ಲಲಿತ ಪ್ರಬಂಧ

ನೆನಪಿಗೆ ಬರುತ್ತಿಲ್ಲ

ಶೀಲಾ ಭಂಡಾರ್ಕರ್

ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ ಕಾಲಿಟ್ಟಾಯಿತು. ಇನ್ನು ಮಾತಾಡುವುದು ಕಷ್ಟ ಇವರೆದುರಿಗೆ , ನಿಮ್ಮದು ಯಾವಾಗಲೂ ಇದ್ದದ್ದೆ ಪಿಟಕಾಯಣ ಅನ್ನುತ್ತಾರೆ ಅಂತ,  ಅವಳಿಗೆ ಅಂದೆ ” ನಾಳೆ ಮಾತಾಡ್ತೇನೆ ಆಯ್ತಾ”.

“ಯಾರದು ರತ್ನಾಕರ?” ಇವರು ಕೇಳಿದರು. ನಾನು ಮನಸ್ಸಿನಲ್ಲೇ,. ರತ್ನಾಕರನ ಬಗ್ಗೆ ಅಂದಿದ್ದು ನನ್ನ ತಂಗಿಗೆ ಕೇಳಿಸಿತ್ತೋ ಇಲ್ಲವೋ ಆದರೆ ಇವರಿಗೆ ಹೇಗೆ ಕೇಳಿಸಿತಪ್ಪ..? ಅಂದುಕೊಂಡು.. ಹಿಹಿ ಇಲ್ಲಪ್ಪ ರತ್ನಕ್ಕ ಅಂತ ಅಂದಿದ್ದು  ಅಂದೆ. ಏನೋ ಸುಮ್ಮನಾದರು.

ನಾನು ಮಾತ್ರ ಆವತ್ತು ಇಲ್ಲಿರಲಿಲ್ಲ.. ಮನಸ್ಸೆಲ್ಲ ಸಾಲೆತ್ತೂರೆಂಬ ಚಂದದ ಊರು .. ರತ್ನಾಕರ , ಅವನ ಮುಗ್ಧ ನಗು, ಅವನ ಒಡನಾಟ ಇದನ್ನೇ ಯೋಚಿಸುತ್ತಿತ್ತು.

ರತ್ನಾಕರ ನನಗಿಂತ ಒಂದು ವರ್ಷ ಚಿಕ್ಕವನು.. ತುಂಬ ಒಳ್ಳೆಯ ಪಾಪದ ಹುಡುಗ. ಆ ಊರಲ್ಲಿದ್ದ ಒಂದೇ ಶಾಲೆಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಒಟ್ಟಿಗೆ ಹೋಗುವುದು ಬರುವುದು. ಕುಂಟಲ ಹಣ್ಣು, ಕೇಪಳ ಹಣ್ಣು  ತಿನ್ನಲು ಕಲಿಸಿದ್ದೇ ರತ್ನಾಕರ. ಹಸಿ ಗೇರುಬೀಜಗಳನ್ನು ಒಟ್ಟು ಮಾಡಿ ಒಣಗಿದ ಎಲೆಗಳ ನಡುವೆ ಇಟ್ಟು ಬೆಂಕಿ ಹಾಕಿ ಸುಟ್ಟು ತಿನ್ನೋಣ ಎಂದು ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದ, ಏನೋ ಸಾಧಿಸುವವರಂತೆ ನಾವೆಲ್ಲ ಸೇರಿ ಸಾಹಸ ಮಾಡುವಾಗ ಗೇರುಬೀಜವೊಂದು ಸಿಡಿದು ಅದರ ಎಣ್ಣೆ ನನ್ನ ಕೈಗೆ ಹಾರಿ ಕಪ್ಪನೆಯ ಬೊಬ್ಬೆ ಬಂದಿದ್ದು.. ಅದರ ಕಲೆ ಇನ್ನೂ ಇದೆ.

