ಅಂಕಣ ಬರಹ

“ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ

ಉತ್ತರ…”

top view photography of broken ceramic plate

ಆಗಾಗ ಕೆಲವರು ಬರಹವನ್ನೂ ಮತ್ತು ಬರೆದ ಬರಹಗಾರನನ್ನೂ ಒಂದೆನ್ನುವಂತೆ ಭಾವಿಸಿ ಅನುಮಾನದಿಂದ ನೋಡುವುದನ್ನು ನೋಡುತ್ತಿರುತ್ತೇವೆ. ಗೆಳೆಯರು ಇದನ್ನು ಬಾರಿ ಬಾರಿ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇದು ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಬಾರಿ ಎದುರಿಸಬೇಕಾಗಿ ಬರುವ ಸಾಮಾನ್ಯ ಸನ್ನಿವೇಶವೂ ಆಗಿರುತ್ತದೆ. ಆದರೆ ಓದುಗರು ಒಂದು ಮಾತನ್ನು ನೆನಪಿನಲ್ಲಿಡಬೇಕು. ಅವನು ಬರಹಗಾರ… ತನಗೆ ಕಂಡ, ಅನುಭವಿಸಿದ, ಇರರ ಅನುಭವದಿಂದ ಅರಿತ ಎಲ್ಲವನ್ನೂ ಒಂದಾಗಿಸಿ ಬರಹದ ಮೂಲತತ್ವದ ಅಚ್ಚಿಗೆ ಸುರಿದು ಓದುಗರಿಗೆ ಮೆಚ್ಚುಗೆಯಾಗುವಂತೆ ಉಣಬಡಿಸುತ್ತಾನೆ. ಸದಾ ತನ್ನದೇ ವ್ಯಯಕ್ತಿಕ ಅನುಭವವನ್ನು ಬರೆಯುವುದಾದರೆ ಅದು ಅವನ ಆತ್ಮಚರಿತ್ರೆ ಆಗುತ್ತದೆ ಹೊರತು ಸಾಹಿತ್ಯ ನಿಸಿಕೊಳ್ಳುವುದಿಲ್ಲ.

ಹೆಣ್ಣೊಬ್ಬಳು ಲೈಂಗಿಕ ವಿವರಗಳನ್ನು ತನ್ನ ಬರಹಗಳಲ್ಲಿ ಬಳಸಿದಾಕ್ಷಣ ಅವಳ ಚಾರಿತ್ರ್ಯವಧೆಗೆ ನಿಂತುಬಿಡುವುದು ಎಷ್ಟು ಸಮಂಜಸ. ಹಾಗಂತ ಪುರುಷ ಲೇಖಕರ ಸ್ಥಿತಿಯೂ ಚನ್ನಾಗೇನೂ ಇಲ್ಲ. ಆದರೆ ಸಮಾಜ ಅವರಿಗೆ ಒಂದು ಸಣ್ಣ ಮಾರ್ಜೀನನ್ನು ಕೊಡುತ್ತದೆ ಅಷ್ಟೇ. ಇವತ್ತಿಗೆ ಪರಿಸ್ಥಿತಿ ಒಂಚೂರು ಸುಧಾರಿಸಿಕೊಂಡಿದೆ ಆದರೂ ಕುಹಕದ ನಗು ಮತ್ತು ಅನುಮಾನದ ದೃಷ್ಟಿ ಸಂಪೂರ್ಣ ಮರೆಯಾಗಿಲ್ಲ. ನವರಸ ಎಂದರೆ ಶೃಂಗಾರ, ಹಾಸ್ಯ, ವೀರ, ಅದ್ಭುತ, ಭಯಾನಕ, ಶಾಂತ, ಕರುಣಾ, ರೌದ್ರ, ಭೀಭತ್ಸ… ಎಲ್ಲವೂ ಸೇರಬೇಕು. ಅದೇ ರೀತಿ ಪ್ರತಿ ಕಲೆಯೂ ನವರಸಗಳಿಂದಲೇ ತುಂಬಿ ಪರಿಪೂರ್ಣವಾಗಬೇಕು. ಅದಕ್ಕೆ ಸಾಹಿತ್ಯವೂ ಹೊರತಲ್ಲ. ಹೀಗಿರುವಾಗ ಅದರಲ್ಲಿನ ಒಂದು ಭಾವವನ್ನೇ ನಿರಾಕರಿಸಿಬಿಡುವುದು ಪರಿಪೂರ್ಣತೆಗೆ ಧಕ್ಕೆಯಾದಂತಲ್ಲವೇ…

