ಕಥೆ

ಋಣ

ಎಂ. ಆರ್. ಅನಸೂಯ

Wild mango tree - Ecofund

ಗಿರಿಜಮ್ಮ ತೋಟದಲ್ಲಿ ಮಾವಿನ ಫಸಲನ್ನು ನೋಡುತ್ತಾ

“ಈ ಸತಿ ಮಾವಿನ ಫಸಲು ಚೆನ್ನಾಗಿ ಬಂದೈತೆ ಅಲ್ವೇನೋ

ನಾಗ”

“ಹೂನ್ರಮ್ಮ, ಈ ಸತಿ ಕಾಯಿ ಜಗ್ಗಿ ಹಿಡಿದೈತೆ. ಹಂಗೇನೆ

ಹಲಸಿನ ಗಿಡಗಳು, ಹುಣಸೇಗಿಡ ಎಲ್ಲಾದ್ರೂಗನೂ

ಚೆನ್ನಾಗಿ ಕಾಯಿ ಹಿಡಿದೈತೆ “

ತೋಟದ ಗೇಟ್ ಬಳಿ ಮೋಟರ್ ಬೈಕ್ ನ ಹಾರ್ನ್ ಸೌಂಡ್ ಕೇಳಿದ ಇಬ್ಬರೂ ಆ ಕಡೆ ನೋಡಿದರೆ ರಾಜಣ್ಣ

ಕೈಯಲ್ಲಿ ಕಾಫಿ ಪ್ಲಾಸ್ಕ್ ಹಾಗೂ ಒಂದು ಸಣ್ಣ ಬ್ಯಾಗ್ ನ್ನು

ಹಿಡಿದು ಬರುತ್ತಿದ್ದರು. 

” ಸಾವ್ಕಾರ್ ಕಾಫಿ ತರ್ತಾವ್ರೆ”  ಎನ್ನುತ್ತಾ ಇಬ್ಬರೂ ಅಲ್ಲೇ ಇದ್ದ ಬೇವಿನ ಮರದ ಕೆಳಗೆ ಬಂದ್ರು.

” ನಾನೇ ಮನೆಗೆ ಬರ್ತಿದ್ದೆ. ನೀವ್ಯಾಕೆ ಬಂದ್ರಿ” ಎನ್ನುತ್ತಾ ಗಿರಿಜಮ್ಮ ಮರದ ಕೆಳಗಿದ್ದ ಕಲ್ಲು ಬೆಂಚ್ ಮೇಲೆ ಕುಳಿತು ಕೊಡದ ನೀರನ್ನು ಬಗ್ಗಿಸಿ ಕೈ ತೊಳೆದುಕೊಂಡು ಕುಳಿತರು. 

ಬ್ಯಾಗ್ನಲ್ಲಿದ್ದ ಕವರ್ ತೆಗೆಯುವುದನ್ನು ನೋಡಿದ ನಾಗ

“ಉಮಕ್ಕ ಏನೋ ತಿಂಡಿ ಕಳಿಸೈತೆ”

ಗಿರಿಜಮ್ಮ ಕಾಫಿಯನ್ನು ಕಾಫಿಯನ್ನು ಮೂರು ಪ್ಲಾಸ್ಟಿಕ್ ಲೋಟಗಳಿಗೆ ಸಮನಾಗಿ ಬಗ್ಗಿಸಿ,ನಾಗನಿಗೆ ಕಾಫಿ ಹಾಗೂ  ಕಡ್ಲೆಬೇಳೆ ವಡೆ ಕೊಟ್ಟು ಗಂಡ ಹೆಂಡತಿ ಇಬ್ಬರೂ ಕಾಫಿ ಕುಡಿಯುತ್ತಾ ವಡೆ ತಿನ್ನುತ್ತಿದ್ದರು. ನಾಗ  ಕಾಫಿ ಕುಡಿದು ವಡೆ ತಿನ್ನುತ್ತ ತನ್ನ ಕೆಲಸ ನೋಡಲು ಹೋದ. ಗಿರಿಜಮ್ಮ ” ರಾತ್ರಿ ಅಪ್ಪಯ್ಯನಿಗೆ ಫೋನ್ ಮಾಡಿ ಮುಂದಿನ ವಾರ  ಬರ್ತೀನಿ ಅಂತ ಹೇಳ್ಬೇಕು. ಅಷ್ಟೊತ್ತಿಗೆ ಮಾವಿನ ಕಾಯಿ ಹಣ್ಣಾಗ್ತವೆ. ಹಣ್ಣು ಕೊಟ್ಟು ಮಾತುಕತೆನೆಲ್ಲ ಮುಗಿಸ್ಕಂಡೆ  ಬರ್ತಿನಿ. ಇನ್ನು ಮುಂದಕ್ಕ ಹಾಕೋದು ಬೇಡ” ಎಂದರು. “ಹಂಗೆ ಮಾಡು  ಎನ್ನುತ್ತಾ ಈ ಸರ್ತಿ ತೆಂಗಿನ ಫಸಲೆಲ್ಲಾ  ಚೆನ್ನಾಗೈತೆ ” ಎಂದರು ರಾಜಣ್ಣ ತೆಂಗಿನ ಮರಗಳನ್ನು ನೋಡುತ್ತ.”ಅಮ್ಮಾವ್ರೆ, ಇವೆಲ್ಲ ಈ  ಹೊಸ ತೋಟದಗೆ ಬಿದ್ದಿರೋ ಕಾಯಿ. ನೀವು ಸಾವ್ಕಾರ ಜೊತೆಗೆ ಮನೆಗ್ ಹೋಗ್ರಿ. ನಾನು  ಹಳೇ ತೋಟದಗೆ  ಬಿದ್ದಿರೋ ಕಾಯ್ಗಳ್ನ ಆರ್ಸ್ ಕಂಡು ಮನೆ ಹತ್ರ ಬರ್ತಿನಿ” ನಾಗ ಕೂಗಿ ಹೇಳಿದ

“ಹಂಗೆ ಮಾಡು ” ಎನ್ನುತ್ತಾ ಗಿರಿಜಮ್ಮಗಂಡನ ಬೈಕ್ ನ ಹತ್ತಿದರು.ನಾಗ ಹಳೇ ತೋಟ, ಹೊಸ ತೋಟ ಎಂದು ಕರೆಯಲು ಕಾರಣವಿತ್ತು. ಹಳೆತೋಟವೆಂದ್ರೆ ಗಿರಿಜಮ್ಮನ ಗಿರಿಜಮ್ಮನ ಅತ್ತೆ ಮಾಡಿದ್ದು. ಅವರಿಗಿದ್ದುದು ಎಂಟೆಕ್ರೆ

ಜಮೀನು. ಅದರಲ್ಲಿ ನಾಲ್ಕೆಕರೆ ತೆಂಗಿನ ತೋಟ ಮಾಡಿ

ಎರಡು ಎಕ್ರೆಯಲ್ಲಿ  ನೀರುಳ್ಳಿ ಹಾಗು ರಾಗಿ ಹಾಕುತ್ತಿದ್ದರು

ಉಳಿದ  ಎರಡು ಎಕ್ರೆಯನ್ನು ಕೋರಿಗೆ ಕೊಟ್ಟಿದ್ದರು. 

