ಕಾದಂಬರಿ ಕುರಿತು`

ಬೆಟ್ಟದ ಜೀವ

ಡಾ.ಶಿವರಾಮ ಕಾರಂತ

ಶಾಂತಲಾ ಮಧು

ನನ್ನ ನೆಚ್ಚಿನ “ಬೆಟ್ಟದ ಜೀವ”ಕಾದಂಬರಿಯ ಒಂದು ನೋಟ”

“”ಬಾನಿನಲ್ಲಿ ಸೂರ‍್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗುಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ‍್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೀರ ಸೀರೆ ತೊಟ್ಟು ಬೇಟಕ್ಕೆ ನಿಂತ ಅಂಗನೆಯಾಯಿತು, ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು. “

“ಹಿಂದಿನ ದಿನ ಅದೇ ಬೆಟ್ಟ ನನಗೆ ಮೊಸರು ಗದ್ದೆಯಲ್ಲಿ ನಿಂತ ನೀಲ ಕಡೆಗೋಲಿನಂತೆ ಕಾಣಿಸಿತ್ತು. ಇಂದು ಹಿಮದ ಮೊಸರಿರಲಿಲ್ಲ. ನನ್ನೆದುರಿನ ಬೆಟ್ಟ ತನ್ನ ದಿಟ್ಟತನದಿಂದ, ಔನ್ನತ್ಯದಿಂದ ನನ್ನಂಥ ಎಷ್ಟೆಲ್ಲಾ ವ್ಯಕ್ತಿಗಳ ಎದೆಯನ್ನು ಭೀತಿಗೊಳಿಸಿ ತಲ್ಲಣಿಸಿರಬೇಕೋ ತಿಳಿಯೆ.”

ಪ್ರಸಿದ್ಧ ಕಾದಂಬರಿಕಾರರೆಂದೇ ಹೆಸರಾದ ಕೋಟ ಡಾ|| ಶಿವರಾಮ ಕಾರಂತರ (೧೯೦೨-೧೯೯೭) ‘ಬೆಟ್ಟದ ಜೀವ’ ಕಾದಂಬರಿಯ ಅವಿಸ್ಮರಣೀಯ ಸಾಲುಗಳು ಇವು.

ಶಿವರಾಮಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಪ್ರಕೃತಿಯ ವರ್ಣನೆ ಬಣ್ಣಿಸಲಸದಳ, ಅದೆಷ್ಟು ಬಾರಿ ಓದಿದರೂ ಕಾದಂಬರಿಯ ಆ ಅಪೂರ್ವ ಚೆಲುವು ಚಿರನೂತನವೆ.

ಬೆಟ್ಟದಲ್ಲಿ ಜೀವಿಸುತ್ತಿರುವ, ಜೀವಿಗಳ ಉಸಿರಿಗೆ ಉಸಿರಾದ ಪ್ರಕೃತಿಯನ್ನು ಭಾವನೆಗೆ ಭಾವಚಿತ್ರವಾಗಿಯೂ ಪ್ರತಿಬಿಂಬಿಸಿರುವುದು ನಮ್ಮ ಮಲೆನಾಡಿನ ಹೆಮ್ಮೆಯ ಕಾದಂಬರಿಕಾರರಾದ ಕಾರಂತರ ವಿಶೇಷ. ಇವರು ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರ ನಿರ್ದೇಶಕರು ಹಾಗೂ ಚಿಂತಕರು ಎಂದು ಹೆಸರಾಗಿದ್ದಾರೆ.

ಸಾಹಿತ್ಯದ ಹಲವು ಪ್ರಕಾರದಲ್ಲಿ ಕೆಲಸ ಮಾಡಿದ ಇವರ, ವಿಜ್ಞಾನ ಸಾಹಿತ್ಯ ಮಕ್ಕಳ ಸಾಹಿತ್ಯಗಳು ವಿಶೇಷ ಮನ್ನಣೆ ಪಡೆದಿವೆ. ತಮ್ಮ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ‘ಜ್ಞಾನಪೀಠ ಪ್ರಶಸ್ತಿ’ ಪಡೆದು ಕನ್ನಡ ಹಿರಿಮೆಯನ್ನು ಹೆಚ್ಚಿಸಿದ ಮಹನೀಯ ಈತ, ಇತಿಹಾಸಕಾರ ‘ರಾಮಚಂದ್ರ ಗುಹ’ ಅವರು ಕಾರಂತರನ್ನು ಸ್ವಾತಂತ್ರ್ಯೋತ್ತರ ಭಾರತದ ‘ರವೀಂದ್ರನಾಥ ಠಾಕೂರ್’ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯಿಲ್ಲ.

