ಪ್ರವಾಸ ಸಂಗಾತಿ
ಎಚ್. ಗೋಪಾಲ ಕೃಷ್ಣ
ತಿರುವನಂತಪುರ ಟಿಪ್ಪಣಿ ೪
ಪ್ರವಾಸಕಥನದಕೊನೆಯ ಕಂತು

ರಾಜಾಜಿನಗರದ ಮೊದಲ ಅಯ್ಯಪ್ಪ ದೇವಸ್ಥಾನದ ಬಗ್ಗೆ ವಿವರಿಸಿದ್ದೆ. ಇಲ್ಲಿನ ಕೇರಳ ಕಾಲೋನಿ ಬಗ್ಗೆ ಹೇಳಿದ್ದೆ. ಗುರುಸ್ವಾಮಿ ಗಳ ಬಗ್ಗೆ ಹೇಳಿದ್ದೆ.ಕೇರಳದಿಂದ ಇಲ್ಲಿಗೆ ಬಂದು ಹೆಸರು ಮಾಡಿದ ಹಲವಾರು ಖ್ಯಾತರು ಇಲ್ಲಿದ್ದಾರೆ.ಅವರಲ್ಲಿ ಕೆಲವರು ಇಲ್ಲಿನ ಕಾರ್ಮಿಕ ಸಂಘಟನೆ ಗಳ ನಾಯಕರಾಗಿದ್ದರು. ಅದೇ ರೀತಿ ಕೇರಳಕ್ಕೆ ಹೋಗಿ ಅಲ್ಲಿ ಹೆಸರು ಮಾಡಿದ ನಮ್ಮವರು ಕಡಿಮೆ.ಆದರೂ ಹೆಸರು ಮಾಡಿದವರು ಬಹುಕಾಲ ಅವರ ಹೆಸರು ಉಳಿಯುವ ಕೆಲಸ ಮಾಡಿದ್ದಾರೆ.ನಮ್ಮ ವಿಜ್ಞಾನಿ ಶ್ರೀ ಸಿ ಆರ್ ಸತ್ಯ ಅವರು ತಿರುವನಂತಪುರದಲ್ಲಿ isro ದಲ್ಲಿ ಕರ್ನಾಟಕ ಸಂಘ ಶುರು ಮಾಡಿ ಬೆಳೆಸಿದ್ದು ಹೇಳಿದ್ದೆ. ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಕುರಿತು ಸತ್ಯ ಅವರು ಬರೆದಿರುವ ಪುಸ್ತಕ( ಅಳಿವಿಲ್ಲದ ಸ್ಥಾವರ) ಬಹುಕಾಲ ಉಳಿಯುವ, ಅಲ್ಲಿನ ಜನರೇ ಮಾಡಿರದ ಚಾರಿತ್ರಿಕ ದಾಖಲೆ.ಹಿಂದೆ ಈ ರೀತಿಯ ಪುಸ್ತಕ ಬಂದ ಹಾಗಿಲ್ಲ.ಹಾಗೇ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನಮ್ಮ ಅಪ್ಪ ಪಟ್ಟ ಪಾಡು ಹೇಳಿದ್ದೆ. ಶ್ರೀ ನಾ. ಕಸ್ತೂರಿ, ಕನ್ನಡದ ಖ್ಯಾತ ಹಾಸ್ಯ ಸಾಹಿತಿ ಕೇರಳದವರು, ಇಲ್ಲಿ ಬಂದು ಕನ್ನಡ ಕಲಿತು ಕನ್ನಡ ಭಾಷೆಯಲ್ಲಿ ನೂರ್ಕಾಲ ಬಾಳುವ ಸಾಹಿತ್ಯ ರಚಿಸಿದರು. ಸಾಯಿಬಾಬಾ ಕುರಿತು ಅವರು ರಚಿಸಿರುವ ಕೃತಿ ಹಲವು ಭಾಷೆಗಳಿಗೆ ಭಾಷಾಂತರ ವಾಗಿದೆ. ಕಾರ್ಮಿಕ ನಾಯಕ ವಿ ಜೆ ಕೆ ನಾಯರ್, ಬಾಬು ಮಾಥ್ಯು, ಶ್ರೀಧರ ಅರಂಗಿಲ್, ನಂಬಿಯಾರ್ ಮುಂತಾದ ಸುಮಾರು ಕಾರ್ಮಿಕ ನಾಯಕರು ಕೇರಳದವರು .
ಕನ್ಯಾಕುಮಾರಿ ಕನ್ನಡದ ಹೊಟೆಲ್
ಭಗವತಿ ದೇವಾಲಯಗಳು

ವರ್ಷಕ್ಕೊಮ್ಮೆ ಸ್ವಾಮಿ ದರ್ಶನಕ್ಕೆ ಅಂತ ನೇಮ ನಿಯಮ ಪಾಲಿಸಿಕೊಂಡು ಹೋಗುತ್ತಿದ್ದರು. ಎಲ್ಲರೂ ಗಡ್ಡ ಬಿಟ್ಟು ಹಣೆ ತುಂಬಾ ಕುಂಕುಮ ವಿಭೂತಿ ಧರಿಸಿ ಕೊರಳಿಗೆ ಮಾಲೆ ಹಾಕುತ್ತಿದ್ದರು. ಎಲ್ಲರೂ ಕರಿ ಬಣ್ಣದ ಬಟ್ಟೆ ತೊಟ್ಟಿರುವ ವರು. ಹೆಂಗಸರಿಗೆ ಇಲ್ಲಿ ಪ್ರವೇಶ ಇಲ್ಲ. ಇವರಿಗೊಬ್ಬರು ಲೀಡರ್, ಅವರಿಗೆ ಗುರುಸಾಮಿ ಅಂತ ಕೂಗುತ್ತಿದ್ದರು. ಗುರುಸಾಮಿ ಇವರಿಗೆ ದೀಕ್ಷೆ ಕೊಡೋದು, ಅಲ್ಲಿಗೆ ಕರಕೊಂಡು ಹೋಗೋದು ಮಾಡ್ತಾ ಇದ್ದರು.ನನಗೂ ಸಹ ಆರೇಳು ಗುರು ಸಾಮಿ ಗಳ ಪರಿಚಯ.ಗಡ್ಡ ಬಿಟ್ಟು ಹಣೆಯ ಮೇಲೆ ಗಂಧ ಹಚ್ಚಿಕೊಂಡು ಕರಿ ಬಟ್ಟೆ , ಕಾವಿ ಟವಲ್ ತೊಟ್ಟು ಇವರು ಕೆಲವು ಸಲ ತೆಲುಗು ಸಿನೆಮಾದ ಮಂತ್ರವಾದಿಗಳು ಇದ್ದ ಹಾಗೆ ಕಾಣುತ್ತಿದ್ದರು. ಇವರ ಪ್ರಭಾವ ನನ್ನ ಮೇಲೆ ಆಗದೇ ಅಯ್ಯಪ್ಪ ನನ್ನು ಕಾಣಲು ಈ ತನಕ ಹೋಗಿಲ್ಲ. ದೇವರು ಯಾರನ್ನು ಬೇಕಾದರೂ ತನ್ನ ಬಳಿ ಕರೆಸಿಕೊಳ್ಳುತ್ತಾನಂತೆ..! ಇನ್ನೂ ಅಯ್ಯಪ್ಪ ಆ ಯೋಚನೆ ಮಾಡಿಲ್ಲ..! ಕೇರಳದವರ ಮಧ್ಯೆ ಇದ್ದು ಕಲಿಯದ ಎಷ್ಟೋ ವಿಷಯಗಳಲ್ಲಿ ಮಲಯಾಳ ಭಾಷೆ ಸಹ ಒಂದು. ಅದೇಕೋ ಈ ಭಾಷೆ ಮಾತಾಡೋದು ಕಷ್ಟ ಅನಿಸಿ ಬಿಡ್ತು. ಆದರೆ ಅಲ್ಲಿಂದ ಬಂದವರು ಸುಲಭವಾಗಿ ನಮ್ಮ ಕಸ್ತೂರಿ ಕನ್ನಡ ಕಲಿತರು ಮತ್ತು ಇಲ್ಲಿನ ಕಾರ್ಮಿಕ ಸಂಘಗಳ ನಾಯಕರೂ ಆದರು. ಕನ್ನಡದಲ್ಲಿ ಬರೆದ ರು.