ಲಂಕೇಶ್ ಜನ್ಮದಿನ ವಿಶೇಷ ಲೇಖನ
ಕಡಲ ಧ್ಯಾನದಲ್ಲಿ
ಪಿ. ಲಂಕೇಶ್ ಎಂದಾಕ್ಷಣ ಯಾಕೋ ಗೊತ್ತಿಲ್ಲ ನನಗೆ ಕಡಲು ನೆನಪಾಗುತ್ತದೆ. ನನಗೆ ಅವರು ಕಡಲಿಗೆ ರೂಪಕವಾಗಿ ಅವರ ಬದುಕೋ, ಅವರ ಓದು ಜ್ನ್ಯಾನವೊ ಸಾಹಿತ್ಯದ ಆಳ ಅರಿತವರೆಂದೋ..ಬದುಕಿನ ಬಗೆಗಿನ ಕಡು ಮೋಹಿ ಎಂದೋ… ಒಟ್ಟಿನಲ್ಲಿ ಕಡಲು ಕಣ್ಣ ಮುಂದೆ ತಂದುಕೊಡುವ ಕಡಲಂತ ಲಂಕೇಶರ ಬಗ್ಗೆ ಚಿಕ್ಕ ತೊರೆಯಂತ ನಾನೇನು ಬರೆಯಬಲ್ಲೆ ಎಂಬ ಅಂಜಿಕೆಯೊಂದಿಗೇ ನನ್ನ ನಾಲ್ಕು ಅನಿಸಿಕೆಗಳನ್ನು ದಾಖಲಿಸ ಬಯಸಿದ್ದೇನೆ.
ಲಂಕೇಶ್ ಪತ್ರಿಕೆಯ ಹುಚ್ಚ್ಹು ಹತ್ತಿಸಿದ್ದು ನಮ್ಮಪ್ಪ ಎಂದೇ ಹೇಳಬೇಕು.ಎಲ್ಲಾದರೂ ಸರಿ ವಾರಕ್ಕೊಮ್ಮೆ ಆ ಪತ್ರಿಕೆ ಕೈ ಸೇರಿಬಿಡಬೇಕು. ಅದನ್ನು ಅಂದೇ ಓದಿ ಮುಗಿಸಿಬಿಡಲೂ ಬೇಕು. ಅದು ಸಿಗದ ದಿನ ಬೇರೆ ಊರಿಗೆ ಹೋಗಿ ಪತ್ರಿಕೆ ತಂದು ಓದಿದ ಹುಚ್ಚ್ಹುತನವನ್ನು ಈಗಲೂ ಅಭಿಮಾನದಿಂದಲೇ ಹೇಳುತ್ತಾರೆ. ಇಂಥಾ ದಿನಗಳಲ್ಲಿ ಅದೂ ಕಾಲೇಜು ವಿಧ್ಯಾರ್ಥಿನಿಯಾಗಿದ್ದ ನನಗೆ ಒಂದು ರೀತಿಯ “ಅಮಲು” ತರಿಸಿತ್ತು ಎಂದರೆ ಅತಿಶಯೋಕ್ತಿಯೇನಲ್ಲ… ಬೇರೆ ಎಷ್ಟೊ ಪತ್ರಿಕೆಗಳು ಮನೆಗೆ ಬರುತ್ತಿದ್ದರೂ ಎಲ್ಲರ ಮೊದಲ ಆದ್ಯತೆ ಲಂಕೇಶ್ ಪತ್ರಿಕೆ.
