ಅಂಕಣ ಬರಹ

ಹೊಸ ದನಿ ಹೊಸ ಬನಿ ೧೬

ಹುಚ್ಚು ಆದರ್ಶಗಳಿಲ್ಲದ ಭಾವ

ಭಿತ್ತಿಯ ಸಹಜ ನಿರೂಪಣೆ

ನಾಗರೇಖಾ ಗಾಂವಕರ್ ಕವಿತೆಗಳು

ನಾಗರೇಖಾ  ಕಾವ್ಯಗುಚ್ಚ

ಅವಳ ಮಾಂಸ ಮಜ್ಜೆಯ

ನೆರಳು, ಮುಟ್ಟಿನ ವಾಸನೆಬಡಿಯದೇ,

ಪೊಗರಿದ ಅವನೆಂಬವನ  ಹುಡುಕಿ

ಸೋತಿದ್ದೇನೆ,

ಹುಡುಕಿ ಕೊಡು ಹೇ! ಪ್ರಭು.

ಎಂದು ಗಟ್ಟಿಯಾಗಿ ಪ್ರಶ್ನಿಸುತ್ತಲೇ ಸುರುವಾಗುವ ಈ ಕವಿತೆ ಗಂಡಿನ ಅಹಮ್ಮನ್ನು ಗುರಾಯಿಸುತ್ತಲೇ ಕಡೆಗೆ

ಆದರವನ ದೇವರಿಗೆ ಅವಳ

ಮಾಂಸ ಮಜ್ಜೆಯ ನೆರಳು,

ಮುಟ್ಟಿನ ವಾಸನೆ ಮೈಲಿಗೆಯಂತೆ.

ಆ ದೇವನೆಂಬವನ

ಹುಡುಕಿ ಕೊಡು ಹೇ! ಪ್ರಭು (ಹುಡುಕಿ ಕೊಡು)

ಎನ್ನುವಾಗ ಸಾಮಾನ್ಯವಾಗಿ “ಅವನು” ಎಂದರೆ “ದೇವರು” ಎಂದೇ ಅರ್ಥೈಸಲಾಗುವ “ಅವನನ್ನೇ” ಹುಡುಕಿಕೊಡು ಎಂದು ಕೇಳುವ ಗತ್ತು ತೋರುತ್ತಲೇ ಒಟ್ಟೂ ಸಾಮಾಜಿಕ ವ್ಯವಸ್ಥೆಯ ಅಸ್ತಿತ್ವನ್ನೇ ಅಲುಗಾಡಿಸುವ ಉತ್ತರವೇ ಇಲ್ಲದ ಪ್ರಶ್ನೆಯನ್ನೆತ್ತುವ ಈ ಕಾವ್ಯಧ್ವನಿ ಶ್ರೀಮತಿ ನಾಗರೇಖಾ ಗಾಂವಕರ ಅವರದ್ದು. ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಪರಿಚಿತ ಹೆಸರು. ಈಗಾಗಲೇ ಸಂಗಾತಿಯೂ ಸೇರಿದಂತೆ ಹಲವು ವೆಬ್ ಪತ್ರಿಕೆಗಳಲ್ಲದೇ ಮಯೂರ, ಕನ್ನಡಪ್ರಭ, ಉದಯ ವಾಣಿ ಪತ್ರಿಕೆಗಳಲ್ಲೂ ಇವರ ಕವಿತೆಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ದಾಂಡೇಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಇವರು ಕಳೆದ ವರ್ಷ ಪ್ರಕಟಿಸಿದ್ದ “ಬರ್ಫದ ಬೆಂಕಿ” ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಬಹುಮಾನ ನಿನ್ನೆಯಷ್ಟೇ ಘೋಷಣೆಯಾಗಿದೆ.

ಏಣಿ ಮತ್ತು ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ[ಅಂಕಣ ಬರಹ ಕೃತಿ] ಸಮಾನತೆಯ ಸಂಧಿಕಾಲದಲ್ಲಿ [ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ] ಪ್ರಕಟಿಸಿರುವ ಇವರ ಸಂಕಲನಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪದತ್ತಿ ಪ್ರಶಸ್ತಿ,  ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ ಮತ್ತು ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿಗಳು ಲಭಿಸಿವೆ.

