ಕಬ್ಬಿಗರ ಅಬ್ಬಿ

ಮನಸ್ಸು ಕಟ್ಟಿದ ಕೇರಿ ಮತ್ತು

ಸಾಕ್ಷೀಪ್ರಜ್ಞೆ

Ghat Classic 200km Monsoon Brevet

ಆ ಸಾಯಂಕಾಲ ಪಶ್ಚಿಮ ಘಟ್ಟದ ಮೇಲ್ ಮೆಟ್ಟಿಲು ಗಳಲ್ಲಿ ಒಂದಾದ, ‘ಕೊಟ್ಟಿಗೆಹಾರ’ ದಿಂದ ಸೈಕಲ್ ತುಳಿಯುತ್ತಾ ಇಳಿದರೆ ಘಟ್ಟದ ಬುಡದಲ್ಲಿ ಧರ್ಮಸ್ಥಳ. ಪಶ್ಚಿಮದ ಅರಬ್ಬೀ ಸಮುದ್ರ ಅಲೆಯೆಬ್ಬಿಸಿ ಸೂರ್ಯಾಲಿಂಗನಕ್ಕೆ ತೋಳು ಚಾಚಿ ಕಾಯುತ್ತಿತ್ತು. ಅದು ಚಾರ್ಮಾಡಿ ಘಟ್ಟ. ಯಾವಾಗಲೂ ಹತ್ತುವ ರಸ್ತೆ ಎಂದೂ ಮುಗಿಯದ ಪಯಣದಂತಿದ್ದರೆ, ಇಳಿಯುವ ರಸ್ತೆ ಹಾಗಲ್ಲ. ಮೈಭಾರ ಹೆಚ್ಚಿದ್ದಷ್ಟು ಬೇಗ ಭಾರ ಇಳಿಸುವ ತವಕ ಅದಕ್ಕೆ.

ಅದೆಷ್ಟು ತಿರುವುಗಳೋ!. ಸೈಕಲ್ ಚಕ್ರಗಳು ಅಲೆಕ್ಸಾಂಡರ್ ನ ಕುದುರೆಯ ಹಾಗೆ ನಾಗಾಲೋಟ ಓಡಲು ಕಾರಣ, ಚಕ್ರವೂ ಅಲ್ಲ, ನನ್ನ ತುಳಿಸಾಮರ್ಥ್ಯವೂ ಅಲ್ಲ!. ಅದು ಭೂಮಿತಾಯಿಯ ಗುರುತ್ವಾಕರ್ಷಣ ಶಕ್ತಿ. ರಸ್ತೆಯಲ್ಲಿ ಇರುವ ತಿರುವುಗಳು ಹೆಂಗಳೆಯರು ಮುಂಗುರುಳಿಗೆ ಹಾಕುವ ಪಿನ್ ನಂತಹ (ಹೆಯರ್ ಪಿನ್ ) ತಿರುವುಗಳು. ಹೋಗುವ ದಿಶೆಯನ್ನು  ರಸ್ತೆ, ಒಮ್ಮಿಂದೊಮ್ಮೆಯೇ  ವಿರುದ್ಧ ದಿಕ್ಕಿಗೆ ತಿರುಗಿಸುತ್ತೆ. ‘ನನ್ನ ದಿಕ್ಕನ್ನು ನಾನೇ ನಿರ್ಧರಿಸುವೆ ‘ ಎಂಬ ಜಂಭವಿದ್ದರೆ, ಇಳಿಜಾರಿನ ಯಮಪ್ರಪಾತ ಬಾಯ್ತೆರೆದು ಕಾಯುತ್ತೆ.

ಸಾಯಂಕಾಲದ ಬಣ್ಣ ಬಣ್ಣದ ಮದಿರೆ ಹೀರಿದ ಗಗನದಲ್ಲಿ ಗಾಳಿ ತೂರಾಡುತ್ತೆ. ವಾತಾವರಣದ ನೋಹಕ ನಶೆಯಲ್ಲಿ ರಸ್ತೆ, ಪಸ್ಚಿಮಘಟ್ಟಗಳ ದಟ್ಟ ಕಾಡುಗಳನ್ನು ಬಳಸಿ, ಕೆಳನೆಗೆಯುವ ತೊರೆಗಳಲ್ಲಿ ನೆನೆದು ಇಳಿದಂತೆ,ಅದಕ್ಕಂಟಿದ ಸೈಕಲ್ ಚಕ್ರಗಳು ತಿರು ತಿರುಗಿ ಓಡುತ್ತವೆ. ಆಗಸದಲ್ಲಿ ಹಕ್ಕಿಗಳು ತಮಗೆ ಬೇಕಾದಂತೆ ರೆಕ್ಕೆ ತೇಲಿಸಿ ಇಳಿಯುತ್ತವೆ,ಅದು ಚಂದ. ಅವುಗಳಿಗೆ ರಸ್ತೆಯ ಅಗತ್ಯವೂ ಇಲ್ಲ, ಬಂಧನವೂ ಇಲ್ಲ. ಹಾಗಂತ ಅವು ದಿಶಾಹೀನ ಅಲ್ಲ.

Payana - My Journey | Life is a Journey!!!!: Bicycle Tour: Mudigere to  Manipal [Through Charmadi Ghat]

ರಾತ್ರೆಯಾದಂತೆ, ರೊಮ್ಯಾಂಟಿಕ್ ಆಗಿದ್ದ ಬಣ್ಣಗಳೂ, ಕತ್ತಲೆಯ ಕಪ್ಪಿಗೆ ಸಮರ್ಪಣೆ ಮಾಡಿಕೊಂಡು, ನಮ್ಮ ಪರ್ಸೆಪ್ಷನ್ ನಲ್ಲಿ ಪರಿಸರದ ಗಾಢಕತ್ತಲೆಯಲ್ಲಿ ಕಳೆದುಹೋಗುತ್ತವೆ. ಘಟ್ಟಗಳ ಬುಡಕ್ಕಿಳಿದಾಗ ದಟ್ಟ ಕತ್ತಲು. ತಲೆಯೆತ್ತಿ ನೋಡಿದರೆ ಬೆಟ್ಟಗಳ ಸಾಲುಗಳ ಚಿತ್ರ ಅಕ್ಷಿಪಟಲದಲ್ಲಿ ಮೂಡವು. ಅನುಭವಕ್ಕೂ ಬಾರವು.

ಸೈಕಲ್ ಒಂದು ಮ್ಯಾಜಿಕ್!.  ಇದರಲ್ಲಿ ಕುಳಿತು ಎಡಕ್ಕೆ ವಾಲಿದರೂ,ಬಲಕ್ಕೆ ವಾಲಿದರೂ ಬೀಳುತ್ತೀರಿ!. ಸೈಕಲ್ ಎಡಕ್ಕೋ ಬಲಕ್ಕೋ ವಾಲಿದರೆ,ಕೂಡಲೇ ದೇಹಭಾರವನ್ನು ವಿರುದ್ಧ ದಿಕ್ಕಿಗೆ ವಾಲಿಸಿ ಸಮತೋಲಿಸಬೇಕು.  ದೇಹ, ಸೈಕಲ್ ನ ಜತೆಗೂಡಿ, ಗುರುತ್ವ ಕೇಂದ್ರವನ್ನು, ಸೈಕಲ್‌ ನ ಒಟ್ಟೂ ಘನತ್ವದ ಮಧ್ಯಬಿಂದುವಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆ ಸಂಪಾದಿಸಿದ  ಸಮದೃಷ್ಟಿಯೇ ಸೈಕಲ್ ಗೂ, ಚಲನೆಗೂ ಸಮತೋಲನ ತಂದುಕೊಟ್ಟು ಗುರಿಯತ್ತ ಮುಖಮಾಡುತ್ತೆ. ಮನಸ್ಸು ಕೂಡಾ ಅಷ್ಟೇ, ಎಡಕ್ಕೋ,ಬಲಕ್ಕೋ, ಯಾವುದೇ ಸಿದ್ಧಾಂತದತ್ತ ವಾಲಿದರೆ, ಚಲನಶೀಲತೆಗೆ ಅಗತ್ಯವಾದ ಬ್ಯಾಲೆನ್ಸ್ ಅನ್ನು ಕಳೆದುಕೊಳ್ಳುತ್ತದೆ,  ಅಯಸ್ಕಾಂತಕ್ಕೆ ಅಂಟಿ ನಿಂತ ಕಬ್ಬಿಣದ ತುಂಡಿನ ಹಾಗೆ.

ಸೈಕಲ್ ನನ್ನು ನಿಂತಲ್ಲೇ ಬ್ಯಾಲೆನ್ಸ್ ಮಾಡಲು ಅತ್ಯಂತ ಕಷ್ಟ.  ಸೈಕಲ್ ನಲ್ಲಿ ಕುಳಿತು ಅದು ಚಲನಶೀಲವಾದಾಗ ಬ್ಯಾಲನ್ಸ್ ಸುಲಭ. ಪ್ರಕೃತಿಯ ಸಹಜತತ್ವ ಚಲನಶೀಲತೆಯಲ್ಲಿಯೇ ಸಮತೋಲನ ಕಾಣುವಂತೆಯೇ ಸೈಕಲ್ ಸವಾರಿಯೂ ಕಾಣುತ್ತೆ.

