ವೃತ್ತಿಯಿಂದ ಇಂಜಿನಿಯರ್ ಆಗಿದ್ದ ಆಕೆಯ ಪತಿಯ ಅತ್ಯಂತ ಸೌಮ್ಯ ಆದರೆ ದೃಢ ನಿಲುವನ್ನು ತುಂಬಾ
ಇಷ್ಟಪಟ್ಟು ಆತನನ್ನು ಪ್ರೀತಿಸಿದಳಾಕೆ. ಆತನ ಹರವಾದ ಬಾಹುಗಳಲ್ಲಿ ತನ್ನ ತಲೆಯನ್ನು ಆನಿಸಿದಾಗ
ಪ್ರಪಂಚದ ಎಲ್ಲಾ ನೆಮ್ಮದಿ ಆತನಲ್ಲಿಯೇ ಆಕೆಗೆ ದೊರೆಯುತ್ತಿತ್ತು. ವಿವಾಹಕ್ಕೂ ಮುನ್ನ ಒಂದಷ್ಟು ವರ್ಷಗಳ ಒಡನಾಟ,ನಂತರ ಮದುವೆ ಮದುವೆಯ ನಂತರ ಅದೇ ಪ್ರೀತಿ ಮುಂದುವರೆದರೂ ಇತ್ತೀಚೆಗೆ ಏಕೋ ಆಕೆಗೆ ಆತನ ವರ್ತನೆಗಳು ಭ್ರಮ ನಿರಸನವನ್ನು ಉಂಟು ಮಾಡಿದ್ದವು.

ಈ ಮುಂಚೆ ಆತ ತನ್ನಲ್ಲಿ ಉಂಟು ಮಾಡುತ್ತಿದ್ದ ನೆಮ್ಮದಿ ಇದೀಗ ಆಕೆಯ ಪಾಲಿಗೆ ಅನವಶ್ಯಕ ಎಂಬಂತೆ ಭಾಸವಾಗುತ್ತಿತ್ತು. ಭಾವುಕ ಹೆಣ್ಣುಮಗಳಾದ ಆಕೆ ತುಸು ಹೆಚ್ಚೇ ರೋಮಾಂಚಕ ಕ್ಷಣಗಳನ್ನು ಆತನೊಂದಿಗೆ ಕಳೆಯಬಯಸುತ್ತಿದ್ದಳು.. ಚಿಕ್ಕ ಮಗು ಗೊಂಬೆಗಾಗಿ, ಐಸ್ ಕ್ರೀಮ್ ಕ್ಯಾಂಡಿಗಾಗಿ ಆಸೆ ಪಡುವಂತೆ ಆಕೆ ಆತನೊಂದಿಗಿನ ಮಧುರ ಕ್ಷಣಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಇದಕ್ಕೆ ತದ್ವಿರುದ್ಧವಾಗಿ ಆಕೆಯ ಪತಿ ಸಂಪೂರ್ಣ ವಾಸ್ತವವಾದಿಯಾಗಿದ್ದುದು ಆಕೆಗೆ ಬೇಸರವನ್ನುಂಟು ಮಾಡಿತ್ತು.ಕೊನೆಗೊಂದು ದಿನ ಬೇಸತ್ತ ಆಕೆ ತನ್ನ ಪತಿಗೆ ನಾವಿನ್ನು ಜೊತೆಯಾಗಿ ಇರುವುದರಲ್ಲಿ ಯಾವುದೇ ಅರ್ಥ ಇಲ್ಲ… ನಮ್ಮಿಬ್ಬರ ಬದುಕಿನ ದಾರಿ ಕವಲೊಡೆದಿದೆ…. ನಾವಿನ್ನು ಬೇರ್ಪಡುವುದು ಸೂಕ್ತ ಎಂದು ನನಗೆ ತೋರುತ್ತಿದೆ ನೀನೇನು ಹೇಳುವೆ? ಎಂದು ಪತಿಯನ್ನು ಕೇಳಿದಳು.

 ದಿಗ್ಭ್ರಮೆಗೊಂಡ ಆತ ಯಾಕೆ? ಎಂದು ಕೇಳಿದಾಗ ನಿನ್ನೊಂದಿಗೆ ಬದುಕಬೇಕೆಂಬ ಆಸೆಯನ್ನು ಪೋಷಿಸಲು ನನಗೆ ಯಾವುದೇ ಕಾರಣಗಳು ಉಳಿದಿಲ್ಲ ಎಂದು ನಿಷ್ಟುರವಾಗಿ ಹೇಳಿ ಆಕೆ ಎದ್ದು ಹೋದಳು. ಆ ಇಡೀ ರಾತ್ರಿ ಆತ ಸುಮ್ಮನೆ ಕುಳಿತು ಸಿಗರೇಟ್ ನ ಹೊಗೆಯ ಮಧ್ಯದಲ್ಲಿ ಕಾಲ ಕಳೆದನು.