ಸಾಲೆತ್ತೂರಿನಲ್ಲಿ ನಾವಿದ್ದದ್ದು ಒಂದೇ ವರುಷವಾದರೂ ಈ ಇಡೀ ಜನ್ಮಕ್ಕಾಗುವಷ್ಟು ನೆನಪುಗಳು ಮೆರವಣಿಗೆ ಕಟ್ಟಿಕೊಂಡು ಧಾಪುಗಾಲು ಹಾಕುತ್ತ ಬರುತ್ತವೆ. ಸವಿ ಸವಿ ನೆನಪುಗಳು.

ಅಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ, ಬಾವಿಯಿಂದಲೇ ಸೇದಿ ತರಬೇಕು. ಅದಕ್ಕಾಗಿ ಒಬ್ಬ ಆಳನ್ನು ಗೊತ್ತು ಮಾಡಿದ್ದರು ಅಪ್ಪ. ಆದರೆ ಅಮ್ಮನಿಗೆ ಅಡುಗೆಗೆ ಮತ್ತು ಕುಡಿಯಲು ತಾನೇ ಸೇದಿ ತರಬೇಕಿತ್ತು. ನಾನೂ ಅಮ್ಮನ ಹಿಂದೆ ಮುಂದೆ ಸುತ್ತುತ್ತಿದ್ದೆ ಬಾವಿಯ ಹತ್ತಿರ. ನನಗೆ ಬರಿಯ ಹನ್ನೊಂದು ವರ್ಷ ಆವಾಗ.

ಹಾಗೊಂದು ದಿನ ಯಾರೋ ನೆಂಟರು ಬಂದಿದ್ದರು ಅಮ್ಮ ಅವರಿಗೆ ಕುಡಿಯಲು ನೀರು ಕೊಡುತ್ತ ನಮ್ಮ ಬಾವಿಯ ನೀರು ತುಂಬ ರುಚಿ., ಬಾವಿಯಿಂದ ಸೇದಿದ ಕೂಡಲೇ ಕುಡಿಯಬೇಕು ಅಮೃತವೇ ಅಂತೆಲ್ಲ ಹೊಗಳುವಾಗ.., ನಾನು ಯಾಕೆ ಈಗ ಹೋಗಿ ಬಾವಿಯಿಂದ ನೀರು ತರಬಾರದು..? ಅಮ್ಮ ಹೇಗೂ ಅವರ ಹತ್ತಿರ ಮಾತಾಡುತಿದ್ದಾರಲ್ಲ ಎಂದುಕೊಂಡು ಮೆತ್ತಗೆ ಕೊಡಪಾನ (ಬಿಂದಿಗೆ) ತೆಗೆದುಕೊಂಡು ಬಾವಿಯ ಹತ್ತಿರ ಹೋದೆ.

ಅಮ್ಮ ಮಾಡಿದ ಹಾಗೆ ಹಗ್ಗದ ಕುಣಿಕೆಯನ್ನು ಕೊಡದ ಕತ್ತಿಗೆ ಸುತ್ತಿ ಎಳೆದೆ. ಅಮ್ಮನ ಜತೆ ಬಂದಾಗ ಒಂದೊಂದು ಸಲ ಇಷ್ಟು ಮಾಡಿ ನಿಧಾನಕ್ಕೆ ಬಾವಿಯೊಳಗೆ ಕೊಡವನ್ನು ಇಳಿಸುವ ಕೆಲಸ ಮಾಡುತ್ತಾ ಇದ್ದೆ. ಹಾಗಾಗಿ ಆ ಕೆಲಸ ಸುಲಭವಾಗಿ ನಡೆಯಿತು. ಕೊಡ ತುಂಬಿತು. ಇನ್ನೇನು ಎಳೆದರೆ ಆಯಿತು ಎಂದುಕೊಂಡು ಬಾವಿಕಟ್ಟೆಯಲ್ಲಿ ಕಾಲಿಡುವ ತ್ರಿಕೋಣಾಕಾರದ ಸಂಧಿಯಲ್ಲಿ ಕಾಲಿಟ್ಟು ಹಗ್ಗವನ್ನು ಎಳೆಯಲು ನೋಡಿದರೆ.. ಯ್ಯಪ್ಪಾ….!!!