blue and red triangles wallpaper

ಒಮ್ಮೆ ನನ್ನ ಒಂದು ಕತೆಯನ್ನು ಓದಿದ ಗೆಳತಿಯೊಬ್ಬಳು “ಅವನು ಯಾರು, ಈಗ ಎಲ್ಲಿದ್ದಾನೆ” ಎಂದೆಲ್ಲಾ ಕೇಳಲು ಶುರುಮಾಡಿದಳು. “ಇಲ್ಲ ಮಾರಾಯ್ತಿ, ಹಾಗೆಲ್ಲ ಎಂತದ್ದೂ ಇಲ್ಲ. ಯಾರದ್ದೋ ಕತೆ ಅದಕ್ಕೆ ಸ್ಫೂರ್ತಿ ಅಷ್ಟೇ… ಮತ್ತೆ ಉಳಿದದ್ದೆಲ್ಲ ಕಟ್ಟುಕತೆ ಅದು…” ಎಂದು ಎಷ್ಟು ಹೇಳಿದರೂ ಅವಳು ನಂಬಲು ಸಿದ್ಧಳಾಗಲೇ ಇಲ್ಲ! ಇರಲಿ, ನಮ್ಮ ಸುತ್ತಮುತ್ತಲ ಬದುಕು, ಸಮಾಜ ನಮ್ಮನ್ನು ಬಹಳಷ್ಟು ಪ್ರಭಾವಿಸುತ್ತವೆ. ಆ ಪ್ರಭಾವವೇ ನಮ್ಮನ್ನು ಬೆಳೆಸುತ್ತವೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ತೀರಾ ಹತ್ತಿರದ ಸಂಬಂಧಿಗಳೇ ನಮ್ಮ ಕತೆ ಅಥವಾ ಕವಿತೆಯ ನಾಯಕರೂ ಆಗಿಬಿಡುತ್ತಾರೆ. ಅದು ಇನ್ನೊಂಥರದ ಬಿಸಿತುಪ್ಪ. ಅದು ಅವರು ಇಷ್ಟಪಡುವಂತಹ ರೀತಿಯಲ್ಲಿದ್ದರೆ ಸರಿ, ಇಲ್ಲವಾದರೆ ಅವರ ವಿರಸವನ್ನೂ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ. ಇದೆಲ್ಲವನ್ನೂ ಮೀರಿ ಬರಹಗಾರ ಬರಹವನ್ನು ಉಳಿಸಬೇಕಿರುತ್ತದೆ. ಮನುಷ್ಯರು ಅಳಿಯುತ್ತಾರೆ. ಪಾತ್ರಗಳು ಉಳಿಯುತ್ತವೆ. ಬರಹಗಾರ ಅಳಿಯುತ್ತಾನೆ ಪುಸ್ತಕಗಳಷ್ಟೇ ಉಳಿಯುತ್ತವೆ. ಬರಹ ಒಂದಿಡೀ ಕಾಲಮಾನದ ಧ್ಯೋತಕವಾಗಿರುತ್ತದೆ. ಒಬ್ಬ ವ್ಯಕ್ತಿಯ ವಿವರ ಬರಹದ ಮೂಲಕ ಸಾಮಾನ್ಯೀಕಣಗೊಳ್ಳುತ್ತದೆ. ಇಲ್ಲವಾದರೆ ಓದುವ ಬಹಳಷ್ಟು ಮಂದಿ ಇದು ನನ್ನದೇ ಮಾತು, ಇದು ನನ್ನದೇ ವಿವರ, ಇದು ನನ್ನದೇ ಪರಿಸ್ಥಿತಿ ಎನ್ನುವಂತೆ ಓದಿಕೊಳ್ಳುವರಲ್ಲ ಹೇಗೆ…

