ಪ್ರಜಾಪ್ರಭುತ್ವವಾದಿ ಬಸವಣ್ಣ

ಲೇಖನ

ಪ್ರಜಾಪ್ರಭುತ್ವವಾದಿ

ಬಸವಣ್ಣ

ಶುಭಲಕ್ಷ್ಮಿ ಆರ್ ನಾಯಕ

Basava - Wikipedia

ಹನ್ನೆರಡನೆಯ ಶತಮಾನ ಮಾನವತೆಯ ಸಾಮಾಜಿಕ, ಸಾಹಿತ್ಯಿಕ, ರಾಜಕೀಯ, ಧಾರ್ಮಿಕ ಬದಲಾವಣೆಯ , ಸುಧಾರಣೆಯ ಒಂದು ಪರ್ವಕಾಲ.ಬದುಕಿನ ಮೂಲ ಸೂತ್ರವಾದ ಶಿವಶರಣರ ವಚನ ಸಾಹಿತ್ಯದ  ಉಗಮದ , ಉಚ್ಛ್ರಾಯದ ಕಾಲ.ಕಾರಣ ಸಮಾಜದಲ್ಲಿಯ ಅಸಮಾನತೆ, ದುರ್ಬಲರ ಶೋಷಣೆ, ಜಾತೀಯತೆ, ಮೇಲುಕೀಳೆಂಬ ತಾರತಮ್ಯ, ಅಸ್ಪ್ರಶ್ಯತೆ, ಮೂಢನಂಬಿಕೆಗಳು , ಅನಕ್ಷರತೆ ಮುಂತಾದ ಸಮಸ್ಯೆಗಳಿಂದ ತಲ್ಲಣಿಸಿದ ಶ್ರಮಜೀವಿಗಳು, ಬಡವರು, ಮಹಿಳೆಯರು, ದುರ್ಬಲರು ಹತಾಶರಾದ  ಸ್ಥಿತಿಯಲ್ಲಿರುವಾಗ ಜಗಜ್ಯೋತಿ ಬಸವಣ್ಣರಾದಿಯಾಗಿ ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ,ಅಂಬಿಗರ ಚೌಡಯ್ಯ, ಆಯ್ದಕ್ಕಿಲಕ್ಕಮ್ಮ ಇವರೆಲ್ಲರಿಂದ ಬೆಳಗಿದ ವಚನಸಾಹಿತ್ಯ ಭಕ್ತಿ, ಕಾಯಕ, ಸಾಮಾಜಿಕ,ಧಾರ್ಮಿಕ  ಸುಧಾರಣಾ ಕ್ರಾಂತಿಯನ್ನು ಮಾಡಿತು.ನುಡಿಹಾಗೂ ನಡೆಯಲ್ಲಿ ಅಂತರವಿರದ ತತ್ವಾದರ್ಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವಚನ ಸಾಹಿತ್ಯದ ಶರಣ ಸಂಸ್ಕ್ರತಿಯ ಮೂಲಕ ಸಮಾಜದ ಅನಿಷ್ಟಗಳನ್ನು ತೊಡೆಯಲು ಕಟಿಬದ್ಧರಾದರು ಶರಣರು.

ಅನುಭಾವಿ ಬಸವಣ್ಣರಿಂದ ಸ್ಥಾಪಿತವಾದ ಅನುಭವ ಮಂಟಪದ ಮೂಲಕ  ಸಮಾನತೆ, ಆಧ್ಯಾತ್ಮಿಕತೆ, ಸಹೋದರತ್ವ, ನಡೆನುಡಿಗಳ ಏಕತೆ, ಸಾಮಾಜಿಕ ಬದ್ಧತೆ, ದಯಾಗುಣ, ವೈಚಾರಿಕತೆಗಳನ್ನುಅನುಸರಿಸಿ ಉಪದೇಶಿಸಲಾಯಿತು.ವಚನಸಾಹಿತ್ಯದ ಮೂಲಕ ಜನರ ತಲುಪುವಂತೆ ಮಾಡಿದರು.ಬಸವಣ್ಣರಾದಿಯಾಗಿ ಸಮಕಾಲೀನ ಶರಣರ ವಚನ ಸಾಹಿತ್ಯದ ಆದರ್ಶಗಳು ಒಂದು ಕಾಲಕ್ಕೆ, ಒಂದು ದೇಶ, ಭಾಷೆ, ಗೆ ಸೀಮಿತವಾಗಿರದೇ ಎಲ್ಲ ಕಾಲ , ಮತ,ವರ್ಗ, ಧರ್ಮ ಭಾಷೆ , ದೇಶ ಗಳಿಗೆ ಸೇರಿದ ಆದರ್ಶಗಳಾಗಿವೆ.

