲಿಲ್ಲವಲ್ಲ! ಅಲ್ಲದೇ ಈಗ ತುರಿಕೆ, ಉರಿಯೂ ಜಾಸ್ತಿಯಾದಂತೆ ತೋರುತ್ತಿದೆ! ಎಂದು ಭ್ರಮಿಸಿದವನು ಆ ಭಾಗವನ್ನು ಪರಪರನೇ ಕೆರೆದುಕೊಂಡ. ನಿಜಕ್ಕೂ ಉರಿ ಅತಿಯಾಯಿತು. ತಟ್ಟನೇ ಹೆದರಿದ. ಅರ್ಧಂಬರ್ಧ ಶೌಚ ಮಾಡೆದ್ದು ಹೊರಗೆ ಬಂದ. ಹೆಂಡತಿ ಪಾರ್ವತಿಯನ್ನು ಹುಡುಕುತ್ತ ಅವಳ ಕೋಣೆಗೆ ನುಗ್ಗಿದ. ‘ಹೇ ಪಾರು, ಇಲ್ನೋಡು ಮಾರಾಯ್ತಿ, ಏನಾಗಿದೆ ಅಂತ…?’ ಎಂದು ಚೂರೂ ನಾಚಿಕೆಯಿಲ್ಲದೆ ತನ್ನ ಗುಪ್ತಾಂಗದ ಭಾಗವನ್ನು ಅವಳೆದುರು ಪ್ರದರ್ಶಿಸುತ್ತ ನಿಂತ. ಬೆಳ್ಳಂಬೆಳಗ್ಗೆ ಗಂಡನ ದಿವ್ಯಾಂಗ ದರ್ಶನದಿಂದ ಅವಳಿಗೆ ತಲೆಕೆಟ್ಟಂತಾಯಿತು. ‘ಅಯ್ಯಯ್ಯಯ್ಯಾ, ಥೂ! ನಿಮ್ಮದೆಂತದು ಮಾರಾಯ್ರೇ ದರಿದ್ರ ಅವತಾರ…?’ ಎಂದು ನಾಚಿಕೆ, ಅಸಹನೆಯಿಂದ ಸಿಡುಕಿದವಳು, ‘ದಿನಾ ಮೂಗಿನ ಮಟ್ಟ ಕುಡಿಯುವುದು, ಕೋಳಿಕಟ್ಟಗಳಿಗೆ ಹೋಗಿ ಬಿದ್ದುಕೊಳ್ಳುವುದು ಮತ್ತು ಅಲ್ಲಿ ವಾರಗಟ್ಟಲೆ ಮೀಯದವರೊಂದಿಗೆ ಓಡಾಡುತ್ತ ಬಂದು ಇಲ್ಲಿ ಬಿದ್ದುಕೊಳ್ಳುವುದು. ಮೈಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಭ್ಯಾಸ ಸ್ವಲ್ಪವಾದರೂ ಉಂಟಾ ನಿಮಗೆ? ಅದಕ್ಕೇ ಇಂಥದೆಲ್ಲ ರೋಗ ಬರುವುದು!’ ಎಂದಳು ಕೋಪದಿಂದ. ಆದರೆ ಗಂಡನ ಮೂತಿ ಭೀತಿಯಿಂದ ಬಿಳಿಚಿಕೊಂಡಿದ್ದನ್ನು ಕಂಡದವಳು ‘ಹ್ಞೂಂ, ಅದಕ್ಕೆ ಯಾಕೆ ಇಷ್ಟೊಂದು ಮಂಡೆಬಿಸಿ ಮಾಡ್ತೀರೀ? ಅದೊಂದು ಮಾಮೂಲು ಹುಳಕಜ್ಜಿಯಷ್ಟೆ. ಹೆಚ್ಚಿನವರಿಗೆ ಆಗುವಂಥದ್ದೇ. ಡಾಕ್ಟರ್ ರಾಜಾರಾಮರಲ್ಲಿಗೆ ಹೋಗಿ ಔಷಧಿ ತೆಗೆದುಕೊಳ್ಳಿ. ಗುಣವಾಗುತ್ತದೆ!’ ಎಂದು ಗಂಡನನ್ನು ಸಮಾಧಾನಿಸಿದಳು. ಆದರೆ ಪ್ರವೀಣನ ತಲೆಯೊಳಗೆ ಹೊಕ್ಕಿದ್ದ ಸಂಶಯದ ಭೂತವು ಅವಳ ಸರಳ ಸಲಹೆಯಿಂದ ನಿವಾರಣೆಯಾಗಲಿಲ್ಲ. ‘ಹೇ…, ಹೋಗು ಮಾರಾಯ್ತಿ ಅತ್ಲಾಗೇ… ನೀನೊಬ್ಬಳು…! ಇದು ಮದ್ದಿನಿಂದೆಲ್ಲ ಗುಣವಾಗುವ ಕಾಯಿಲೆಯಲ್ಲ…!’ ಎಂದು ಗೊಣಗಿದವನು ಇನ್ನೇನೋ ಹೇಳಲು ಬಾಯಿ ತೆರೆದ. ಆದರೂ ಸಾಧ್ಯವಾಗದೆ ಸುಮ್ಮನಾದ.

