ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಮೊದಲ ನುಡಿ

ಅನುವಾದವೆಂಬ ಪದದ ಸರಿಯಾದ ಅರ್ಥ ತಿಳಿಯದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಎರಡು ಭಾಷೆಗಳು ತಿಳಿದಿದ್ದರೆ ಸಾಕು ಅನುವಾದ ತಾನೇ ತಾನಾಗಿ ಆಗುತ್ತದೆ ಎಂದು ತಿಳಿಯುವವರಿದ್ದಾರೆ. ಅನುವಾದವೆಂದರೆ ಅದೊಂದು ಯಾಂತ್ರಿಕವಾದ ಕೆಲಸವೆಂದು ಹೇಳುವವರಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಾಷೆಯ ಮಹತ್ವವೇನು, ಅನುವಾದದ ಮಹತ್ವವೇನು, ಅನುವಾದಕ/ಕಿಯಲ್ಲಿ ಇರಬೇಕಾದ ಪ್ರತಿಭೆಯೇನು, ಪಾಂಡಿತ್ಯವೇನು, ಗುಣಗಳೇನು, ಸೃಜನಶೀಲತೆಯೇನು-ಈ ಯಾವುದರ ಗೊಡವೆಯೂ ಇಲ್ಲದೆ ಸಾಹಿತ್ಯಲೋಕದಲ್ಲಿ ಅನುವಾದಕರಿಗೆ ಮೂಲ ಲೇಖಕರ ನಂತರದ ಸ್ಥಾನ ಕೊಡುವ ಹುನ್ನಾರ ಎಂದಿನಿಂದಲೂ ನಡೆಯುತ್ತಲೇ ಬಂದಿದೆ.


ಅನುವಾದದ ಉದ್ದೇಶ ಮತ್ತು ಮಹತ್ವಗಳೇನು ಎಂಬುದರ ಬಗ್ಗೆ ಒಮ್ಮೆ ಚಿಂತಿಸಿದರೆ ಸಾಹಿತ್ಯದ ಸಂದರ್ಭದಲ್ಲಿ ಅನುವಾದಕರ ಅಗತ್ಯವೆಷ್ಟಿದೆ ಎಂಬುದನ್ನು ಮನಗಾಣ ಬಹುದು.ಜಗತ್ತಿನ ಉದ್ದಗಲಕ್ಕೂ ಹರಡಿರುವ ಸಾವಿರಾರು ಭಾಷೆಗಳನ್ನು ಪರಿಗಣಿಸಿದಾಗ ಇಂದಿನ ಸಂಪರ್ಕ ಸಮೃದ್ಧಿಯ ಜಾಗತೀಕರಣದ ಸಂದರ್ಭದಲ್ಲಂತೂ ಅನುವಾದಕರು ಆಮ್ಲಜನಕದಷ್ಟು ಅಗತ್ಯವಾಗಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಒಂದು ಭಾಷೆಯಲ್ಲಿ ಬಂದ ಸಾಹಿತ್ಯವನ್ನು ಓದುವ ಓದುಗರು ತಮ್ಮ ಭಾಷೆಗಷ್ಟೆ ಸೀಮಿತರಾದರೆ ಅವರ ಜ್ಞಾನವು ಸಂಕುಚಿತಗೊಳ್ಳುತ್ತದೆ. ಜಗತ್ತಿನ ಇತರ ಮಾನವರನ್ನೂ ಇತರ ಸಂಸ್ಕತಿ ಮತ್ತು ಜೀವನಕ್ರಮಗಳನ್ನೂ ಸಾಹಿತ್ಯ ಕೃತಿಗಳ ಮೂಲಕ ತಿಳಿದುಕೊಂಡಾಗ ಮಾತ್ರ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರಗೊಂಡು ನಾವು ಬೌದ್ಧಿಕವಾಗಿ ಬೆಳೆಯಲು ಸಾಧ್ಯ. ಇದು ಅನುವಾದಗಳ ಮೂಲಕವೇ ಆಗಬೇಕಷ್ಟೆ. ಹೀಗೆ ಹೇಳುವಾಗ ನನಗೆ ನನ್ನ ಆರಂಭಿಕ ಅನುವಾದಿತ ಕೃತಿಯನ್ನು ತ್ರಿಶೂರಿನಲ್ಲಿ ಬಿಡುಗಡೆ ಮಾಡುತ್ತ ಮಲೆಯಾಳದ ಮಹಾನ್ ಲೇಖಕ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಹೇಳಿದ ಮಾತುಗಳು ನೆನಪಾಗುತ್ತವೆ : ‘ಯಾವುದೇ ಸಾಹಿತ್ಯದ ಓದುಗರು ತಮ್ಮ ಭಾಷೆಗಷ್ಟೇ ಸೀಮಿತರಾಗಿದ್ದರೆ ಅವರು ಬಾವಿಯೊಳಗಿನ ಕಪ್ಪೆಗಳಾಗುತ್ತಾರೆ. ವೈವಿಧ್ಯತೆಯಿಂದ ತುಂಬಿದ ಈ ಜಗತ್ತಿನಲ್ಲಿ ನಾವು ಇತರರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಹಾಗೆ ತಿಳಿದುಕೊಳ್ಳುವ ಮನಸ್ಸು ನಮಗಿರಬೇಕು .ನಾವು ನಮ್ಮ ಮನಸ್ಸಿನ ಕಿಟಿಕಿ ಬಾಗಿಲುಗಳನ್ನು ಹೊಸ ಗಾಳಿ ಮತ್ತು ಬೆಳಕುಗಳಿಗಾಗಿ ಸದಾ ತೆರೆದಿಡಬೇಕು. ಇದು ಅನುವಾದಗಳನ್ನು ಓದುವ ಮೂಲಕ ಸಾಧ್ಯ ‘ ಎಂದು.

