ಪುಸ್ತಕ ಸಂಗಾತಿ

ನೇರಿಶಾ

 ಪುಸ್ತಕ : ನೇರಿಶಾ

(ಗಜಲ್ ಸಂಕಲನ)

ಕವಿ: ನಂರುಶಿ ಕಡೂರು

ಪ್ರಕಾಶನ: ನೇರಿಶಾ ಪ್ರಕಾಶನ, ಕಡೂರು

ಪ್ರಕಟಿತ ವರ್ಷ: 2020

ಬೆಲೆ: 180/-

         ಗಜಲ್ ಎನ್ನುವುದು ಒಂದು ಸಂಗೀತಮಯವಾದ ಪ್ರೇಮಕಾವ್ಯ. ವಿಭಿನ್ನ ವಯೋಮಾನದ, ವಿಭಿನ್ನ ಮನೋಧರ್ಮದ ವಿವಿಧ ವಸ್ತು-ವೈವಿಧ್ಯಗಳ ಭಾವಗುಚ್ಛ. ಅರಬ್ಬಿ ಭಾಷೆಯ ಮೂಲಪದದಲ್ಲಿ ಗಜಲ್ ಎಂದರೆ ಮೋಹ, ಅನುರಾಗ, ಪ್ರೇಮ ವ್ಯಕ್ತಪಡಿಸುವುದು ಅಥವಾ ಸ್ತ್ರೀಯೊಡನೆ ಮಾತನಾಡುವುದು ಎಂದರ್ಥ. ಅರೆಬಿಕ್ ಭಾಷೆಯಲ್ಲಿ ಅಂಕುರಿಸಿದ ಗಜಲ್ ಪ್ರಕಾರವು ಪಾರಸಿ ಭಾಷೆಯಲ್ಲಿ ಭಾವಗೀತೆ, ಪ್ರೇಮಗೀತೆ, ಪ್ರಗಾಥವಾಗಿ ಚಿಗುರೊಡೆದು ಉರ್ದು ಸಾಹಿತ್ಯದಲ್ಲಿ ಸಮೃದ್ಧವಾಗಿ ಬೆಳೆಯಿತು. ಭಾರತಿಯರ ಮನೋಭೂಮಿಕೆಯಲ್ಲಿ ವಿಕಾಸಗೊಂಡು ಜನಸಾಮಾನ್ಯರ ಹಾಡುಗಬ್ಬವಾಗಿ ಜನಜನಿತವಾಗಿತು. ಖ್ವಾಜಾ ಬಂದೇ ನವಾಜ್ ಮೊದಲ ಗಜಲ್ ಕವಿ. ಗಜಲ್ ಕೊನೆಯ ಭಾಗದಲ್ಲಿ ರಚಿಸಿದವರ ಹೆಸರನ್ನು ಮೊದಲ ಬಾರಿಗೆ ಹಪೀಜ್ ಎನ್ನುವ ಗಜಲ್ ಕವಿ ಅಳವಡಿಸಿಕೊಂಡರು. ಗಜಲ್ ಸಾಹಿತ್ಯ ಲೋಕವು ಇಂದು ಹೆಮ್ಮರವಾಗಿ ಬೆಳೆಯುತ್ತಿದ್ದು ಮತ್ಲಾ, ರದೀಫ್, ಕಾಫಿಯಾ ಹಾಗೂ ಮಕ್ತಾ ಎಂಬ ನಾಲ್ಕು ಶಾಖೆಗಳಲ್ಲಿ ಕವಲೊಡೆದು ವಿಶಾಲ ವೃಕ್ಷವಾಗಿ ಹಬ್ಬಿದೆ. ಕನ್ನಡ ಸಾಹಿತ್ಯದ ಕಾವ್ಯಬನದಲ್ಲಿ ಇಂದು ಹಲವು ಕರುನಾಡಿನ ಕೋಗಿಲೆಗಳು ಮನದುಂಬಿ ಹಾಡುತ್ತಿವೆ.

