ದಾರಾವಾಹಿ

ಆವರ್ತನ

ಅದ್ಯಾಯ-18

Blue and Cream Abstract Painting

ಶಂಕರನ ಭಾಗೀವನದಲ್ಲಿ ಗೋಪಾಲನ ಮನೆಯನ್ನು ಸೇರಿಸಿ ಒಟ್ಟು ಮೂವತ್ತೊಂದು ಮನೆಗಳಿವೆ. ಮುಸ್ಲೀಮರು ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದ ಬಹುತೇಕ ಜಾತಿಯವರು ಭಾಗಿವನದಲ್ಲಿ ಐದು, ಆರು, ಏಳು, ಹತ್ತು ಮತ್ತು ಇಪ್ಪತ್ತು ಸೆಂಟ್ಸ್‍ಗಳ ಜಾಗದ ಮಾಲಕರಾಗಿ ಹೊಸ ಮನೆಗಳ ಒಡೆಯರಾಗಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಗೋಪಾಲನ ಮನೆಯ ಪಕ್ಕದ ಮನೆ ಬ್ಯಾಂಕರ್ ನಾರಾಯಣರದ್ದು. ಅವರ ಒತ್ತಿನಲ್ಲಿ ಮರದ ವ್ಯಾಪಾರಿ ಸುಂದರಯ್ಯನವರಿದ್ದಾರೆ. ಅವರಾಚೆಗಿನದ್ದು ಜೀವವಿಮಾ ಕಂಪನಿಯ ನಿವೃತ್ತ ಉದ್ಯೋಗಿ ಲಕ್ಷ್ಮಣಯ್ಯ, ಸುಮಿತ್ರಮ್ಮ ದಂಪತಿಯದ್ದು. ಅವರ ಬಳಿಕದ್ದು ಉಮೇಶಯ್ಯನದ್ದು ಅದರ ನಂತರದ್ದು, ಪ್ರಸಿದ್ಧ ‘ನವರತ್ನ’ ಚಿನ್ನಾಭರಣ ಮಳಿಗೆಯ ಉದ್ಯೋಗಿ ರಮೇಶನದ್ದು. ಆ ನಂತರದವು ರಾಜೇಶ್ ಕುಮಾರ್ ಮತ್ತು ಜಗದೀಶ್ ಕುಮಾರ್ ಹಾಗೂ ಕೇಶವನದ್ದು. ಇನ್ನೂ ಮುಂದಕ್ಕೆ ಹೋದರೆ ಮೊಗವೀರರದ್ದೂ ಮತ್ತು ಸರಕಾರದ ವಿವಿಧ ಅಂಗಸಂಸ್ಥೆಗಳ ನೌಕರರದ್ದೂ ಕೆಲವು ಮನೆಗಳಿವೆ.

