ಅಂಕಣ ಬರಹ

ಕಬ್ಬಿಗರ ಅಬ್ಬಿ

ನೆಲದವ್ವನ ಒಡಲ ಜೀವಜಲ

A large diameter well with a brick wall. The well wall is extended... |  Download Scientific Diagram

ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು.

Hand-Dug Well Inspection - InterNACHI®

ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ ಪಾತ್ರದೊಳಗಿಂದ ಅನುರಣಿಸುವ ಶಬ್ಧ, ಬಾವಿಯ ಜತೆಗೆ ಬಿಂದಿಗೆ ಪಿಸುಮಾತಲ್ಲಿ ಸಲ್ಲಪಿಸುವಂತೆ ಆಪ್ತವೂ ನೈಜವೂ ಆಗಿತ್ತು. ತೆಂಗಿನ ಹುರಿಹಗ್ಗ ಹಿಡಿದು ಒಂದೊಂದೇ ಉಸಿರಿನ ಜತೆಗೆ ಒಂದೊಂದೇ ಕೈಯಳತೆಯಷ್ಟು ಎಳೆಯುತ್ತಾ ಬಾವಿಯ ಆಕರ್ಷಣೆಗೆ ವಿರುದ್ಧವಾಗಿ ಕೊರಳಿಗೆ ಉರುಳು ಸಿಕ್ಕಿಸಿದ ಬಿಂದಿಗೆ ಮೇಲೇರುತ್ತಿತ್ತು. ಅಕ್ಕ ಕೊಡ ಬಗ್ಗಿಸಿ ನನ್ನ ಪುಟ್ಟ ಬೊಗಸೆ ತುಂಬಾ ನೀರು ಸುರಿದಾಗ ಅವಳ ಸ್ತ್ರೀ ಸಹಜ ಪ್ರೀತಿಯೇ ಬೊಗಸೆ ತುಂಬಾ. ನೀರೂ ಅಷ್ಟೇ, ನೆಲದವ್ವನ ಒಡಲ ಜೀವ ಜಲವದು.

ವೃತ್ತಾಕಾರದ ಕಟ್ಟೆ, ಬಾವಿಯ ಮುಖಪರಿಚಯ. ಬಾವಿಯೊಳಗೆ ಇಣುಕಿದರೆ, ನಿಶ್ಚಲವಾಗಿ ಶಾಂತವಾಗಿ ನೀರು, ಆಗಸಕ್ಕೂ, ಬಾವಿಯ ಒಳ ಅಂಚಿಗೂ ಕನ್ನಡಿಯಾಗುತ್ತೆ.  ಬಾವಿಯೊಳಗೆ ಇಣುಕಿದರೆ ಅದು ನಿಮಗೆ ನಿಮ್ಮದೇ ಮುಖವನ್ನು ತೋರಿಸುತ್ತದೆ, ಗಗನದ ಬಿಂಬದ ಹಿನ್ನೆಲೆಯಲ್ಲಿ. ತಿಳಿನೀರಿಗೆ ಕಡಲೇ ಗಾತ್ರದ ಕಲ್ಲೆಸೆದರೆ, ಅಷ್ಟೂ ಬಿಂಬಗಳು ವಕ್ರ ವಕ್ರವಾಗಿ, ಅಲೆಗಳ ಹಿಂದೆ ಅಲೆಯತ್ತವೆ.

ಬಾವಿಯ ಇನ್ನೊಂದು ವಿಶೇಷತೆ, ಶಬ್ಧದ ಪುನರಾವರ್ತನೆ( ಇಖೋ) ಮತ್ತು ತತ್ಪರಿಣಾಮವಾಗಿ ಸ್ವರವರ್ಧನೆ. ಮಕ್ಕಳು ಬಾವಿಯ ಮುಖಕ್ಕೆ ಮುಖ ಹಚ್ಚಿ, ಹೂಂ.. ಅಂದರೆ, ಬಾವಿಯೊಳಗಿಂದ ಯಾರೋ ಹೂಂ…ಹೂಂ.. ಅಂತ ಸ್ವರಾನುಕರಣೆ ಮಾಡಿದಂತೆ, ಮಕ್ಕಳಿಗೆ ಬಾವಿಯೊಳಗೆ ರಾಕ್ಷಸ ಇದ್ದಾನೋ ಎಂಬ ಕಲ್ಪನೆ ಮೂಡಿ, ಬಾವಿಯೊಳಗಿಂದ ಕಥೆಯ ಕವಲುಗಳು ಚಿಗುರುತ್ತವೆ.

ಬಾವಿಯೊಳಗೆ ನೀವು ಇಳಿದು ಮೇಲೆ ನೋಡಿದರೆ, ನಿಮಗೆ ಕಾಣಿಸುವುದು ಆಗಸದ ಒಂದು ಚಿಕ್ಕ ತುಂಡು ಮಾತ್ರ.  ಬಾವಿ ಆಳವಾಗಿದ್ದರೆ, ಬಾವಿಯೊಳಗಿಂದ ಹೊರಜಗತ್ತಿನತ್ತ ನೋಟದ ವ್ಯಾಪ್ತಿ, ನಿಮ್ಮ ಕಣ್ಣಿನ ಕ್ಷಮತೆಗಿಂತ ಹೆಚ್ಚು, ಬಾವಿಯ ಹೊರಬಾಯಿಯ ಅಳತೆಯ ಮೇಲೆಯೇ ಅವಲಂಬಿಸಿರುತ್ತೆ.