 ಇದನ್ನು ನೋಡಿದ ಆಕೆಯ ಕೋಪ ಮತ್ತಷ್ಟು ಹೆಚ್ಚಿತು. ತನ್ನೊಂದಿಗೆ ಕೊಂಚವೂ ಸಿಡಿಮಿಡಿ ಮಾಡದೆ ಜಗಳ ಕಾಯದೆ, ತಾನು ಹೇಳಿದ ಒಂದು ಮಾತಿಗೆ ರಾತ್ರಿ ಇಡೀ ಸಿಗರೇಟು ಸುಡುತ್ತಾ ಕುಳಿತ ಪತಿಯನ್ನು ನೋಡಿ ಇಂಥ ವ್ಯಕ್ತಿಯೊಂದಿಗೆ ಜೀವನ ಪೂರ್ತಿ ಹೇಗೆ ಇರಬೇಕು ಎಂದು ವಿಷಣ್ಣಳಾಗಿ ನಕ್ಕಳಾಕೆ.

ಅಂದು ಮುಂಜಾನೆ ಊಟದ ಮೇಜಿಗೆ ಬಂದು ಕುಳಿತ ಆತ ಅಂತಿಮವಾಗಿ ನಿನ್ನ ಮನಸ್ಸು ಬದಲಾಗಲು ನಾನು ಏನು ಮಾಡಬೇಕು? ಎಂದು ಕೇಳಿದನು. ಒಬ್ಬ ವ್ಯಕ್ತಿಯನ್ನು ಆತ ಇರುವುದಕ್ಕಿಂತ ವಿಭಿನ್ನವಾಗಿ ಬದಲಿಸುವುದು ಕಷ್ಟ ಸಾದ್ಯ! ಎಂದು ಯಾರೋ ಹೇಳಿದ್ದು ಅದು ನಿಜವಾಗಿಯೂ ಸರಿಯಾಗಿಯೇ ಹೇಳಿದ್ದಾರೆ ಎಂದು ಆಕೆಗೆ ತೋರಿತು.

ಆತನ ಕಣ್ಣುಗಳಲ್ಲಿ ಆಳವಾಗಿ ನೋಡುತ್ತಾ ದೀರ್ಘವಾದ ನಿಟ್ಟುಸಿರನ್ನು ಬಿಟ್ಟು ಆಕೆ “ಬೆಟ್ಟದ ತುದಿಯ ಮೇಲಿರುವ ಹೂವನ್ನು ನೀನು ನನಗಾಗಿ ತರಬಲ್ಲೆಯ?? ಕಡಿದಾದ ಬೆಟ್ಟದ ಮೇಲಿಂದ ನೀನು ಬಿದ್ದು ಸಾಯಬಹುದು ಎಂಬ ಭಯವಿದ್ದರೂ ಕೂಡ ಈ ಕೆಲಸವನ್ನು ನೀನು ನನಗಾಗಿ ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದಳು.

 ಕೆಲ ಕ್ಷಣಗಳ ಮೌನದ ನಂತರ ನಿನ್ನ ಈ ಪ್ರಶ್ನೆಗೆ ನಾಳೆ ಮುಂಜಾನೆ ನಾನು ಉತ್ತರ ಹೇಳುತ್ತೇನೆ ಎಂದು ಆತ ಹೇಳಿದ… ಆತನ ಉತ್ತರದಿಂದ ಆಕೆಯಲ್ಲಿ ಉಳಿದ ಅಲ್ಪಸ್ವಲ್ಪ ಭರವಸೆಯು ಕೂಡ ಮುಳುಗಿ ಹೋಯಿತು.

ಮರುದಿನ ಮುಂಜಾನೆ ಆತನನ್ನು ಹುಡುಕಿಕೊಂಡು ಆತನ ಕೋಣೆಗೆ ಹೋದ ಆಕೆಗೆ ಗಾಜಿನ ಪೇಪರ್ ವೇಟ್ ಕೆಳಗೆ ಒಂದು ಪುಟ್ಟ ಕಾಗದದ ಮೇಲೆ ಆತನ
ಕೈಬರಹದ ಒಂದು ಪತ್ರ ಕಂಡು ಬಂತು.
ಕುತೂಹಲದಿಂದ ಅದರ ಮೇಲೆ ಕಣ್ಣಾಡಿಸಿದ ಆಕೆಗೆ
 ನನ್ನ ಒಲವೇ ನಾನು ನಿನಗಾಗಿ ಕಡಿದಾದ ಬೆಟ್ಟದ ಮೇಲಿರುವ ಹೂವನ್ನು ಖಂಡಿತವಾಗಿಯೂ ಹರಿದು ತರಲಾರೆ…. ಕ್ಷಮಿಸು.

