ಅಂಕಣ ಬರಹ

ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ

ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ

ಸರಣಿಬರಹ………..

ಅದ್ಯಾಯ-9

 ಎಲ್ಲಿ, ಯಾವಾಗ, ಮತ್ತು ಹೇಗೆ? ಆ ಶಾಲು ಬಿದ್ದು ಹೋಯಿತೆಂದೇ ಇನ್ನೂ ಪತ್ತೆಯಾಗಿಲ್ಲ.ಮಾರನೆ ದಿನ ಶಾಲು ಎಲ್ಲಿ ಎಂದು ಕೇಳಿದಾಗಲೇ ಅದರ ನೆನಪಾಗಿದ್ದು.

ನೀಲ್ ಐಲ್ಯಾಂಡ್ ನಿಂದ ಹಡಗಿನಲ್ಲಿ ಬಂದು ಇಳಿದ ಕೂಡಲೇ ನಮಗಾಗಿ ಬಸ್ಸು ತಯಾರಾಗಿತ್ತು. ಸೀದಾ ನಮ್ಮ ಮೊದಲ ದಿನದ ಹೊಟೇಲ್ ಗೆ ಕರೆತಂದಾಗ ಏನೋ ಒಂದು ತರದ ಖುಷಿ ನಮಗೆಲ್ಲಾ. ಮತ್ತೆ ಅದೇ ಕೊಠಡಿ ಎಲ್ಲರಿಗೂ. ಎಂಟು ಗಂಟೆಗೆ ಊಟದ ಮೊದಲು ನಮ್ಮನ್ನೆಲ್ಲಾ ಕರೆದು ನಾಳಿನ ಕಾರ್ಯಕ್ರಮದ ಬಗ್ಗೆ ತಿಳಿಸಿದರು

.

ನಾಳೆ ಬೆಳಗಿನ ಜಾವ ಮೂರುವರೆಗೆ ಹೊರಡಬೇಕು. ಭರಟಾಂಗ್ ಐಲ್ಯಾಂಡ್ ಗೆ ಹೋಗೋದು. ಅಲ್ಲಿ ಲೈಮ್ ಸ್ಟೋನ್ ಕೇವ್ಸ್, ಮಡ್ ವೊಲ್ಕೆನೊ ನೋಡಲು ಹೋಗುತ್ತೇವೆ, ಹೋಗುವ ದಾರಿಯಲ್ಲಿ ಮ್ಯಾನ್‌ಗ್ರೋವ್ ಕಾಡು ಸಿಗುತ್ತೆ. ಆ ದ್ವೀಪಕ್ಕೆ ಹೋಗಬೇಕಾದರೆ ನಡುವೆ ಆದಿವಾಸಿಗಳು ವಾಸ ಮಾಡುವ ಸ್ಥಳವನ್ನು ದಾಟಿ ಹೋಗಬೇಕಾದುದರಿಂದ ಭಾರತ ಸರಕಾರದ ಆದೇಶದ ಮೇರೆಗೆ  ಒಂದು ಗೇಟ್ ಮುಚ್ಚಲಾಗಿದೆ. ಅದನ್ನು ದಾಟಿ ಹೋಗಬೇಕು. ನಿರ್ದಿಷ್ಟ ಸಮಯದಲ್ಲಿ ಮಾತ್ರ ಗೇಟ್ ತೆರೆಯಲಾಗುತ್ತದೆ. ಮತ್ತು ಆದಿವಾಸಿಗಳ ತಾಣವನ್ನು ದಾಟುವವರೆಗೆ ಆದಷ್ಟು ಮೌನವಾಗಿರಬೇಕು. ಫೋಟೊ ತೆಗೆಯೋದಾಗಲಿ, ಜೋರಾದ ಸಂಗೀತ ಹಾಕೋದಾಗಲಿ ಮಾಡುವ ಹಾಗಿಲ್ಲ.

ಆದಿವಾಸಿಗಳು ಯಾರನ್ನೂ ಹತ್ತಿರ ಸೇರಿಸುವುದಿಲ್ಲ. ಅವರಿಗೆ ರೋಗ ನಿರೋಧಕ ಶಕ್ತಿಯೂ ಅತ್ಯಂತ ಕಡಿಮೆ ಇರೋದರಿಂದ ಪಟ್ಟಣದವರ ಸಂಪರ್ಕದಿಂದ ಯಾವುದಾದರೂ ಖಾಯಿಲೆ ಅಂಟಬಹುದೆನ್ನುವ ಭೀತಿಯೂ ಅವರಿಗೆ ಇದೆ.