ಬಾವಿಯ ಅಂಚಿನಲ್ಲಿಯೂ  ಜರಿಗಿಡಗಳಂಥಹಾ ಹತ್ತು ಹಲವು ಸಸ್ಯ ಪ್ರಬೇಧಗಳು ಬೇರಿಳಿಸಿ ಜೀವನೋತ್ಸಾಹದ ದ್ಯೋತಕವಾಗಿ ತೊನೆಯುತ್ತವೆ.  ನೀರ ಸೆಲೆಯೇ ಜೀವಸಂಕುಲದ ನೆಲೆ ಎನ್ನುವ ಪ್ರಪಂಚವದು. ಬಾವಿಯೊಳಗೆ ಅಂಚುಗಳಲ್ಲಿ ಪಾಚಿಯೂ ಬೆಳೆಯುತ್ತೆ.  ಬಾವಿಯೊಳಗೆ ಕಪ್ಪೆ, ಅದರ ಮಕ್ಕಳು ಮರಿಗಳು ಎಲ್ಲಾ ಸೇರಿ ಸುಖೀ ಸಂಸಾರ ಕಟ್ಟುತ್ತವೆ.

ಬಾವಿಯಲ್ಲಿ ಜೀವಜಲದ ಒರತೆಯಿದೆಯಷ್ಟೇ. ಅದರ ಜತೆಗೇ ಬಾವಿಯಿಂದ ನೀರು ಯಾವುದೋ ಸೆರೆಯಲ್ಲಿ ಹೊರ ಹರಿಯುವ ದಾರಿಯೂ ಇದೆ. ಈ ಒಳಹರಿವು ಮತ್ತು ಹೊರ ಹರಿವಿನ ಚಲನಶೀಲತೆಯಿಂದಾಗಿ ಬಾವಿಯ ಜಲಜ್ಞಾನಸಂಗ್ರಹ ಒಂದು ಮಟ್ಟದಲ್ಲಿರುತ್ತೆ ಮತ್ತು, ನೀರು ಸದಾ ಸ್ವಚ್ಛ ನೂತನವಾಗಿರುತ್ತೆ.

ಬಾವಿ ನೀರು ನೆಲದಮ್ಮನ ಮೊಲೆಹಾಲಿನಂತೆ. ಮಣ್ಣಿನ ಖನಿಜ ಸಾರಗಳು, ಅದರ ವಿಶಿಷ್ಠವಾದ ಪರಿಮಳ ನೀರಿಗೆ ರುಚಿ ಆರೋಪಿಸುತ್ತೆ. ಬಾವಿನೀರು ನಮ್ಮ ನೋಟಕ್ಕೆ ಸಿಗದ ಲಕ್ಷಾಂತರ ಜೀವಾಣುಗಳ  ಸಾಮ್ರಾಜ್ಯವೂ ಹೌದು.

ಲಂಗದಾವಣಿ ತೊಟ್ಟ  ಹುಡುಗಿಯರು ಬಿಂದಿಗೆ ಹಿಡಿದು ಬಾವಿಯ ನೀರು ಕೊಂಡೊಯ್ಯಲು ಬಂದರೆ ಅದನ್ನು ನೋಡಿ ಹಳ್ಳಿಗೆ ಹಳ್ಳಿಯೇ ಗಜಲ್ ಬರೆಯುತ್ತೆ. ಬಾವಿ ಕಟ್ಟೆಯ ಸುತ್ತಮುತ್ತ, ಪ್ರಣಯಗೀತೆಗಳ ಗುಂಜಾರವ ಗುನುಗುನಿಸುತ್ತೆ. ಜತೆ ಜತೆಗೆ ಬಾವಿಯ ನೀರು ಕೊಂಡೊಯ್ಯಲು ಬಂದ ಗೃಹಿಣಿಯರು ಬಾವಿಯೊಳಗಿನ ದರ್ಪಣದಲ್ಲಿ, ಪರಸ್ಪರ ತಮ್ಮ ಭಾವವನ್ನೂ ಬಿಂಬಿಸಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಕಣ್ಣೀರ ಬಿಂದುಗಳು, ಆನಂದ ಭಾಷ್ಪಗಳು ಬಾವಿ ನೀರಿನಲ್ಲಿ ತಂಪು ಕಾಣುತ್ತವೆ.

ಬೇಂದ್ರೆಯವರ ಪುಟ್ಟ ಮಗಳು ಒಂದು ಸಂಜೆ ಬಿಂದಿಗೆ ಹಿಡಿದು, ಬಾವಿಯತ್ತ ಹೆಜ್ಜೆ ಹಾಕುವ ದೃಶ್ಯ ನೋಡಿದ ನಡಿಗೆಯ ಹೆಜ್ಜೆಯ ಗೆಜದಜೆಯ ಲಯದಂತಹಾ ” ಸಂಜೆಯ ಜಾವಿಗೆ ಹೊರಟಾಳ ಬಾವಿಗೆ” ಅಂತ ಬರೆಯುತ್ತಾರೆ!.

Village Women with Clay Pot | Indian dolls, Cute dolls, Dolls

“ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||

ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||

ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||

ಏನಾರ ನಡಿಗೆ | ಯಾವೂರ ಹುಡಿಗೆ ||

ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||”

ಬೇಂದ್ರೆಯವರ ಪದಗಳು ನಾಟ್ಯಾಂಗನೆಯ ಪದಗಳು. ಹುಡುಗಿ, ಪುಟ್ಟ ಸೀರೆಯುಟ್ಟು, ನಡೆಯೋದಲ್ಲ, ಹಾದಿಗೆ ಪುಟ್ಟ ಪಾದಗಳಿಂದ ಹಾದಿಯನ್ನು ಒದಿಯೂತ ನಡೆಯುವಾಗ, ಆಕೆಯ ಗೆಜ್ಜೆ, ಹೆಜ್ಜೆ ಮತ್ತು ನಡಿಗೆಯಲ್ಲಿ ಸಂಭ್ರಮ ಪದ್ಯವಾಗಿದೆ.  ಆಕೆ ಬಿಂದಿಗೆಯಲ್ಲಿ ಜಲತುಂಬಿ ಹಿಂತಿರುಗಿ ನಡೆಯುವ ಭಂಗಿ ಈ ಕೆಳಗಿನ ಸಾಲುಗಳು.

 “ಮೂಗಿನ ನೇರಿಗೆ | ಹೊರಳೀದೆ ಊರಿಗೆ ||

ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||

ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||

ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||

ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ”

ಪು.ತಿ.ನರಸಿಂಹಾಚಾರ್ ಅವರು ಬಾವಿಯ ಮೂಲಕ ತತ್ವದರ್ಶನ ಮಾಡುತ್ತಾರೆ.

” ಬಾಯಾರಿಕೆಯೊಳು ಬೇಯುತ ಬಂದಿತು

ಬುದ್ಧಿ ಎದೆಯ ಬಾವಿಯ ಬಳಿಗೆ

ಹೇರಾಳದ ಕಗ್ಗತ್ತಲ ತಳದೊಳು

ಅಮೃತ ರುಚಿಯ ತಿಳಿನೀರೆಡೆಗೆ “

ತರ್ಕಿಸುವ ಮನಸ್ಸು ಚಿಂತನೆಯ ಬೆಂಕಿಯಲ್ಲಿ ಕಾದು, ಬಾಯಾರಿ ಬರುವುದು ಎದೆಯ ಬಾವಿಯ ಬಳಿಗೆ. ಕಾವ್ಯದ ಭಾಷೆಯಲ್ಲಿ, ಎದೆ ಎಂದರೆ ಭಾವ, ಕಲ್ಪನ

, ಪ್ರೀತಿ. ಆ ಬಾವಿಯ ತಳದಲ್ಲಿದೆ ತಿಳಿಯಾದ ನೀರು, ತಿಳಿವಿನ ನೀರು. ಆ ಅರಿವಿಗೆ ಅಮೃತದ ರುಚಿಯಿದೆ, ಬುದ್ಧಿ ಕೆತ್ತುವ ಲಾಜಿಕ್ ನ ವಾಸ್ತುಶಿಲ್ಪಕ್ಕೆ ಆ ರುಚಿಯಿಲ್ಲ.

ಗೋಪಾಲಕೃಷ್ಣ ಅಡಿಗರ ಕವನ, ‘ ಭೂತ’ ಎಂಬ ಕವನದಲ್ಲೂ ಬಾವಿ ಪ್ರತಿಮೆಯ ಅಪೂರ್ವ ಪ್ರಯೋಗವಿದೆ.

“ಬಾವಿಯೊಳಗಡೆ ಕೊಳವೆ ನೀರು ; ಮೇಲಕ್ಕಾವಿ ;

ಆಕಾಶದುದ್ದವೂ ಅದರ ಕಾರಣ ಬೀದಿ ;

ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು

ನವಮಾಸವೂ ಕಾವ ಭ್ರೂಣರೂಪಿ—

ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ—

ಭೂತರೂಪಕ್ಕೆ ಮಳೆ ವರ್ತಮಾನ ;

ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;

ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,

ಗುಡಿಗೋಪುರಗಳ ಬಂಗಾರ ಶಿಖರ.”

ಬಾವಿಯೊಳಗೆ ಭೂತಕಾಲದ ನೀರೊರತೆ, ವರ್ತಮಾನದಲ್ಲಿ ಆವಿ, ಮೋಡವಾಗಿ ಮಳೆ ಸುರಿಯುತ್ತೆ. ಕಾಲಾಂತರ ಮತ್ತು ರೂಪಾಂತರಗಳು ಸಮಾನಾಂತರವಾಗಿ ಸಂಭವಿಸುವ ಪ್ರಕ್ರಿಯೆ ಶುರುವಾಗುವುದು ಬಾವಿಯಿಂದ.

ಬಾವಿಯ ಬಗ್ಗ  ಲಂಕೇಶ್ ಅವರು ಬರೆಯುವ ಈ ಸಾಲನ್ನು ಗಮನಿಸಿ!

