ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ ಗೂಡಿನ ಪಟಗಳಿಗಿಟ್ಟು, ಗಟ್ಟಿಯಾಗಿ ಮಂತ್ರ ಹೇಳುತ್ತ ಪೂಜೆ ಮಾಡುತ್ತಿದ್ದ. ಅಷ್ಟರಲ್ಲವಳು ಬಚ್ಚಲು ಹಂಡೆಗೆ ಉರಿಹಾಕಿ,ಕಾಫಿಗಿಟ್ಟು ಕೆಲಸ ಶುರು ಮಾಡುತ್ತಿದ್ದಳು. ತಿಂಡಿ ತಿಂದವನು ಕ್ಯಾರಿಯರ್ ಹಿಡಿದು ಆಫೀಸಿಗೆ ಹೊರಟರೆ ಅವಳಿಗೆ ನಿರಾಳ. ಕೆಲಸವೆಲ್ಲ ಮುಗಿಸಿ, ಹಿತ್ತಲಿನ ನುಗ್ಗೆಮರದ ಕೆಳಗೆ ಕುಳಿತು ಕತೆ ಪುಸ್ತಕದೊಳಗೊ ಅಥವಾ ತವರಿನ ನೆನಪೊಳಗೊ ಮುಳುಗುತ್ತಿದ್ದಳುಆ ನೆನಪುಗಳೊಳಗೆ ಸುಖವಿತ್ತು.ತವರು ಮನೆಯ ಹಿತ್ತಲಿಗೆ ಆತುಕೊಂಡಂತೆ ಹರಿಯುತ್ತಿದ್ದ ಭದ್ರಾ ನದಿ,ವಿಶಾಲವಾದ ಮನೆಯಂಗಳದಲ್ಲಿನ ಮಾವಿನ ಮರ,ಸಂಪಿಗೆಮರ,ಸೀಬೆಮರ, ತೂಗುಹಲಗೆ ಉಯ್ಯಾಲೆ,ಕಾಡು ಗಿಡಗಳಪೊದೆ,ಮಲ್ಲಿಗೆ ಹಂದರ,ಎಲ್ಲ ಅಂದರೆ ಎಲ್ಲ ನೆನಪಾಗಿ ಕಾಡುತ್ತಿದ್ದವು! ಅವಳಿಗೆ ಮಾತು ಬೇಕಿತ್ತು. ಯಾವಾಗಲೂ ಗಲಗಲ ಅನ್ನುವ ಜನರು ಸುತ್ತ ಇರಬೇಕು ಅನಿಸುತ್ತಿತ್ತು. ಸೃಷ್ಠಿಯ ಪ್ರತಿ ವಸ್ತುವಿನಲ್ಲೂ ಅವಳಿಗೆ ಅಧಮ್ಯ ಕುತೂಹಲ. ಅವಳು ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುತ್ತಿದ್ದಳು.ಅವನು ಆಫೀಸಿಗೆ ಹೋದ ತಕ್ಷಣ ಮನೆಯ ಎಲ್ಲ ಕಿಟಕಿ-ಬಾಗಿಲುಗಳನ್ನು ತೆರೆದು ಒಳಬರುತ್ತಿದ್ದ ಸೂರ್ಯನ ಬೆಳಕಿನಲ್ಲಿ ಮೀಯುತ್ತ,ಹಿತವಾದ ಗಾಳಿಗೆ ಮೈಯೊಡ್ಡಿ ಕನಸು ಕಾಣುತ್ತಿದ್ದಳು.. ಆದರವನು ಇದಕ್ಕೆ ತದ್ವಿರುದ್ದ. ಮೊದಲಿನಿಂದಲೂ ಅವನು ಮಿತಭಾಷಿ. ಆಡಿದರೂ ಅಗತ್ಯವಿದ್ದಷ್ಟು. ತನ್ನ ಆಫೀಸು,ಬೆಳಗಿನ ಪೂಜೆ,ಸಂಜೆಯ ಸಂಧ್ಯಾವಂದನೆಗಳಲ್ಲಿ ಕಳೆದು ಹೋಗುತ್ತಿದ್ದ. ರಜಾದಿನಗಳಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಒಳಗಿನ ಧಗೆಯಲ್ಲಿ ಬೇಯುತ್ತಲೇ ನಿರಾಳವಾಗಿ ರಾಮಕೃಷ್ಣಪರಮಹಂಸರ ಪುಸ್ತಕಗಳನ್ನೊ ಭಗವದ್ಗೀತೆಯ ಸಾರವನ್ನೋ ಓದುತ್ತ ಕೂರುತ್ತಿದ್ದ. ಅವರಿಬ್ಬರೂ ಎರಡು ದೃವಗಳಾಗಿದ್ದರು. ಅವಳಿಗೆ ಅವನ ಬಗ್ಗೆ ವಿಚಿತ್ರ ಕುತೂಹಲ: ಅವನ ದೇವರ ಪೂಜೆ,ಆ ತನ್ಮಯತೆ,ಅಂತರ್ಮುಖತನ,ಪಾಪ-ಪುಣ್ಯಗಳ ಸ್ವರ್ಗ ನರಕಗಳ ಬಗೆಗಿನ ಅಪಾರ ನಂಬಿಕೆಗಳನ್ನು ಕಂಡು ಆಶ್ಚರ್ಯ! ಅವನಿಗೆ ಸಣ್ಣಪುಟ್ಟ ವಿಷಯಗಳಲ್ಲೂ ಅವಳು ಪಡೆಯುತ್ತಿದ್ದ ಸುಖದ ಬಗ್ಗೆ ತಿರಸ್ಕಾರ.ಅವಳ ಅತಿಯೆನಿಸುವಷ್ಟು ಪ್ರೀತಿ,ಜೋರಾಗಿ ಮಾತನಾಡಿದರೆ ಸಾಕು, ಕಣ್ಣು ತುಂಬಿ ಬರುವ ಸೂಕ್ಷ್ಮತೆ ಕಂಡು ಬೇಸರ. ಇಷ್ಟಿದ್ದರೂ ಅವರ ನಡುವೆ ಮಾತುಗಳಿಗೆ ನಿಲುಕದಪ್ರೀತಿಯಿತ್ತು. ಬದುಕು ಹೀಗೇ ಸಾಗುತ್ತಿರುವಾಗ, ಅದೊಂದು ದಿನನ ಆ ಗುಬ್ಬಚ್ಚಿಗಳು ಅವಳನ್ನು ಸೆಳೆದವು.ಅಡುಗೆ ಮನೆಯ ಪಕ್ಕದಲ್ಲಿದ್ದ ಸ್ಟೋರ್ ರೂಮಿನ ಸೂರಿನಲ್ಲಿ ಅವು ಗೂಡು ಕಟ್ಟಲು ಪ್ರಾರಂಬಿಸಿದ್ದವು. ಮೊದಮೊದಲು ಅವಳು ಅವುಗಳನ್ನು ಗಮನಿಸಿರಲಿಲ್ಲ. ಬರುಬರುತ್ತ ಅವುಗಳ ಕಿಚಕಿಚ ಶಬ್ದ ಜಾಸ್ತಿಯಾದಂತೆ ಅವಳ ಕಣ್ಣಿಗವು ಬಿದ್ದವು. ಬಂಗಾರದ ಬಣ್ಣದ ಒಣ ಹುಲ್ಲುಕಡ್ಡಿಗಳನ್ನು ಬಾಯಲ್ಲಿ ಕಚ್ಚಿತಂದು ಸೂರಿನಲ್ಲಿ ಸಿಗಿಸುತ್ತಿದ್ದವು..ಅವು ಕಿಟಕಿಯಲ್ಲಿ ಕೂತು ಅರ್ಥವಾಗದ ಬಾಷೆಯಲ್ಲಿ ಮಾತಾಡುವುದು,ಪುರ್ರನೆ ಹಾರಿಹೋಗಿ ಹುಲ್ಲು ತರುವುದು,ಕೊಕ್ಕಿನಿಂದ ೊಂದೊಂದೇ ಹುಲ್ಲು ಸೇರಿಸಿ ಕಲಾತ್ಮಕವಾಗಿ ಗೂಡು ಕಟ್ಟುವುದು,ಇವನ್ನೆಲ್ಲ ನೋಡುವುದು ಅವಳಿಗೆ ಹೊಸ ರೀತಿಯ ಅನುಭವ ಅನಿಸಿತು.