ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ

ತಮ್ಮಣ್ಣ ಬೀಗಾರ

ಮಕ್ಕಳ ಸಾಹಿತಿ ತಮ್ಮಣ್ಣ ಅವರ ಕುರಿತು

ತಮ್ಮಣ್ಣ ಬೀಗಾರ ಅವರು ಯಲ್ಲಾಪುರದ ಬೀಗಾರದವರು.‌1959 ನವ್ಹೆಂಬರ್ 22 ರಂದು ಜನಿಸಿದರು. ಸ್ನಾತಕೋತ್ತರ ಪದವೀಧರ , ಸಿದ್ದಾಪುರದ ಬಿದ್ರಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 37 ವರ್ಷಗಳಿಂದ ಮಕ್ಕಳ ಜೊತೆ ಮಕ್ಕಳಾಗಿದ್ದರು. ಮಕ್ಕಳ ಸಾಹಿತ್ಯದ ಬಗ್ಗೆ ಬರೆಯುವವರು ವಿರಾಳತೀ ವಿರಳ. ಅದರೆ ತಮ್ಮಣ್ಣ ಮಕ್ಕಳ ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿಯಾಗಿ ಆಯ್ಕೆ ಮಾಡಿಕೊಂಡರು.‌ಚಿತ್ರ ಕಲೆ ಸಹ ಇವರ ಮತ್ತೊಂದು ಅಭಿವ್ಯಕ್ತಿ ಮಾಧ್ಯಮ‌.‌ತಮ್ಮ ಪಾಡಿಗೆ ತಾವು ಇದ್ದು ಬಿಡುವವರು. ಗುಬ್ಬಚ್ಚಿ ಗೂಡು,ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಮಲ್ನಾಡೆ ಮತಾಡು ಇವರ ಕವನ ಸಂಕಲನ ಗಳು ,‌ಅಮ್ಮನ ಚಿತ್ರ ,ಪುಟ್ಟನ‌ ಕೋಳಿ ಮುಂತಾದವು ಮಕ್ಕಳಾ ಕಥಾ ಸಂಕಲನಗಳು. ಬಾವಲಿ ಗುಹೆ ಮಕ್ಕಳ ಕಾದಂಬರಿ.
ಹಸಿರೂರು ಹುಡುಗ ಕೃತಿಗೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ‌ ದತ್ತಿ ಪ್ರಶಸ್ತಿ ಸಿಕ್ಕಿದೆ. ಉತ್ತಮ ರಾಜ್ಯ ಶಿಕ್ಷಕ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ ಸಹ ಇವರಿಗೆ ಸಂದಿವೆ.‌ಪ್ರಜಾವಾಣಿ ಶಿಶು ಕಾವ್ಯಪ್ರಶಸ್ತಿ ಸಹ ಪಡೆದಿದ್ದಾರೆ.


ಸಂಗಾತಿ ಕನ್ನಡ ವೆಬ್ ಗಾಗಿ ಮಕ್ಕಳ ಸಾಹಿತಿ
ತಮ್ಮಣ್ಣ ಬೀಗಾರ ಅವರು ನಾಗರಾಜ ಹರನಹಳ್ಳಿ ಅವರ ಜೊತೆ ಈ ಸಲ ಮುಖಾಮುಖಿಯಾಗಿ ದ್ದಾರೆ

……………………

ಕತೆ ಕವಿತೆಗಳನ್ನು ಯಾಕೆ ಬರೆಯುತ್ತೀರಿ?

ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅವನುಕಂಡುಕೊಂಡ ಅನುಭವ, ಸತ್ಯ, ಸಂಕಷ್ಟಗಳನ್ನೆಲ್ಲಾ ಕರಗಿಸಿಕೊಂಡಿರುತ್ತಾನೆ. ಅಂತಹುಗಳನ್ನೆಲ್ಲ ತನ್ನ ಆಸಕ್ತಿ, ಅವಕಾಶ, ಸಾಧ್ಯತೆಗಳ ಮೇಲೆ ಅಭಿವ್ಯಕ್ತಿ ಪಡಿಸಲು ಪ್ರಯತ್ನಿಸುತ್ತಾನೆ. ಅದರಿಂದಾಗಿಯೇ ಕಲೆಗಳೆಲ್ಲ ಹುಟ್ಟಿಕೊಂಡಿದ್ದು ಅನಿಸುತ್ತದೆ. ನಾನು ನನ್ನಂತಹ ಅನೇಕರು ಕತೆ, ಕವಿತೆಗಳನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಕಂಡುಕೊಂಡಿದ್ದಾರೆ. ಅದೇ ರೀತಿ ನಾನು ಕೂಡಾ ನನ್ನಲ್ಲಿ ಕರಗಿರುವ ಸಂವೇದನೆಗಳನ್ನ ಅಭಿವ್ಯಕ್ತಿ ಪಡಿಸಲು ಕತೆ ಕವಿತೆಗಳನ್ನು ಬರೆಯುತ್ತೇನೆ ಅಂದುಕೊಂಡಿದ್ದೇನೆ. ಇಲ್ಲಿ ನನ್ನಿಂದ ಸಮಾಜದ ಒಳಿತಿನ ವಿಸ್ತಾರಕ್ಕೆ ಒಂದಿಷ್ಟು ಸಹಾಯ ಆಗಬೇಕು ಹಾಗೂ ಸಮಾಜದ ಪ್ರೀತಿ ನನಗೆ ಸಿಗಬೇಕು ಎಂಬ ಆಸೆಯೂ ಮೈಗೂಡಿದೆ ಎಂದು ಹೇಳಬಹುದು. ನಾನು ವ್ಯಂಗ್ಯಚಿತ್ರ ಹಾಗೂ ಇತರ ಕಲೆಗಳನ್ನೂ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿದ್ದೇನೆ ಅನ್ನುವ ಖುಷಿಯೂ ಸೇರಿದೆ.

ಮಕ್ಕಳ ಸಾಹಿತ್ಯ ಕೃಷಿಗೆ ಒಲವು ಹೇಗೆ ಬಂತು, ಅಂತಹ ನಡೆಗೆ ಕಾರಣವೇನು?

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪ್ರೀತಿಯಿಂದ ವೃತ್ತಿ ನಿರ್ವಹಿಸಿದವನು. ಶಿಕ್ಷಕನಾದವನಿಗೆ ಮಕ್ಕಳೊಡನೆಯ ಸಂಬಂಧ ಮತ್ತು ಆಪ್ತತೆ ಹೆಚ್ಚು. ಮಕ್ಕಳಿಗೆ ಕತೆ, ಕವಿತೆ ಕೇಳುವುದು, ಹೇಳುವುದು, ಚಿತ್ರ ಬರೆಯುವುದು ಎಲ್ಲ ತುಂಬಾ ಇಷ್ಟ. ಮಕ್ಕಳಿಗೆ ಕಥೆ ಹೇಳುತ್ತ ಜೊತೆಗೆ ನನ್ನದೇ ರಚನೆಯ ಕಥೆ ಹೇಳಲು ಪ್ರಾರಂಭಿಸಿದೆ. ಮಕ್ಕಳಿಗಾಗಿ ಚಿತ್ರ ಬರೆಯುತ್ತ ಕಲೆಯನ್ನೂ ಬೆಳೆಸಿಕೊಂಡೆ. ಹೀಗೆ ಕಥೆ ಕವನಗಳನ್ನು ಮಕ್ಕಳಿಗಾಗಿ ಬರೆಯುತ್ತ… ಅವುಗಳಿಗೆ ಅವರ ಖುಷಿಯ ಪ್ರತಿಕ್ರಿಯೆ ಕಾಣುತ್ತ ನಾನು ಮಕ್ಕಳ ಜಗತ್ತಿನಲ್ಲಿಯೇ ಇನ್ನಿಲ್ಲದ ಪ್ರೀತಿಯಿಂದ ತೊಡಗಿಕೊಂಡೆ. ಪ್ರಸ್ತುತ ಮಕ್ಕಳಿಗಾಗಿ ಇಪ್ಪತ್ತೆರಡು ಕೃತಿ ಪ್ರಕಟಿಸಿರುವ ನಾನು ಮಕ್ಕಳ ಖುಷಿ ಹಿಗ್ಗಿಸುವ, ಹೃದಯ ವಿಸ್ತರಿಸುವ ಪ್ರಯತ್ನದಲ್ಲಿ ಸದಾ ತೊಡಗಿಕೊಂಡಿದ್ದೇನೆ.

ಶಿಕ್ಷಕ ವೃತ್ತಿ ಮತ್ತು ಮಕ್ಕಳ ಒಡನಾಟ ನಿಮ್ಮಲ್ಲಿ ಮಗುತನವನ್ನು ಪೋಷಿಸಿತೆ?