ಯಾವುದೇ ಸವಾರಿಯಲ್ಲಿ, ಅದು, ಸೈಕಲ್, ಬಸ್ಸು,ರೈಲು, ವಿಮಾನ ಎಲ್ಲದರಲ್ಲೂ, ಪ್ರಯಾಣಿಕನ ಪ್ರಜ್ಞೆ ಮತ್ತು ಪರಿಸರದ ಅವಸ್ಥೆಗಳಲ್ಲಿ ಸಾಪೇಕ್ಷತೆ ಕೆಲಸ ಮಾಡುತ್ತೆ. ವೇಗವಾಗಿ ಚಲಿಸುವ ರೈಲಿನಲ್ಲಿ ಕುಳಿತಾಗ, ಹೊರಗೆ ಕಾಣುವ ಮರಗಳು, ಕಟ್ಟಡಗಳು ಎಲ್ಲವೂ ವೇಗವಾಗಿ ಹಿಮ್ಮುಖವಾಗಿ ಚಲಿಸುವ ಅನುಭವ ಆಗುತ್ತಲ್ಲ. ಅದೇ ಸಾಪೇಕ್ಷ ಅನುಭವ. ಅಂದರೆ, ಡೈನಮಿಕ್ ವ್ಯವಸ್ಥೆಯಲ್ಲಿ ಅನುಭವ, ಚಲಿಸುವ ದೇಹ ಮತ್ತು ಮನಸ್ಸಿನ ಮೇಲೆ ( ಫ್ರೇಮ್ ಆಫ್ ರೆಫರೆನ್ಸ್), ಚಲಿಸುವ ದಿಕ್ಕಿನ ಮೇಲೆ ಮತ್ತು ಪರಿಸರದ ಅವಸ್ಥೆಯ ಮೇಲೆ ಅವಲಂಬಿತವಾಗಿರುವಾಗ, ಕಾವ್ಯಪ್ರಜ್ಞೆಯೂ, ಸಿದ್ಧಾಂತಗಳನ್ನು ರೂಪಿಸುವ ತಾರ್ಕಿಕ ಮನಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಯಾತ್ರೆಯುದ್ದಕ್ಕೂ,  ನಮ್ಮ ಅಬ್ಸರ್ವೇಷನ್ ನ ಮೇಲೆ ಇತ್ಯಾತ್ಮಕ ಅಭಿಪ್ರಾಯಗಳನ್ನು ಸ್ಥಿರೀಕರಿಸುವುದು ಮತ್ತು ಪ್ರತಿಪಾದಿಸುವುದು, ನಿತ್ಯಚಲನಶೀಲವಾದ ಪ್ರಕೃತಿ ತತ್ವಕ್ಕೆ ಪೂರಕವಾಗದು.

ಸೈಕಲ್ ಸವಾರ ಚಲಿಸುತ್ತಾ ಹೋಗುತ್ತಿದ್ದಂತೆ, ಕಾಲ ಹಿಂದಕ್ಕೆ ಓಡುತ್ತೆ. ವಿಪರ್ಯಾಸವೆಂದರೆ ಸೈಕಲ್ ಸವಾರ ಯಾತ್ರೆ ಮುಗಿಸಿ ಹಿಂತಿರುಗಬಲ್ಲ. ಆದರೆ, ಕಾಲ ಹಿಂತಿರುಗಲ್ಲ. ಅದು ಏಕಮುಖೀ. ಒಮ್ಮೆ ಭೂತಕಾಲವಾದ ವರ್ತಮಾನ, ಪುನಃ ವರ್ತಮಾನಕ್ಕೆ ಹಿಂತಿರುಗಲ್ಲ!.

ಇವಿಷ್ಟು ತಯಾರಿಯೊಂದಿಗೆ ವಿಜಯ್ ದಾರಿಹೋಕ ಅವರ ಕವಿತೆ ” ಸೈಕಲ್,ರಸ್ತೆ, ತುಡಿತ ಇತ್ಯಾದಿ” ಎಂಬ ಕವಿತೆಯನ್ನು ನೋಡೋಣ.

**    **     **    ***

 ಸೈಕಲ್,ರಸ್ತೆ, ತುಡಿತ ಇತ್ಯಾದಿ

ಎಲ್ಲ ಮರೆತ ಒಂದು ಹಳೆಯ

ಊರಕೇರಿಯ ದಾರಿಗುಂಟ

ಸತತ …ಸೈಕಲ್ ತುಳಿವ ತುಡಿತ….!

ಇನ್ನೇನು …ದಿನ ಕಳೆದು,

ಹುಟ್ಟಿಗೆ ಸಿದ್ದವಾದ ರಾತ್ರಿಗೆ,

ಸಂಜೆಯ ಹುಂಜದ ಹಂಗಿಲ್ಲ..!

ಅಪರಿಚಿತ ಊರಕೇರಿಯ ದಿಕ್ಕು..

ಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು…!

ತುಸುವೇ ಹೊತ್ತಿನ ಬಳಿಕ..

ನಾನು ತಲುಪುವ ಕೇರಿಯಾದರೂ ಎಂಥದು..??

ಮುದಿ ಲಾಟೀನಿನ ಮಂದ ಬೆಳಕಲ್ಲಿ 

ಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋ

ಆ ಊರಿನಲ್ಲಿ.. ?

ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋ

ಆ ಊರಿನಲ್ಲಿ..!?

ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋ

ಆ ಊರಿನಲ್ಲಿ..?

 ನನ್ನನು ಅಲ್ಲಿ ಊಹಿಸುವ ಉಮೇದಿಗೆ  ದುಗುಡ ಕೂಡ ಬೆರೆತಿದೆ..!

ಒಂದೋ,

ಅಪರಿಚಿತ  ಗುಡಿಸಲೊಂದರಲ್ಲಿ

ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ,

ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ…

ಗಹ ಗಹಿಸಿ ನಗುವೆ, ಪವಡಿಸುವೆ…

ಇಲ್ಲವೋ..

ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು

ಅತ್ತಿಂದಿತ್ತ  ಅಲೆವೆ,ಸವೆವೆ ಒಂದೇ ಸಮನೆ ,

ಮಟ ಮಟ ರಾತ್ರಿಯು ನೆತ್ತಿಗೇರುವ ತನಕ  …?

ಹಳತು ಮರೆತ ಕೇರಿಯ

ದಾರಿಗುಂಟ  ಸತತ ಸೈಕಲ್ ತುಳಿವ ತುಡಿತ..?

ಎದುರು  ಸಪೂರ ಕಾಲುಗಳ ಮೇಲೆ

ಬಂದ ಎಷ್ಟೊಂದು ಗಂಟುಗಳೂ, ಮೂಟೆಗಳು,

ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ  ಪರಿಗೆ

ಕಂಗಾಲಾಗಿ  ಕಿವಿಗೆ ಗಾಳಿ  ಹೊಕ್ಕಂತೆ  ಸೈಕಲ್ ಓಡಿತು..!

ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ..

ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..?

ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..!

…….

ಹಳತು, ಮರೆತ ಕೇರಿಯ ದಾರಿಗುಂಟ  ಸತತ ಸೈಕಲ್ ತುಳಿವ ತುಡಿತ..!

**   **      **  **

ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ,  ಸತತ …ಸೈಕಲ್ ತುಳಿವ ತುಡಿತ….!

ಹಳೆಯ ಊರಕೇರಿ, ಮರೆತು ಹೋಗಿದ್ದರೂ, ಎಲ್ಲೋ ಮನಸ್ಸಿನ ಮೂಲೆ ಕೋಣೆಯಲ್ಲಿ ಅಚ್ಚಾಗಿದೆ!.  ಬಾಲ್ಯದ್ದು ಇರಬಹುದು, ಊರಕೇರಿ ಎನ್ನುವುದು, ಒಂದು ಸಾಮಾಜಿಕ ವ್ಯವಸ್ಥೆ,ತಾನೇ.  ಆ ವ್ಯವಸ್ಥೆ, ಊರಿಗೇ ಸೀಮಿತವೂ ಹೌದು, ಕೇರಿಯ ಕಟ್ಟು ಕಟ್ಟಳೆಯಿಂದ ಬಂಧಿತವೂ ಹೌದು.

ಕವಿತೆಯುದ್ದಕ್ಕೂ ಕವಿಗೆ ಆ ಕೇರಿಯ ಬಗ್ಗೆ ಬಣ್ಣ ಬಣ್ಣದ ಕನಸಿಲ್ಲ.  ಆದರೆ ಅದರ ಸುತ್ತ ಸೈಕಲ್ ತುಳಿಯುವ ತುಡಿತ. ಅಂದರೆ ಆತ ಬರೇ ವೀಕ್ಷಕ ( ಅಬ್ಸರ್ವರ್) ಆಗುತ್ತಾನೆ. ಸೈಕಲ್ ತುಳಿಯುತ್ತಾ, ನೋಡುವಾಗ, ಊರಕೇರಿಯ ಸ್ಥಾವರ ಚಿತ್ರ, ಜಂಗಮ ಫ್ರೇಮ್ ನ ಮೂಲಕ ಕಾಣುವ ತುಡಿತವೇ?.

‘ದಿನ ಕಳೆದು ಹುಟ್ಟಿಗೆ ಸಿದ್ಧವಾದ ರಾತ್ರಿ’ ಅನ್ನುವ ಕವಿ ಕಲ್ಪನೆಗೆ ಅನನ್ಯತೆಯಿದೆ. ನಮ್ಮ ಮನಸ್ಸು ಹಗಲಿನ, ಬೆಳಕಿನ ಪಕ್ಷಪಾತಿ. ಆದರೆ ಹಗಲಿನದ್ದು ಮತ್ತು ರಾತ್ರಿಯದ್ದು ಪರಸ್ಪರ ಪೂರಕ ಮತ್ತು ಸಾಪೇಕ್ಷ( ರಿಲೇಟಿವ್) ಅಸ್ತಿತ್ವ. ಅದಕ್ಕೇ ರಾತ್ರೆಯ ಹುಟ್ಟು ತುಂಬಾ ತಾತ್ವಿಕ ಕಲ್ಪನೆ.

ಹಾಗೆಯೇ ಇನ್ನೊಂದು ಅಪೂರ್ವ ಸಾಲು, ಹಣ್ಣು ಹಣ್ಣಾದ ರಸ್ತೆ!. ರಸ್ತೆ ಹಣ್ಣಾಗುವುದು ಎಂದರೆ, ದಿನವಿಡೀ ಚಲಿಸುವ ವಾಹನಗಳ ತುಳಿತದಿಂದ ಬಳಲಿ ಹಣ್ಣಾದದ್ದೇ?. ಅಥವಾ ಚಲಿಸುವ ವಾಹನಗಳಿಗೆ ದಾರಿತೋರಿ, ದಾರಿಯೇ ಆಗಿ, ಪಕ್ವವಾದ ಅನುಭವವೇ?. ದಾರಿ ಸಿಗದ ಯಾತ್ರಿಕರಿಗೆ ದಾರಿಯಾಗಿ ಅತೀವ ಹೆಮ್ಮೆಯ ಸೊಕ್ಕು, ರಸ್ತೆಗೆ!.