” ಕವಿಯ ಊರಿಗೆ ಹೋದಾಗ ಅಲ್ಲಿಯ ಬಾವಿಯಲ್ಲಿ ಪಾಚಿಗಟ್ಟಿತ್ತು”

ಶಿವರುದ್ರಪ್ಪನವರು ಬಾವಿಯನ್ನು ಭಾವದ ಬಾವಿಯಾಗಿ ಕಾಣುತ್ತಾರೆ.

” ಅದೂ ಬೇಕು ಇದೂ ಬೇಕು

ಎಲ್ಲವೂ ಬೇಕು ನನಗೆ.

ದಾರಿ ನೂರಾರಿವೆ ಬೆಳಕಿನರಮನೆಗೆ!

ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ;

ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ.

ನಾ ಬಲ್ಲೆ, ಇವು ಎಲ್ಲ ಏರುವೆಯ

ಒಂದೊಂದು ಹಂತ.

ನೂರಾರು ಭಾವದ ಬಾವಿ; ಎತ್ತಿಕೋ

ನಿನಗೆ ಬೇಕಾದಷ್ಟು ಸಿಹಿನೀರ.

ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ?

ನಮಗೆ ಬೇಕಾದದ್ದು ದಾಹ ಪರಿಹಾರ.”

ನೂರಾರು ಭಾವದ ಬಾವಿಯಿಂದ ಬೇಕಾದಷ್ಟು ಸಿಹಿನೇರನ್ನು ಎತ್ತಿಕೋ. ಯಾವ ಪಾತ್ರೆಯಲ್ಲಿ ನೀರು ತುಂಬುತ್ತೇವೋ ಆ ಪಾತ್ರೆಯ ಆಕಾರ ನೀರಿನದ್ದು!. ಸಿದ್ಧಾಂತದ ಬಂಧ ಮತ್ತು ಪೂರ್ವನಿರ್ಧಾರಿತ ಆಕಾರ, ಅಂಚುಗಳು, ಚೂಪುಗಳು ಅಗತ್ಯವೇ?. ಬಾವಿಯ ನೂರು ಭಾವಗಳ ಸಿಗಿನೀರಿನ ಮೂಲ ಉದ್ದೇಶ ಆಕಾರ ಪಡೆಯುವುದೇ? ಅಥವಾ ದಾಹ ತಣಿಸುವುದೇ?.

ಹೀಗೆ ಹಲವು ಪ್ರತಿಮೆಗಳಿಗೆ ಆಕಾರ ಕೊಡುವ ಬಾವಿಯನ್ನು ವರ್ತಮಾನದ ಕವಯಿತ್ರಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರು ತುಂಬಾ ವಿಭಿನ್ನವಾಗಿ ಕವಿತೆಗಿಳಿಸಿದ್ದಾರೆ.

**   **    **   **

 ಬಾವಿ ಕಟ್ಟೆ

“ಗುದ್ದಿ ಗುದ್ದಿ ಆಳಕ್ಕೆ ಅಗೆದು

ಸಿಕ್ಕ ಜೀವ ಜಲಕ್ಕೆ

ಅತ್ತ ಇತ್ತ ಮಿಸುಕಾಡದಂತೆ

ಕಟ್ಟಿದ್ದು ಕಟ್ಟೆ.

ನೆಟ್ಟ ದಿಟ್ಟಿಗೆ ಒಂದು ಹಿಡಿ

ಆಗಸ ಬಿಟ್ಟರೆ

ಆಕೆ ತರುವ ಕೊಡದೊಂದಿಗಷ್ಟೇ

ಹೇಗೋ ಬೆಳೆದದ್ದು ನಂಟು.

ಅದೆಂತಹ ಆತುರ ಬಿಂದಿಗೆಗೆ

ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ

ಹಾಗೇ ಇಳಿಬಿಡುವ ಹೊತ್ತಿಗೆ

ಕೈಯ ಹಿಡಿತವನ್ನೇ ಸಡಿಲಿಸಿ

ರೊಯ್ಯನೆ ಡುಬುಕಿ ಹೊಡೆದಾಗ

ಕೊಡ ಸೇರಿ ಜಗತ್ತು ನೋಡುವ

ಕಾತರಕ್ಕೆ ಬಾವಿಯ ಮೈ ತುಂಬಾ

ಅಲೆ.

ಅನ್ನಕ್ಕೆ ಸಾಂಬಾರಿಗೆ ಕಾಫಿಗೆ

ಚಹಕ್ಕೆ ನೀರು ಸದ್ದಿಲ್ಲದೇ

ಕಲಬೆರಕೆಯಾಗುವ ಸಂಕಟಕ್ಕೆ

ಕುದಿ ಮತ್ತಷ್ಟು ಹೆಚ್ಚುತ್ತಿದೆ.

ಖಾಲಿಯಾಗುವ ಖುಷಿಗೆ

ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ

ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ

ಕಿವಿ ತಾಗಿಸಿ ಕುಳಿತಿದೆ.

ಈ ಕೊಡದ ನೀರು

ಗಿಡದ ಬುಡಕ್ಕೋ

ಅಡುಗೆ ಮನೆಯ ವ್ಯಂಜನಕ್ಕೋ?