ಕನ್ನಡದ ಹಾಸ್ಯ ಸಾಹಿತಿ ಮತ್ತು ಸಾಯಿಬಾಬಾ ಅವರ ಶಿಷ್ಯ ಶ್ರೀ ನಾ.ಕಸ್ತೂರಿ ಮೂಲತಃ ಮಲಯಾಳಿ.ಇಲ್ಲಿಂದ ಹೊರ ಹೋಗಿ ಲೀಡರ್ ಆದ ಕನ್ನಡದವರು ಕೈ ಬೆರಳಿಂದ ಎಣಿಸ ಬಹುದಾದವರು. ನಮ್ಮ ವಿಜ್ಞಾನಿ ಶ್ರೀ ಸಿ ಆರ್ ಸತ್ಯ ಕೇರಳದಲ್ಲಿ ಕರ್ನಾಟಕ ಸಂಘ ಕಟ್ಟಿದ ವಿಜ್ಞಾನಿ,ISRO ದಲ್ಲಿ ಶ್ರೀ ಅಬ್ದುಲ್ ಕಲಾಂ ಅವರ ಸಂಗಡ ಕೆಲಸ ಮಾಡಿದವರು.ಈಗ ಇಬ್ಬರೂ ಇಲ್ಲ. ನನ್ನ ಭಾಮೈದ ಸುಧೀಂದ್ರ ಸಹ ಅಲ್ಲಿನ ಇಸ್ರೋ ದಲ್ಲಿದ್ದವರು, ಸೊಗಸಾದ ಮಲಯಾಳ ಮಾತು ಆಡುತ್ತಾರೆ.

ಅಯ್ಯಪ್ಪ ಭಕ್ತರ ಒಂದು ಪ್ರಸಂಗ ನೆನಪಿಗೆ ಬಂತು.78/79 ರಲ್ಲಿ ಅಪ್ಪ ಅಮ್ಮ ಅಕ್ಕ ಇವರನ್ನು ದಕ್ಷಿಣ ಭಾರತ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದೆ.ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಸ್ಥಾನದ ಒಳಗೆ ಒಮ್ಮೆಲೆ ನುಗ್ಗಾಟ ಹೆಚ್ಚಾಯಿತು.ಏನು ಅಂತ ನೋಡಿದರೆ ಸುಮಾರು ಇನ್ನೂರಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಏಕ್ ದಂ ನುಗ್ಗಿದ್ದಾರೆ.ಎಪ್ಪತ್ತು ವರ್ಷದ ಅಪ್ಪ ಇವರ ಮಧ್ಯೆ ಸಿಕ್ಕಿಕೊಂಡು ಉಸಿರು ಬಿಡಲೂ ಆಗದೇ ಒದ್ದಾಡ್ತಾ ಇದ್ದಾರೆ.ಅಯ್ಯಪ್ಪ ಭಕ್ತರ ಮೇಲೆ ಕೂಗಾಡ್ತಾ ಅಪ್ಪನ್ನ ಆಚೆ ಕರಕೊಂಡು ಬಂದು ಕೂಡಿಸಿದೆ.ಎಳನೀರು ಸಿಗತ್ತಾ ನೋಡು ಅಂದರು ಅಂತ ಒಂದು ಗಂಟೆ ಊರು ಸುತ್ತಿದರೆ ಎಳನೀರು ಪತ್ತೇನೆ ಇಲ್ಲವೇ…!. ಇಷ್ಟೊಂದು ನೋಡಿದ ಕಡೆ ಎಲ್ಲಾ ತೆಂಗಿನ ಮರ ಇದಾವೆ ಎಳನೀರು ಇಲ್ಲವೇ ಅಂತ ಬೇಸರ ಆಯಿತು.ಸಮುದ್ರದ ನಡುವೆ ನೀರಿಗೆ ಬರ!ಯಾರೋ ತಾಟಿ ನಿಂಗನ್ನ ಮಾರ್ತಾ ಇದ್ದ. ಅವನ ಹತ್ತಿರ ತಾಟಿ ನಿಂಗು ಕೊಂಡೆ. ಅದರಲ್ಲಿ ಒಂದೋ ಎರಡೋ ಚಮಚ ನೀರು ಸಿಗೋದು.ಇಪ್ಪತ್ತೋ ಮುವತ್ತೋ ತಾ ಟಿ ನಿಂಗು ಕೊಚ್ಚಿಸಿ ಅದರಲ್ಲಿನ ನೀರನ್ನು ಒಂದು ಕವರ್ ನಲ್ಲಿ ಒಂದು ಲೋಟದಷ್ಟು ತುಂಬಿಸಿಕೊಂಡು ತಂದು ಅಪ್ಪನಿಗೆ ಕೊಟ್ಟೆ.ಒಂದು ಗುಟುಕು ಹೀರಿದ ಅಪ್ಪ ವಯಕ್ ಅಂದರು.ಇದೇನೋ ತುಂಬಾ ಹುಳಿ, ಕೆಟ್ಟ ವಾಸನೆ….. ಅಂದರು.ನಾನು ರುಚಿ ನೋಡಿ ತರಬೇಕಿತ್ತು ಅನಿಸಿತು.ಅಂದ ಹಾಗೆ ನಮ್ಮ ಅಪ್ಪನಿಗೆ ಹೊಗೆಸೊಪ್ಪು, ನಶ್ಯ, ನಿಕೋಟಿನ್, ನೀರಾ, ಸೇಂದಿ, ಆಲ್ಕೋಹಾಲ್…ಇದ್ಯಾವುದರ, ಇಂತಹ ಯಾವುದೇ ಸಭ್ಯ ಸದ್ಗೃಹಸ್ಥರ ಒಳ್ಳೇ ಅಭ್ಯಾಸ ಇರಲಿಲ್ಲ!.ಅವರ ವೀಕ್ ನೆಸ್ ಅಂದರೆ ಕಳ್ಳೆಪುರಿ.ಐದಾರು ಸೇರು ಕಳ್ಳೆಪುರಿ ತಿಂದು ಒಂದು ಚೆಂಬು ನೀರು ಕುಡಿತಾ ಇದ್ದರು! ಎಲೆ ಅಡಿಕೆ ಕುತ್ತನಿಯಲ್ಲಿ ಕುಟ್ಟಿ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ತುಂಬಾ ಚಿಕ್ಕ ವಯಸ್ಸಿಗೇ ಅಂದರೆ ಮೂವತ್ತರ ಆಸುಪಾಸಿನ ಲ್ಲೇ ಹಲ್ಲು ಕಿತ್ತಿಸಿದ್ದರಂತೆ. ನಾವು ನೋಡಿದಾಗಲಿಂದ ಅವರಿಗೆ ಬೊಚ್ಚು ಬಾಯೇ. ನನ್ನ ಮೂರನೇ ಅಣ್ಣ ಹಲ್ಲಿನ ಡಾಕ್ಟರರಾದಮೇಲೆ ಅವರಿಗೆ ಹಲ್ಲು ಕಟ್ಟಲು ಪ್ರಯತ್ನಿಸಿದ್ದ.ಒಸಡು ಪೂರ್ತಿ ಸ ವೆದಿದೆ ಅಂತ ಪ್ರಯತ್ನ ಕೈಬಿಟ್ಟಿದ್ದ.