ಬೆಳಿಗ್ಗೆ ಹೊರಡುವಾಗ ಬೆಳಗಿನ ಉಪಹಾರವನ್ನು ಪ್ಯಾಕ್ ಮಾಡಿ ಕೊಡಲಾಗುತ್ತದೆ. ನಂತರ ಭರಟಾಂಗ್ ಐಲ್ಯಾಂಡ್ ತಲುಪುವುದರೊಳಗೆ ಮತ್ತೊಮ್ಮೆ ಪುನಃ ತಿಂಡಿ ಕೊಡುತ್ತೇವೆ ಎಂದು ಹೇಳಿದರು.

ಅದರಂತೇ ಉಪಹಾರದ ಪ್ಯಾಕೇಟನ್ನು ಪಡೆದುಕೊಂಡು ಬಸ್ಸಿನಲ್ಲಿ ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ಒಂದು ಜಾಗದಲ್ಲಿ ಬಸ್ ನಿಲ್ಲಿಸಿದರು. ಅಲ್ಲಿ ಸಾಲಿನಲ್ಲಿ ಕಾಯಬೇಕಿತ್ತು. ಗೇಟ್ ತೆರೆದ ಮೇಲೆ ನಿರ್ದಿಷ್ಟ ಸಂಖ್ಯೆಯಲ್ಲಿ ವಾಹನಗಳನ್ನು ಬಿಡುತ್ತಾರೆ. ಅದಕ್ಕಾಗಿ ಬೇಗನೆ ಬಂದು ಕಾದು ನಿಲ್ಲುತ್ತಾರೆ ಎಲ್ಲರೂ.

ನಾವು ಅಲ್ಲಿ ತಲುಪುವಾಗ ಆಗಲೇ ನಮ್ಮ ಮುಂದೆ ಹತ್ತಾರು ವಾಹನಗಳಿದ್ದವು.

ತುಂಬಾ ಹೊತ್ತು ಬಸ್ಸಿನಲ್ಲೇ ಕೂತಿದ್ದೆವು. ನಮಗಾಗಿ ಕೊಟ್ಟ ಸ್ಯಾಂಡ್‌ವಿಚ್ ಮತ್ತು ಜ್ಯೂಸ್ ಸೇವಿಸಿ ಗಂಡಸರು ಒಬ್ಬೊಬ್ಬರೇ ಕೆಳಗೆ ಇಳಿದು ಹೋದರು. ಸ್ವಲ್ಪ ಹೊತ್ತಿನಲ್ಲಿ ಮಕ್ಕಳು, ಆಮೇಲೆ ನಾವೂ ಇಳಿದು ಒಂದಷ್ಟು ದೂರ ಹೋಗಿ ಅಲ್ಲೆಲ್ಲಾದರೂ ಶೌಚಗೃಹವಿದೆಯೇ ಎಂದು ನೋಡಿ ಎಲ್ಲರೂ ಒಬ್ಬೊಬ್ಬರಾಗಿ ಹೋಗಿ ದರ್ಶನ ಮಾಡಿ ಬಂದೆವು.

ಎರಡು ಗಂಟೆಗಳ ಕಾಲ ಕಾದು ನಿಂತ ಮೇಲೆ ಗೇಟ್ ತೆರೆದು ನಮ್ಮನ್ನೆಲ್ಲಾ ಬಿಟ್ಟರು. ಹೆಚ್ಚಿನ ಸದ್ದು ಮಾಡದೇ ಒಂದರ ಹಿಂದೆ ಒಂದು ವಾಹನಗಳು ನಿಧಾನವಾಗಿ ಸಾಗಿ ಮುಂದೆ ಹೊರಟವು. ನಮಗಲ್ಲಿ ಯಾವ ಆದಿವಾಸಿಗಳೂ ಕಾಣಿಸಲಿಲ್ಲ.

