ಅಂಕಣ ಬರಹ

ಅಂತಃಕರಣದ ಹಾದಿಯಲ್ಲಿ

ಕೊರೋನಾ ಸುಡುತ್ತಿರುವ ಈ ಹೊತ್ತಲ್ಲಿ ಹೊರಗಿನ ಈ ಬಿರುಬಿಸಿಲಿನ ಬಿಸಿ ಏನೆಂದರೆ ಏನೂ ಅನಿಸುತ್ತಿಲ್ಲ. ಚಳಿ ಮಳೆ ಗಾಳಿ ಬಿಸಿಲು ಯಾವುದಕ್ಕೂ ಬಗ್ಗದೇ ಕೊರೋನಾ ಅಟ್ಟಹಾಸವಾಡುತ್ತಿದೆ. ಪ್ರಕೃತಿಯ ವಿಕೋಪಗಳ ಮುಂದೆ ಮನುಷ್ಯ ಯಾವತ್ತಿಗೂ ಸೋತಿದ್ದಾನೆ ಮತ್ತು ಸೋಲಲೇಬೇಕಾಗುತ್ತದೆ ಎಂಬುದು ಮತ್ತೆ ಮತ್ತೆ ಋಜುವಾತಾಗುತ್ತಲೇ ಬಂದಿದೆ. ಈಗ ಕೊರೋನಾದ ಜೊತೆಗೂ ಹೋರಾಡುತ್ತಲೇ ಇದ್ದೇವೆ. ಗೆಲ್ಲುವುದಕ್ಕೆ ಇನ್ನೆಷ್ಟು ತೆರ ತೆರಬೇಕೋ ಗೊತ್ತಿಲ್ಲ. ಆದರೆ ಈ ಸಂದರ್ಭಕ್ಕೆ ಅತ್ಯಗತ್ಯವಾಗಿರುವುದು ಮನುಷ್ಯತ್ವ ಮಾತ್ರ. ಎಲ್ಲರೂ ಮನುಷ್ಯರೆನ್ನುವ ಕಾರಣಕ್ಕೆ ಒಂದಾಗಬೇಕು. ಸಾಧ್ಯವಾದಷ್ಟೂ ಮನುಷ್ಯತ್ವದಿಂದ ವರ್ತಿಸಬೇಕು. ಕಾಯಿಲೆಯ ವಿರುದ್ಧ ಹೋರಾಡಬೇಕೇ ಹೊರತು ನಮ್ಮ ನಮ್ಮ ನಡುವೆಯೇ ಅಲ್ಲ.