ನನಗೆ ಅದರಲ್ಲಿ ಪ್ರಿಯವಾಗುತ್ತಿದ್ದುದು ’ನೀಲು’ ಪದ್ಯಗಳು…ಅವರು ತಮ್ಮ ಈ ಪುಟ್ಟ ನಾಲ್ಕು ಸಾಲುಗಳ ’ನೀಲು’ವಿನಲ್ಲಿ ಹೇಳದೇ ಉಳಿದಿದ್ದಾದರೂ ಏನು? ಅಂತ ಸೋಜಿಗ ನನಗೆ. ವಯೋ ಸಹಜವಾಗಿ ನೀಲು ಪ್ರೇಮದ ಸಾಲುಗಳಿದ್ದಾಗ ಪುಳಕಿತಳಾಗುತ್ತಿದ್ದೆ. ಅದು ನನ್ನದೇ ಹೃದಯದ ಮಾತು ಎನಿಸಿ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆ. ಆ ನಂತರ ಅದರಲ್ಲಿ ಬರುವ ವಿಡಂಬನೆ, ಹಾಸ್ಯ, ಪ್ರೀತಿ, ಕಾಮ-ಕಾಮನೆ, ಧಾರ್ಮಿಕ, ಆಧ್ಯಾತ್ಮಿಕ…ಅಬ್ಬಬ್ಬಾ ಏನೆಲ್ಲಾ ವಿಷಯಗಳು ಪುಟ್ಟ ನೀಲುವಿನ ನಿಲುವುಗಳಲ್ಲಿ…ಅತ್ಯಂತ ಕಡಿಮೆ ಸಾಲುಗಳಲ್ಲಿ ಅವರು ಹೇಳಬೇಕಾದ್ದನ್ನು ಹೇಳುವ ತಾಕತ್ತಿಗೆ ಮರುಳಾಗಿದ್ದೆ.
ತುಂಬಾ ನಿಷ್ಠುರವಾಗಿ ಬರೆಯುವ ಅವರ ಬರಹದಲ್ಲಿ ಪ್ರೀತಿ, ಮಾನವೀಯತೆ ಧ್ಯೇಯ ವಾಕ್ಯದಂತೆ ಎನಿಸುತಿತ್ತು. ನೀಲುವಿನಲ್ಲೂ ಅದು ಎದ್ದು ಕಾಣುತಿತ್ತು ಸಹಜವಾಗಿ.ನೀಲು ತುಂಟ ಹುಡುಗಿಯಂತೆ ಒಮ್ಮೊಮ್ಮೆ ತೋರಿದರೆ, ಒಮ್ಮೊಮ್ಮೆ ಅನುಭವದ ಮೂಟೆ… ಅದು ಲಂಕೇಶರೇ ಎಂದು ಬಹಳ ದಿನಗಳ ನಂತರ ತಿಳಿದಿದ್ದು.ಅದಕ್ಕೂ ಮುಂಚೆ ಈ ನೀಲು ಎಂಬ ಕಾವ್ಯಕನ್ನಿಕೆ ಹೇಗೆ ಇರಬಹುದು… ನೋಡಬೇಕಲ್ಲ ಅಂತೆಲ್ಲಾ ಅನಿಸುತ್ತಿತ್ತು.
ಲಂಕೇಶರನ್ನು ಆಳವಾಗಿ ಅಭ್ಯಾಸ ಮಾಡಿದವರಿಗೇ ಅವರು ದಕ್ಕಿಲ್ಲ … ಇನ್ನು ಮೇಲ್ಮೈ ನೋಡುವ ನನ್ನಂತವರಿಗೆ ಹೇಗೆ ದಕ್ಕಿಯಾರು? ಅವರು ಸಮಾಜದ ಸ್ವಾಸ್ಥ್ಯಕ್ಕೆ,ನ್ಯಾಯ ನೀತಿ ನಿಷ್ಠೆಗೆ,ರಾಜಕೀಯ ಸಾಮಾಜಿಕ ಕೊಳಕುತನದ ವಿಲಕ್ಷಣತೆಗಳಿಗೆ ತಮ್ಮ ಕಾವ್ಯದ ಅಥವಾ ಬರಹದ ಮೂಲಕ ಪ್ರಕಟಿಸುತ್ತದ್ದ ರೀತಿ ಅನನ್ಯವಾದುದು. ಅವರು ಅಂದಿಗೂ ಇಂದಿಗೂ ಪ್ರಸ್ತುತವೇ. ಶತಮಾನಕ್ಕೊಬ್ಬರು ಲಂಕೇಶರಂತವರು ಅಂಥಾ ದೈತ್ಯ ಪ್ರತಿಭೆ ಎಂದು ಕೇಳಲ್ಪಟ್ಟಿದ್ದೆ. ಅವರ ಬರಹಗಳನ್ನು ಓದುವಾಗ ಹಾಗೆ ಅನಿಸುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.