ಆರು ಗಂಟೆ ಕಳೆದುದರಿಂದ ಚೆನ್ನಾಗಿ ಬೆಳಕು ಹರಿದಿತ್ತು. ಮತ್ತೊಮ್ಮೆ ಬಾರ್ಜ್ ಲ್ಲಿ ಸಮುದ್ರ ದಾಟಿ ಭರಟಾಂಗ್ ಐಲ್ಯಾಂಡ್ ನ ಜೆಟ್ಟಿ ತಲುಪಿದೆವು. ಬಾರ್ಜ್‌ಗಳು, ಫೆರ್ರಿಗಳು, ದೋಣಿಗಳು ಮತ್ತು ಸಣ್ಣ ಗಾತ್ರ ಹಡಗುಗಳ ನಿಲ್ದಾಣವನ್ನು ಜೆಟ್ಟಿ ಎನ್ನುತ್ತಾರೆ

ಈಗ ಮುಂದಿನ ಸ್ಥಳಗಳನ್ನು ನೋಡಬೇಕಾದರೆ ಮತ್ತೆ ದೋಣಿಯಲ್ಲಿ ಹೋಗಬೇಕಿತ್ತು. ಈ ಪ್ರದೇಶದ ಸಮುದ್ರದಲ್ಲಿ ಅಂತಹ ಜೋರಿನ ಅಲೆಗಳ ಅಬ್ಬರವಿರಲಿಲ್ಲ.  ದೋಣಿಗಾಗಿ ಕಾದು ನಿಂತಿದ್ದ ನಮ್ಮ ಕೈಗೆ ಮತ್ತೆ ತಿಂಡಿಯ ಪೊಟ್ಟಣ ಬಂತು. ಇಲ್ಲಿಯೇ ತಿಂದು ಮುಗಿಸಿ, ಇಲ್ಲವಾದರೆ ದೋಣಿಯಲ್ಲಾದರೂ ತಿಂದು ಖಾಲಿ ಕವರ್‌ಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ತಿನ್ನುವ ಪದಾರ್ಥಗಳನ್ನು ಅಲ್ಲಿಗೆ ಒಯ್ಯುವ ಹಾಗಿಲ್ಲ ಎಂದರು.

ಪೂರಿಗಳು ಮತ್ತು ಬಿಸಿ ಬಿಸಿ ಆಲೂಗಡ್ಡೆಯ ಪಲ್ಯ. ದೋಣಿಯಲ್ಲಿ ಸಮುದ್ರದ ಮೇಲೆ ಸಾಗುವಾಗಲೇ ತಿಂದೆವು. ಬಹಳ ರುಚಿಯಾಗಿತ್ತು.

ಮುಂದೆ ಹೋಗುತ್ತಾ, ಮ್ಯಾನ್‌ಗ್ರೋವ್ ಕಾಡುಗಳು ನಮಗೆ ನೋಡಲು ಸಿಗುತ್ತವೆ.

ಸಮುದ್ರದ ನೀರಿನೊಳಗೆ, ಮರಳಿನ ಮೇಲೆ ಕೂಡ ಬೆಳೆಯುವ ಗಿಡಗಂಟಿಗಳ ಬಲಿತ ಪೊದೆಗಳಂತಹ ಸಮೂಹ. ಸಣ್ಣ ಸಣ್ಣ ಬೇರಿನಂತಹ ಕಾಂಡಗಳು, ಮೇಲೆ ಹಸಿರಾದ ಎಲೆಗಳು. ನೋಡಲು ಬಹಳ ಸುಂದರವಾಗಿದ್ದವು.

ಎಳೆ ಬಿಸಿಲಿನಲ್ಲಿ ಸಮುದ್ರದ ಮೇಲೆ ದೋಣಿಯಲ್ಲಿ ಸಾಗುತ್ತಾ ಇಂತಹ ಸುಂದರ ದೃಶ್ಯಗಳನ್ನು ನೋಡುತ್ತಾ ಬಿಸಿ ಬಿಸಿ ಪೂರಿ ಪಲ್ಯ ತಿನ್ನುವ ಸೌಭಾಗ್ಯ ನಮ್ಮದಿತ್ತು.

