ಕವಿತೆ
ಸಾಕು ಬಳುಬಳಿ…
ಕೃಷ್ಣಮೂರ್ತಿ ಕುಲಕರ್ಣಿ
ಸಾಲು ದೀಪ ಉರಿಯುವಾಗ
ಒಂದಕಂಟಿದೆ ಸೊಡರು
ಮಕ್ಕು ಕವಿದು ಬಿಕ್ಕುವಾಗ
ಅದ್ಯಾರು ನೋಡ್ವರು ಹೇಳು
ದೀಪಗಳು ಪ್ರಜ್ವಲತೆಯಲಿ
ಸುತ್ತ ಬೆಳಗುವಾಗ
ಹಬ್ಬದ ಸಡಗರ ಹಬ್ಬಿರುವಾಗ
ಆರ್ಥ ಧ್ವನಿಯತ್ತ
ಹರಡದು ಯಾರ ಚಿತ್ತ
ಈ ತನಕ ಬೆಳಗಿದೆ
ಬೇಕಿದೆ ಈಗ ವಿರಾಮ
ಎಂದಾರುತಿದೆ ಬಸವಳಿದ ದೀಪ
ಅದಕು ಮುನ್ನ ಬೆಳಗಿಸಿದೆ
ಇನ್ನೊಂದು ರೂಪ
ದೀಪದಿಂದ ದೀಪ
ಹಚ್ಚಬೇಕು ಮಾನವ
ಅದೆ ದೀಪ ಉಳಿಯಲೆಂಬ
ಸೊಲ್ಲು ಬೇಡಾ ಕೇಳುವ
ಬೆಳಕು ಮುಖ್ಯ ಬದುಕಿನಲ್ಲಿ
ಅಂಧತೆಯ ತೊಡೆಯಲು
ನಾನು ನನದು ಎಂಬುದೆಲ್ಲ
ಬತ್ತಿಯಾಗಿ ಉರಿಯಲು
ಶಕ್ತಿ ಕೊಡು ದೀಪಾವಳಿ
ಸಾಕು ಇದೇ ಬಳುವಳಿ…
**********************