ಆ ಕೇರಿಯ ಲಾಟೀನು ಮುದಿಯಾಗಿದೆ. ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳುಹಾಡುಗಳಂತಹಾ ಸದ್ದುಗಳು, ಒಣ ಗಂಡಸರು, ಹೀಗೆ ಕವಿ ಕೇರಿಯ ವಿವರಣೆ ಕೊಡುವಾಗ, ಒಂದು ರಸಹೀನ,ಜೀವಭಾವ ರಹಿತ ವ್ಯವಸ್ಥೆಯ ಚಿತ್ರ ಮೂಡುತ್ತೆ.  ಬದಲಾವಣೆಗೆ ಒಗ್ಗದೆ ಕಾಲದಲ್ಲಿ ಕಾಲವಾದ ವ್ಯವಸ್ಥೆಯನ್ನು, ಚಲನಶೀಲ ಮನಸ್ಸು ಸೈಕಲ್ ತುಳಿಯುತ್ತಾ ಕಾಣುತ್ತೆ. ಗಮನಿಸಿ!, ನೋಟಕನ ಸೈಕಲ್ ನಿಲ್ಲಿಸಿ ನೋಡುವುದಿಲ್ಲ, ಚಲಿಸುತ್ತಲೇ ಇರುತ್ತೆ.

” ಅಪರಿಚಿತ  ಗುಡಿಸಲೊಂದರಲ್ಲಿ

ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ,

ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ…

ಗಹ ಗಹಿಸಿ ನಗುವೆ, ಪವಡಿಸುವೆ…

ಇಲ್ಲವೋ..

ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು

ಅತ್ತಿಂದಿತ್ತ  ಅಲೆವೆ,ಸವೆವೆ ಒಂದೇ ಸಮನೆ ,

ಮಟ ಮಟ ರಾತ್ರಿಯು ನೆತ್ತಿಗೇರುವ ತನಕ  …”

ಈ ಸಾಲುಗಳನ್ನು ಓದುವಾಗ, ಕವಿ, ಈ ವ್ಯವಸ್ಥೆಯನ್ನು ದಿಕ್ಕರಿಸಿ ಬಂದಂತಿದೆ.  ವ್ಯವಸ್ಥೆಯನ್ನು ನಿಂತ ನೀರಾಗಿಸಿದ, ರಸಹೀನವಾಗಿಸಿದ ಕೆಲವು ಮಂದಿಯ ಬಗ್ಗೆ ಆಕ್ರೋಶ ಇದೆ. ಅದನ್ನು ಪ್ರಶ್ನಿಸುವ ಆಸೆಯಿದೆ. ಆದರೆ ಆ ವ್ಯವಸ್ಥೆ, ತನ್ನ ಪ್ರಶ್ನೆಗಳಿಂದ ಬದಲಾಗಲ್ಲ ಎಂಬ ಆಸಮಧಾನವೂ ಇದೆ.

‘ಮಟ ಮಟ ರಾತ್ರಿಯು ನೆತ್ತಿಗೇರುವ ತನಕ’ ಎಂಬ ಈ ಸಾಲುಗಳು ಸೂರ್ಯ ನೆತ್ತಿಗೇರುವ ಹಾಗೆಯೇ ರಾತ್ರಿಯೂ, ಎಂಬ ಹೊಸ ಕಲ್ಪನೆಯನ್ನು ಬಿಂಬಿಸುವ ಜತೆಗೇ, ನಿರಾಶಾದಾಯಕ ಮನಸ್ಥಿತಿಯ ಕ್ಶಿತಿಜವನ್ನೂ ಪರಿಚಯಿಸುತ್ತೆ.

ಹಳತನ್ನು ಮರೆತು ಹೊಸತಿಗೆ ತೆರೆಯುವ ಕೇರಿಯ ಗುಂಟ ಸೈಕಲ್ ತುಳಿಯಬೇಕೆಂಬ ಹಂಬಲ ಕವಿ ಮನಸ್ಸಲ್ಲಿ ಇದ್ದಂತಿದೆ.

“ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳು, ಮೂಟೆಗಳು”

ಕಾಲುಗಳು, ದೇಹಕ್ಕೂ, ದೇಹ ಹೊರುವ ಹೊರೆಗೂ ಆಧಾರ. ಆದರೆ ಆಧಾರ, ಅಡಿಪಾಯ, ಗಟ್ಟಿಯಾಗಿಲ್ಲ. ಪೋಷಕಾಂಶಗಳ ಕೊರತೆಯಿಂದ ಕಾಲುಗಳು ಸಪೂರವಾಗಿವೆ. ವ್ಯವಸ್ತೆಯ ಜೀವಪೋಶಕ ಅಂಶ ವಿರಳವಾದಾಗ, ಆಧಾರ ಸ್ಥಂಭಗಳು ದುರ್ಬಲವಾಗುತ್ತವೆ. ಆ ದುರ್ಬಲ ವ್ಯವಸ್ಥೆ ಹೊತ್ತಿರುವ ಮೂಟೆಗಳು ಮಣ ಭಾರ. ಗಂಟುಗಳು ಎಂದರೆ, ಕ್ಲಿಷ್ಟವಾದ, ಬಿಡಿಸಲಾಗದ ಅಥವಾ ಬಿಡಿಸಲು ಪ್ರಯತ್ನವೇ ಮಾಡದೆ ಕ್ಲಿಷ್ಟವಾದ ಸಮಸ್ಯೆಗಳನ್ನು, ಪ್ರತಿನಿಧಿಸುವಂತಿದೆ. ಸೈಕಲ್ ನಲ್ಲಿ ಸವಾರನಾದ ಕವಿಗಯನ್ನು ಈ ಪ್ರಶ್ನೆಗಳು ಅಧೀರನನ್ನಾಗಿಸುತ್ತವೆ.

” ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ..

ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..?

ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..!”

ಕೇರಿಯ ಸುತ್ತಲಿನ ರಸ್ತೆಯೇ ಈಗ ಮಾತಾಡುತ್ತೆ. ಸಮಸ್ಯೆಯ ಅಗಾಧತೆಯ ಪರಿಚಯ ಮಾಡಿಕೊಡುತ್ತೆ.

ಈ ಕವಿತೆಯಲ್ಲಿ ಸೈಕಲ್ ಸವಾರ, ವ್ಯಕ್ತಿಯೇ ಆಗಬೇಕಿಲ್ಲ. ನಮ್ಮ ಮನಸ್ಸಿನೊಳಗಿನ ಸಾಕ್ಷೀ ಪ್ರಜ್ಞೆಯೂ ಆಗಬಹುದು. ನಾವು ಅನುಭವ ರೂಪದಲ್ಲಿ ಸಂಗ್ರಹಿಸಿದ ವಿಷಯಗಳ ಆಧಾರದಲ್ಲಿ ಮನಸ್ಸೊಳಗೇ ಕೇರಿ ನಿರ್ಮಾಣ ( ಪೂರ್ವಾಗ್ರಹ) ಮಾಡುತ್ತೇವೆ. ನಮ್ಮ ಸಾಕ್ಷಿ ಪ್ರಜ್ಞೆ ನಿರಂತರವಾಗಿ ಅದರ ಸುತ್ತ ಸುತ್ತುತ್ತದೆ, ಪ್ರಶ್ನಿಸುವ ಪ್ರಯತ್ನ ಮಾಡುತ್ತೆ.  ಆದರೆ, ಮನಸ್ಸಿನಲ್ಲಿ ರೂಪುಗೊಂಡ, ಮೂರ್ತವಾದ ಅಭಿಪ್ರಾಯ, ಸಿದ್ಧಾಂತಗಳು, ಬದಲಾವಣೆಯನ್ನು, ಪ್ರತಿರೋಧಿಸುತ್ತವೆ. ಅದರೂ ಸಾಕ್ಷಿಪ್ರಜ್ಞೆ ಸೈಕಲ್ ತುಳಿಯುತ್ತಲೇ ಇರುತ್ತೆ. ಅದೊಂದು ನೆವರ್ ಎಂಡಿಂಗ್ ಸ್ಪಿರಿಟ್

ಈ ಸೈಕಲ್ ಯಾತ್ರೆ ಒಂದು ಪೂರ್ತಿ ಬದುಕಿನ ಪಯಣವೂ ಆಗಬಹುದು. ಮನೋಲೋಕದೊಳಗೆ ದಿನ ನಿತ್ಯ  ಹಳತು ಹೊಸತರ ನಡುವೆ, ಸಿದ್ಧಾಂತಗಳ ವೈರುಧ್ಯಗಳ ನಡುವೆ, ಭಾವ  ಬುದ್ಧಿ ಗಳ ನಡುವೆ ನಡೆಯುವ ಸಂಘರ್ಷಗಳು, ಸೈಕಲ್ ಸವಾರನ ವೀಕ್ಷಕ ವಿವರಣೆಯಲ್ಲಿ ದಾಖಲಾದಂತೆಯೂ ಅನ್ವಯಿಸಬಹುದು. ವ್ಯಕ್ತಿ  ಮತ್ತು ವ್ಯವಸ್ಥೆ ಗಳ ನಡುವಿನ ತಾಕಲಾಟವಾಗಿಯೂ ನೋಡಬಹುದು

ಈ ಕವಿತೆಯಲ್ಲಿ ‘ಕೇರಿ’ಯ ಪ್ರತಿಮೆಯನ್ನು ಕವಿ ಬಹಳ ಚೆನ್ನಾಗಿ ದುಡಿಸಿಕೊಂಡಿದ್ದಾರೆ.