ನಮ್ಮ ಕೈಯಿಂದ ಒಳ್ಳೆಯದನ್ನು ಮಾಡುವುದು ಸಾಧ್ಯವಾದರೆ ಅದು ನಮ್ಮ ಪುಣ್ಯ. ಸಾಧ್ಯವಾಗಲಿಲ್ಲವಾ ಸುಮ್ಮನಿದ್ದುಬಿಡೋಣ. ಅದೂ ಒಂದು ಬಗೆಯ ಉಪಕಾರವೇ. ಅದನ್ನು ಬಿಟ್ಟು ನಾವೇ ಮುಂದಾಗಿ ಒಬ್ಬರಿಗೆ ತೊಂದರೆ ಮಾಡುವುದಿದೆಯಲ್ಲ ಅದನ್ನು ನಮ್ಮ ತರ್ಕವಾಗಲಿ ಅಥವಾ ನಂಬುವವರ ಭಗವಂತನಾಗಲಿ ಮೆಚ್ಚಲು ಸಾಧ್ಯವಾ… ಇತ್ತೀಚಿನ ನನ್ನ ಅನುಭವವೊಂದು ಇಂತಹ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡಿದೆ. ಯಾವುದು ಸತ್ಯ ಅಲ್ಲ, ಯಾವುದು ಶಾಶ್ವತ ಅಲ್ಲ ಅಂತಹ ಆ ದಾರಿ ನಮ್ಮದಾಗಿಬಿಡುತ್ತದಲ್ಲ… ಅದನ್ನು ಆಯ್ದುಕೊಳ್ಳುವ ವೈಕಲ್ಯವನ್ನು ನಿವಾರಿಸಿಕೊಳ್ಳದೇ ಇದರ ಪರಿಹಾರವೆಲ್ಲಿಂದ. ಆದರೆ ಸತ್ಯ ಯಾಕೆ ಆಪ್ತವಲ್ಲ, ಸತ್ಯ ಯಾಕೆ ರುಚಿಸುವುದಿಲ್ಲ. ನಮ್ಮ ಅಸ್ತಿತ್ವದ ಹೋರಾಟ ಮುಖ್ಯವಾಗುವಷ್ಟೇ ಮತ್ತೊಬ್ಬರ ಅಸ್ತಿತ್ವದ ಹೋರಾಟ ಮುಖ್ಯ ಎಂದು ಏಕನಿಸುವುದಿಲ್ಲ. ನಮ್ಮ ಮೂಗಿನ ನೇರಕ್ಕೆ ಯೋಚಿಸುವಾಗ ಮತ್ತೊಬ್ಬರ ಮೂಗಿನ ನೇರ ಬೇರೆಯದೇ ಎತ್ತರದ್ದು ಎನ್ನುವ ಸತ್ಯ ಗೊತ್ತಿದ್ದೂ ಏಕೆ ನಮಗದು ವೇದ್ಯವಾಗುವುದಿಲ್ಲ! ಮತ್ತೆ ಕೆಲವರು ಅದು ಹೇಗೆ ಉಪಕಾರ ಸ್ಮರಣೆಯಿಲ್ಲದಷ್ಟು ಸಮಯ ಸಾಧಕಾರಾಗಿ ಬಿಡುತ್ತಾರೆ… ಹೊರಗಿನವರಿಗಿಂತಲೂ ಒಳಗಿನವರ ಇಂತಹ ವರ್ತನೆ ತೀವ್ರ ನೋವನ್ನುಂಟುಮಾಡುತ್ತದೆ. ಇದು ಕೊರೋನಾಗಿಂತಲೂ ದೊಡ್ಡ ಮತ್ತು ದುಷ್ಟ ವೈರಸ್.

ಕೊರೋನಾ ಎನ್ನುವ ಕ್ಷಣ ಕ್ಷಣಕ್ಕೂ ಬಣ್ಣ ಬದಲಾಯಿಸುವ ಗೋಸುಂಬೆಯಂಥಾ ಈ ಕಾಯಿಲೆ ಮನುಷ್ಯನೆನ್ನುವ ಮನುಷ್ಯನದೇ ದೇಹದ ಸಾಮರ್ಥ್ಯವನ್ನು ಅಣಕಿಸುತ್ತಿದೆ ಹೇಗೋ, ಅವನ ಬುದ್ಧಿಯ ಡೋಂಗಿತನವನ್ನೂ ಹೊರಗೆಳೆಯುತ್ತಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತನ್ನು ಸದಾ ಅಲ್ಲಗಳೆಯಲು ಪ್ರಯತ್ನಿಸಿದರೂ ಅದನ್ನು ಸಾಬೀತು ಮಾಡಿ  ಒಪ್ಪಿಸುವ ಸನ್ನಿವೇಶಗಳು ಎದುರಾದಾಗ ಯಾವ ರೀತಿ ನೋಡಬೇಕೆನ್ನುವ ವಿಚಿತ್ರ ಪರಿಸ್ಥಿತಿ. ಇದು ಮೊಟ್ಟ ಮೊದಲ ಅನುಭವಂತೇನೂ ಅಲ್ಲ. ಆದರೆ ಪ್ರತಿ ಘಟನೆಯೂ ನೋವುಂಟು ಮಾಡುತ್ತದೆ. ನಮ್ಮವರಿಗೆ ನಾವೇ ಎದುರಾಳಿಯಾಗಬೇಕಾದ ನೋವು. ಅಷ್ಟಕ್ಕೇ ಸೋಲಬೇಕಿಲ್ಲ ಎನ್ನುವುದರ ಅರಿವಿದೆ. ಮತ್ತೆ ಮತ್ತೆ ಎದುರಿಸಲು ಪ್ರಯತ್ನಿಸುವುದೂ ಜೀವಂತಿಕೆಯ ಪ್ರಾತ್ಯಕ್ಷ. ಇಲ್ಲಿ ಘಟನೆಗಳ ವಿವರ ಅನಗತ್ಯ. ಕಾರಣ ಇಂತಹ ಘಟನೆಗಳ ಪುನರಾವರ್ತನೆ. ಇಲ್ಲಿ ಹೇಳ ಹೊರಟಿದ್ದರ ಉದ್ದೇಶ ಅಂತಹ ಒಟ್ಟಾರೆ ವರ್ತನೆಗಳ ಹಿಂದಿನ ಮನಸ್ಥಿತಿ ಮತ್ತು ಇತರರನ್ನು ಹಣಿಯಲಿಕ್ಕೆಂದೇ ಪೂರ್ತಿ ಬುದ್ಧಿ ಮತ್ತು ಶಕ್ತಿ, ಸಂಪನ್ಮೂಲಗಳ ಖರ್ಚು ಮಾಡ ಹೊರಡುವ ದುಷ್ಟತೆಯ ಬಗ್ಗೆ… ಕೊರೋನಾದಂತಹ ಬೆಂಕಿ, ಮನೆ ಬಾಗಿಲಿಗೇ ಬಂದು ನಿಂತಿದೆ. ಒಳ ಬರಲು ಹವಣಿಸುತ್ತಿದೆ. ಇಂತಹ ಹೊತ್ತಿನಲ್ಲೂ ನಮ್ಮ ಸ್ವಾರ್ಥವೇ ಮುಂದಾಗುತ್ತಿರುವುದು ವಿಷಾದ ಹುಟ್ಟಿಸುತ್ತದೆ.

