ಲಕ್ಕಪ್ಪನ ಹಳ್ಳ

ಕಾವ್ಯಯಾನ

ಲಕ್ಕಪ್ಪನ ಹಳ್ಳ

ನೇತ್ರ ಹಲಗೇರಿ

ಗುಡಿ ಬಯಲು ಕಡೆ ಭಾಗ
ಗಡಿ ಹೊಲದ ಹಾದಿ
ಗೋರ್ಪಿ ಕಲ್ಲು ಕೆಮ್ಮಣ್ಣಿನ ಅಂಕುಡೊಂಕು
ಹಚ್ಚ ಹಸಿರು ಬತ್ತದ ಸೊಗಡು

ದಾರಿಯುದ್ದಕ್ಕೂ ಹಾದರಗಿತ್ತಿ ಮುಳ್ಳಿನ
ಬಳ್ಳಿಯ ಬರಿ ಮುತ್ತುಗಗಳು
ಚುಚ್ಚಿದರೆ ಜಾಲಿಗಿಂತಲೂ ವೇದನೆ
ಬುದ್ದಿ ಚುರುಕಿಸುವ ಚುಚ್ಚುಮದ್ದುಗಳು

ಅಲ್ಲಲ್ಲಿ ಪೊರೆ ಪೊಟರೆ ರಕ್ಕಸಪಟ್ಟಿಯ
ಕಂಟಿಗಳು ಸುಳಿಸುತ್ತಿಕೊಂಡ ನಾಗರಸರ್ಪಗಳು
ತಲೆ ಎತ್ತಿ ಭಿಸುಗುಟ್ಟುವವು ಹಿಸ್ ಎಂದು
ಆ ಹೊಲದ ಹಾದಿಯಲ್ಲೇ ಲಕ್ಕಪ್ಪನ ಹಳ್ಳ!

ರಸ್ತೆ ವಿಭಜಿಸಿ ಕೆಂಪು ಮಿಶ್ರಿತ ಕೆಸರ ನೀರು
ಜುಳು ಜುಳು ಸದ್ದು ತನ್ನೊಂದಿಗೆ ಗಿಡ-ಗಂಟಿ
ಕರಿ-ಬಿಳಿ ಕಪ್ಪೆಗಳ ಕೊಟ್ರಕ್ ಕೊಟ್ರಕ್ ಕೊರೆತ
ಟನ್ ಟನ್ ನೆಗೆತ ದಡದಲ್ಲಿ ಮರಿಗಳೊಂದಿಗೆ

ಬೆಳ್ಳಕ್ಕಿ ಕಾಗೆಗಳ ಹಿಂಡು ದಂಡು ಕುಕ್ಕಿ
ಸಾಯಿಸುವ ನರಕ ಪಟ ವಿಲಿವಿಲಿ ಒದ್ದಾಟ
ಗೊಲ್ಲನ ನಾಯಿಗಳ ಹೊಂಚು ಸಂಚು
ಹಕ್ಕಿಪಕ್ಕಿ ಹಿಡಿದೇ ತೀರುವೆವೆಂಬ ಛಲ ಬಲ

ಲಕ್ಕಪ್ಪನ ಹಳ್ಳದ ಸೃಷ್ಟಿಯೇ ಒಂದು ವಿಸ್ಮಯ
ಸುತ್ತೆಲ್ಲ ಗದ್ದೆ ಕೋವುಗಳ ಧುಮ್ಮಿಕ್ಕುವ ಗಂಗೆ
ಬೇಸಿಗೆಯಲ್ಲೂ ಬತ್ತದ ಜರಿ ನೀರಿನಾ ಬಗ್ಗೆ
ಸುತ್ತೆಲ್ಲಾ ಬೆರಗು ಭುವನದ ಚೋದ್ಯ ವೇದ್ಯ

ಗದ್ದೆಯ ಮಧ್ಯೆ ಬೇವಿನ ಮರದಡಿ
ಚೌಡವ್ವನಾಶ್ರಯ ದನಕರು ಕಾವಲು
ದೇವತೆ ಕರು ಹಾಕಿದೊಡೆ ಮೀಸಲು
ಗಿಣ್ಣ ತುಪ್ಪದ ನೈವೇದ್ಯವವಳಿಗೆ ತಾಯಿಗೆ

ವರ್ಷಕ್ಕೆ ಮೂರ್ನಾಲ್ಕು ಬಾರಿ ಮೊಸರನ್ನದೂಟ
ಇವಳೆದೆಯಲ್ಲಿ ಲಕ್ಕಪ್ಪನ ಹಳ್ಳದಡಿಯಲ್ಲಿ ಎಗ್ಗಿಲ್ಲದೆ
ತಿರುಗೀ ತಿರುಗೀ ಕೊನೆಗೆ ತಯಿಯೆದುರೇ ನುಗ್ಗಿ ಹರಿದು
ಜೊರ್ರೆಂದು ಜಾರಿ ನಾಯಕನಹಟ್ಟಿ ದೊಡ್ಡಃಳ್ಳ ಸೇರಿದಾಗಲೇ ಮುಕ್ತಿ…

***

15 thoughts on “ಲಕ್ಕಪ್ಪನ ಹಳ್ಳ

  1. Super medam thumba thumba thumba thumba thumba thumba thumba thumba thumba thumba thumba thumba thumba chanagide bhala esta aythu medam … Nam Halgeri sir yallu ogilla nimmalliye eddare e Lin’s nodudre ha Nam Gurugale Nenupu agtha edare

  2. ನಿಮ್ಮ ಬರಹ ಹಳ್ಳಿಯ ಬಾಲ್ಯ ಜೀವನವನ್ನು ಮತ್ತೆ ನೆನಪಿಸಿದಂತಾಗಿದೆ..

  3. ಸ್ವದೃಶ್ಯಾನುಭವ ಆಗುವ ಹಾಗೆ ನುಡಿಮುತ್ತುಗಳ ಪೋಣಿಸಿರುವಿರಿ
    ಧನ್ಯವಾದಗಳು ಮೇಡಂ

Leave a Reply

Back To Top