ವಾರದ ಕವಿತೆ
ನಿರಂತರ ನೋವು
ರಾಜೇಶ್ವರಿ ಭೋಗಯ್ಯ
ಎದೆಯ ಒಳಗೊಂದು ಚುಚ್ಚುವ ನೋವಿದ್ದರೆ
ಮೈಮೇಲೊಂದು ಗಾಯ ಮಾಡಿಕೊ
ನಂತರ ಒಳಗಿನ ನೋವು ಹೆಚ್ಚೋ
ಹೊರಗಿನ ನೋವು ಹೆಚ್ಚೋ ಎಂದು ತಾಳೆ ಹಾಕಿಕೋ
ಎದೆಯ ನೋವೇ ಹಿಂಡುವಂತಾದ್ದು
ಮೈಯ್ಯ ನೋವೇ ಚುಚ್ಚುವಂತಾದ್ದು ಮನವರಿಕೆ ಮಾಡಿಕೋ
ಎರಡರ ಜೊತೆ ಸೆಣಸಿ ಸೆಣಸಿ ಮೈಯ ಗಾಯ ಮಾಯಿತು
ಎದೆಯ ನೋವು ಮತ್ತೆ ಇಣುಕಿತು
ಚರ್ಮದ ಮೇಲಿನದು ಒಣಗಿದರೂ ವಿಕಾರವಾಯಿತು
ಯಾರಿಗೂ ಕಾಣದ ನೋವು ಒಳಗಿದ್ದದ್ದೇ ಸಹ್ಯವಾಯಿತು
ಗೆಳತಿ ಹೇಳಿದಳು..ಮೂಗು ಚುಚ್ಚಿಸು…
ಕಷ್ಟಕ್ಕೂ ,ಸುಖಕ್ಕೂ ,ಎದೆಗೂ ಹತ್ತಿರ
ಒಂದಕ್ಕೊಂದು ಅನುಬಂಧ
ಅದೂ ಆಯಿತು…ಹಾಗೇ ಮಾಯಿತು
ಉಳಿಯುವುದಿಲ್ಲ ಕಲೆ
ಉಪಯೋಗಿಸಿದ್ದಳು ತಲೆ
ಎಷ್ಟು ಮೂಗಿದ್ದರೂ ಸಾಲುವುದೇ…
ಹೆಣ್ಣಿನ ಬವಣೆಗೆ ಕೊನೆಯಿದೆಯೇ
ಹಿಂಡುವ , ಚುಚ್ಚುವ ಜುಗಲ್ಬಂದಿಯಲ್ಲಿ
ಗೆದ್ದದ್ದು ಮೈಮೇಲಿನ ನೋವೇ
ಎಂದಿಗೂ ಗೆಲ್ಲದಂತೆ ಹಠ ಹಿಡಿಯುವುದು
ಎದೆಯೊಳಗಿನ ಕಾವೇ
ಚುಚ್ಚುತ್ತಿರಲಿ ಒಂದು ನಿರಂತರ ನೋವು
ಅದಕಿಂತಾ ಚಂದವಾ ಮೈಮೇಲಿನ ಬಾವು.
*******************************
ಸೊಗಸಾಗಿದೆ ಕವಿತೆ..ಚುಚ್ಚುವ ನೋವನು ಗೆಲ್ಲುವ ಹುನ್ನಾರ ವಿಭಿನ್ನ.ನಿಜ ಮೇಡಮ್ ಮೈಗಾಯದ ನೋವು ಮಾಯವಾಗುತ್ತದೆ.ಮನದ ನೋವು..ಚುಚ್ಚುತ್ತಿರುತ್ತದೆ.ಸರಳ,ಸುಂದರ,ಗಂಭೀರ ಸಂಗತಿಯ ಕವನ.ಇಷ್ಟವಾಯಿತು.
ಥ್ಯಾಂಕ್ಯೂ ಮೇಡಂ.❤️❤️
ಚೆಂದ ಕವಿತೆ
ಥ್ಯಾಂಕ್ಯೂ ಮೇಡಂ.
ಇಷ್ಟ ಆಯ್ತು