ನಿಜ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದು ಪ್ರೀತಿಯ ಧ್ಯಾನದಿಂದ ಸಿದ್ಧಿಸುವಂತಹದ್ದು. ಮಕ್ಕಳ ಸಾಹಿತ್ಯವೆನ್ನುವುದು ‘ಪ್ರಭುದ್ಧತೆಯ ಮೇಲೆ ಮುಗ್ಧತೆಯ ಸವಾರಿ’ ಎಂದು ಎಚ್. ಎಸ್. ವಿ. ಹೇಳಿದ್ದಾರೆ. ಮಗುತನವನ್ನು ನಮ್ಮಲ್ಲಿ ಪೋಷಿಸುವುದು ಮಕ್ಕಳ ಮೇಲಿನ ಪ್ರೀತಿಯೇ, ಅವರ ಒಡನಾಟವೇ. ಈಗ ನನಗೆ ಅರವತ್ತಾಗಿದ್ದರೂ ಮಕ್ಕಳಿಗಾಗಿ ಬರೆಯುತ್ತ… ಅವರೊಂದಿಗೆ ತಾದಾತ್ಮ್ಯ ಹೊಂದುವುದು, ಮಗುತನದ ಖುಷಿ ಅನುಭವಿಸುವುದು ಸಾಧ್ಯವಾಗಿದೆ. ಅದಕ್ಕೆ ವೃತ್ತಿ, ಮಕ್ಕಳ ಒಡನಾಟ ಪ್ರೀತಿಗಳೇ ಕಾರಣ.

ಮಕ್ಕಳ ಮೇಲಿನ ಅಕ್ಷರ ಪ್ರಯೋಗದ ಸಾಧ್ಯತೆಗಳನ್ನು ನೀವು ಶಾಲಾ ಕೋಣೆಯಲ್ಲಿ ಮಾಡಿದಾಗ ವಿಶೇಷ ಅನುಭವ ಆಗಿದ್ದುಂಟೆ?

   ನಾನು ಯಾವಾಗಲೂ ಮಕ್ಕಳು ಖುಷಿ ಖುಷಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತ ಅವರು ತಾನಾಗಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹಂಬಲಿಸಿದವನು. ಅದಕ್ಕಾಗಿ ಶಾಲೆಯಲ್ಲಿ ಅಂತಹ ಪರಿಸರ ಹಾಗೂ ಆಪ್ತತೆಯನ್ನು ಮೂಡಿಸುವುದು ಬಹು ಮುಖ್ಯವಾಗುತ್ತದೆ. ಮಕ್ಕಳಿಗಾಗಿ ಕಥೆ ಹೇಳುವುದು, ಅವರಿಂದಲೇ ಕಥೆ ಕವನ ಬರೆಯಿಸಿ ಹೊತ್ತಿಗೆ ತಯಾರಿಸುವುದು, ಚಿತ್ರ ಬರೆಯಿಸುವುದು, ಕಲಾಕೃತಿಗಳ ತಯಾರಿ, ನಾಟಕ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆ, ಎಲೆ ಕಲೆ, ಹಸಿರು ಶಾಲೆ, ಶೈಕ್ಷಣಿಕ ಉತ್ಸವ, ಕಲಾ ಪ್ರದರ್ಶನ ಹೀಗೆ ನನ್ನ ವೃತ್ತಿ ಉದ್ದಕ್ಕೂ ಮಾಡಿದ್ದೇನೆ. ಇದಕ್ಕೆ ಶಾಲಾ ಪರಿಸರವಷ್ಟೇ ಅಲ್ಲಕದೆ ಸಮಾಜದ ಎಲ್ಲ ಸ್ಥರದಿಂದಲೂ ಪ್ರೋತ್ಸಾಹ ಸಿಕ್ಕಿದ್ದು ಖುಷಿ ಉಂಟುಮಾಡುತ್ತದೆ. ಸರಕಾರಿ ಶಾಲೆ ಒಂದು ಮಾದರಿ ಶಾಲೆಯಾಗಿ ರೂಪುಗೊಂಡಿದ್ದು ಹೆಮ್ಮೆ.

ಕಥೆ ಅಥವಾ ಕವಿತೆ ಹುಟ್ಟುವ ಸಮಯ ಯಾವುದು?