ಗಂಗಮ್ಮನ  ಗಂಡ ಚಂದ್ರ ಶೇಖರಯ್ಯನವರು ಕಿರಾಣಿ ಅಂಗಡಿ ಇಟ್ಟಿದ್ದರಿಂದ  ತೆಂಗಿನ ಗಿಡ ಇಟ್ಟು ಬೆಳೆಸಿದ್ದೆಲ್ಲಾ ಗಂಗಮ್ಮನೇ. ಹಾಗಾಗಿ ಅದು ಗಂಗಮ್ಮನ ತೋಟವೆ ಸರಿ ಹೊಸ ತೋಟವು  ಗಿರಿಜಮ್ಮ ಬೆಳ್ಸಿದ ತೋಟವಾಗಿತ್ತು  ಗಿರಿಜಮ್ಮನ ತಾಯಿ ಶಾರದಮ್ಮ ಶಿವಮೂರ್ತಿಯನ್ನು

ಮದ್ವೆಯಾಗಿ ಗಂಡನ ಮನೆ ಸೇರಿ ಎರಡು ಹೆಣ್ಣುಮಕ್ಕಳ ತಾಯಾಗಿ ಸಂಸಾರ ಬೆಳೆದಿತ್ತು.‌  ಗಂಗಮ್ಮನಿಗೆ  ಶಾರದ,  ಪಾರ್ವತಿ, ಸುವರ್ಣ ಮೂವರು ಹೆಣ್ಣುಮಕ್ಕಳ ನಂತರ ಹುಟ್ಟಿದವನೇ  ರಾಜಶೇಖರ. ಶಾರದಮ್ಮನ ಮಗಳಾದ ಗಿರಿಜಾ ಹುಟ್ಟಿದಾಗ ತಮ್ಮ ರಾಜಶೇಖರನಿಗಿನ್ನು ಐದು ವರ್ಷ.ಗಿರಿಜಳನ್ನು ರಾಜಶೇಖರನಿಗೆ  ಕೊಟ್ಟು ಮದುವೆ  ಮಾಡುವುದು ಎಂದು ತಾಯಿ ಮಗಳ ನಡುವೆ ಅಲಿಖಿತ

ಒಪ್ಪಂದವಾಗಿತ್ತು. ಶಿವಮೂರ್ತಿಯವರ  ಕಡೆಯಿಂದಲೂ  ಅನುಮೋದನೆ ದೊರಕಿತ್ತು. ಶಾರದಾಳಿಗೆ ಎರಡನೆಯ

ಮಗು ಹೆಣ್ಣೇ ಆಗಿದ್ದು ಅವಳೇ  ಶಾಂಭವಿ. ಶಾರದಮ್ಮನ ಮಗಳು ಗಿರಿಜಳ ಮದುವೆ ಆಗುವ ಎರಡು ವರ್ಷಕ್ಕಿಂತ ಮುಂಚೆ ಗಂಗಮ್ಮನ ತೋಟದ ಪಕ್ಕದಲ್ಲಿ ಇದ್ದ ಜಮೀನು ಮಾರಾಟಕ್ಕಿತ್ತು. ಆಗ ಶಾರದಮ್ಮನವರ  ಒತ್ತಾಸೆಯಿಂದ ಶಿವಮೂರ್ತಿಯವರಿಗೆ ಇಷ್ಟವಿಲ್ಲದಿದ್ದರೂ ಸಹ ಅದನ್ನು ಕೊಂಡ್ಕಂಡಿದ್ದರು. ಶಾರದಳನ್ನು ಮದುವೆಯಾದ ಮೇಲೆ ತಮ್ಮ ವ್ಯವಹಾರಗಳು ಏಳ್ಗೆ ಕಂಡಿವೆ  ಎಂಬುದು ಅವರ

ನಂಬಿಕೆ. ಹಾಗಾಗಿ ಹೆಂಡತಿಯ ಮಾತಿಗೆ ಇಲ್ಲವೆನ್ನಲಾಗದೆ

ಒಪ್ಪಿದ್ದರು. ಶಾರದಳ ತಂದೆ ಚಂದ್ರಶೇಖರಯ್ಯನವರು

ಪಾರ್ಶ್ವವಾಯು  ಪೀಡಿತರಾದ ಮೇಲೆ  ಮಗನ ಮದುವೆ

ಮಾಡುವ ಹಂಬಲ ಹೆಚ್ಚಾಗಿದ್ದರಿಂದ ಗಿರಿಜಳ P U C ಮುಗಿದ ತಕ್ಷಣ  ರಾಜಶೇಖರನೊಂದಿಗೆ  ಮದ್ವೆ ನಡೆದಿತ್ತು

ರಾಜಶೇಖರನಿಗೆ ಕೊಡುವುದು ಬೇಡವೆನ್ನಲು ಯಾರಿಗೂ ಕಾರಣವೇ ಇರಲಿಲ್ಲ. ರಾಜ್ಯ ಹೆದ್ದಾರಿಯಲ್ಲಿದ್ದ ಹೋಬಳಿ

ಕೇಂದ್ರವಾಗಿದ್ದ ದೊಡ್ಡ ಹಳ್ಳಿಯಲ್ಲಿ ಅಂಗಡಿ ವ್ಯವಹಾರದ ಜೊತೆಗೆ ಜಮೀನು, ದೊಡ್ಡಮನೆಯ  ಏಕೈಕ ವಾರಸ್ದಾರ  ಹೆಸರಿಗೆ ತಕ್ಕಂತೆ ಲಕ್ಷಣವಾದ ಗಂಡು. ಚಿಕ್ಕಂದಿನಿಂದಲೇ ಮದುವೆ ನಿಶ್ಚಯವಾಗಿದ್ದರಿಂದ ಗಿರಿಜಳಿಗು ರಾಜಶೇಖರ 

ಮಾಮನನ್ನು ಕಂಡರೆ ಇಷ್ಟ. ಶಾರದಮ್ಮನ ತಂಗಿಯರಾದ ಪಾರ್ವತಿ ಹಾಗೂ ಸುವರ್ಣರಿಗೂ ಸಹಾ ಮದುವೆಯಾಗಿ ಒಳ್ಳೆ ಮನೆಗಳನ್ನು ಸೇರಿದ್ದರು. ಮದ್ವೆಯಾದ ವರ್ಷದಲ್ಲೆ ಅನಾರೋಗ್ಯದಿಂದಾಗಿ ಚಂದ್ರಶೇಖರಯ್ಯನವರು ತೀರಿ ಕೊಂಡರು. BSc ಓದಿದ್ದ ರಾಜಶೇಖರ  ಅಂಗಡಿ ಮತ್ತು ತೋಟ ನೋಡಿಕೊಳ್ಳುತ್ತಿದ್ದ. ಜತೆಗೆ ತಾಯಿಯ ಸಹಕಾರ ಇತ್ತು. ಗಿರಿಜಾಳಿಗೆ ಗಂಡು ಮಗುವಾದ್ದರಿಂದ ಮಗುವಿಗೆ ಚಂದ್ರ ಶೇಖರ ಎಂದು ತಾತನ ಹೆಸರನ್ನಿಟ್ಟರು.  ಗಿರಿಜಳ ತಂದೆ ಶಿವಮೂರ್ತಿಯವರ  ವ್ಯವಹಾರ  ದೊಡ್ಡದಾಗಿದ್ದು ಬಿಡುವಿಲ್ಲದ  ದುಡಿಮೆ  ಅವರದಾಗಿತ್ತು. ರಾಜಶೇಖರನ  ಸಲಹೆಯಂತೆ ಗಿರಿಜಾ ಒಮ್ಮೆ ತವರಿಗೆ ಬಂದಾಗ ತಮ್ಮ ತೋಟದ ಪಕ್ಕದಲ್ಲಿರುವ ಜಮೀನನ್ನು ತಾವೇ ಕೊಂಡು ಕೊಳ್ಳುತ್ತೇವೆ ಎಂದು ಅಪ್ಪ ಅಮ್ಮನ ಬಳಿ ಹೇಳಿದಳು ಅಲ್ಲಿಗೆ ಬಂದು ನಾವು ಅ ಜಮೀನನ್ನು ನೋಡಲಾಗದು ನೀವೇ ಮಾಡ್ಕಂಡು ಹೋಗ್ರಿ. ಮುಂದೆ ನಿನಗೆ ಕೊಡುವ ಉದ್ದೇಶವಿಟ್ಟುಕೊಂಡೆ ನಾವು ಅದನ್ನು ಕೊಂಡ್ಕಂಡಿದ್ದು ಆದು ಎಂದೆಂದಿದ್ದರೂ ನಿನ್ನದೆ. ನೀನೇನು ನಮಗೆ ಹಣ ಕೊಡಬೇಕಿಲ್ಲ ಎಂದು ಇಬ್ಬರೂ ತಮ್ಮ ಕೊನೆ ತೀರ್ಮಾನ  ಕೊಟ್ಟಿದ್ದರು. ಮಗುವಿಗೆ  ವರ್ಷ ತುಂಬುವ ವೇಳೆ ಒಂದು ಮಧ್ಯಾಹ್ನ ಗಿರಿಜಾ ಮಗುವಿನೊಂದಿಗೆ ಮಲಗಿದ್ದಾಗ ಅಜ್ಜಿ ಗಂಗಮ್ಮ ಅಯ್ಯೋ ಶಾರದ ಎಂದು ಜೋರಾಗಿ ಕೂಗಿದ

