ಕಾದಂಬರಿ ಕುರಿತು

ಕರ್ವಾಲೊ

ಪೂರ್ಣಚಂದ್ರ ತೇಜಸ್ವಿ

ಚೈತ್ರಾ ಶಿವಯೋಗಿಮಠ

“ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!”

ಬರವಣಿಗೆ ಕೊಡುವ ಆನಂದಕ್ಕಿಂತ ಓದು ಕೊಡುವ ಸುಖವೇ ಆಪ್ಯಾಯಮಾನ. ಅಗಾಧವಾದ ಪ್ರಕಾರಗಳನ್ನು ಹೊಂದಿರುವಂತಹ ಸಾಹಿತ್ಯ, ಕನ್ನಡ ಸಾಹಿತ್ಯ. ಜನರಿಂದ ಹೆಚ್ಚು ಓದಲ್ಪಡುವ ಪ್ರಕಾರವೆಂದರೆ ಅದು ಕಾದಂಬರಿಗಳು. ಸಮಯ ಸವೆಸುವುದಕ್ಕೊ, ಜ್ಞಾನಾರ್ಜನೆಗೊ, ಮನೊರಂಜನೆಗೋ ಹೀಗೇ ವಿವಿಧ ಕಾರಣಕ್ಕಾಗಿ ಜನ ಕಾದಂಬರಿಗಳನ್ನು ಓದುತ್ತಾರೆ. ತೇಜಸ್ವಿಯವರ ಕಾದಂಬರಿಗಳ ವೈಶಿಷ್ಟ್ಯವೆಂದರೆ ಮನೋರಂಜನೆಯ ಜೊತೆಗೆ ವಿಜ್ಞಾನವನ್ನು, ಪ್ರಪಂಚ ಜ್ಞಾನವನ್ನು ವಿಫುಲವಾಗಿ ನೀಡುತ್ತವೆ. ತೇಜಸ್ವಿಯವರ ಕಾದಂಬರಿಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಮೊದಲು ಓದುವುದು ಅವರ ‘ಕರ್ವಾಲೊ’ ಕಾದಂಬರಿಯನ್ನೆ. ಧ್ಯಾನ, ತಪಸ್ಯೆಗಳಂತೆ ವಿಜ್ಞಾನವೂ ಆತ್ಮಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಕೃತಿ ಕರ್ವಾಲೊ.

ಹೆಸರೇ ಸೂಚಿಸುವಂತೆ ಇದು ‘ಕರ್ವಾಲೊ’ ಎಂಬ ವಿಜ್ಞಾನಿ, ಅವನ ಅನ್ವೇಷಣೆಗಳು ಮತ್ತು ಇವೆಲ್ಲದರೊಟ್ಟಿಗೆ ತೇಜಸ್ವಿಯವರ ಅನುಭವಗಳ ಕುರಿತಾದ ಕೃತಿ. ಜೇನು ಸಾಕಾಣಿಕೆಯಿಂದ ಪ್ರಾರಂಭವಾಗುವ ಕಾದಂಬರಿ ಜೇನುಗಳ ಬಗ್ಗೆ,ಅವುಗಳ ಸಾಕಾಣಿಕೆಯ ಬಗೆಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ಜೇನು ನೊಣಗಳು ಗೂಡನ್ನು ಕಟ್ಟಿ ಮಕರಂದ ಸಂಗ್ರಹಿಸೋಕೆ ಹೋದಾಗ ಗೂಡಿನ ಸ್ಥಳ ಪಲ್ಲಟ ಮಾಡಿದಾಗ ಅವಕೆ ಆಗುವ ಗೊಂದಲಗಳು, ನಾಗರಹಾವಿನಂತೆ ಬುಸುಗುಡುವ ಕರಿತುಡುವೆ ಜೇನುಗಳು ಹೀಗೇ ಹಲವಾರು ವಿಷಯಗಳನ್ನು ಬಹಳ ಸ್ವಾರಸ್ಯಕರವಾಗಿ ಹೆಣೆಯುತ್ತಾ ಹೋಗುತ್ತಾರೆ.

