ಸ್ವಾತಿ ಹನಿ
ಅನಿತಾ ಕೃಷ್ಣಮೂರ್ತಿ
ಕಂಡಿಲ್ಲ ನೇರವಾಗಿ ನಾನೆಂದು ನಿನ್ನ
ಕಂಡಿದ್ದು ಆ ಬಾನಿನ ಮೇಘಗಳಲಿ.
ಈ ತಂಪೆರೆವ ತಂಗಾಳಿಯಲಿ
ನಗುತಿರುವ ಗುಲಾಬಿಯ ಪಕಳೆಯಲಿ.
ಕಂಡಿಲ್ಲ ನೇರವಾಗಿ ನಾನೆಂದು ನಿನ್ಜ
ಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,
ಆ ಆಗಸದ ಬಾನಾಡಿಯ ಹಾರಾಟದಲಿ
ಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ.
ಕಂಡಿಲ್ಲ ನೇರವಾಗಿ ನಾನೆಂದು ನಿನ್ನ
ಕಂಡಿದ್ದು ನಾ ಬರೆವ ಪದಗಳ ಭಾವದಲಿ,
ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,
ಎದೆಯ ಏರಿಳಿತದ ಬಡಿತದಲಿ.
************************