ಶಬ್ದ ಕೇಳಿ ಬೆಚ್ಚಿಬಿದ್ದಳು. ತಕ್ಷಣ ಎದ್ದು ಬಂದು ನೋಡಲು  ಆ ಕೂಗನ್ನು ಕೇಳಿ ಗಾಬರಿಯಾಗಿ ಅಂಗಡಿಯಲ್ಲಿದ್ದ ರಾಜ ಶೇಖರನೂ ಒಳಗೆ ಬಂದ. ತಕ್ಷಣ ಪೋನ್ ಕೈಗೆತ್ತಿಕೊಂಡು ಮಾತನಾಡಿದ ಮೇಲೆ ಗಿರಿಜಳ ಬಳಿ ಬಂದು ಅಕ್ಕನಿಗೆ ಹಾರ್ಟ್ಅಟ್ಯಾಕ್ ಆಗಿ ಹೋಗಿಬಿಟ್ಟಳು ಎಂದು ಹೇಳಿದ

ಅದನ್ನು ಕೇಳಿದ ಗಿರಿಜಳಿಗೆ ಶಾಕ್.ರಾತ್ರಿ ಮಾತನಾಡಿದ  ಅಮ್ಮ ಈಗಿಲ್ಲ ! ಅಮ್ಮ ಹೋದ ದು:ಖದೊಡನೆ ತಂಗಿ

ಶಾಂಭವಿಯ ಮುಂದಿನ ದಿನಗಳನ್ನು ನೆನೆದರೆ ವ್ಯಥೆ ಹೆಚ್ಚಾಗುತ್ತಿತ್ತು. ಶಾಂತವಾದ ಕಲ್ಯಾಣಿಗೆ ಕಲ್ಲೆಸೆದಂತಹ ಪರಿಸ್ಥಿತಿ ಆ ಸಂಸಾರದ್ದು. ತಾಯಿಯ ಸಾವಿಗೆಂದು ಬಂದ ಗಿರಿಜಾ ಹೆಚ್ಚು ಕಡಿಮೆ ಐದು ತಿಂಗಳು ತಂಗಿಯೊಂದಿಗೆ ತವರು ಮನೆಯಲ್ಲೇ ಇದ್ದುಬಿಟ್ಟಳು. ಶಾಂಭವಿಯಂತೂ ಪೂರ್ತಿಯಾಗಿ ಕುಗ್ಗಿಬಿಟ್ಟಳು. ಅಪ್ಪನಿಗೆ ದು:ಖವಿದ್ದರೂ ತೋರ್ಪಡಿಸದೆ ಶಾಂಭವಿಯನ್ನು ಸಂತೈಸುತ್ತಿದ್ದರು. ಆಗ ಶಾಂಭವಿ  SSLC  ಓದುತ್ತಿದ್ದಳು. ಗಂಗಮ್ಮ ಬಂದ್ರೂನೂ ಒಂದು ದಿನ ಇದ್ದರೆ ಹೆಚ್ಚು. ಮಗಳಿಲ್ಲದ ಮನೆಯಲ್ಲಿರಲು ಮನಸ್ಸಿಗೇ ಕಷ್ಟವಾಗುತ್ತಿತ್ತು.ಗಿರಿಜಳಿಗೆ ನೀನು ಬೇಕಾದರೆ ಇನ್ನೂ ಇರು. ನಾನು ಮನೆ ಕಡೆ ನೋಡ್ಕಂತಿನಿ. ನಿನಗಿದು ತವರು ಮನೆ. ನನಗಿದು ಮಗಳ ಮನೆ ಎಂದು ಬಿಟ್ಟಿದ್ದರು  ಈ ನಡುವೆ ಶಿವಮೂರ್ತಿಯ  ಅಕ್ಕ ಗೌರಮ್ಮತಮ್ಮನಿಗೆ ಮರು ಮದ್ವೆ ಆಗಲು ಸಲಹೆ ಕೊಟ್ಟಿದ್ದರು.  ಶಾಂಭವಿಗೆ ಕಷ್ಟವಾಗುತ್ತದೆ ಎಂದು ಅಡುಗೆ ಮಾಡಲು ತಮ್ಮ ಕಡೆಯ  ಹೆಂಗಸನ್ನು ಕರೆ ತಂದುಬಿಟ್ಟಿದ್ದರು.”ಶಾಂಭವಿಗು ಮದುವೆ ಆದ ಮೇಲೆ ನಿನ್ನನ್ನು ಯಾರು ನೋಡ್ಕಂತರೆ. ನಾವೆಲ್ಲಾ  ಎಷ್ಟು ದಿನ ಇರೋಕಾಗುತ್ತೆ. ಮನೆಯಲ್ಲಿ ಶಾಂಭವಿನೂ ಒಬ್ಬಳೆ” ಎಂದು ಹೇಳುತ್ತಲೇ ಇದ್ದರು. ಆಗ ಶಿವಮೂರ್ತಿ  ಏನನ್ನು ಹೇಳದೆ ಮೌನಕ್ಕೆ ಶರಣಾಗುತ್ತಿದ್ದರು. ಗಂಗಮ್ಮ  ಮತ್ತು ರಾಜಶೇಖರ ಇಬ್ಬರೂ ಸೇರಿ  ಗಿರಿಜಳಿಗೆ  ” ನೀನು ಮನೆಗೆ ಬಂದು ಬಿಡು. ಆಗ ಮನೆ ಕಡೆ ನೋಡಿಕೊಳ್ಳಲು  ಕಷ್ಟವಾದಾಗ ವಿಧಿಯಿಲ್ಲದೆ  ಮದುವೆಗೆ ಒಪ್ಕಳ್ಳುತ್ತಾರೆ” ಎಂದು ಹೇಳಿದರು. ಆಗ ಗಿರಿಜಾ “ಶಾಂಭವಿ ನಾನಿನ್ನು ಊರಿಗೆ ಹೊರಡುತ್ತೇನೆ” ಎಂದೊಡನೆ ಅಕ್ಕನನ್ನು ತಬ್ಬಿ ಕೊಂಡು ಅತ್ತುಬಿಟ್ಟಳು. ಅವಳೊಡನೆ ಗಿರಿಜಳೂ ಸಹಾ. ಅಂದು ಶಿವಮೂರ್ತಿ ಮನೆಗೆ  ಬಂದು ಊಟ ಮಾಡಿದ ಮೇಲೆ “ಅಪ್ಪಾ ಅಕ್ಕ ಊರಿಗೆ  ಹೋಗ್ತಳಂತೆ. ಇನ್ನು ಸ್ವಲ್ಪ ಸ್ವಲ್ಪ ದಿನ ಇರು ಅನ್ನಪ್ಪ” ಎಂದು ಅತ್ಕಂಡು ಹೇಳುತ್ತಿದ್ದರೆ

