ಕಾವ್ಯಯಾನ
ಅವಳು ಮೈಕೊಡವಿ ಎದ್ದಳು
ಬೆಂಶ್ರೀ ರವೀಂದ್ರ
ಅವರು, ಮುಂಡಾಸು ಬೈರಾಸುಗಳು
‘ಜಾಲಿ’ ಮರದ ಕಡ್ಡಿಯ
ಎರಡು ತುಂಡು ಮಾಡೆಸೆದರು.
ವಿಚ್ಛೇದನಕೆ ಹೊಸಗಂಡ ಬರಲಿಲ್ಲ ;
ನಾ ಅಲ್ಲಿದ್ದೆ
ನಿಷೇಕದ ರಾತ್ರಿ
ಇವರೇ ಅಲ್ಲವೆ ಹಾಸಿಗೆಯ ಮೇಲೆ
ಬಿಳಿಯ ವಸ್ತ್ರವನು ಹಾಸಿ
ಬಾಗಿಲ ಹೊರಗೆ ಗದ್ದಲವನೆಬ್ಬಿಸುತ
‘ಖಾರ’ ನಾ ‘ಖೋಟ’ ನಾ ಅಂತ ಕೂಗುತ್ತಿದ್ದುದು
ನರ ರಾಕ್ಷಸನಂತೆ ಮದುಮಗ
ನನ್ನ ಹರಿದು ಮುಕ್ಕಿದನಲ್ಲ
ಈಗ.. ಈಗ… ಅನ್ನುತ್ತ ಬೆವರಾಗಿ
ಬಸವಳಿದು ಏದುಸಿರ ಉಬ್ಬಸದಿ
ನನ್ನ ಪಕ್ಕಕೆ ತಳ್ಳಿ
ಬಿಳಿಬಟ್ಟೆಯ ಇಂಚಿಂಚು ನಾಯಂತೆ
ಹೊಂಚಿ ಹುಡುಕಿದನಲ್ಲ
ರಕ್ತ..ರಕ್ತ…ಎನುತ
‘ಮಾಲ್.. ಖೋಟಾ.. ಖೋಟಾ..’
ಎಂದ ನರ ಹರಿದವನಂತೆ ಕೂಗಿದನಲ್ಲ.
ಯಾರವನು ಯಾರವನು ಹೇಳಿಬಿಡು
ಹುಡುಗಿ
ನಿನ್ನ ಕನ್ಯಾಪೊರೆ ಹರಿದವನು
ಕುಲಟೆ, ಮೋಸ ಮಾಡಲು ಬಂದೆಯೇನು
ಮುಂಡಾಸು ಬೈರಾಸುಗಳು
ಉಗುಳಿ ಬೈದು ಹಸಿಮೈಗೆ ಮಾಡಿದರು
ಬಾಸುಂಡೆಯ ಅಲಂಕಾರ
ಇವ.. ಇವನಲ್ಲದೆ
ಅವನಾರು ಇಲ್ಲವೆಂದರೆ ಕೇಳುವರಾರು
ಮೊದಲ ರಾತ್ರಿ ಬಿಳಿಬಟ್ಟೆಯಲಿ
ಕೆಂಪು ರಕುತದ ಬಾಗಿನವನೇಕೆ ನೀಡಿಲ್ಲ
ತೊಲಗಾಚೆ ಮಾನ ಬಿಟ್ಟವಳೆ
ನಡೆ ಪಂಚರೆಡೆಗೆಂದರಲ್ಲ
ಆದರಿಲ್ಲಿ
ಮತ್ತದೆ ಮುಂಡಾಸು ಬೈರಾಸು
ಊಟ ನಿದ್ರೆಯ ಕಳೆದ
ಅಪ್ಪ ಅಮ್ಮನ ಗೋಳು
ತಲೆ ಬಾಗಿಸಿದ ತಂಗಿ ಸಿಡಿವ ಅಣ್ಣ
ಉಸಿರುಗಟ್ಟುಸುವ ಅನುಮಾನದ ಪಿಶಾಚಿ
ಇಲ್ಲ..ಇಲ್ಲ.. ಏನಾದರೂ ಮಾಡಬೇಕು
ಬಾಡಲು ಬಿಡಬಾರದೆನ್ನ ಬದುಕು
ನನ್ನ ಬದುಕು ನನ್ನದು ನನ್ನದು
ನನ್ನ ಅಸ್ಮಿತೆಯ ಹರಾಜಿಗಿಟ್ಟ
ಆತ್ಮಗೌರವವ ಸುಡಲು ಹೊರಟ
ಮುಂಡಾಸು ಬೈರಾಸು
ಗಂಡನೆಂಬವನಿಗೆ ಇನ್ನು ಬಿಡಬಾರದು.
ಅವಳು ಮೈ ಕೊಡವಿ ಎದ್ದಳು.
***********************
ಟಿಪ್ಪಣಿ ; ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಭಾರತದಲ್ಲಿ ಕೆಲವು ಜಾತಿಗಳಲ್ಲಿ ಮೊದಲ ರಾತ್ರಿ ಹೆಣ್ಣನ್ನು ಕನ್ಯತ್ವದ ಪರೀಕ್ಷೆಗೆ ಒಳಗು ಮಾಡುತ್ತಿದ್ದಾರೆ. ಹಾಸಿಗೆಯ ಬಿಳಿಯ ವಸ್ತ್ರದ ಮೇಲಿನ ರಕ್ತದ ಗುರುತು ಅದನ್ನು ಸಾಬೀತು ಮಾಡಬೇಕು. ರಕ್ತವಿದ್ದರೂ ಅನುಮಾನದಿಂದ ಮದುಮಗಳ ಸರ್ವಾಂಗವನ್ನೂ ಪರೀಕ್ಷೆ ಮಾಡಲಾಗುತ್ತಿದೆ. ಎಂತಹ ನಾಚಿಕೆಗೇಡಿನ ವಿಚಾರ. ಇತ್ತೀಚಿನ ಪತ್ರಿಕಾ ವರದಿಯು ಈ ಕವಿತೆಗೆ ವಸ್ತುವಾಗಿದೆ.