ಆಯತಪ್ಪಿ ಫಳಾರನೇ

ಕೆಳಗುರುಳಿದಾಗ;

ಬಿದ್ದರೂ, ಗುದ್ದಿದರೂ

ಲೋಹದ ಹಣತೆ

ನೆಗ್ಗಬಹುದು, ಮತ್ತೆದ್ದು

ನಗಲೂಬಹುದು

ಆದರೆ  ಚೂರಾದದ್ದು

ಮೆದು ಮೈಯ  ಮಣ್ಣಹಣತೆ

ಎಂದೂ ಈ ಕವಿಗೆ ಗೊತ್ತಿರುವ ಕಾರಣಕ್ಕೇ ಇವರ ಪದ್ಯಗಳು ಅನುಭವ ವಿಸ್ತರಣದ ಚೌಕಟ್ಟಿನಾಚೆಗೆ ಉಕ್ಕದೇ ಹಾಗೆಯೇ ಸೀಮಿತ ವ್ಯಾಸದ ಪರಿವೃತ್ತದೊಳಗಿದ್ದೂ ಒತ್ತಡದ ಹೇರನ್ನು ನಿಭಾಯಿಸುವ ಪರಿ ಅಪರೂಪದ್ದಷ್ಟೇ ಅಲ್ಲ ಅದು ನಿಜ ಬದುಕಿನಲ್ಲೂ ಹೆಣ್ಣು ಅಡವಳಿಸಿಕೊಳ್ಳಲೇ ಬೇಕಾದ ಸಹಜ ದಾರಿಯೂ ಆಗಿದೆ.

ಇಂಥ ಚಿಂತನೆಯ ಮುಂದುವರೆದ ಶೋಧವಾಗಿ

ಒಂದಿಷ್ಟು ಆಚೀಚೆ ಜರುಗಿಸಹೋದರೂ

ಕೈಗೆ ಹತ್ತಿದ ಕಬ್ಬಿಣದ

ಮುಳ್ಳು ರಕ್ತ ಬಸಿಯಿತು…

ಅಂದಿನಿಂದ

ಬೇಲಿಯಲ್ಲಿ ಚಿಗುರ ಕಾಣುವ ಕನಸೂ ಕುಸಿಯಿತು..

ಎಂದು ಈ ಕವಿ “ಬೇಲಿಗಳು” ಎನ್ನುವ ಕವಿತೆಯಲ್ಲಿ ಒಟ್ಟೂ ನಾಶವಾಗುತ್ತಲೇ ಇರುವ ಸಂಬಂಧಗಳನ್ನು ಬೇಲಿಯೆಂಬ  ಪ್ರತಿಮೆಯ ಮೂಲಕವೇ ವಿಷಾದಿಸುತ್ತಾರೆ.

ಪದಗಳೊಂದಿಗೆ ನಾನು ಎನ್ನುವ ಕವಿತೆಯಲ್ಲಿ

ಪದಗಳೆಂದರೆ ನನಗೆ ಅಚ್ಚುಮೆಚ್ಚು

ದಿನಂಪ್ರತಿಯ ಅಭ್ಯಾಸವೂ

ಪದಗಳ ಹೊಸೆಯುವುದರಲ್ಲಿ,

ಮಸೆಯುವುದರಲ್ಲಿ:

ಆದರೆ ಆ ಪದಗಳಿಗೆ ಶಬ್ದಕೋಶದಿ

ಅರ್ಥಗಳ ಹುಡುಕಿ ಸೋತಿದ್ದೇನೆ.

ಎಂದು ಶಬ್ದಾಡಂಬರದ ವೈಯಾರವನ್ನು ಶಬ್ದಗಳು ಶಬ್ದ ಮಾಡುವ ಪರಿಯನ್ನು ಅರುಹುತ್ತಲೇ

ಪದಗಳೆಂದರೆ ನನಗೆ ಅಲರ್ಜಿ

ನನ್ನೊಳಗಿನ ನನ್ನನ್ನು

ಹೊರಗಟ್ಟಿ ಅಣಕಿಸಿ ನಗುತ್ತವೆ.