ನೋಡಿದವರ ಕಣ್ಣಲ್ಲೂ ಕಣ್ಣೀರ ಧಾರೆ ಹರಿದುಬಿಡುತ್ತಿತ್ತು ಕಣ್ದುಂಬಿದ ಶಿವಮೂರ್ತಿ ಅವಳ ತಲೆ ಸವರುತ್ತ “ಇರ್ತಳೆ  ಸುಮ್ನಿರು ನಾನು ಅವಳಿಗೆ ಹೇಳ್ತಿನಿ”ಎಂದು ಸಂತೈಸಿದರು

” ಗಿರಿಜ ಇಷ್ಟೇ ದಿನ ಇದ್ದೀಯಾ ಇನ್ನು ಸ್ವಲ್ಪ ದಿನ ಇರಮ್ಮ

ನಾನು ರಾಜಶೇಖರಂಗೆ ಹೇಳ್ತೀನಿ”ಎಂದಾಗ ಅಳುತ್ತಲೇ

“ಅಯ್ತಪ್ಪ” ಎಂದು ಗಿರಿಜ ಹೇಳಿದ ಮೇಲೆ ಶಾಂಭವಿಯು

 ಗಂಗಮ್ಮನಿಗೆ ಫೋನ್ ಮಾಡಿ ” ಅಜ್ಜಿ ಅಕ್ಕ ಇನ್ನೂ ಸ್ವಲ್ಪ ದಿನ ಇಲ್ಲೆ ಇರಲಿ” ಆ ಕಡೆಯಿಂದ ಗಂಗಮ್ಮನೂ ಅಳುತ್ತಾ “ಆಯ್ತು ಪುಟ್ಟಿ” ಎನ್ನದೆ ವಿಧಿಯಿರಲಿಲ್ಲ. ಮೊಮ್ಮಕ್ಕಳನ್ನು ಸಮಾಧಾನ ಮಾಡಲೆಂದು ಮಾರನೆಯ ದಿನವೇ ಬಂದು ಎರಡು ದಿನವಿದ್ದು ಸಮಯ ನೋಡ್ಕಂಡು ತಂದೆಯನ್ನು ಮರು ಮದುವೆಗೆ ಒಪ್ಪಿಸುವಂತೆ ಸಲಹೆ ನೀಡಿ ಹೊರಟು ಬಂದಿದ್ದರು. ಒಂದು ವಾರ ಕಳೆದ ನಂತರ ಶಿವಮೂರ್ತಿ ರಾತ್ರಿ ಊಟ ಮಾಡಿದ ಮೇಲೆ ವ್ಯವಹಾರಕ್ಕೆ ಸಂಬಂಧಿಸಿ ಫೋನ್ ಮಾಡಿ ಮಾತನಾಡುತ್ತಿದ್ದರು.ಆಗ ಅಲ್ಲಿಗೆ ಬಂದ ಗಿರಿಜಾ ಶಾಂಭವಿ ಇಬ್ಬರು ಕುಳಿತರು. ಆಗ ಶಿವಮೂರ್ತಿ

“ಏನ್ರಮ್ಮ” ಎನ್ನುತ್ತಾ ಪಕ್ಕದಲ್ಲೇ ಕುಳಿತರು. ಆಗ ಗಿರಿಜಾ

” ನಾನು ಊರಿಗೆ ಹೋಗ್ಬೇಕಿತ್ತಪ್ಪ. ಬಹಳ ದಿನ ಆಯ್ತು”

ಎಂದಳು.ಆಗ ಶಿವಮೂರ್ತಿ “ನಾನು ರಾಜಶೇಖರನ ಹತ್ರ ಮಾತಾಡಿದೀನಿ. ಸ್ವಲ್ಪ ದಿನ ಇರಮ್ಮ” ಎಂದಾಗ ಗಿರಿಜ

“ಅಪ್ಪಾ, ಅಜ್ಜಿ  ಆತ್ತೆ ಮಾವ ಎಲ್ಲರೂ ನೀನು  ಮದುವೆ

ಆಡಬೇಕು ಅಂತಾ ಹೇಳ್ತಾರೆ.  ಶಾಂಭವಿದು ಮದ್ವೆ ಆದ ಮೇಲೆ ನಿಂಗೆ ಕಷ್ಟ ಆಗುತ್ತೆ. ಯಾರೂ ಬಂದು ಇಲ್ಲಿರಕ್ಕೆ

ಆಗಲ್ಲ.ಎಲ್ರಿಗೂ ಕಷ್ಟ ಶಾಂಭವಿನೂ ಒಬ್ಬಳೆ ಇದಾಳೆ “

” ಅಲ್ಲಮ್ಮ ನಲವತ್ತೈದು ವರ್ಷ ಆಗೈತೆ ನನಗೆ ಈಗೆಂಥ  ಮದ್ವೆ” ಎಂದರು ಶಿವಮೂರ್ತಿ.” ನೀನು ಒಪ್ಕೊಳ್ಳಪ್ಪ ಅದನ್ನೆಲ್ಲಾ ಅತ್ತೆ ನೋಡ್ಕಂತರೆ” ಎಂದಳು ಗಿರಿಜ. ಆಗ

ಶಿವಮೂರ್ತಿ” ನೀನೇನೋ ಗಂಡನ ಮನೆಗೆ ಹೋಗ್ತೀಯ ಶಾಂಭವಿಗೆ ಕಷ್ಟ ಆಗುತ್ತಮ್ಮ ಮುಂದೆ. ಮಲತಾಯಿನ ತಂದು ಬಿಟ್ಟ  ಅಂತ ಆ ಹುಡುಗಿ ನೊಂದ್ಕಬಾರದು.”  ಶಿವಮೂರ್ತಿ ಹೇಳಿದರು. ಅಲ್ಲಿಯವರೆಗೆ ಸುಮ್ಮನಿದ್ದ  ಶಾಂಭವಿ “ಅಂಗೆಲ್ಲ ಏನೂ ಆಗಲ್ಲಪ್ಪ. ನಾನು ಅಡ್ಜೆಸ್ಟ್ ಮಾಡ್ಕಂತಿನಿ”ಎಂದಳು. “ಸರಿ ಆಯ್ತು.  ನಿಮ್ಮತ್ತೆಗೂ ಅಜ್ಜಿಗೂ ನೀವೇ  ಹೇಳ್ರಿ” ಎಂದು ಮಲಗಲು ಹೋದರು.