ಮೊನ್ನೆ ಹಿರಿಯ ಬರಹಗಾರರೊಬ್ಬರ ಬಳಿ ಮಾತನಾಡುತ್ತಿದ್ದೆ. ಕೊರೋನಾ ತಂದಿಟ್ಟಿರುವ ದುಃಸ್ಥಿತಿಯ ಕಡೆ ಮಾತು ಹೊರಳಿತ್ತು. ಕೊರೋನಾ ಕವಿಸಿರುವ ಮಂಕಿನಲ್ಲಿ ಅದೆಷ್ಟೋ ಜನರ ಸೃಜನಶೀಲತೆ ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿದ್ದರು ಆ ಹಿರಿಯರು. ನಾನಂದೆ, ” ನಿಜ ಸರ್, ಈಗ ಸಮಯವಂತೂ ಇದೆ, ಆದರೆ ಎಂಥದೋ ಭಯ, ಆತಂಕ, ತಳಮಳ… ಏನನ್ನೂ ಬರೆಯುವುದು ಸಾಧ್ಯವಾಗುತ್ತಿಲ್ಲ…” ಎಂದೆ. ಕೊರೋನಾ ಎನ್ನುವ ಭೂತವನ್ನು ಎದುರಿಸುವುದು ನಾವಷ್ಟೇ ಎಂದಾಗ  ಸಮಸ್ಯೆ ಎನಿಸುವುದಿಲ್ಲ. ಆದರೆ ನಮ್ಮವರನ್ನು ಕಾಪಾಡುವ, ಅದರಲ್ಲು ಪುಟ್ಟ ಮಕ್ಕಳನ್ನು ಕಾಪಿಟ್ಟುಕೊಳ್ಳುವ ಸಮಸ್ಯೆ ಎದುರಾದಾಗ ನಿಜಕ್ಕೂ ಸ್ಥೈರ್ಯ ಕಳೆಯತೊಡಗುತ್ತದೆ. ಇಂತಹ ಸಂದರ್ಭಗಳಲ್ಲೇ ಯಾರು ನಿಜವಾಗಿ ನಮ್ಮವರು ಎಂದು ತಿಳಿಯುವುದು.