ಈಗೇನು ಮಾಡುವುದು…? ಹಗ್ಗ ಬಿಟ್ಟರೆ ಸೊಂಯ್ಯೆಂದು ಸೀದಾ ಬಾವಿಯೊಳಗೆ ಎಂಬುದು ಗೊತ್ತಿತ್ತು. ಏನು ಮಾಡುವುದಪ್ಪ ಈಗ…..???

ಅಲ್ಲಿಯೇ ಬಾವಿಯ ಪಕ್ಕದ ತಗ್ಗಿನಲ್ಲಿ ಮನೆ ರತ್ನಾಕರನದ್ದು… ಯೇ ರತ್ನಾಕರ ಅಂತ ಕೂಗಿದ್ದು ನನಗೇ ಕೇಳಿಸಲಿಲ್ಲ. ಪುನಹ ಜೋರಾಗಿ “ರತ್ನಾಕರ ……….” ಅಂದಾಗ “ಏನು?” ಅಂದಿದ್ದು ಕೇಳಿಸಿತು. “ಇಲ್ಲಿ ಬಾರಾ ಸ್ವಲ್ಪ” ಅಂದೆ.

“ಎಲ್ಲಿಯಾ?” ಅಂದ. ಬಾವಿಯ ಹತ್ತಿರ ಅನ್ನುವುದರೊಳಗೆ.. ಒಂದೇ ಹಾರಿಗೆ ಬಂದ ರತ್ನಾಕರ ..ಪಾಪ!

ಅವನಿಗೆ ನನ್ನನ್ನು ನೋಡಿ ನಗು. ಅವನ ನಗು ನೋಡಿ ನಂಗೆ ಕೋಪ ಬಂತು ..”ಬಾ ಹಗ್ಗ ಎಳಿ” ಅಂದೆ. “ನೀ ಯಾಕೆ ದೊಡ್ಡ ಜನದ ಹಾಗೆ ಬಂದದ್ದು? ” ಅಂದ. “ಯಾರಿಗೂ ಗೊತ್ತಿಲ್ಲ ನಾನು ಬಂದದ್ದು” ನಾನು ಹೇಳಿದೆ.

ಸರಿ.. ಆದರೆ ನಂಗೆ ಕೂಡ ಒಬ್ಬನಿಗೆ ಹಗ್ಗ ಎಳೆಯುವುದಕ್ಕೆ ಆಗ್ಲಿಕ್ಕಿಲ್ಲ .. ಒಂದು ಕೆಲಸ ಮಾಡುವ.. ನೀನು ಹಗ್ಗ ಗಟ್ಟಿ ಹಿಡಕೊಂಡು ನಿಲ್ತಿಯಾ? ಅಂದ.

ಹೂಂ… ಅಂದೆ.

ಅವನು ಎಳೆದ, ನಾನು ಹಿಡಿದೆ… ಹಾಗಂತ ಅಂದುಕೊಂಡೆ..!!

ಆದರೆ ಹಗ್ಗ ಸುಂಯ್…. ಎಂದು ಪುನಹ ಹಿಂದಕ್ಕೆ ಹೋಯಿತು. ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ದೊಡ್ಡವರನ್ನು ಕರೆಯೋಣ ಎಂದರೆ ಅವರಿಂದ ಬಯ್ಯಿಸಿಕೊಳ್ಳುವುದು ಯಾರು?

ರತ್ನಾಕರನಿಗೆ ಒಂದು ಪ್ಲಾನ್ ಹೊಳೆಯಿತು ಎಂದು ಕಾಣುತ್ತದೆ… ಹಹ್ಹಹ್ಹಾ ಅಂತ ನಗುತಿದ್ದ. ನಾವಿಬ್ಬರೂ ಹಗ್ಗ ಹಿಡಿದುಕೊಂಡೇ ನಿಂತಿದ್ದೆವಲ್ಲ..? “ಏನು?” ಅಂದೆ. “ನೋಡು ನಾನು ಹಗ್ಗ ಎಳೆದುಕೊಂಡೇ ಅಲ್ಲಿವರೆಗೆ ಹೋಗ್ತಾ ಇರುತ್ತೇನೆ. ಕೊಡ ಮೇಲೆ ಬಂದಾಗ ಅದನ್ನು ಎತ್ತಿ ಕಟ್ಟೆ ಮೇಲೆ ಇಡುವುದು ನಿನ್ನ ಕೆಲಸ. ಆಗಬಹುದಾ?” ಎಂದ. ಆಗಬಹುದು ಅಂದೆ.