ಈ ಬರಹ ಬರೆಯುವಾಗ ನನಗೆ ಲಂಕೇಶರ ನೀಲುವಿನ ಈ ಪದ್ಯಗಳ ಮೂಲಕ ನೆನಪಾಗುತ್ತಿದ್ದಾರೆ.ಹಾಗೇ ತೆಗಿದಿಟ್ಟ ನೆನಪುಗಳ ತುಣುಕುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
’ನನ್ನ ಊರಿಗೆ ವಜ್ರ ವೈಡೂರ್ಯ ಸಂಪತ್ತನ್ನೆಲ್ಲಾ
ತರುತ್ತೇನೆ’ ಎಂದು ಪುಡಾರಿಯೊಬ್ಬ ಭಾಷಣದಲ್ಲಿ
ಕೂಗುತ್ತಿದ್ದಾಗ ಹಣ್ಣು ಹಣ್ಣು ಮುದುಕರೊಬ್ಬರು
“ಮಾನ?” ಎಂದು ಕೇಳಿ
ಉತ್ತರಕ್ಕಾಗಿ ಕಾದು ಕೂತರು…
ಈ ಸಾಲುಗಳಲ್ಲಿ ಇಂದಿನ ಬದುಕಿನ ವ್ಯವಸ್ಥೆಯ ರೀತಿಗೆ ಕನ್ನಡಿ ಹಿಡಿದಂತಿಲ್ಲವೇ? ಇದರಲ್ಲಿ ನಾನು ವಿವರಿಸಬೇಕಾದ್ದೇನೂ ಇಲ್ಲ…ಸೂಕ್ಷ್ಮಮನದ ಓದುಗರಿಗೆ ಈ ಸ್ಥಿತಿ ವೇದ್ಯವಾಗದೇ ಇರುತ್ತದೆಯೇ ? ಇದನ್ನು ಲಂಕೇಶರು ಬರೆದು ಬಹಳ ದಿನಗಳಾಗಿರಬಹುದು. ಅವರಿಗೆ ಅಂದು ಕಂಡ ಚಿತ್ರಣ ಈ ಸಾಲುಗಳನ್ನು ಬರೆಸಿರಬಹುದು. ಆದರೆ ಇಂದಿಗೂ ಆ ಪ್ರಶ್ನೆಗೆ ಉತ್ತರವೇ ಸಿಕ್ಕದೆ ನಾವುಗಳು ಕಾಯುತ್ತಲೇ ಕುಳಿತಿರುವಾಗ ಪರಿಸ್ಥಿತಿ ಅಂತಹ ಬದಲಾವಣೆಗಳನ್ನೇನೂ ಕಾಣದೆ ಹಾಗೆಯೇ ಇದೆ ಎನಿಸುವುದು ಎಂತಹ ವಿಪರ್ಯಾಸ ಅಲ್ಲವೇ… ? ಇದು ಒಂದು ಪುಟ್ಟ ಸ್ಯಾಂಪಲ್ಲು ಅಷ್ಟೆ.. ಸದಾ ನನ್ನನ್ನು ಇಂತಹಾ ಸಾಲುಗಳು ಕಾಡುವಾಗ ಲಂಕೇಶರೂ ಅವರ ಬರಹಗಳೂ ಸದಾ ಕಾಲ ಪ್ರಸ್ತುತವೇ ಸರಿ ಅನಿಸುತ್ತದೆ.