ಈ ನಡುವೆ ನಮ್ಮ ಲೊಕ್ಯಾಲಿಟಿಯಲ್ಲಿ ಐದು ಕೊರೋನಾ ಕೇಸಸ್ ವರದಿಯಾದವು. ಕೊರೋನಾ ಹೊಸಿಲಿಗೇ ಬಂದು ನಿಂತಂಥ ಅನುಭವ. ಯಾಕೋ ಮನಸ್ಸು ನಿತ್ರಾಣಗೊಂಡಂತೆ ಸುಸ್ತಾಗುತ್ತದೆ. ಆ ಐದರಲ್ಲಿ ಒಂದು ಡೆತ್ ಕೇಸ್. ಅದೂ ಜಸ್ಟ್ ಎದುರು ಮನೆಯಲ್ಲಿಯೇ. ಪ್ರತಿ ನಿತ್ಯ ಕಂಡಾಗಲೊಮ್ಮೆ ನಗೆ ಬೀರುತ್ತಿದ್ದ ಮುಗ್ಧ ನಗುವಿನೊಡತಿಯೊಬ್ಬರು ಇದ್ದಕ್ಕಿದ್ದಂತೆ ಒಂದು ದಿನ ಇಲ್ಲವಾಗುಬಿಡುತ್ತಾರೆ ಎಂದರೆ  ನಂಬುವುದಾದರೂ ಹೇಗೆ ಹೇಳಿ…

ಅವರು ತಮ್ಮ ಬಿಡುವಿನ ವೇಳೆಯಲ್ಲಿ ಸೀರೆಗಳಿಗೆ ಫಾಲ್ಸ್, ಜಿ಼ಗ್ ಜಾ಼ಗ್ ಮತ್ತು ಕುಚ್ಚು ಕಟ್ಟಿಕೊಡುತ್ತಿದ್ದರು. ನನಗೊಂದಿಷ್ಟು ಸೀರೆಗಳಿಗೆ ವರ್ಕ್ ಮಾಡಿಸುವುದಿತ್ತು ಅವರಿಂದ. ಎತ್ತಿ ಹೊರಗಡೆ ಇಟ್ಟಿದ್ದೆ. ಇವತ್ತು ಕೊಡೋಣ ನಾಳೆ ಕೊಡೋಣ ಎನ್ನುತ್ತಾ ಕೊಡುವ ದಿನವನ್ನು ಮುಂದೂಡುತ್ತಲೇ ಬಂದಿದ್ದೆ. ಆದರೆ ಅವರು ಇನ್ನು ಇಲ್ಲವೇ ಇಲ್ಲ ಎನ್ನುವ ಸುದ್ದಿ ಬಾಗಿಲು ಬಡಿದಾಗ ಸೀರೆಗಳಿನ್ನು ಹೊರಗೇ ಇದ್ದವು. ಆದರೆ ಅವರ ಮುಗ್ಧ ನಗು ಕಣ್ಣ ಮುಂದೆ ಬಂದು ಕಣ್ಣು ಮಂಜಾಗಿತ್ತು. ಅವರು ಮಾಡಿಕೊಟ್ಟಿದ್ದ ಕುಚ್ಚನ್ನೊಮ್ಮೆ ತೆಗೆದು ನೋಡಿದ್ದೆ. ಅವರನ್ನು ಕಪ್ಪು ಬಣ್ಣದ ಕವರಿನಲ್ಲಿ ಸುತ್ತಿ ಇಟ್ಟಿದ್ದರು. ಅವರ ಮನೆಯ ಹೊರಭಾಗದಲ್ಲಿ ರಸ್ತೆ ಬದಿಯಲ್ಲಿ ಕಂಪೌಂಡಿಗೆ ಒರಗಿಸಿ ಅವರನ್ನು ಮಲಗಿಸಲಾಗಿತ್ತು. ಎಂಥದೋ ಕಸಿವಿಸಿ ಆಯಿತು ಮನಸಿಗೆ. ಯಾವ ಮನೆ ಸದಾ ಅವರ ಉಸಿರಿನಿಂದ ತುಂಬಿರುತ್ತಿತ್ತೋ ಅದಕ್ಕೀಗ ಅವರೇ ಹೊರಗು. ಅಳುವಿನ ಕ್ಷೀಣ ಶಬ್ಧವನ್ನು ಹೊರತುಪಡಿಸಿ ಹೆಚ್ಚಿನ ಜನವೂ ಇಲ್ಲ, ಗದ್ದಲವೂ ಇಲ್ಲ. ಕನಿಷ್ಟ ದೇಹ ತ್ಯಜಿಸಿರುವ ಆತ್ಮಕ್ಕೆ ಸಲ್ಲಬೇಕಾದ ಅಶ್ರುತರ್ಪಣವೂ ಇಲ್ಲದೆ ವಿದಾಯ ಸಲ್ಲಿಸಬೇಕಾದ ದುಃಸ್ಥಿತಿ! ಒಂದು ಸಣ್ಣ ಅತಿ ಸಣ್ಣ ನೋವಿನೆಳೆ ಮಾತ್ರ ಇಡೀ ಜೀವವನ್ನೇ ಹಿಂಡುತ್ತಿದೆ.