ಇದೇ ರೀತಿ ದ.ರಾ. ಬೇಂದ್ರೆಯವರೂ ಕೇರಿಯ ರೂಪಕವನ್ನು ತಮ್ಮ ಕವನ ” ಬಾರೋ ಸಾಧನ ಕೇರಿಗೆ” ತುಂಬಾ ಧನಾತ್ಮಕವಾಗಿ ಬಳಸಿದ್ದಾರೆ.

ಬೇಂದ್ರೆ ಬಗ್ಗೆ ಅಪೂರ್ವ ಗ್ರಂಥ - ಸಂವಾದ ಕಂಡ ಅಂದತ್ತ | DaRa Bendre | Vamana Bendre  | Notes on Bendre poems | KS Sharma | ದರಾ ಬೇಂದ್ರೆ | ವಾಮನ ಬೇಂದ್ರೆ | ಸಂವಾದ  ಕಂಡ ಅಂದತ್ತ - Kannada Oneindia

“ಬಾ ಬಾರೋ, ಬಾರೋ ಬಾರೋ

ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ

ಮಳೆಯು ಎಳೆಯುವ ತೇರಿಗೆ

ಹಸಿರು ಏರಿದೆ ಏರಿಗೆ     

ಹಸಿರು ಸೇರಿದೆ ಊರಿಗೆ

ಹಸಿರು ಚಾಚಿದೆ ದಾರಿಗೆ

ನಂದನದ ತುಣುಕೊಂದು ಬಿದ್ದಿದೆ

ನೋಟ ಸೇರದು ಯಾರಿಗೆ?

ಮಲೆಯ ಮೊಗವೇ ಹೊರಳಿದೆ

ಕೋಕಿಲಕೆ ಸವಿ ಕೊರಳಿದೆ

ಬೇಲಿಗೂ ಹೂ ಬೆರಳಿದೆ

ನೆಲಕೆ ಹರೆಯವು ಮರಳಿದೆ

ಭೂಮಿತಾಯ್ ಒಡಮುರಿದು ಎದ್ದಳೊ

ಶ್ರಾವಣದ ಸಿರಿ ಬರಲಿದೆ

ಮರವು ಮುಗಿಲಿಗೆ ನೀಡಿದೆ

ಗಿಡದ ಹೊದರೊಳು ಹಾಡಿದೆ

ಗಾಳಿ ಎಲ್ಲೂ ಆಡಿದೆ

ದುಗುಡ ಇಲ್ಲಿಂದೋಡಿದೆ

ಹೇಳು ಗೆಳೆಯಾ ಬೇರೆ ಎಲ್ಲಿ

ಈ ತರದ ನೋಟವ ನೋಡಿದೆ? “

ಇದು ಸಾಧನ ಕೇರಿ.  ಇಲ್ಲಿಯ ಬೇಲಿಗೂ ಹೂ ಬೆರಳಿದೆ, ಗಿಡದ ಹೊದರೊಳು ಹಾಡಿದೆ. ಇಲ್ಲಿಯ ನೆಲಕೆ ಹರಯವು ಮರಳಿದೆ,  ಭೂಮಿತಾಯ್ ಒಡಮುರಿದು ಎದ್ದಳೊ, ಶ್ರಾವಣದ ಸಿರಿ ಬರಲಿದೆ.

ಮನುಷ್ಯ ಮನಸ್ಸಿನಲ್ಲಿ ಬಿತ್ತನೆಯಾದ ಭಾವಬಿತ್ತು, ಬೇರೆ ಬೇರೆ ಕವಿನೆಲದಲ್ಲಿ ಮೊಳಕೆಯೊಡೆದು ಪೈರಾಗಿ, ಫಸಲಾಗಿ ಖಟಾವ್ ಮಾಡಿದ ಧಾನ್ಯದಲ್ಲಿ ಸಾಮ್ಯತೆಯೂ ಸಹಜ, ಸಾಮ್ಯತೆಯಿಲ್ಲದಿರುವುದೂ ಸಹಜ.

 ವಿಜಯ್ ದಾರಿಹೋಕ ಅವರ ಕವನದ ಮೆಸ್ಸೇಜ್ ಮತ್ತು ಬೇಂದ್ರೆಯವರ ಆಶಯ ತೀರಾ ಭಿನ್ನವಾದರೂ, ಕವಿತೆಯ ಕೇರಿ ಒಂದೇ.

***************************************************************

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

6 thoughts on “

  1. ಮಮಸು ಕಟ್ಟಿದ ಕೆರೆ….ಸವಿಸ್ತರ ಲೇಖನಿ ೧೦ ನಿಮಿಷಗಳಲ್ಲಿ ದುನಿಯಾಕೀ ಸೈರ ಮಾಡಿಸಿ ಬಿಟ್ಟಿತು.
    ಸೈಕ್ಲಿಂಗ್ ಮಾಡುವಾಗ ಅನುಸರಿಸುವ balance ಪದ್ಧತಿಯನ್ನು
    ನಾವು , ನಮ್ಮ ನಿತ್ಯಜೀವನದಲ್ಲಿ ತ್ರಿಗುಣಗಳನ್ನು balance ಮಾಡಿಕೊಂಡು ಬಾಳಿದಾಗ ,ಕಠಿಣವಾದ ಮಾರ್ಗಗಳನ್ನೂ ತುಳಿದು ಜನನ ಮರಣಗಳ cycle ದಿಂದ ಪಾರಾಗ ಬಹುದು ಎನಿಸಿತು.
    ಸೈಕಲ್ ಇಲ್ಲದೆಯೂ ಯೋಗಾಭ್ಯಾಸದಲ್ಲಿ ಸೈಕ್ಲಿಂಗ ಮಾಡುತ್ತೇವೆ ಅಲ್ಲವೇ ?