‘ಮತ್ತೆ ಹೇಗೆ? ಇನ್ನಷ್ಟು ಕುಡಿದು ಲೇಲೇ ಹಾಕಿದರೆ ಗುಣವಾಗುತ್ತದಾ? ಮಂಡೆ ಸಮ ಇಲ್ಲದಂತೆ ಮಾತಾಡಬೇಡಿ. ಸುಮ್ಮನೆ ಹೋಗಿ ಡಾಕ್ಟ್ರಿಗೆ ತೋರಿಸ್ಕೊಂಡು ಬನ್ನಿ!’ ಎಂದು ಅವಳೂ ಗದರಿಸಿದಳು. ಒಲ್ಲದ ಮನಸ್ಸಿನಿಂದ ವೈದ್ಯರ ಹತ್ತಿರ ಹೋದ. ಪ್ರಸಿದ್ಧ ಚರ್ಮರೋಗ ತಜ್ಞ ಡಾಕ್ಟರ್ ರಾಜಾರಾಮರು ಪ್ರವೀಣನನ್ನು ಎದುರು ಕುಳ್ಳಿರಿಸಿಕೊಂಡು ಅವನ ಸಮಸ್ಯಾ ಭಾಗವನ್ನು ಮೌನವಾಗಿ ಪರೀಕ್ಷಿಸಿದರು. ರೋಗ ಯಾವುದೆಂದು ತಿಳಿಯಿತು. ತುಟಿಪಿಟಿಕ್ ಎನ್ನದೆ, ಹದಿನೈದು ದಿನಗಳ ಮಾತ್ರೆ ಮತ್ತು ಮುಲಾಮು ಬರೆದು ಚೀಟಿ ಹರಿದು ಅವನ ಮುಂದಿಟ್ಟರು. ಕ್ಲಿನಿಕ್ಗೆ ಬರುವ ಮುಂಚೆ ಒಳಗೊಳಗೇ ನರಳುತ್ತಿದ್ದ ಪ್ರವೀಣ ಈಗ ವೈದ್ಯರ ನೀರಸ ಪ್ರತಿಕ್ರಿಯೆಯಿಂದ ಇನ್ನಷ್ಟು ತಳಮಳಿಸಿದ. ಈ ಡಾಕ್ಟರಾದರೂ ಇದು ನಾಗದೋಷದಿಂದ ಬಂದ ಕಾಯಿಲೆ ಅಂತ ಹೇಳಿಬಿಡಲಿ ದೇವರೇ…! ಎಂದು ಅವನ ಮನಸ್ಸು ಚೀರುತ್ತಿತ್ತು. ಆದರೆ ವೈದ್ಯರಿಂದ ಪ್ರಿಸ್ಕ್ರಿಪ್ಶನ್ ಚೀಟಿ ಹರಿದ ಸದ್ದೊಂದನ್ನು ಹೊರತುಪಡಿಸಿ ಬೇರೇನೂ ಹೊರಡಲಿಲ್ಲ. ಆದ್ದರಿಂದ ಅವನಿಗೆ ತಾನೇ ತುಟಿ ಬಿಚ್ಚುವುದು ಅನಿವಾರ್ಯವಾಯಿತು. ‘ಇದು ರೋಗ ನನಗೆ ಹೇಗೆ ಬಂತು ಡಾಕ್ಟ್ರೇ…?’ ಎಂದು ತಡವರಿಸುತ್ತ ಪ್ರಶ್ನಿಸಿದ.