ಅಪ್ಪನಿಗೆ ಎಳನೀರು ಸಿಗದೇ ಪಟ್ಟ ಪಾಡು ವಿವರಿಸಿದೆ.ಕೋಪದಲ್ಲಿಯು ವಿವರಣೆ ಒಪ್ಪಿದ ಹಾಗೆ ತಲೆ ಆಡಿಸಿದರು.ದೇವಸ್ಥಾನದ ಕಮಿಟಿ ಸದಸ್ಯರ ಮುಂದೆ ರಶ್ ನಿಂದ ಆದ ಪಾಡು ವಿವರಿಸಿ ಕ್ಯೂ ಕಾಪಾಡುವ ಸಲಹೆ ಕೊಟ್ಟೆ! ಪುಕ್ಕಟೆ ಸಲಹೆ ಕೊಡೋಕೇನು. ಅವರು ತಲೆ ಆಡಿಸಿ ನಕ್ಕರು! ಕತೆ ಅಲ್ಲಿಗೆ ಮುಗೀತು. ಊರಿಗೆ ಬಂದಮೇಲೆ ಅಲ್ಲಿ ಎಳನೀರು ಸಿಗಲಿಲ್ಲ ಅದರಿಂದ ಇಂತಹ ತೊಂದರೆ ಆಯ್ತು ಅಂತ ಕೇರಳದ ಗೆಳೆಯರಿಗೆ ಹೇಳಿದೆ. ಅಲ್ಲಿ ಎಳನೀರು ಕಾಯಿ ಯಾರೂ ಹಾಕಲ್ಲ, ಕಾಯಿಗಳು ಒಣಕೊಬ್ರಿ ಪುಡಿ ಮಾಡುವ ಫ್ಯಾಕ್ಟರಿ ಗೆ ಹೋಗುತ್ತೆ, ಅದರಲ್ಲಿ ಹೆಚ್ಚು ಕಾಸು ಸಿಗುತ್ತೆ. ಹಾಗೆ ನೋಡಿದರೆ ನಾವು ಇಲ್ಲೇ ಎಳನೀರು ಕುಡಿದದ್ದು ಮತ್ತು ಅದರ ರುಚಿ ನೋಡಿದ್ದೂ…. ಅಂದರು. ಕೇರಳದವರು ಹಣ ಕಾಸಿನ ವಿಷಯದಲ್ಲಿ ತುಂಬಾ ಹುಷಾರು ಅಂತ ಕೇಳಿದ್ದೆ, ಕನ್ಫರ್ಮ್ ಆಯ್ತು . ಇದು ಹಾಗಿರಲಿ..
ನನ್ನ ಹೈಸ್ಕೂಲ್ ಸ್ಕೂಲ್ ಮೇಟ್ ಶ್ರೀಮತಿ ಚಂದ್ರಿಕಾ ಈ ಕೆಳಗಿನ ಸಂಗತಿ ತಿಳಿಸಿದರು..
“ದೇವಸ್ಥಾನಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ. ಹಳೆಯ ನೆನಪುಗಳು ಬಂದವು. ESI ಆಸ್ಪತ್ರೆಗೆ ಅಂಟಿದಂತೆ ಒಂದು ಪ್ರಾಣ ದೇವರ ಗುಡಿ ಇದೆ. ನಾವು ಪ್ರತಿ ಶನಿವಾರ ಹೋಗಿ ಬರುತ್ತಿದ್ದವು. ಹಾಗೆ ಒಂದು ಲೋಟ ತೆಗೆದುಕೊಂಡು ಹೋಗಿ ಮನೆಯವರಿಗೆ ತೀರ್ಥ ತರುತ್ತಿದ್ದೆವು. ಈಗ ಇದು ತುಂಬಾ ದೊಡ್ಡದಾಗಿ ಬೆಳೆದಿದೆ.”
ನವರಂಗ ಬಳಿಯ ಅಂಭಾ ಭವಾನಿ ದೇವಸ್ಥಾನ ನಂತರ ಬಂದಿದ್ದು. ಅಲ್ಲೂ ಸಹ ಬಹು ವೈಭವದಿಂದ ಅಮ್ಮನವರ ಪೂಜೆ ನಡೆಯುತ್ತದೆ ಎಂದು ಕೇಳಿದ್ದೇನೆ.
ಸಿದ್ಧರಾಮನ ದಿಣ್ಣೆ , ಜೂಗನ ಹಳ್ಳಿ ಹಾಗೂ ಎದ್ದಲೂರುದಿಣ್ಣೆ ಗಳಲ್ಲಿ ಗ್ರಾಮ ದೇವತೆಗಳು ಇದ್ದವು.
ಈಗ ಸುಮಾರು ದೇವಸ್ಥಾನಗಳು ಇವೆ. ಸ್ವಾಮಿ ನಾರಾಯಣ ದೇವಸ್ಥಾನ ಆರೇಳು ವರ್ಷಗಳ ಹಿಂದೆ ಸ್ಥಾಪಿತ ವಾಗಿದೆ. ಆಗ್ಗೂ ಈಗ್ಗೂ ದೇವಸ್ಥಾನ ಹೆಚ್ಚಿದೆ.