 ಮೊದಲ ಸಾಲನ್ನು ಓದಿಯೇ ಆಕೆಯ ಹೃದಯದಲ್ಲಿ ಕೋಲಾಹಲ ಉಂಟಾಯಿತು. ಆದರೂ ತುಸು ಸಂಭಾಳಿಸಿಕೊಂಡು ಮತ್ತೆ ಮುಂದುವರೆದು ಕಾಗದವನ್ನು ಓದತೊಡಗಿದಳು. ಅದರಲ್ಲಿ
ಸ್ವಲ್ಪ ಸಮಾಧಾನದಿಂದ ನಾನು ಈ ತೀರ್ಮಾನವನ್ನು ಮಾಡಲು ಕಾರಣವೇನು ಎಂಬುದನ್ನು ಕೇಳು  ನೀನು ಯಾವಾಗಲೂ ಬಳಸುವ ಕಂಪ್ಯೂಟರ್ನಲ್ಲಿ ಸಾಫ್ಟ್ವೇರ್ ಪ್ರೋಗ್ರಾಮ್ ಗಳನ್ನು ಚೆಲ್ಲಾಪಿಲ್ಲಿ ಆಗಿಸಿ ಬಿಡುವೆ ಮತ್ತು ಏನು ಮಾಡಬೇಕು ಎಂದು ತೋಚದೆ ಅಳತೊಡಗುವೆ… ಆಗ ನಿನ್ನ ಎಲ್ಲಾ ಸಾಫ್ಟ್ವೇರ್ ಪ್ರೋಗ್ರಾಮ್ ಗಳನ್ನು ಮತ್ತೆ ಸರಿಪಡಿಸಲು ಅವುಗಳನ್ನು ಮರುಸ್ಥಾಪಿಸಿ ನಿನಗೆ ಅನುಕೂಲ ಮಾಡಿಕೊಡಲು  ನನ್ನ ಕೈಗಳ ಅವಶ್ಯಕತೆ ನನಗಿದೆ.

 ನೀನು ಎಲ್ಲಾದರೂ ಹೋಗುವಾಗ ಮನೆಯ ಕೀಲಿಯನ್ನು ಮರೆತು ಹೋಗುವೆ…. ಆಗ ನಾನು ಎಲ್ಲಿದ್ದರೂ ಕೂಡ ಮನೆಗೆ ಬಂದು ನಿನಗಾಗಿ ಬಾಗಿಲನ್ನು ತೆಗೆಯಲು ಮತ್ತೊಂದು ಕೀಯನ್ನು ನೀಡಲು ನನ್ನ ಕಾಲುಗಳನ್ನು ನಾನು ರಕ್ಷಿಸಿಕೊಳ್ಳಲೇಬೇಕು. ಅದು ಅಲ್ಲದೆ ಪ್ರವಾಸ ಪ್ರಿಯಳಾದ ನೀನು ಯಾವಾಗಲೂ ಹೊಸ ಸ್ಥಳಗಳಲ್ಲಿ ರಸ್ತೆಗಳನ್ನು ಮರೆತು ಗಾಬರಿಯಿಂದ ನಿಂತು ಬಿಟ್ಟಾಗ ನಿನಗೆ ದಾರಿ ತೋರಿಸಲು ನನಗೆ ನನ್ನ ಕಣ್ಣುಗಳ ಅವಶ್ಯಕತೆ ಇದೆ.

ಪ್ರತಿ ತಿಂಗಳು ನಿನ್ನ ಆ ದಿನಗಳಲ್ಲಿ ನಿನಗೆ ಬರುವ ಹೊಟ್ಟೆ ನೋವನ್ನು ಶಮನಗೊಳಿಸಲು ನನ್ನ ಅಂಗೈಯಿಂದ ಮೆದುವಾಗಿ ಒತ್ತಲು ನನ್ನ ಅಂಗೈಗಳ ಅವಶ್ಯಕತೆ ನನಗಿದೆ. ಜೊತೆಗೆ ಆ ಸಮಯದಲ್ಲಿ
ಮನೆಯಲ್ಲಿ ಇರಲು ಇಷ್ಟಪಡುವ ನಿನ್ನ ಒಂಟಿತನದ ಬೇಸರವನ್ನು ಹೋಗಲಾಡಿಸಲು ನಿನಗೆ ಕಥೆ ಹೇಳುವ ತಮಾಷೆ ಮಾಡಲು ನನಗೆ ನನ್ನ ಬಾಯಿಯ ಅವಶ್ಯಕತೆ ಇದೆ…. ಆದ್ದರಿಂದ ಈ ಸಾಹಸಕ್ಕೆ ನಾನು ಎಳಸಲಾರೆ.