ಅವನು ಗತ್ತಿನಿಂದ ಕಳೆದ ವಾರವಷ್ಟೇ ಸಾಲೆತ್ತೂರಿನ ಮೈದಾನದಲ್ಲಿ ನಡೆದ ಬಯಲಾಟದಲ್ಲಿ ಬಂದ ಭೀಮ ಗದೆಯನ್ನು ಹಿಡಿದುಕೊಂಡ ಹಾಗೆ ಬಾವಿಯ ಹಗ್ಗವನ್ನು ಹೆಗಲ ಮೇಲೆ ಇಟ್ಟುಕೊಂಡು ಆ ಕಡೆ ತಿರುಗಿ ಬೀಮನ ಹಾಗೆಯೇ ನಡೆದುಕೊಂಡು ಹೋಗುತಿದ್ದ. ನಾನು ಖುಷಿಯಿಂದ ಅವನನ್ನೇ ನೋಡುತ್ತ ನಗುತ್ತ ನಿಂತುಬಿಟ್ಟೆ. ಅವನು ಅಲ್ಲಿಂದಲೇ “ಬಂತಾ?” ಅಂತ ಕೇಳಿದ ಜೋರಾಗಿ. ನಾನು ತಿರುಗಿ ನೋಡುವಾಗ ಬಿಂದಿಗೆ ರಾಟೆಯ ಹತ್ತಿರ ಇದೆ.. ಹೇಯ್ ಎಂದೆ.. ಅವನು ಗಾಬರಿಯಾಗಿ ತಿರುಗುವುದರೊಳಗೆ.. ಹಗ್ಗ ಸರಸರನೇ ಸೀದಾ ಬಾವಿಯ ಒಳಗೆ.. ಈಗ ಹಗ್ಗದ ಈ ತುದಿಯ ಗಂಟು ರಾಟೆಯ ಹತ್ತಿರ. ಕಷ್ಟ ಪಟ್ಟು ಆ ಗಂಟನ್ನು ಹಿಡಿದು ಎಳೆಯಲು ನೋಡಿದರೆ ಹಗ್ಗ ಸಲೀಸಾಗಿ ಬರ್ತಾ ಇದೆ… ಬಾವಿಯ ಒಳಗೆ ಇಣುಕಿದೆವು ಇಬ್ಬರೂ…. ಕೊಡವಿಲ್ಲ ..!! ದೇವರೇ ಏನಪ್ಪ ಮಾಡುವುದು ಈಗ…? ನಂಗೆ ಭಯ, ಇವನೇನಾದರೂ ಓಡಿ ಹೋದರೆ ನಾನೊಬ್ಬಳೇ ಬಯ್ಯಿಸಿಕೊಳ್ಳಬೇಕಲ್ಲ.

ಅವನೂ ಸ್ವಲ್ಪ ಭಯ , ಸ್ವಲ್ಪ ಕೋಪದಲ್ಲಿ “ನಿಂಗೆ ಹೇಳಿದೆ ನಾನು ದೊಡ್ಡವರನ್ನು ಕರೆಯೋಣ ಅಂತ.” …

” ನೀನ್ಯಾವಾಗ ಅಂದೆ ಹಾಗಂತ?” ಸ್ವಲ್ಪ ಜೋರಾಗೇ ಕೇಳಿದೆ.

ನಮ್ಮ ಮಾತುಕತೆ ಕೇಳಿಯೋ ಏನೋ ರತ್ನಾಕರನ ಅಮ್ಮ ಬಾವಿಯ ಹತ್ತಿರ ಬಂದರು. “ಸತ್ತೇ….” ಅಂತ ಒಂದೇ ಉಸಿರಿಗೆ ರತ್ನಾಕರ ಎಲ್ಲಿ ಹಾರಿ ಹೋದನೋ ಗೊತ್ತಾಗಲಿಲ್ಲ. ನಾನು ನಡುಗುತ್ತ ಹೆದರುತ್ತ ಅವರ ಹತ್ತಿರ ಹೇಳಿದೆ.. ಹೀಗೆ ಹೀಗೆ ಮಾಡಿದೆವು.. ಹೀಗೆ ಹೀಗೆ ಆಯಿತು ಅಂತ.