ಕಾದಂಬರಿಯಲ್ಲಿ ಬರುವ ಪ್ಯಾರ, ಮಂದಣ, ಪ್ರಭಾಕರ, ಕರ್ವಾಲೋ, ಲೇಖಕರು ಹೀಗೇ ಎಲ್ಲಾ ಪಾತ್ರಗಳು. ಬಹಳಷ್ಟು ಆಪ್ತವೆನಿಸುತ್ತವೆ. ಕಿವಿ ಮತ್ತು ಪ್ಯಾರನ ಸನ್ನಿವೇಶಗಳು, ಮಂದಣನ ಮದುವೆಯ ಸನ್ನಿವೇಶಗಳು ಹಾಸ್ಯಭರಿತವಾಗಿದ್ದು ಓದುಗರಲ್ಲಿ ನಗೆ ಉಕ್ಕಿಸಿ ಹಗುರಾಗಿಸುತ್ತವೆ. ತನಗೇ ಅರಿವಿಲ್ಲದೆಯೇ ಮಂದಣ ಒಬ್ಬ ಒಳ್ಳೆಯ ಪರಿಸರ ವಿಜ್ಞಾನಿ ಎಂದು ಕರ್ವಾಲೋರವರು ಹೇಳಿದಾಗ ನಂಬದ ತೇಜಸ್ವಿಯವರು, ನಂತರ ಹಾಗೆ ಹೇಳುವ ಹಿಂದಿನ ಕಾರಣಗಳನ್ನು ತಿಳಿದು ನಂಬುತ್ತಾರೆ. ಹೀಗಿರುವಾಗ ಕಳ್ಳಭಟ್ಟಿಯ ವಿಚಾರದಲ್ಲಿ ಜೈಲಿಗೆ ಸೇರಿದ ಮಂದಣನನ್ನು ಬಿಡಿಸಲು ಪಡುವ ಪ್ರಯತ್ನಗಳು ಸ್ವಾರಸ್ಯಕರವಾಗಿದ್ದು ಜೊತೆಗೆ ಅಲ್ಲಲ್ಲಿ ಮಂದಣನ ನಡುವಳಿಕೆಗಳು ನಗು ತರಿಸುತ್ತವೆ.

ಇಡೀ ಕಾದಂಬರಿಯ ಕೇಂದ್ರ ಬಿಂದು, ಮೂರರ ಮುಂದೆ ಏಳು ಸೊನ್ನೆ ಹಾಕಿದಾಗ ಎಷ್ಟು ವರ್ಷಗಳಾಗುತ್ತೊ ಅಷ್ಟು ವರುಷಗಳ ಹಿಂದೆ ಇದ್ದ ಹಾರುವ ಓತಿಯನ್ನ ಅನ್ವೇಷಣೆ ಮಾಡಲು ಕರ್ವಾಲೋರ ನೇತೃತ್ವದಲ್ಲಿ ಪ್ಯಾರ, ಮಂದಣ, ಪ್ರಭಾಕರ, ಕಿವಿ (ತೇಜಸ್ವಿಯವರ ಸಾಕು ನಾಯಿ) ಮತ್ತು ತೇಜಸ್ವಿಯವರು ಹೊರಡುವುದು. ಸುಮಾರು ೩೦ ಪುಟಗಳಷ್ಟು ಅನ್ವೇಷಣೆಯ ಕಥೆ ಬಹಳಷ್ಟು ರೋಚಕವಾಗಿದ್ದು ಕೊನೆಗೆ ಬೆಟ್ಟದ ತುದಿಯಲ್ಲಿ ಕೋಡುಗಲ್ಲ ಮೇಲಿಂದ ಹಾರಿ ಕೈತಪ್ಪಿಸಿಕೊಳ್ಳುವ ಹಾರುವ ಓತಿಯ ಇಡೀ ಕಥಾನಕ ಕಣ್ಣೆವೆಯಿಕ್ಕದೆ ಓದಿಸಿಕೊಳ್ಳುತ್ತದೆ. “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಎನ್ನುವ ಕರ್ವಾಲೊರ ನುಡಿಗಳೊಂದಿಗೆ ಕಾದಂಬರಿ ಮುಗಿಯುತ್ತದೆ.

ಜೇನುನೊಣಗಳು, ಗ್ಲೋ ವರ್ಮ್, ಮಂಗಟೆ ಹಕ್ಕಿ, ಹಾರುವ ಓತಿ ಹೀಗೇ ಪರಿಸರದ ಬಗೆಗಿನ ಕೌತುಕಗಳೊಂದಿಗೆ, ಓದುಗನನ್ನು ಹಿಡಿದಿಡುವ ಕೌಶಲ್ಯ ಈ ಕಾದಂಬರಿಯ ವೈಶಿಷ್ಟ್ಯ ಮತ್ತು ಹಿರಿಮೆ.

ಚಿದಂಬರ ರಹಸ್ಯ, ತಬರನ ಕಥೆ, ಸುಶ್ಮಿತಾ ಮತ್ತು ಹಕ್ಕಿ ಮರಿ, ಕುಬಿ ಮತ್ತು ಇಯಾಲ, ಮಿಲೇನಿಯಂ ಸಿರೀಸ್ (೧೬ ಪುಸ್ತಕಗಳು) ಹೀಗೆ ಇನ್ನೂ ಅನೇಕ ಅಮೂಲ್ಯ ಕೃತಿಗಳನ್ನು ನೀಡಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ನಮನಗಳು

************************************

ಚೈತ್ರಾ ಶಿವಯೋಗಿಮಠ

Leave a Reply

Back To Top