ಪೋಸ್ಟ್ ಆಫೀಸ್ ಬಳಿಯ ಚರ್ಚ್ ಸುಮಾರು ಹಳೆಯದು. ಅದೇಕೋ ಚರ್ಚ್ ಗಳು ಅಷ್ಟು ಹೆಚ್ಚಿನ ಸಂಖ್ಯಾ ಬಲ ಹೊಂದಿಲ್ಲ. ಮೊದಲ ಮಸೀದಿ ಅಂದರೆ ನಾಲ್ಕನೇ ಬ್ಲಾಕ್ ದು. ಸುಮಾರು ಮುಸ್ಲಿಮರು ಇಲ್ಲಿಗೆ ಬರುತ್ತಿದ್ದರು. ಆಗ ಪುಟ್ಟ ಹುಡಗರಾಗಿದ್ದವರು ಈಗ ಮೈತುಂಬ ಬಿಳೀ ಗಡ್ಡ ಬಿಟ್ಟು ಏನೋ ನೀನ್ ಗೋಪಿ ತಾನೇ ಅಂತ ಕೇಳಿದಾಗ ಡಾಂಗ್ ಹೊಡೆದಿದ್ದೆನೆ. ಈಗ ಅದು ಅಂದರೆ ಮಸೀದಿ ವಿಸ್ತಾರವಾಗಿದೆ, ನನ್ನ ಜತೆಯ ಅಲ್ಲಿನವರು ಹಣ್ಣು ಹಣ್ಣು ಮುದುಕರಾಗಿ ಬಿಳೀ ಗಡ್ಡ ಬಿಟ್ಟಿದ್ದಾರೆ ! ಸುಮಾರು ಹಣ್ಣು ಮುದುಕರು ಅವರೇ ಗುರುತು ಹಿಡಿದು ಮಾತು ಆಡಿಸಿದಾಗ ತುಂಬಾ ಖುಷಿ ಆಗುತ್ತದೆ.
ಈ ಚಿನ ಮಲಯಾಳಿ ಹೆಸರುಗಳು ನನಗೆ ಭಾರೀ ವಿಸ್ಮಯ ಹುಟ್ಟು ಹಾಕಿರುವ ಸಂಗತಿ. ಹಿಂದೆ ಮೂವತ್ತು ನಲವತ್ತು ವರ್ಷಗಳ ಹಿಂದೆ ಮಲಯಾಳಿಗಳು ಹೆಸರು ಅರ್ಥಪೂರ್ಣ ಆಗಿರುವ ಹಾಗೆ ಮತ್ತು ಆಕರ್ಷಕ ಸಹ ಇರುವಂತೆ ಇಡುತ್ತಿದ್ದರು. ದಿವಾಕರನ್,ಗಂಗಾಧರನ್,ಕರುಣಾಕರನ್,ವಿನಾಯಗನ್, ಪಾರ್ತಿಬನ್,ಸೋಮನ್,ಸಿದ್ಧಾರ್ಥನ್ , ಶ್ರೀಧರ ನ್….. ಹೀಗೆ ಹಿಂದೂ ಹುಡುಗರ ಹೆಸರು ಇರುತ್ತಿತ್ತು. ಕ್ರಿಶ್ಚಿಯನ್ ಆದರೆ ಜಾನ್, ಜೇಕಬ್ ಮೈಕೆಲ್, ಪೀಟರ್ ,ಸಿಂಸನ್, ಏಸುಪಾದಂ,….ಈ ರೀತಿ ಇರುತ್ತಿತ್ತು. ಮುಸ್ಲಿಂ ಆದರೆ ಖಾಜಿ, ಎಬ್ರಹಮ್, ಅಜೀಂ ,ಸಲೀಂ, ಸಲಾಂ… ಹೀಗೆ ಈ ವರಸೆಯವು.
ಹೆಣ್ಣುಮಕ್ಕಳ ಹೆಸರು ಗಳು ಕಮಲ, ವಿಮಲ, ಲೀಲಾ ,ಅರುಂಧತಿ, ಭಾಮಾ, ರಂಭಾ, ಮಾಲತಿ, ವಿನುತಾ, ಕಾಮಿನಿ.. ಹೀಗೆ ಇರುತ್ತಿತ್ತು. ಹೆಸರಿನ ಬಾಲಕ್ಕೆ ನಾಯರ್, ವಾರಿಯರ್, ಅಯ್ಯರ್, ಪಣಿಕ್ಕರ್..ಹೀಗೆ ಸೇರಿರುತ್ತಿತ್ತು.ಬಾಯ ತುಂಬಾ ಅವರ ಹೆಸರನ್ನು ಕರೆಯುತ್ತಿದ್ದೆವು ಮತ್ತು ನೆನಪಿನಲ್ಲಿ ಸಹಾ ಉಳಿಯುತ್ತಿತ್ತು. ನನ್ನ ಕೊಲಿಗು ಗಳಲ್ಲಿ ಕೇರಳದ ಹೆಣ್ಣುಮಕ್ಕಳ ಹೆಸರು ಇಂಪು ಸೊಂಪು ಕಂಪು ಇದ್ದವು, ಥೇಟ್ ಅವರ ಹಾಗೇ! ಆಗ ತಾನೇ ತಲೆ ಸ್ನಾನ ಮಾಡಿ ಒದ್ದೆ ಕೂದಲಿನ ಬುಡದಲ್ಲಿ ಒಂದು ಟೀಪು ಕಟ್ಟಿಕೊಂಡು ಗುಂಗುರು ಮುಂದಳೆ ಗಾಳಿಗೆ ಹಾರಾಡಿಸುತ್ತಾ ಈ ಹೆಂಗಸರು ನಡೆದು ಬರ್ತಾ ಇದ್ದರೆ ಗಂಡು ಮುಂಡೇವು ಕಣ್ಣು ಬಾಯಿ ತೆಗೆದುಕೊಂಡು ಸಾಲಾಗಿ ನಿಂತು ಬಿಡೋವು.
ರಾಧಾ, ರತ್ನಾ , ಸೀತಾ, ರೋಜಾ ಹೆಸರಿನವರು ರತ್ನಮ್ಮ ರಾಧಮ್ಮ ಸೀತಮ್ಮ ರೋಜಮ್ಮ ಆಗಿ ಕಾಲಾನುಕಾಲಕ್ಕೆ ವಯಸ್ಸು ಏರಿದಂತೆ ಹೆಸರಿನಲ್ಲಿ ಮಾತ್ರ ಬದಲು ಆಗುತ್ತಿದ್ದರು. ಇದು ಆಗ..

