ನೆನೆವುದೆನ್ನ ಮನಂ : ಕೆಲವು ಮಾತುಗಳು

ವಿಶೇಷ ಲೇಖನ

ಪಂಪನ ಕುರಿತಾದ ವಿಶೇಷ ಲೇಖನ

ಆರ್.ದಿಲೀಪ್ ಕುಮಾರ್

ನೆನೆವುದೆನ್ನ ಮನಂ : ಕೆಲವು ಮಾತುಗಳು

ವಿಕ್ರಮಾರ್ಜುನ ವಿಜಯ (ಪಂಪಭಾರತ) ಕೃತಿಯ ನಾಲ್ಕನೇ ಆಶ್ವಾಸದ ಮೂವತ್ತನೇ ಪ್ರಖ್ಯಾತ ಪದ್ಯವು ಇದಾಗಿದೆ. ಈ ಪದ್ಯದ ಬಗೆಗೆ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಂದ ಇತ್ತೀಚಿನವರವರೆಗೂ ಮಾಡಿರುವ ವಿಮರ್ಶೆ ಮತ್ತು ವ್ಯಾಖ್ಯಾನಗಳ ಅಧ್ಯಯನವೇ ಬಹಳ ವಿಸ್ತಾರವಾದದ್ದಾಗಿದೆ. ಕನ್ನಡನಾಡಿನ ಬನವಾಸಿಯ ನೆಲವು ಆಂಧ್ರನಾಡಿನಲ್ಲಿ ಕುಳಿತಿರುವ ಕವಿಯ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವ ಕಾರಣದಿಂದ ಅವನ ಮೇಲೆ ಬೀರಿರುವ ಪರಿಣಾಮದ ಪ್ರತಿಫಲವೇ ಈ ಪದ್ಯದ ಆವಿರ್ಭಾವಕ್ಕೆ ಕಾರಣವಾಗಿದೆ. ನೆನಪು ಮತ್ತು ನೆನಪಿನ ಕಾರಣ ಸಂಬಂಧ ಈ ಪದ್ಯದ ಭಾವಕೇಂದ್ರವಾಗಿದೆ. ಈ ಪದ್ಯವನ್ನು ಬಿಡಿಸಿ ಮರುವಿನ್ಯಾಸಗೊಳಿಸಿ, ಹೊಸ ಕ್ರಮದಲ್ಲಿ ಓದಿಕೊಳ್ಳುವುದರಿಂದ ಕವಿಯ ಮೇಲೆ ಆ ಪರಿಸರ ಬೀರಿರಬಹುದಾದ ದಟ್ಟವಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ನನಗೆ ಅನಿಸಿದೆ. ಪಠ್ಯದ ಮೂಲ ಉದ್ದೇಶಕ್ಕೇನೂ ಬಿಡಿಸುವ ಮತ್ತು ಮರುವಿನ್ಯಾಸಗೊಳಿಸುವ ಕ್ರಮಗಳು ಧಕ್ಕೆತರುವುದಿಲ್ಲ. ಆ ಕವಿಯ ಉದ್ದೇಶವನ್ನೇ ಇನ್ನೂ ಪರಿಣಾಮಕಾರಿಗೊಳಿಸುವ ಓದಿನ ಕ್ರಮವಿದು ಎಂದು ಭಾವಿಸಿದ್ದೇನೆ. ಹೀಗೆ ಬಿಡಿಸಿ ಓದುವುದರಿಂದ ಹೊಸ ಅರ್ಥವನ್ನೂ ಈ ಪದ್ಯ ನನ್ನೊಳಗೆ ಉಂಟುಮಾಡಿದೆ.

ಮೂಲ ಪಠ್ಯ

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ l

ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ l

ಕೆಂದಲಂ

ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನೆಂಬೆ ನಾ l

ರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ ll

ಈ ಪದ್ಯಕ್ಕೆ ಆಚಾರ್ಯ ಡಿ. ಎಲ್. ನರಸಿಂಹಾಚಾರ್ಯರು ತಮ್ಮ “ಪಂಪಭಾರತ ದೀಪಿಕೆ”ಯಲ್ಲಿ ಮಾಡಿರುವ ಅರ್ಥವನ್ನೊಮ್ಮೆ ಗಮನಿಸಿ

ತೆಂಕಣ ಗಾಳಿ ಸೋಂಕಿದೊಡಂದಕ್ಷಿದ ಗಾಳಿ ಮೈ ಮುಟ್ಟಿದರೂ

ಒಳ್ನುಡಿಗೇಳ್ದೊಡಂಒಳ್ಳೆಯ ಮಾತನ್ನು ಕೇಳಿದರೂ

ಇಂಪನಾಳ್ದಗೇಯಂಇಂಪಿನಿಂದ ಕೂಡಿದ ಗೀತವು

ಕವಿವೊಕ್ಕೊಡಂಕಿವಿಗೆ ಕೇಳಿಸಿದರೂ

ಬಿರಿದ ಮಲ್ಲಿಗೆಗಂಡೊಡಂಅರಳಿದ ಮಲ್ಲಿಗೆಯನ್ನು ನೋಡಿದರೂ

ಆದ ಕೆಂದುಉಂಟಾದ ನಿದ್ದೆ 

ಅಲಂಪಂಸುಖವನ್ನು

ಗೆಡೆಗೊಂಡೊಡಂಜೊತೆಗೂಡಿದರೂ

ಮಧುಮಹೋತ್ವಮಾದೊಡಂವಸಂತಕಾಲದ ಮಹೋತ್ಸವ ನಡೆದರೂ

ಏನನೆಂಬೆಂಏನೆಂದು ಹೇಳಬಲ್ಲೆ

ಎನ್ನ ಮನಂನನ್ನ ಮನವು

ವನವಾಸಿ ದೇಶಮಂಬನವಾಸಿಯ ಪ್ರಾಂತ್ಯವನ್ನು

 ಅರಂಕುಸಮಿಟ್ಟೊಡಂಯಾರು ಅಂಕುಶ ಹಾಕಿದರೂ, ಎಂದರೆ ತಡೆದರೂ

ನೆನೆವುದು – ನೆನೆದುಕೊಳ್ಳುತ್ತದೆ.