ಮಾರನೇ ದಿನವೇ ಗಿರಿಜಾ ಗೌರತ್ತೆಗೆ ಫೋನ್ ಮಾಡ್ಬಿಟ್ಟು

ಕರೆಸಿಕೊಂಡಳು. ಗೌರತ್ತೆ ಒಂದು ಸಂಬಂಧವನ್ನು ಆಗ್ಲೇ

ಮನದಲ್ಲೆ ಲೆಕ್ಕಾಚಾರ ಹಾಕಿಟ್ಟು ಕೊಂಡಿದ್ದರು. ಅವರಿಗೆ

ಪರಿಚಯವಿದ್ದ ಬಡ ಕುಟುಂಬವೊಂದರ  ಹುಡುಗಿಯೇ

ಮಹೇಶ್ವರಿ. ಗಂಡ ತೀರಿಕೊಂಡ ಮೇಲೆ ಮೂವರು ಹೆಣ್ಣು

ಮಕ್ಕಳನ್ನು ಸಾಕಿ ಬೆಳೆಸಿದ  ರಾಜಮ್ಮ ಇವರಿಗೆ ಹಿಂದಿನ

ಪರಿಚಯ. ಮಹೇಶ್ವರಿಯು  P U C ಮುಗಿಸಿ ಟೈಲರಿಂಗ್ ಕಲಿತು ಸಂಪಾದನೆ ಮಾಡುತ್ತಿದ್ದಳು. ಅವಳ ಇನ್ನಿಬ್ಬರು

ತಂಗಿಯರು ಕೂಡಾ ಟೈಲರಿಂಗ್ ಕಲಿತಿದ್ದರು. ಮೂವರು 

ವೃತ್ತಿ ಪರಿಣತಿ ಪಡೆದ ಕಾರಣ ಒಳ್ಳೆಯ ದುಡಿಮೆಯಿತ್ತು

ಮಹೇಶ್ವರಿಗೆ ವಯಸ್ಸು ಇಪ್ಪತ್ತೆಂಟಾದರೂ ಮದ್ವೆ ಇಲ್ಲ ಯಾರೂ ಮುಂದೆ ನಿಂತು ಗಂಡು ನೋಡದೆ ಇರುವುದರ 

ಕಾರಣವೋ ಅಥವ ಕಂಕಣ ಬಲ ಕೂಡಿ ಬರದಿರುವ ಕಾರಣವೋ ಏನೋ ಮದ್ವೆ ಆಗಿರಲಿಲ್ಲ. ಶಿವಮೂರ್ತಿ ಅಕ್ಕ ಗೌರಮ್ಮ ರಾಜಮ್ಮನನ್ನು ಕರೆಸಿ ವಿಷಯ ತಿಳಿಸಲು  ತಮ್ಮ ಬಡತನದ ಇತಿಮಿತಿಗಳನ್ನರಿತಿದ್ದ  ರಾಜಮ್ಮ ಒಪ್ಪಿ ಕೊಂಡರು. ಪರಿಸ್ಥಿತಿಯ ಅರಿವಿದ್ದ ಮಹೇಶ್ವರಿಯೂ ಸಹ ಒಪ್ಪಿಕೊಂಡಳು. ತಮ್ಮನ ಮನೆಗೆ ಬಂದ ಗೌರಮ್ಮನವರು ರಾಜಮ್ಮನಿಗೆ ಪೋನ್ ಮಾಡಿ ಮಗಳನ್ನು ಕರೆದುತರಲು

ತಿಳಿಸಿದರು. ಶಿವಮೂರ್ತಿಯ ಮುಜುಗರವನ್ನರಿತಿದ್ದ

ಗೌರಮ್ಮ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿದರು. ಹುಡುಗಿ

ಫೋಟೋ  ಶಿವಮೂರ್ತಿಯವರಿಗೆ  ತೋರಿಸಿ ಅವರ

ಒಪ್ಪಿಗೆ ಪಡೆದು ನಂತರ ಹುಡುಗಿಯನ್ನು ಕರೆಸಲಾಯಿತು

ರಾಜಮ್ಮ ಬರುವಾಗ ತನ್ನ ಅಣ್ಣಅತ್ತಿಗೆಯನ್ನು ಕರೆತಂದು

ಮಾತುಕತೆ ನಡೆಸಲಾಯಿತು. ಗಿರಿಜ ಶಾಂಭವಿಗೂ ಸಹಾ

ಲಕ್ಷಣವಾಗಿದ್ದ ಮಹೇಶ್ವರಿ ಒಪ್ಪಿಗೆಯಾದಳು. ಒಳ್ಳೆಯ ದಿನಗಳಿಲ್ಲದ ಕಾರಣ ಎರಡು ತಿಂಗಳ ನಂತರ ಮದುವೆ

ನಿಶ್ಚಯವಾಯ್ತು. ಆಗ ಗಿರಿಜಾ ಗೌರತ್ತೆಯನ್ನು ಶಾಂಭವಿ

ಜೊತೆ ಮಾಡಿ ಮತ್ತೆ ಮದುವೆಗೆ ಬರುವೆನೆಂದು ಗಂಡನ

ಮನೆಗೆ ಹೊರಟಳು. ಸರಳ ಮದುವೆಯಾದರೂ ಗಂಡಿಗೆ

ಎರಡನೆ ಮದುವೆಯಾದರೂ ಮಹೇಶ್ವರಿಗೆ ಮೊದಲನೆ

ಮದುವೆಯಾದ್ದರಿಂದ ಅವಳಿಗೆ ಸೀರೆ, ಒಡವೆಗಳನ್ನು

ಗೌರಮ್ಮ ತಂದರು. ತಮ್ಮನ ಅಭಿಪ್ರಾಯದಂತೆ ಮದುವೆ

ಅತ್ಯಂತ ಸರಳವಾಗಿ ಕೆಲವೇ ಆಪ್ತ ಬಂಧುಗಳೊಂದಿಗೆ  ದೇವಸ್ಥಾನದಲ್ಲಿ ನಡೆಯಬೇಕಿತ್ತು. ಮದುವೆ ಹದಿನೈದು

ದಿನಗಳಿರುವಾಗ ಗಿರಿಜಾ ತವರಿಗೆ ಬಂದಳು. ಗೌರಮ್ಮ ಊರಿಗೆ ಹೋಗಿ ಮದ್ವೆಗೆ ಮೂರು ದಿನ ಮುಂಚಿತವಾಗಿ 

ಬಂದರು. ಮದುವೆ ಅತ್ಯಂತ ಸರಳವಾಗಿ ಮನೆ ದೇವರು ರಂಗನಾಥ ಸ್ವಾಮಿಯ ದೇವಸ್ಥಾನದಲ್ಲಿ ನೆಡೆದು ಅಂದೇ

ಮಹೇಶ್ವರಿಯನ್ನು ಮನೆ ತುಂಬಿಸಿಕೊಳ್ಳಲಾಯಿತು.ಮದ್ವೆ

ನಂತರದ ಕಾರ್ಯಗಳನ್ನು ಮುಗಿಸಿ ಊರಿಗೆ ಹೋಗುವ 

ಹಿಂದಿನ ದಿನ ಗೌರಮ್ಮ ಗಿರಿಜಾ, ಶಾಂಭವಿ, ಮಹೇಶ್ವರಿ

ಮೂವರನ್ನು ಕರೆದರು. ಗಿರಿಜ ಮತ್ತು ಶಾಂಭವಿಯರು  ಮಹೇಶ್ವರಿಗೆ ಮನೆಯ ರೀತಿ ರಿವಾಜುಗಳನ್ನು ಕಲಿಸಲು ತಿಳಿಸುತ್ತಾ, ಮಹೇಶ್ವರಿಗೆ ಎಲ್ಲರೊಡನೆ ಹೊಂದಿಕೊಂಡು ಹೋಗುವ ಸಲಹೆ ನೀಡಿದರು. ಶಾಂಭವಿಯನ್ನು ಚೆನ್ನಾಗಿ

ನೋಡ್ಕಂಡರೆ ಶಿವಮೂರ್ತಿಯವರಿಗೂ ನೆಮ್ಮದಿ ಎಂದು

ಮಹೇಶ್ವರಿಗೆ ಕಿವಿಮಾತು ಹೇಳಿದರು. ಗೌರಮ್ಮ ಹೋದ ಎರಡು ದಿನಗಳ ನಂತರ ಗಿರಿಜಳ ಬಳಿ ಬಂದು ” ಇನ್ಮೇಲೆ

ನಾನೇ ಅಡುಗೆ ಮಾಡುತ್ತೇನೆ. ಅಡುಗೆಯವರು ಯಾಕೆ”

ಎಂದು ಮಹೇಶ್ವರಿ ಹೇಳಿದಳು. ಆಗ ಗಿರಿಜಳೇ “ಇನ್ನು

ಸ್ವಲ್ಪ ದಿನ ನೀವು ಹೊಂದಿಕೊಳ್ಳುವ ತನಕ ಇರ್ಲೇಳಮ್ಮ”