ಈಗ ಇಲ್ಲಿ ಹೆಸರುಗಳು ಭಾರೀ ಬದಲಾವಣೆ ಆಗುತ್ತಿವೆ. ಕೆಲವು ಉದಾಹರಣೆ ಅಂದರೆ ಶಾಜಿ, ಫಾಜಿ, ಬಾಜಿ, ದಾಜಿ, ರಾಜಿ, ರೋಜಿ, ಶೋಜಿ.. ಹೀಗೆ. ಬರೆ ಎರಡು ಅಕ್ಷರದವು. ಇವು ಗಂಡು ಕೂಸುಗಳ ಹೆಸರಾದರೆ ಹೆಣ್ಣು ಕೂಸುಗಳು ಇವೇ ಹೆಸರಿನ ಸ್ತ್ರೀ ಲಿಂಗ ಫಾರ್ಮ್ ಹೊಂದಿರುತ್ತವೆ. ಶೀಜಿ, ಫೀಜಿ, ಬೀಜಿ, ದಿಜಿ, ರೀಜಿ, ಬೀನಿ…. ಹೀಗೆ. ಒಂದು ಇಪ್ಪತ್ತು ಮೂವತ್ತು ವರ್ಷದಲ್ಲಿ ಹೀಗ್ಯಾಕೆ ಬದಲಾವಣೆ ಆಯಿತು ಎಂದು ಸೋಜಿಗ ನನಗೆ. ನಮ್ಮೂರಲ್ಲಿ ವೆಂಕಟ ಲಕ್ಷ್ಮಿ, ಮುನಿಯಮ್ಮ , ಪಂಕಜವಲ್ಲಿ , ಮೋಹನವಲ್ಲಿ, ಕಮಲಾ ಬಾಯಿ, ಜಯಲಕ್ಷ್ಮಿ ಬಾಯಿ…ಇಂತಹ ಹೆಸರು ಯಾವ ಅಪ್ಪ ಅಮ್ಮ ಸಹ ಈಗ ಇಡೋದು ಇಲ್ಲ. ಅಲ್ಲೂ ಬದಲಾಗಿವೆ ಮತ್ತು ಈಗಿನ ಟ್ರೆಂಡ್ ಅಂದರೆ ಮೂರಕ್ಷರದ್ದು ಹಾಗೂ ಅಪರೂಪದ್ದು. ವಿಷ್ಣು ಸಹಸ್ರ ನಾಮ, ಲಲಿತಾ ಸಹಸ್ರನಾಮ , ಇನ್ನೂ ಯಾವ ಯಾವುದೋ ಸಹಸ್ರ ನಾಮ ಹುಡುಕಿ ಹುಡುಕಿ ಅಲ್ಲಿಂದ ಹೆಸರನ್ನು ಹೆಕ್ಕುವ ಸುಮಾರು ಜನ ನನಗೆ ಗೊತ್ತು. ಇನ್ನೂ ತಮಾಷೆ ಅಂದರೆ ಹೆಸರಿಗೂ ಒಂದು ಅರ್ಥ ಬೇಕು ಎನ್ನುವ ಹಳೇ ತಿಂಕಿಂಗ್ ಹೋಗಿ ಅರ್ಥ ಪರ್ಥ ಇಲ್ಲದಿರುವುದು ಶಾರ್ಟ್ ಮತ್ತು ಸ್ವೀಟ್ ಹೆಸರುಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಇನ್ನೂ ಒಂದು ಕಾರಣ ನಾನು ಅಂದುಕೊಂಡಿರೋದು ಅಂದರೆ ಕೂಗಲು ಸುಲಭ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವುದು ಸಹ ಸುಲಭ.ಹಾಗೂ ಅದರ ಜತೆಗೆ ನಮ್ಮಂತಹವರಿಗೆ ಮರೆಯಲು ಸುಲಭ. ಆದರೂ ಸುಮಾರು ಕೇರಳಿಗರು ಈ ಪುಟ್ಟ ಪುಟ್ಟ ಹೆಸರುಗಳಿಗೆ ಮಾರು ಹೋಗಿದ್ದಾರೆ ಮತ್ತು ಮುಂದಿನ ಇಪ್ಪತ್ತು ಮೂವತ್ತು ವರ್ಷಗಳು ಬರೆ ಎರಡಕ್ಷರಗಳ ಹೆಸರಿನಿಂದ ಕೇರಳ ತುಂಬಿ ತುಳುಕುತ್ತದೆ. ನಂತರ ಏನಾಗಬಹುದು ಅಂದರೆ ಒಂದಕ್ಷರದ ಹೆಸರುಗಳು ಚಲಾವಣೆಗೆ ಬರಬಹುದು. ಕೆಲವು ಸಲ ಅದರ ಉಚ್ಚಾರಣೆ ಸಹ ಕಷ್ಟ ಆಗಬಹುದು. ಆಗ ಹೇಗೆ ಒಬ್ಬರನ್ನೊಬ್ಬರು ಸಂಬೋಧನೆ ಮಾಡುತ್ತಾರೋ ಎನ್ನುವ ಆತಂಕ ನನಗೆ. ಈ ಆತಂಕವನ್ನು ನನ್ನ ಮನದನ್ನೆ ಒಂದಿಗೆ ಹಂಚಿಕೊಂಡೆ. ಅಯ್ಯೋ ಬಿಡಿ ಅದಕ್ಕೆ ಇನ್ನೂ ಐವತ್ತು ಅರವತ್ತು ವರ್ಷ ಇದೆ, ಇನ್ನೆಷ್ಟು ಜನ್ಮ ಎತ್ತಿರುತ್ತೇವೋ ಅಷ್ಟು ಹೊತ್ತಿಗೆ ಅಂತ ಉತ್ತರ ಬಂತು! ಅಯ್ಯೋ ಹೌದಲ್ಲವೇ ಇರೋ ಪ್ರಾಬ್ಲಂ ಗಳೇ ಹಾಸಿ ಹೊದ್ದು ಮಲಗುವಷ್ಟಿದೆ, ಈಗ ಅದು ಬೇರೆ ಬೇಕಾ ಅಂತ ತೆಪ್ಪಗೆ ಕೂತೆ.