ಕಥೆ ಕವಿತೆಗಳು ಹುಟ್ಟುವ ಸಮಯ ಯಾವುದು ಎಂದು ನಿರ್ಧಿಷ್ಟವಾಗಿ ಹೇಳಲಾಗದು. ನಾವು ನಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುತ್ತ ಅವುಗಳನ್ನು ನಾವು ಕಂಡುಕೊಂಡ ಸತ್ಯದ ಆಧಾರದ ಮೇಲೆ ಕರಗಿಸಿ ಕೊಂಡಿರುತ್ತೇವೆ. ಇಂತಹ ಕರಗಿರುವ ಸಂಗತಿಗಳೇ ಕಥೆ ಕವಿತೆಗಳಾಗಿ ಯಾವಾಗ ಬೇಕಾದರೂ ಹೊರ ಬರಬಹುದು. ಆದರೆ ಕಥೆ ಕವಿತೆಗಳನ್ನು ಬರೆಯುವವನ ಸಂವೇದನೆ, ಅಧ್ಯಯನ, ಪ್ರೀತಿ, ಆಸಕ್ತಿಗಳೆಲ್ಲ ಅವು ರೂಪುಗೊಳ್ಳುವಲ್ಲಿ ಮಹತ್ವ ಪಡೆದಿರುತ್ತವೆ.

 ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಯಾವುದು, ಪದೇ ಪದೇ ಕಾಡುವ ವಿಷಯಗಳಾವವು?

 ನಾನು ಮಕ್ಕಳ ಜಗತ್ತಿನವನು. ಮಕ್ಕಳು ಮತ್ತು ನಿಸರ್ಗ ನನ್ನ ಸಾಹಿತ್ಯದಲ್ಲಿ ನಿರಂತರವಾಗಿ ವಸ್ತುಗಳಾಗಿವೆ. ಮಕ್ಕಳ ಆಟ, ಖುಷಿ, ಸಿಟ್ಟು, ಸಂಕಟ ಎಲ್ಲವೂ ಅವರ ಸುತ್ತಲಿನ ಮನೆ, ಶಾಲೆ, ಹಸಿರಿನ ಪರಿಸರ ಮುಂತಾವುಗಳೊಡಗೂಡಿ ಕಾಣಿಸಿಕೊಂಡಿವೆ. ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ.

ನೀವು ಬರೆದ ಕಥೆ ಕವಿತೆಗಳಲ್ಲಿ ನಿಮ್ಮ ಬಾಲ್ಯ, ಹರಯ ಇಣುಕಿದೆಯೇ?

  ದಟ್ಟ ಅರಣ್ಯದಿಂದ ಕೂಡಿದ ಯಾವುದೇ ಆಧುನಿಕ ಸೌಲಭ್ಯ ಇಲ್ಲದ ಹಳ್ಳಿಯಲ್ಲಿ ನನ್ನ ಬಾಲ್ಯ ಕಳೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರದವನು ನಾನು. ಇಲ್ಲಿನ ಕಾಡು, ನೀರು, ಗುಡ್ಡ, ಬೆಟ್ಟ, ಆಗಿನ ಮಕ್ಕಳ ಸ್ವಾತಂತ್ರ್ಯ, ಆಟ, ಸಾಹಸಗಳೆಲ್ಲ ವಸ್ತುವಾಗಿ ನನ್ನ ಪುಸ್ತಕಗಳಲ್ಲಿ ಕಾಣಿಸಿ ಕೊಂಡಿವೆ. ನಂತರದ ವೃತ್ತಿ ಬದುಕಿನ ಉದ್ದಕ್ಕೂ ಪಡೆದ ಅನುಭವಗಳೂ ಸೇರಿವೆ. ನನ್ನ ‘ಹಸಿರೂರಿನ ಹುಡುಗ’ ಪುಸ್ತಕದಲ್ಲಿ ಬಾಲ್ಯದ ಕಥೆಗಳನ್ನು ಮೊಗೆದು ಇಟ್ಟಿದ್ದೇನೆ. ಎಲ್ಲ ಪುಸ್ತಕಗಳಲ್ಲೂ ಬಾಲ್ಯ ರೂಪಾಂತರದ ಮೂಲಕ ಇಣುಕುತ್ತಲೇ ಇರುತ್ತದೆ. ಪ್ರತಿಯೊಬ್ಬ ಲೇಖಕರಿಗೂ ಅವರ ಸಾಹಿತ್ಯದಲ್ಲಿ ಬಾಲ್ಯ ಹಾಗೂ ಅವರ ಪರಿಸರ ಪ್ರಭಾವಿಸುತ್ತಲೇ ಇರುತ್ತದೆ ಎಂದು ನನಗೆ ಅನಿಸುತ್ತದೆ.

 ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

 ನಾನು ಮಕ್ಕಳ ಮೇಲೆ ಬಹಳ ವಿಶ್ವಾಸ ಇಡುತ್ತೇನೆ. ಮಕ್ಕಳ ಹೃದಯ, ಮನಸ್ಸುಗಳು ವಿಸ್ತಾರ ಆಗುವುದರಿಂದ ಒಳ್ಳೆಯ ಸಮಾಜ ಮತ್ತು ಆಡಳಿತ ವ್ಯವಸ್ತೆಯ ನಿರ್ಮಾಣ ಆಗುತ್ತದೆ. ರಾಜಕೀಯ ಸೇರಿದಂತೆ ಎಲ್ಲರಿಗೂ ತಮ್ಮ ನಡೆಯ ಕುರಿತಾಗಿ ಮುಕ್ತ ಆತ್ಮಾವಲೋಕನ ಇರಬೇಕು. ನಮ್ಮ ನಾಯಕರ ನಡೆಗಳು ಸಮಾಜದ ಮೇಲೆ ಬಹುಬೇಗ ಪರಿಣಾಮ ಬೀರುತ್ತವೆ… ಇದರಿಂದಾಗುವ ಒಳಿತು ಮತ್ತು ಸಂಕಟಗಳ ಅರಿವು ಎಲ್ಲರಿಗೆ ಇರುವುದು ಅಗತ್ಯ.

ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು?

ನಮ್ಮ ವೃತ್ತಿಯಲ್ಲಿ ಪ್ರೀತಿಯಿಂದ ತೊಡಗಿಕೊಳ್ಳುತ್ತ, ಎಲ್ಲರನ್ನೂ ಗೌರವದಿಂದ ಕಾಣುತ್ತ ಪ್ರೀತಿ, ಸ್ನೇಹದ ಭಾವಗಳನ್ನು ವಿಸ್ತಾರ ಗೊಳಿಸುತ್ತ ಬದುಕುವುದೇ ದೇವರು ಪೂಜೆ ,ಧರ್ಮ ಎಲ್ಲವೂ ಆಗುತ್ತದೆ ಎಂದುಕೊಂಡಿದ್ದೇನೆ.

 ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ?

 ಮೊದಲಿನಂತಹ ಸಾಂಸ್ಕøತಿಕ ವಾತಾವರಣ ಇಲ್ಲ ಎಂದು ಹೇಳುತ್ತೇವೆ. ಆದರೂ ನಮ್ಮ ಸಮಾಜದಲ್ಲಿ ಸಾಂಸ್ಕøತಿಕ ಚಿಂತನೆ, ಚಟುವಟಿಕೆಗಳು ನಡೆಯುತ್ತಲೇ ಇವೆ. ಅದು ಹೆಚ್ಚಬೇಕು.

 ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ.

  ಮೊದಲಿನಿಂದಲೂ ನನ್ನಷ್ಟಕ್ಕೆ ನಾನು ಬರೆಯುತ್ತಾ ಬಂದಿದ್ದೇನೆ. ನನಗೆ ಆರ್.ವಿ. ಭಂಡಾರಿ. ಆರ್.ಪಿ.ಹೆಗಡೆ, ಸನದಿ, ವಿಷ್ಣು ನಾಯ್ಕ, ಆನಂದ ಪಾಟೀಲ ಮುಂತಾದ ಅನೇಕ ಹಿರಿಯ ಸಾಹಿತಿಗಳು ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದಾರೆ. ರಾಜ್ಯಾದ್ಯಂತ ನನ್ನ ಪುಸ್ತಕ ಓದುವ ಪ್ರೀತಿಯ ಬಳಗ ಬೆಳೆದಿದೆ. ರಾಜಕೀಯದ ಕುರಿತು ನಾನು ಯೋಚಿಸಿಲ್ಲ

.

 ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ?