ಹಾಡಾಗುವ ಬದಲು ಹಾವಾಗಿ

ಹಗೆಯ ಹೊಗೆ ಹಬ್ಬಿಸುತ್ತವೆ

ಪದಗಳೆಂದರೆ ನನಗೆ ಅಲರ್ಜಿ

ಪಟ್ಟಾಂಗದಲ್ಲಿ ಪದಗಳ ಭರ್ಜರಿ

ಬೇಟೆಯಾಡುವ ನಾನು

ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ.

ಎನ್ನುವಾಗ ಹುಟ್ಟಿದ ದ್ವಿತ್ವವನ್ನು ಕಾಣಿಸುತ್ತಾರೆ. ಒಮ್ಮೆ ಹಿತವಾದದ್ದು ಮುಂದಿನ ಕ್ಷಣದಲ್ಲೇ ಬೇಡವೆಂದೆನಿಸುವ ಮನುಷ್ಯನ ಮಿತಿಯನ್ನು ಈಪದ್ಯ ಹೇಳುತ್ತಿದೆಯೋ ಅಥವ ಕವಿಯು to be or not to be ಎಂಬ ಗೊಂದಲದ ದ್ವಂದ್ವ ಮೀರದ ambiguity ಯೆಂಬ ಪಾಶ್ಚಿಮಾತ್ಯರ ಕಾವ್ಯ ಮೀಮಾಂಸೆಯ ಪ್ರತಿಪಾದಕರಾಗಿಯೂ ಕಾಣುತ್ತಾರೆ. ಹಾಗೆಂದು ಈ ಕವಿ ಬರಿಯ ಒಣ ತರ್ಕ ಮತ್ತು ಸಿದ್ಧಾಂತಗಳ ಗೋಜಲಲ್ಲೇ ನರಳದೆ ಅಪರೂಪಕ್ಕೆ

ಈ ಮಳೆಗೂ ಕರುಣೆಯಿಲ್ಲ

ಹಸಿಮನಗಳಲಿ

ಹುಸಿ ಬಯಕೆಗಳ

ಕುದುರಿಸಿ ಕಾಡುತ್ತದೆ

ಎಂದೂ ಒಲವನ್ನು ಕುರಿತು ಧೇನಿಸುತ್ತಲೇ ಆ ಹುಡುಗನಿಗೆ

ಇದೆಲ್ಲವನೂ ಹೇಗೆ ಉಲಿಯಲಿ?

ಕಂಪು ಹೆಚ್ಚಾಗಿ ಜೋಂಪು

ಹತ್ತಿದೆ, ಕಣ್ಣುಗಳು ಮತ್ತೇರಿ

ಪಾಪೆಯೊಳಗೆ ಮುದುರಿದೆ

ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು

ಹಚ್ಚುವ ನಿನ್ನ ಬಿಂಬವ

ಹೇಗೆ ಮರೆಮಾಚಲಿ ಹುಡುಗ?

ಎಂದು ರೊಮ್ಯಾಂಟಿಕ್ ಮೂಡಿನಲ್ಲಿ ಕೇಳುತ್ತಾರಲ್ಲ ಆಗ ಆ ಪದ್ಯ ಮು(ಹು)ಟ್ಟಿಸಿದ ಬಿಸಿಯನ್ನು ಓದುಗ ಸುಲಭದಲ್ಲಿ ಮರೆಯಲಾರ!!

ಈ ಮುದುಕಿಯರೇ ಹೀಗೆ

ಮನೆಯ ಸಂದುಹೋದ ಬಣ್ಣಕ್ಕೆ

ಸಾಕ್ಷಿಯಾಗುತ್ತಾರೆ….

ಎಂದೆನುವ ಪದ್ಯದ ಶೀರ್ಷಿಕೆ ಈ ಹಿಂದೆ ಇದೇ ಶೀರ್ಷಿಕೆಯಲ್ಲಿ ಪ್ರತಿಭಾ ನಂದಕುಮಾರ ಪದ್ಯವಾಗಿಸಿದ್ದನ್ನು ಓದಿದ್ದವರಿಗೆ ಸಪ್ಪೆ ಎನಿಸುವುದು ಸುಳ್ಳೇನಲ್ಲ.