ಅವರು “ನಿಂಗೆ ಉಂಟು ಇವತ್ತು ಅಮ್ಮನಿಂದ ಪೂಜೆ” ಅಂತ ನಗುತ್ತ ಹೇಳುವಾಗ.. ನನಗೆ ಅಳು ತಡೆಯದೆ ಜೋರಾಗಿ ಅಳಲು ಶುರು ಮಾಡಿದೆ.

ಆಗ ಅವರು ಅವರ ಗಂಡ ಆಚಾರಿಯನ್ನು ಕರೆದು… “ಇಗಾ… ಆ ಗರುಡ ಪಾತಾಳ (ಪಾತಾಳ ಗರಡಿ) ತೆಗೆದುಕೊಂಡು ಬನ್ನಿ ಇಲ್ಲಿ ಸ್ವಲ್ಪ” ಅಂದರು. ಅವರು ಆದಷ್ಟು ನಿಧಾನವಾಗಿ  ಕೈಯಲ್ಲಿ ಏನೋ ಹಿಡಿದುಕೊಂಡು ಬರುತಿದ್ದರು. ನಂಗೆ “ಅವರು ಏನು ತರಲು ಹೇಳಿದ್ದಿರಬಹುದು…? ಈಗ ಕೊಡವನ್ನು ಹೇಗೆ ತೆಗೆಯುತ್ತಾರಪ್ಪ? ಆದಷ್ಟು ಬೇಗ ಮನೆಯಲ್ಲಿ ಗೊತ್ತಾಗುವ ಮೊದಲೇ ತೆಗೆಯಬಾರದಾ? ” ಅಂತೆಲ್ಲ ಅನಿಸಲಿಕ್ಕೆ ಶುರುವಾಯಿತು.

ಆಚಾರಿಯವರು ಕೂಡ.. “ಏನು ಅಮ್ಮ…. ಸಧ್ಯ ನೀವೆ ಬಾವಿಯೊಳಗೆ ಬೀಳಲಿಲ್ಲವಲ್ಲ ” ಅಂತ ಕೇಳುತ್ತ.. 3-4 ಕೊಕ್ಕೆಗಳಿರುವ ಒಂದು ಸಾಧನವನ್ನು ನಿಧಾನವಾಗಿ ಬಾವಿಕಟ್ಟೆ ಮೇಲಿಟ್ಟು ಹಗ್ಗವನ್ನು ಅದಕ್ಕೆ ಗಟ್ಟಿಯಾಗಿ ಕಟ್ಟಿ ಬಾವಿಯೊಳಗೆ ಬಿಟ್ಟರು. ಠಣ್… ಎಂದು ಸದ್ದಾಯಿತು. ಸ್ವಲ್ಪ ಪ್ರಯತ್ನದ ನಂತರ ಆಚಾರಿಯವರು ಹಗ್ಗ ಮೇಲೆ ಎಳೆದಾಗ ಆ ಕೊಕ್ಕೆಗಳು ಕೊಡದ ಬಾಯಿಯ ಒಳಗೆ ಸಿಕ್ಕಿಕೊಂಡಿದ್ದವು.  ಕೊಡವನ್ನು ಮೇಲಕ್ಕೆ ಎಳೆದು ತೆಗೆದುಕೊಟ್ಟು ಇನ್ನೊಂದು ಸಲ ಬರ್ತೀರಾ ಅಮ್ಮ ನೀರು ಸೇದಲಿಕ್ಕೆ? ಅಂತ ರತ್ನಾಕರನ ಅಮ್ಮ ತಮಾಷೆ ಮಾಡಿದರು. “ಈಗ ನೀವೆ ಒಂದು ಸಲ ನೀರು ಎಳೆದು ಕೊಡಿ” ಎಂದೆ. ಅವರು ಮನೆಯವರೆಗೆ ತಂದು ಕೊಡುತ್ತೇನೆ ಅಂತ ಹೇಳಿದರೂ ಕೇಳದೆ ನಾನೇ ಕಷ್ಟಪಟ್ಟು ಸೊಂಟದ ಮೇಲೆ ಇಟ್ಟುಕೊಂಡು ಮನೆಗೆ ಹೋದೆ. ಅಮ್ಮನಿಗೆ ಆಶ್ಚರ್ಯ… ಜತೆಗೆ ಖುಷಿ. “ಓ… ನನ್ನ ಮಗಳು ಭಾರಿ ಜಾಣೆ ” ಎಂದರು. ನನಗಷ್ಟೆ ಸಾಕು. ಎಲ್ಲ ಮರೆತು ಹೋಯಿತು.