ಡಾ. ಎಲ್. ಬಸವರಾಜು ಅವರು “ಸರಳ ಪಂಪಭಾರತ”ದಲ್ಲಿ ಈ ಪದ್ಯವನ್ನು ಬಿಡಿಸಿರುವ ಕ್ರಮವನ್ನೊಮ್ಮೆ ಗಮನಿಸಿ ನೋಡಿ

ತೆಂಕಣ ಗಾಳಿ ಸೋಂಕಿದೊಡಮ್

ಒಳ್ನುಡಿಗೇಳ್ದೊಡಮ್

ಇಂಪನಾಳ್ದ ಗೇಯಂ ಕವಿವೊಕ್ಕೊಡಂ

ಬಿರಿದ ಮಲ್ಲಿಗೆಗಂಡೊಡಮ್

ಆದಲಂಪು ಅಲಂಪಂ ಗೆಡೆಗೊಂಡೊಡಂ

ಮಧುಮಹೋತ್ವಮಾದೊಡಮ್ಏನನೆಂಬೆನ್

ಆರ್ ಅಂಕುಸಮಿಟ್ಟೊಡಂ

ನೆನೆವುದೆನ್ನ ಮನಂ ಬನವಾಸೀ ದೇಶಮಂ !

( ಈ ಪದ್ಯವನ್ನು ಅರ್ಥಪ್ರಾಧಾನ್ಯದಲ್ಲಿ ಬಿಡಿಸುವಾಗ ಛಂದೋನಿಯಮ ಯತಿಯ ಪಾಲನೆಗಾಗಿ ಅಕ್ಷರದ ಮೇಲೆ ಡಾ.‌ ಎಲ್. ಬಿ ಅವರು ಕೊಟ್ಟಿರುವ ಚಿಹ್ನೆಗಳನ್ನು ಕೈ ಬಿಟ್ಟಿದ್ದೇನೆ. ಉಳಿದಂತೆ ಪದ್ಯವು ಯಥಾವತ್ತು ನೀಡಿದ್ದೇನೆ. )

ಕಾವ್ಯ ರಚನೆ ಹೇಗೆ ಮನುಜಕುಲದ ನಿರಂತರ ಕ್ರಿಯೆಯೋ, ಹಾಗೇ ಕಾವ್ಯದ ಓದು ಮನುಜಕುಲದ ನಿರಂತರವಾದ ಪ್ರಕ್ರಿಯೆ. ಕವಿಯೊಬ್ಬ ತಾನು ಕಂಡ ಬದುಕಿನ ವ್ಯಷ್ಟಿ ಅನುಭವಗಳನ್ನು, ಸಮಷ್ಟಿ ಮಾನವಕುಲದ ಒಳಿತಿಗಾಗಿ ತತ್ವೀಕರಿಸಿ ರೂಪಕಾತ್ಮಕಗೊಳಿಸಿ ತನ್ನದೇ ಭಾಷೆಯಲ್ಲಿ ಹಸ್ತಾಂತರಕ್ಕೆ ನಿಲ್ಲುವನು. ಅಂತಹ ಕವಿಗೆ ಎಂದೂ ಸಾಹಿತ್ಯ ಚರಿತ್ರೆಯಲ್ಲಿ, ಜನಮಾನಸದಲ್ಲಿ ಸ್ಥಾನವಿದ್ದೇ ಇದೆ. ತನ್ನ ಸಮಕಾಲೀನರೂ ಅಷ್ಟೇ ಸಶಕ್ತರಾಗಿದ್ದಾಗ ಆ ತಾತ್ವಿಕತೆಯ ತುದಿಮೊದಲುಗಳನ್ನು ಬಲ್ಲವರಾದರೆ ಕಟ್ಟಿದ ಕವಿಗೆ ಎಲ್ಲಿಲ್ಲದ ಮನ್ನಣೆ ದೊರೆತುಬಿಡುತ್ತದೆ. ಕೃತಿಯಲ್ಲಿನ ತಾತ್ವಿಕತೆ ಎನ್ನುವುದೇ ವಿಶಿಷ್ಟವಾದ ಅವಲೋಕನನದ ಕ್ರಮ. ಅದು ಕೃತಿಯ ಮೂಲಕವೇ ಓದುಗನಿಗೆ ಅನುಭವಕ್ಕೆ ಬರುವುದೇ ಹೊರತು ಕೃತಿಯ ಸುತ್ತ ಕಟ್ಟುವ ಕಥೆಗಳಿಂದ ಅಲ್ಲ. ಕೃತಿಯಲ್ಲಿನ ಜಾತಿ, ಧರ್ಮ, ವರ್ಗ, ವರ್ಣ, ಪ್ರಕೃತಿ, ಕಾಲ, ಮನುಷ್ಯನ ಸ್ಥಿತಿ, ಭಾವನೆಗಳು, ಮನುಷ್ಯನ ಸ್ಥಿತಿಸ್ಥಾಪಕತ್ವಗಳನ್ನು ವಸ್ತು, ಪಾತ್ರಗಳ ಮೂಲಕ ಅಭಿವ್ಯಕ್ತಿಗೊಂಡಿರುತ್ತದೆ. ಈ ಸೂಕ್ಷ್ಮ ಗ್ರಹಿಕೆಯಿಂದ ಕಟ್ಟಿಕೊಂಡ ತಾತ್ವಿಕತೆಯ ಮೂಲಕ ಅತ್ಯುನ್ನತ ಮನ್ನಣೆಗೆ ಪಾತ್ರರಾದ ಕೆಲವೇ ಕೆಲವು ಕನ್ನಡ ಕವಿಗಳ ಪಟ್ಟಿಯಲ್ಲಿ ಮೊದಲಿಗ ಆದಿಕವಿ ಪಂಪ.