ಇಂತಹ ಅದೆಷ್ಟೋ ಆಪ್ತರನ್ನು ದೂರ ಮಾಡುತ್ತಿರುವ ಕೊರೋನಾ ನಾಶವಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ, ಬೇಡಿಕೆ, ತಪನೆ, ಪ್ರಾರ್ಥನೆ… ಕನಿಷ್ಟ ಈಗಲಾದರೂ ಬದುಕಿನ ನಶ್ವರತೆ ನಮಗೆ ಅರ್ಥವಾಗಬೇಕಿದೆ. ನಮ್ಮದೇ ಸ್ವಾರ್ಥ, ಅಸೂಯೆ, ಮೇಲರಿಮೆ… ಎಂಬಿತ್ಯಾದಿ ಸಣ್ಣತನಗಳನ್ನು ಬಿಟ್ಟು ಇತರರ ಕಷ್ಟಕ್ಕೆ ಆಗಬೇಕಾಗಿದೆ. ಕೊನೆಗಾದರೂ ಎರೆಡು ಹನಿಗಳನ್ನು ತೊಡೆಯಲು ಎರೆಡೇ ಎರೆಡು ಬೆರಳುಗಳೇ ಆಸರೆಯಾಗಬಲ್ಲವು ಎಂಬುದನ್ನು ಮರೆಯದಿರಬೇಕಿದೆ.