   ಭಾಗೀವನದ ಮುಖ್ಯ ದ್ವಾರದ ಬಲಮುಗ್ಗಲಿನ ಸುಮಾರು ಇಪ್ಪತ್ತು ಸೆಂಟ್ಸ್ ಜಾಗದಲ್ಲಿ ವಿವಿಧ ಮರಮಟ್ಟುಗಳಿಂದ ತುಂಬಿ ಹಚ್ಚಹಸುರಿನಿಂದ ಕಂಗೊಳಿಸುತ್ತ ಭಾಗೀವನಕ್ಕೆ ವಿಶೇಷ ಶೋಭೆಯನ್ನು ನೀಡುವಂಥದ್ದೊಂದು ಚಂದದ ತೋಟವಿದೆ. ಅದರ ನಡುವೆ ಪ್ರಾಚೀನ ವಿನ್ಯಾಸದಿಂದ ನಿರ್ಮಿಸಿದ ಸುಂದರವಾದ ಹೆಂಚಿನ ಮನೆಯೊಂದಿದೆ. ಅದು ಆಯುರ್ವೇದ ವೈದ್ಯ ಡಾಕ್ಟರ್ ನರಹರಿಯ ಮನೆ. ಅವನು ಅಪ್ಪಟ ನಿಸರ್ಗಪ್ರೇಮಿ ಮತ್ತು ಮೇಲಾಗಿ ಬ್ರಹ್ಮಾಚಾರಿ ಕೂಡಾ. ಮಧ್ಯಮವರ್ಗದ ಸುಸಂಸ್ಕೃತ ಕುಟುಂಬವೊಂದರಲ್ಲಿ ಜನಿಸಿದ ಇವನು ಸುಮಾರು ಮೂವತ್ತೆರಡರ ಹರೆಯದ ಎಣ್ಣೆಗೆಂಪಿನ ಸ್ಫುರದ್ರೂಪಿ ತರುಣ. ನರಹರಿಯ ಹೈಸ್ಕೂಲ್ ವಿದ್ಯಾಭ್ಯಾಸದ ಹಂತದಲ್ಲಿ ಬಲಾಯಿ ಪಾದೆಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ಸು ಅಪಘಾತವೊಂದರಲ್ಲಿ ಅವನ ತಂದೆ ತಾಯಿ ಇಬ್ಬರೂ ಗತಿಸಿದರು. ಹಾಗಾಗಿ ಮಾವಂದಿರ, ಅಂದರೆ ತಾಯಿಯ ಅಣ್ಣ ತಮ್ಮಂದಿರ ಆಸರೆಯಲ್ಲಿ ಬೆಳೆಯುತ್ತ ವಿದ್ಯೆಯನ್ನು ಮುಂದುವರೆಸಿದವನು ಹೆತ್ತವರ ಮತ್ತು ತನ್ನಾಸೆಯಂತೆ ಆಯುರ್ವೇದ ವೈದ್ಯಕೀಯವನ್ನು ಕಲಿತ. ಪದವಿ ಶಿಕ್ಷಣ ಮುಗಿಯುತ್ತಲೇ ಈಶ್ವರಪುರದ, ‘ಆಯುರ್ ಕೇರ್ ಹೆಲ್ತ್ ಸೆಂಟರ್’ ಆಸ್ಪತ್ರೆಯಲ್ಲಿ ಉದ್ಯೋಗ ದೊರಕಿತು. ಕೆಲವು ವರ್ಷಗಳ ಕಾಲ ಅವಿರತವಾಗಿ ರೋಗಿಗಳ ಸೇವೆ ಮಾಡಿದವನು ಭಾಗೀವನದಲ್ಲಿ ಜಾಗವೊಂದನ್ನು ಖರೀದಿಸಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ. ನರಹರಿಯು ಬಾಲ್ಯದಿಂದಲೇ ಹಸಿರು ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತು ಅಪಾರ ಪ್ರೀತಿಯನ್ನು ಬೆಳೆಸಿಕೊಂಡವನು. ಹಾಗಾಗಿ ತನ್ನ ಬಿಡುವಿನಲ್ಲಿ ದೇಶದಾದ್ಯಂತ ಹಬ್ಬಿರುವ ಪಶ್ಚಿಮಘಟ್ಟಗಳಲ್ಲೂ ಅವುಗಳ ತಪ್ಪಲಿನ ವಿವಿಧ ಅಭಯಾರಣ್ಯಗಳಲ್ಲೂ ದಣಿವರಿಯದೆ ಸಂಚರಿಸುವಂಥ ನೆಚ್ಚಿನ ಹವ್ಯಾಸವನ್ನು ರೂಢಿಸಿಕೊಂಡಿದ್ದ. ಅದರ ಫಲವಾಗಿ ಹಸಿರು ಪರಿಸರ ಮತ್ತು ಮೂಕ ಜೀವಜಾಲಗಳ ಕುರಿತು ವಿಶೇಷ ಜ್ಞಾನವೂ ಹಾಗೂ ನಿಸರ್ಗದೊಂದಿಗೆ ಅನ್ಯೋನ್ಯವಾಗಿ ಬೆರೆತು ಬಾಳುವ ಸಹಜ ಕಲೆಯೂ ಅವನಿಗೊಲಿದಿತ್ತು.