ಎಷ್ಟೋ ಶತಮಾನಗಳ ಹಿಂದಿನ ಕಾವ್ಯಗಳನ್ನು ಇಂದು ಓದುವುದಕ್ಕೆ ಓದುಗನಿಗೆ ತನ್ನದೇ ಆದ ಕಾರಣಗಳು ಇರುತ್ತವೆ. ಕಾಲ ಬದಲಾಗಿದೆಯೇ ಹೊರತು ಮನುಕುಲದಲ್ಲಿನ ಮೂಲ‌ಭಾವಗಳಾದ ಕಾಮ, ಕ್ರೌರ್ಯ, ಮಾತ್ಸರ್ಯ, ಅಪನಂಬಿಕೆ, ನಂಬಿಕೆ, ಪ್ರೀತಿ, ಸ್ನೇಹ, ಔದಾರ್ಯಗಳಂತಹಾ ಗುಣಗಳು ನಿರಂತರವಾಗಿ ಹರಿಯುತ್ತಲೇ ಇದೆ. ಕೆಲವೊಮ್ಮೆ ಆ ಹರಿಯುವಿಕೆಯ ಯಾವುದೋ ಒಂದು ಅಲೆ ಓದುಗನಿಗೆ ಕಾವ್ಯದಲ್ಲಿರುವುದು ತನ್ನ ಬದುಕಿನ ಭಾವದೊಂದಿಗೆ ಘರ್ಷಿಸಿದೊಡನೆ, ತಾಕಿದೊಡನೆ ದೊಡ್ಡ ಸಾಯುಜ್ಯ ಸಂಬಂಧವನ್ನು ಸ್ಥಾಪಿಸಿಕೊಂಡು ಆ ಭಾವಗಳು ಹರಿಯಲು ಆರಂಭ ಮಾಡಿಬಿಡುತ್ತವೆ. ಈ ಸಂಬಂಧ ಸ್ಥಾಪಿಸಿಕೊಳ್ಳುವುದೇ ಕವಿಯೊಬ್ಬ ಸಮಕಾಲೀನಗೊಳ್ಳುವ ಸ್ಥಿತಿ. ಕೆಲವು ಸದ್ಯದ ಕವಿಗಳ ಕಾವ್ಯಗಳೂ ಸದ್ಯದ ಓದುಗರಿಂದ ದೂರವಾಗಲು ಈ ಹರಿವ ಬದುಕ ನದಿಯೊಡನೆ ಸಂಬಂಧ ಸಾಧಿಸಲು ಭಾಷೆಯ ಮೂಲಕ ಸಾಧ್ಯವಾಗದಿರುವುದೇ ಕಾರಣ. ಕೆಲವೊಮ್ಮೆ ಸದ್ಯದ ಓದುಗರೊಳಗಿನ ವ್ಯಕ್ತಿನಿಷ್ಟ ಪೂರ್ವಗ್ರಹಿಕೆಗಳು ಕಲಾಕೃತಿಯೊಂದನ್ನು ಇತ್ಯಾತ್ಮಕ ಅಥವಾ ನೇತ್ಯಾತ್ಮಕ ದುಡುಕಿ ನಿರ್ಧಾರ ಕೊಡುವಂತೆ ಮಾಡಿಬಿಡುತ್ತವೆ. ಈ‌ ದುಡುಕಿನಿಂದ ಬಿಡುಗಡೆಗೆ ಬಹುದೊಡ್ಡ ಮೌನದ ಅಗತ್ಯವಂತೂ ಓದುಗನಿಗೆ ಇದ್ದೇ ಇದೆ. 

ಕಾವ್ಯಕೃತಿಯೊಂದನ್ನು ಬಿಡಿಸಿ – ಕೂಡಿಸಿ ಓದುವ ಕ್ರಮಗಳನ್ನು ಕವಿಯೇ ಕೆಲವೊಮ್ಮೆ ಸ್ಪಷ್ಟಪಡಿಸಿಕೊಂಡು ಛಂದಸ್ಸಿನ ಮೂಲಕ ತಂದಿದ್ದರೂ ಅದನ್ನು ಮೀರುವ ತುರ್ತು ಕಾಲಾನಂತರದ ಓದುಗರಿಗೆ ಮತ್ತು ಕವಿಯ ಕಾಲದೊಳಗಿನ ಓದುಗರಿಗೂ ಇರುತ್ತವೆ. ಆ ಓದುಗನ ಓದಿನ ಕ್ರಮದೊಳಗೆ ಮೂಗು ತೂರಿಸುವ ಹಕ್ಕು ಕವಿಗೂ ಇಲ್ಲ. ವಸ್ತುವೊಂದನ್ನು ಕೆಲವು ತನ್ನದೇ ಪರಿಕರಗಳ ಮೂಲಕ ಕಲಾಕೃತಿಯಾಗಿ ಮಾರ್ಪಡಿಸಿದ ಅನಂತರ ಆ ಪರಿಕರಗಳ ಉಪೋತ್ಪನ್ನವಾದ ಕಾವ್ಯಕ್ಕೂ ತನಗೂ ಸಂಬಂಧವಿಲ್ಲ, ತನ್ನದಲ್ಲವೇ ಅಲ್ಲ ಎಂದು ನಿಂತಿರುವುದಕ್ಕೆ ಸಾಕ್ಷಿಗಳು ಹಿಂದಿನ ಕವಿಗಳಿಂದ ದೊರೆಯುತ್ತವೆ. ನುರಿತ ಓದುಗನೊಬ್ಬ ಕೃತಿಯನ್ನು,‌ ಕೃತಿ ಕಟ್ಟಿಕೊಟ್ಟಿರುವ ತಾತ್ವಿಕತೆಯನ್ನು, ಭಾಷೆಯ ಮೂಲಕ ಹೊರಹೊಮ್ಮಿಸಿರಬಹುದಾದ ಧ್ವನಿತರಂಗಗಳನ್ನು ಕೃತಿಯ ಸೂಕ್ಷ್ಮಸ್ತರಗಳನ್ನು ಮುಟ್ಟಿ ಶೋಧಿಸುವ ನಿಕಟ ಓದಿನ ಮೂಲಕ ಕೃತಿಯನ್ನು ತನ್ನ ಕಾಲ ಮತ್ತು ಸ್ಥಳದಲ್ಲಿ ಪುನರ್ನಿರ್ಮಾಣ ಮಾಡಿಕೊಳ್ಳುತ್ತಾನೆ. ಹೀಗೆ ಮಾಡಲು ಕಾವ್ಯವೇ ಕೇಂದ್ರವಾಗಿರುತ್ತದೆಯೇ ಹೊರತು ಅದರ ಸುತ್ತ ಹೆಣೆಯುವ ಕಥೆಯಲ್ಲ. ಕಲಾಕೃತಿಯೊಂದನ್ನು ಸದ್ಯದ ಸಾಂಸ್ಕೃತಿಕ ಸಂದರ್ಭದ ಕೇಂದ್ರದಲ್ಲಿ ನಿಲ್ಲಿಸುವ ಮತ್ತು ಅಪವ್ಯಾಖ್ಯಾನಗೊಳಿಸಿ ಸದ್ಯದ ಸಂದರ್ಭದಲ್ಲಿ ಅಮುಖ್ಯಗೊಳಿಸಿ ಅಂಚಿಗೆ ಸರಿಸಿಬಿಡುವ ಅಪಾಯಗಳು ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತವೆ. ಈ ಸಮಸ್ಯೆಯಿಂದ ಯಾವ ಕವಿಯೂ ತಪ್ಪಿಸಿಕೊಂಡು ಓಡಲಾರ.

