ಕಥೆ
“ತುಂಡು ಭೂಮಿ ಮತ್ತು ಬುದ್ಧ”
ವಿಶ್ವನಾಥ ಎನ್ ನೇರಳಕಟ್ಟೆ
ಸಂಜೆ ಕವಿಯುತ್ತಿದ್ದಂತೆ ನಿಧಾನವಾಗಿ ಶುರುವಾದ ಮಳೆ ಹೊತ್ತು ಕಳೆಯುತ್ತಾ ಬಿರುಸಾಗಲಾರಂಭಿಸಿತ್ತು. ಜೊತೆಗೆ ಗುಡುಗೂ ಸಿಡಿಲೂ ರಭಸದ ಗಾಳಿಯೂ ಸೇರಿಕೊಂಡು ಮನೆಯಿಂದ ಹೊರಹೋಗಲಾರದ ಭೀಕರತೆ ಸೃಷ್ಟಿಯಾಗಿತ್ತು. ಸಂಜೆ ಹೊತ್ತು ಆಟವಾಡಬೇಕೆಂದು ಯೋಜಿಸಿ, ಶಾಲೆಯಿಂದ ಬರುವಾಗಲೇ ಹೊಸ ಬ್ಯಾಟೂ ಬಾಲೂ ಹೊತ್ತು ತಂದಿದ್ದ ಶ್ಯಾಮೇಗೌಡರ ಇಬ್ಬರು ತುಂಟ ಮೊಮ್ಮಕ್ಕಳ ಮುಖ ಬಾಡಿಹೋಗಿತ್ತು. ಮೊಮ್ಮಕ್ಕಳ ಸಪ್ಪೆ ಮುಖ ನೋಡಲಾರದೆ ಶ್ಯಾಮೇಗೌಡರು ಅಟ್ಟ ಸೇರಿದ್ದ ಹಳೆಯ ಕಾಲದ ಚದುರಂಗದಾಟದ ಮಣೆಯನ್ನೂ ಕಾಯಿಗಳನ್ನೂ ಹುಡುಕಿ ತಂದು, ಮೊಮ್ಮಕ್ಕಳ ಎದುರಿನಲ್ಲಿಟ್ಟರು. ತಾನೇ ಅವರಿಗೆ ಚದುರಂಗದಾಟ ಹೇಳಿಕೊಟ್ಟು, ಮಿಂಚಬೇಕೆಂದುಕೊಂಡಿದ್ದ ಶ್ಯಾಮೇಗೌಡರಿಗೆ ತನ್ನ ಮೊಮ್ಮಕ್ಕಳು ಈಗಾಗಲೇ ಚದುರಂಗ ಪ್ರವೀಣರಾಗಿದ್ದಾರೆ ಎಂದು ತಿಳಿದಾಗ ಒಂದಷ್ಟು ನಿರಾಸೆ ಆದದ್ದು ನಿಜ. ಆದರೂ ಅಲ್ಲೇ ಅವರ ಪಕ್ಕದಲ್ಲೇ ತೂಗಾಡುವ ಕುರ್ಚಿ ಮೇಲೆ ಕುಳಿತು, ಅವರ ಆಟವನ್ನು ನೋಡತೊಡಗಿದರು. ಮೊಮ್ಮಕ್ಕಳು ಆನೆ, ಕುದುರೆ, ಒಂಟೆ, ಮಂತ್ರಿ, ರಾಜ, ಕಾಲಾಳುಗಳನ್ನು ಕ್ರಮದಲ್ಲಿ ಜೋಡಿಸತೊಡಗಿದ್ದರು. ಅಷ್ಟಾಗುವಾಗಲೇ ಶ್ಯಾಮೇಗೌಡರಿಗೆ ತೋಟದ ಪಂಪ್ ಹೌಸಿನ ಸ್ವಿಚ್ಚನ್ನು ಆಫ್ ಮಾಡಿಲ್ಲ ಎನ್ನುವುದು ನೆನಪಾಯಿತು. ಕತ್ತಲು ಕವಿಯುತ್ತಿರುವ ಹೊತ್ತಿನಲ್ಲಿ ಸೊಸೆಯನ್ನು ಆ ಕಡೆಗೆ ಕಳಿಸುವುದು ಸರಿಯಲ್ಲ ಎಂದು ಅವರ ಪ್ರಜ್ಞೆ ನುಡಿಯಿತು. ಅರುವತ್ತಕ್ಕೆ ಅರುಳುಮರುಳು ಎನ್ನುವಂತೆ ಇತ್ತೀಚೆಗೆ ಅಧಿಕಗೊಳ್ಳುತ್ತಿರುವ ತನ್ನ ಮರೆವಿಗೆ ಬೈದುಕೊಳ್ಳುತ್ತಲೇ, ಕೊಡೆ ಹಿಡಿದುಕೊಂಡು ತೋಟದಲ್ಲಿದ್ದ ಪಂಪ್ ಹೌಸ್ ಕಡೆಗೆ ಹೆಜ್ಜೆ ಹಾಕತೊಡಗಿದರು. ಗುಡುಗು ಸಿಡಿಲು ಕಡಿಮೆ ಆಗಿದ್ದರಿಂದ ಅವರ ಓಡಾಟಕ್ಕೆ ಏನೂ ತೊಂದರೆ ಉಂಟಾಗಲಿಲ್ಲ.
