ಸೃಜನಶೀಲರಾಗಿ

ಯಶಸ್ವಿ ವ್ಯಕ್ತಿಗಳಾಗಿ

ಸಾಮಾನ್ಯವಾಗಿ ನಾವು ಮಾಮೂಲಿ ಕೆಲಸಗಳನ್ನು ಮಾಮೂಲಿ ರೀತಿಯಲ್ಲಿ ಮಾಡಿ ಅತ್ಯದ್ಭುತ ಫಲಿತಾಂಶ ಬಯಸುತ್ತೇವೆ. ನಾವು ಮಾಡುತ್ತಿರುವ ಕೆಲಸವನ್ನು ಎಂದಿನಂತೆ ಮಾಡುವ ರೀತಿಯಲ್ಲಿಯೇ ಮುಂದುವರೆಸಿದರೆ ಹಿಂದೆ ಬಂದ ಫಲಿತಾಂಶವೇ ಬರುವುದು ಸಹಜ. ಕೆಲವರು ನಾವು ಮಾಡುತ್ತಿರುವ ಕೆಲಸವನ್ನೇ ಮಾಡಿ ನೋಡ ನೋಡುತ್ತಿದ್ದಂತೆ ಗೆಲುವು  ಪಡೆಯುತ್ತಾರೆ. ಎಲ್ಲರ ನೆದರಿನಲ್ಲಿಯೂ ಮಿಂಚುತ್ತಾರೆ.ತಾವೂ ಹಿಗ್ಗಿ ಹಲಸಿನಕಾಯಿಯಾಗುತ್ತಾರೆ.  ಅದನ್ನು ನಾವು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದು ಬಿಡುತ್ತೇವೆ. ಅವರು ಅದೃಷ್ಟವಂತರು ಎಂಬ ಹಣೆಪಟ್ಟಿ ಕಟ್ಟುತ್ತೇವೆ. “ಮನುಷ್ಯನು ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣಯಿಸುತ್ತದೆ.” ಎನ್ನುವ ಎಚ್ ಡಿ ಥೋರೇ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ  ನಾವು ತುಂಬಾ ದುರದೃಷ್ಟವಂತರು ಎಂದು ಕರಬುತ್ತೇವೆ.. ನಿಜ ಸಂಗತಿ ಎಂದರೆ “ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವುದಿಲ್ಲ; ಅವರು ಕೆಲಸ ಮಾಡುವ ರೀತಿ ವಿಭಿನ್ನವಾಗಿರುತ್ತದಷ್ಟೆ.”ಮಾಡುವ ಕಾರ್ಯಗಳ ಬಗೆಗೆ ಹಳೆಯದರ ಆಧಾರದ ಮೇಲೆ ವಿಭಿನ್ನವಾಗಿ ವಿಚಾರ ಮಾಡಿ ಹೊಸ ರೀತಿಯಲ್ಲಿ ನಿರ್ವಹಿಸುವುದೇ ಸೃಜನಶೀಲತೆ ಎಂದು ಕರೆಸಿಕೊಳ್ಳುತ್ತದೆ. ಹಳೆಯ ಪದ್ದತಿಗಳನ್ನು ನಂಬಿಕೊಂಡು ಅದಕ್ಕೆ ಜೋತು ಬಿದ್ದು ಪಡೆದ ಜ್ಞಾನವನ್ನು ಅರಿವಾಗಿಸಿಕೊಳ್ಳದೇ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ರೀತಿಯಲ್ಲಿ ಮುನ್ನಡೆಯುತ್ತಿರುವುದರಿಂದ ಹೀಗಾಗುತ್ತಿದೆ. ಈ ಮನಸ್ಥಿತಿಯಿಂದ ನಾವಿಂದು ಹೊರಬರಲೇಬೇಕಿದೆ. ಇಂಥ ಮನೋಭಾವವನ್ನು  ಕಂಡು ಕಾಳಿದಾಸ “ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ.” ಎಂದು ಹೇಳಿ ಹಳೆಯದರ ಪರಿಮಿತಿಯೆಡೆಗೆ ನಮ್ಮ ಗಮನ ಸೆಳೆದಿದ್ದಾನೆ. ಇತಿಹಾಸದ ಪುಟಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿ ತಮ್ಮ ಹೆಸರು ದಾಖಲಿಸಿಕೊಂಡ ಅಲ್ಬರ್ಟ್ ಐನಸ್ಟೀನ್, ಸಿ ವಿ ರಾಮನ್ ಥಾಮಸ್ ಅಲ್ವಾ ಎಡಿಸನ್, ಸರ್ ಎಮ್ ವಿಶ್ವೇಶ್ವರಯ್ಯನವರಂಥವರ ಯಶಸ್ಸಿಗೆ ಸೃಜನಶೀಲತೆಯು ಬಹುಮುಖ್ಯ ಪಾತ್ರ ವಹಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಸೃಜನಶೀಲತೆ ಎಂದರೆ. . . . .?