“ಆನಂದ”ಕ್ಕಾಗಿ ಓದುವುದು ಸಹಾ ಮುಖ್ಯ ಕಾರಣಗಳಲ್ಲಿ ಒಂದು. ಮೀಮಾಂಸಕರು ಪ್ರತಿಪಾದಿಸಿರುವ ತತ್ವಗಳ ಅಡಿಯಲ್ಲಿ ಕಾವ್ಯದ ಓದು ಏನನ್ನು ಕೊಡುತ್ತದೆ ಎನ್ನುವುದನ್ನು ಹೇಳಿದ್ದಾರೆ. ಆಧುನಿಕ ವಿಮರ್ಶಕರೂ ತಮ್ಮದೇ ಆದ ತತ್ವ, ಸಿತಗಳ ಅಡಿಯಲ್ಲಿ ಕಾವ್ಯ ಮತ್ತದರ ರಚನೆಯ ಕಾರಣ ಮತ್ತು ಪರಿಣಾಮಗಳನ್ನು ಅರಿಯುವುದನ್ನು ತೋರಿಸಿಕೊಟ್ಟಿದ್ದಾರೆ. ಓದುಗನೊಬ್ಬ ಮಾಡಬೇಕಾದ ಪ್ರಮುಖ ಕೆಲಸವೆಂದರೆ ಪೂರ್ವನಿಯೋಜಿತ ಕಲ್ಪನೆಗಳಿಂದ ಹೊರಬರುವುದು. ಈ ಅಪಾಯಗಳು ಸಾಕಷ್ಟುಬಾರಿ ಕಾವ್ಯ, ಕಾಲ ಮತ್ತು ದೇಶದ ಆಕಾರಕ್ಕೆ, ಲೋಕಾಕಾರ ಕಥನ ಕ್ರಮವನ್ನು ಅರ್ಥೈಸಿಕೊಳ್ಳುವ ಪ್ರಜ್ಞೆಗೆ ಅಪಾಯವನ್ನು ತಂದುಬಿಡತ್ತವೆ. ಈ ಪೂರ್ವನಿಯೋಜಿನ ಅಂಶಗಳನ್ನು ಮೀರಿಕೊಳ್ಳುವುದು ಇಂದಿಗಂತೂ ಅಗತ್ಯವಿದೆ.

ಓದು ಎನ್ನುವ ಪ್ರಕ್ರಿಯೆ ಐದು ಅಂಶಗಳನ್ನು ಹೊಂದಿವೆ. ಈ ಪ್ರಕ್ರಿಯೆ ಒಂದರಿಂದ ಮತ್ತೊಂದಕ್ಕೆ ಬೆಳವಣಿಗೆಯ ಹಂತದಲ್ಲಿದೆ. ಕಾವ್ಯದಿಂದ, ಅದು ಹೊರಸೂಸುವ ಅರ್ಥದಿಂದ, ಏನೋ ಬದಲಾಗುತ್ತದೆ ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದನ್ನು ಬಿಡುವುದು. ಕಾವ್ಯದ ಹೊಸ ಓದಿಗೆ ಹಾದಿ ಮಾಡುವುದು ಎನ್ನುವುದನ್ನು ಕಲಿಯುವುದು. ಕಾವ್ಯವೇ ತನ್ನ ಪರಿಣಾಮದಲ್ಲಿ ಒಗ್ಗೂಡಿಸಿ ಕಟ್ಟಿಕೊಡುವ ಓದುಗನ ಬದುಕಿನಲ್ಲಿ ಘಟಿಸಿದ ನೆನಪುಗಳ ಸುರುಳಿಗೆ ತಾಕಿ ಅವುಗಳನ್ನು ಮೇಲಕ್ಕೆ ತಂದು ಭೂತ ವರ್ತಮಾನಗಳಿಗೆ ಮುಖಾಮುಖಿಯಾಗಿಸುವುದು ಮತ್ತು ಆ ನೆನಪುಗಳನ್ನು ಮರುರಚನೆ, ಮರುವಿನ್ಯಾಸ ಮಾಡಿಕೊಳ್ಳುವುದು. ಕೊನೆಯದಾಗಿ ಕಾವ್ಯದ ಓದಿನಿಂದ ದೊರೆವ ತೃಪ್ತಿ. ಈ ಕ್ರಿಯೆಗಳು ನಿರಂತರವಾಗಿ ನಡೆಯುತ್ತ ಹೋದರೆ ಕಾವ್ಯದ ಓದು ಆನಂದಕ್ಕಾಗಿ ಆಗುತ್ತದೆ. ಪೂರ್ವನಿಯೋಜಿತ ಕಲ್ಪನೆಗಳ ಆಚೆಗೆ ಕವಿಯನ್ನು ಕಾಣುವುದು, ಕಾವ್ಯದ ಮೂಲಕ ಕಂಡರಿಸುವುದು ಬಹುಮುಖ್ಯವಾದ ಇಂದಿನ ತುರ್ತಾಗಿದೆ. ಕವಿಗೆ ಕಟ್ಟಿದ ಹಣೆಪಟ್ಟಿಯನ್ನು ಕಳಚುವುದರ ಜೊತೆಗೆ ನಮಗೇ ನಾವು ಕಟ್ಟಿಕೊಂಡ ಪಟ್ಟಿಯನ್ನು ಕಳಚಬೇಕಾದ ತುರ್ತು ಇಂದಿಗಿದೆ.