   ವೈದ್ಯರು ಅವನನ್ನೊಮ್ಮೆ ಆಪಾದಮಸ್ತಕ ದಿಟ್ಟಿಸಿದವರು, ‘ಒದ್ದೆ ಬಟ್ಟೆ ತೊಡುವುದರಿಂದ ಬಂದಿರಬಹುದು. ಆ ಭಾಗವನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ. ಈ ಔಷಧಿ ತೆಗೆದುಕೊಳ್ಳಿ ಗುಣವಾಗುತ್ತೆ’ ಎಂದರು. ಅವರ ಅಷ್ಟು ಮಾತಿನಲ್ಲಿ, ‘ನೀನಿನ್ನು ಹೊರಡಬಹುದು!’ ಎಂಬ ಸೂಚನೆಯೂ ಇತ್ತು. ಆದರೆ ಅವರ ಆ ಸಣ್ಣ ಉತ್ತರದಿಂದ ಪ್ರವೀಣನ ಸಂಶಯ ನಿವಾರಣೆಯಾಗಲಿಲ್ಲ. ಅವನು ಅದೇ ಗುಂಗಿನಲ್ಲಿ ಎದ್ದವನು ವೈದ್ಯರ ದುಡ್ಡುಕೊಟ್ಟು ಕ್ಲಿನಿಕ್ನ ಎದುರಿಗಿದ್ದ ಗಣೇಶ್ ಮೆಡಿಕಲ್ಗೆ ಹೋದ. ಆದರೆ ಅವನಿಗೆ ಔಷಧಿಯ ಮೇಲೆ ಚೂರೂ ನಂಬಿಕೆ ಹುಟ್ಟಲಿಲ್ಲ. ಆದರೂ ಏಳುನೂರು ರೂಪಾಯಿ ಕೊಟ್ಟು ಔಷಧಿ ತೆಗೆದುಕೊಂಡು ಕಾರಿನ ಹಿಂದಿನ ಸೀಟಿಗೆ ಅದನ್ನೆಸೆದು ಮನೆಗೆ ಹೊರಟ. ಅಂಥ ಪವಿತ್ರ ಸ್ಥಳದಲ್ಲಿ ಮೂತ್ರ ಹುಯ್ದುದೇ ಈ ರೋಗಕ್ಕೆ ಕಾರಣ! ಎಂದು ಅವನು ಬಲವಾಗಿ ನಂಬಿಬಿಟ್ಟಿದ್ದ. ಆ ಕೊರಗಿನಿಂದಲೇ ದಿನೇದಿನೇ ಕುಗ್ಗುತ್ತ ಸಾಗಿದ.

   ಇದೇ ಸಮಯದಲ್ಲಿ ಇನ್ನೊಂದು ಘಟನೆ ನಡೆಯಿತು. ವಿಪರೀತ ಹೊಟ್ಟೆ ಹಸಿದಿದ್ದ ನಾಗರಹಾವೊಂದು ಪ್ರವೀಣನ ಅಂಗಡಿಯಲ್ಲಿ ಇಲಿ, ಹೆಗ್ಗಣಗಳಿರುವುದನ್ನು ಪತ್ತೆಹಚ್ಚಿ ಒಳಗೆ ನುಸುಳಿ ಅವನ್ನು ಬೇಟೆಯಾಡತೊಡಗಿತು. ಇಲಿಗಳು ತಮ್ಮನ್ನು ಬೆಂಬತ್ತುವ ಹಾವುಗಳಿಂದ ತಪ್ಪಿಸಿಕೊಳ್ಳುತ್ತ ಅವುಗಳ ಸಮೀಪದಲ್ಲೇ ಮತ್ತು ಸುತ್ತಮುತ್ತಲೇ ಓಡಾಡಿಕೊಂಡು ಬದುಕುವಂಥ ಕಲೆಯನ್ನು ಕರಗತ ಮಾಡಿಕೊಂಡಿವೆ. ಆದರೆ ಅವುಗಳ ಅಂಥ ಜೀವನ ಕೌಶಲ್ಯವನ್ನು ತಾನೂ ತಿಳಿದಿದ್ದ ಈ ಹಾವು ಕೂಡಾ ಹಠಬಿಡದೆ ಅವುಗಳ ಬೇಟೆಯಲ್ಲಿ ಮಗ್ನವಾಗಿತ್ತು. ಆದರೆ ಅಂಗಡಿಯೊಳಗೆ ಗುಪ್ತವಾಗಿ ಓಡಾಡಿಕೊಂಡಿದ್ದ ಹಾವನ್ನು ಕಾಣದ ಶ್ರೀನಿವಾಸ ಒಮ್ಮೆ ಅದರ ಬಾಲವನ್ನು ತುಳಿದುಬಿಟ್ಟ. ನೋವಿನಿಂದ ಕಂಗಾಲಾದ ಹಾವು ತೀಕ್ಷ್ಣವಾಗಿ ಅವನಿಗೆ ಕಡಿಯಿತು. ಅವನ ಬೊಬ್ಬೆಗೆ ಅಕ್ಕಪಕ್ಕದವರು ಧಾವಿಸಿ ಬಂದು ಕೂಡಲೇ ಅವನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು.

(ಮುಂದುರೆಯುವುದು)

*****************************

ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top