ನಿನ್ನ ಕಣ್ಣುಗಳ ಆರೋಗ್ಯಕ್ಕೆ ಎಳ್ಳಷ್ಟು ಒಳ್ಳೆಯದಲ್ಲ ಎಂಬುದು ಗೊತ್ತಿದ್ದು ಕೂಡ ನೀನು ಯಾವಾಗಲೂ ಕಂಪ್ಯೂಟರ್ ಮುಂದೆ ಸ್ಥಾಪಿತಳಾಗಿರುವೆ… ಮುಂದೆ ವಯಸ್ಸಾದ ಕಾಲದಲ್ಲಿ ನಿನ್ನ ಕಣ್ಣು ಮುಂಜಾದಾಗ ನಿನಗೆ ಸಹಾಯ ಮಾಡಲು ನನ್ನ ಕಣ್ಣುಗಳನ್ನು ನಾನು ಸುರಕ್ಷಿತವಾಗಿ ಕಾಯ್ದುಕೊಳ್ಳಲೇಬೇಕು. ನೀನು ಇಚ್ಚಿಸಿದಲ್ಲಿ ನಿನ್ನನ್ನು ಕರೆದೊಯ್ದು ಪ್ರಕೃತಿಯ ಸೌಂದರ್ಯವನ್ನು ನಿನಗೆ ವರ್ಣಿಸಲು ನನಗೆ ನನ್ನ ಕಣ್ಣುಗಳು ಬೇಕೇ ಬೇಕು.

ನೀನು ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು  ಪ್ರೀತಿಸುವೆ…. ಆದ್ದರಿಂದ ನಿನಗಾಗಿ ನಾನು ನನ್ನನ್ನು ಸದೃಢವಾಗಿ ಇಟ್ಟುಕೊಳ್ಳಲು ಬಯಸುವೆ… ಹೂವಿಗಾಗಿ ಕಡಿದಾದ ಬೆಟ್ಟವನ್ನು ಹತ್ತಿ ಸಾಯಲು ನಾನೊಲ್ಲೆ ಎಂಬ ಪದಗಳನ್ನು ಓದುವಾಗ ಆಕೆಯ ಕಣ್ಣಿಂದ ಸುರಿದ ನೀರು ಪತ್ರದ ಮೇಲೆ ಹನಿ ಹನಿಯಾಗಿ ಬೀಳುತ್ತಿತ್ತು. ಕಣ್ಣೀರನ್ನು ಒರೆಸಿಕೊಂಡು ಆಕೆ ಪತ್ರ ಓದುವುದನ್ನು ಮತ್ತೆ ಮುಂದುವರೆಸಿದಳು

 ಇದೀಗ ನೀನು ನನ್ನ ಉತ್ತರವನ್ನು ಓದಿರುವೆಯಾದರೆ, ನನ್ನ ಉತ್ತರದಿಂದ ನಿನಗೆ ಸಂತೃಪ್ತಿ ಎನಿಸಿದರೆ ಮನೆಯ ತಲೆ ಬಾಗಿಲನ್ನು ತೆಗೆ, ನಿನಗಾಗಿ ನಿನ್ನಿಷ್ಟದ ಹಣ್ಣು ತರಕಾರಿಯನ್ನು ತಂದು ಕಾಯುತ್ತ ನಿಂತಿರುವೆ.