   ಭಾಗೀವನದ ಬಡಾವಣೆಯ ಕುಟುಂಬಗಳಲ್ಲಿ ಮೇಲ್ಮಮಧ್ಯಮವರ್ಗ ಮತ್ತು ಶ್ರೀಮಂತರೇ ಹೆಚ್ಚಾಗಿರುವುದು. ಬಹುತೇಕರು ಸರಕಾರಿ ಉದ್ಯೋಗ ಮತ್ತಿತರ ಉನ್ನತ ನೌಕರಿಯಲ್ಲಿದ್ದಾರೆ. ಆದರೆ ಇವರೆಲ್ಲರ ನಡುವೆ ಗೋಪಾಲನದೊಬ್ಬನದೇ ಸಣ್ಣ ಹಂಚಿನ ಮನೆಯ, ಕಡು ಬಡತನದ ಕುಟುಂಬವಿರುವುದು. ಭಾಗೀವನದ ಎಡ ಮಗ್ಗುಲಿನ ಸುಮಾರು ಐವತ್ತು ಗಜ ದೂರದಲ್ಲಿ ಒಂದು ಎಕರೆಗಳಷ್ಟು ವಿಸ್ತಾರವಾದ ಮದಗವೊಂದಿದೆ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಅದನ್ನು ನೋಡಿಯೇ ಶಂಕರ ಭಾಗೀವನದ ಭೂಮಿಯನ್ನು ಖರೀದಿಸಿದ್ದು. ಆ ಸಮೃದ್ಧ ಸರೋವರದಿಂದಾಗಿ ಬುಕ್ಕಿಗುಡ್ಡೆ ಗ್ರಾಮದ ನೂರಾರು ಮನೆಗಳ ಬಾವಿಗಳು ವರ್ಷವಿಡೀ ತುಂಬಿರುತ್ತವೆ. ಕೃಷಿಭೂಮಿಗಳು, ತೋಟಗಾರಿಕೆಗಳು ಉತ್ತಮ ಫಸಲು ನೀಡುತ್ತವೆ. ಭಾಗೀವನದ ಮನೆಗಳ ಬಾವಿಗಳಲ್ಲೂ ಹದಿನೈದರಿಂದ ಇಪ್ಪತ್ತು ಅಡಿಗಳೊಳಗೆ ಶುದ್ಧ ನೀರು ಸಿಕ್ಕಿದೆ. ಆದ್ದರಿಂದ ಈ ಬಡಾವಣೆಗೆ ನೀರಿನ ಸಮಸ್ಯೆ ಎಂದೂ ಕಾಡಿದ್ದಿಲ್ಲ.

   ಈ ಸರೋವರವು ಸದಾ ತುಂಬಿರಲು ಮುಖ್ಯ ಕಾರಣವೂ ಇದೆ. ಮದಗದ ಸುತ್ತಲಿನ ಮುಕ್ಕಾಲು ಪ್ರದೇಶವನ್ನು ಪುರಾತನವಾದ ದೊಡ್ಡ ಅಡವಿಯೊಂದು ಆವರಿಸಿಕೊಂಡಿದೆ. ಈ ಪರಿಸರವು ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದು ಎಂದು ಊರ ಜನರು ಹೇಳುತ್ತಾರೆ. ಈ ಕಾಡಿನಲ್ಲಿ ಮೂರು ನಾಲ್ಕು ಶತಮಾನಗಳಷ್ಟು ಪ್ರಾಚೀನವಾದ ಮರಗಳು, ಅನೇಕ ಬಗೆಯ ಬಳ್ಳಿಗಳು, ಬಗೆಬಗೆಯ ಔಷಧೀಯ ಸಸ್ಯಸಂಪತ್ತುಗಳು ಮತ್ತು ವಿವಿಧ ಜಾತಿಯ ಕಾಡುಪ್ರಾಣಿಗಳು ವಾಸಿಸುತ್ತಿದ್ದವು. ಅಲ್ಲದೇ ಆ ಮಲೆಯು ನಾಗ, ಪರಿವಾರ ದೈವಗಳ ವಾಸಾಸ್ಥಾನವೆಂದೂ ಹೇಳಲಾಗುತ್ತಿತ್ತು. ಆದ್ದರಿಂದ ಊರವರು ಆ ಹಾಡಿಯೊಳಗೆ ಹೋಗಲು ಹೆದರುತ್ತಿದ್ದರು. ದೇಶವನ್ನು ಸಂರಕ್ಷಿಸುವ ಬಲಿಷ್ಠ ಯೋಧರ ಪಡೆಯಂತಿದ್ದ ಆ ಅರಣ್ಯದ ಅಸಂಖ್ಯಾತ ಮರಗಳು ಪ್ರತೀವರ್ಷ ಮಳೆ ಮೋಡಗಳನ್ನು ತಡೆದು ನಿಲ್ಲಿಸಿ, ಮಳೆಯನ್ನು ಭೂವಿಗಿಳಿಸಿ ಮದಗವನ್ನು ತುಂಬಿಸುತ್ತ ಸುತ್ತಮುತ್ತಲಿನ ಚರಾಚರ ಜೀವರಾಶಿಗಳಿಗೂ ಜೀವನಾಡಿಯಾಗಿವೆ. ಹಾಗಾಗಿ ಮಳೆಗಾಲ ಸಮೀಪಿಸುತ್ತಿದ್ದಂತೆಯೇ ವಿವಿಧ ದೇಶಗಳಿಂದ ವಲಸೆ ಹೊರಡುವ ಪಕ್ಷಿಸಂಕುಲವು ಇಲ್ಲಿಗೆ ಬಂದು ಮದಗದ ದಡದ ಮರಗಳಲ್ಲೂ ಮತ್ತು ಹಾಡಿಯೊಳಗೂ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತ ಬದುಕುವುದನ್ನು ನೋಡುವುದೇ ಒಂದು ಮಧುರಾನಂದ!