“ಮಾಡುವ ಕೆಲಸ ಕಾರ್ಯಗಳನ್ನು ಸಾಮಾನ್ಯವಾಗಿ ಯೋಚಿಸದೇ ವಿಭಿನ್ನ ದೃಷ್ಟಿಕೋನದಿಂದ ಆಲೋಚಿಸಿ ಹೊಸ ಸಂಶೋಧನೆಗಳಿಗೆ ಆವಿಷ್ಕಾರಗಳಿಗೆ ಮುನ್ನುಡಿ ಬರೆಯಲು ಸಹಕರಿಸುವ ಅಂಶವೇ ಸೃಜನಶೀಲತೆ ಎಂದು ಸೃಜನಶೀಲತೆಯು ನಮ್ಮನ್ನು ಇತರರಿಂದ  ವಿಭಿನ್ನ ಎಂದು ತೋರಿಸುತ್ತದೆ. ಜಗತ್ತಿನಲ್ಲಿ ಕುತೂಹಲಕಾರಿ ವಿಸ್ಮಯಕಾರಿ ಸಂಗತಿಗಳೆಡೆಗೆ ಕಣ್ಣರಳಿಸಿ ನೋಡುತ್ತ ಈ ಸತ್ಯ ಸಂಗತಿಗಳ ಬೆನ್ನು ಹತ್ತಿ ತಿಳಿದುಕೊಳ್ಳುವ ಹಂಬಲವನ್ನು ಮನದಲ್ಲಿ ತುಂಬಿಕೊಂಡು ನಾವೂ ಅಂಥ ಚಕಿತಗೊಳಿಸುವ ¸ಸಂಗತಿಗಳನ್ನು ಇದ್ದುದರಲ್ಲಿಯ ನ್ಯೂನತೆಗಳನ್ನು ತಿದ್ದಿ ಉತ್ತಮ ಪಡಿಸುವುದು ಹೇಗೆ ಎಂದು ನಿರಂತರವಾಗಿ ಯೋಚಿಸಿ ಊಹಿಸಿ ಕಲ್ಪನೆಗಳನ್ನು ಕಟ್ಟಿಕೊಂಡು ಆ ಕಲ್ಪನೆಗಳನ್ನು ನನಸಾಗಿಸುವುದೇ ಸೃಜನಶೀಲತೆ.ಹೊಸತನಕ್ಕೆ  ತುಡಿಯುವ ಮನ ಸಹಜವಾಗಿ ಸೃಜನಶೀಲತೆಯತ್ತ ವಾಲುತ್ತದೆ. ಇಂಥವರನ್ನು ಸೃಜನಶೀಲ ಮನಸ್ಸುಳ್ಳವರು ಎಂದು ಗುರುತಿಸಿ ಗೌರವಿಸುತ್ತೇವೆ.

ನೀವೂ ಸೃಜನಶೀಲರಾಗಬೇಕೇ?

ಹಾಗಾದರೆ ಈ ಅಂಶಗಳನ್ನು ನಿಮ್ಮದಾಗಿಸಿಕೊಳ್ಳಿ

ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ

ಯಾರೋ ಏನೋ ಹೇಳಿದರು ಎಂದು ಸುಮ್ಮನೆ ನಂಬಿ ಬಿಡಬೇಡಿ. ಪ್ರಶ್ನಿಸಿಕೊಳ್ಳಿ ಅದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ. ಉತ್ತರ ನಿಮಗೆ ಸಮಾಧಾನ ನೀಡುವವರೆಗೆ ಪ್ರಯತ್ನ ಮುಂದುವರೆಯಲಿ.