ಎಂದಳು. ಶಾಂಭವಿಯ ಬಳಿ ಪ್ರತಿದಿನ ಬಂದು  “ನಾಳೆ ಏನಡಿಗೆ ಮಾಡಿಸಲಿ ಹೇಳು” ಎಂದು ಕೇಳುತ್ತಾಳೆ. ಗಿರಿಜ ಊರಿಗೆ ಹೊರಟಾಗ ” ಗಿರಿಜ, ನಾನು ನಿಮ್ಮಿಬ್ಬರಿಗಿಂತ ವಯಸ್ಸಲ್ಲಿ ದೊಡ್ಡವಳು. ನನ್ನನ್ನು ನಿಮ್ಮಮ್ಮನಂತೆಯೇ ತಿಳಿಯಿರಿ. ಇನ್ಮು ಶಾಂಭವಿ ನೀನು ಓದಿನ ಕಡೆ ಗಮನ ಕೊಡು ನಾನುಮನೆ ಕಡೆ ನೋಡ್ಕಂತಿನಿ. ನನಗೆ ಗೊತ್ತಿಲ್ಲ ಎಂದಿದ್ದನ್ನು ತಿಳಿಸಿ ಹೇಳ್ರಿ” ಎಂದು ಮಹೇಶ್ವರಿ ಹೇಳಲು  ಗಿರಿಜಳಿಗೆ ಏನೊ ಒಂದು ರೀತಿಯ ಸಮಾಧಾನದ ಭಾವ

ಊರಿಗೆ ಬಂದ ಮೇಲೆ ಶಾಂಭವಿ ಫೋನ್ ಮಾಡಿದಾಗ

“ಅಕ್ಕ ಅಮ್ಮ ಇಲ್ಲ ಅನ್ನೋದನ್ನು ಬಿಟ್ಟರೆ ನನಗೇನೂ

ತೊಂದರೆಯಿಲ್ಲ ಕಣೆ” ಎಂದು ಹೇಳಿದ್ದನ್ನು ಗಿರಿಜಾ ಅಜ್ಜಿ

ಗಂಗಮ್ಮನಿಗೆ ಹೇಳಿದಾಗ ನಿರಾಳವಾದರೂ ಸಹ ಗತಿಸಿದ

ಮಗಳನ್ನು ನೆನೆದು ಕಣ್ಣೀರು ಹಾಕುತ್ತಿದ್ದರು.

ಬಹಳಷ್ಟು ಮಳೆಗಾಲಗಳು ಕಳೆದು ಹಳೆ ನೀರು ಹೋಗಿ ಹೊಸ ನೀರು ಹರಿದಿದೆ. ಗಿರಿಜಳಿಗೆ ಚಂದ್ರಶೇಖರನಲ್ಲದೆ

ಉಮಾ ಎಂಬ ಮಗಳಿದ್ದಾಳೆ. ಶಾಂಭವಿಯೂ ಎರಡು ಮಕ್ಕಳ ತಾಯಿಯಾಗಿ ಸಂತೃಪ್ತ ಗೃಹಿಣಿ. ಶಿವಮೂರ್ತಿ

ಹಾಗೂ ಮಹೇಶ್ವರಿಯವರಿಗೆ ಪ್ರಶಾಂತ ಹಾಗೂ ಪ್ರವೀಣ ಎಂಬ ಗಂಡು ಮಕ್ಕಳಿದ್ದಾರೆ. ತನ್ನಿಬ್ಬರು ಮಕ್ಕಳು ಶಾಲೆಗೆ

ಹೋಗಲು ಪ್ರಾರಂಭಿಸಿದಾಗ ಗಿರಿಜಳೂ ಸಹ ತನ್ನ ಅಜ್ಜಿ ಗಂಗಮ್ಮನಂತೆ ತನ್ನ ತವರಿಂದ ಬಂದಿದ್ದ ಜಮೀನಿನಲ್ಲಿ

ನೂರೈವತ್ತು ತೆಂಗಿನ ಗಿಡಗಳನ್ನು ನೆಡಿಸಿ ಅವುಗಳ ಮಧ್ಯೆ

ನಿಂಬೆ, ಪೇರಲ. ಸಪೋಟ ಗಿಡಗಳನ್ನು ಹಾಕಿ ಬೆಳೆಸಿದಳು

ತೋಟದ ಅಂಚಿನಲ್ಲಿ ಹಲಸು, ಮಾವು ಮತ್ತು ಹುಣಸೇ

ಗಿಡಗಳನ್ನು ಹಾಕಿದ್ದರ ಫಲ ಇಂದು ನಾಲ್ಕೆಕರೆ ತೋಟವು

ಹಸಿರಿನಿಂದ ನಳನಳಿಸುತ್ತ ಫಸಲು ನೀಡುತ್ತಿವೆ .ವರ್ಷದ

ಹಿಂದೆ ಅಜ್ಜಿ ಗಂಗಮ್ಮ ತೀರಿಕೊಂಡಿದ್ದಾಗ  ಬಂದಿದ್ದ ಶಿವ

ಮೂರ್ತಿಯವರು ತೋಟವನ್ನು ನೋಡಿ ಖುಷಿ ಪಟ್ಟರು

ಬೆಳೆಗಳ ಬಗ್ಗೆ ವಿಚಾರಿಸಿದಾಗ ಖುಷಿಯಿಂದ ಗಿರಿಜ ತನ್ನ

ಅಮ್ಮನ ನೆನಪಿನ ತೋಟವೆಂದೇ  ಹೆಮ್ಮೆಯಿಂದ ಹೇಳಿ ಕೊಂಡಿದ್ದಳು. ಇತ್ತೀಚೆಗೆ ಏಕೋ ರಾಜಶೇಖರ ಅರ್ಥಾತ್

ರಾಜಣ್ಣ ನಿನ್ನ ಹೆಸರಿಗೆ ತೋಟವನ್ನು ಬರೆಸ್ಕೋ ಎಂದು ಗಿರಿಜಳಿಗೆ ಹೇಳಿದ್ದರು. ಅಜ್ಜಿಯ ಸಾವಿನ ನಂತರ ಇದರ

ಬಗ್ಗೆ ಪ್ರಸ್ತಾಪಿಸಿದಾಗ ಶಿವಮೂರ್ತಿಯವರು”ಅದಕ್ಕೇನು

ಹಾಗೇ ಆಗಲಿ”ಎಂದಿದ್ದರು.ಮತ್ತೊಮ್ಮೆ ಹೋಗಿ ಕೇಳಲು  ವಿಚಾರಿಸಿ ತಿಳಿಸುತ್ತೇನೆ”ಎಂದು ಮುಂದಕ್ಕೆ ಹಾಕಿದ್ದರು  ಮತ್ತೊಮ್ಮೆ ಫೋನ್ ಮಾಡಿದಾಗ “ಆಯ್ತು ಬಾರಮ್ಮ”