ತಿರುವನಂತಪುರದಲ್ಲಿ ನಮ್ಮ ಹಾಗೆ BMTC ಬಸ್ಸುಗಳು ಇದೆಯೋ ಇಲ್ಲವೋ ಎನ್ನುವ ಸಂಶಯ ನಿಮಗೆ ಹೇಳಿದ್ದೆ. ಏರ್ ಪೋರ್ಟ್ ರಸ್ತೆಯಲ್ಲಿ ನಾವು ಹೋದ ನಾಲ್ಕನೇ ದಿವಸ ಒಂದು ಬಸ್ಸು ಕಾಣಿಸಿತು. ಅದರ ಹಿಂದೆಯೇ ಹೋದೆ. ಅಲ್ಲಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡಿತು. ಸುಮಾರು ಜನ ಕಾಲೇಜು ವಿದ್ಯಾರ್ಥಿಗಳು ಮತ್ತು ಅದು ಸುಮಾರು ಹತ್ತು ಗಂಟೆಯ ಆಸು ಪಾಸು. ಐದು ಐದೂವರೆ ಸುಮಾರಿಗೆ ಏರ್ ಪೋರ್ಟ್ ರಸ್ತೆಯಿಂದ ವಾಪಸಾಗುವ ಸಂದರ್ಭದಲ್ಲಿ ಸುಮಾರು ಮೂವತ್ತರ ಆಸುಪಾಸಿನ ಹೆಣ್ಣು ಗಂಡು ಬಸ್ಸು ಹತ್ತಿದವು. ಹತ್ತಿರದಲ್ಲೇ ಅಯ್ ಟಿ ಪಾರ್ಕು ಮತ್ತು ಇನ್ಫೋಸಿಸ್ ಸಂಸ್ಥೆ. ಹೆಗಲಿಗೆ ಒಂದು ಲಾಪ್ ಟಾಪ್ ಬ್ಯಾಗು, ಸುಮಾರು ಬಿಗಿಯಾದ ಕಪ್ಪು ಬಣ್ಣದ ಟಿ ಶರ್ಟ್ ಮತ್ತು ಅದೇ ಬಣ್ಣದ ಪ್ಯಾಂಟ್ ಇವರ ಡ್ರೆಸ್,ಬೆಂಗಳೂರಿನ ಹುಡುಗಿಯರ ಹಾಗೇ! ಐ ಟಿ ಸೆಕ್ಟರ್ ನ ಅನ್ ರಿಟನ್ ಡ್ರೆಸ್ ಕೊಡ್ ಇರಬಹುದು ಅನಿಸಿತು.ಬಹುಶಃ ಅಲ್ಲಿ ಕೆಲಸ ಮಾಡುವವರು ಇರಬೇಕು. ಯಾವ ಬಸ್ ಸ್ಟಾಪಿನಲ್ಲಿ ಯೂ ಹೆಚ್ಚು ಜನ ಇಲ್ಲ ಮತ್ತು ಸಾವಧಾನವಾಗಿ ಬಸ್ಸಿಗೆ ಕಾಯುತ್ತಿದ್ದವರು. ನಮ್ಮ ಬೆಂಗಳೂರು ನೆನಪಿಗೆ ಬಂತು. ದಿನದ ಇಪ್ಪತ್ತು ನಾಲ್ಕು ಗಂಟೆ ಅಲ್ಲದೇ ಎಲ್ಲಾ ಸಮಯದಲ್ಲೂ ಗಿಜಿಗಿಜಿ ಗುಡುವ ಜನಜಂಗುಳಿ. ಗುಂಪು ನೋಡಿದ ಕೂಡಲೇ ಬಸ್ಸಿಗಾಗಿ ಕಾಯುತ್ತಿರುವ ಜನ ಎಂದು ಹೇಳಬಹುದು! ಬಸ್ಸು ಬಂದಕೂಡಲೇ ಬೆಂಗಳೂರಿನ ವರ ಹಾಗೆ ನುಗ್ಗೋದಿಲ್ಲ,ಸಾವಧಾನವಾಗಿ ಬಸ್ ಹತ್ತುತ್ತಾರೆ.ನಮ್ಮೂರು ನೆನಪು ಬಂದು ನೂರು ವರ್ಷ ಹಿಂದೆ ನಮ್ಮೂರೂ ಸಹ ಹೀಗೇ ಇತ್ತಲ್ಲವಾ ಅನಿಸುತ್ತೆ.ಅಂದ ಹಾಗೆ ಎಲ್ಲಾ ಬಸ್ಸುಗಳೂ ಮಲ ಯಾಲದಲ್ಲೆ ನಾಮಫಲಕ ಹೇರಿ ಕೊಂಡಿತ್ತು. ಒಂದೇ ಒಂದು ಇಂಗ್ಲೀಷ್ ಅಕ್ಷರ ಕಾಣಲಿಲ್ಲ. ನಮ್ಮೂರಿನಲ್ಲಿ ಬರೀ ಕನ್ನಡ ಬೋರ್ಡ್ ಇದ್ದರೆ ಎಷ್ಟು ಜನ ಇಂಗ್ಲಿಷಿನ ವಾಚಕರ ವಾಣಿಗೆ, ರೀಡರ್ಸ್ ಕಾಲಂ ಗೆ, ಫೆಸ್ ಬುಕ್ ನಲ್ಲಿ ಪ್ರತಿಕ್ರಿಯೆ ಮಾಡುತ್ತಾರೆ ಅನ್ನುವುದು ನೆನಪಿಗೆ ಬಂತು. ಅಂದ ಹಾಗೆ ಟ್ರಿವಾಂಡ್ರಂ ಸಂಪೂರ್ಣ ಮಲಯಾಳಿ ಆಗಿದೆ.ದೊಡ್ಡ ಅಂಗಡಿ, ಪುಟ್ಟ ಅಂಗಡಿ ಎಲ್ಲಾ ಕಡೆ ಮಲಯಾಳಿ ಭಾಷೆಯ ನಾಮಫಲಕ.ಯಾರೂ ಕರ್ನಾಟಕದವರ ಹಾಗೆ ಕನ್ನಡ ಉಳಿಸಿ ಕನ್ನಡ ಬೆಳೆಸಿ ಮಾದರಿಯಲ್ಲಿ ಮಲಯಾಳ ಉಳಿಸಿ ಮಲಯಾಳ ಬೆಳೆಸಿ ಚಳುವಳಿ ಮಾಡಿದ್ದು ಕಾಣೆ.ಇಡೀ ಏರ್ ಪೋರ್ಟ್ ರಸ್ತೆಯಲ್ಲಿ ಒಂದೂ ಬಸ್ ನಿಲ್ದಾಣ ಇಲ್ಲ. ಅಲ್ಲೆಲ್ಲೋ ಒಂದು ಕಡೆ ನಿಲ್ದಾಣ ನೋಡಿದೆ. ಅದರಲ್ಲಿ ಕೆಲವರು citu ಬಾವುಟ ಹಿಡಿದು ಧರಣಿ ಮಾಡುತ್ತಿದ್ದರು! ಊರಿನ ಒಳಹೊಕ್ಕರೆ ಬಸ್ ಸ್ಥಾಪುಗಳಲ್ಲಿ ಕೆಂಪು ಬಾವುಟ ಹಿಡಿದು ಧರಣಿ ಮಾಡುತ್ತಿರುವ ಗುಂಪುಗಳು ಕಾಣುತ್ತವೆ. ಬಸ್ ಸ್ಟಾಪ್ ಜಾಗ ಹೀಗೆ ಬಹು ಚೆನ್ನಾಗಿ ಉಪಯೋಗವಾಗುತ್ತಿದೆ.
ಇನ್ನೊಂದು ನಮ್ಮ ಊರಿನಲ್ಲಿ ಈಗ ಇಲ್ಲದಿರುವುದು ನೋಡಿದ್ದು. ಇಲ್ಲಿ ಡಬಲ್ ಡೆಕ್ಕರ್ ಓಡಾಡುತ್ತವೆ. ಬೆಂಗಳೂರಿನಿಂದ ಇದು ಕಣ್ಮರೆಯಾಗಿ ಸುಮಾರು ವರ್ಷ ಕಳೆದಿದೆ. ಇಲ್ಲಿ ಮೆಟ್ರೋ ಬಗ್ಗೆ ಒತ್ತಡ ಇದ್ದ ಹಾಗಿಲ್ಲ ಅಂತ ಹೇಳಿದ್ದೆ. ನಗರ ಹೀಗೆ ಉದ್ಯಮಗಳು ಬೆಳೆಯದೆ, ಜನಸಂಖ್ಯೆ ಇಷ್ಟೇ ಇದ್ದರೆ ಮತ್ತು ಇಲ್ಲಿನ ಯುವ ಶಕ್ತಿ ಹೊರಗಡೆ ಹೋಗುತ್ತಲೇ ಇದ್ದರೆ ಇನ್ನು ನೂರು ವರ್ಷ ಆದರೂ ಇಲ್ಲಿ ಮೆಟ್ರೋ ಬೇಕಿಲ್ಲ! ಇಲ್ಲಿ ಎಸೆಲ್ಸಿ ಆದ ಕೂಡಲೇ ಹುಡುಗ ಹುಡುಗೀರು ಬೆಂಗಳೂರು ದುಬೈ ಗೆ ಹೋಗಿಬಿಡ್ತಾರೆ.ಟ್ರಾಫಿಕ್ ಹೆಚ್ಚಿದ್ದರೆ ಅದರಿಂದ ತೊಂದರೆ ಅನುಭವಿಸಿದಾಗ ಆರ್ಭಟ ಹೆಚ್ಚಾದರೆ ಪರ್ಯಾಯ ಮಾರ್ಗದ ಅವಶ್ಯಕತೆ ಹುಟ್ಟುತ್ತೆ.