ಈ ಅನುಭವಗಳ ಸುರಳಿ ಬಿಚ್ಚಲು ಭಾಷೆಯೆನ್ನುವುದು ಬಹುದೊಡ್ಡ ಮಾಧ್ಯಮ. ಜನಸಾಮಾನ್ಯರ ಭಾಷೆ ಮತ್ತು ಕಾವ್ಯಭಾಷೆ ಎನ್ನುವುದರ ಅಂತರ ಇಂದಿಗಿಲ್ಲ. ಕವಿಯೊಬ್ಬನ ಕಾವ್ಯಭಾಷೆ ಹೇಗೆ ಸಾಮಾನ್ಯ ಭಾಷೆಗೆ ಹತ್ತಿರ ಬಂದು ಅಪೇಕ್ಷಿತ ಪರಿಣಾಮವನ್ನು ಉಂಟುಮಾಡಿ ಹೇಗೆ ಯಶಸ್ವಿಯಾಗಬಹುದು ಎನ್ನುವುದನ್ನು ಒಂದು ಉದಾಹರಣೆಯ ಮೂಲಕ ನೋಡಬಹುದು. ಛಂದೋನಿಯಮಗಳಿಗೆ ಒಳಪಟ್ಟು ರಚನೆಯಾದ ಕಾವ್ಯಗಳ ರಚನೆಯನ್ನು ಬಿಡಿಸುವ ಕ್ರಮ ಹೊಸದೇನಲ್ಲ. ಕೆಲವೊಮ್ಮೆ ಬಿಡಿಸುವ ಕ್ರಮಗಳು ಬಹುದೊಡ್ಡ ಅಪಾಯಗಳನ್ನು ಹಾಗು ಅದರೊಂದಿಗೇ ಅಪಾರವಾದ ಅರ್ಥ ಸಾಧ್ಯತೆಗಳನ್ನೂ ತೋರಿಸಿಬಿಡುತ್ತದೆ. ಪಠ್ಯವೊಂದ ಓದು  ಎನ್ನುವುದೇ ಭಾಷೆಯೊಂದಿಗಿನ ಒಂದು ಲೀಲೆ. ಪ್ರತಿಯೊಂದು ಬಾರಿಯ ಕಾವ್ಯದೊಂದಿಗಿನ ಮುಖಾಮುಖಿಯ ಓದೂ ಒಂದು ಲೀಲೆಯೇ ಅಗಿರುತ್ತದೆ. ಅದು ನಿರಂತರವಾದದ್ದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವಂತಹದ್ದು. ಈ ಬದಲಾಗುವಿಕೆ ಮತ್ತು ವ್ಯತ್ಯಸ್ಥಿತವಾಗುವಿಕೆಯ ಗುರುತಿಸುವಿಯೇ ಕವಿ, ಕಾವ್ಯ ಮತ್ತು ಓದುಗನ ಜೀವಂತಿಕೆಗೆ ಸಾಕ್ಷಿಯಾಗುತ್ತದೆ. ಆ ಹಂತದ ಓದಿನ ಒಂದು ಕ್ರಮವನ್ನು ಮತ್ತು‌ ಬಹುಮುಖ ಓದಿನ ಸಾಧ್ಯತೆಯನ್ನು ಒಂದು ವೃತ್ತದ ಮೂಲಕ ಉದಾಹರಣೆಯಾಗಿ ಕೊಡುತ್ತೇನೆ. ವೃತ್ತದ ಕೊನೆಯ ನಾಲಕ್ಕು ಪದಗಳನ್ನು ಸ್ಥಾನಪಲ್ಲಟ ಮಾಡುವುದರಿಂದ ಕಾವ್ಯವು ಕಟ್ಟಿಕೊಡುತ್ತಿರುವ ಭಾವ, ಅದು ಕವಿಯ ಮೇಲೆ ಬೀರಿರುವ ಪರಿಣಾಮ ಮತ್ತು ಬಿಡದ ಹಾಗೆ ಆ ನೆಲ ಅವನ ಮೇಲೆ ಬಂಧ ಬೆಸೆದಿರುವುದನ್ನು ತಿಳಿಯಲು ಸಹಕಾರಿಯಾಗುತ್ತದೆ. ಭಾಷೆಯೆನ್ನುವುದನ್ನು ಪ್ರತಿಭಾಶಾಲಿಯಾದ ಕವಿಯೊಬ್ಬ ಬಳಸಿರುವ ಕ್ರಮವು ತಿಳಿಯುತ್ತದೆ.

ಕಾವ್ಯದಿಂದ ಆಗುವ ಎರಡು ಕಾರ್ಯಗಳು ನನಗೆ ಬಹಳ ಮುಖ್ಯವಾದವು. ಪ್ರತಿಯೊಬ್ಬ ಓದುಗನಿಗೂ ತನ್ನದೇ ಅನುಭವ ಪ್ರಪಂಚವಿರುತ್ತದೆ. ಹುಟ್ಟಿದಾಗಿನಿಂದ ಒಳ ಹೊರ ಬದಲಾವಣೆಗಳನ್ನು ಗುರುತಿಸಿ ಅರ್ಥೈಸಿಕೊಳ್ಳಲು ಕಲಿಯುವುದರಿಂದ ಈ ಪ್ರಪಂಚ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಆ ಅನುಭವ ಪ್ರಪಂಚವು ಚದುರಿರುತ್ತವೆ. ಕಾವ್ಯದ ಓದು ಆ‌ ಚದುರಿರುವ ಅನುಭವಗಳನ್ನು ಒಂದುಗೂಡಿಸಿ ಕಲಾಕೃತಿಯನ್ನು ಉಪಾದಿ ಮಾಡಿಕೊಂಡು ಅನುಭವಗಳನ್ನು ಜೋಡಿಸುತ್ತದೆ ಮತ್ತು ಅನುಭವಗಳನ್ನು ವ್ಯವಸ್ಥಿತಗೊಳಿಸುತ್ತದೆ. ಮತ್ತೊಂದು ಅನುಭವಗಳು ಒಂದುಗೂಡಿರುತ್ತವೆ, ವ್ಯವಸ್ಥಿತವಾಗಿರುತ್ತವೆ. ತಕ್ಷಣದ ಬದುಕಿಗೆ ಬೇಕಾದ ಭಾವ, ಅನುಭವಗಳನ್ನು ಕಾವ್ಯದ ಓದು ಮುನ್ನೆಲೆಗೆ ತಂದು ನಿಲ್ಲಿಸಿ, ಆಯಾ ಸಮಾಜ ಒಪ್ಪಿತ,‌ ಅಪೇಕ್ಷಿತ, ತುರ್ತಿಗೆ ಭಾವದ ಉತ್ಪಾದನೆ ಮಾಡಿ ಓದುಗ ತನ್ನ ಬದುಕಿನ ಬಗೆಗೆ, ತನ್ನ ಲೋಕಾಕಾರ ಕಥನದ ಬಗೆಗೆ ಮಾತನಾಡಿಸಿಕೊಳ್ಳುವ ಹಾಗೆ ತನ್ನ ಕಾಲದ್ದಲ್ಲದ ಕಾವ್ಯವೊಂದು ಹಾದಿಮಾಡಿಕೊಡುತ್ತದೆ. ಒಂದೊಳ್ಳೆಯ ಕಲಾಕೃತಿ ಓದಿಗನೊಳಗೆ ಈ ಎರಡು ಕಾರ್ಯಗಳನ್ನೂ ಏಕಕಾಲದಲ್ಲಿ ಸಾಧ್ಯವಾಗಿಸಿದರೆ ಸಾರ್ಥಕ್ಯ ಪಡೆದಂತೆ.

ಕಾವ್ಯವೊಂದು ಓದುಗನ ಮೇಲೆ ಬೀರುವ ಪರಿಣಾಮವನ್ನು ಗಮನಿಸುವುದು-ಗುರುತಿಸುವುದು, ಕಾವ್ಯವನ್ನು ಕೂಡಿಸಿ ಓದಿದಷ್ಟೇ ಬಿಡಿಸಿ ಓದಿಕೊಳ್ಳುವುದರಿಂದ ಮೇಲಿನ ಕಾರ್ಯಗಳು ಸಾಧ್ಯವಾಗುತ್ತದೆ. ಇವಷ್ಟೇ ಅಲ್ಲದೆ ಕಾವ್ಯವೇ ತನ್ನೊಡಲಿನಲ್ಲಿ ಅಗಣಿತವಾದ ಸಾಧ್ಯತೆಗಳ ಕೀಲಿಕೈಗಳನ್ನು ಅಡಗಿಸಿ ಇಟ್ಟುಕೊಂಡಿರುತ್ತದೆ. ಒಮ್ಮೆ ಓದಿದ ಅನಂತರವೂ ಮತ್ತೊಮ್ಮೆ ಹೊಸ ಪಠ್ಯವಾಗಿ ಮುಖಾಮುಖಿಯಾದರೆ ಕಾವ್ಯದ ಒಳಹೋಗುವ ಮತ್ತೊಂದು ಬಾಗಿಲ ಕೀಲಿ ಕೈ ಕಾವ್ಯವೇ ಕೊಡುತ್ತದೆ.