   ಭಾಗೀವನದಲ್ಲಿ ಜಾಗಕೊಳ್ಳಲು ಮತ್ತು ಮನೆಗಳನ್ನು ಖರೀದಿಸಲು ಬಂದವರಲ್ಲಿ ಹೆಚ್ಚಿನವರು ಅದರ ಸುತ್ತಮುತ್ತಲಿನ ಹಸಿರು ಸೌಂದರ್ಯಕ್ಕೆ ಮಾರುಹೋಗಿಯೇ ಶಂಕರನ ದುಬಾರಿ ಬೆಲೆಯನ್ನೂ ಲೆಕ್ಕಿಸದೆ ಕೊಂಡಿದ್ದರು. ಶಂಕರ ಭಾಗೀವನದ ಜಮೀನನ್ನು ಲೇಔಟ್ ಮಾಡಿಸಿ, ಮನೆಗಳನ್ನು ಕಟ್ಟಿಸಿ ಮಾರಾಟವನ್ನೇನೋ ಮಾಡಿದ್ದ. ಆದರೆ ಆ ಬಡಾವಣೆಯ ಸುತ್ತಲೂ ಆವರಣವೊಂದನ್ನು ಕಟ್ಟಿಸಿಕೊಡಲು ಅವನ ಜಿಪುಣತನ ಬಿಟ್ಟಿರಲಿಲ್ಲ. ಇತ್ತೀಚೆಗೆ ಬಾಕುಡಗುಡ್ಡೆಯ ಜಾಗಕ್ಕೆ ದೊಡ್ಡ ಮೊತ್ತವನ್ನು ಸುರಿದಿದ್ದುದರಿಂದಲೂ ಅದರಲ್ಲಿ ಹುಟ್ಟಿಕೊಂಡಿದ್ದ ನಾಗನ ಸಮಸ್ಯೆಯಿಂದಲೂ ಭಾಗೀವನದ ಆವರಣದ ಕಥೆಯನ್ನು ಮರೆತುಬಿಟ್ಟಂತಿದ್ದ. ಆದರೆ “ತಮ್ಮ ಬಡಾವಣೆಯ ಸುತ್ತಮುತ್ತ ಹೊಲಗದ್ದೆಗಳು ಮತ್ತು ದಟ್ಟ ಕುರುಚಲು ಹಾಡಿಗಳು ಇದ್ದುದರಿಂದ ಕಾಡುಪ್ರಾಣಿಗಳು, ಹಾವು, ಅರಣೆ, ಚೇಳು ಮತ್ತು ಕ್ರಿಮಿಕೀಟಗಳು ತಮ್ಮ ವಠಾರದೊಳಗೂ, ಮನೆಗಳೊಳಗೂ ಬಂದು ತೊಂದರೆ ಕೊಡುತ್ತವೆ. ಆದ್ದರಿಂದ ಆದಷ್ಟು ಬೇಗ ಪಾಗರ ನಿರ್ಮಿಸಿಕೊಡಬೇಕು!” ಎಂದು ವಠಾರದವರು ಶಂಕರನನ್ನು ಒತ್ತಾಯಿಸುತ್ತಿದ್ದರು.