ಅನುವಾದಕರಿಗೆ ಭಾಷೆಯ ಸಂಪೂರ್ಣ ಜ್ಞಾನದ ಜತೆಗೆ ಆ ಭಾಷೆಯನ್ನಾಡುವ ಜನರ ಸಂಸ್ಕೃತಿ, ಆಚಾರ ವಿಚಾರಗಳು, ಅವರಾಡುವ ವಿಶಿಷ್ಟ ನುಡಿ , ನುಡಿಗಟ್ಟು ಮತ್ತು ಗಾದೆಮಾತುಗಳು, ಅಲ್ಲಿನ ಭೌಗೋಳಿಕ ಪರಿಸರ, ಜನರ ಸ್ವಭಾವ, ವರ್ತನೆ-ಹೀಗೆ ನೂರಾರು ವಿಚಾರಗಳ ಆಳವಾದ ಅರಿವಿರಬೇಕು. ಅದಕ್ಕಾಗಿ ಅನುವಾದಕರಾಗ ಬಯಸುವವರಲ್ಲಿ ಅವಲೋಕನ ಮತ್ತು ಚಿಂತನ ಗುಣಗಳು ಸದಾ ಸಕ್ರಿಯವಾಗಿರಬೇಕು. ತಾವು ಅನುವಾದಿಸುವ ಎರಡು ಭಾಷೆಗಳ ಮೇಲಿನ ಪ್ರಭುತ್ವವನ್ನು ಮೊನಚುಗೊಳಿಸುವ ಆಸಕ್ತಿ ಮತ್ತು ಪರಿಶ್ರಮಗಳತ್ತ ಅವರ ಗಮನವಿರಬೇಕು.

ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ಅನುವಾದಕರ ಅಗತ್ಯ ಎಂದಿಗಿಂತ ಹೆಚ್ಚು ಗುರುತಿಸಲ್ಪಟ್ಟಿದೆ..ಅದೇ ರೀತಿ ಸಾಕಷ್ಟು ಕೃತಿಗಳೂ ಅನುವಾದಗೊಳ್ಳುತ್ತಿವೆ.ಕುವೆಂಪು ಭಾಷಾ ಭಾರತಿ, ಭಾರತೀಯ ಭಾಷಾ ಸಂಸ್ಥಾನ, ಕೇಂದ್ರ ಸಾಹಿತ್ಯ ಅಕಾಡೆಮಿ, ಮತ್ತು ಇನ್ನೂ ಅನೇಕ ಖಾಸಗಿ ಪ್ರಕಾಶನ ಸಂಸ್ಥೆಗಳು ಅನುವಾದಿತ ಕೃತಿಗಳನ್ನು ಹೊರತರುತ್ತಿವೆ. ನಾನು ಈ ಅಂಕಣದಲ್ಲಿ ನನ್ನ ಗಮನ ಸೆಳೆದ ಕೆಲವು ಅನುವಾದಿತ ಕೃತಿಗಳ ಸ್ಥೂಲ ಪರಿಚಯವನ್ನಷ್ಟೇ ಮಾಡುತ್ತೇನೆ. ಅವುಗಳ ರಕ್ಷಾಪುಟ ಮತ್ತು ಪ್ರಕಟಣಾ ವಿವರಗಳನ್ನು ನೀಡುವ ಮೂಲಕ ನೀವು ಅವುಗಳನ್ನು ಸಂಪಾದಿಸಿ ಓದುವ ಆಸಕ್ತಿ ತೋರಿಸಬೇಕೆಂಬುದು ನನ್ನ ಈ ಅಂಕಣದ ಉದ್ದೇಶ.

*************************************

ಲೇಖಕರ ಬಗ್ಗೆ:-

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

7 thoughts on “

  1. ನಿಜ ಮೇಡಂ, ಅನುವಾದಕರ ಮನೋಭಾವ,ಆಸಕ್ತಿ, ಭಾಷೆಯ ಪ್ರಭುದ್ದತೆ ಇವು ಅನುವಾದ ಕೃತಿಗೆ ನ್ಯಾಯ ಒದಗಿಸಬಲ್ಲದು..

  2. ನಿಜ ಮೇಡಂ, ಅನುವಾದಕರ ಮನೋಭಾವ,ಆಸಕ್ತಿ, ಭಾಷೆಯ ಪ್ರಭುದ್ದತೆ ಇವು ಅನುವಾದ ಕೃತಿಗೆ ನ್ಯಾಯ ಒದಗಿಸಬಲ್ಲದು..

  3. ನಿಜ. ಗಾದೆ ಮಾತುಗಳು ಕೂಡ ವಿಭಿನ್ನವಾಗಿರುತ್ತವೆ. ಅನುವಾದ ಮಾಡುವಾಗ ಮಕ್ಕೀ ಕಾ ಮಕ್ಕೀ ಅನುವಾದ ಮಾಡಿದರೆ ಅರ್ಥ ಹೋಗಿ ಅನರ್ಥವೇ ಆಗುತ್ತದೆ.

  4. ನಾನು ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡಿಗ. ಮೂರು‌ ತೆಲುಗಿನ ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದೇನೆ.‌ಕನ್ನಡದಿಂದ ತೆಲುಗಿಗೆ ಅನುವದಿಸಿದ ಹಲವಾರು ಕತೆಗಳು ತೆಲುಗಿನ‌ ಪತ್ರಿಕೆಗಳಲ್ಲಿ ಬಂದಿವೆ. ನಿಮ್ಮ ಈ ಬರಹ ನನಗೆ ಸಹಾಯಕವಾಗಬಹುದು.

  5. ತಮ್ಮ ಅಂಕಣ ಬರಹಕ್ಕೆ ಸುಸ್ವಾಗತ ಮೇಡಮ್. ತಮ್ಮ ಬರಹದ ಓದು ಯಾವತ್ತೂ ಖುಷಿಯ ಸಂಗತಿ. ಅನುವಾದ, ಭಾವಾನುವಾದ (translation, transcreation) ಇತ್ಯಾದಿಗಳ ಕುರಿತು ನಿಮ್ಮಷ್ಟು ಅನುಭವ ಇನ್ನಾರಲ್ಲಿ…

  6. ಅನುವಾದ ಮತ್ತು ಅನುವಾದ ಸಾಹಿತ್ಯದ ಬಗ್ಗೆ ಮಾರ್ಮಿಕವಾಗಿ ತಿಳಿಸಿರುವ ಪಾರ್ವತಿ ಮೇಡಮ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಅನುವಾದ ಮತ್ತು ಅನುವಾದ ಸಾಹಿತ್ಯದ ಬಗ್ಗೆ ಮಾರ್ಮಿಕವಾಗಿ ತಿಳಿಸಿರುವ ಪಾರ್ವತಿ ಮೇಡಮ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು

Leave a Reply

Back To Top