ಅಂದರೆ ಇಲ್ಲಿ ವಲಸೆ ಕಾರ್ಮಿಕರು ಇಲ್ಲವೇ? ಇದ್ದಾರೆ, ತುಂಬಾ ಅಂದರೆ ತುಂಬಾ ಮೈನಾರಿಟಿ ಯಲ್ಲಿ. ಅದೂ ಬೇರೆ ಕಡೆಯಿಂದ ವರ್ಗ ಆಗಿ ಬಂದೀರೋರು. ಸ್ಟಾರ್ ಹೆಲ್ತ್ ಇನ್ಸ್ಯುರೆನ್ಸ್ ಹೆಸರಿನ ಒಂದು ಕಂಪನಿಗೆ ಹೋಗಿದ್ದೆ. ಕಂಪನಿ ಅವರು ಇನ್ಸೂರೆನ್ಸ್ ಕ್ಲೈಮ್ ಅನ್ನು ತಿರಸ್ಕರಿಸಿದ್ದರು. ಅದರ ಬಗ್ಗೆ ಸಮಜಾಯಿಷಿ ಕೊಟ್ಟೆ, ಇಂಗ್ಲಿಷ್ ನಲ್ಲಿ.ಅಲ್ಲಿದ್ದ ಒಬ್ಬ ಆಫೀಸರ್ ತಮಿಳಲ್ಲಿ ಹೇಳಿ ಅಂದ! ಬಹುಶಃ ಹೊಸದಾಗಿ ಬಂದವನು ಇರಬೇಕು. ಇಂಗ್ಲಿಷ್ ನಲ್ಲೇ ನೀನು ಮೊದಲು ಮಲಯಾಳ ಕಲಿ , ಇಲ್ಲಿ ಕೆಲಸ ಮಾಡಲು ನೀನು ಅನ್ ಫಿಟ್ ಅಂತ ಬುದ್ಧಿ ಹೇಳಿದೆ!
ಅಂದ ಹಾಗೆ ಇಲ್ಲಿನ ಆಟೋಗಳು ಪೆಟ್ರೋಲು, ವಿದ್ಯುತ್ ,ಡೀಸೆಲ್ ಮತ್ತು ಗ್ಯಾಸ್ ನಲ್ಲು ಓಡಾಡುತ್ತವೆ. ನಮ್ಮ ಹಾಗೆ ಬರೆ ಗ್ಯಾಸ್ ಆಟೋ ಇಲ್ಲ. ಡೀಸೆಲ್ ಆಟೋದಲ್ಲಿ ಕೂತರೆ ಇಂಜಿನ್ ಶಬ್ದದಲ್ಲಿ ನಿಮಗೆ ಮಾತು ಆಡೋದು ತುಂಬಾ ಕಷ್ಟ! ಒಂದು ಸಮಾಧಾನ ಅಂದರೆ ಯಾವುದೇ ಆಟೋ ದಲ್ಲಿ ಪ್ರಯಾಣ ಮಾಡಿದರೂ ಉಬರ್ ದರ ಅಷ್ಟೇ. ಇನ್ನೊಂದು ವಿಶೇಷ ಅಂದರೆ ಇಲ್ಲಿನ ಕ್ಯಾಬ್ ಮತ್ತು ಕಾರ್ ಗಳು ಇನ್ನೂ ಟಿಂಟೆಡ್ ಗ್ಲಾಸ್ ಉಪಯೋಗಿಸುತ್ತವೆ. ಬಹುಶಃ ಮಹಿಳಾ ಲೈಂಗಿಕ ದೌರ್ಜನ್ಯ ದಂತಹ ಬೆಂಗಳೂರಿನ ಕಹಿ ಕಹಿ ಪ್ರಸಂಗಗಳು ಅಲ್ಲಿ ನಡೆದಿರಲಾರದು ಎಂದು ತಿಳಿದಿದ್ದೇನೆ . ಸದ್ಯ ನಗರ ಇದೇ ರೀತಿ ಇರಲಿ ಎನ್ನುವ ಸದಾಭಿಲಾಷೆ ನನ್ನದು. ಅಂದರೆ ಹಸಿರು ಇನ್ನೂ ಉಳಿದಿದೆ, ಧೂಳಿನಿಂದ ಕೂಡಿದ ರಸ್ತೆ ಇಲ್ಲ ಮತ್ತು ಕಿವಿ ಗವಡು ಚಿಕ್ಕುವ ಹಾರ್ನ್ ಗಳು ಇಲ್ಲ!
ಸಾರ್ವಜನಿಕ ಸ್ಥಳಗಳಲ್ಲಿ ಬಹುತೇಕ ಮಲಯಾಳಿ ಭಾಷೆಯ ಬೋರ್ಡು ಗಳೆ. ನಮ್ಮ ಬೆಂಗಳೂರಿನ ಹಾಗೆ ಪುಟ್ಟ ಪೆಟ್ಟಿಗೆ ಅಂಗಡಿಗೂ ಇಂಗ್ಲಿಷ್ ಬೋರ್ಡ್ ಇಲ್ಲ. ಅಖಿಲ ಭಾರತ ಮಟ್ಟದ ಬ್ಯಾಂಕುಗಳು ಕೇಂದ್ರ ಸರ್ಕಾರದ ಅಧೀನದ ಕಾರ್ಯಾಲಯಗಳು ಇಂಗ್ಲಿಷ್ ಬೋರ್ಡ್ ಸಹ ಹೊತ್ತಿರುತ್ತೆ. ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಖಾಸಗಿ ಅವರ ಅಂಗಡಿ ಮುಗ್ಗಟ್ಟುಗಳು ಮಲಯಾಳ ಭಾಷೆಯ ಬೋರ್ಡ್ ಹಾಕಿ ಕೊಂಡಿರುತ್ತೆ. ಒಂದು ದೇವಸ್ಥಾನದಲ್ಲಿ dont spit here ಎನ್ನುವ ಇಂಗ್ಲಿಷ್ ಬೋರ್ಡ್ ಕೆಳಗೆ ಹಿಂದಿ ಬೋರ್ಡ್ ಇತ್ತು!
