ಲೀಲಾ ಕಲಕೋಟಿ
ನ್ಯಾನೋ ಕಥೆ
ಸಂಜೆಯಾಗಿ ತಾಸೆರಡಾಗಿತ್ತು.
ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ .
ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ ಕುಂತು ಕಣ್ಣುಗಳಿಂದ ಮಾತಿಗಿಳಿದಿದ್ದೆ …..!
ಸುಮ್ಮನೆ
ಏಳು ಸುತ್ತಿನ ಸುರಳಿಯ
ಬಿಚ್ಚುತ ಮೆಲ್ಲನೆ
ಕುಂತೀಯಾಕ ಸುಮ್ಮನೆ?
ಓ…!ನನ್ನ ಮಲ್ಲಿಗೆ….?
ಹಸಿರೆಲೆ ರಾಶಿಯಲಿ
ಹುದುಗಿದಿ ಕಡೆದ
ಬೆಣ್ಣೆಯಂತೆ….
ಮುದ್ದಾಗಿ ಎದ್ದವಳೇ
ಕುಂತೀಯಾಕ ಸುಮ್ಮನೆ?
ಓ….! ನನ್ನ ಮಲ್ಲಿಗೆ…?
ಬೀಗುತ ಬಿಮ್ಮನೆ
ಘಮ್ಮಂತ ಸೂಸುತ
ಕಂಪನು ಹರಡುತ
ಸೊಂಪಾಗಿ,ಗುಂಪಾಗಿ
ಕುಂತೀಯಾಕ ಸುಮ್ಮನೆ?
ಓ…!ನನ್ನ ಮಲ್ಲಿಗೆ……?
ಬೀಸುವ ತಂಗಾಳಿಗೆ
ಕುಲಕುತ ಬಳಕುತ
ಮುದನೀಡಿ ಮನಕೆ
ಮಂದಗಮನಿಯಂತೆ
ಕುಂತೀಯಾಕ ಸುಮ್ಮನೆ?
ಓ….!ನನ್ನ ಮಲ್ಲಿಗೆ….?
****************************