   ಆದರೆ ಅವನು, ‘ಆಯ್ತು, ಆಯ್ತು. ಸದ್ಯದಲ್ಲೇ ಮಾಡಿಸಿ ಕೊಡುವ. ಮೊನ್ನೆಯವರೆಗೆ ಶಿಲೆಕಲ್ಲಿನ ತಾಪತ್ರಯ ಇತ್ತು. ಈಗ ಮರಳು ಮತ್ತು ಸಿಮೆಂಟಿನ ಕೊರತೆ ಶುರುವಾಗಿದೆ. ಹಾಗಾಗಿ ಇನ್ನೂ ಸ್ವಲ್ಪ ಕಾಲ ಹೋಗಲಿ!’ ಎನ್ನುತ್ತ ಕಾಲಾಹರಣ ಮಾಡುತ್ತಿದ್ದ. ಹೀಗಿದ್ದವನಿಗೆ ಈಚೆಗೆ ಹೊಸದೊಂದು ಉಪಾಯವೂ ಹೊಳೆದಿದ್ದುದರಿಂದ, ‘ಅಲ್ಲಾ, ನಿಮ್ಮ ನಿಮ್ಮ ಜಾಗಗಳಿಗೆ ನೀವು ನೀವೇ ಕಂಪೌಂಡ್ ವಾಲ್ ಹಾಕಿಕೊಂಡಿದ್ದೀರಿ. ಹೀಗಿರುವಾಗ ಮತ್ತೆಂಥ ಭಯ ನಿಮಗೆ?’ ಎಂದು ನಗುತ್ತ ಜಾರಿಕೊಳ್ಳುತ್ತಿದ್ದಾನೆ. ಇನ್ನು ಹತ್ತು ಹದಿನೈದು ಮನೆಗಳವರೂ ತಂತಮ್ಮ ಜಾಗಗಳಿಗೆ ಪಾಗರ ಕಟ್ಟಿಕೊಂಡರೆ ಇಡೀ ಬಡಾವಣೆಯ ಆವರಣಕ್ಕೆ ತಗಲುವ ದೊಡ್ಡ ಖರ್ಚುವೆಚ್ಚ ಉಳಿದಂತೆಯೇ ಎಂಬುದು ಅವನ ಯೋಚನೆ. ಆದರೆ ಅವನ ಈ ಲೆಕ್ಕಾಚಾರದಿಂದ ಮುಂದೊಂದು ದಿನ ಇಡೀ ಭಾಗೀವನದ ನಿವಾಸಿಗಳಿಗೆ ದೊಡ್ಡ ತಾಪತ್ರಯಗಳು ಬಂದು ಬಡಿಯಲಿವೆ ಎಂಬುದು ಅವನಿಗಾಗಲಿ ಅಥವಾ ಭಾಗೀವನದ ನಿವಾಸಿಗಳಿಗಾಗಲಿ ತಿಳಿದಿರಲಿಲ್ಲ!                                    