ಕುತೂಹಲವಿರಲಿ

ಮೂಲತಃ ಸೃಜನಶೀಲತೆ ನಿಂತಿರುವುದೇ ಕುತೂಹಲ ಪ್ರವೃತ್ತಿಯ ಮೇಲೆ. ಯಾವುದೇ ಸಂದರ್ಭ ಸನ್ನಿವೇಶ ಪ್ರಸಂಗಗಳಲ್ಲಿಯ ಅನುಭವಗಳನ್ನು ಕುತೂಹಲ ದೃಷ್ಟಿಯಲ್ಲಿಯೇ ನೋಡುವುದು. ಕುತೂಹಲಭರಿತರಾಗಿಯೇ ಆಸ್ವಾದಿಸುವುದನ್ನು ಮೈಗೂಡಿಸಿಕೊಳ್ಳಿ.

ಸ್ವಂತಿಕೆಯ ಹಂಬಲವಿರಲಿ

ಮತ್ತೊಬ್ಬರ ವಿಚಾರಗಳನ್ನು ಅಂಧಾನುಕರಣೆಯಂತೆ ಒಪ್ಪದಿರಿ. ಪರಾಮರ್ಶಿಸಿ ಸ್ವತಂತ್ರವಾದ ನಿಲುವುಗಳನ್ನು ತಳೆಯಿರಿ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಮಾನಸಿಕ ಸಂಘರ್ಷ ನಡೆಯುತ್ತದೆ. ನೀವು ತೆಗೆದುಕೊಂಡ ಸ್ವತಂತ್ರ ನಿರ್ಧಾರಗಳಿಗೆ ಪ್ರಬಲವಾದ ಸಮರ್ಥನೆಗಳಿರಲಿ.ಅವು ವಾಸ್ತವಿಕತೆಯಿಂದ ಕೂಡಿರಲಿ.

ಕಲ್ಪನಾಶಕ್ತಿ ಪುಟಿಗೊಳಿಸಿ

ಊಹಿಸುವ ಸಾಮರ್ಥ್ಯವೇ ಕಲ್ಪನಾಶಕ್ತಿ. ಅಗಾಧವಾದ ಕಲ್ಪನಾಶಕ್ತಿಯನ್ನು ಪುಟಿಗೊಳಿಸಿ ಸಾಧಿಸಬೇಕೆನ್ನುವ ಕ್ಷೇತ್ರದಲ್ಲಿ ಪೂರ್ವ ನಿರ್ಧರಿತ ಪರಿಕಲ್ಪನೆಗಳನ್ನು ಬಳಸಬೇಕೆಂದರೆ ಕಲ್ಪನಾಶಕ್ತಿ ಅತ್ಯಗತ್ಯ. ಕಲ್ಪನಾಶಕ್ತಿಯನ್ನು ವೃದ್ಧಿಸಿಕೊಂಡಷ್ಟು ವಿಷಯ ವಿಸ್ತರಿಸುವ ವಿಷ್ಲೇಶಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಸಣ್ಣ ಸಂಗತಿಯನ್ನೂ ವಿಭಿನ್ನ ಆಯಾಮದಿಂದ ನೋಡಿ ಅದಕ್ಕೆ ಹೊಸ ರೂಪವನ್ನು ನೀಡಲು ಸಾಧ್ಯವಾಗುವುದು.

ಪ್ರಯೋಗಶೀಲತೆ ಇರಲಿ

ಪ್ರಯೋಗಶೀಲತೆಯನ್ನು ಸೃಜನಶೀಲತೆಯ ತಾಯಿ ಎಂದು ಕರೆಯಬಹುದು. ಕೇಳಿದ ತಿಳಿದ ವಿಷಯಗಳ ಬಗ್ಗೆ ಗೋಚರ ಇಲ್ಲವೇ ಅಗೋಚರ ರೀತಿಯಲ್ಲಿ ಪ್ರಯೋಗಶೀಲತೆ ನಿರಂತರವಾಗಿ ನಡೆಸಿ. ಇದು ಅಪರೋಕ್ಷವಾಗಿ ನಿಮ್ಮಲ್ಲಿ ಸಾಹಸ ಪ್ರವೃತ್ತಿಗೆ ಬೇಕಾದ ಅಸಾಧಾರಣ ಧೈರ್ಯವನ್ನು ತುಂಬುತ್ತದೆ. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸುತ್ತದೆ.