ಸ್ವಿಚ್ಚನ್ನು ಆಫ್ ಮಾಡಿದ ಶ್ಯಾಮೇಗೌಡರ ಕಣ್ಣುಗಳು ತೋಟದ ಗಡಿಯಾಚೆಗೆ ನೆಟ್ಟವು. ಬೇಡ ಬೇಡವೆಂದರೂ ಕೇಳದ ಕಣ್ಣುಗಳು ಗಡಿಯಾಚೆಗಿನ ತೋಟದ ಕಡೆಗೆ, ಅರ್ಥಾತ್ ರಾಮೇಗೌಡರ ತೋಟದ ಕಡೆಗೆ ಹೊರಳಿದವು. ತಮ್ಮ ಮಗನ ರಕ್ತಸಿಕ್ತ ದೇಹವೇ ಕಣ್ಣಮುಂದೆ ಬಂದಂತಾಯಿತು. ಅರೆಕ್ಷಣವೂ ಅಲ್ಲಿ ನಿಲ್ಲಲಾಗಲಿಲ್ಲ ಶ್ಯಾಮೇಗೌಡರಿಗೆ. ಮಗನನ್ನು ಕಳೆದುಕೊಂಡ ಬಳಿಕ ಒಂದು ದಿನವೂ ಅವರು ಈ ಪಂಪ್ ಹೌಸ್ ಕಡೆಗೆ ಬಂದದ್ದಿಲ್ಲ. ಅಂದರೆ, ಅವರು ಈ ಕಡೆಗೆ ಬಂದು ಏಳೂವರೆ ತಿಂಗಳುಗಳೇ ಕಳೆದಿವೆ. ಸುಪ್ತವಾಗಿದ್ದ ಆಕ್ರೋಶ, ಆವೇಶಗಳು ಈಗ ಅವರಲ್ಲಿ ಮರುಜೀವ ಪಡೆದಂತಾಗಿತ್ತು. ಕೊಡೆಯ ಹಿಡಿಯನ್ನು ಬಲವಾಗಿ ಹಿಡಿದುಕೊಂಡ ಅವರು ಮನೆ ಕಡೆಗೆ ನಡೆಯುತ್ತಲೇ ಅವುಡುಗಚ್ಚಿ ನುಡಿದರು- “ನನ್ನ ಮಗನ ಮೊದಲನೇ ವರ್ಷದ ತಿಥಿ ಮುಗಿಯುವುದರೊಳಗೆ ಆ ಬೋಸುಡಿಮಗ ರಾಮೇಗೌಡನ ತಲೆ ಕಡಿದು ಹಾಕದಿದ್ದರೆ ನಾನು ನನ್ನಪ್ಪನಿಗೆ ಹುಟ್ಟಿದವನೇ ಅಲ್ಲ.”
ಶ್ಯಾಮೇಗೌಡರು ಒಳ್ಳೆಯ ಕೃಷಿಕನಾಗಿ ಗುರುತಿಸಿಕೊಂಡವರು. ವಯಸ್ಸು ೬೯ ಕಳೆದಿದ್ದರೂ ತೋಟಕ್ಕಿಳಿದ ತಕ್ಷಣ ೧೮ರ ಹರೆಯದ ಜವ್ವನಿಗ ಆಗಿಬಿಡುತ್ತಾರೆ. ಅಣ್ಣ ತಮ್ಮಂದಿರ ಮಧ್ಯೆ ಪಾಲಾಗುವಾಗ ತನಗೆ ದಕ್ಕಿದ ಎರಡೂವರೆ ಎಕರೆ ಬಂಜರು ನೆಲವನ್ನು ಹಸಿರಿನಿಂದ ನಳನಳಿಸುವ ತೋಟವಾಗಿ ಮಾರ್ಪಡಿಸಿದ್ದು ಅವರ ದಕ್ಷ ದುಡಿಮೆಗೆ ಸಾಕ್ಷಿ.