                                                           ***

ರಾಧಾ, ಕೃಷಿಕ ಕುಟುಂಬದಿಂದ ಬಂದ ಹೆಣ್ಣು. ಹಾಗಾಗಿ ಬಾಲ್ಯದಿಂದಲೂ ಅವಳಿಗೆ ಹಸು, ಕೋಳಿ, ನಾಯಿ, ಬೆಕ್ಕುಗಳೆಲ್ಲ ಹತ್ತಿರದ ಬಂಧುಗಳಂತಿದ್ದವು. ಆದರೆ ಅಲೆಮಾರಿಯಂಥ ಗಂಡನನ್ನು ಕಟ್ಟಿಕೊಂಡ ಮೇಲೆ ಅವಳಿಗೆ ಆ ಪ್ರಾಣಿಗಳೊಂದಿಗಿನ ಸಂಬಂಧವು ಕಡಿದುಹೋಗಿತ್ತು. ತನಗೊಂದು ಸ್ವಂತ ಮನೆಯಾದ ಮೇಲಾದರೂ ತನ್ನಿಷ್ಟದ ಪ್ರಾಣಿಪಕ್ಷಿಗಳನ್ನು ಸಾಕಬೇಕು ಎಂದು ಅವಳು ಆಗಾಗ ಅಂದುಕೊಳ್ಳುತ್ತಿದ್ದಳು. ಹಾಗಾಗಿ ಈಗ ಸ್ವಂತ ಮನೆಯೇನೋ ಆಗಿದೆ. ಆದರೆ ಕೇವಲ ನಾಲ್ಕು ಸೆಂಟ್ಸಿನಷ್ಟಗಲದ ಜಾಗದಲ್ಲಿ ಸಣ್ಣ ಮನೆಯಾಗಿ ಒಂದು ತುಂಡು ಅಂಗಳ ಮಿಕ್ಕಿರುವುದೇ ಹೆಚ್ಚು. ಅಂಥದ್ದರಲ್ಲಿ ಸಾಕುಪ್ರಾಣಿಗಳಿಗೆಲ್ಲಿಯ ನೆಲೆ! ಎಂದುಕೊಳ್ಳುತ್ತ ನಿರಾಶಳಾಗುತ್ತಿದ್ದಳು. ಆದರೂ ಅವಳು ತನ್ನ ಆಸೆಯನ್ನು ಬಿಟ್ಟಿರಲಿಲ್ಲ. ವಠಾರದವರಿಗೆ ತೊಂದರೆಯಾಗದಂತೆ ಕೋಳಿ, ನಾಯಿ ಮತ್ತು ಗಬ್ಬದ ಹಸುವೊಂದನ್ನು ತಂದು ಇದ್ದ ಜಾಗದೊಳಗೆಯೇ ಸುಧಾರಿಸಿಕೊಂಡು ಸಾಕಿದರೆ ಒಂದಿಷ್ಟು ಮೇಲ್ಸಂಪಾದನೆಯಾದರೂ ಆದೀತು ಎಂದು ಆಲೋಚಿಸುತ್ತಿದ್ದಳು. ಹೀಗಾಗಿ ಆ ಸಂಗತಿಯನ್ನು ಒಮ್ಮೆ ಗಂಡನಿಗೂ ಹೇಳಿ ಚರ್ಚಿಸಿದಳು. ಗೋಪಾಲನ ಅಜ್ಜಿ, ಅಜ್ಜಂದಿರೂ ಕೃಷಿಕರಾಗಿದ್ದವರು. ಅವನ ಬಾಲ್ಯವೂ ಕೆಲವು ಕಾಲ ಅವರೊಂದಿಗೆ ಕಳೆದಿತ್ತು. ಶಾಲಾ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋದಾಗಲೆಲ್ಲ ಅವನೂ ಹೆಚ್ಚಾಗಿ ದನಕರು, ನಾಯಿ ಮತ್ತು ಕೋಳಿಗಳೊಂದಿಗೆ ಆಟವಾಡಿಕೊಂಡೇ ಬೆಳೆದವನು. ಆದ್ದರಿಂದ ಮಡದಿಯ ಯೋಚನೆ ಅವನಿಗೂ ಇಷ್ಟವಾಯಿತು. ‘ಆಯ್ತು ಮಾರಾಯ್ತಿ ಸಾಕುವ. ಆದರೆ ನಮ್ಮ ವಠಾರದಲ್ಲಿ ಹೆಚ್ಚಾಗಿ ಮಡಿಮೈಲಿಗೆಯವರೇ ಇರುವುದಲ್ಲವಾ. ಅವರ್ಯಾರೀಗೂ ತೊಂದರೆಯಾಗದಂತೆ ಸಾಕಬೇಕು ನೋಡು!’ ಎಂದ ಗಂಭೀರವಾಗಿ.