ಕುತೂಹಲ ತಣಿದ ದಿನ

ಕಣ್ಣು ಹೊಳಪು ಕಳೆದುಕೊಂಡು

ಬಿಡುತ್ತದೆ.

ಮತ್ತೆ ಕೊಡ ತುಂಬಿಕೊಳ್ಳುತ್ತಿದೆ

ಡುಬು ಡುಬು ಎದೆಬಡಿಯುವ

ಒಡಲಾಳದ ಸದ್ದು

ಎಲ್ಲಿಯದ್ದು .? ಬಿಂದಿಗೆಯದ್ದಾ..?

ಬಾವಿಯದ್ದಾ..?

ಅರೆ!

ನನ್ನೆದೆಯೇಕೆ ಹೀಗೆ

ಬಡಿದುಕೊಳ್ಳುತ್ತಿದೆ ಈ ಹೊತ್ತು .”

**  **     **  **

ಬಾವಿ ತೋಡುವ ಕಠಿಣ ಕೆಲಸ ಮಾಡಿ,ಸಿಕ್ಕಿದ ನೀರು ಹೊರಗೆ ಹರಿಯಬಾರದಲ್ಲಾ. ಅದನ್ನು ಹರಿಯದಂತೆ ಬಂಧಿಸಲು ಬಾವಿಗೆ ಕಟ್ಟೆ ಕಟ್ಟಬೇಕು. ಬಾವಿ, ನೀರು, ಕಟ್ಟೆ ಇವುಗಳು ಏನನ್ನು ಪ್ರತಿನಿಧಿಸುತ್ತವೆ? ಓದುಗರಿಗೆ ಬಿಡುವೆ.

ಈ ಕವಿತೆಯಲ್ಲಿ, ಬಾವಿ ಮತ್ತು ಬಿಂದಿಗೆ ಎರಡು ಪ್ರಮುಖ ಪಾತ್ರಗಳು. ಅವುಗಳು ಪರಸ್ಪರ ಸಂವಾದಿಸುತ್ತಾ ಕವಿತೆ ಸಾಗುತ್ತೆ. ಬಾವಿ ಆಗಸದತ್ತ ಕಣ್ಣು ನೆಟ್ಟರೆ ಅದಕ್ಕೆ ಕಾಣಸಿಗುವುದು ತುಂಡು ಆಗಸ ಮಾತ್ರ. ಬಾಹ್ಯಪ್ರಪಂಚಕ್ಕೆ ಅದರ ಸಂಬಂಧ ಹೊಂದಿಸುವುದು ಬಿಂದಿಗೆಯೇ. ಅಷ್ಟೇ ಪ್ರೀತಿ, ಆತುರ ಬಿಂದಿಗೆಗೆ. ಬಾವಿಯನ್ನು ಹೇಗೆ ಕಟ್ಟೆ ಬಂದಿಯಾಗಿಸಿದೆಯೋ, ಹಾಗೆಯೇ ಬಿಂದಿಗೆಯ ಕೊರಳಿಗೆ ಹಗ್ಗ ಬಿಗಿದಿದೆ.

ಬಾವಿಯ ನೀರಿನ ಜತೆಗೆ ಬಿಂದಿಗೆಯ ಸಮಾಗಮ, ಪ್ರೇಮಜಲ ಸಿಂಚನ, ಸ್ಪರ್ಶದ ಪುಳಕ, ಅಲೆ ಎಲ್ಲವೂ ಇದೆ.  ಹಾಗೆ ತುಂಬಿದ ಕೊಡ, ಬಾವಿಯಿಂದ ಹೊರಬಂದ ನಂತರವೂ ಸ್ವತಂತ್ರವಲ್ಲ, ಅದರೊಳಗಿನ ನೀರು, ಅನ್ನಕ್ಕೆ, ಸಾಂಬಾರಿಗೆ ಉಪಯೋಗವಾಗುತ್ತೆ. ಇಲ್ಲಿ ಕವಯಿತ್ರಿ ‘ಕಲಬೆರಕೆ’ ಪದ ಪ್ರಯೋಗ ಮಾಡಿದ್ದಾರೆ. ನೀರಿನ ಇಚ್ಛೆ ಸಾಂಬಾರು ಆಗುವುದು ಅಂತಿಲ್ಲ. ತಿಳಿಯಾದ ನೀರು ಸಾಂಬಾರ್ ಆದಾಗ ಅದೂ ಕಲಬೆರಕೆಯೇ. ರುಚಿಹಿಡಿದ ಆಸ್ವಾದಕನಿಗೆ ಸಾಂಬಾರ್ ರುಚಿ, ತಿಳಿಯಾಗಿದ್ದ ನೀರಿನ, ಬಾವಿಯ ಫ್ರೇಮ್ ಆಫ್ ರೆಫರೆನ್ಸ್ ನಲ್ಲಿ ಅದು ಕಲಬೆರಕೆ.

ಬಿಂದಿಗೆ ತುಂಬಿದ್ದ ನೀರನ್ನು ಹೊಯ್ದಂತೆ, ಖಾಲಿಯಾಗುವ ಅನುಭವ ಕೂಡಾ ಒಂದು ಅನೂಹ್ಯ  ಪ್ರಕ್ರಿಯೆಯ ಪ್ರತಿಮೆಯೇ.