ಹೀಗೆ ಶ್ಯಾಮೇಗೌಡರು ಉದ್ಧರಿಸಿದ ಭೂಮಿಯನ್ನು ಅವರ ಮಗ ಸುಂದರೇಗೌಡ ತನ್ನಪ್ಪನಂತೆಯೇ ಪೋಷಿಸಿಕೊಂಡು ಬಂದಿದ್ದ. ಇದರಿಂದಾಗಿ ತೋಟದ ಫಸಲು ೧೬ ಖಂಡಿ ಅಡಿಕೆಯಿಂದ ೨೦ ಖಂಡಿಗೆ ಏರಿತ್ತು. ಹೀಗೆ ಶ್ಯಾಮೇಗೌಡರ ಕುಟುಂಬ ಒಂದು ಮಟ್ಟಕ್ಕೆ ಅಭಿವೃದ್ಧಿಗೊಂಡಿತು ಎನ್ನುವಾಗಲೇ ಅವರ ತೋಟಕ್ಕೆ ತಾಗಿಕೊಂಡಂತೆ ಇದ್ದ ರಾಮೇಗೌಡರು ಗಡಿ ವಿಷಯವಾಗಿ ತಗಾದೆ ತೆಗೆದಿದ್ದರು. ತಮ್ಮ ಗಡಿಯಿಂದಾಚೆಗೆ ಮಣ್ಣನ್ನು ಹಾಕಿ, ಎತ್ತರಕ್ಕೇರಿಸಿ, ತನ್ನ ತೋಟದ ಜಾಗವನ್ನು ಕಬಳಿಸಿದ್ದಾರೆ ಎಂಬ ಆರೋಪ ರಾಮೇಗೌಡರದ್ದಾಗಿತ್ತು. ವಾಸ್ತವವಾಗಿ ರಾಮೇಗೌಡರ ಮಾತಿನಲ್ಲಿ ಸತ್ಯ ಇರಲಿಲ್ಲ. ಶ್ಯಾಮೇಗೌಡರ ತೋಟದಲ್ಲಿದ್ದ ಅಡಿಕೆ ಮರಗಳು ತಮ್ಮ ತೋಟದ ಅಡಿಕೆ ಮರಗಳಿಗಿಂತ ಜಾಸ್ತಿ ಫಸಲು ಕೊಡುತ್ತಿವೆ ಎಂಬ ಮತ್ಸರವೇ ರಾಮೇಗೌಡರ ಜಗಳದ ಹಿಂದಿನ ಅಸಲಿ ಕಾರಣವಾಗಿತ್ತು.
ಪದೇ ಪದೇ ಉಂಟಾಗುತ್ತಿರುವ ಜಗಳವನ್ನು ಕಾನೂನಿನ ಮೂಲಕವೇ ಬಗೆಹರಿಸಿಕೊಳ್ಳಲು ಬಯಸಿದ ಶ್ಯಾಮೇಗೌಡರು ಕೋರ್ಟ್ ಮೆಟ್ಟಿಲು ತುಳಿದಿದ್ದರು. ಇದರಿಂದ ಮತ್ತಷ್ಟು ಕೆರಳಿದ್ದ ರಾಮೇಗೌಡರು ಹಾಗೂ ಆತನ ಮಗ ಕಾಳೇಗೌಡ ಅದೊಂದು ಸಂಜೆ ತೋಟಕ್ಕೆ ಹೋದ ಸುಂದರೇಗೌಡನನ್ನು ಬೇಕೆಂದೇ ಕೆಣಕಿ, ಮೊದಲೇ ಸಿದ್ಧಪಡಿಸಿಕೊಂಡು ಬಂದಿದ್ದ ಕುಡುಗೋಲಿನಿಂದ ಆತನ ತಲೆ ಕಡಿದು, ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ತಾಲೂಕಾಸ್ಪತ್ರೆಗೆ ಸಾಗಿಸಿ, ಜಿಲ್ಲೆಯ ಪ್ರಸಿದ್ಧ ಆಸ್ಪತ್ರೆಗೆ ರವಾನಿಸಿದರೂ ಶ್ಯಾಮೇಗೌಡರಿಗೆ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ. ಇದ್ದೊಬ್ಬ ಗಂಡುಮಗನನ್ನು ಹಿರಿವಯಸ್ಸಿನಲ್ಲಿ ಕಳೆದುಕೊಂಡ ನೋವು ಅವರದ್ದಾಗಿತ್ತು.