ಮತ್ತೆ ಬರಹಗಾರನಿಗೂ ತಾನು ಕಂಡುಂಡ ವಿಚಾರವನ್ನು ಕತೆ ಅಥವಾ ಕವಿತೆಗೆ ಬ್ಲೆಂಡ್ ಮಾಡುವ ಕಲೆ ತಿಳಿದಿರಬೇಕಿರುತ್ತದೆ.  ಆದರೆ ಒಂದು ಭಾವತೀವ್ರತೆಯಲ್ಲಿ ಬರೆಯ ಹೊರಟ ಹುಮ್ಮಸ್ಸಿನಿಂದಾಗಿ ಬರಹ ವಾಚ್ಯವಾಗುವುದನ್ನು ತಪ್ಪಿಸುವುದು ಕಷ್ಟವಾಗಿಬಿಡುತ್ತದೆ. ಆಗ ಪು.ತಿ.ನ.ರು ಹೇಳಿದ ಭವನಿಮಜ್ಜನ ಮತ್ತು ಲಘಿಮಾ ಕೌಶಲ ನೆನಪಾಗಬೇಕು ಮತ್ತು ಈ ಕಷ್ಟದಿಂದ ಪಾರಾಗುವುದನ್ನು ಪ್ರತಿಯೊಬ್ಬ ಬರಹಗಾರನೂ ಕಲಿಯಬೇಕು. ಎಲ್ಲವನ್ನೂ ವಾಚ್ಯವಾಗಿ ಹೇಳುವುದಾದರೆ ಕತೆ, ಕವಿತೆ, ಪ್ರಬಂಧ… ಎನ್ನುವ ಯಾವ ಸಾಹಿತ್ಯ ಪ್ರಕಾರಗಳ ಅವಶ್ಯಕತೆಯೂ ಇರುವುದಿಲ್ಲ. ಯಾವುದೇ ಬರಹ ವಾಚ್ಯವಾಗುತ್ತಾ ಹೋದಂತೆ ಓದುಗರ ಚಿಂತನೆಗೆ, ವಿಚಾರಕ್ಕೆ ಅವಕಾಶವೇ ಇಲ್ಲದಂತೆ ಆಗಿಬಿಡುತ್ತದೆ. ಎಲ್ಲವನ್ನೂ ಬರಹಗಾರನೇ ಹೇಳಿಬಿಟ್ಟ ಮೇಲೆ ವಿಚಾರ ಮಾಡಲಿಕ್ಕೆ ಇನ್ನೇನುಳಿಯುತ್ತದೆ?! ವಾಚ್ಯತೆ ಬರಹಗಾರನ ಬಹು ದೊಡ್ಡ ಶತ್ರು. ಅದನ್ನು ಮೀರುವುದೆಂದರೆ, ಮೊಸರನ್ನಕ್ಕೆ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟು ಸೇವಿಸುವಷ್ಟೇ ನಾಜೂಕಾಗಿ ಮಾಡಬೇಕಾದ ಕೆಲಸ. ಆ ನಾಜೂಕುತನ ಅಭ್ಯಾಸ ಮತ್ತು ಅಧ್ಯಯನ ಬಲದಿಂದ ಸಾಧ್ಯ.

ಅವಸರದಿಂದ ಬರೆಯಲು ಹೊರಡುವ ಇಂದಿನ ಬರಹಗಾರರಿಗೆ ಸಾಹಿತ್ಯದ ಇತಿಹಾಸ ಬೇಕಿಲ್ಲ. ಹಿರಿಯರನ್ನು ಓದುವುದು ಬೇಡವಾಗುತ್ತಿದೆ. ಒಂದಷ್ಟು ಬರಹಗಳು ಪ್ರಕಟವಾದ ಕೂಡಲೇ ಅಹಮ್ಮಿಗೆ ಗುರಿಯಾಗಿಬಿಡುತ್ತೇವೆ. ಅದು ನಮ್ಮ ವಯಸ್ಸಿಗೆ ಸಹಜವಾದ ಕಾರಣ ಅದನ್ನು ಮೀರುವುದು ಸುಲಭವಲ್ಲ. ಆದರೆ ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಆ ಪೊರೆ ತನ್ನಿಂತಾನೆ ತನ್ನ ಅಸ್ತಿತ್ವವನ್ನು ಕಳಚಿಕೊಳ್ಳುತ್ತದೆ. ಯಾವುದೇ ಕಲೆಯಿರಲಿ ಅದು ಮನಸ್ಸನ್ನು ತಟ್ಟುವಂತಹ ಶಕ್ತಿಯನ್ನು ಹೊಂದಿರುತ್ತದೆ. ಅದು ಮೊದಲು ಕಲಾವಿದನನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ. ನಂತರವೇ ಅದು ಅದರ ಆರಾಧಕನನ್ನು ತಲುಪುವುದು. ಒಮ್ಮೆ ಅದು ತನ್ನ ಹಿಡಿತಕ್ಕೆ ಯಾರನ್ನಾದರೂ ಸಿಲುಕಿಸಿಕೊಂಡುಬಿಟ್ಟಿತೆಂದರೆ ಅದು ಆ ವ್ಯಕ್ತಿಯನ್ನು ವಿನೀತನನ್ನಾಗಿಸಿಬಿಡುತ್ತದೆ. ಅಹಂಕಾರ ಇನ್ನಿಲ್ಲ ಅವನಲ್ಲಿ! ಸಾಹಿತ್ಯದ ಅಂತಿಮ ಪ್ರಭಾವವೂ ಅದೇ ಆಗಬೇಕಿದೆ. ಸಾಹಿತ್ಯ ಒಟ್ಟಾರೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸಬೇಕು, ಮತ್ತದು ಧನಾತ್ಮಕವಾಗಿಯೇ… ಅದೇ ಅದರ ನಿಜವಾದ ಶಕ್ತಿ.

ಹೀಗೆ ಇಷ್ಟೆಲ್ಲಾ ಸಾಹಿತ್ಯದ ಧ್ಯಾನ, ಗುಣಗಾನ… ಮಾಡಿಯಾದ ನಂತರವೂ ಅದರ ನಾಡಿ ಮಿಡಿತ ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ…

************************************************************

ಆಶಾ ಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

One thought on “

Leave a Reply

Back To Top