ಅಲ್ಲಿ ಯಾರೂ ಮಲಯಾಳ ನಮಗೆ ಅರ್ಥ ಆಗಲ್ಲ, ಇಂಗ್ಲಿಷ್ ಬೋರ್ಡ್ ಬೇಕು ಅಂತ ಪತ್ರಿಕೆಗಳಿಗೆ ಬರೆದು ಸುದ್ದಿ ಮಾಡರು! ಹಾಗೂ ಸ್ಥಳೀಯ ವಾಹಿನಿಗಳು ಬೆಂಬಲ ಸಹ ನೀಡವು. ಬೆಂಗಳೂರಿನಲ್ಲಿ ಇದಕ್ಕೆ ತದ್ವಿರುದ್ದ!

ಪ್ರತಿದಿನ ಒಂದು ಗುಂಪು ಗಂಡಸರು ಒಂದು ರಸ್ತೆ ತಿರುವಿನ ಕಟ್ಟೆ ಮೇಲೆ ಮೈ ತುಂಬಾ ದುಗುಡ ಯೋಚನೆ ತುಂಬಿಕೊಂಡು ಕೂತಿರೋ ದನ್ನು ಗಮನಿಸುತ್ತಾ ಇದ್ದೆ. ಸುತ್ತಮುತ್ತ ಎಲ್ಲೂ ಬೀಡಿ ಸಿಗರೇಟ್ ಅಂಗಡಿ ಇಲ್ಲ, ಚಾ ಅಂಗಡಿ ಟೀ ಕಡೆ ಸಹ ಇಲ್ಲ. ಇವರು ಯಾಕೆ ಹೀಗೆ ಕೂತಿರ್ತಾರೆ ಅಂತ ಆಶ್ಚರ್ಯ. ಕೊನೆಗೂ ಈ ರಹಸ್ಯ ಬೇಧಿಸಿದೆ. ಅದರ ವಿವರ ಹೀಗೆ. ಕೇರಳದ ಹೆಚ್ಚಿನ ಪ್ರದೇಶದಲ್ಲಿ ಮರುಮಕ್ಕುತ್ತಾಯಂ ಕಾನೂನು. ಹೀಗಂದರೆ ಅಳಿಯ ಸಂತಾನ ಕಾನೂನು ಅನಂತ. ಅಂದರೆ ಮನೆಯಲ್ಲಿ ಸಂಪೂರ್ಣ ಹಣಕಾಸಿನ ಹಿಡಿತ ಮನೆಯ ಹೆಂಗಸು ನೋಡಿಕೊಳ್ಳುತ್ತೆ. ಗಂಡಸಿಗೆ ಅಷ್ಟು ಅಧಿಕಾರ ಈ ಕಾರಣದಿಂದ ಇಲ್ಲ ಮತ್ತು ಮನೆಕೆಲಸ ನಿರ್ವಹಣೆ ಸಹ ಗಂಡಸರ ಜವಾಬ್ದಾರಿ. ಸಹಜವಾಗೇ ಇಂತಹ ಪರಿಸರ ಅಂದರೆ ಯಾರಿಗೇ ಆಗಲಿ ಸಿಟ್ಟು ಸೆಡವು ಕೋಪ ತಾಪ ಎಲ್ಲವೂ ಇರಲೇ ಬೇಕು. ಕೆಲಸ ಮಾಡಿ ಮಾಡಿ ಗಂಡಸು ಸುಸ್ತು ಹೊಡೆದು ಹೋಗಿರುತ್ತಾನೆ.ಆಗ ಮನೆಯ ಗಂಡಸು ಆಚೆ ಬಂದು ಕೂರುತ್ತಾನೆ ಮತ್ತು ಇವನ ಜತೆಗೆ ಇವನ ಹಾಗೇ ನೊಂದ ಜೀವಿಗಳು ಸೇರಿಕೊಳ್ಳುತ್ತವೆ.(ಅಂದ ಹಾಗೆ ವಿಕ್ಟರ್ ಹ್ಯೂಗೋ ನ ಲೇ ಮಿಸರಬಲಸ್ ಕಾದಂಬರಿಯನ್ನು ಕನ್ನಡದಲ್ಲಿ ನಾ.ಕಸ್ತೂರಿ ಅವರು ಭಾಷಾಂತರ ಮಾಡಿದ್ದಾರೆ, ಅದರ ಹೆಸರು ನೊಂದಜೀವಿ.ಕಸ್ತೂರಿ ಹುಟ್ಟಾ ಮಲಯಾಳಿ!) ಇಲ್ಲಿ ಸುಮಾರು ಗಂಡಸರ ಪಾಡು ಇದೇ ಆಗಿದೆ ಅಂತ ನಾನು ಸಂಶೋಧಿಸಿದ ಸತ್ಯ!

ಯಾವುದೇ ಊರು ಅಥವಾ ದೇಶ ಇರಲಿ ಒಂದೆರೆಡು ವಾರ ಅಲ್ಲಿದ್ದು ಇದು ಹೀಗೇ ಎಂದು ನಿಖರವಾಗಿ ಹೇಳುವುದು ಸರಿಯಲ್ಲ ಎಂದು ನನ್ನ ಅಭಿಮತ. ಹೆಚ್ಚೆಂದರೆ ಕುರುಡ ಆನೆ ನೋಡಿದ ಹಾಗೇ ಇಂತಹ ಸತ್ಯ ಎಂಬುದು ಎಲ್ಲರೂ ಒಪ್ಪಲೇ ಬೇಕಾದ ಮಾತು. ಈ ದೃಷ್ಟಿಯಿಂದ ತಿರುವನಂತಪುರದ ನನ್ನ ಈ ನೋಟವನ್ನು ಒಂದು ಪಾರ್ಶ್ವ ನೋಟ ವನ್ನಾಗಿಯೋ ಅಥವಾ ಒಂದು ವೋರೆ ನೋಟ ಎಂದು ಪರಿಗಣಿಸಬಹುದು. ಇನ್ನೂ ಹೇಳಬೇಕೆಂದರೆ ಒಂದು ತಿಳಿ ಲಘು ಯೋಚನೆ ಹರಿಬಿಟ್ಟಿದ್ದೇನೆ ಅಷ್ಟೇ.
ಒಂದು ಚಾಯ್ಸ್ ನಿಮಗೆ ಕೊಟ್ಟರೆ ಬೆಂಗಳೂರು ಇಷ್ಟ ಪಡುವಿರೋ ತಿರುವನಂತಪುರ ಇಷ್ಟ ಪಡು ವಿ ರೋ ಅಂತ ಅಕಸ್ಮಾತ್ ನೀವು ಕೇಳುತ್ತೀರಿ ಅಂತ ಮಸಲಾ ನಾನು ಅಂದುಕೊಂಡರೆ ನನ್ನ ಉತ್ತರ ಹೇಗಿರುತ್ತೆ…..?
ನಮ್ಮೂರೇ ಚೆಂದ ನಮ್ಮೂರೇ ಅಂದ..!

ಎಚ್. ಗೋಪಾಲ ಕೃಷ್ಣ

ಕೇರಳದ ಮರುಮಕ್ಕುತ್ತಾಯಂ ಸರಿಯಿದೆ