ಮಗ ಸತ್ತಮೇಲಂತೂ ಶ್ಯಾಮೇಗೌಡರ ಹಠ ಮತ್ತಷ್ಟು ಜಾಸ್ತಿಯಾಯಿತು. ಕೋರ್ಟಿನಲ್ಲಿ ಅವರನ್ನು ಸೋಲಿಸದೇ ಬಿಡುವುದಿಲ್ಲ ಎಂಬ ಜಿದ್ದು ಅವರಲ್ಲಿ ಇದ್ದುದರಿಂದಲೇ ಕೋರ್ಟು ವಿಚಾರಣೆಗೆ ತಪ್ಪದೇ ಹಾಜರಾಗುತ್ತಿದ್ದರು.
ಶ್ಯಾಮೇಗೌಡರು ಮನೆಯಂಗಳವನ್ನು ತಲುಪಿದಾಗ ಮೊಮ್ಮಕ್ಕಳ ಬೊಬ್ಬೆ ಕೇಳಿಬರುತ್ತಿತ್ತು- “ನೀನು ನನ್ನ ಆನೆಯನ್ನು ಕಡಿದರೆ ನಾನು ನಿನ್ನ ಕುದುರೆಯನ್ನು ಕಡಿಯುತ್ತೇನೆ”, ಹೋ ಹೌದಾ? ನಿನ್ನ ಒಂಟೆಯನ್ನು ಕಡಿಯದೇ ಬಿಡುವುದಿಲ್ಲ”, “ನಾನೂ ಸುಮ್ಮನಿರುವುದಿಲ್ಲ. ನಿನ್ನ ಮಂತ್ರಿ ಹೋಯ್ತು”, “ನಿನ್ನ ಮಂತ್ರಿಯೂ ಹೋಯ್ತು”, “ಈ ಕಾಲಾಳು ಇದ್ದರೂ ಒಂದೇ ಹೋದರೂ ಒಂದೇ” “ಹೌದಾ? ಹಾಗಿದ್ದರೆ ನಿನ್ನ ಕಾಲಾಳಿಗೂ ಅದೇ ಗತಿ”
ಶ್ಯಾಮೇಗೌಡರು ಚಾವಡಿಗೆ ಕಾಲಿರಿಸಿದಾಗ ಚದುರಂಗ ಮಣೆಯ ಎಲ್ಲಾ ಕಾಯಿಗಳೂ ಉರುಳಿ, ಎರಡೂ ಪಕ್ಷದ ರಾಜರುಗಳು ಕಾಲೆಳೆಯುತ್ತಾ ಒಂದೊಂದೇ ಹೆಜ್ಜೆ ಇರಿಸಿಕೊಂಡು ತಮ್ಮ ತಮ್ಮ ರಕ್ಷಣೆಗೆ ಗಮನಹರಿಸಿದ್ದವು. ಶ್ಯಾಮೇಗೌಡರು ಆ ಎರಡು ರಾಜರುಗಳಲ್ಲಿ ತನ್ನನ್ನು ಮತ್ತು ರಾಮೇಗೌಡನನ್ನು, ಉರುಳಿಬಿದ್ದಿರುವ ಕಾಯಿಗಳಲ್ಲಿ ತಮ್ಮಿಬ್ಬರ ಕುಟುಂಬ ಸದಸ್ಯರನ್ನು ಕಂಡರು. ಸರಿಯಾಗಿ ಕಿರುಬೆರಳೂ ಊರಲಾರದ ಜಾಗಕ್ಕಾಗಿ ಇಷ್ಟೆಲ್ಲಾ ದ್ವೇಷ ವೈಷಮ್ಯ ಅಗತ್ಯವಿದೆಯೇ? ಎಂದು ಅವರ ಒಳಮನಸ್ಸು ನುಡಿಯಿತು.