‘ನಂರುಶಿ’ ಎಂಬ ಕಾವ್ಯನಾಮದಿಂದ ಗಜಲ್ ರಚನೆಯಲ್ಲಿ ತೊಡಗಿರುವ ನಂಜಮ್ಮ ಹಾಗೂ ರುದ್ರಪ್ಪ ಕುಂಬಾರ ಅವರ ಮಮತೆಯ ಮಗನಾದ ಶಿವಪ್ರಕಾಶ ಅವರು ಮೂಲತಃ  ಕಡೂರಿನವರಾಗಿದ್ದು ಪ್ರಸ್ತುತ ಬೆಂಗಳೂರು ಮೆಟ್ರೋ ರೈಲು ಇಲಾಖೆಯಲ್ಲಿ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ “ಅಮೃತ ಸಿಂಚನವು ನಿಮಗಾಗಿ” ಹಾಗೂ “ಕಾಮನ ಬಿಲ್ಲು ಬಣ್ಣ ಬೇಡುತಿದೆ” ಎಂಬ ಎರಡು ಕೃತಿಗಳನ್ನು ಪ್ರಕಟಿಸಿ ನಾಡಿನ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ವರ್ಷ “ನೇರಿಶಾ” ಗಜಲ್ ಸಂಕಲನ ಪ್ರಕಟಿಸುವ ಮೂಲಕ ಗಜಲ್ ಲೋಕದ ಉತ್ತಮ ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ. ಈ ಕೃತಿಯಲ್ಲಿ ಒಟ್ಟು 54 ಗಜಲ್ ಇದ್ದು ಪ್ರೀತಿ-ಪ್ರೇಮ, ನಿರೀಕ್ಷೆ-ಪ್ರತಿಕ್ಷೆ, ನೋವು-ನಲಿವು, ಒಲವು-ಗೆಲುವಿನ ಹೀಗೆ ವಿಭಿನ್ನ ಆಶಯಗಳು ಅಕ್ಷರ ರೂಪದ ಶಬ್ಧಶಿಲ್ಪಗಳಾಗಿ ಜೀವತಳೆದಿವೆ. ಹಿರಿಯ ಸಾಹಿತಿಗಳಾದ ಚಿದಾನಂದ ಸಾಲಿ ಅವರ ಗಜಲ್ ಕುರಿತ ವಿದ್ವತ್ ಪೂರ್ಣ ಮುನ್ನುಡಿ ಕೃತಿಯ ಮೌಲ್ಯ ಹೆಚ್ಚಿಸಿದೆ.

‘ಹಸಿದವರಿಗೆ ಒಂದು ಹೊತ್ತಿನ

ಗಂಜಿಯಾಗಲಿ ನನ್ನ ಗಜಲ್

ದನಿದು ಬಾಯಾರಿದವರಿಗೆ ಒಂದು ಹನಿ

ನೀರಿನಂತಾಗಲಿ ನನ್ನ ಗಜಲ್’

ಎನ್ನುವ ಕವಿಯು ಹೃದಯಾಂತರಾಳದಲಿ ಅಗಾಧ ಪ್ರೀತಿ ಹೊಂದಿರುವುದು ಇಲ್ಲಿ ಅಭಿವ್ಯಕ್ತಿಯಾಗಿದೆ.

‘ಉಸಿರು ಉಸಿರಲಿ ಬೆರೆತು

ಮಡಿಲ ತುಂಬೆಲ್ಲ ಮುದ್ದಾಗಿ ಆಡಿದಳು

ಕರುನಾಡಿನ ರಾಣಿಯಂತೆ ಮೆರೆಯುವಳು

ನನ್ನ ಮಗಳು ನೇರಿಶಾ’

ಎನ್ನುವ ಸಾಲುಗಳಲ್ಲಿ ಕವಿ ಶಿವಪ್ರಕಾಶ ಅವರ ಚೈತನ್ಯದ ಚಿಲುಮೆಯಾದ ಅಕ್ಕರೆಯ ಮಗಳು “ನೇರಿಶಾ”ಳ ಬಗೆಗೆ ಹೊಂದಿದ ಅಪಾರ ನಿರೀಕ್ಷೆ, ಭರವಸೆ, ವಾತ್ಸಲ್ಯ ಇಲ್ಲಿ ಕಾಣಬಹುದು.