ಮೊನ್ನೆ ವಾಟ್ಸಾಪ್ ಗ್ರೂಪೊಂದರಲ್ಲಿ ಗೆಳತಿಯೊಬ್ಬರು “ಹಾಯ್ ಎಲ್ರು ಹೇಗಿದೀರಿ” ಅಂತ ಮೇಸೇಜಿಸಿದರು. “Fine ಎನ್ನುಲು ಸಾಧ್ಯವಾಗುತ್ತಿಲ್ಲ” ಎಂದು ರಿಪ್ಲೈ ಮಾಡಿದೆ. ಸ್ವಲ್ಪ ಹೊತ್ತಲ್ಲೇ ಆ ಗೆಳತಿ ಕಾಲ್ ಮಾಡಿದರು. ಏನಾಗಿದೆಯೋ ಎಂದು ಕೇಳಲಿಕ್ಕೆ. ಆಕೆ ಬಹಳಷ್ಟು ಜನ ನಮ್ಮ ಸುತ್ತ ಮುತ್ತಲಿನವರು ಕೊರೋನಾದಿಂದ ಹೇಗೆಲ್ಲ ಸಂತ್ರಸ್ತರಾಗಿದಾರೆ ಎನ್ನುವುದನ್ನು ಹೇಳುತ್ತಾ “ಪ್ರತಿ ನಿತ್ಯ ಹೀಗೆ ಎಲ್ಲರಿಗೂ ಕಾಲ್ ಮಾಡಿ ಮಾತಾಡ್ತಿರ್ತೀನಿ. ಸಾಧ್ಯವಾಗುವಂತಿರುವವರನ್ನು ಕೊರೋನಾ ನಿಯಮಗಳ ಪಾಲಿಸಿಕೊಂಡು ಭೇಟಿ ಸಹ ಮಾಡ್ತಿನಿ. ಕನಿಷ್ಟ ಕಷ್ಟದಲ್ಲಿರುವವರಿಗೆ ಸಮಾಧಾನದ ಮಾತುಗಳ ಸಾಂತ್ವನವನ್ನಾದರೂ ನಾವು ನೀಡಬಹುದಲ್ಲ..” ಎಂದರು. ಆ ಮಾತು ನನ್ನ ಮನಸನ್ನು ತಟ್ಟಿತು. ಈಗ ಎಲ್ಲರ ಮೊಬೈಲುಗಳಲ್ಲೂ ಡಾಟಾ ಇರುತ್ತದೆ. ಅನ್ ಲಿಮಿಟೆಡ್ ಕಾಲ್ಸ್ ಫೆಸಿಲಿಟಿ ಇದೆ. ಆದರೂ ಮಾತಾಡುವಷ್ಟು ಮುಕ್ತತೆ ಸಾಧ್ಯವಾಗುತ್ತಿಲ್ಲ. ಒಬ್ಬರನ್ನು ನಂಬುವುದು, ಒಬ್ಬರಲ್ಲಿ ವಿಶ್ವಾಸವಿಡುವುದು ಕಷ್ಟವೆನಿಸುತ್ತದೆ. ಇಂಥವಕ್ಕೆಲ್ಲ ಕಾರಣ ನಮ್ಮೊಳಗೇ ಇದೆ. ಮತ್ತೆ ಚಪ್ಪಾಳೆಯಾಗಲು ಎರೆಡೂ ಕೈಗಳೂ ಲಾಘಿಸಲೇ ಬೇಕು ಎನ್ನುವದನ್ನು ಮರೆತು ಚಪ್ಪಾಳೆಯನ್ನು ದೇನಿಸುವುದು ನಗೆಪಾಟಲು. ಬಾಹುಗಳೆರೆಡೂ ಬರಸೆಳೆಯಲೇಬೇಕು ಅಪ್ಪುಗೆಯಾಗಲು.

ನೋಡನೋಡುತ್ತಲೇ ಕೊರೋನಾದೊಂದಿಗಿನ ಹೋರಾಟಕ್ಕೆ ಒಂದು ತುಂಬಿ, ಎರೆಡನೇ ವರ್ಷ. ಸಹನೆಯ ಶಕ್ತಿಯೂ ಕುಂದುತ್ತಿದೆ. ಕೇಳದ ಮನಸ್ಸು ಹೊಸಿಲು ದಾಟುತ್ತಿದೆ. ಅಪಾಯದ ಅಕ್ಕ ಪಕ್ಕವೇ ಮೂಗು ಬಾಯಿ ಮುಚ್ಚಿಕೊಂಡು ಓಡಾಡ ಬೇಕಾದ ಅನಿವಾರ್ಯತೆಯೂ ನಮ್ಮಲ್ಲಿ ಕೆಲವರಿಗೆ… ಅದೆಲ್ಲದರ ನಡುವೆಯೇ ಮನುಷ್ಯತ್ವದ ದೀಪವೊಂದಕ್ಕೆ ಬತ್ತಿ ಹೊಸೆದು, ಎಣ್ಣೆ ತುಂಬಿ, ಆರದಂತೆ ಕೈಗಳ ಅಡ್ಡ ಹಿಡಿದು ಜ್ಯೋತಿಯ ಹೊತ್ತಿಸಬೇಕಿದೆ…

**********************************************

ಆಶಾ ಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ

4 thoughts on “

  1. ವಾಸ್ತವ…. ನಮ್ಮ ಬದುಕಿನ ಎಳೆಯೊಂದು ಕೈಜಾರಿ ಹೋಗುತ್ತಿರುವಂತಿದೆ…

  2. ಎಲ್ಲರ ಮನಸ್ಸನ್ನು ಒಂದೇ ಲೇಖನದಲ್ಲಿ ಇಟ್ಟಂತಿದೆ.

Leave a Reply

Back To Top