ಯಾತ್ರೆ

ಕವಿತೆ

ಯಾತ್ರೆ

ರಾಜೇಶ್ವರಿ ಚನ್ನಂಗೋಡು

ಮುಗಿವಾಗ ನೀನು
ನನ್ನೆದೆ ಧುತ್ತಂದು
ನಿಂದು
ಮುನ್ನಡೆದಿದೆ.
ಎದೆಗಿನ್ನೇನು ದಾರಿ?
ಇನ್ನೆಷ್ಟು ಮಂದಿ ನನ್ನವರು
ನನ್ನ ನಾನಾಗಿಸಿದವರು
ಹೋದಾಗಲೂ ಹೀಗೇ ಮುನ್ನಡೆಯುತಿರುವುದು…
ಅರ್ಥಹೀನವೀ ಯಾತ್ರೆ
ಹಿಂದಿದ್ದ ಸುಖವನೆಲ್ಲ ಬಿಟ್ಟು ಮುನ್ನಡೆಯಲೇ ಬೇಕಾದ ಯಾತ್ರೆ
ಅಂದವ ಹುಡುಕಿ ಚಂದವ ಹುಡುಕಿ
ನಡೆದಷ್ಟೂ ಹಿಂದಿನಂದುಗಳೇ
ನೀನಿದ್ದಾಗಿನ ಅವರಿದ್ದಾಗಿನಂದುಗಳೇ
ಸೊಗಸೆಂದರಿತೂ
ಮುಂದಡಿಯಿಡುವ ಯಾತ್ರೆ
ನಾಳೆ ಇವನೂ ಅವಳೂ ಇಲ್ಲದ
ಕಂದರಗಳಿಹವೆಂದರಿತೂ
ನಿಲ್ಲಿಸಲಾಗದ ಯಾತ್ರೆ
ಬೆಳಕಿತ್ತ ನೀನಾರಿದಾಗ
ಇನ್ನಾರೂ ಆರುವ ಮುನ್ನ
ನಾನಾರಿದರೇ ಚೆನ್ನ
ವೆಂದನಿಸುವ ಯಾತ್ರೆ
ಹೇಗೆ ಕಲ್ಪಿಸಿಕೊಳಬೇಕು?
ಯಾಕೆ ನಡೆಯಲೆ ಬೇಕೀ ಯಾತ್ರೆ?

Leave a Reply

Back To Top