  2. ಮಮಸು ಕಟ್ಟಿದ ಕೆರೆ….ಸವಿಸ್ತರ ಲೇಖನಿ ೧೦ ನಿಮಿಷಗಳಲ್ಲಿ ದುನಿಯಾಕೀ ಸೈರ ಮಾಡಿಸಿ ಬಿಟ್ಟಿತು.
    ಸೈಕ್ಲಿಂಗ್ ಮಾಡುವಾಗ ಅನುಸರಿಸುವ balance ಪದ್ಧತಿಯನ್ನು
    ನಾವು , ನಮ್ಮ ನಿತ್ಯಜೀವನದಲ್ಲಿ ತ್ರಿಗುಣಗಳನ್ನು balance ಮಾಡಿಕೊಂಡು ಬಾಳಿದಾಗ ,ಕಠಿಣವಾದ ಮಾರ್ಗಗಳನ್ನೂ ತುಳಿದು ಜನನ ಮರಣಗಳ cycle ದಿಂದ ಪಾರಾಗ ಬಹುದು ಎನಿಸಿತು.
    ಸೈಕಲ್ ಇಲ್ಲದೆಯೂ ಯೋಗಾಭ್ಯಾಸದಲ್ಲಿ ಸೈಕ್ಲಿಂಗ ಮಾಡುತ್ತೇವೆ ಅಲ್ಲವೇ ?

  3. ಮಮಸು ಕಟ್ಟಿದ ಕೆರೆ….ಸವಿಸ್ತರ ಲೇಖನಿ ೧೦ ನಿಮಿಷಗಳಲ್ಲಿ
    ದುನಿಯಾಕೀೀ ಸೈರ ಮಾಡಿಸಿ ಬಿಟ್ಟಿತು.
    ಸೈಕ್ಲಿಂಗ್ ಮಾಡುವಾಗ ಅನುಸರಿಸುವ balance ಪದ್ಧತಿಯನ್ನು
    ನಾವು , ನಮ್ಮ ನಿತ್ಯಜೀವನದಲ್ಲಿ ತ್ರಿಗುಣಗಳನ್ನು balance ಮಾಡಿಕೊಂಡು ಬಾಳಿದಾಗ ,ಕಠಿಣವಾದ ಮಾರ್ಗಗಳನ್ನೂ ತುಳಿದು ಜನನ ಮರಣಗಳ cycle ದಿಂದ ಪಾರಾಗ ಬಹುದು ಎನಿಸಿತು.
    ಸೈಕಲ್ ಇಲ್ಲದೆಯೂ ಯೋಗಾಭ್ಯಾಸದಲ್ಲಿ ಸೈಕ್ಲಿಂಗ ಮಾಡುತ್ತೇವೆ ಅಲ್ಲವೇ ?

  4. ಸೈಕಲ್ ಸಮತೋಲನದಿಂದ ಆರಂಭವಾದ ವಿಶ್ಲೇಷಣೆ ಸವಾರಿ, ದಾರಿ, ತುಡಿತಗಳನ್ನು ದಾಟಿ ಕೇರಿಗೆ ಭೇಟಿ ನೀಡಿ ಅಲ್ಲಿಯ ರಸ್ತೆಯ ಸವಾಲನ್ನು ಸ್ವೀಕರಿಸಿ ಪದ ಗಾರುಡಿಗನ ಸಾಧನಕೇರಿಗೆ ತಲುಪಿದಾಗ ಯಾವುದನ್ನು ಓದಿ ಆನಂದ ಪಡೆಯ ಬೇಕೋ ತಿಳಿಯದ ಅಮಲು. ಬಣ್ಣ ಬಣ್ಣದ ಮದಿರೆಯನ್ನು ಹೀರಿದ ಗಗನ…ಅದ್ಭುತ ಪ್ರತಿಮೆ. ಸುಂದರ ಕವಿತೆಗೆ ಕಿರೀಟವಿಟ್ಟ ವಿಶ್ಲೇಷಣೆ.

    1. ರಮೇಶ್ ಸರ್. ಸೈಕಲ್ ತುಳಿಯುತ್ತಾ ಜೀವನಚಕ್ರ ಸುತ್ತುವ ಪ್ರಯತ್ನದ ಹಲವು ಆಯಾಮಗಳು, ಕವಿತೆಯಲ್ಲಿ. ಅಂಕಣದ ಕಣಗಳನ್ನು ಸಂಗ್ರಹಿಸಿ ರಂಗೋಲಿ ಬರೆದಿರಿ!.
      ತುಂಬಾ ಧನ್ಯವಾದಗಳು

Leave a Reply

Back To Top