ಈ ಅಗಣಿತ ಸಾಧ್ಯತೆಗಳ ಕಡೆಗೆ ಮುಖಾಮುಖಿಯಾಗುವಾಗಲೂ ಕಾಲ, ದೇಶ ಮತ್ತು ಓದುಗನ ಮನಸ್ಥಿತಿ ಬಹಳ ಮುಖ್ಯವಾದದ್ದು. ಒಂದೊಂದೂ ಕಾವ್ಯದ ಮೂಲಕ ಬೀರುವ ಪರಿಣಾಮ ಮತ್ತು ತನ್ನೊಳಗೆ ಮಾಡಿದ ಬದಲಾವಣೆಯನ್ನು ಗಮನಿಸುವುದು ಓದುಗನ ಪ್ರಮುಖವಾದ ಕೆಲಸ. ಈ ಕೆಲಸದ ಅಡಿಯಲ್ಲಿಯೇ ಒಂದಷ್ಟು ಜಾಗೃತವಾಗಿದ್ದು ಕವಿಯ ಉದ್ದೇಶವೇನು ? ಏಕೆ ಹಾಗೆ ಬರೆದ ? ಏಕೆ ಅಂತಹದ್ದೇ ವಾಕ್ಯರಚನೆ ಅವನಿಂದ ಸಾಧ್ಯವಾಗಿದೆ ? ಹಾಗೆ ವಾಕ್ಯರಚನೆಯಾಗಿಲ್ಲದೆ ಬೇರೊಂದು ರೀತಿಯಲ್ಲಿ ವಾಕ್ಯರಚನೆಯಾಗಿದ್ದರೆ ಪ್ರಕೃತ ಭಾಗದಲ್ಲಿ ಒಡಮೂಡಿರುವ ಭಾವ, ಕಟೆದು ನಿಲ್ಲಿಸಿರುವ ವಸ್ತು ಮತ್ತು ಅವುಗಳು ಏಕತ್ರಗೊಂಡು ಉದಿಸಿದ ಅರ್ಥ, ಉಂಟುಮಾಡುತ್ತಿರುವ ಪರಿಣಾಮ ಎಂತಹುದಾಗಬಹುದು ? ಎನ್ನುವ ಪ್ರಶ್ನೆಗಳನ್ನು ಓದಿನ ನಂತರ ಕೇಳಿಕೊಂಡು ಮತ್ತೊಮ್ಮೆ ಪಠ್ಯಕ್ಕೆ ಮುಖಾಮುಖಿಯಾಗುವುದು ಹೊಸ ಹೊಸ ಅರ್ಥಗಳ ಕೀಲಿ ಕೈ ದೊರಕಿಸಿಕೊಳ್ಳುವ ಮತ್ತು ಕಾವ್ಯವನ್ನು ಜೀವಂತವಾಗಿ ಇಡುವ ಕ್ರಿಯೆ.

ಕಾವ್ಯ ಅಗಣಿತ ಅರ್ಥಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿದೆ ಎನ್ನುವುದನ್ನು ನಂಬುವುದೇ ಆದರೆ, ಪ್ರತೀ ಓದು ಪಠ್ಯವನ್ನು ಪುನರ್ ಸೃಷ್ಟಿಸಿಕೊಳ್ಳುವ ಕಾರ್ಯ ಓದುಗನದು. ಆ ಮೂಲಕ ಕಾವ್ಯದ ಪರಿಣಾಮ ಮತ್ತು ತೀವ್ರತೆಯನ್ನು ಉತ್ಪಾದಿಸುತ್ತ ಕಾವ್ಯವನ್ನು ಜೀವಂತವಾಗಿ ಇರುವ ಕಾರ್ಯ ಓದುಗನದೇ ಆಗಿರುತ್ತದೆ. ಇದು ನಿಜವಾದ ಅರ್ಥದಲ್ಲಿ “ಅಪ್ಡೇಟ್” ಪ್ರಕ್ರಿಯೆ. ಕೇವಲ ಕೃತಿಯೊಂದು ಬಿಡುಗಡೆಯಾದ ತತಕ್ಷಣ ಕೊಳ್ಳುವುದು, ಎಲ್ಲವನ್ನೂ ಓದುವುದು, ಎಲ್ಲದಕ್ಕೂ ಸ್ಪಂದಿಸುತ್ತಲೇ ಇರುವುದು ಜೀವಂತಿಕೆ ಎನಿಸುವುದಿಲ್ಲ ಮತ್ತದನ್ನು “ಅಪ್ಡೇಟ್” ಎನ್ನುವುದಾದರೆ ಅದನ್ನು ನಾನು ಖಂಡಿತವಾಗಿ ಒಪ್ಪಲಾರೆ.

ಓದು ೦೧

ತೆಂಕಣ ಗಾಳಿ ಸೋಂಕಿದೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ

ಒಳ್ನುಡಿಗೇಳ್ದೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ

ಇಂಪನಾಳ್ದಗೇಯಂ ಕಿವಿವೊಕ್ಕೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ

ಬಿರಿದ ಮಲ್ಲಿಗೆಗಂಡೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ

ಆದಕೆಂದಲಂಪಂ ಎಡೆಗೊಂಡೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ

ಮಧುಮಹೋತ್ಸವಮಾದೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

ಏನೆಂಬೆ ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ

ಓದು ೦೨

ನೆನೆವುದೆನ್ನ ಮನಂ ವನವಾಸಿದೇಶಮಂ

ತೆಂಕಣ ಗಾಳಿ ಸೋಂಕಿದೊಡಂ

ಒಳ್ನುಡಿಗೇಳ್ದೊಡಂ

ಇಂಪನಾಳ್ದಗೇಯಂ ಕಿವಿವೊಕ್ಕೊಡಂ

ಬಿರಿದ ಮಲ್ಲಿಗೆಗಂಡೊಡಂ

ಆದಕೆಂದಲಂಪಂ ಎಡೆಗೊಂಡೊಡಂ

ಮಧುಮಹೋತ್ಸವಮಾದೊಡಂ

ಏನೆಂಬೆ ಆರಂಕುಸಮಿಟ್ಟೊಡಂ

ಓದು ೦೩

ತೆಂಕಣ ಗಾಳಿ ಸೋಂಕಿದೊಡಂ

ಒಳ್ನುಡಿಗೇಳ್ದೊಡಂ

ಇಂಪನಾಳ್ದಗೇಯಂ ಕಿವಿವೊಕ್ಕೊಡಂ

ನೆನೆವುದೆನ್ನ ಮನಂ ವನವಾಸಿದೇಶಮಂ

ಬಿರಿದ ಮಲ್ಲಿಗೆಗಂಡೊಡಂ

ಆದಕೆಂದಲಂಪಂ ಎಡೆಗೊಂಡೊಡಂ

ಮಧುಮಹೋತ್ಸವಮಾದೊಡಂ

ನೆನೆವುದೆನ್ನ ಮನಂ ವನವಾಸಿದೇಶಮಂ

ಏನೆಂಬೆ ಆರಂಕುಸಮಿಟ್ಟೊಡಂ

ನೆನೆವುದೆನ್ನ ಮನಂ ವನವಾಸಿದೇಶಮಂ

ಈ ಪದ್ಯವು ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ಮತ್ತೊಂದು ಓದಿನ ಸಾಧ್ಯತೆಯನ್ನು ಗಮನಿಸಿ. ಪದ್ಯದಲ್ಲಿ‌ನ ಎರಡು ಮುಖ್ಯ ಪದಗಳನ್ನು ಕೇಂದ್ರದಲ್ಲಿಟ್ಟು ನೋಡಬಹುದು. ಒಂದು “ಟಾಠಡಾಢಣಂ” ಮತ್ತೊಂದು “ಮಧು ಮಹೋತ್ಸವ” ಪದಗಳ ಮೇಲೆ ಒತ್ತು ಬಿದ್ದಾಗ ತೆಗೆಯುವ ಅರ್ಥದ ಬಾಗಿಲನ್ನು ಕಾಣಬಹುದಾಗಿದೆ.

ಎನ್ನ ನುಡಿ ಟಾಠಡಾಢಣಂ

ನಾರದರ ಬೋಧನೆಯಂತೆ ಪಾಂಡವರು ರಾಜಸೂಯಯಾಗ  ಮಾಡಬೇಕೆಂಬ ಸಮಯದಲ್ಲಿ ಕೃಷ್ಣನು ಯಾಗ ಮಾಡುವುದು‌ ಸಾಧ್ಯವೇ ಎಂದು ಕೆಣಕಿದೊಡನೆ, ಕೃಷ್ಣನ ನಿರ್ಧಾರದ ಬಗೆಗೆ ಭೀಮನು ಆಡುವ ಪ್ರಖ್ಯಾತ ಶಪಥ ಮಾತುಗಳನ್ನೊಮ್ಮೆ ಗಮನಿಸಿ

ಪನ್ನತರ ನಡುವನುಡಿಯ

ಲ್ಕೆನ್ನ ಭುಜಾರ್ಗಳಮೆ ಸಾಲ್ಗುಮೊಸೆ ಮೇಣ್ ಮುನಿ ಮೇ

ಣೆನ್ನ ನುಡಿ ಟಾಠಡಾಢಣ

ಮೆನ್ನ ಬೆಸಸುವುದು ರಾಜಸೂಯಂಬೀಳಲ್

ಈ ಪದ್ಯದಲ್ಲಿನ “ಟಾಠಡಾಢಣಂ” ಎಂಬ ಪದವೇ ಪರಿಣಾಮಕಾರಿ ಭೀಮನ‌ ಅಷ್ಟೂ ಉದ್ದೇಶವನ್ನೇ ತಿಳಿಸುತ್ತಿದೆ. ಇಲ್ಲಿ ಪಾತ್ರದ ಮೂಲಕ ಮೂರ್ಧಾನ್ಯಾಕ್ಷರಗಳನ್ನು ಆಡಿಸಿ ಪಂಪ ತರುವ ಉದ್ದೇಶ, ಪರಿಣಾಮ ಮತ್ತು ಮುಂದಿನ ನಡೆಗಳು ಎಲ್ಲ ಕಾಲದಲ್ಲಿಯೂ ಕಾಡಿದೆ.

ಇಲ್ಲಿನ ಮೂರ್ಧನ್ಯಾಕ್ಷರ ಗಣದ ಕೊನೆಯಲ್ಲಿನ “ಡಂ” ಶಬ್ದವನ್ನೊಮ್ಮೆ ಆಲಿಸಿ ನೋಡಿ, ಅದರಂತೆಯೇ “ತೆಂಕಣಗಾಳಿ ಸೋಂಕಿದೊಡಮ್” ಎಂಬ ಪದ್ಯದಲ್ಲಿ ಒಟ್ಟೂ ಏಳು ಬಾರಿ ಡಮ್ ಎಂಬ ಪದ ಬರುತ್ತಿದೆ‌. ಇದರ ಮೂಲಕ ಪಂಪ ಸಾಧಿಸುವ ಪರಿಣಾಮ ಯಾವುದು ? ಹೇಗೆ ಭೀಮನ ಬಾಯಲ್ಲಿ ತನ್ನ ನಿರ್ಧಾರವನ್ನು ಸಂದರ್ಭಕ್ಕೆ ತಕ್ಕಂತೆ ಆಡಿಸಿ ಶಪಥ ಮಾಡಿಸಿದನೋ ಅಂತದ್ದೇ ಒಂದು ಶಪಥದ ಸಾಲಿದು‌ ಎನಿಸದೆ ಇರದು.

ಮಧುಮಹೋತ್ಸವಮಾದೊಡಂ

ಪ್ರಕೃತ ಪದ್ಯದಲ್ಲಿ ಮೇಲಿನ “ಮಧುಮಹೋತ್ಸವಮಾದೊಡಂ” ಪದವು ಬಂದಿರುವುದು ತಿಳಿದೇ ಇದೆ. ಈ ಪದವನ್ನು ಕುರಿತು ಮತ್ತೂ ಯೋಚಿಸಬೇಕಾದ ಅಗತ್ಯವಿದೆ. ಹಾಗೆ ಮಾಡಿದರೆ ಮತ್ತೊಂದು ಕ್ರಮದಲ್ಲಿ ಪರಿಣಾಮಕಾರಿ ಮರುರಚನಾ ಓದು ಸಹಾ ಈ ಪದ್ಯಕ್ಕಿದೆ ಎನಿಸಿದೆ.

“ಮಧು ಮಹೋತ್ಸವ” ಎಂಬ ಪದಕ್ಕೆ ಆಚಾರ್ಯರು ಹೇಳಿರುವ “ವಸಂತಕಾಲದ ಮಹೋತ್ಸವ” ಎಂಬ ಅರ್ಥವಷ್ಟೇ ಅಲ್ಲದೆ, ಇನ್ನೂ ನಾಲಕ್ಕು ಅರ್ಥಗಳಿವೆ.