ಚಿಂತನೆಯ ರೀತಿ ಬದಲಿಸಿ

ಹೇಳಿದ್ದನ್ನು ಕೇಳಿದ್ದನ್ನು ಓದಿದ್ದನ್ನು ಬರೆದಿದ್ದನ್ನು ಏಕಮುಖೀ ರೀತಿಯಲ್ಲಿ ಯೋಚಿಸಿ ಒಪ್ಪಿಕೊಂಡು ಬಿಡದೇ ಯಾವುದೇ ಒಂದು ವಿಷಯದ ಬಗ್ಗೆ ವಿವಿಧ ಆಯಾಮಗಳಲ್ಲಿ ಚಿಂತಿಸಿದರೆ ಒಂದೇ ಕಾರ್ಯವನ್ನು ವಿವಿಧ ರೀತಿಯಲ್ಲಿ ಮಾಡಲು ಹಲವಾರು ಸಾಧ್ಯತೆಗಳು ಸಿಗುತ್ತವೆ. ಹೀಗೇ ನಿಮ್ಮ ಏಕ ಮುಖಿ ಚಿಂತನೆಯನ್ನು ಬಹುಮುಖಿ ಚಿಂತನಾ  ವಲಯಕ್ಕೆ ವಿಸ್ತರಿಸಿಕೊಳ್ಳಿ.

ಹೊಸತನದ ಜೊತೆಗೆ ಮುಕ್ತತೆ ಇರಲಿ

ಸೃಜನಶೀಲತೆಯು ಹೊಸತನದ ವಿನ್ಯಾಸದಲ್ಲಿಯೇ ಅಡಗಿದೆ. ನೊಡುವ ನೋಟದಲ್ಲಿ, ಕಾರ್ಯ ನಿರ್ವಹಣೆಯಲ್ಲಿ,ಚಿಂತನೆಯಲ್ಲಿ ವರ್ತನೆಯಲ್ಲಿ ಒಟ್ಟಿನಲ್ಲಿ ಪ್ರತಿಯೊಂದರಲ್ಲಿ ಹೊಸತನವೇ ಮಿಂಚುತಿರಲಿ. ಪೂರ್ವಾಗ್ರಹಪೀಡಿತರಾಗಿ ಯಾವುದೇ ಒಂದು ನಿರ್ಧಿಷ್ಟ ವಿಚಾರಗಳಿಗೆ ಕಟ್ಟಿ ಹಾಕಿಕೊಳ್ಳಬೇಡಿ. ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಸಾಧಕ ಬಾಧಕಗಳನ್ನು ಗಮನದಲ್ಲಿರಿಸಿ ಕಾರ್ಯೋನ್ಮುಖರಾಗುವುದು ಉಚಿತ.

ಉತ್ಸಾಹ ಚಿಮ್ಮುತಲಿರಲಿ

ಉತ್ಸಾಹ ಹೊಸತನದ ಹೊಸ್ತಿಲಲ್ಲಿ ವಿವಿಧ ರೀತಿಯ ನೂತನ ವಿಚಾರಗಳಿಗೆ ನಾಂದಿ ಹಾಡುತ್ತದೆ. ಪ್ರತಿ ಬಾರಿ ಹೊಸತನಕ್ಕೆ ತುಡಿಯುವದರ ಜೊತೆಗೆ ಹಳೆಯದರಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿ ತೆಗೆಯಬೇಕು.ಅದನ್ನೇ ಬುನಾದಿಯನ್ನಾಗಿಸಿಕೊಂಡರೆ ಅವಿಷ್ಕಾರ ಪ್ರವೃತ್ತಿಯು ನಿಮ್ಮದಾಗುತ್ತದೆ. ಅವಿಷ್ಕಾರ ಪ್ರವೃತ್ತಿಯು ನಿಮ್ಮನ್ನು ಗೆಲುವಿನ ಶಿಖರದ ತುತ್ತ ತುದಿಯ ಮೇಲೆ ನಿಲ್ಲುವಂತೆ ಮಾಡುತ್ತದೆ.