ದೇಹವೊಂದು ಪದಾರ್ಥವಾಗದೇ

ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ

ಅವನನ್ನು ಆವಾಹಿಸಿಕೊಳ್ಳುತ್ತಾಳೆ

ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ

ಹೆರಳುಗಳ ನಡುವೆ ಬಂಧಿಸುತ್ತಾಳೆ

ಪರವಶಳಾಗುತ್ತಾಳೆ ಅವಳು

ಅವನಿಲ್ಲದೇ ಅವಳ ದೇವರು

ಇರುವುದಾದರೂ ಹೇಗೆ?

ಆ ದೇವನಿಗಾಗಿ ಕಾಯುತ್ತಾಳೆ ಅವಳು

ಕಾಯತ್ತಲೇ ಇರುತ್ತಾಳೆ ಅವಳು.

ಎನ್ನುವ ತುಂಬು ಭರವಸೆಯ ಈ ಕವಿ ಒಂದೇ ಧಾಟಿಯಲ್ಲಿ ಬರೆದುದನ್ನೇ ಬರೆಯುತ್ತಿರುವವರ ನಡುವೆ ವಿಭಿನ್ನತೆಯನ್ನೇ ಮುಖ್ಯ ಸ್ಥಾಯಿಯಾಗಿರಿಸಿಕೊಂಡ ಮತ್ತು ಮಹಿಳಾ ಕಾವ್ಯ ಎನ್ನುವ ಹೆಸರಲ್ಲಿ ಹಾಕಿಕೊಂಡಿದ್ದ ಬೇಲಿಯನ್ನು ಸರಿಸಿ ಆ ಅದೇ ಮಹಿಳಾ ಕಾವ್ಯವು ಸಂಕೀರ್ಣತೆಯನ್ನು ಮೀರಿದ ಅನುದಿನದ ಅಂತರಗಂಗೆಯ ಗುಪ್ತಗಾಮಿನೀ ಹರಿವಿನ ವಿಸ್ತಾರ ಮತ್ತು ಆಳದ ಪ್ರಮಾಣವನ್ನು ಗುರ್ತಿಸುತ್ತಾರೆ.

“ತರಗೆಲೆ” ಶೀರ್ಷಿಕೆಯ ಪದ್ಯವೇ ಈ ಕವಿಯು ನಂಬಿರುವ  ಒಟ್ಟೂ ಜೀವನ ಮೌಲ್ಯವನ್ನು ಪ್ರತಿನಿಧಿ ಸುತ್ತಿ ದೆ. ಆ ಸಾಲು

ಹಾರುವ ಪುಟ್ಟ ಗುಬ್ಬಿಯ ಬಾಯೇರಿ

ಮೊಟ್ಟೆಗೆ ಮಂದರಿಯಾಗಿ,

ಪುಟಪುಟ ನೆಗೆತದ

ಮರಿಗುಬ್ಬಿಗಳ ಕಾಲಡಿಗೆ

ರೋಮಾಂಚನಗೊಳ್ಳಬೇಕು

ಚಿಲಿಪಿಲಿಯೂದುವ ತೊದಲು ನುಡಿಗಳಿಗೆ

ಕಿವಿಯಾಗಬೇಕು.

ಜೀವವಿಲ್ಲದ ಒಣ ಎಲೆಯೆಂದವರ

ಕಡೆಗೊಮ್ಮೆ ನಲ್ಮೆಯ ನಗೆ ಬೀರಬೇಕು

ಇಂಥ ಭಾವ ಭಿತ್ತಿಯ ಮತ್ತು ಹುಚ್ಚು ಆದರ್ಶಗಳಿಲ್ಲದ ಇದ್ದುದನ್ನೇ ಸರಿಯಾಗಿ ಸ್ಪಷ್ಟವಾಗಿ ಸದುದ್ದೇಶದ ಚಿಂತನೆಯ ಈ ಕವಿಯ ಐದು ಕವಿತೆಗಳ ಪೂರ್ಣ ಪಾಠ ನಿಮ್ಮ ಓದಿಗೆ ಶಿಫಾರಸು ಮಾಡುತ್ತೇನೆ.