ಹೀಗೆ ಇನ್ನೂ ತುಂಬಾ ನೆನಪುಗಳು ದಬದಬನೇ ಬಂದು ಬಿದ್ದಾಗ.. ಯಾವಾಗ ದಸರಾ ರಜ ಬರುತ್ತದೋ… ಯಾವಾಗ ಊರಿಗೆ ಹೋಗ್ತೇವೋ ಅನ್ನಿಸಲಿಕ್ಕೆ ಶುರುವಾಯ್ತು.

ಮಕ್ಕಳ ಪರೀಕ್ಷೆಗಳು ಮುಗಿದು, ರಜ ಶುರುವಾದಕೂಡಲೇ ೪-೫ ದಿನದ ಮಟ್ಟಿಗೆ ಊರಿಗೆ ಹೊರಟೆವು. ಎರಡನೇ ದಿನವೇ ನಮ್ಮ ಪ್ಲಾನ್ ಪ್ರಕಾರ ಸಾಲೆತ್ತೂರಿಗೆ ಪ್ರಯಾಣ..  ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಡುತ್ತ ದಾರಿ ಸಾಗುತಿತ್ತು.

ಮಂಚಿ, ಕುಕ್ಕಾಜೆ ದಾಟಿ ಸಾಲೆತ್ತೂರಿನ ಮೈದಾನವೂ ಬಂತು. ಅಲ್ಲಿಂದ ಕೆಳಗೆ ಇಳಿದರೆ ನಾವಿದ್ದ ರೋಡು. ಎಲ್ಲವೂ ಬದಲಾಗಿದೆ. ಒಂದರದ್ದೂ ಗುರುತು ಸಹ ಸಿಗುತ್ತಿಲ್ಲ. ಬ್ಯಾಂಕ್ ಕಟ್ಟಡವೂ ಬೇರೆಯಾಗಿದೆ. ನಾವಿದ್ದ ಮನೆಯ ಜಾಗದಲ್ಲಿ ಎರಡು ಮಹಡಿಗಳ ತಾರಸಿ ಮನೆ.

ಶಾಲೆಯ ಹತ್ತಿರ ಹೋದರೆ ಚಿಕ್ಕದಾಗಿದ್ದ ನಮ್ಮ ಶಾಲೆ ಈಗ ತುಂಬ ದೊಡ್ಡದಾಗಿ ಚಂದದ ತೋಟ ಎಲ್ಲವೂ ಇತ್ತು..

ಆದರೆ ನಮ್ಮ ನೆನಪಿನ ಗುರುತುಗಳು ಒಂದೂ ಇಲ್ಲದೆ ಬಹಳ ಬೇಜಾರಾಯ್ತು.

ಸರಿ … ರತ್ನಾಕರನೂ ಬದಲಾಗಿರಬಹುದು ಅನಿಸಿತು.