 ನಮ್ಮ ದೇಶದ ಸಾಹಿತ್ಯ, ಸಾಂಸ್ಕೃತಿಕ ಹಿರಿಮೆ ಇದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಸಂವಿಧಾನ ನೀಡಿದೆ. ವಿಜ್ಞಾನ, ತಂತ್ರಜ್ಞಾನ ಒಟ್ಟಾರೆ ಅಭಿವೃದ್ಧಿಗಳಲ್ಲಿ ಪ್ರಗತಿ ಇದೆ. ಇದನ್ನೆಲ್ಲಾ ಬಳಸಿಕೊಂಡು ಪ್ರೀತಿ ,ಸ್ನೇಹದ ಅಡಿಯಲ್ಲಿ ನಡೆಯಬೇಕು ಎಂದುಕೊಳ್ಳುತ್ತೇನೆ.

 ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?

 ಮಕ್ಕಳಿಗಾಗಿ ಹೆಚ್ಚು ಬರೆಯುತ್ತೇನಾದ್ದರಿಂದ ಮಕ್ಕಳ ಸಾಹಿತ್ಯದ ಕುರಿತೇ ಹೇಳುವುದಾದರೆ… ಮಕ್ಕಳಿಗೆ ಇಷ್ಟ ಆಗುವ ಹಾಗೂ ಅವರಿಗೆ ಒಳಿತಾಗುವ  ಪುಸ್ತಕಗಳು ಹೆಚ್ಚು ಹೆಚ್ಚು ಬರಬೇಕು. ಈಗ ಹೊಸ ಕಾಲದ ಹೊಸ ವಸ್ತು ಸಂವೇದನೆಗಳ ಪುಸ್ತಕಗಳು ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಬರುತ್ತಿವೆ. ಅದನ್ನು ಆಕರ್ಷಕವಾಗಿ ಪ್ರಕಟಿಸುವ ಪ್ರಕಾಶಕರು ಬೇಕು ಹಾಗೂ ಮಕ್ಕಳಿಗೆ ತಲುಪುವಂತಾಗಬೇಕು. ಮಕ್ಕಳು ಓದಿಗೆ ತೆರೆದುಕೊಂಡರೆ ಸಮಾಜದ ಒಳಿತಿನ ನಡೆ ಬಲಗೊಳ್ಳುತ್ತದೆ.

ನಿಮ್ಮ ನಿಚ್ಚಿನ ಸಾಹಿತಿಗಳಾರು?

ತೇಜಸ್ವಿಯವರ ಪರಿಸರ ಪ್ರೀತಿಯ ಪುಸ್ತಕಗಳು ನನಗೆ ತುಂಬಾ ಆಪ್ತ. ಇಂಗ್ಲೀಷ ಓದು ಕಡಿಮೆ. ರಸ್ಕಿನ ಬಾಂಡ್ ಇಂಗ್ಲೀಷಿನಲ್ಲಿ ಮಕ್ಕಳಿಗಾಗಿ ಬರೆಯುತ್ತಾರೆ. ಅವರದೂ ಪರಿಸರದ ಮಧ್ಯ ಅರಳಿದ ಕಥೆಗಳೇ ಆಗಿವೆ. ಅವರ ಕಥೆಗಳನ್ನೂ ಓದಿದ್ದೇನೆ. ಈಗ ಚದುರಂಗರ ‘ವೈಶಾಖ’ ಓದುತ್ತಿದ್ದೇನೆ.

 ಹೆಚ್ಚು ಸಂತೋಷದ ಕ್ಷಣ ಯಾವುದು?

ಮಕ್ಕಳ ಖುಷಿ ಹೆಚ್ಚಿಸುವ ಕೆಲಸದಲ್ಲಿ ತೊಡಗುವುದು.

ನಿಮ್ಮ ನೆಚ್ಚನ ತಾಣ ಯಾವುದು?

ನಮ್ಮ ಜಿಲ್ಲೆಯ ಎಲ್ಲ ಹಸಿರು ತಾಣಗಳು.

…………….

ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

14 thoughts on “

  1. ಮಾತು ಕತೆ ಹೃದ್ಯವಾಗಿದೆ. ಸಾಹಿತ್ಯದ ಎಲ್ಲಾ ಮಗ್ಗಲುಗಳನ್ನೂ ಪರಿಶೀಲಿಸಿ ದ್ದೀರಿ. ಬೀಗಾರರು ಬೆಳೆದು ಮಕ್ಕಳ ಸಾಹಿತ್ಯದ ಹೆಮ್ಮರವಾಗಿ ಬೆಳೆಯಲೆಂದೇ ಈ ಹೊತ್ತಿನ ಆಶಯ.
    -ಮತ್ತೂರು ಸುಬ್ಬಣ್ಣ (94482 05956)

    1. ಪ್ರೀತಿಯ ಮಾತುಗಳಿಗೆ ವಂದನೆಗಳು ಸರ್

  2. ಸಂದರ್ಶನ ಸುಂದರವಾಗಿ ಮೂಡಿದೆ. ಬೀಗಾರರು ಕಾಡನಡುವೆ ಕಥೆ ಹುಟ್ಟಿಸಿ ಮಕ್ಕಳಿಗೆ ಕಾಡಿನಪ್ರೀತಿ ಹುಟ್ಟಿಸಿದವರು.

  3. ಸಂದರ್ಶನ ಓದಿದೆ.ಸಮಾಜ ಅಂದರೆ ಮಕ್ಕಳೆ,ಅವರಲ್ಲಿನ ವಿಕಾಸದಿಂದ, ಮಕ್ಕಳ ಮನಸುಅರಳಬೇಕು ಎನ್ನುವುದು ನಿಜ.ಬೀಗಾರರು ತಮ್ಮ ಅನುಭ ವವನ್ನು ಬಿಚ್ಚಿಟ್ಟಿದ್ದಾರೆ. ಯೋಚನೆಗಳು ಚೆನ್ನಾಗಿವೆ.ಅಭಿನಂದನೆಗಳು.
    ಅಕ್ಬರ್ ಸಿ ಕಾಲಿಮಿರ್ಚಿ,
    ಭಾಗ್ಯನಗರ ತಾ.ಜಿ.ಕೊಪ್ಪಳ.
    ಮೊಬೈಲ್.9731327829

  4. ತುಂಬಾ ಚೆನ್ನಾಗಿ ಮೂಡಿ ಬಂದಿದೆ

    ಮಕ್ಕಳ ಜೊತೆ …. ಬೆಳೆದಿದ್ದಿರಿ
    ಹಸಿರ ಜೊತೆ…..ಬದುಕಿದ್ದಿರಿ
    ಅನ್ನಿಸಿತು

  5. ಒಳ್ಳೆಯ ಸಂದರ್ಶನ…ಓದಿ ತುಂಬಾ ಖುಷಿಯಾಯಿತು..ನಾನು ಇವರ ಅಸಂಖ್ಯಾತ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ..

  6. ಬೀಗಾರ ಅವರ ಲೇಖನಗಳನ್ನು ಅನೇಕ ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ಅವರು ಆಯ್ದುಕೊಂಡ ಮಕ್ಕಳ ಸಾಹಿತ್ಯ ಬಹಳ ಅಪರೂಪದ ಬಗೆಯದು. ಅದರಲ್ಲಿ ಬರೆಯುವವರು ಇಲ್ಲ ಎನ್ನುವಷ್ಟು ಕಡಿಮೆ. ಅಂಥ ಪ್ರಕಾರಕ್ಕೆ ನ್ಯಾಯ ಒದಗಿಸಿದ್ದಾರೆ ಅವರು.
    ಬಹಳ ಪ್ರಾಮಾಣಿಕ ಅನಿಸಿಕೆಗಳು.
    ಇಬ್ಬರಿಗೂ ಅಭಿನಂದನೆಗಳು.

  7. ಶ್ರೀಯುತ ತಮ್ಮಣ್ಣ ಬೀಗಾರರು ಮಕ್ಕಳ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಮಕ್ಕಳ ಮನಸ್ಸಿನ ಹಾಗೂ ಮಗುವಿನ ಹೃದಯದ ಬೀಗಾರರು ಮೃದು ಮಾತಿನ ಮೃದು ಸ್ವಭಾವದವರು. ಮಕ್ಕಳ ಸಾಹಿತ್ಯಕ್ಕಾಗಿಯೇ ತಮ್ಮೆಲ್ಲ ಸಮಯವನ್ನು ವಿನಿಯೋಗಿಸುವ ಇವರು ಮುಗ್ಧ ಮಗುವಿನ ಹಾಗೆಯೇ ಇದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳ ಮನಸ್ಸಿನ ಮೇಲೆ ಪರಿಸರದ ಪ್ರೀತಿ ಹುಟ್ಟುವಂತೆ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಅಭಿನಂದನೆಗಳು ಅವರಿಗೆ.

Leave a Reply

Back To Top