—————————————————————————————–

೧. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ

ನಿನ್ನ ಉತ್ತರೀಯಕ್ಕೆ

ಅರಿವಿಲ್ಲದೇ ಬಳಿದ ನನ್ನ ಕೆಂಪು

ತುಟಿರಂಗು ಇನ್ನೂ ಹಸಿಹಸಿ

ಆಗಿಯೇ ಇದೆ

ಇಳಿಸಂಜೆಗೆ ಹಬ್ಬಿದ ತೆಳು

ಮಂಜಿನಂತಹ ಹುಡುಗ

ಮಸುಕಾಗದ ಕನಸೊಂದು

ಕಣ್ಣಲ್ಲೇ ಕಾದು ಕೂತಿದೆ

ನೀನೊಲಿದ ಮರುಗಳಿಗೆ

ಭವದ ಹಂಗು ತೊರೆದೆ

ಮುಖ ನೋಡದೇ

ಮಧುರಭಾವಕ್ಕೆ ಮನನೆಟ್ಟು

ಒಳಹೃದಯದ ಕವಾಟವ

ಒಪ್ಪಗೊಳಿಸಿ ಮುಗ್ಧಳಾದೆ

ಈಗ ನೆನಪುಗಳ ಮುದ್ದಾಡುತ್ತಿರುವೆ

ಮುದ್ದು ಹುಡುಗ, ನಿನ್ನ ಒಲವಿಂದ

ಬರಡಾದ ಒರತೆಗೂ ಹಸಿಹಸಿ ಬಯಕೆ

ಒಣಗಿದ ಎದೆಗೂ ಲಗ್ಗೆ ಇಡುವ

ಹನಿ ಜಿನುಗಿನ ಕುಪ್ಪಳಿಸುವಿಕೆ

ಗೊತ್ತೇ ನಿನಗೆ?

ಈ ತಂಗಾಳಿಯೂ ತೀರದ ದಿಗಿಲು

ಹತ್ತಿಸಿಕೊಂಡ ಏಕಾಂಗಿ ಮೃಗದಂತೆ

ಸುಂಯ್ಯನೇ ಹಾಗೇ ಬಂದು

ಹೀಗೆ ಹೊರಟುಹೋಗುತ್ತದೆ

ಮರೆತ ಕನಸುಗಳಿಗೆ ಕಡ

ಒದಗಿಸಿ ಬೆನ್ನು ಹತ್ತುತ್ತದೆ

ಈ ಮಳೆಗೂ ಕರುಣೆಯಿಲ್ಲ

ಹಸಿಮನಗಳಲಿ

ಹುಸಿ ಬಯಕೆಗಳ

ಕುದುರಿಸಿ ಕಾಡುತ್ತದೆ

ಇದೆಲ್ಲವನೂ ಹೇಗೆ ಉಲಿಯಲಿ?

ಕಂಪು ಹೆಚ್ಚಾಗಿ ಜೋಂಪು

ಹತ್ತಿದೆ, ಕಣ್ಣುಗಳು ಮತ್ತೇರಿ

ಪಾಪೆಯೊಳಗೆ ಮುದುರಿದೆ

ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು

ಹಚ್ಚುವ ನಿನ್ನ ಬಿಂಬವ

ಹೇಗೆ ಮರೆಮಾಚಲಿ ಹುಡುಗ?

ನೀನಾದರೋ ಭೂವ್ಯೋಮಗಳ ತಬ್ಬಿ

ನಿಂತ ಬೆಳಕ ಕಿರಣ

ಕಣ್ಣ ಕಾಡಿಗೆಯ ಕಪ್ಪು,

ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ,

ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆ

ಬಣ್ಣ ಬಳಿದೆ.