ಎಂದಿದ್ದರು. ಮಾವಿನ ಹಣ್ಣುಗಳ ದೊಡ್ಡ ಬುಟ್ಟಿಯನ್ನು

ತೆಂಗಿನಕಾಯಿಗಳ ಚೀಲವನ್ನು ಕಾರಿನಲ್ಲಿಡಿಸಿಕೊಂಡು ಗಿರಿಜ ಊರಿನಿಂದ ಬಂದಳು. ಆಗ ಶಿವಮೂರ್ತಿಯಿನ್ನೂ  ಅಂಗಡಿಯಲ್ಲಿದ್ದರು. ಮಹೇಶ್ವರಿ ಮಗ ಪ್ರಶಾಂತನೊಡನೆ ಊಟಕ್ಕೆ ಬಡಿಸಿದ್ದಳು. ಶಿವಮೂರ್ತಿ ಮನೆಗೆ ಬಂದವರೇ ಊಟ ಮಾಡಿದ ಮೇಲೆ ಅಲ್ಲೇ ಇದ್ದ ಮಗ ಪ್ರಶಾಂತನಿಗೆ  ಅಂಗಡಿಗೆ ಹೋಗಲು ಹೇಳಿದರು. ಅವನು ಅತ್ತ ಹೋದ  ಮೇಲೆ “ಗಿರಿಜ ನಿನ್ನ ಮಗನಿಗೆ ತೋಟ ಇದೆ. ನನ್ನ ಗಂಡು ಮಕ್ಕಳಿಗ್ಯಾವ ತೋಟನೂ ಇಲ್ಲ. ಅದು ನನ್ನ ಗಂಡ್ಮಕ್ಕಳಿಗೆ  ಇರಲಿ ಬಿಡಮ್ಮ” ಎಂದು ಶಿವಮೂರ್ತಿ ಹೇಳಿದರು.ಆಗ ಗಿರಿಜ “ಹಂಗಾದ್ರೆ ನಾನು ಯಾರ ಮಗಳು ಹೇಳಪ್ಪ. ಅವತ್ತು ನಮ್ಮಮ್ಮನು ನೀನು ಇಬ್ರು ಯಾವತ್ತಿದ್ರೂ ಆ ಜಮೀನು ನಿಂದೇ ಅಂತ ಹೇಳಿದ್ದಕ್ಕಲ್ವೇನಪ್ಪ ನಾನು ಕಷ್ಟ ಪಟ್ಟು ತೋಟ ಮಾಡಿದ್ದು ನೀನು ಅವತ್ತೇ ಇದನ್ನು ಹೇಳ ಬೇಕಾಗಿತ್ತು. ಅದ್ಯಾಕಪ್ಪ  ಮಾತು ಬದಲಾಯಿಸ್ತಿದೀಯ” ಎನ್ನುವಾಗ ಅವಳಿಗೇ ಅರಿವಿಲ್ಲದೆ ಧ್ವನಿ ಜೋರಾಗಿತ್ತು. ಆಗ ಶಿವಮೂರ್ತಿಯು ಗಡಸು ಧ್ವನಿಯಲ್ಲಿ ” ಅವತ್ತಿನ ಕಥೆನೇ ಬೇರೆ ಇವತ್ತಿನ ಕಥೆನೇ ಬೇರೆ. ಬಿಟ್ಬಡು ಅದನ್ನ ನೀನು ಇಷ್ಟು ವರ್ಷ ಜಮೀನಿಗೆ ಹಾಕಿರ ಖರ್ಚು ಅಂತ ಎರಡು ಲಕ್ಷ ಕೊಡ್ತೀನಿ, ಇದನ್ನ ಬಿಟ್ಟು ಮುಂದಕ್ಕೆ ಬೇರೆ ಮಾತಿಲ್ಲ” ಎಂದರು.”ನಮ್ಮಮ್ಮ ಬದುಕಿದ್ರೆ ಇಂಥ ಮಾತು ಬರ್ತಿತ್ತೇ” ಎಂದಳು ಗಿರಿಜ ಗದ್ಗದಿತಳಾಗಿ.ಅಲ್ಲೇ ಒಳಗಿದ್ದ ಮಹೇಶ್ವರಿ ಬಂದು  ಏನೋ ಹೇಳ ಬೇಕೆನ್ನುವಷ್ಟರಲ್ಲಿಯೆ ಶಿವಮೂರ್ತಿಯವರು “ಮಹೇಶ್ವರಿ ಬಾಯ್ಮುಂಚ್ಕಂಡು  ಒಳಗೆ ಹೋಗು” ಎಂದು ಶಿವಮೂರ್ತಿ ಗದರಿಕೊಂಡರು “ಇದೇ ಏನಪ್ಪ ನಿನ್ನ ಕೊನೆ ಮಾತು” ಅಳುತ್ತಲೇ  ಗಿರಿಜಾ ಕೇಳಿದಳು. ಆಗ ಶಿವಮೂರ್ತಿ “ನಾನು ಹೇಳದನ್ನೆಲ್ಲ ಆಗ್ಲೆ ಹೇಳಿದೀನಿ” ಎನ್ನುತ್ತಾ ಎದ್ದು ಒಳಗೆ ಹೋದರು. ಆಗಲೇ ಎದ್ದು ನಿಂತ ಗಿರಿಜಾ ಅಳುತ್ತ “ಇವತ್ತೆ ಕೊನೇ ನನಗೂ  ಈ ಮನೆಗೂ ಋಣ ಹರೀತು” ಎನ್ನುತ್ತ ಹೊರನಡೆದಳು

ಅಳುತ್ತಲೇ ಕಾರಲ್ಲಿ ಕುಳಿತು ಡ್ರೈವರ್ ಗೆ “ನಡಿಯಪ್ಪ” ಎಂದಳು. ಸ್ಟಲ್ಪ ದೂರ ಹೋದ ನಂತರ ಅಳುಕಿನಿಂದಲೇ

ಡ್ರೈವರ್ “ಯಾಕ್ರಮ್ಮ ಅಳ್ತಿದಿರ”ಎಂದು ಕೇಳಿದನು. ಆಗ “ಏನೂ ಇಲ್ಲಪ್ಪ, ನಮ್ಮಮ್ಮನ  ನೆನೆಸಿಕೊಂಡೆ” ಎಂದು

ಹೇಳಿದರೂ ಅವಳು ನಿಲ್ಲಲೇ ಇಲ್ಲ. ಮನೆಗೆ ಬಂದಾಗ ಅತ್ತುಅತ್ತು ಕೆಂಪಾಗಿದ್ದ ಅಮ್ಮನ ಕಣ್ಣುಗಳನ್ನು ನೋಡಿದ ಉಮ “ಏನಾಯ್ತಮ್ಮ” ಎಂದಳು. “ಯಾಕೋ ಬಾಳ ತಲೆ ನೋಯ್ತಿದೆ ಕಣೆ. ಮಲಕ್ಕಂತಿನಿ ನಾನಾಗೇ ಎದ್ದು ಬರೋ  

ತನಕ ಎಬ್ಬಿಸ ಬೇಡ್ರಿ” ಎನ್ನುತ್ತ ರೂಮಿಗೆ ಹೋಗಿ ಮಲಗಿ ಬಿಟ್ಟಳು.”ಅಮ್ಮ.ಕಾಫಿ ಮಾಡಿ ಕೊಡ್ಲಾ” ಎಂದು ಉಮಾ

ಕೇಳಿದರೆ ” ಯಾವ್ದೂ ಬೇಡ ನನ್ನ ಪಾಡಿಗೆ ನನ್ನ ಮಲ್ಗಕ್ಕೆ ಬಿಡಮ್ಮ” ಎಂದು ಸಿಟ್ಟಿನಿಂದ ಹೇಳಿದಳು.ರಾತ್ರಿ ಅಂಗಡಿ ಮುಚ್ಚಿಕೊಂಡು ಬಂದ ತಂದೆ ಮಕ್ಕಳು ಏನೆಂದು ಕೇಳಲು  ಅಳುತ್ತಲೇ ಎಲ್ಲವನ್ನು ಹೇಳಿ ಮುಗಿಸಿದಳು.” ಅಜ್ಜಿ ತೀರಿ ಕೊಂಡಾಗ ಬಂದಿದ್ರಲ್ಲ ತಾತ ಆಗ್ಲೆನೇ ಈ ತೋಟ ನೋಡಿ ಪ್ಲಾನ್ ಮಾಡಿದ್ದಾರೆ. ಫಸಲಿಗೆ ಬಂದಿರೋ ತೋಟ ಕಣ್ಣು ಕುಕ್ಕೈತೆ. ಅವಾಗ ಮೊದಲನೆ ಹೆಂಡ್ತಿ ಕತೆ ಈಗ ಎರಡನೆ ಹೆಂಡ್ತಿ ಕತೆ. ಮೊದಲನೆ ಹೆಂಡ್ತಿ ಮಕ್ಕಳು ದುಡಿದದ್ದನ್ನು ಎರಡನೆ ಹೆಂಡ್ತಿ ಮಕ್ಕಳಿಗೆ ಕೊಡಬೇಕು ಇದೆಂಥ ನ್ಯಾಯ