‘ನನ್ನೆದೆ ಭಾವನೆಗಳ ಜೊತೆ ಹಾಡುವ ಭಾವಗೀತೆ ನೀನು

ಅದ ಕೇಳಲು ದಿನಂಪ್ರತಿ ಕಾಯುವ ಪ್ರೇಮಲತೆ ನಾನು’

ಎನ್ನುವ ಸಾಲುಗಳಲ್ಲಿ ಅವಳಿಗಾಗಿ ಕಾಯುವ ಕಾತರ-ಕನವರಿಕೆ, ಅದಮ್ಯ ಅಭಿಪ್ಸೆ ಇದೆ.

ಹೀಗೆ ವಿಭಿನ್ನ ವಸ್ತು-ವಿಷಯದೊಂದಿಗೆ ಮೂಡಿಬರುವ ಗಜಲ್ ಸಾಲುಗಳು ವಿಶಿಷ್ಟ ರೂಪಕ, ಪ್ರತಿಮೆಗಳೊಂದಿಗೆ ಓದುಗರೆದುರು ದೃಶ್ಯಕಾವ್ಯಗಳಾಗಿ ತೆರೆದುಕೊಳ್ಳುತ್ತವೆ. ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಕವಿ ಹೃದಯವು

‘ಧರೆ ಉರಿವಾಗ ಕರಕಲಾದ ದೌರ್ಜನ್ಯದ ಅಸ್ಥಿ ನೋಡುತ ನಿಲ್ಲಬೇಕು

ದಿನ ಸುಡುವ ಶ್ರೀಮಂತಿಕೆ ಕೊಳ್ಳಿ ಜಪಿಸಿದರು ಬಡವನ ಹಕ್ಕಿ ಹಾರುತಿದೆ’

ಎನ್ನುವ ಗಜಲ್ ಕವಿಯ ಅಂತರಂಗದ ಪರಿತಾಪವನ್ನು ಪ್ರತಿಫಲಿಸುತ್ತದೆ.

‘ಮಧು ಬಟ್ಟಲಿನಲಿ ಅಮಲಿನ ಪಾನಕ ಏಕೆ ಸುರಿದಿರುವೆ ಸಾಕಿ

ಹೊರಮನದಿ ನಗುತುಂಬಿ ಒಳಮನದಿ ದುಃಖೀವೇಕೆ ಸಾಕಿ’

ಎನ್ನುವ ಗಜಲ್ ಎದೆಯ ಬೇಗುದಿಯನ್ನು ಚಿತ್ರಿಸುತ್ತದೆ.

ಕಲ್ಯಾಣ ಕರ್ನಾಟಕದ ಕವಿ ಶಾಂತರಸರಿಂದ “ನಂರುಶಿ”ವರೆಗಿನ ಗಜಲ್ ಸಾಹಿತ್ಯವು ಸಾರಸ್ವತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಛಂದೋಲಕ್ಷಣಗಳಿಂದ ರಚಿತವಾಗುವ ಗಜಲ್ ಸಾಹಿತ್ಯ ಲೌಕಿಕದಿಂದ ಪಾರಮಾರ್ಥದೆಡೆಗೆ ಕರೆದೊಯ್ಯುವ ಅದ್ಭುತ ಕಾವ್ಯಶಕ್ತಿಯಾಗಿದೆ. ಎದೆಯ ಪಿಸುಮಾತು, ಸಖಿಯೊಡನೆ ಸಲ್ಲಾಪ ಹಾಗೂ ಸಾಮಾಜಿಕ ಕಳಕಳಿಯ ಸಂಗತಿಗಳನ್ನು ಗಜಲ್ ರೂಪದ ಕಾವ್ಯಗಳಾಗಿ ಬರೆಯುವಲ್ಲಿ ಶಿವಪ್ರಕಾಶ ರು. ಕುಂಬಾರ(ನಂರುಶಿ) ಸಿದ್ಧಹಸ್ತರು. ಇವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಹಾರೈಸುವೆ.

*************************

ಬಾಪು ಖಾಡೆ

 

One thought on “ಪುಸ್ತಕ ಸಂಗಾತಿ

Leave a Reply

Back To Top