ಕವಿತೆಯ ಕೆಳಗಿನ ಸಾಲುಗಳು ಖಂಡಿತಾ ಹಿಂದಿ ಶಾಯರಿಗಳಲ್ಲಿ ಕಾಣಸಿಗುವ ಪಂಚ್ ಲೈನ್ ಗಳು.

” ಮತ್ತೆ ಕೊಡ ತುಂಬಿಕೊಳ್ಳುತ್ತಿದೆ

ಡುಬು ಡುಬು ಎದೆಬಡಿಯುವ

ಒಡಲಾಳದ ಸದ್ದು

ಎಲ್ಲಿಯದ್ದು .? ಬಿಂದಿಗೆಯದ್ದಾ..?

ಬಾವಿಯದ್ದಾ..?

ಅರೆ!

ನನ್ನೆದೆಯೇಕೆ ಹೀಗೆ

ಬಡಿದುಕೊಳ್ಳುತ್ತಿದೆ ಈ ಹೊತ್ತು .”

ಅಂದರೆ ಬಾವಿ, ಕೊಡ, ಬಾವಿಯೊಳಗಿನ ನೀರು, ಸಮಾನಾಂತರವಾಗಿ ನಡೆಯುವ  ಒಡಲಾಳದ ಸದ್ದು ಮತ್ತು ಎದೆ ಬಡಿತ, ಕವಿತೆಯ ಮೇಲಿನ ಅಷ್ಟೂ ಸಾಲುಗಳಿಗೆ ಒಂದು ಇತ್ಯಾತ್ಮಕ ಅರ್ಥದತ್ತ ಮಾರ್ಗ ಸೂಚಿಯಾಗುತ್ತವೆ.

ಸದಾ ಹೊರಜಗತ್ತಿನತ್ತ ಸಂಬಂಧ ಬೆಳೆಸುವ ಹಂಬಲ, ಕಾತರ,ಹಸಿವು ಬಾವಿಗಿದೆ. ತಿಳಿಯಾದ ಸ್ವಂತಿಕೆ ಸಮಾಜದ ಅಳವಡಿಕೆಯಲ್ಲಿ ಕಲಬೆರಕೆಯಾಗುವ ನೋವಿದೆ. ಅದು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆಯುವ ಅಸಹನೆಯೂ ಇದೆ. ಒಡಲಾಳದ ಪ್ರೀತಿಯನ್ನು ಬಿಂದಿಗೆಯಲ್ಲಿ ಮೊಗೆ ಮೊಗೆದು ಕೊಡುವಾಗ ತುಂಬುವ ಖುಷಿಯೂ, ಹಂಚುವಾಗಿನ ಖಾಲಿಯಾಗುವ ಸಂತೃಪ್ತಿಯೂ ಕವಿತೆಯಲ್ಲಿ ಕಾಣಿಸುತ್ತೆ. ಬಾವಿಯೂ ಖಾಲಿ ಕೊಡ ತರುವ ಹೆಜ್ಜೆಯ ಸದ್ದಿಗೆ ಕಿವಿಯಾನಿಸಿ ಕಾಯುವುದು, ಬಾವಿಯ ಅಂತರಂಗದ ಸಹಜಪ್ರೀತಿ ಕಾಣಿಸುತ್ತೆ. 

ಸ್ತ್ರೀ ಮನಸ್ಸಿನ ಕಟ್ಟಿ ಹಾಕಿದ ಆಳ ಸಂವೇದನೆಗಳು, ಹರಿಯಲೆತ್ನಿಸುವ ಒಲವು, ಅಂತಹಾ ಜೀವಪೋಷಕ ಕ್ರಿಯೆಯಲ್ಲೂ ಬಿಂದಿಗೆಯ ಸಹಾಯ ಪಡೆಯಬೇಕಾದ ಅನಿವಾರ್ಯತೆ, ಕಾಯುವಿಕೆ, ಇವೆಲ್ಲವೂ ಕವಿತೆಯನ್ನು ಜೀವಂತ ಪಾತ್ರವಾಗಿಸಿದೆ.

****************************************************************

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

7 thoughts on “

  1. ಕೂಪ ಮಂಡೂಕದ ಪ್ರತಿಮೆಯಿಂದ ಬೇಸತ್ತ ಬಾವಿಯ ನೀರು ಹೊರ ಜಗತ್ತನ್ನು ಕಾಣಲು ಬಿಂದಿಗೆಗಾಗಿ ಕಾಯುತ್ತದೆ. ಹಿತ್ತಾಳೆ ಬಿಂದಿಗೆಯ ಸದ್ದಿನ ಅನುರಣನಕ್ಕೆ ತನ್ನ ಉತ್ಸಾಹದ ತಾಳವನ್ನು ಕೂಡಿಸಿಕೊಂಡು ಹೊರಬರುವ ದೃಶ್ಯ ಈಗ ಕಣ್ಮರೆ. ಪ್ಲಾಸ್ಟಿಕ್ಕಿನ ಒಣ ಸದ್ದಿಗೆ ತಾಳ ಹೊಂದದೆ ನಿಸ್ಸಾರವಾಗಿ ಮೇಲೆ ಬಂದು ತನ್ನ ಕರ್ತವ್ಯ ಮಾಡುವ ದೀನ ಬಾವಿಯ ನೀರು.