ಆ ಪುಟ್ಟ ಹಕ್ಕಿಗಳ ಬದುಕು ಅದ್ಬುತವಾಗಿ ತೋರತೊಡಗಿತು. ಅವುಗಳ ನಿತ್ಯದ ಚಟುವಟಿಕೆಗಳನ್ನು ನೋಡುವುದರಲ್ಲಿ ಅವಳೆಷ್ಟು ತನ್ಮಯಳಾಗಿ ಬಿಟ್ಟಳೆಂದರೆ,ಅವನು ಆಫೀಸಿಗೆ ಹೋದ ತಕ್ಷಣ ಸ್ಟೋರಿನ ಬಾಗಿಲ ಬಳಿ ಬಂದು ಕೂರುತ್ತಿದ್ದಳು. ಪ್ರತಿನಿತ್ಯ ಅಕ್ಕಿಯ ಕಾಳುಗಳನ್ನುಅವುಗಳಿಗೋಸ್ಕರ ತಂದು ಹಾಕುವುದು,ಅದನ್ನು ತಿನ್ನುವಂತೆ ಹುಶ್ಹುಶ್ ಎಂದು ಸಂಕೇತದಲ್ಲಿ ಮಾತಾಡಿಸುವುದು ಮಾಮೂಲಿಯಾಗುತ್ತಾಹೋಯಿತು. ದಿನಕಳೆದಂತೆ ಗುಬ್ಬಚ್ಚಿಗಳ ಗೂಡು ಪೂರ್ಣವಾಯಿತು. ಸಂಜೆ ಅವು ಬಂದಾಗ ಸ್ಟೋರಿನ ಬಾಗಿಲು ಹಾಕಿದ್ದರೆ ಕೊಕ್ಕಿನಿಂದ ಕುಕ್ಕಿ ಶಬ್ದ ಮಾಡುತ್ತಿದ್ದವು. ಆಗವಳು ಓಡಿಹೋಗಿ ಬಾಗಿಲು ತೆಗೆದ ತಕ್ಷಣ ಗೂಡು ಸೇರುತ್ತಿದ್ದವು. ಬೆಳಿಗ್ಗೆ ಎದ್ದು ಕಿಟಕಿ ತೆಗೆಯುವುದು ಒಂದು ಕ್ಷಣ ತಡವಾದರೆ ಸಾಕು ಕಿಚಕಿಚ ಎಂದು ಹುಯಿಲೆಬ್ಬಿಸುತ್ತಿದ್ದವು. ಹೀಗವಳು ಗುಬ್ಬಚ್ಚಿಗಳ ಪ್ರಪಂಚದಲ್ಲಿಬೆರೆಯುತ್ತಹೋದಳು. ಹೀಗಿರುವಾಗ ಅವಳು ಎರಡು ತಿಂಗಳು ಮುಟ್ಟಾಗಲಿಲ್ಲ. ಆಸ್ಪತ್ರೆಯಲ್ಲಿ ಲೇಡಿ ಡಾಕ್ಕರ್ ನಗುತ್ತಾ ನೀವು ತಂದೆಯಾಗಲಿದ್ದೀರಿ ಅಂದಾಗ ಅವನ ಮುಖ ಅರಳಿತ್ತು. ಅವು ಅಷ್ಟೊಂದು ಸಂತೋಷ ಪಟ್ಟಿದ್ದನ್ನು ಈ ಎರಡು ವರ್ಷಗಳಲ್ಲಿ ಅವಳು ಒಮ್ಮೆಯೂ ನೋಡಿರಲಿಲ್ಲ..ಆಗಿನಿಂದ ಅವನು ಬದಲಾಗತೊಡಗಿದ. ಅವಳೊಡನೆ ಹೆಚ್ಚು ಮಾತಾಡತೊಡಗಿದ. ಕಣ್ಣಲ್ಲಿ ಕಣ್ಣಿಟ್ಟು ಅವಳ ಆರೈಕೆ ಮಾಡತೊಡಗಿದ. ಅವಳ ಆರೋಗ್ಯಕಾಗಿ ಕಂಡಕಂಡ ದೇವರುಗಳಿಗೆ ಅರ್ಚನೆ ಮಾಡಿಸತೊಡಗಿದ. ಅವನ ಪ್ರೀತಿಯ ನಡವಳಿಕೆ,ಗುಬ್ಬಚ್ಚಿಗಳ ಗೂಡು ಅವಳ ಬದುಕನ್ನು ಸುಂದರಗೊಳಿಸತೊಡಗಿದವು. ಒಂದು ಬಾನುವಾರ ಮದ್ಯಾಹ್ನ ಅವನು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ. ಒಂದು ಉದ್ದನೆಯ ಬಿದಿರು ಕಡ್ಡಿಗೆ ಪೊರಕೆ ಕಟ್ಟಿ ಸೂರಿನ ಜೇಡರ ಬಲೆಯನ್ನು ತೆಗೆಯಹತ್ತಿದ. ಸ್ಟೋರಿಗೆ ಬಂದಾಗ ಆ ಗುಬ್ಬಚ್ಚಿ ಗೂಡು ಅವನ ಕಣ್ಣಿಗೆ ಬಿತ್ತು. ಮನೆಯೊಳಗಿದಗದ ಗೂಡು ಅವನಿಗೆ ಅಸಹ್ಯವಾಗಿಯೂ ಅಪಶಕುನವಾಗಿಯೂ ಕಂಡಿತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವಳು ತಡೆದಳು. ಆ ಗೂಡನ್ನು ಮುಟ್ಟದಂತೆ ಅವನನ್ನು ವಿನಂತಿಸಿದಳು. ಅದೇಕೋ ಅವನು ಅವಳ ಮಾತಿಗೆ ಕಿವಿಗೊಡದೆ ಗೂಡನ್ನು ಕೋಲಿನಿಂದ ತಳ್ಳಿದ. ತಳ್ಳಿದ ರಭಸಕ್ಕೆ ಗೂಡು ನೆಲಕ್ಕೆ ಬಿತ್ತು.ಅದರೊಳಗಿದ್ದ ಬಿಳಿಯ ಬಣ್ಣದ ಪುಟ್ಟಮೊಟ್ಟೆಗಳು ಒಡೆದು ಹೋದದ್ದನ್ನು ನೋಡಿದ ಅವಳು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವನ ಯಾವ ಸಮಾಧಾನವೂ ಅವಳನ್ನು ಸಣತೈಸಲಾಗಲಿಲ್ಲ.ವನು ಕಳಚಿ ಬಿದ್ದ ಗೂಡು ,ಒಡೆದ ಮೊಟ್ಟೆಗಳನ್ನು ಹೊರಗೆಸೆದು ಬಂದರೂ ಅವಳ ಳು ನಿಂತಿರಲಿಲ್ಲ.ಬೇಸಿಗೆಯ ಧಗೆಗೆ,ಅತ್ತ ಸುಸ್ತಿಗೆ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದಳು. ಅವಳನ್ನು ಎತ್ತಿಕೊಂಡುಹೋಗಿ ಹಾಸಿಗೆಯಲ್ಲಿ ಮಲಗಿಸಿ,ಮುಖಕ್ಕೆ ನೀರು ಚುಮುಕಿಸಿದ.ಪ್ರಜ್ಞೆ ಮರಳಿದ ಅವಳ ಕಣ್ಣುಗಳಲ್ಲಿದ್ದ ಭಾವನೆಗಳನ್ನು ಅವನಿಂದ ಓದಲಾಗಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಒಡೆದ ಮೊಟ್ಟೆಗಳ ಚಿತ್ರವನ್ನು ಮರೆಯಲಾಗಲಿಲ್ಲ. ಒಂದು,ಎರಡು,ಮೂರು..ಹೀಗೆ ದಿನಗಳು ಉರುಳುತ್ತ ಹೋದವು.ಅವಳಿಗ ಮಾತು ಕಡಿಮೆ ಮಾಡಿದ್ದಳು. ಅವನ ಪ್ರಶ್ನೆಗಳಿಗೆ ಮೌನವೊಂದೇ ಉತ್ತರವಾಗ ತೊಡಗಿತ್ತು. ಅವಳ ಶೂನ್ಯದತ್ತ ನೆಟ್ಟದೃಷ್ಠಿ, ಅನ್ಯಮನಸ್ಕತೆಯಿಂದಾಗಿ ಅವನ ಸಹನೆ ಹೆಚ್ಚುತ್ತ ಹೋಯಿತು. ಮನಸ್ಸು ಸ್ಥಿಮಿತದಲಿಟ್ಟುಕೊಳ್ಳಲು ಮತ್ತಷ್ಟು ಪೂಜೆ-ಪುನಸ್ಕಾರಗಳಲ್ಲಿ ಹೊತ್ತು ಕಳೆಯ ತೊಡಗಿದ. ಅವನ ಮೌನಕ್ಕೆ ಅವಳಮೌನವೂ ಸೇರಿ ಆ ಮನೆಯಲ್ಲಿ ಶಬ್ದಗಳು ಕಳೆದುಹೋದವು. ಹೀಗಾಗಲೆ ಅವಳಿಗೆ ನಾಲ್ಕು ತಿಂಗಳು ತುಂಬುತ್ತ ಬಂದಿತ್ತು.