ದೋಣಿಯಿಂದ ಇಳಿದ ಮೇಲೆ ಕಾಡಿನಂತಹ ಪ್ರದೇಶದೊಳಗೆ ಸ್ವಲ್ಪ ನಡೆಯಬೇಕಿತ್ತು. ನಮ್ಮಂತೆಯೇ ತುಂಬಾ ಜನ ಬಂದಿದ್ದರು. ಅಲ್ಲಲ್ಲಿ ನಿಂತು ಫೋಟೊ ತೆಗೆದುಕೊಳ್ಳುವ ಸಾಮಾನ್ಯ ದೃಶ್ಯ ಎಲ್ಲೆಲ್ಲಿಯೂ. ಮ್ಯಾನ್‌ಗ್ರೊವ್ ಕಾಡಿನ ಸೌಂದರ್ಯ ವರ್ಣನಾತೀತ.

ದಟ್ಟ ಕಾಡಿನ ಮರಗಳ ಸಂಧಿಯಿಂದ ಇಣುಕುವ ಸೂರ್ಯನ ಕಿರಣಗಳು‌ ಮರಗಳ ಚಿಗುರೆಲೆಗಳ ಮೇಲೆ ಬಿದ್ದು ಹೊಳೆಯವುದನ್ನು ನೋಡಿಯೇ ನಿಲ್ಲಬೇಕೆನಿಸುತ್ತದೆ.

ಜಗತ್ತಿನ ಅತೀ ಅಪಾಯಕಾರಿ ಜರಾವಾ ಬುಡಕಟ್ಟು ಜನಾಂಗದವರ ಪ್ರದೇಶವಾದುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ನಮಗೆ ಸೂಚಿಸಿದ್ದರು. ಒಂದು ವೇಳೆ ಅವರ ಜನರೇನಾದರೂ ಕಾಣ ಸಿಕ್ಕರೆ ಅವರ ಫೋಟೊ ಕ್ಲಿಕ್ಕಿಸುವುದಾಗಲೀ, ಅವರಿಗೆ ತಿಂಡಿಗಳನ್ನು ಕೊಡುವುದಾಗಲಿ ಮಾಡಬಾರದು. ಮೈಮೇಲೆ ಬಿದ್ದು ಸಾಯಿಸಲೂ ಹೇಸದ ಜನರು ಅವರು.

ಒಂದೂವರೆ ಕಿ.ಮಿಗಳಷ್ಟು ನಡೆದ ಮೇಲೆ ಲೈಮ್ ಸ್ಟೋನ್ ಕೇವ್ಸ್ ಹತ್ರ ಬರುತ್ತೇವೆ.

ಸಮುದ್ರದ ವಾತಾವರಣದಲ್ಲಿ ಲವಣದೊಳಗಿನ ಜೀವಾಣುಗಳಿಂದ ಸೃಷ್ಟಿಸಲ್ಪಟ್ಟ ನೈಸರ್ಗಿಕ ಲವಣದ ರಚನೆಗಳು. ಗುಹೆಗಳ ಒಳಗೆ ನಾವು ಆದಷ್ಟು ಜಾಗ್ರತೆ ಯಾವುದನ್ನೂ ಮುಟ್ಟದೆ ನಡೆಯಬೇಕು. ಗೈಡ್ಸ್ ನಮ್ಮ ಜೊತೆ ಇರ್ತಾರೆ. ಪ್ರತಿಯೊಂದನ್ನೂ ವಿವರಿಸುತ್ತಾ, ಯಾವಯಾವುದೋ ಆಕಾರಗಳನ್ನು ನಮಗೆ ತೋರಿಸುತ್ತಾ ಮೊಬೈಲ್ ಬೆಳಕಿನಲ್ಲಿ ನಮ್ಮನ್ನು ಕರೆದುಕೊಂಡು ಹೋಗ್ತಾರೆ‌.

ಲಕ್ಷ ಲಕ್ಷ ವರ್ಷಗಳಿಗೂ ಹಳೆಯ ಈ ಗುಹೆಗಳು ಎಷ್ಟೋ ವರ್ಷಗಳವರೆಗೆ ಯಾರಿಗೂ ತಿಳಿಯದೆ ಇತ್ತು. ಈಗ ಕೆಲವು ವರ್ಷಗಳಿಂದ  ಸರಕಾರದಿಂದ ಅನುಮತಿ ದೊರಕಿದ ಮೇಲೆ ಕಟ್ಟೆಚ್ಚರಿಕೆ ವಹಿಸಿಕೊಂಡು ಪ್ರವಾಸಿ ತಾಣವಾಗಿದೆ.