ಹಾಗೆ ಪುನಹ ನಾವಿದ್ದ ಮನೆಯ ಹತ್ತಿರ ಬಂದು ರತ್ನಾಕರನ ಮನೆಯ ಹತ್ತಿರ ಕಾರು ನಿಲ್ಲಿಸಿದ ಕೂಡಲೇ ಅಲ್ಲಿಯೇ ಇದ್ದ ವಯಸ್ಸಾಗಿದ್ದ ಗಂಡಸು ಕಣ್ಣಿಗೆ ಕೈ ಅಡ್ಡ ಇಟ್ಟು ಯಾರು….. ? ಅನ್ನುವ ಹಾಗೆ ನಮ್ಮನ್ನು ನೋಡುತ್ತಾ ನಿಂತರು. ನಮ್ಮ ಗುರುತು ಹೇಳಿದ ಕೂಡಲೆ ಅವರಿಗಾದ ಸಂತಸ ಅವರ ಮುಖದಲ್ಲಿ ಕಂಡು .. ಇವರಾದರೂ ಹಾಗೇ ಇದ್ದಾರಲ್ಲ.. ಎಂದು ಮನಸ್ಸಿಗೆ ಹಾಯೆನಿಸಿತು. ಅವರು ರತ್ನಾಕರನ ಅಪ್ಪ. ಸಂಭ್ರಮದಿಂದ ಅವರ ಹೆಂಡತಿಯನ್ನು ಕರೆದರು.. ಅವರಿಗೂ ಸ್ವಲ್ಪ ವಯಸ್ಸಾಗಿತ್ತು. ನಮ್ಮನ್ನೆಲ್ಲ ನೋಡಿ ಅವರಿಗೆ ಖುಷಿಯೊ ಖುಷಿ. ಅಮ್ಮ ಹೋದರೆಂದು ಕೇಳಿ ತುಂಬಾ ದುಃಖ ಪಟ್ಟರು.

ರತ್ನಾಕರನ ಬಗ್ಗೆ ವಿಚಾರಿಸಿದಾಗ ಅವನು ವಿಶ್ವಕರ್ಮ ಬ್ಯಾಂಕ್ ನಲ್ಲಿ ಕೆಲಸ ಮಾಡುತಿದ್ದಾನೆ ಎಂದು ಕೇಳಿ ನಮಗೂ ಖುಷಿ ಆಯ್ತು.

ಅವನಿಗೆ ಒಳ್ಳೆಯ ಹೆಂಡತಿ ಮತ್ತು ಮುದ್ದಾದ 2 ಮಕ್ಕಳು. ಮನಸ್ಸಿಗೆ ನೆಮ್ಮದಿ ಅನಿಸಿತು. ಹಾಗೆ ಹೀಗೆ ಮಾತಾಡಿ, ಅವರು ಪ್ರೀತಿಯಿಂದ ಕೊಟ್ಟಿದನ್ನು ತಿಂದು ಹೊರಟೆವು.

ಅರ್ಧ ದಾರಿಗೆ ಬಂದ ಮೇಲೆ ನೆನಪು….. ಛೆ!!!!!! ಅವನ ಫೋನ್ ನಂಬರ್ ಆದ್ರೂ ಕೇಳಬೇಕಿತ್ತಲ್ಲ… ಅಥವ ನಮ್ಮ ನಂಬರ್ ಆದ್ರೂ ಕೊಟ್ಟು ಬರಬೇಕಿತ್ತು. ನನ್ನ ತಲೆ ಎಲ್ಲಿ ಬಾಡಿಗೆಗೆ ಕೊಟ್ಟಿದ್ದೆನೋ ಇನ್ನೂ ನೆನಪಿಗೆ ಬರುತ್ತಿಲ್ಲ.

2 thoughts on “ಲಲಿತ ಪ್ರಬಂಧ

  1. ಎಂಥ ದಿನಗಳ ಕಳೆದೆವು
    ಇನ್ನಂಥ ದಿನಗಳು ಬಾರವು
    * ಚೊಕ್ಕಾಡಿ

    ಸುಂದರ ನೆನಪುಗಳ ಸೊಗಸಾದ ನಿರೂಪಣೆ
    ಮರೆಯದ ಅನುಭವಗಳ ಮರುವೋದು

    1. ಹೌದು. ಮರುವೋದು. ಮರುವೋದಿ ಮೆಚ್ಚಿದ್ದಕ್ಕೆ ವಂದನೆಗಳು.

Leave a Reply

Back To Top