ಮುದ್ದು ಹುಡುಗ,

ಹೀಗಾಗೇ ದಿನಗಳೆದಂತೆ

ನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು

೨.  ಶತಶತಮಾನಗಳ ತಲೆಬರಹ

ತಪ್ಪುವ ಹಾದಿಗಳ ಗುಂಟ

ಅರಿವಿನ ಸೂಡಿ ಸಿಗಬಹುದೇ

ಎಂದು ಕಾಯುತ್ತಲೇ ಇದ್ದಾರೆ

ಜನ

ದಂಧುಗಗಳ ಸಾಲೇ ಸಾಲು

ಎದುರಾಗುತ್ತ ಬೇಸತ್ತ ಮನಸ್ಸುಗಳು

ಒಂದನ್ನೊಂದು ಹದತಪ್ಪುತ್ತಲೇ

ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು

ನನಸಾಗದ ಹಾದಿಯ ಮೇಲೆ

ಸೌಧಕಟ್ಟುತ್ತಿದ್ದಾರೆ

ಶತಶತಮಾನಗಳಿಂದ ಜನ

ಹಾವಿನ ಹಾದಿಯನ್ನು

ಹೂವೆಂದುಕೊಂಡು

ನಂಜಿಗೆ ಬಲಿಯಾಗುತ್ತಿದ್ದಾರೆ ಜನ

ಮಧ್ಯದ ಕಡಲಿಗೆ ಮುಗಿಬಿದ್ದು

ಮದ್ದೆ ಸಿಗದೇ

ಮಾರಿಕೊಂಡ ಮನಸ್ಸಿನ ಕೂಪದೊಳಗಿನ

ನೆನಪುಗಳ ಒಂದೊಂದಾಗಿ

ಗೋರಿಯೊಳಗೆ ಹೂತು ಹಾಕುತ್ತಲೇ

ಮರೆತು ಅದನ್ನೆ ಎದೆಯ

ಹಾಡಾಗಿಸಿಕೊಳ್ಳುತ್ತಿದ್ದಾರೆ

ಶತಶತಮಾನಗಳಿಂದ ಜನ

ಯಾವ ಎತ್ತರಕ್ಕೆ ಏರಿದರೂ

ಜಾರುವ ಭಯದಲ್ಲಿಯೇ

ಬಸವಳಿಯುತ್ತಾರೆ ಜನ

ಬೆಳಕನ್ನು ಮುತ್ತಿಕ್ಕುವ ಆಸೆಗೆ

ಬಲಿಬಿದ್ದು ಕೈತಪ್ಪಿ

ಬೆಂಕಿಯನ್ನು ಅಪ್ಪಿ

ಸುಟ್ಟಗಾಯದ ನೋವಿಗೆ

ಮುಲಾಮು ಹಚ್ಚುತ್ತ

ಮುಲುಗುಡುತ್ತಿದ್ದಾರೆ ಜನ

ಪರಂಪರೆಯ ಮೊರದಲ್ಲಿ

ಬದಲಾವಣೆಯ ಅಕ್ಕಿ ಆರಿಸುತ್ತಾ

ಕಸವರವನ್ನು ಕಸವೆಂದು

ತೆಗೆತೆಗೆದು ಚೆಲ್ಲುತ್ತಿದ್ದಾರೆ ಜನ

ನೆಮ್ಮದಿಯ ಹುಡುಕುತ್ತಾ

ದೇಗುಲಗಳ ಘಂಟೆಗಳ ಬಾರಿಸುತ್ತ

ಪರಮಾತ್ಮ ಎನ್ನುತ್ತ

ಪಂಥಗಳ ಕಟ್ಟಿಕೊಳ್ಳುತ್ತಲೇ

ನಡೆದಿದ್ದಾರೆ

ಶತಶತಮಾನಗಳಿಂದ ಜನ

೩. ಗುಪ್ತಗಾಮಿನಿ

ಅಲ್ಪ ನುಡಿಯಲ್ಲಿ ತತ್ವ ವಿಚಾರ

ಪುರಾಣಗಳ ಪಠಣ, ನಿತ್ಯ ವಾಚನ

ವಾಚಾಳಿತನವಿಲ್ಲ-ವಚನ ಬಲು ಭಾರ

ಮಿತ ಭಾಷಿ ನಾನೆಂಬ

ಕೀಟಕೊರೆತ-ಮೆದುಳು ಊತ

ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ

ಏರುವ ಮೊದಲು ಗದ್ದುಗೆ

ನನಗಾರು ಸಮನಿಲ್ಲ

ನನ್ನಿಂದಲೆ ಎಲ್ಲ ಸರ್ವಥಾ ಸಲ್ಲ

ಅಲ್ಲೂ ವಾಸನೆ

ನಾ ಸರಳ, ಸಜ್ಜನ ನೀತಿ ನೇಮಗಳ

ಪರಿಪಾಲಕ, ಸತ್ಯ ಶಾಂತಿಗಳ

ಪೂಜಕ, ಎನಗಿಂತ ಹಿರಿಯರಿಲ್ಲ

ನನ್ನಂತೆ ಯಾರಿಲ್ಲ, ಕನವರಿಕೆ

ಬೇರೆನಿಲ್ಲ, ಒಳಬೆರಗು-ಅದೇ

ಯಾವ ಧನ್ವಂತರಿಯ ಬಳಿಯಿಲ್ಲ ಮದ್ದು

ಬಿಳಿಯ ಜುಬ್ಬದ ಒಳಗೆ

ಕರಿಯ ಕೋಟಿನ ಗುಂಡಿಯಲ್ಲಿ

ರೇಷ್ಮೇ ಮಕಮಲ್ಲಿನ ನುಣುಪಲ್ಲಿ

ಸದ್ದಿಲ್ಲದೇ ಠೀಕಾಣಿ

ಜರಡಿ ಹಿಡಿದರೂ ಜಾರದಂತೆ

ಅಂಟಿಕೂತಿದೆ

ನಾನು ಹೋದರೆ ಹೋದೇನು

ಕನಕನಿಗಾದ ಉದಯಜ್ಞಾನ ನಮಗೇಕಿಲ್ಲ

ಬಿಡು ಆ ಹಂತ ಏರಿಲ್ಲ

ಆ ಮರ್ಮ ಸರಳಿಲ್ಲ.

೪. ಪದಗಳೊಂದಿಗೆ ನಾನು

ಪದಗಳೆಂದರೆ ನನಗೆ ಅಚ್ಚುಮೆಚ್ಚು

ದಿನಂಪ್ರತಿಯ ಅಭ್ಯಾಸವೂ

ಪದಗಳ ಹೊಸೆಯುವುದರಲ್ಲಿ,

ಮಸೆಯುವುದರಲ್ಲಿ:

ಆದರೆ ಆ ಪದಗಳಿಗೆ ಶಬ್ದಕೋಶದಿ

ಅರ್ಥಗಳ ಹುಡುಕಿ ಸೋತಿದ್ದೇನೆ.

ಹೊಸ ಹಾಡಿಗೆ ಕುಣಿದಾಡುವ

ನವಿಲುಗಳ ದಾರಿ ಕಾಯುತ್ತ,

ನಾನೇ ನವಿಲಾಗಬಯಸುತ್ತೇನೆ.

ಮತ್ತೆ ಕುಕಿಲದ ಗಾನಕ್ಕೆ ಪದ ಜೋಡಿಸಿ

ಶ್ರುತಿ ಕೂಡಿಸಿ ಹಾಡಾಗ ಬಯಸುತ್ತೇನೆ.

ಪದಗಳು ಪರಾರಿಯಾಗುತ್ತವೆ

ಆಗೊಮ್ಮೆ ಈಗೊಮ್ಮೆ ಸುಳಿವುಕೊಡದೆ,

ಪಕ್ಕಾ ಪರದೇಶಿಯಂತೆ.

ಹಳಹಳಿಸಿ ನೋಡುತ್ತೇನೆ:

ಪದಗಳ ಜೋಡಿಸಿ ಇಡಲಾಗದ್ದಕ್ಕೆ.

ನಡುರಾತ್ರಿಯಲ್ಲಿ ಕಂದೀಲ ಬೆಳಕಿನಲ್ಲಿ

ನಡಗುವ ಕೈಗಳು

ಆಡಿಯಾಡುತ್ತವೆ ಕೆತ್ತಿದ ಪದಗಳ ಮೇಲೆ,

ಕಂಗಳಿಂದ ಉದುರಿದ ಮುತ್ತೊಂದು

ಕರ ಸೋಕಿದಾಗ ಎಚ್ಚರ ಗೊಳ್ಳುತ್ತ

ಸಡಿಲವಾಗಿಲ್ಲ ಎಲ್ಲಪದಗಳು

ಅವಕ್ಕೆ ಸಂದೂಕದ ಪೆಟ್ಟಿಗೆಯಲ್ಲಿಟ್ಟು

ಕಾಪಿಡು ಎನ್ನುತ್ತದೆ ಮನಸ್ಸು.