ಒಂದು ಸಂಜೆ ಅವನು ಆಫೀಸಿನಿಂದ ಬಂದಾಗವಳು ಸ್ಟೋರ್ ರೂಮಿನ ಬಾಗಿಲಲ್ಲಿ ಬಿದ್ದಿದ್ದಳು. ಅವಳನ್ನು ಎತ್ತಕೊಂಡು ಆಸ್ಪತ್ರೆಗೆ ಓಡಿ ಹೋದ. ಡಾಕ್ಟರ್ ಅವಳಗೆ ಗರ್ಭಪಾತವಾಗಿದೆ, ತಕ್ಷಣಕ್ಕೆ ಮತ್ತೆ ಗರ್ಬಿಣಿಯಾದರೆ ಅಪಾಯವಿದೆ ಹುಶಾರಾಗಿ ನೋಡಿಕೊಳ್ಳಿ ಅಂದರು. ಒಂದಷ್ಟು ದಿನಗಳ ಆಸ್ಪತ್ರೆಯ ವಾಸದ ನಂತರ ಮತ್ತೆ ಮನೆಗೆಬಂದವಳೆಷ್ಟು ಕಂಗೆಟ್ಟಿದ್ದಳೆಂದರೆ ಯಾವಾಗಲೂ ಸೂರು ನಿಟ್ಟಿಸುತ್ತ ಮಲಗಿರುತ್ತಿದ್ದಳು. ಕಣ್ಣು ಬಿಟ್ಟರೆ ಸಾಕು ಅವನು ಗೂಡು ಕಿತ್ತೆಸೆದಂತೆ,ಸಂಜೆ ಗೂಡು ಕಾಣದೆ ತಾರಾಡುತ್ತಿದ್ದ ಗುಬ್ಬಚ್ಚಿಗಳ ದೃಶ್ಯವೇ ಕಾಣುತ್ತಿತ್ತು. ಹಗಲು-ರಾತ್ರಿ ಬಾಗಿಲುಕಿಟಕಿಗಳನ್ನು ಹಾಕಿಕೊಂಡೇ ಮಲಗಿರುತ್ತಿದ್ದಳು. ರಾತ್ರ ಅವನು ದೀಪ ಹಾಕಿದರೆ ಅವಳದನ್ನು ಆರಿಸಿ ಮಾತಾಡದೆ ಮಲಗುತ್ತಿದ್ದಳು. ಅವಳೀಗ ಕತ್ತಲನ್ನು ಆರಿಸಿಕೊಂಡಿದ್ದಳು. ಅವಳ ಪರಿಸ್ಥಿತಿಯನ್ನು ಕಂಡು ಅವನು ದಿಗ್ಬ್ರ್ರಮೆಗೊಳಗಾಗಿದ್ದ. ವಳ ಈ ಸ್ಥಿತಿಗೆ ತಾನೇಕಾರಣವೇ ಎಂಬ ಪ್ರಶ್ನೆ ಅವನನ್ನ ಕಾಡತೊಡಗಿತು. ಪಾಪಪುಣ್ಯಗಳ ಭೀತಿಯಲ್ಲೇ ಬೆಳೆದವನಿಗೆ ತಾನು ಒಡೆದ ಮೊಟ್ಟೆಗಳಿಗೂ,ಅವಳ ಗರ್ಭಪಾತಕ್ಕೂ ಸಂಬಂದವಿರಬಹುದೆನಿಸಿ ಪಾಪಪ್ರಜ್ಞೆಯಲಿ ನರಳತೊಡಗಿದ. ಮಾತಾಡಲು ಪ್ರಾರಂಬಿಸಿದವನು ಮತ್ತೆ ಮೌನಿಯಾದ. ಆ ಪುಟ್ಟ ಮನೆಯೊಳಗೆ ಮಾತುಗಳಿಲ್ಲವಾಗಿ ವಿಷಾದದ ನೆರಳು ಆವರಿಸ ತೊಡಗಿತು. ಅವನೀಗ ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡುತ್ತಾನೆ. ಬೆಳಿಗ್ಗೆ ಅವಳಿಗೆ ತಿಂಡಿ ಕೊಟ್ಟು ಆಫೀಸಿಗೆ ಹೋಗುತ್ತಾನೆ. ಹೋಗುವ ಮುಂಚೆ ಸ್ಟೋರಿನ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತಾನೆ. ಸಂಜೆ ತಿರುಗಿ ಬಂದವನು ಅವಳಿಗೆ ತಿನ್ನಲು ಏನಾದರು ಕೊಟ್ಟು ಸ್ಟೋರ್ ರೂಮಿಗೆ ಹೋಗುತ್ತಾನೆ,ತಾನೇ ಕಿತ್ತು ಹಾಕಿದ ಗೂಡಿನ ವಾರಸುದಾರ ಗುಬ್ಬಚ್ಚಿಗಳ ಹಾದಿ ಕಾಯುತ್ತಾನೆ. ಪ್ರತಿನಿತ್ಯವೂ ಅವನು ಹಾಕಿಟ್ಟ ಅಕ್ಕಿ ಕಾಳುಗಳು ಹಾಗೆ ಬಿದ್ದಿವೆ.ಓ! ದೇವರೆ ,ಮತ್ತೆ ಆಗುಬ್ಬಚ್ಚಿಗಳು ಬರಲಿ, ಈ ಮನೆಯೊಳಗೆ ಗೂಡು ಕಟ್ಟಲಿ ಎಂದು ಪ್ರಾರ್ಥಿಸುತ್ತಾನೆ.ಆದರೆ, ತೆರೆದ ಕಿಟಕಿಗಳು ತೆರೆದೇ ಇವೆ! ******** ಕು.ಸ.ಮಧುಸೂದನ
ಕನಸು ಪ್ರೊ.ಸುಧಾ ಹುಚ್ಚಣ್ಣವರ ಕಾಣುವ ಕನಸುಗಳಿಗೆಲ್ಲಾದಾರಿ ತೋರಿದವರು ಯಾರೋ!ಬಂದೆ ಬಿಡುವವುನಮ್ಮ ಭಾವನೆಗಳ ಅರಸಿ. ಇತಿಮಿತಿಗಳ ಅರಿವಿಲ್ಲ ಸಾಗಿದಷ್ಟು ದೂರಬಹುದೂರ ಚಲಿಸುವವು ಪ್ರಯಾಸವಿಲ್ಲದ….ಪಯಣಿಗನಂತೆ. ಹೊತ್ತು ಸಾಗುವವು ಸುಂದರ ಅತಿ ಸುಂದರ…ಕಲ್ಪನೆಗಳ ಹೂರಣವ ಪರಿಮಿತಿಯೆ ಇರದ ಬಜಾರಿನಲ್ಲಿ . ಬಯಕೆಗಳ ಭಾರವ ಹಗುರಗೊಳಿಸಲೆ೦ದೆ….. ಕಲ್ಪನಾ ಲೋಕದಲ್ಲಿ ವಿಹರಿಸುತಿಹವು ಬಂಧನದಿ ಹೊರಬಂದ ಪಕ್ಷಿಗಳಂತೆ. ಕೆಲವೊಂದು ವಾಸ್ತವಕ್ಕೆ ಹತ್ತಿರವಾಗುತ್ತಾ ಮತ್ತೆ ಕೆಲವು ಭ್ರಮೆಯಲ್ಲಿಯೇ ಉಳಿದು ಭಾವನೆಗಳ ಅರಳಿಸಿ.. ಕೆರಳಿಸಿ.. ಕನಸಿನ ಸಾಮ್ರಾಜ್ಯಕ್ಕೆ ಅಧಿಪತಿಯಾಗಿಹವು. ********
ವಿರಹಾಂತರಂಗ ಸಂತೋಷಕುಮಾರ ಅತ್ತಿವೇರಿ ನಿನ್ನ ಕಾಣದೆ ಮಾತನಾಡದೆಕ್ಷಣವೇ ಯುಗವು ಅನುದಿನಕಡಲೇ ಇರದ ಬರಿಯ ಮರಳುಬೆಂಗಾಡು ಬದುಕು ಪ್ರತಿಕ್ಷಣ ಆಲಿಸುವ ದನಿಗಳಲೆಲ್ಲ ಬರಿನಿನದೆ ಸೊಲ್ಲಿನ ಹೊಳಲಿದೆಎಲ್ಲ ಲೋಹದ ಝಣಕೃತಿಯಲುನಿನದೆ ನೂಪುರ ದನಿಯಿದೆ ಕೊರಳ ಕಾರ್ಮೋಡ ಬಿಗಿದಿದೆಹೊತ್ತು ಕಂಬನಿಯಾಗರನಿನ್ನವಜ್ಞೆಯ ತಂಪು ತಾಗಿಹನಿಗೂಡಿತೆಂಬುದೆ ಬೇಸರ ಸುರಿದ ಮೇಲಿನ್ನೇನಿದೆಖಾಲಿ ಆಗಸ ಈ ಮನನಿನ್ನ ಪ್ರೀತಿಯ ಮಳೆಯಬಿಲ್ಲಿಗೆಕಾದು ಗುನುಗಿದೆ ತಾನನ ***********
ಒಳ ಮನಸು ವಿಸ್ತರಿಸಿದ ಕತೆಗಾರ್ತಿ