ಪ್ರೇರೇಪಿಸಿಕೊಳ್ಳಿ

ಸೃಜನಶೀಲತೆಗೆ ಎಲ್ಲಡೆಯೂ ಮಣೆ ಮನ್ನಣೆ ಹೊಗಳಿಕೆ ಇದ್ದೇ ಇದೆ. ಇದರಿಂದ ಬಹಿರಂಗ ಪ್ರೇರಣೆ ದೊರೆಯುವುದು ಖಚಿತ.  ಕೇವಲ ಬಹಿರಂಗ ಪ್ರೇರಣೆಯೊಂದೇ ಸಾಲದು. ಈ ಬಹಿರಂಗ ಪ್ರೇರಣೆ ಅಂತಃಪ್ರೇರಣೆಯಾಗಿ ಪರಿವರ್ತನೆಯಾಗಬೇಕು. ನಿಮ್ಮನ್ನು ಪ್ರೇರೇಪಿಸಿಕೊಂಡಾಗ ಮಾತ್ರ ಸೃಜನಶೀಲತೆ ಹೊರೆ ಹೊಮ್ಮುವುದು.

ಸೃಜನಶೀಲತೆಯು ಎಲ್ಲರಿಗೂ ಎಟಕುವಂಥದ್ದು..ಏಕೆಂದರೆ  ಇದು ಮಾನವ ಸಹಜವಾದ ಗುಣ. ದಿನ ನಿತ್ಯದ ಬದುಕಿನಲ್ಲಿ ಜೀವನೋತ್ಸಾಹವನ್ನು ತುಂಬಿಕೊಂಡು ಸುತ್ತಮುತ್ತಲಿರುವ ಸಂಗತಿಗಳೆಡೆಗೆ ಆಸಕ್ತಿ ಯ ಕಂಗಳಿಂದ ನೋಡುವುದನ್ನು ರೂಢಿಸಿಕೊಂಡರೆ ಸೋಲಲ್ಲೂ ಸಂಭ್ರಮಿಸುವ ಗಳಿಗೆ ಸನ್ನಿಹಿತವಾಗುವುದು. ಸೋಲನ್ನು ಗೆಲುವಾಗಿ ಪರಿವರ್ತಿಸುವ ಗುಣ ಸೃಜನಶೀಲತೆಗಿದೆ. ಬದುಕಿನ ಎಲ್ಲ ಹಂತದ ಕಾರ್ಯಗಳ ಗೆಲುವಿಗೂ ಸೃಜನಶೀಲತೆ ಬೇಕೇ ಬೇಕು. ಸೃಜನಶೀಲತೆಯು ವಿವೇಕವನ್ನು ಹೆಚ್ಚಿಸುವುದು.ಎಂಥ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ಸಹನೆ ಕಳೆದುಕೊಳ್ಳದೇ ಪರಿಹಾರ ಕಂಡುಕೊಳ್ಳುವ ಪಕ್ವತೆ ನೀಡುವ ಶಕ್ತಿ,ನಮ್ಮ ಎಲ್ಲ ಶಕ್ತಿಗಳನ್ನು ಸಮರ್ಥವಾಗಿ ಉಪಯೋಗಿಸಿ ಸರ್ವತೋಮುಖ ವ್ಯಕ್ತಿತ್ವ ನೀಡುವ ಶಕ್ತಿ ಸೃಜನಶೀಲತೆಗೆ ಮಾತ್ರ ಇದೆ. ನೀವು ಯಶಸ್ಸು ಗಳಿಸಬೇಕೆಂದರೆ ನೀವು ನೂತನ ದಾರಿಗಳನ್ನು ಆರಿಸಬೇಕು.ಈಗಾಗಲೇ ಒಪ್ಪಿರುವ ನಡೆದಾಡಿರುವ ದಾರಿಗಳನ್ನು ಹೊರತುಪಡಿಸಿ ಸೃಜನಶೀಲತೆಯು ವಿಶ್ವದಾದ್ಯಂತ ಬಂದೂಕಿನ ಗುಂಡುಗಳಿಗಿಂತ ಹೆಚ್ಚು ಶಬ್ದ ಮಾಡುತ್ತ ಸಾಗುತ್ತದೆ ಎನ್ನುವುದು ನೆನಪಿರಲಿ. ಹಾಗಾದರೆ ತಡವೇಕೆ ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ.

***********************

ಲೇಖಕರ ಬಗ್ಗೆ

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

One thought on “

Leave a Reply

Back To Top