ಅವರೇ ಹೇಳಿದ ಇನ್ನೊಂದು ಪುಟ್ಟ”ನೀಲು”ವನ್ನು ನಿಮ್ಮ ಮುಂದೆ ಇಡುತ್ತಾ…
ಪ್ರಕೃತಿ ನಿಯಮಗಳ ಪ್ರಕಾರವೇ
ಬದುಕುವ ಶಪಥ ಮಾಡಬೇಡ
ಯಾಕೆಂದರೆ
ಮನುಷ್ಯ ಪ್ರಕೃತಿಗೆ ಅದು
ಪೂರ್ಣ ಹೊಂದುವುದಿಲ್ಲ..
ಮನುಷ್ಯನ ಸ್ವಭಾವವನ್ನು (ಪ್ರಕೃತಿ) ಇಷ್ಟು ಸರಳ ಸಾಲುಗಳಲ್ಲಿ ನೀಲುಗಲ್ಲದೆ ಇನ್ನಾರಿಗೆ ಹೇಳಲು ಸಾಧ್ಯ ಹೇಳಿ?
ಹಾಗೆಯೇ ಬದುಕಿನ ದುರಂತವನ್ನು ಅವರು ಕಟ್ಟಿಕೊಟ್ಟ ಸಾಲುಗಳಾದರೂ ಗಮನಿಸಿ…
ಕೆಲವನ್ನು ನೆನೆದು ನಕ್ಕು
ಕೆಲವನ್ನು ಕ್ಷಮಿಸಿ
ಕೆಲವು ಕ್ಷಣಗಳನ್ನು
ಉದಾರವಾಗಿ ಧ್ಯಾನಿಸಿ
ಕಸಿವಿಸಿಯಲ್ಲೇ ಬದುಕುವುದು
ಎಲ್ಲರ ದುರಂತ…
ಈ ಸಾಲುಗಳಿಗಂತೂ ನಾನು ಫಿದಾ ಆಗಿ ಹೋಗಿದ್ದೆ.
ಹೆಚ್ಚ್ಹು ಬರೆದರೆ ನಿಮಗೆ ಈ ನೀಲುವಿನ ರುಚಿ ತಪ್ಪೀತೆಂದು ಭಾವಿಸುತ್ತೇನೆ.ನೀವೇ ಹೇಳಿ ಈಗ ಈ ಸಾಲುಗಳ ಮೂಲಕ ಲಂಕೇಶರು ಸರ್ವಕಾಲಕ್ಕೂ ಸಲ್ಲುವವರೇ… ಅಲ್ಲವೇ? ಮನದಾಳದಲ್ಲೆಲ್ಲೋ ಹುದುಗಿದ್ದ ನೀಲುವನ್ನು ಇಂದು ಲಂಕೇಶರ ಜನ್ಮದಿನದಂದು ನೆನಪಿನ ನಿಲುವುಗನ್ನಡಿಯ ಮುಂದೆ ತಂದು ನಿಲ್ಲಿಸುವಂತೆ ಮಾಡಿದ್ದಕ್ಕೆ ಸಂಗಾತಿಗೆ ನನ್ನದೊಂದು ನಮನ.
*****************************
–ಮಮತಾಶಂಕರ್
ನಿಲುವಿನ ಕವಿತೆಗಳಿಗೆ ಎಲ್ಲರೂ ಮಾರು ಹೋದವರೇ.ಚೆಂದಕ್ಕೆ. ಬರೆದಿರುವಿರಿ.ಮಮತಾ
ಥ್ಯಾಂಕ್ಯೂ ಸ್ಮಿತಾ
ಅಪ್ತ ಬರಹ…ಮರೆಯಲಾಗದ ಮೇಷ್ಟ್ರು ಲಂಕೇಶ್
ಧನ್ಯವಾದಗಳು ಸರ್
ಅಭಿನಂದನೆಗಳು ಮೇಡಂ ಚಂದದ ಲೇಖನ
ಬರಹ ಸೊಗಸಾಗಿದೆ
ಧನ್ಯವಾದಗಳು ತಮಗೆ
ತುಂಬಾ ಚೆನ್ನಾಗಿದೆ ಮೇಡಂ
ಧನ್ಯವಾದಗಳು ಮೇಡಂ