    1. ರಮೇಶ್ ಸರ್, ನಿಮ್ಮ ಪ್ರತಿಕ್ರಿಯೆ ಮತ್ತು ನನ್ನ ಮುಂಜಾನೆ ಜತೆ ಜತೆಗೇ ಸಂಭವಿಸಿದೆ!. ನಮ್ಮೊಳಗಿನ ಬಾವಿಯ ನೀರೂ ಎಷ್ಟೊಂದು ಬಾರಿ ಬಿಂದಿಗೆಯ ಮೂಲಕ ಬಿಡುಗಡೆಗೆ ಕಾದಿದೆ ಅಲ್ವಾ ಸರ್!. ಪ್ಲಾಸ್ಟಿಕ್ ಬಿಂದಿಗೆ ಸದ್ದಿಲ್ಲದೆಯೇ ನೀರು ಕಸಿಯುತ್ತಿದೆ! ತುಂಬಾ ಕಾವ್ಯಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.

  2. ಬಿಂದಿಗೆ. ಬಾವಿಯ ನೀರು. ಬಿಂದಿಗೆ ಸಯಿಜ ಅಷ್ಟೆ ನೀರು ತುಂಬುವುದು. ತುಂಬಾ ಕಾವ್ಯಾತ್ಮಕ ವಾಗಿ ವಿವರಿಸಿದ್ದಿರಿ ನೀವು ಆ ಎಲ್ಲ ದ್ರುಶ್ಯಗಳನ್ನು ಚಿ್ತ್ರಿಸಿದ್ದರಿ. ರಮೇಶ ಬಾಬು ಅವರು. ಪ್ಲಾಸ್ಟಿಕ ಬಿಂದಿಗೆಯಲ್ಲಿ ಸದ್ದಿಲ್ಲದೆ ಬಾವಿ ನೀರು ಮೆಲೆಬಂದು ತನ್ನ ಕರ್ತವ್ಯ ಮಾಡುವುದು.ಇದೆಲ್ಲಾ ಕವೀಯೆ ಕಾಣಬಹುದು. ಬೇ‍ಂದ್ರೆ ಅವರ ಶಿವರುದ್ರಪ್ಪನವರ. ಹಾಗು ಇತರರ ಕವೀತೆ ಹಂಚಿಕೊಂಡಿದ್ದಿರಿ. ಬಾವಿಯಲ್ಲಿ ನಮ್ಮ ಪ್ರತಿಬಿಂಬ ನೋಡುವುದು. ನಮ್ಮನ್ನು ನಾವೆ ಪರಿಶೀಲನೆ ಮಾಡಿದಂತೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ

    1. ನಿಮ್ಮ ಪ್ರೀತಿಯ ಓದಿನ ಪ್ರತಿಕ್ರಿಯೆ, ತುಂಬಾ ಖುಷಿ ಕೊಡುತ್ತೆ. ತುಂಬಾ ಧನ್ಯವಾದಗಳು.

  3. ಪ್ರಕೃತಿಯ ರಮ್ಯತೆಯನ್ನು ಬಣ್ಣಿಸುವುದಲ್ಲಿ ಮಹಾದೇವ್ ಅವರದು ಎತ್ತಿದ ಕೈ. ತಮ್ಮ ಊರಿನ ಹತ್ತಿರವಿದ್ದ ಬಾವಿಯೊಂದರ ಪ್ರಸ್ತಾಪ ಮಾಡುತ್ತಾ, ಆ ಬಾವಿಯ ನೀರನ್ನು ಅಕ್ಕ ಸೇರಿ ಕುಡಿಯಲು ಅವರ ಪುಟ್ಟ ಬೊಗಸೆಗೆ ಹಾಕಿದಾಗ, ಅವರಿಗೆ ಅಮೃತ ಪಾನ ಮಾಡಿದ ಅನುಭೂತಿಯನ್ನು ಬಹಳ ಸುಂದರವಾಗಿ ಹಂಚಿಕೊಂಡಿದ್ದಾರೆ. ಬಾವಿಯಲ್ಲಿ ನೀರು ಬರೀ ನೀರಲ್ಲ, ಜೀವ ಜಲ- ಭೂಮಿ ತಾಯಿಯ ಮೊಲೆ ಹಾಲು ಎಂಬ ಮಾತು ಅವರ ಅಂತಃಕರಣದ ಬಾವಿಯ ಆಳದಿಂದ ಹೊಮ್ಮಿದೆ. ಲಂಗ ದಾವಣಿ ಉಟ್ಟು ಬಾಲೆಯರು ನೀರು ತುಂಬಲು ಬಾವಿಗೆ ಬಂದಾಗ ಊರಿಗೆ ಊರೇ ಗಜಲ್ ಹಾಡುತ್ತದೆ ಎಂದು ಅನ್ನುವಾಗ, ಈ ಬಾವಿ ಜೀವನ ಸಂಗೀತದ ನಾದ ಎಂಬ ಧ್ವನಿ ಸ್ಫುರಿಸುತ್ತದೆ.
    ಬಾವಿಯನ್ನು ಪ್ರತಿಮೆಯಾಗಿ ಬಳಸಿ, ಅದಕ್ಕೆ ಅನೇಕ ಪದರುಗಳ ಅರ್ಥ್ ಕೊಟ್ಟ ಕೆಲವು ದಿಗ್ಗಜ ಕವಿಗಳ ಕವಿತೆಗಳನ್ನು ಸಮರ್ಥವಾಗಿ ವಿಶ್ಲೇಷಣೆ ಮಾಡಿದ್ದಾರೆ. ಅಲ್ಲದೇ, ಹೊಸ ಪೀಳಿಗೆಯ ಸ್ಮಿತಾ ಅವರ ಕವನವನ್ನು ಆಯ್ದು, ಅದನ್ನು ಅರಥೈಸುತ್ತಾ ‘ ಬಾವಿ’ ಪ್ರತಿಮೆಗೆ ಹೊಸ ಆಯಾಮ ನೀಡಿದ್ದಾರೆ ‌. ಹಾರ್ದಿಕ ಅಭಿನಂದನೆಗಳು