ಈ ಸಂಘರ್ಷ ಎಲ್ಲಿಯವರೆಗೆ ನಡೆಯುತ್ತದೆ? ನಾಳೆ ದಿನ ಅವನ ಮಗನನ್ನು ನಾನು ತರಿದು ಹಾಕುತ್ತಾನೆ. ನನ್ನ ಮೊಮ್ಮಗನನ್ನು ಅವನು ಕಡಿದು ಹಾಕುತ್ತಾನೆ. ಮತ್ತೆ ನನ್ನ ಮೊಮ್ಮಗ ಅವನ ಮೊಮ್ಮಗನನ್ನು…ಮತ್ತೆ ಅವನ ಮರಿಮಗ ನನ್ನ ಮೊಮ್ಮಗನನ್ನು…ಸರಪಣಿ ಮುಂದುವರಿಯುತ್ತದೆ. ಕೊನೆಗೆ ನಾನೂ ರಾಮೇಗೌಡನೂ ಈ ಚದುರಂಗದ ರಾಜರುಗಳಂತೆ ಒಂದೊಂದೇ ಹೆಜ್ಜೆ ಇರಿಸುತ್ತಾ ಮಾನವೀಯತೆಯ ಪರ್ವತದಿಂದ ಅಮಾನುಷತೆಯ ಕಂದರಕ್ಕೆ ಬೀಳುತ್ತೇವೆ.
ಯೋಚಿಸಿದ ಶ್ಯಾಮೇಗೌಡರು ತಮ್ಮ ಕಡೆಯ ವಕೀಲರಿಗೆ ಕರೆಮಾಡಿ ಹೇಳಿದರು- “ಆ ರಾಮೇಗೌಡನ ವಿರುದ್ಧದ ಕೇಸು ಹಿಂದೆಗೆದುಕೊಳ್ಳುತ್ತೇನೆ. ತಕ್ಷಣ ಅದಕ್ಕೆ ವ್ಯವಸ್ಥೆ ಮಾಡಿ”
ಇದಾಗಿ ಒಂದು ವಾರ ಕಳೆದಿತ್ತು. ಪೇಟೆಯಿಂದ ಮನೆ ಕಡೆಗೆ ಮರಳುತ್ತಿದ್ದ ಶ್ಯಾಮೇಗೌಡರು ಹುರುಪಿನಲ್ಲಿದ್ದರು. ತುಸು ಸಮಯ ಮೊದಲು ಸಿಕ್ಕಿದ ರಾಮೇಗೌಡರು ತನ್ನ ಕೈಹಿಡಿದು ಕಣ್ಣಲ್ಲಿ ನೀರು ತುಂಬಿಸಿಕೊಂಡು ನುಡಿದ ಮಾತು ಅವರ ಮನಸ್ಸಿನಲ್ಲಿ ರಿಂಗಣಿಸುತ್ತಿತ್ತು- “ನಿಜವಾಗಿಯೂ ನಿನ್ನ ಕುಟುಂಬಕ್ಕೆ ನಾನು ದೊಡ್ಡ ಅನ್ಯಾಯ ಮಾಡಿದೆ ಶ್ಯಾಮಣ್ಣ. ಆದರೂ ನೀನು ನನ್ನ ತಪ್ಪನ್ನು ಕ್ಷಮಿಸಿ ದೊಡ್ಡವ ಎನಿಸಿಕೊಂಡೆ. ನನಗೀಗ ನಿಜವಾಗಿಯೂ ಆ ತುಂಡು ಭೂಮಿಯ ಮೇಲೆ ಒಂದಿಷ್ಟೂ ಆಸೆಯಿಲ್ಲ. ಬೇಕಿದ್ದರೆ ನೀನೇ ಆ ಭೂಮಿಯನ್ನು ಇಟ್ಟುಕೋ. ನಾನೇನು ಬಾಯಿಮಾತಿಗೆ ಹೀಗೆ ಹೇಳುತ್ತಿಲ್ಲ. ನನ್ನ ಹೆತ್ತಬ್ಬೆಯ ಮೇಲಾಣೆ, ಊರದೇವತೆ ಮಾರಿಯಮ್ಮನ ಮೇಲಾಣೆ.”
ಶ್ಯಾಮೇಗೌಡರು ಮನೆಯ ಚಾವಡಿ ತಲುಪಿದಾಗ ಅವರ ದೊಡ್ಡ ಮೊಮ್ಮಗ ಶಾಲೆಯ ಪಠ್ಯಪುಸ್ತಕ ಹಿಡಿದುಕೊಂಡು ಬುದ್ಧನ ಬೋಧನೆಗಳನ್ನು ಜೋರಾಗಿ ಉರುಹೊಡೆಯುತ್ತಿದ್ದ- “ಇತರರನ್ನು ಕ್ಷಮಿಸಬೇಕಾದದ್ದು ಅವರು ಕ್ಷಮೆಗೆ ಅರ್ಹರೆಂಬ ಕಾರಣಕ್ಕಾಗಿ ಅಲ್ಲ; ನೀವು ಶಾಂತಿಗೆ ಅರ್ಹರೆಂಬ ಕಾರಣಕ್ಕಾಗಿ…..”
***