ಅವರ ಎಲ್ಲಾ ಕೃತಿಯನ್ನು ಓದಿ ಆನಂದಿಸಿದ ನನಗೆ ‘ಮರಳಿ ಮಣ್ಣಿಗೆ’ ಮತ್ತು  ‘ಬೆಟ್ಟದ ಜೀವ’ ಹೆಚ್ಚು ಅಪ್ಯಾಯಮಾನವಾಯಿತು.

ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾದ ಅವರ, ‘ಚೋಮನ ದುಡಿ’ ‘ಅಳಿದ ಮೇಲೆ’ ಬಹು ಚರ್ಚಿತ ಕಾದಂಬರಿಗಳು. ಮಲೆನಾಡಿನ ಅಂಗಳದಲ್ಲಿ ಬೆಳೆದ ನನಗೆ ಅವರ ಯಕ್ಷಗಾನ ಕುಣಿತ, ನೋಡುವ ಹಾಗೂ ಅವರ ಒಡನಾಟ, ಮಾತುಗಳನ್ನು ಕೇಳುವ ಅವಕಾಶ ದೊರೆಕಿದ್ದು ನನ್ನ ಪುಣ್ಯ ಎನ್ನಬೇಕು.

‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಬರುವ ಪಾತ್ರಗಳ ಮಾತು, ನಡೆ-ನುಡಿಗಳು, ಕಥೆಯ ಹರಿವು ನನಗೆ ನನ್ನ ಅಕ್ಕಪಕ್ಕದ ಮನೆಯ ದಿನನಿತ್ಯ ಜೀವನದ ಚಿತ್ರಣ ಎನ್ನುವಂತೆ ಭಾಸವಾಗುತ್ತದೆ. ಓದುತ್ತ ಓದುತ್ತಾ. ನಾನೂ ಅದರಲ್ಲಿ     ಒಬ್ಬಳಾಗಿ ಬಿಡುತ್ತೇನೆ.