ಎರಡು ಲಕ್ಷ ಕೊಡ್ತರಂತೆ ನಮ್ಮನ್ನೇನೂ ಕೂಲಿ ಆಳುಗಳು ಅಂಥಾ ತಿಳ್ಕಂಡ್ರೇನೋ “ಎಂದೆಲ್ಲ ಕೂಗಾಡಿಬಿಟ್ಟ ಮಗ

“ಗಿರಿಜ ಯಾಕ್ ಅಳ್ತೀಯಾ ಅದಿಲ್ಲದಿದ್ದರೆ ನಮಗೇನೂ ಬೇರೆ ಗತಿಯಿಲ್ಲವೇ. ಬಿಟ್ಟಾಕು ಅದಕ್ಕೂ ನಮಗೂ ಋಣ

ಇಲ್ಲ ಅನ್ಕಂಡ್ರಾಯ್ತು.ನಿನ್ನ ಹೆಸರಿಗೆ ಮಾಡಿಸ್ಕಳ್ಳದೆ ಅಲ್ಲಿ

ತೋಟ ಮಾಡಿದ್ದು ನಮ್ಮ ದಡ್ಡತನ” ರಾಜಣ್ಣ ಹೇಳಿದಾಗ

” ಇದು ದಡ್ಡತನ ಅಲ್ಲ ನಂಬಿಕೆ ದ್ರೋಹ” ಎಂದು ಉಮ

ಹೇಳಿದಳು. “ಅಮ್ಮ ಆ ತೋಟ ಅಂದ್ರೆ ಅವರಮ್ಮನೇ ಅಂತ ಜೀವ ಇಟ್ಕಂಡಿದ್ದಳು. ದುಡಿದು ತೋಟ ಮಾಡಿದ್ದು

ನೀರಿನಲ್ಲಿ ಹುಣಸೇ ಹಣ್ಣು ತೊಳೆದಂಗಾಯ್ತು” ಎಂದು

ಮಗ ದನಿಗೂಡಿಸಿದ. “ಈಗ ನಾವೆಷ್ಟು ಮಾತಾಡಿದ್ರೂ  ಅಷ್ಟೆ .ಜಮೀನು ಅವರ ಹೆಸರಿನಲ್ಲಿದೆ ಏನೂ ಮಾಡಕ್ಕೂ ಆಗಲ್ಲ ಅದರ ಆಸೆ ಕೈಬಿಟ್ಟರೆ ಒಳ್ಳೇದು” ಎಂದು ರಾಜಣ್ಣ

ಹೇಳಿದಾಗ ಚಂದ್ರು”ನಡಿಯಪ್ಪ ಅವರು ಹೀಗೆ ಮಾಡಿದ್ದು  ಸರೀನಾ ಅಂತ ಕೇಳಬೇಕು”ಎಂದಾಗ ರಾಜಣ್ಣ ಸಿಟ್ಟಿಗೆದ್ದು  

“ಹೋಗಿ ಭಿಕ್ಷೆ ಬೇಡಕ್ಕೆ ನಾನೇನು ಗತಿಗೆಟ್ಟಿಲ್ಲ.ಇನ್ನು ಅದ್ರ

ಬಗ್ಗೆ ಚರ್ಚೆ ಬೇಡ. ಬಿಟ್ಟಾಕ್ರಿ” ಎಂದು ತೀರ್ಮಾನಿಸಿದರು.

ಎಷ್ಟು ಸಮಾಧಾನ ಮಾಡಿದ್ರೂ ಸಹ  ಗಿರಿಜ ಎದ್ದು  ರಾತ್ರಿ ಊಟ ಮಾಡದೆ ಮಲಗಿದಳು.

ಬೆಳಿಗ್ಗೆ ಎದ್ದು ಮಾಮೂಲಿನಂತೆ ಕೆಲಸ ಕಾರ್ಯ ಮಾಡಿದ

ಗಿರಿಜ ನಾಗನನ್ನು ಕರೆದು “ಹಳೇ ತೋಟಕ್ಕೆಲ್ಲ ಇವತ್ನಿಂದ ಬೇಲಿ ಹಾಕಿ ಭದ್ರ ಮಾಡು” ಎಂದಳು.”ಏನಾಯ್ತು ಯಾಕೆ ಅಮ್ಮಾವ್ರೆ” ” ನಿನಗ್ಯಾಕೆ ಅದೆಲ್ಲ ಹೇಳಿದಷ್ಟು ಮಾಡದನ್ನು ಕಲಿ”ಎಂದಳು ರಾಜಣ್ಣನ ಹತ್ರ ಕುಳಿತು “ನಾನಿವತ್ನಿಂದನೆ ಒಂದು ಕೆಲ್ಸ ಶುರು ಮಾಡ್ತೀನಿ. ನೀವು ಬೇಡ ಅನ್ನಂಗಿಲ್ಲ  ನಮ್ಮ ಎಂಟೆಕ್ರೆ ಜಮೀನಿನಲ್ಲಿ ಖಾಲಿ ಇರೋ ನಾಕೆಕ್ರೆನಲ್ಲಿ ತೋಟ ಮಾಡಬೇಕು ಅಂತಿದೀನಿ. ಆ ತೋಟ ಹೋದ್ರೆ ಹೋಗ್ಲಿ ಅದರ ಅಪ್ಪನಂಥ ತೋಟ ಮಾಡಿ ನಮ್ಮಪ್ಪನಿಗೆ ತೋರಿಸ್ಬೇಕು” ಎಂದಳು. ಆಗ ರಾಜಣ್ಣ “ಅಪ್ಪಿತಪ್ಪಿನೂ

ಅದರ ಚಿಂತೆ ಮಾಡದಿದ್ದರೆ ಸಾಕು.ನಿನಗೇನೋ ಬೇಕು

ಎಲ್ಲಾ ಮಾಡು ನಾನು ಅಡ್ಡಿ ಮಾಡಲ್ಲ”ಎಂದು ಭರವಸೆ

ಕೊಡುತ್ತಾ  ಇವತ್ನಿಂದಲೇ ಶುರು ಮಾಡು ಎಂದರು

2 thoughts on “

  1. ಸರಾಗವಾಗಿ ಓದಿಸ್ಕೊಂಡು ಹೋಗಿದ ಕಥೆ. ರಾಜಣ್ಣನ ಗಂಭೀರ ನಿಲುವು ತುಂಬಾ ಹಿಡಿಸಿತು.

  2. ಕಥೆಯನ್ನು ಸರಳವಾಗಿ ಹೆಣೆದ ರೀತಿ ಆಪ್ತವಾಗುತ್ತವೆ ಹಾಗೂ ಸರಾಗವಾಗಿ ಓದಿಸಿಕೊಳ್ಳುತ್ತದೆ. ಮನುಷ್ಯನ ದುರಾಸೆ ಕಥೆಯಲ್ಲಿ ಚಿತ್ರಿಸಲಾಗಿದೆ

    ಜಬೀವುಲ್ಲಾ ಎಂ. ಅಸದ್

Leave a Reply

Back To Top