ಹಾಗಾದರೆ ಬಸವಾದಿ ಶರಣರ ವಚನ ಸಾಹಿತ್ಯದಲ್ಲಿರುವ ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳ ಬಗ್ಗೆ ನೋಡುವುದಾದರೆ, ವಚನವೆಂಬ ಪ್ರಜಾಪ್ರಭುತ್ವದ ಸಂವಿಧಾವದಲ್ಲಿ ಬಸವಣ್ಣರು ಮಹಾ ಪ್ರಜಾಪ್ರಭುತ್ವವಾದಿಯಾಗಿ  ಸಮಾನತೆ, ನ್ಯಾಯ, ಹಕ್ಕು ಹಾಗೂ ಕರ್ತವ್ಯಗಳ ಪ್ರತಿಪಾದಕರಾಗಿದ್ದಾರೆ. ಪ್ರಜಾಪ್ರಭುತ್ವದ ಮೂಲ ಸೂತ್ರಗಳಾದ ಸಮಾನತೆ, ಜಾತ್ಯಾತೀತತೆ, ಸ್ವಾತಂತ್ರ್ಯ, ದುಡಿಮೆ, ಮೂಲಭೂತ ಹಕ್ಕು ಹಾಗೂ ಕರ್ತವ್ಯ.ಗಳು , ಭ್ರಾತೃತ್ವ ಭಾವನೆ, ಜನಾಭಿಪ್ರಾಯಕ್ಕೆ ಮನ್ನಣೆ, ಗಳನ್ನು ಕಾರ್ಯಗತಗೊಳಿಸುವುದೇ ಆಗಿದೆ.ಹೀಗಿರುವಾಗ ಈಎಲ್ಲ ಮಾನವಿಯ ಮೌಲ್ಯಗಳನ್ನು ಶರಣವಚನಕಾರರು ಅಂದೇ ತಮ್ಮ ವಚನಗಳಲ್ಲಿ ಬಿಂಬಿಸಿದ್ದರು. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ದೇಶದ ಏಕತೆ ಈಎಲ್ಲ ಅಂಶಗಳೂ ಶರಣರ , ಅವರ ನಡೆಹಾಗೂ ನುಡಿಗಳಲ್ಲಿ ಹಾಸು ಹೊಕ್ಕಾಗಿದ್ದುದನ್ನು ವಚನಗಳಲ್ಲಿ ಕಾಣುತ್ತೇವೆ.

ಬಸವಣ್ಣನವರ ” ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ಮುನಿಯವೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ “ಎಂಬ ಏಳು ಸೂತ್ರಗಳು ಪ್ರಜಾಪ್ರಭುತ್ವದ ಯಶಸ್ಸಿನ ಗುಟ್ಟು. ” ದಯೆಯಿಲ್ಲದಾ ಧರ್ಮವದಾವುದಯ್ಯಾ” ಎಂಬ ವಚನ ಧರ್ಮದ ಮೂಲವನ್ನು ತಿಳಿಸಿ ಏಕತೆ, ಸಹಿಷ್ಣುತೆಯನ್ನು ಅರುಹುತ್ತದೆ. “ಕಾಯಕವೇ ಕೈಲಾಸ” ಇದು ಪ್ರಜಾಪ್ರಭುತ್ವದಲ್ಲಿ ಕರ್ತವ್ಯದ ಮಹತ್ವವನ್ನು, ಅನ್ನದಾಸೋಹ, ಅಕ್ಷರದಾಸೋಹಗಳು ಪ್ರಜಾಪ್ರಭುತ್ವದ ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ತಳಹದಿಯಾಗಿದೆ. ” ಇವನಾರವ ಇವನಾರವ ಇವನಾರವ ಎನ್ನದಿರಯ್ಯಾ” ಎಂಬಲ್ಲಿ ಜಾತ್ಯಾತೀತತೆಯ, ಸಾಮಾಜಿಕ ಸಮಾನತೆಯ ಅಂಶ ಎದ್ದು ಕಾಣುತ್ತದೆ. ” ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ, ಕುಲವೊಂದೇ ತನ್ನ ತಾನರಿತವಗೆ” ಎಂಬ ವಚನದಲ್ಲಿ ಸಮಾನತೆ ಏಕತೆ,  ಭ್ರಾತೃತ್ವ ಎದ್ದು ತೋರುತ್ತದೆ.