ಪದಗಳೆಂದರೆ ನನಗೆ ಅಲರ್ಜಿ

ನನ್ನೊಳಗಿನ ನನ್ನನ್ನು

ಹೊರಗಟ್ಟಿ ಅಣಕಿಸಿ ನಗುತ್ತವೆ.

ಹಾಡಾಗುವ ಬದಲು ಹಾವಾಗಿ

ಹಗೆಯ ಹೊಗೆ ಹಬ್ಬಿಸುತ್ತವೆ

ಪದಗಳೆಂದರೆ ನನಗೆ ಅಲರ್ಜಿ

ಪಟ್ಟಾಂಗದಲ್ಲಿ ಪದಗಳ ಭರ್ಜರಿ

ಬೇಟೆಯಾಡುವ ನಾನು

ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ.

ಪದಗಳೆಂದರೆ ಅಚ್ಚುಮೆಚ್ಚು ಅಲರ್ಜಿ ನನಗೆ

ಪರಪರನೆ ಕೆರೆದುಕೊಳ್ಳುವ ಚಟವಿದ್ದ ಹಾಗೆ.

೫. ಹುಡುಕಿ ಕೊಡು

ಅವಳ ಮಾಂಸ ಮಜ್ಜೆಯ

ನೆರಳು, ಮುಟ್ಟಿನ ವಾಸನೆಬಡಿಯದೇ,

ಪೊಗರಿದ ಅವನೆಂಬವನ  ಹುಡುಕಿ

ಸೋತಿದ್ದೇನೆ,

ಹುಡುಕಿ ಕೊಡು ಹೇ! ಪ್ರಭು.

ಒಡಲ ಮಾಂಸದ ಹೊದಿಕೆಯೊಳಗೆ

ಜೀವವ ಹದವಾಗಿ ಕಾಪಿಟ್ಟು

ಅವನುಸಿರ ಹಸಿರ ಮಾಡಿ

ಹಣ್ಣಾದವಳು

ರಕ್ತ ಹೀರಿದ ಬಟ್ಟೆಯ ಹಿಂಡಿ

ನಿಂತವಳ ಸೆರಗು ಹಿಡಿದು

ಕಾಡಿದವನ ಎದೆಗವುಚಿಕೊಂಡವಳು

ಮಾಂಸಕಲಶದ ತೊಟ್ಟು

ಬಾಯಿಗಿಟ್ಟೊಡನೆ ಕಿರುನಕ್ಕು

ಕಣ್ಣುಮಿಟುಕಿಸಿದವನ

ಲೊಚಲೊಚ ರಕ್ತ ಹೀರುವವನ

ಕಣ್ಣೊಳಗೆ ತುಂಬಿಸಿಕೊಂಡವಳು

ಅವಳಿಲ್ಲದೇ ಜಗದ ಬೆಳಕಿಗೆ

ಕಣ್ಣು ತೆರೆದವನ ಹುಡುಕಿ ಸೋತಿದ್ದೇನೆ

ಹುಡುಕಿ ಕೊಡು ಹೇ! ಪ್ರಭು

ಅವನೊಳಗಿನ ಬೆಂಕಿಗೆ

ತಂಪು ಬಟ್ಟಲಾದವಳು

ಆ ಬೆಂಕಿಯ ತಣ್ಣಗಾಗಿಸಿ

ಉದರದೊಳು ಹೊತ್ತವಳು

ನೋವ ಹಾಸಿಗೆಯಲ್ಲಿ ಮಿಂದು

ಹೆತ್ತ ಜೀವವ ಅವನ ಹೆಸರಿಗೆಂದೇ

ಬಿಟ್ಟವಳು

ಅವಳಿಲ್ಲದೇ ಬೆಳೆದ

ಅವನೆಂಬವನ ಹುಡುಕಿ ಸೋತಿದ್ದೇನೆ.

ಆದರವನ ದೇವರಿಗೆ ಅವಳ

ಮಾಂಸ ಮಜ್ಜೆಯ ನೆರಳು,

ಮುಟ್ಟಿನ ವಾಸನೆ ಮೈಲಿಗೆಯಂತೆ.

ಆ ದೇವನೆಂಬವನ

ಹುಡುಕಿ ಕೊಡು ಹೇ! ಪ್ರಭು

************************************************************************

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ

One thought on “

Leave a Reply

Back To Top