ಪತ್ರವನ್ನು ಅಲ್ಲಿಯೇ ಇಟ್ಟು ಕಣ್ಣೀರನ್ನು ಒರೆಸಿಕೊಂಡ ಆಕೆ ತುಸು ಓಡುವ ನಡಿಗೆಯಲ್ಲಿಯೇ ಹೋಗಿ ತಲೆ ಬಾಗಿಲನ್ನು ತೆಗೆದು ನೋಡಿದರೆ ತನ್ನ ಎರಡೂ ಕೈಗಳನ್ನು ಒಂದರೊಳಗೊಂದು ಸೇರಿಸಿ ತುಸು ಆತಂಕಭರಿತ ಕಂಗಳಿಂದ ಕಾಯುತ್ತಾನೆ ನಿಂತ ಪತಿಯನ್ನು ಕಂಡ ಆಕೆ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡು… ನೀನು ನನ್ನನ್ನು ಪ್ರೀತಿಸುವಷ್ಟು ಮತ್ತಾರೂ ನನ್ನನ್ನು ಪ್ರೀತಿಸಲಾರರು ಎಂದು ಇದೀಗ ನನಗೆ ಅರಿವಾಯಿತು. ಆದ್ದರಿಂದ ನಾನು ಬೆಟ್ಟದ ಮೇಲಿರುವ ಹೂಗಳನ್ನು ಅಲ್ಲಿಯೇ ಬಿಟ್ಟುಬಿಡಲು ತೀರ್ಮಾನಿಸಿರುವೆ ಎಂದು ಹೇಳಿದಾಗ ಆತನು ಕೂಡ ಆಕೆಯನ್ನು ಮೃದುವಾಗಿ ತಬ್ಬಿಕೊಂಡು ಆಕೆಯ ಹಣೆಗೆ ಮುತ್ತಿಟ್ಟನು.

 ಇದುವೇ ಜೀವನ ಮತ್ತು ಇದುವೇ ಪ್ರೀತಿ… ನಮ್ಮನ್ನು ಪ್ರೀತಿಸುವವರು ನಮ್ಮ ಸುತ್ತ ಇದ್ದಾಗ ಉತ್ಸಾಹವೇ ನಮ್ಮನ್ನು ಆವರಿಸಿರುತ್ತದೆ. ಉತ್ಸಾಹ ಉಲ್ಲಾಸಗಳು ನಮ್ಮ ಬದುಕಿನ ಬಹುಪಾಲನ್ನು ಆವರಿಸಿರಬಹುದು, ಆದರೆ ಕೇವಲ ಉಲ್ಲಾಸ ಉತ್ಸಾಹಗಳು ಸಂತೋಷಗಳು ಮಾತ್ರ ಜೀವನವಲ್ಲ. ಪ್ರತಿಯೊಬ್ಬರ ಜೀವನವು ವಿಭಿನ್ನ ವಿಶೇಷ ಮತ್ತು ವಿಶಿಷ್ಟ ಎಲ್ಲರೂ ಅವರವರ ಜೀವನದ ನಾಯಕ ಮತ್ತು ನಾಯಕಿಯರೇ. ಬೇರೆಯವರ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಕೆ ಮಾಡಿ ವ್ಯಥೆಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ.  
 ಪ್ರೀತಿಯನ್ನು ವ್ಯಕ್ತಪಡಿಸಲು ವಿಶೇಷ ಸಮಯದಲ್ಲಿ ಹೂವುಗಳನ್ನು ನೀಡುತ್ತಾರೆ ಎಂಬುದು ನಿಜ ಆದರೆ ಆ ತೋರಿಕೆಯ ಪ್ರೀತಿಯ ಹಿಂದೆ ನಿಜವಾದ ಪ್ರೀತಿ ತನ್ನ ಅಸ್ತಿತ್ವವನ್ನು ಹೊಂದಿರಬೇಕು… ಅದು ಜೀವನ ಮತ್ತು ಅದುವೇ ಜೀವನ ಮಾತ್ರ.
 ಪತಿ ಪತ್ನಿಗೆ ಪತ್ನಿ ಪತಿಗೆ ಪರಸ್ಪರ ಐ ಲವ್ ಯು ಹೇಳದೇ ಇದ್ದರೂ ಕೂಡ ಒಬ್ಬರಿನ್ನೊಬ್ಬರ ಕಾಳಜಿ ಮಾಡುವುದು ಪ್ರೀತಿಯ ಮತ್ತೊಂದು ರೂಪ. ಹೇಳದೆ ಮಾಡುವುದು ರೂಡಿಯೊಳಗುತ್ತಮ ಎಂಬ ಮಾತಿನಂತೆ ನಮ್ಮ ಭಾರತೀಯ ಸಂಪ್ರದಾಯದ ದಂಪತಿಗಳು ಜೀವಿಸುತ್ತಿದ್ದಾರೆ.. ಸನಾತನವಾದರೂ ಚಿರನೂತನವಾಗಿರುವ ನಮ್ಮ ಭಾರತೀಯ ವೈವಾಹಿಕ ಪದ್ಧತಿ ಎಂದೆಂದಿಗೂ ಅಜರಾಮರವಾಗಿರಲಿ.
 —————————————————————————————-

Leave a Reply

Back To Top