ಹೀಗೆ ಬಸವಣ್ಣರಾದಿಯಾಗಿ ಎಲ್ಲ ಶಿವಶರಣರೂ  ಅನುಭವ ಮಂಟಪದ ಮೂಲಕ  ಸಾಮಾಜಿಕ ಜನಾಂದೋಲನದ ಮಾಡಿ ಹನ್ನೆರಡನೇ ಶತಮಾನದಲ್ಲಿಯೇ ಜಗತ್ತಿಗೇ ಪ್ರಜಾಪ್ರಭುತ್ವ ತತ್ವವನ್ನು ಮಾನವೀಯ ಮೌಲ್ಯಗಳನ್ನು ನಡೆದು ನುಡಿದು ತೋರಿದರು. ಅಂದು ತೋರಿದ, ನಡೆದ  ಮೌಲ್ಯಗಳು ಇಂದು, ಮುಂದೆ ಎಂದಿಗೂ ಪ್ರಸ್ತುತ. ಜಾತಿ, ಧರ್ಮ, ಮೇಲು ಕೀಳು ಬಡವಬಲ್ಲಿದ ನೆಂಬ ಅಸಮಾನತೆಯ ಕೂಪದಲ್ಲಿ ಬಿದ್ದು ನಾವೇ ಶ್ರೇಷ್ಠರು ಎಂದುಕೊಳ್ಳುವ , ಕರ್ತವ್ಯ ಮರೆತ ಇಂದಿನ  ಜನತೆ ಏಕತೆಯಿಂದ ಭಿನ್ನತೆ ಮರೆತು ಬಸವಾದಿ ಶರಣರ ವಚನಗಳ ಸಾರವನ್ನು ಅರಿತು,ಅವುಗಳಂತೆ ನಡೆದು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳಿಗೆ ಬೆಲೆಕೊಡಬೇಕಾದ ಅವಶ್ಯಕತೆಯಿದೆ.ಅವರ ತತ್ವಗಳು ಕಾರ್ಯರೂಪಕ್ಕೆ ಬಂದಾಗ ಮಾತ್ರ ನಾವು ಆಚರಿಸುವ ಅವರ ಜಯಂತಿಗೆ ಗೌರವ ನೀಡಿದಂತಾಗುವುದು.

*************

5 thoughts on “ಪ್ರಜಾಪ್ರಭುತ್ವವಾದಿ ಬಸವಣ್ಣ

  1. ನಿಜ ಮೇಡಂ ‌…ಶರಣರ ವಚನಗಳು‌ಬದುಕಿನ ಕೀಲಿ ಕೈ ಇದ್ದಂತೆ.ಅವರ ಬದುಕು ಸದಾ ಮಾದರಿ.ಬಸವಣ್ಣ ಸ್ವತಃ ಕಾಯಕ ಯೋಗಿ ಬಸವಾದಿ ಎಲ್ಲರ ತತ್ವಗಳು ಜೀವನಕ್ಕೆ ಪಾಠ. ಲಿಂಗ ಸಮಾನತೆ ಏಕತೆಯ ಮಂತ್ರ ಎಲ್ಲವೂ ಅನುಕರಣೀಯ ಸೊಗಸಾಗಿ ಬರೆದಿರುವಿರಿ…

  2. ವೆರೀ ನೈಸ್.. ..ಪ್ರಸ್ತುತ ಸಂದರ್ಭದಲ್ಲಿ ತು0ಬ ಮಹತ್ವದ ಲೇಖನ…ಅಭಿನಂದನೆಗಳು

  3. ಅನುಭವ ಮಂಟಪದಲ್ಲಿ ವ್ಯಕ್ತಿ,ಯಾರೆಂದು ನೋಡದೆ ಆಂತರಿಕವಾಗಿ ಶುದ್ದವಾಗಿರುವುದಕ್ಕೆ ಘನವಾಗಿರುವುದಕ್ಕೆ ಸಿಕ್ಕ ಮಾನ್ಯತೆ, ಪ್ರಸ್ತುತ ಕಾಲದಲ್ಲಿ ವಿರಳ.ಎಂಟು ನೂರು ವರ್ಷಗಳಷ್ಟು ಹಿಂದೆಯೇ ಈ ಕಾಲಕ್ಕೂ ಸಲ್ಲುವ ವಿಚಾರಗಳನ್ನು ಕೊಟ್ಟವರಲ್ಲಿ ಬಸವಣ್ಣ ಕೂಡ ಅಗ್ರಗಣ್ಯ.ಅದನ್ನು ನೆನಪಿಸುವ ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ.ಅಭಿನಂದನೆಗಳು.

  4. ಚಂದದ ಬರಹ. ಪ್ರಸಕ್ತ ವಿದ್ಯಮಾನಕ್ಕೆ ಅನ್ವಯಿಸುವಂತಹುದ್ದು

Leave a Reply

Back To Top