ಮಧು ಮಹೋತ್ಸವ – ವಸಂತಮಾಸ

ಮಧು ಮಹೋತ್ಸವ – ಮದುವೆಯ ದಿನ

ಮಧು ಮಹೋತ್ಸವ – ಮದುವೆಯ ಮೊದಲ ರಾತ್ರಿ

ಮಧು ಮಹೋತ್ಸವ – ಜೇನು

ಮಧು ಮಹೋತ್ಸವ – ಮಾದಕ ಪಾನೀಯ

ಹೀಗೆ ಅರ್ಥಗಳು ಬರುವುದರಿಂದ ಕಾವ್ಯ ಭಾಗವನ್ನು ಮತ್ತೊಂದು ರೀತಿಯಿಂದ ( ಓದು ೦೪ ) ಬಿಡಿಸಬಹುದು

ತೆಂಕಣ ಗಾಳಿ ಸೋಂಕಿದೊಡಂ

ಒಳ್ನುಡಿಗೇಳ್ದೊಡಂ

ಇಂಪನಾಳ್ದ ಗೇಯಂ ಕಿವಿವೊಕ್ಕೊಡಂ

ಬಿರಿದ ಮಲ್ಲಿಗೆಗಂಡೊಡಂ

ಆದಕೆಂದಲಂಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಂ

ಮಧುಮಹೋತ್ಸವಮಾದೊಡಂ

ಮಧುಮಹೋತ್ಸವಮಾದೊಡಂ

ಮಧುಮಹೋತ್ಸವಮಾದೊಡಂ

ಮಧುಮಹೋತ್ಸವಮಾದೊಡಂ

ಏನೆಂಬೆ

ಆರಂಕುಸಮಿಟ್ಟೊಡಂ

ನೆನೆವುದೆನ್ನ ಮನಂ

ವನವಾಸಿದೇಶಮಂ

ಹೀಗೆ ಬಿಡಿಸಿ ಓದುವುದರ ಮೂಲಕ ಮೂಲ ಪಠ್ಯದ ಉದ್ದೇಶ ಮತ್ತು ಓದಿನಿಂದ ಉಂಟಾಗುವ ಪರಿಣಾಮ ತೀವ್ರವಾಗುತ್ತಾ ಬೇರೆ ಬೇರೆ ಅರ್ಥಚ್ಛಾಯೆಗಳನ್ನು ಪಠ್ಯವೇ ಕೊಡುತ್ತಾ ಕಾಲದಿಂದ ಕಾಲಕ್ಕೆ ಮುಂದೆ ಸಾಗುತ್ತದೆ. ಕಾರ್ಯ-ಕಾರಣ ಸಂಬಂಧದಲ್ಲಿಯೂ ಈ ಓದು ಯಶಸ್ವಿಯಾಗುತ್ತದೆ. ಓದುಗನೊಬ್ಬ ಕಾವ್ಯವೊಂದನ್ನು ತನ್ನ ಓದು ಮತ್ತು ಭಾಷೆಯ ಹಿನ್ನೆಲೆಯಲ್ಲಿ ಮರುರಾಚನಿಕ ವಿನ್ಯಾಸ ಮಾಡುವುದು ತನ್ನ ಅನುಭವಕ್ಕೆ ಕಾವ್ಯವನ್ನು ಹತ್ತಿರಮಾಡಿಕೊಳ್ಳುವುದಕ್ಕಾಗಿಯೇ ಹೊರತು ಮತ್ತಿನ್ನೇನಲ್ಲ. ಕವಿಯೊಬ್ಬ ಏಕೆ ದೊಡ್ಡವನಾಗುತ್ತಾನೆ ? ಮತ್ತು ಯಾವ ಯಾವ ಕಾರಣಗಳಿಂದ ದೊಡ್ಡವನಾಗುತ್ತಾನೆ ? ಈ ಪ್ರಶ್ನೆಗಳು ನನ್ನನ್ನು ಹಲವಾರು ಬಾರಿ ಕಾಡಿದೆ. ಅದೆಲ್ಲದಕ್ಕೂ ಉತ್ತರ ರೂಪಿಯಾಗಿ ತಕ್ಷಣ ಕಣ್ಣಿಗೆ ಕಾಣುವ ಪದ್ಯವಿದು. ಇದು ಸೃಜಿಸುವ ಮಾಂತ್ರಿಕತೆ, ಭಾಷೆಯ ಬಳಕೆಯಲ್ಲಿನ ಸೂಕ್ಷ್ಮತೆ ಹಿಡಿದು ನಿಲ್ಲಿಸಿಬಿಡುತ್ತದೆ. ಒಂದು ವೃತ್ತವನ್ನು ಸಂಪಾದನಾಕಾರರು ಹೇಗೆ ಕೊಟ್ಟಿರುವರೋ ಹಾಗೇ ಓದಿಕೊಳ್ಳುವುದು, ಬಿಡಿಸಿ ಓದಿಕೊಳ್ಳುವುದು ಮತ್ತು ಅದರ ಸಾಲುಗಳ ಸ್ಥಾನಪಲ್ಲಟಗೊಳಿಸಿ ಓದಿಕೊಳ್ಳುವುದು ಈ ಮೂರು ಓದಿನಿಂದ ಪದ್ಯಭಾಗದಲ್ಲಿರುವ ಭಾವದ ಪರಿಣಾಮವು ತೀವ್ರವಾಗುವುದು. ಹೀಗೆ ಮಾಡುವುದರಿಂದ ಪದ್ಯ ಭಾಗದ ಮೂಲ ಉದ್ದೇಶವು ಹೆಚ್ಚು ಉಜ್ವಲ ಮತ್ತು ಸ್ಪುಟವಾಗುವುದು ತಿಳಿಯುತ್ತದೆ. ಯಾವುದೋ ಕಾಲದಲ್ಲಿ ಬದುಕಿದವನಿಗೆ ಉಂಟಾಗಿರುವ ಭಾವವೊಂದನ್ನು ಮತ್ತಾವುದೋ ಕಾಲದಲ್ಲಿನ ಓದುಗನೊಬ್ಬನಿಗೆ ಹಸ್ತಾಂತರ ಮಾಡಿ, ಭಾವಸ್ಪುಟತ್ವ ಉಂಟುಮಾಡುವುದಕ್ಕಿಂತ ಕಾವ್ಯದಿಂದ ಬೇರೇನನ್ನು ಬಯಸುವುದಿದೆ. ಈ ಮೇಲಿನ ಪದ್ಯದ ಬಗೆಗೆ ಕೆಲವು ಹೊಸ ಹೊಳಹುಗಳು ಮತ್ತೊಂದು ಓದುವ ಕ್ರಮವನ್ನೊಮ್ಮೆ ಕೃತಿಯ ನಿಕಟ ಓದೇ ಸೃಷ್ಟಿಸಿಕೊಳ್ಳುವುದನ್ನು ಗಮನಿಸಿ.

************************************************************

Leave a Reply

Back To Top