‘ಹೌದು ಮಾರಾಯ್ರೇ, ನನಗೂ ಆ ಯೋಚನೆ ಬಂದಿತ್ತು. ಆದರೂ ನೀವು ಹೇಳಿದ ಹಾಗೆ ಅವುಗಳು ಇನ್ನೊಬ್ಬರ ವಠಾರದತ್ತ ಹೋಗದಂತೆ ನೋಡಿಕೊಂಡರಾಯ್ತು!’ ಎಂದಳು ತಾನೂ ಕಾಳಜಿಯಿಂದ. ಗೋಪಾಲ ಮರುದಿನವೇ ಗರಡಿಗುಡ್ಡೆಯ ವನಜಕ್ಕನ ಮನೆಗೆ ಹೋಗಿ ಒಂದು ಜೊತೆ ಊರ ಕೋಳಿಯನ್ನು ಕೊಂಡು ತಂದು ಹೆಂಡತಿಗೊಪ್ಪಿಸಿದ. ಅವು ಬಹಳಬೇಗನೇ ಮನೆಮಂದಿಯ ಆರೈಕೆಯಿಂದಲೂ, ಪಕ್ಕದ ಹಾಡಿಗುಡ್ಡೆಗಳಲ್ಲಿ ಸಿಗುವ ಕ್ರಿಮಿಕೀಟಗಳ ಸೇವನೆಯಿಂದಲೂ ತಮ್ಮ ವಂಶೋತ್ಪತ್ತಿಯನ್ನು ಹುಲುಸಾಗಿ ಬೆಳೆಸತೊಡಗಿದವು. ಪರಿಣಾಮ ಕೆಲವೇ ಕಾಲದೊಳಗೆ ನಾಲ್ಕೈದು ಹುಂಜಗಳು ಅಂಕದ ಹೋರಾಟಕ್ಕೂ ಹುರಿಗೊಂಡು ನಿಂತವು. ಇದರಿಂದ ಹುರುಪುಗೊಂಡ ಗೋಪಾಲ ಅವುಗಳನ್ನು ಮಸಣದಗುಡ್ಡೆ, ಪುತ್ತೂರು, ಗರಡಿಗುಡ್ಡೆ ಮತ್ತು ಕೆಂಪ್ತೂರಿನಲ್ಲಿ ನಡೆಯುವ ಕೋಳಿ ಅಂಕಗಳಿಗೆ ಕೊಂಡುಹೋಗಿ ಮಾರುತ್ತ ಸಾವಿರ ಸಾವಿರ ಗಳಿಸತೊಡಗಿದ. ಅದೇ ಹಣದಿಂದ ಒಂದು ಗಬ್ಬದ ಹಸುವೂ ರಾಧಾಳ ಮನೆಯನ್ನು ಪ್ರವೇಶಿಸಿತು. ಅಷ್ಟಾಗುತ್ತಲೇ ನೆರ್ಗಿಹಿತ್ತಲಿನ ಕರಿಮಾರು ಹಾಡಿಯೊಂದರ ಪಕ್ಕದ ಕಸದ ತೊಟ್ಟಿಯಲ್ಲಿ ಯಾರೋ ಎಸೆದು ಹೋಗಿದ್ದ ಮತ್ತು ಇನ್ನೂ ಕಣ್ಣು ಬಿಟ್ಟಿರದ ಮೂರು ನಾಯಿ ಮರಿಗಳಲ್ಲಿ ದಷ್ಟಪುಷ್ಟವಾದ ಚೆಂದದ ಹೆಣ್ಣು ಮರಿಯೊಂದನ್ನು ಗೋಪಾಲ ಮನೆಗೆ ತಂದು ಸಾಕತೊಡಗಿದ. ರಾಧಾ ಅದಕ್ಕೆ ‘ಮೋತಿ’ ಎಂದು ಹೆಸರಿಟ್ಟಳು. ಆ ಕುನ್ನಿಯು ಅವನ ಮಕ್ಕಳ ಪ್ರೀತಿಯ ಆರೈಕೆಯಿಂದ ಎಲ್ಲರೊಡನೆ ಅನ್ಯೋನ್ಯವಾಗಿ ಬೆರೆತು ತನ್ನ ನಾಲ್ಕು ಸೆಂಟ್ಸಿನ ಪ್ರದೇಶದೊಳಗೆ ಅಪರಿಚಿತವಾದ ಸಣ್ಣದೊಂದು ಕೀಟವನ್ನೂ ನುಸುಳಲು ಬಿಡದೆ ಕಾವಲು ಕಾಯುತ್ತ ಬೆಳೆಯುತ್ತಿತ್ತು. ಹೀಗೆ ಗೋಪಾಲನ ಸಂಸಾರ ಸ್ವಂತ ಜಾಗದಲ್ಲಿ ಪ್ರಕೃತಿಗೆ ಅತೀ ಆಪ್ತವಾಗಿ ಜೀವನ ಸಾಗಿಸತೊಡಗಿತು.