ಲವಣದ ರಚನೆಗಳು ನೆಲದಿಂದಲೂ, ಮೇಲ್ಛಾವಣಿಯಿಂದಲೂ ಬೆಳೆಯುತ್ತಿವೆ. ನಮ್ಮ ಸ್ಪರ್ಶದಿಂದ ಆಲ್ಗೆಗಳು ಸತ್ತು ಬೆಳವಣಿಗೆ ನಿಂತುಹೋಗಬಹುದು ಎನ್ನುವ ಕಾರಣಕ್ಕೆ ಒಂದಿಷ್ಟೂ ಮುಟ್ಟುವ ಹಾಗೆಯೇ ಇಲ್ಲ.

ಒಂದು ಗಂಟೆಗಳ ಕಾಲ ಈ ಗುಹೆಯ ಒಳಗೆ ಸಂಚಾರ ಮಾಡಿ ಹೊರಬರುವಾಗ ಅಲ್ಲಿ ಲಿಂಬೆಹಣ್ಣಿನ ಶರ್ಬತ್ ನ ಅಂಗಡಿಗಳಿದ್ದವು. ಗುಹೆಯ ಆಚೆ ಕಡೆಯ ಭಾಗದಲ್ಲಿ ಹಿಂದಿ ಮಾತನಾಡುವ ಕೆಲವು ಜನರು ನೆಲಸಿದ್ದಾರೆ. ಹಸುಗಳನ್ನು ಸಾಕಿಕೊಂಡು, ಗದ್ದೆಯಂತಹ ಪ್ರದೇಶ, ನೋಡಲು ನಮ್ಮ ಊರುಗಳ ಹಾಗೆಯೇ ಕಾಣುತಿತ್ತು.

ಬಿಸಿಲು ಏರುತಿತ್ತು, ಉಪ್ಪಿನ ಗುಹೆಗಳನ್ನು ಹೊಕ್ಕು ಹೊರಬಂದಾಗ ಗಂಟಲೆಲ್ಲ ಒಣಗಿ ಹೋಗಿತ್ತು. ದೊಡ್ಡ ದೊಡ್ಡ ಲೋಟಗಳಲ್ಲಿ ನಿಂಬೂ ಪಾನೀಯ ಕುಡಿದು ಮುಂದೆ ಸಾಗುವಾಗ ಜೀವ ತಂಪಾಯ್ತು.

ಮುಂದೆ ಆ ಗದ್ದೆಯ ಬದುವಿನಂತಹ ದಾರಿಯಲ್ಲಿ ಒಂದು ಕಿ.ಮಿ ನಷ್ಟು ನಡೆದು ನಾವು ತಲುಪಿದ್ದು ಮಡ್ ವೊಲ್ಕೆನೊ. ಆದರೆ ಅದು ಎತ್ತರ ಪ್ರದೇಶದಲ್ಲಿ ಇದ್ದು ಕೆಲವು ಮೆಟ್ಟಲುಗಳನ್ನು ಹತ್ತಬೇಕಿತ್ತು.

ಅಲ್ಲಿ ಬಂದಾಗ ರಾಕೇಶ್ ಅವರು ನನಗೆ, ಸರ್ ಜೊತೆ ನಾನಿರ್ತೇನೆ, ನೀವು ಹೋಗಿ ಬನ್ನಿ , ಅವರಿಗೆ ಮೇಲೆ ಹತ್ತಲು ಆಗ್ಲಿಕ್ಕಿಲ್ಲ. ಅಂದರು. ಇವರು ಕೂಡ ನೀವೆಲ್ಲಾ ಹೋಗಿ ಬನ್ನಿ ನಾನು ಇವರ ಜೊತೆ ಕೂತುಕೊಳ್ಳುತ್ತೇನೆ ಅಂದಿದ್ದರಿಂದ, ನಾನು ಮೇಲೆ ಹತ್ತಿ ಹೋದೆ.

(ಮುಂದುವರೆಯುವುದು..)

*************************************************

ಶೀಲಾ ಭಂಡಾರ್ಕರ್.

Leave a Reply

Back To Top