    1. ಪ್ರಹ್ಲಾದ ಜೋಶಿ ಅವರೇ, ಕವಿತೆಯ ಬಗೆಗೂ ಅಂಕಣದ ಬಗೆಗೂ ನಿಮ್ಮ ಪ್ರತಿಕ್ರಿಯೆ, ಸಿಹಿ ಬಾವಿ ನೀರನ್ನು ಮೊಗೆ ಮೊಗೆದು ಕುಡಿದಂತೆ ಆಯಿತು. ಧನ್ಯವಾದಗಳು ಸರ್

  4. ಪಶ್ಚಿಮಘಟ್ಟದ ನಿಸರ್ಗದ ವರ್ಣನೆ ಮಾಡುತ್ತಾ, ಅದರ ದಾರಿಯನ್ನು ಕ್ರಮಿಸಲು ಸೈಕಲ್ ವಾಹನವನ್ನು ಬಳಕೆ ಮಾಡಿದ ವಿಜಯ ದಾರಿಹೋಕ ಅವರ ‘ ಸೈಕಲ್, ರಸ್ತೆ, ತುಡಿತ ಇತ್ಯಾದಿ’ ಕವನವನ್ನು ಮಹಾದೇವ್ ಅವರು ಬಹಳ ಸುಂದರವಾಗಿ ವಿಶ್ಲೇಷಣೆ ಮಾಡಿದ್ದಾರೆ. ಪ್ರಕೃತಿಯ ವರ್ಣನೆಯಲ್ಲಿ ಮಹಾದೇವ್ ಅವರು ಸಿದ್ಧ ಹಸ್ತರು.
    ಸುತ್ತಲಿನ ಸೌಂದರ್ಯಕ್ಕೂ, ಮತ್ತು ಜೀವನದ ಬವಣೆಗೆ ತಾಳ ಮೇಳಗಳ ಕೊರತೆಯನ್ನು ಕವಿತೆ ಸಮರ್ಥವಾಗಿ ಧ್ವನಿಸುತ್ತದೆ. ‘ ಮಟ ಮಟ ರಾತ್ರಿ’ ನುಡಿಗಟ್ಟಿನ ಬಳಕೆಯಲ್ಲಿ, ರಾತ್ರಿ ಆದರೂ ಮನಕೆ ಮುದವೀವ ತಂಪಿನ ಕೊರತೆಯ ಬಗ್ಗೆ ಕವಿತೆ ಎತ್ತಿ ಸಾರುತ್ತದೆ.
    ಆದರೂ, ದಾರಿ ಕ್ರಮಿಸಲೇ ಬೇಕು; ಅನಿವಾರ್ಯ.
    ಮಹಾದೇವ್ ಅವರು ಅಂದಂತೆ, ಈ ಸಂಸಾರದ ದುರ್ಭರವಾದ ಮಾರ್ಗದಲ್ಲಿ ‘ ಸಂತುಲನ ‘ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ.
    ವರ ಕವಿ ಬೇಂದ್ರೆ ಅವರ ‘ ಬಾರೋ ಸಾಧನೆ ಕೇರಿಗೆ’ ಕವನವನ್ನು ಉಲ್ಲೇಖ ಮಾಡಿ ಅದು ಸ್ಫುರಿಸುವ ಭಿನ್ನವಾದ ನೆಲೆಯನ್ನು ಸಮರ್ಥವಾಗಿ ನಮ್ಮ ಜೊತೆ ಹಂಚಿಕೊಂಡಿದ್ದಾರೆ.
    ಮಹಾದೇವ್ ಅವರಿಗೆ ಹಾರ್ದಿಕ ಅಭಿನಂದನೆಗಳು.
    ಒಳ್ಳೆಯ ಕವನದಿಂದ ವಿಚಾರಕ್ಕೆ ಗ್ರಾಸ ಒದಗಿಸಿದ ವಿಜಯ ದಾರಿಹೋಕ ಅವರಿಗೆ ಹಾರ್ದಿಕ ಅಭಿನಂದನೆಗಳು.

Leave a Reply

Back To Top