   ಗೋಪಾಲ ಹೊಸದಾಗಿ ಕೊಂಡು ತಂದಿದ್ದ ‘ಫೈಟರ್’ ಜಾತಿಯ ಹೇಟೆಯೊಂದು ಒಮ್ಮೆ ಹದಿನಾರು ಮೊಟ್ಟೆಗಳನ್ನಿಟ್ಟು ಇಪ್ಪತ್ತೊಂದು ದಿನಗಳ ಕಾಲ ಅವುಗಳಿಗೆ ಕಾವು ನೀಡಿ ಮರಿ ಮಾಡಿತು. ಆ ಹೇಟೆಯು ತನ್ನ ಮರಿಗಳೊಂದಿಗೆ ಹೊರಗೆ ಹೋದೀತೆಂದುಕೊಂಡು ರಾಧಾ ದಿನಾಲು ಅದನ್ನು ತನ್ನ ಇಳಿ ಮಾಡಿನ ಕಂಬಕ್ಕೆ ಕಟ್ಟಿ ಹಾಕಿ ಸಾಕುತ್ತಿದ್ದಳು. ಹಾಗಾಗಿ ಮರಿಗಳು ಮನೆಯ ವಠಾರದೊಳಗೆಯೇ ಓಡಾಡುತ್ತ ಬಲಿಯುತ್ತಿದ್ದವು. ಆದರೆ ಕ್ರಮೇಣ ಬೆಳೆದ ಮರಿಗಳು ತಾಯಿಯನ್ನು ಬಿಟ್ಟು ಹೊರಗೆ ಇಣುಕಲು ಮತ್ತು ಓಡಲು ಹವಣಿಸತೊಡಗಿದವು. ಅದನ್ನು ಕಂಡ ರಾಧಾ ಒಂದು ದಿನ ಹೇಟೆಯನ್ನು ಮರಿಗಳೊಂದಿಗೆ ಸುಮಾರು ದೂರದ ಮದಗದತ್ತ ಅಟ್ಟಿಕೊಂಡು ಹೋಗಿ ಮೇಯಲು ಬಿಟ್ಟು ಬಂದಳು. ಆದರೆ ಚುರುಕು ಬುದ್ಧಿಯ ಆ ಹೇಟೆಯು ಯಜಮಾನ್ತಿ ಗಮನಿಸುವವರೆಗೆ ಮಾತ್ರವೇ, ‘ಕೊಟ, ಕೊಟಾ…ಕೊಟ, ಕೊಟಾ…!’ ಎಂದು ತನ್ನ ಮರಿಗಳನ್ನು ಕರೆಯುತ್ತ ಮದಗದತ್ತ ಹೋಯಿತು. ಅವಳು ಯಾವಾಗ ಹಿಂದಿರುಗಿ ಹೋದಳೋ ಹೇಟೆಯೂ ತಟ್ಟನೆ ತನ್ನ ದಿಕ್ಕು ಬದಲಿಸಿಬಿಟ್ಟಿತು. ತನ್ನ ಮರಿಗಳ ಮೇಲೆ ಅತೀವ ಕಾಳಜಿಯಿದ್ದ ಅದು ಮದಗದ ಆಸುಪಾಸು ಹದ್ದು, ಗಿಡುಗ, ಕಾಗೆ, ನರಿ, ಮುಂಗುಸಿ ಮತ್ತು ಕಾಡುಬೆಕ್ಕುಗಳಂಥ ಅಪಾಯದ ಪ್ರಾಣಿಗಳಿರುವುದನ್ನು ತಿಳಿದಿತ್ತು. ಹಾಗಾಗಿ ಅವುಗಳಿಂದ ತನ್ನ ಮರಿಗಳಿಗೆ ಅಪಾಯವೆಂದೂ ಮತ್ತು ಇಲ್ಲಿನ ಕ್ರಿಮಿಕೀಟಗಳಿಗಿಂತಲೂ ಮೇಲ್ಮಟ್ಟದ ಮೇವು ತನ್ನ ಬಡಾವಣೆಯೊಳಗಿನ ಮನೆಗಳಲ್ಲಿಯೇ ದೊರಕುತ್ತದೆ ಎಂಬುದನ್ನೂ ಅರಿತಿತ್ತು. ಆದ್ದರಿಂದ ಹೇಟೆಯು ತನ್ನ ವಠಾರದ ಮನೆಗಳತ್ತಲೇ ಮುಖ ಮಾಡಿದ್ದು ಮೊದಲಿಗೆ ಬ್ಯಾಂಕರ್ ನಾರಾಯಣರ ಮನೆಯ ಗೇಟು ನುಸುಳಿ ಅಂಗಳವನ್ನು ಹೊಕ್ಕಿತು.

(ಮುಂದುವರೆಯುವುದು) 

***************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

2 thoughts on “

  1. ಈ ಅಧ್ಯಾಯದಲ್ಲಿ ಬಾಗೀವನ ಪರಿಸರದ ಸಮಗ್ರ ಚಿತ್ರಣದ ದರ್ಶನವಾಗುತ್ತದೆ. ರಾಧಾ ಗೋಪಾಲರು ಬಾಡಿಗೆ ಮನೆಯ ವಾಸಕ್ಕೆ ತಿಲಾಂಜಲಿಯಿಟ್ಟು ಸ್ವಂತ ನೆಲೆಯನ್ನು ಶ್ರೀಮಂತರು ವಾಸವಿರುವ ಬಾಗೀವನದಲ್ಲಿಯೇ ಕಂಡುಕೊಂಡರೂ ಹಳ್ಳಿಯ ಜೀವನಶೈಲಿಯನ್ನೇ ನೆಚ್ಚಿ ಹಾಗೇಯೇ ಬಾಳಲು ಪ್ರಾರಂಭಿಸುವ ಪರಿ ಅನನ್ಯ.

Leave a Reply

Back To Top