ಬೆಟ್ಟದ ಜೀವ ಒಂದು ಸಣ್ಣ ಹವ್ಯಕ ಸಂಸಾರದ ಬಗ್ಗೆ ಡಾ! ಶಿವರಾಮ ಕಾರಂತರು ಬರೆದ ಅಪರೂಪದ ಕೃತಿ. ಈ ಕುಟುಂಬ ಒಂದು ಬೆಟ್ಟದ ಮೇಲೆ ವಾಸವಾಗಿರುತ್ತದೆ. ಪೂರ‍್ತಿ ಕಾದಂಬರಿ, ಈ ಕುಟುಂಬದ ಅತಿಥಿ ಸತ್ಕಾರ, ಅವರ ಕಷ್ಟಗಳು, ಜೀವನ ಕ್ರಮ, ಅವಿರತ ಶ್ರಮದ ಮೇಲೆ ಮೂಡಿಬಂದಿದೆ. ಸುಬ್ರಹ್ಮಣ್ಯದ ಕಾಡಿನಲ್ಲಿ ನಡೆಯುವಾಗ ದಾರಿತಪ್ಪಿ ಹೋದ ಲೇಖಕರು ಅದೇ ಕಾಡಿನ ಮೂಲೆಯಲ್ಲಿ ವಾಸವಿದ್ದ ಗೋಪಾಲಯ್ಯ ಹಾಗೂ ಶಂಕರಮ್ಮ ಎನ್ನುವ ಹವ್ಯಕ ದಂಪತಿಗಳ ಆದರ ಆತಿಥ್ಯಗಳಿಗೆ ಕಟ್ಟುಬಿದ್ದು, ನಾಲ್ಕುದಿನ ತಂಗಿ, ಅವರ ಮಾತುಗಳಿಂದ ಆ ಕುಟುಂಬದ ಕಥೆಯನ್ನು ತಿಳಿದುಕೊಳ್ಳುತ್ತಾರೆ. ಆ ಕುಟುಂಬದಲ್ಲಿ ಇರುವುದು ಇಬ್ಬರೇ. ಮಗ ಇಂಗ್ಲೀಷ್ ವಿದ್ಯಾಭ್ಯಾಸ ಮುಗಿಸಿ ಪೇಟೆಗೆ ಹೋಗಿ ಮರಳಿ ಎಂದೂ ಬಾರದೆ ಹೋಗುತ್ತಾನೆ. ಅವನ ದಾರಿಯನ್ನು ಕಾಣುವ ಈ ವೃದ್ಧ ದಂಪತಿಗಳ ಮುಗ್ಧತೆ ಹಾಗು ಶುದ್ಧ ಜೀವನ ಪ್ರಕೃತಿ ದತ್ತವಾಗಿ ಬಂದದನ್ನು ಎದುರಿಸುವ ದಿಟ್ಟತನ ಕಾದಂಬರಿಯಲ್ಲಿ  ಅತ್ಯಂತ ಸಹಜವಾಗಿ ಮೂಡಿಬಂದಿದೆ. ಎಲ್ಲಿಂದಲೋ ಬಂದ ಅಪರಿಚಿತ ವ್ಯಕ್ತಿಯನ್ನು ಆಧರಿಸಿ ಯಾವುದೇ ಅನುಮಾನಗಳಿಗೆಡೆಗೊಡದೆ ಗೋಪಾಲಯ್ಯ ದಂಪತಿಗಳು ತಮ್ಮ ಸಕಲ ಕಷ್ಟ ಕಾರ‍್ಪಣ್ಯಗಳನ್ನು, ಜೀವನದ ಸುಖದ ರಸಘಳಿಗೆಗಳನ್ನು ಲೇಖಕನ ಜೊತೆಗೆ ಹಂಚಿಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ,

ಗೋಪಾಲಯ್ಯ – ದಂಪತಿಗಳ ಮಗನ ಅಗಲಿಕೆಯ ನೋವು ಇಡೀ ಕಾದಂಬರಿಯ ವಸ್ತು. ‘ಎಲ್ಲಾ ಇದ್ದೂ ಏನೂ ಇಲ್ಲ’ ವಿಧಿಯ ಈ ಆಟಕ್ಕೆ ಆತಂಕ, ದುಃಖ ಇದ್ದರೂ ಅದನ್ನು ಎದುರಿಸುವ ದಿಟ್ಟತನ, ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸುವ ಅವರ ಮನಸ್ಥಿತಿಯಲ್ಲಿ ಎದ್ದು ಕಾಣುತ್ತದೆ. “ನಿಜ, ನನಗೆ ಈ ನೆನಪು ಬಂತೆಂದರೆ – ಗಳಿಗೆಯಲ್ಲ, ದಿನವೇ ಕಣ್ಮರೆಯಾಗುತ್ತದೆ. ಗಂಡುಸಾದ ನನಗೇ ಹೀಗಾದ ಮೇಲೆ, ಅವಳ ಹೃದಯ ಏನಾಗಬೇಡ! ಆದರೆ ಫಲವೇನು? ಅವನು ತಿರುಗಿ ನಮ್ಮ ಮನೆಗೆ ಬಂದಾನು ಎಂದು ಅನಿಸುವುದಿಲ್ಲ”.

“ಆದರೆ ದೇವರ ಇಚ್ಛೆಯೇ ಹಾಗಿದ್ದರೆ ಯಾರೇನು ಮಾಡಿಯಾರು?”

ಅವರ ಈ ಮಾತುಗಳು ಅವರ ಪೂರ್ತಿ ಜೀವನದ ದರ್ಶನ ಮೂಡಿಸುತ್ತದೆ.

ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ, ಮಲೆನಾಡಿನ ಕೌಟುಂಬಿಕ ವ್ಯವಸ್ಥೆ, ಜನರಿಗೆ ಹಿಡಿದ ಇಂಗ್ಲಿಷ್ ವಿದ್ಯಾಭ್ಯಾಸದ ಹುಚ್ಚು, ಮಲೆನಾಡಿನ ಕೃಷಿವ್ಯವಸ್ಥೆ, ಬೇಟೆ ಪದ್ಧತಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಹಾಗು ಸಾದೃಶ್ಯವಾಗಿ ಚಿತ್ರಿತವಾಗಿದೆ.

ಗೋಪಾಲಯ್ಯ, ಶಂಕರಮ್ಮ, ಶಿವರಾಮ, ದೇರಣ್ಣ, ಬಟ್ಯ, ಕಾಟು ಮೂಲೆ ನಾರಾಯಣ ಮೊದಲಾಗಿ ನಾಮಾಂಕಿತರಾದ ಕಾಡುವ ಪ್ರಾದೇಶಿಕ ವ್ಯಕ್ತಿ ಚಿತ್ರಗಳು; ಹುಲಿ ಬೇಟೆ, ಪಂಜ, ಗಿಡ್ಡಿನ ಕಾಫಿ, ಮಜ್ಜಿಗೆ ಹುಳಿ, ಎಣ್ಣೆ ಸ್ನಾನ, ಕುಮಾರಪರ‍್ವತವೇ ಮೊದಲಾದ ಬೆಟ್ಟಗಳ ದೃಶ್ಯ ಚಿತ್ತಾರ; ಆ ಬೆಟ್ಟಗಳಿಂದ ಹಳ್ಳಿಗಳ ಹೊಲಗದ್ದೆಗಳಿಗೆ ನುಗ್ಗುವ ಆನೆ, ಕಾಟಿ, ಕ್ರೂರ ಹುಲಿ, ಕಾಡುಹಂದಿಗಳ ದಾಂಧಲೆ; ಇವೇ ಮೊದಲಾಗಿ ಸುತ್ತಲಿನ ಹಳ್ಳಿಗಳಿಗೆ ಜೀವನಾಡಿಯಾಗಿರುವ ನದಿ ಕೆರೆಗಳ ಪರಿಚಯ; ಹಳೆಯ ಕಾಲದ ಕಾಡಿನ ಜೀವನವನ್ನು ಕಣ್ಣಮುಂದೆ ಬಿತ್ತರಿಸುತ್ತದೆ. ಕಾದಂಬರಿ ಓದುತ್ತಾ ಹೋದಂತೆ ಅದರಲ್ಲಿನ ಶಿವರಾಮನ ಪಾತ್ರದಾರಿಯೇ ನಾವಾಗುತ್ತೇವೆ. ಅದುವೇ ಈ ಕಾದಂಬರಿಯ ಶಕ್ತಿ.

ಕಾರಂತರ ಯಾವುದೇ ಕಾದಂಬರಿಗಳಿರಲಿ ಅದರಲ್ಲಿ ಸರ‍್ವಕಾಲಕ್ಕೂ ಸಲ್ಲುವ ಕತೆಯ ಓಘಕ್ಕೆ ತಡೆ ಒಡ್ಡದೆ ಸಹಜವಾಗಿ ಹರಿದು ಬರುವ ನುಡಿ ಮುತ್ತುಗಳಿರುತ್ತವೆ. ಆಗಿನ ಸಮಾಜದ ಸ್ಥಿತ್ಯಂತರಗಳನ್ನು, ತವಕ-ತಲ್ಲಣಗಳನ್ನು, ನೈತಿಕ ಮೌಲ್ಯ, ಪ್ರಜ್ಞೆಗಳನ್ನು ಕಟ್ಟಿಕೊಡುವ ಸಾಲುಗಳಿರುತ್ತವೆ. ಬೆಟ್ಟದ ಜೀವವು ಇದಕ್ಕೆ ಹೊರತಲ್ಲ. ಕಾದಂಬರಿಯಲ್ಲಿ ಬರುವ ನನ್ನ ನೆಚ್ಚಿನ ಸಾಲುಗಳಿವು

“ನಿಮ್ಮ ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ”

“ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ…”

“ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವರು ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕಬಲ್ಲ”

*****************************

ಶಾಂತಲಾ ಮಧು

Leave a Reply

Back To Top