ಒಳ ಮನಸು ವಿಸ್ತರಿಸಿದ ಕತೆಗಾರ್ತಿ “ಬರವಣಿಗೆ ಮೂಲಕ ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ’ ಸುನಂದಾ ಕಡಮೆ ಕತೆಗಾರ್ತಿ ಸುನಂದಾ ಕಡಮೆ 1967 ರಲ್ಲಿ ಉತ್ತರಕನ್ನಡದ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಜನಿಸಿದ್ದು. ಪಕ್ಕದ ಭಾವಿಕೇರಿಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿಯ ನಂತರ ಕರ್ನಾಟಕ ವಿ.ವಿಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಕವಿ ಪ್ರಕಾಶ ಕಡಮೆಯವರೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಕಾವ್ಯಾ ಮತ್ತು ನವ್ಯಾ ಎಂಬಿಬ್ಬರು ಮಕ್ಕಳು. 1997ರಲ್ಲಿ ಬರವಣಿಗೆ ಆರಂಭಿಸಿದರು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಸುನಂದಕ್ಕ ಮೂಡಿಸಿದ್ದಾರೆ. ಪುಟ್ಟ ಪಾದದ ಗುರುತು (2005),ಗಾಂಧೀ ಚಿತ್ರದ ನೋಟು (2008), ಕಂಬಗಳ ಮರೆಯಲ್ಲಿ (2013), ತುದಿ ಮಡಚಿಟ್ಟ ಪುಟ(2016) ಇವರ ಕಥಾ ಸಂಕಲನಗಳು. ಬರೀ ಎರಡು ರೆಕ್ಕೆ ಕನರ್ಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಕಾದಂಬರಿಯೂ ಸೇರಿದಂತೆ 13 ಸೃಜನಾತ್ಮಕ ಕೃತಿಗಳು ಈಗಾಗಲೇ ಹೊರಬಂದಿವೆ. ಪ್ರಶಸ್ತಿಗಳು : ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಬಾಲ ವಿಕಾಸ ಅಕಾಡೆಮಿ ಬಹುಮಾನ, ಬೆಸಗರಹಳ್ಳಿ ರಾಮಣ್ಣ ಕಥಾ ಪುಸ್ತಕ ಪ್ರಶಸ್ತಿ, ಡಿ.ಎಸ್.ಕರ್ಕಿ ಕಾವ್ಯ ಬಹುಮಾನ, ಶಾಂತಾದೇವಿ ಕಣವಿ ಕಥಾ ಪುರಸ್ಕಾರ, ಮಲ್ಲಿಕಾ ಪ್ರಶಸ್ತಿ, ಗೌರಮ್ಮ ಹಾರ್ನಹಳ್ಳಿ ಪ್ರಶಸ್ತಿ, ಸುಧಾ ಮೂರ್ತಿ ಕಥಾ ಪ್ರಶಸ್ತಿ, ಹಾಗೂ ಎಂ.ಕೆ.ಇಂದಿರಾ ಪ್ರಶಸ್ತಿ, ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ಕಾವ್ಯ ಬಹುಮಾನ, ಅನುಪಮಾ ನಿರಂಜನ ಕಥಾ ಪ್ರಶಸ್ತಿ, ಸೇರಿದಂತೆ ಹದಿನೆಂಟು ಪುರಸ್ಕಾರಗಳು ಕಥಾ,ಕವಿತೆ ಪುಸ್ತಕಗಳಿಗೆ ಸಂದಿವೆ. ಬರೀ ಎರಡು ರೆಕ್ಕೆ’ ಕಾದಂಬರಿಯು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಎಂ.ಎ ಮೊದಲ ವರ್ಷಕ್ಕೆ ಪಠ್ಯಪುಸ್ತಕವಾಗಿದೆ. ಮಹಾರಾಷ್ಟ್ರ ಸೆಕೆಂಡರಿ ಬೋರ್ಡನ ಕನ್ನಡ ಹತ್ತನೇ ವರ್ಗಕ್ಕೆ ಇವರ ‘ಪುಟ್ಟ ಪಾದದ ಗುರುತು’ ಕತೆಯೊಂದು ಪಠ್ಯವಾಗಿದೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿ.ವಿ ಬಿ.ಎ ಮೊದಲ ಸೆಮಿಸ್ಟರ್ ಗೆ ಇವರ ‘ಸರಸ್ವತಿಯ ಫೆಸ್ಬುಕ್ ಪ್ರಸಂಗ’ ಕತೆಯು ಪಠ್ಯವಾಗಿದೆ. ಇವರ ಹಲವು ಕತೆ, ಲೇಖನ ಹಾಗೂ ಕವನಗಳು- ಕೊಂಕಣಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಉರ್ದು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿವೆ. ಹಲವು ಮಕ್ಕಳ ಕತೆಗಳನ್ನು ಇವರು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂದರ್ಶನ ಪ್ರಶ್ನೆ : ಕತೆ ಗಳನ್ನು ಯಾಕೆ ಬರೆಯುತ್ತೀರಿ ? ವರ್ಷಕ್ಕೊಮ್ಮೆಯಾದರೂ ಕಡಲಿನಲ್ಲಿ ಮಿಂದು ಬಂದರೆ ಯಾವುದೇ ಚರ್ಮದ ಖಾಯಿಲೆಗಳಿದ್ದರೂ ವಾಸಿಯಾರುತ್ತದೆ ಎಂಬ ನಂಬಿಕೆ ನಮ್ಮ ಕಡೆಯವರದು. ಅಂತೆಯೇ ನಮ್ಮ ಮನಸ್ಸಿನ ಹಲವು ಖಾಯಿಲೆಗಳಿಗೆ ಈ ಓದು ಹಾಗೂ ಬರೆವಣಿಗೆ ಒಂದು ಹಂತದಲ್ಲಿ ಔಷಧಿಯಂತೆ ಎರವಾಗುತ್ತಿದೆ ಎಂಬುದು ನನ್ನ ನಂಬಿಕೆ. ನನ್ನಿಂದ ಹುಟ್ಟಿದ ಆರಂಭಿಕ ಬರವಣಿಗೆಗಳು ಕೌಟುಂಬಿಕವಾಗಿ ನನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಮತ್ತು ಸಾಮಾಜಿಕವಾಗಿ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಮಾತ್ರ ಸೀಮಿತವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದೊಂದು ಅಪ್ಪಟ ಸಾಮಾಜಿಕ ಜವಾಬ್ದಾರಿಯೆಂದು ನನಗೆ ಮನವರಿಕೆಯಾಗುತ್ತ ಬಂತು. ಬರೆವಣಿಗೆ ಕೇವಲ ಮನರಂಜನೆಗಾಗಿ ಅಥವಾ ಮೈ ಮರೆಯುವದಕ್ಕಾಗಿ ಅಲ್ಲ, ಬರೆಹ ಒಂದು ಮನೋಧರ್ಮ. ಈ ವ್ಯವಸ್ಥೆ ನನಗೆ ಸುರುಳೀತ ಮಾತಾಡಲು ಬಿಡುತ್ತಿಲ್ಲ, ಹಾಗಾಗಿ ಬರೆವಣಿಗೆಯ ಮೂಲಕ ಆ ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ. ಈ ಕರಾಳ ವ್ಯವಸ್ಥೆಯ ಸಾಮಾಜಿಕ ಪರದೆಯ ಹಿಂದೆ ನಲುಗುತ್ತಿರುವ ಜೀವಿಗಳ ಚಿತ್ರಗಳನ್ನು ಎಳೆತಂದು ರಂಗಸ್ಥಳಕ್ಕೆ ಹಾಕುವುದಷ್ಟೇ ಸದ್ಯ ನನ್ನ ಕೈಯಲ್ಲಿ ಸಾಧ್ಯವಾಗುವ ಕೆಲಸ. ಆದರೆ ಜನಸಮುದಾಯದ ನಡುವೆ ಹೋಗಿ ನಿಂತು ಅವರ ಚಡಪಡಿಕೆ ಸಂಕಷ್ಟ ಆತಂಕಗಳಿಗೆ ಕಣ್ಣಾಗುವ ಕಿವಿಯಾಗುವ ಮಿಡಿಯುವ ಸಾಂತ್ವನದ ಮಡಿಲು ನೀಡುವ ಯಾವುದಾದರೂ ಸಹೃದಯಿ ಜೀವಿಯ ಮಾನವೀಯ ಮನಸ್ಸಿನ ಬದ್ಧತೆ ನಮ್ಮೆಲ್ಲ ಬರೆವಣಿಗೆಗಳಿಗಿಂತ ಬರಹಗಾರನಿಗಿಂತ ಮೀರಿದ ಒಂದು ಅನನ್ಯತೆ ಎಂಬ ಎಚ್ಚರದ ಸ್ಥಿತಿ ಕೂಡ ನನ್ನೊಳಗಿದೆ. ಪ್ರಶ್ನೆ : ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ಅನುದಿನವೂ ಸವೆದು ಸುಕ್ಕಾಗುವ ಮಾನವತೆಯ ಬಿಕರಿ, ಭಾವನೆಗಳ ವಿಕ್ರಯ, ಎಂಥದೋ ಬಿಕ್ಕಳಿಕೆ, ಯಾರದೋ ಚಿತ್ಕಾರಗಳು ಮನಸ್ಸಿನ ಮೂಲೆಯಲ್ಲೆಲ್ಲೋ ಅಡಗಿಕೊಂಡು ಇರಿಯುತ್ತಿರುತ್ತದೆ. ಆಗ ನಾನು ಏನು ಮಾಡಲೂ ತೋಚದ ಸಂದಿಗ್ಧತೆಯಲ್ಲಿ ಅಸಹಾಯಕಳಾಗಿ ನಿಂತು ಈ ಬರೆವಣಿಗೆ ಮುಂದುವರೆಸುತ್ತೇನೆ, ಇದು ನನಗೆ ಅನಿವಾರ್ಯದ ಪಯಣ. ಸಮಾಜದ ಆಗುಹೋಗುಗಳ ಕುರಿತು ಚಿಂತನೆ ಮತ್ತು ಮನುಷ್ಯ ಸಂಬಂಧಗಳ ಕುರಿತಾದ ಆರ್ದ್ರತೆ ಇಲ್ಲದೇ ಹೋದರೆ ಬರೆವಣಿಗೆ ಸಾಧ್ಯವಿಲ್ಲ. ಯಾವುದೇ ಕಲೆಗಳಲ್ಲಿ ತೊಡಗಿಕೊಳ್ಳುವುದು ಅಥವಾ ಸಮಾಜಸೇವೆ ಕೂಡ ಅಂಥ ಆರ್ದ್ರ ಮನಸ್ಸಿನ ಲಕ್ಷಣವೇ ಆಗಿದೆ. ನಮ್ಮ ಅನುಭವದಾಳದಲ್ಲಿ ತಳಮಳಿಸುತ್ತಿರುವ ಭಾವಗಳು ಹೊರಬರಲು ಒಂದು ಸಂದರ್ಭಕ್ಕಾಗಿ ಕಾಯುತ್ತಿರುತ್ತವೆ. ಇಲ್ಲವಾದರೆ ಬರೆಯಲು ಕೂತೊಡನೆ ಅವೆಲ್ಲ ಯಾಕೆ ಅಷ್ಟು ದರ್ದನಲ್ಲಿ ಹೊರಬರಬೇಕು? ಇಳಿಜಾರಿಗೆ ನೀರು ಯಾವ ಅಡೆತಡೆಯೂ ಇಲ್ಲದೇ ರಭಸದಲ್ಲಿ ಹರಿದಷ್ಟೇ ಸಹಜ ಕ್ರಿಯೆ ಅದು. ಮೇಲಿನಿಂದ ನೀರು ಇನ್ನೂ ಹರಿದು ಬರುತ್ತಲೇ ಇದ್ದರೆ ಅದು ತಾನೇ ತನ್ನ ಅವಕಾಶವನ್ನು ಹಿಗ್ಗಿಸಿಕೊಳ್ಳುತ್ತ ಬೆಳೆಯುತ್ತದೆ ಕಾದಂಬರಿಯೊಂದು ಹೀಗೆ ರೂಪುಗೊಳ್ಳುತ್ತದೆ ಅಂದುಕೊಂಡಿರುವೆ. ಪ್ರಶ್ನೆ: ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಸ್ತ್ರೀಯಾಗಿರುವದಕ್ಕೆ ಮೊದಲು ಕಾಡುವುದು ಸ್ತ್ರೀ ಸಂವೇದನೆಯ ಸಂಗತಿಗಳೇ. ಮೊದಲೆಲ್ಲ ಕೌಟುಂಬಿಕ ನೆಲೆಯಲ್ಲೇ ಏನಾದರೂ ಆಳವಾದದ್ದನ್ನು ಹೇಳಬೇಕು ಅಂದುಕೊಳ್ಳುತ್ತಿದ್ದೆ. ಕೌಟುಂಬಿಕತೆಯನ್ನೇ ಪ್ರಧಾನವಾಗಿರುವ ಕತೆಗಳು, ಆಪ್ತವಾದ ಗ್ರಹಿಣೀಗೀತ ಅಂತೆಲ್ಲ ಕೆಲವು ವಿಮರ್ಶೆಗಳು ಬಂದವು, ಆ ಮಾದರಿಯನ್ನು ಮುರಿಯಬೇಕು ಅಂತಲೇ ಆನಂತರದ ಕತೆಗಳನ್ನು ಮುದ್ದಾಮಾಗಿ ಹೊರಜಗತ್ತಿನಲ್ಲೇ ನಡೆಯುವಂತೆ ಕಟ್ಟತೊಡಗಿದೆ. ನನ್ನನ್ನು ಸದಾ ಕಾಡುವ ವಿಷಯವೆಂದರೆ ಮುದ್ದು ಬಾಲಕಿಯರ ಮೇಲೆ ಹೃದಯವಿದ್ರಾವಕವಾಗಿ ನಡೆವ ಅತ್ಯಾಚಾರ ಪ್ರಕರಣಗಳು. ಬರೀ ಕಾನೂನಿನಿಂದ ಇದರ ಸಂಪೂರ್ಣ ಪರಿಹಾರ ಸಾಧ್ಯವಿಲ್ಲ, ಅದಕ್ಕೆ ತುತ್ತಾಗುವವರಿಗೆ ಅರಿವು ಮೂಡಿಸುವದರ ಜೊತೆಗೆ, ಅದನ್ನು ಎಸಗುವವರ ಮನಸ್ಥಿತಿಗಳನ್ನು ತಿದ್ದುವುದು ಹೇಗೆ ಎಂಬ ಕುರಿತು ನಾವಿಂದು ಯೋಚಿಸಬೇಕಾಗಿದೆ. ಅವರವರ ಸ್ವತಂತ್ರ ಅವರವರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಭಿನ್ನ ಭಿನ್ನವಾಗಿರುವುದು ಪ್ರಕೃತಿ ಧರ್ಮವನ್ನು ಬಾಲ್ಯದಲ್ಲೇ ಬಾಲಕರಿಗೂ ಮನದಟ್ಟುಮಾಡಿಕೊಡಬೇಕಿದೆ. ಹೀಗೇ ಕಾಡುವ ಇನ್ನೊಂದು ಪ್ರಕರಣವೆಂದರೆ, ನಮ್ಮ ಹುಬ್ಬಳ್ಳಿಯಲ್ಲಿ ಎಸ್ಸೆಸೆಲ್ಸಿ ಹಾಗೂ ಪಿಯೂಸಿ ವಾರ್ಷಿಕ ಪರೀಕ್ಷೆಯ ರಿಸಲ್ಟ್ ಹೊರಬೀಳುವ ದಿನ ನಗರದ ಎಲ್ಲ ಕೆರೆ ಬಾವಿಗಳಿಗೆ ಪೊಲೀಸ್ ಕಾವಲು ಹಾಕುತ್ತಾರೆ! ಅಂದರೆ ನಾವು ನಮ್ಮ ಮಕ್ಕಳ ಸುಮಧುರ ಬಾಲ್ಯವನ್ನು ಯಾವ ದಾರುಣತೆಗೆ ಒಯ್ದು ನಿಲ್ಲಿಸಿದ್ದೇವೆ ? ನಮ್ಮ ಪಾಲಕರ ಶಿಕ್ಷಕರ ಒಟ್ಟಾರೆ ಸಾಮಾಜಿಕ ಮನಸ್ಥಿತಿಗಳು ಎಲ್ಲಿಗೆ ಹೋಗಿ ತಲುಪಿವೆ? ಅಥವಾ ಇದು ಇಂದಿನ ಶಿಕ್ಷಣ ಪದ್ದತಿಯ ಲೋಪವೋ? ಈ ಕಾರಣಕ್ಕಾಗಿ ಇತ್ತೀಚೆಗೆ ನಮ್ಮ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಶಾಲಾ-ಕಾಲೇಜು ಮಕ್ಕಳಿಗೆ ‘ಅರಿವಿನ ಪಯಣ’ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಮಾಜದಲ್ಲಿರುವ ಅನೇಕ ತಾರತಮ್ಯ ಹಾಗೂ ಅಸಮಾನತೆಗಳೇ ಈ ಎರಡು ಸಮಸ್ಯೆಗಳ ಮೂಲ ಬೇರಾಗಿರುವದರಿಂದ, ಆ ಕುರಿತು ಮಕ್ಕಳಲ್ಲಿ ಕಿಂಚಿತ್ತಾದರೂ ಅರಿವಿನ ಬೆಳಕನ್ನು ಮೂಡಿಸುವದು ನಮ್ಮ ಅರಿವಿನ ಪಯಣದ ಉದ್ದೇಶ. ಪ್ರಶ್ನೆ : ಕತೆ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಬಾಲ್ಯದ ಅನುಭವಗಳು ನನ್ನ ಬಹದೊಡ್ಡ ಆಸ್ತಿ. ಕಾಲೇಜು ದಿನಗಳು ಹಾಗೂ ಮದುವೆಯಾದ ನಂತರದ ದಿನಗಳೂ ಆಯಾ ಕಾಲಕ್ಕೆ ಆಯಾ ಸಂದರ್ಭದಲ್ಲಿ ಕತೆಯ ಹೂರಣಕ್ಕೆ ಅಗತ್ಯವಿದ್ದರೆ ಅವುಗಳು ನನಗೆ ಗೊತ್ತಾಗದೇ ನುಸುಳುತ್ತವೆ. ಎಷ್ಟೆಂದರೂ ನಮ್ಮ ಕತೆಯ ವಿವರಗಳು ನಮ್ಮ ನಮ್ಮ ಅನುಭವ ಲೋಕದ ಗಾಣದಿಂದಲೇ ಕಟ್ಟಿಕೊಳ್ಳಬೇಕಲ್ಲವೇ, ಕಥನ ಕ್ರಿಯೆಯಲ್ಲಿ ಬರಿಯ ನೋಡಿದ ಕೇಳಿದ ವಿಷಯಗಳೇ ವಿವರಗಳಾಗಿ ಒಡಮೂಡಿದರೆ ಕತೆಯ ಹಂದರವು ಶುಷ್ಕವಾಗಿಬಿಡುವ ಅಪಾಯವಿದೆ. ವಿಶೇಷವಾಗಿ ಕತೆ ಕಾದಂಬರಿಗಳಲ್ಲಂತೂ ಯಾವುದೇ ವಸ್ತುವಿನ ಅಸ್ತಿಪಂಜರಕ್ಕೆ ರಕ್ತ ಮಾಂಸ ತುಂಬಲು ಬಾಲ್ಯ ಮತ್ತು ಹರೆಯದ ಅನುಭವಲೋಕವೇ ಮುಖ್ಯ ಅನಿಸುತ್ತದೆ. ಅದರ ಉಸಿರು ಮತ್ತು ಆತ್ಮ ನಿಸ್ಸಂಶಯವಾಗಿ ಮಾನವತೆಯೇ. ಉದಾಹರಣೆಗೆ ಭೂಮಿಯ ಪಸೆ ಬತ್ತದಿರಲು ಇಂಗು ಗುಂಡಿಗಳು ಅವಶ್ಯಕವಾಗಿರುವಂತೆಯೇ ಸಮಾಜದಲ್ಲಿ ಮಾನವೀಯತೆಯೆಂಬ ಪಸೆ ಬತ್ತದಿರಲು ಸಾಹಿತ್ಯ ಅಗತ್ಯ. ಮೂಲ ತಳಪಾಯವನ್ನು ಮಾನವೀಯಗೊಳಿಸುವದು, ನಮ್ಮ ಬರೆವಣಿಗೆಗಳೆಲ್ಲ ನಮ್ಮ ನಮ್ಮ ಮನೆಯ ಸಣ್ಣ ಸಣ್ಣ ಇಂಗು ಗುಂಡಿಗಳೇ. ನಮ್ಮ ಛಾವಣಿಗೆ ಬಿದ್ದ ಮಳೆಯ ನೀರು ಇಂಗುಗುಂಡಿಯಲ್ಲಿಳಿದು ಸಾಹಿತ್ಯದ ಒರತೆಗೆ ಹನಿ ನೀರು ಸೇರಿಕೊಂಡಂತೆ, ಇಡೀ ಭೂಮಿಯನ್ನು ತಂಪಾಗಿಡಲು ಒಂದೇ ಮನೆಯ ಛಾವಣಿಯ ನೀರು ಸಾಕಾಗದು. ಹಾಗೆ ಜಗತ್ತಿನಾದ್ಯಂತ ಅಸಂಖ್ಯ ಬರಹಗಾರರು ಬರೆಯುತ್ತಿದ್ದೇವೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ದೇಶ ಆಳುವ ರಾಜಕಾರಣಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಮಾಜ ಸೇವಕರು ಇವರುಗಳೆಲ್ಲ ಮೂಲತಃ ಸಮಾಜವಾದಿ ಮನಸ್ಥಿತಿಯವರಾಗಿರಬೇಕು ಎಂದು ವಿದ್ವಾಂಸ ಡಾ. ಗೌರೀಶ ಕಾಯ್ಕಿಣಿಯವರು ಹೇಳುತ್ತಿದ್ದರು. ಅಂತೆಯೇ ಸಮಾಜವಾದಿ ನಿಲುವಿನಿಂದ ಆಡಳಿತ ಮಾಡುವ ಮನಸ್ಸಿರುವ ಯಾವ ಆಡಳಿತ ಪಕ್ಷವಾದರೂ ಸೂಕ್ತವೇ. ಆದರೆ ಇಂದು ರಾಜಕೀಯಕ್ಕೆ ಸೇರುವುದೇ ಹಣ ಮಾಡಲು ಎಂಬಂತಾದ ಸ್ವಾರ್ಥ ರಾಜಕಾರಣಿಗಳಿಂದ ದೇಶದ ಉದ್ದಾರ ಹೇಗೆ ಬಯಸುವುದು? ಈಗಂತೂ ಮಠಾದೀಶರು, ಬಂಡವಾಳಶಾಹಿಗಳೇ ದೇಶವನ್ನು ಆಳುತ್ತಿದ್ದಾರೋ ಅನಿಸುತ್ತಿದೆ. ಲಾಲಬಹಾದ್ದೂರ ಶಾಸ್ತ್ರಿ, ಅಬ್ದುಲ ಕಲಾಂ ನಂಥವರ ಅಗತ್ಯ ಇಂದು ದೇಶವನ್ನು ಆತ್ಯಂತಿಕವಾಗಿ ಕಾಡುತ್ತಿದೆ. ಯಾವುದೇ ಪ್ರಚಾರದ ಗೀಳಿಲ್ಲದೇ ನಿಸ್ವಾರ್ಥ ಸೇವೆಗೆ ಬದ್ಧರಾಗಿರುವ ಒಂದು ಗುಂಪು ರೂಪುಗೊಳ್ಳಬೇಕಾಗಿದೆ. ಯಾವುದೇ ಸಂದರ್ಭದಲ್ಲೂ ದೇಶಕ್ಕಾಗಿ ಮಣಿಯುವ ಮನಸ್ಸುಗಳು ಇಂದಿನ ರಾಜಕೀಯದಲ್ಲಿ ಒಟ್ಟಾಗುವ ಅಗತ್ಯವಿದೆ, ಪ್ರಶ್ನೆ : ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಧರ್ಮ ಸಂಪ್ರದಾಯ ಸಮಸ್ಕೃತಿಯ ಕುರಿತು ನಂಬಿಕೆ ಇದ್ದವರು ಅವರವರ ಮನೆಯಲ್ಲಿ ವೈಯಕ್ತಿಕವಾಗಿ ಆಚರಿಸಿದರೆ ಯಾವ ಅಪಾಯವೂ ಇಲ್ಲ. ಧರ್ಮ ಬೀದಿಗೆ ಬಂದರೆ ತುಂಬ ಕಷ್ಟ. ಇನ್ನೊಬ್ಬ ಜೀವಿಯನ್ನು ಕೊಂದು ನೀನು ಬದುಕು ಅಂತ ಯಾವ ಧರ್ಮದಲ್ಲೂ ಹೇಳಿಲ್ಲ. ಮಾನವೀಯತೆಗಿಂತ ಮಿಗಿಲಾದ ಧರ್ಮ ಯಾವುದಿದೆ? ಭಕ್ತಿಯೂ ಒಂದು ಗುಲಾಮಗಿರಿಯ ಲಕ್ಷಣವೇ ಎಂಬ ಅರಿವಿದ್ದವರಿಗೆ ದೇವರ ಅಸ್ತಿತ್ವವನ್ನು ನಂಬುವುದು ಬಹಳ ಕಷ್ಟ. ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲ ಜಾತಿ ಧರ್ಮದ ಜನವೂ ಸಮತೆಯಿಂದ ಬದುಕುತ್ತ ಬಂದ ಬಹುದೊಡ್ಡ ಪರಂಪರೆಯಿದೆ. ‘ನಮ್ಮ ಮಾನಸಿಕ ಒತ್ತಡವನ್ನು ಹೊರಲು ಯಾರಾದರೊಬ್ಬರು ಬೇಕು ಅನ್ನಿಸಿದರೆ ಅದು ದೇವರೇ ಯಾಕಾಗಬಾರದು? ದೇವರಿಲ್ಲ ಎಂಬ ನಂಬಿಕೆಯಿದ್ದರೆ ದೇವರನ್ನು ನಿರ್ಮಿಸಿಕೊಳ್ಳಬೇಕು, ಚಹ ಕಾಫಿ ಮಾಡಿಕೊಂಡ ಹಾಗೆಯೇ ದೇವರನ್ನೂ ಮಾಡಿಕೊಳ್ಳಬೇಕು’ ಎಂದಿದ್ದರಂತೆ ಮಾಸ್ತಿ. ದೇವರು ದಿಂಡಿರನ್ನೂ ಅಷ್ಟೇ ನಮ್ಮ ನಮ್ಮ ಮನೆಯ ದೇವರ ಕೋಣೆಯಲ್ಲಷ್ಟೇ ಬೀಗ ಹಾಕಿಟ್ಟರೆ ಚೆನ್ನ. ನಾನು ದೇವರನ್ನು ನಂಬದೇ ಇದ್ದರೂ ಪ್ರತೀ ಕತೆ ಬರೆಯುವಾಗಲೂ ಏಕಾಗ್ರತೆಗಾಗಿ ನನಗೆ ಕೊಂಚ ಧ್ಯಾನದ ಅಗತ್ಯವಿದೆ ಅನಿಸುತ್ತಿದೆ. ಏನೆಂದರೆ ಏನೂ ಹೊಳೆಯದೇ ಇದ್ದ ಸಂದರ್ಭದಲ್ಲಿ ಹದಿನೈದು ನಿಮಿಷಗಳ ಕಾಲ ಮಾಡುವ ಧ್ಯಾನದಲ್ಲಿ ನನಗೆ ಏನಾದರೂ ಒಂದು ಹೊಳೆದುಬಿಟ್ಟಿದ್ದಿದೆ. ಹಾಗಾಗಿ ಧ್ಯಾನವನ್ನು ನಾನು ನಂಬುತ್ತೇನೆ, ನನಗೆ ಧ್ಯಾನವೇ ದೇವರು. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ ? ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಇಡಿಯಾಗಿ ವಾಟ್ಸ್ಆಪ್ , ಫೇಸ್ಬುಕ್ಗಳನ್ನೇ ಅವಲಂಬಿಸಿದೆ. ಎಲ್ಲರಿಗೂ ಎಲ್ಲ ವಿಷಯಗಳೂ ಬಹುಬೇಗ ಸುಲಭದಲ್ಲಿ ತಲುಪಿ ಹೊಸ ಮಾದರಿಯ ಯುವ ತಲೆಮಾರು ಸೃಷ್ಟಿಯಾಗಿದೆ. ಟೀವಿ ಮಾಧ್ಯಮಗಳಂತೂ ಕೃತಕತೆ ಹಾಗೂ ಸುಳ್ಳುಗಳನ್ನೇ ವಿಜೃಂಭಿಸುತ್ತಿವೆ. ಆ ಮೂಲಕ ಜನರಲ್ಲಿ ಮೌಢ್ಯಗಳನ್ನೂ ವ್ಯವಸ್ಥಿತವಾಗಿ ಹಂಚಲಾಗುತ್ತಿದೆ. ಸಂಸ್ಕೃತಿಯ ಹೆಸರಲ್ಲಿ ಎಲ್ಲ ಜಾತಿ ಧರ್ಮದವರೂ ಸೇರಿ ಆಚರಿಸುವ ಸಾಹಿತ್ಯ
ಒಳ ಮನಸು ವಿಸ್ತರಿಸಿದ ಕತೆಗಾರ್ತಿ Read Post »
ದಿಕ್ಸೂಚಿ
ಯೋಜನೆಯ ಮೇಲೆ ದೃಷ್ಟಿ ಇರಿಸಿ ದೊಡ್ಡ ಗೆಲುವು ಸಾಧಿಸಿ ಜಯಶ್ರೀ ಜೆ.ಅಬ್ಬಿಗೇರಿ ಇದೀಗ ನಾ ಹೇಳ ಹೊರಟಿರುವುದು ಜಗತ್ಪ್ರಸಿದ್ಧ ತೇನ್ ಸಿಂಗನ ಕಥೆ ಆಗ ಆತ ಇನ್ನೂ ಚಿಕ್ಕವ. ಮನೆಯಂಗಳದಲ್ಲಿ ಕುಳಿತು ಸದಾ ಎವರೆಸ್ಟನ್ನೇ ದಿಟ್ಟಿಸುತ್ತಿದ್ದ. ಪುಟ್ಟ ಬಾಲಕನನ್ನು ಎವರೆಸ್ಟ್ ಪ್ರತಿದಿನವೂ ಪುಳಕಗೊಳಿಸುತ್ತಿತ್ತು. ಆತನನ್ನು ಕಂಡ ತಾಯಿ’ಅದೇಕೋ ದಿನವೂ ಎವರೆಷ್ಟನ್ನೇ ದಿಟ್ಟಿಸಿ ನೋಡುತ್ತಿಯಾ?’ ಎಂದು ಕೇಳಿದಳು.’ಅಮ್ಮಾ ಈ ನನ್ನ ಪುಟ್ಟ ಕಾಲುಗಳಿಂದ ಆ ದೊಡ್ಡ ಹಿಮಪರ್ವತದ ತುದಿಯನ್ನು ಮುಟ್ಟಬಲ್ಲೆನೆ? ಎಂದು ಯೋಚಿಸುತ್ತಿದ್ದೇನೆ.’ ಅದಕ್ಕೆ ತಾಯಿ ‘ಮಗೂ,ಅದು ಯಾವ ಹಕ್ಕಿಯೂ ಹಾರಲಾರದಷ್ಟು ಎತ್ತರದ ಶಿಖರ ಆದರೆ ನೀನು ಮನಸ್ಸು ಮಾಡಿದರೆ ಅದರ ತುತ್ತ ತುದಿಯನ್ನು ಮುಟ್ಟಬಲ್ಲೆ.’ಎಂದಳು. ತಾಯಿಯ ಸ್ಪೂರ್ತಿಯ ಮಾತಿಗೆ ತೇನ್ ಸಿಂಗ್ ಹಿಮಾಲಯದ ನೆತ್ತಿಯ ಮೇಲೆ ನಿಂತು ನಗು ಚೆಲ್ಲಿದ್ದು ಈಗ ಇತಿಹಾಸ. ಕೆಲಸಕ್ಕೆ ಅಡೆ ತಡೆ: ಈ ಮೇಲಿನ ನಿಜ ಜೀವನದ ಕಥೆ ಯೋಜನೆಗೆ ಪೂರಕವಾದ ಯಶಸ್ಸಿಗೆ ಹಿಡಿದ ಕನ್ನಡಿ. ಯೋಜನೆ ಇಲ್ಲದೇ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಧಾವಂತದ ಕಾಯಿಲೆ . ‘ದಿನಾಲೂ ಅಂದು ಕೊಳ್ತಿನಿ ಇವತ್ತು ಆ ಕೆಲಸ ಮಾಡಬೇಕು, ಈ ಕೆಲಸ ಮಾಡಿಯೇ ಬಿಡಬೇಕು ಅಂತ ಹೀಗೇ ಎಷ್ಟೋ ದಿನಗಳಿಂದ ನೆನೆಗುದ್ದಿಗೆ ಬಿದ್ದ ಕೆಲಸಗಳ ಬುಟ್ಟಿ ಮನದ ಮೂಲೆಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುತ್ತೆ ಅದು ವಿಲೇವಾರಿಯಾಗುವ ಸಾಧ್ಯತೆ ಕಮ್ಮಿ. ವಿಪರ್ಯಾಸವೆಂಬಂತೆ ದಿನದಿಂದ ದಿನಕ್ಕೆ ಇನ್ನೂ ಹೆಚ್ಚುತ್ತಲೇ ಹೋಗುತ್ತದೆ ಹೊರತು ಕಡಿಮೆ ಆಗುವುದಿಲ್ಲ. ಇದೇಕೆ ಹೀಗಾಗುತ್ತಿದೆ ಎಂದು ವಿಚಾರ ಮಾಡಲು ಒಂದು ಕ್ಷಣವನ್ನು ವ್ಯಯಿಸಲೂ ಪುರುಸೊತ್ತಿಲ್ಲ. ಅಷ್ಟು ಕೆಲಸಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದೇವೆಯೇ? ಛೇ! ಇಲ್ಲವೇ ಇಲ್ಲ ರಾತ್ರಿ ಮಲಗುವ ಮುನ್ನ ಉಪಯುಕ್ತ ಕೆಲಸಗಳ ಪಟ್ಟಿ ಮಾಡಿದರೆ ದಿನಕ್ಕೊಂದೆರಡು ಮಾಡಿದ್ದರೆ ಅದು ಜಾಸ್ತಿನೇ ಅಂದುಕೊಂಡು ನಮಗೆ ನಾವೇ ಬೆನ್ನು ಚಪ್ಪರಿಸಿಕೊಳ್ಳಬೇಕು. ಆ ರೀತಿ ಕೆಲಸದ ಪ್ರೀತಿ. ಕೆಲಸದ ಪ್ರೀತಿ ಕಡಿಮೆ ಇದೆ ಅಂತೇನಿಲ್ಲ. ಮಾಡುವ ಕೆಲಸಗಳಿಗೆ ಅಡೆ ತಡೆ ಬಹಳ ಆಗುತ್ತಿವೆ ಅನ್ನೋದು ಕುಳಿತು ವಿಚಾರ ಮಾಡಿದಾಗ ತಿಳಿಯೋ ವಿಷಯ.’ ಮನೆ ಕಟ್ಟೋಕೆ ಯೋಜನೆ; ಹಾಗಿದ್ರೆ ದಿನದ ಬಹು ಸಮಯ ಅನುಪಯುಕ್ತ ಕೆಲಸಗಳಲ್ಲಿ ಜಾರಿ ಹೋಗುತ್ತಿದೆ ಅಂದಂಗಾಯ್ತು ಅಲ್ಲವೇ? ಯಾವ ಸಂಪತ್ತು ಕೊಟ್ಟರೂ ಮರಳಿ ಸಿಗದ ಅಮೂಲ್ಯ ಸಮಯ ಸಂಪತ್ತನ್ನು ಕಳೆದುಕೊಳ್ಳುವುದು ಮನಸ್ಸಿಗೆ ತಿಳಿಯುತ್ತಿದ್ದರೂ ಅದಕ್ಕೆ ಏನೂ ಕ್ರಮಗಳನ್ನು ತೆಗೆದುಕೊಳ್ಳದೇ ಅಸಹಾಯಕರಂತೆ ಕೈ ಕಟ್ಟಿ ಕುಳಿತಿರಲು ಕಾರಣವೇನು? ಎಂಬ ಪ್ರಶ್ನೆ ನಮ್ಮ ಮುಖಕ್ಕೆ ಮುಖ ಕೊಟ್ಟು ನಿಂತರೆ ನಿರುತ್ತರರಾಗುತ್ತೇವೆ. ಕೆಲವು ಬಾರಿ ಯೋಜನೆ ಹಾಕಿಕೊಂಡರೆ ಸರಿ ಹೋಗಬಹುದು ಎನ್ನುವ ಯೋಚನೆಯೂ ಹೊಳೆಯುತ್ತದೆ. ಆದರೆ ಮನೆ ಕಟ್ಟೋಕೆ ದೊಡ್ಡ ದೊಡ್ಡ ಭವನಗಳನ್ನು ಮತ್ತು ಆಣೆಕಟ್ಟು ಕಟ್ಟೋಕೆ ಮಾತ್ರ ಯೋಜನೆ ಬೇಕು ಎನ್ನುವುದು ಬಹಳಷ್ಟು ಜನರ ತಲೆಯಲ್ಲಿ ಬೇರೂರಿದ ನಂಬಿಕೆ. ಹೀಗಾಗಿ ಯೋಜನೆ ಇಲ್ಲದ ಬದುಕು ಮರಳುಗಾಡಿನ ಮರಳಿನಂತೆ ಬಿದ್ದಲ್ಲೇ ಬಿದ್ದು ಹೋಗುತ್ತದೆ. ಆರಕ್ಕೇರುವುದಿಲ್ಲ ಮೂರಕ್ಕಿಳಿಯುವುದಿಲ್ಲ. ಯೋಜನೆಗಳಿಲ್ಲದ ಬದುಕು ಗಾಳಿಗಿಟ್ಟ ದೀಪದಂತೆ ಅಲ್ಲಾಡುತ್ತಲೇ ಇರುತ್ತದೆ. ಬದುಕಿಗೆ ಭದ್ರ ಬುನಾದಿ ಹಾಕುವುದೇ ಯೋಜನೆ. ಹಾಗಾದರೆ ಅಚ್ಚು ಕಟ್ಟಾದ ಕಾರ್ಯ ನಿರ್ವಹಣೆಗೆ, ಗೆಲುವಿಗೆ ಯೋಜನೆ ಅದೆಷ್ಟು ಮುಖ್ಯ ಅದನ್ನು ಅನುಷ್ಠಾನಕ್ಕೆ ತರುವುದು ಹೇಗೆ ಎಂಬುದನ್ನು ತಿಳಿಯಬೇಕೆ? ಹಾಗಿದ್ದರೆ ಮುಂದಕ್ಕೆ ಓದಿ. ಯೋಜನೆ ಎಂದರೆ. . . .? ಯೋಜನೆಯ ಅಂತರ್ಗತ ಪ್ರಯೋಜನೆಗಳನ್ನು ಉತ್ತಮವಾಗಿ ವಿವರಿಸುವ ಹಳೆಯ ಮಾತೊಂದಿದೆ. ಅದು ‘ನೀವು ಯೋಜಿಸಲು ವಿಫಲರಾದರೆ, ನೀವು ವಿಫಲರಾಗಲು ಯೋಜಿಸುತ್ತೀರಿ.’ ಎಷ್ಟು ಮಾರ್ಮಿಕ ನುಡಿಯಲ್ಲವೇ? ಬದುಕಿನ ಚಂಡಮಾರುತಗಳಿಂದ ಪ್ರವಾಹಗಳಿಂದ ರಕ್ಷಿಸಲು ಯೋಜನೆಯೊಂದು ವಿಮೆಯಿದ್ದಂತೆ. ಭದ್ರತಾ ವ್ಯವಸ್ಥೆ ಸ್ಥಾಪಿಸಿದಂತೆ. ನಿತ್ಯದ ಜೀವನ ಮನಸೋ ಇಚ್ಛೆ ಬಾಲಂಗೋಚಿಯಿಲ್ಲದ ಗಾಳಿ ಪಟದಂತೆ ಹಾರಾಡುತ್ತಿದ್ದರೆ ಭವಿಷ್ಯವು ಸುರಕ್ಷಿತವಾಗಿರಲಾರದು ಎಂದು ಹೇಳಲು ಬ್ರಹ್ಮವಿದ್ಯೆ ಏನೂ ಬೇಕಿಲ್ಲ. ಆದರೆ ಯೋಜಿಸುವುದನ್ನು ಪರಿಗಣಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವವರ ಮತ್ತು ಉಪೇಕ್ಷಿಸುವವರ ಸಾಲೇ ದೊಡ್ಡದಾಗಿದೆ. ಇದು ಸಮಯ ತೆಗೆದು ಕೊಳ್ಳುವ ಪ್ರಕ್ರಿಯೆಯಂತೆ ತೋರುತ್ತದೆಯಾದರೂ ಅನುಕ್ರಮ ಯೋಜನೆ ಬದುಕಿಗೆ ಪ್ರಯೋಜನಕಾರಿಯಂತೂ ಸತ್ಯ ಎಂಬುದು ಈಗಾಗಲೇ ಸಾಬೀತಾದ ಸಂಗತಿ. ಇರಲಿ ಕೆಲಸದ ಪಟ್ಟಿ ಮಾಡುವ ಕೆಲಸದ ಪಟ್ಟಿಯನ್ನು ಯೋಜಿಸಿಕೊಂಡು ಕೆಲಸ ಮಾಡಲು ನಿರ್ಧರಿಸಿದರೆ ಎಲ್ಲ ಕೆಲಸವೂ ಹೂವಿನಷ್ಟು ಹಗುರವೆನಿಸುತ್ತವೆ. ಮತ್ತೆ ಹೊಸ ಕೆಲಸಗಳಿಗೂ ಕೈ ಹಾಕುವಷ್ಟು ಸಮಯ ಕೈಯಲ್ಲಿ ಉಳಿಯುತ್ತದೆ. ವರ್ಕಟೈಂ ಎನ್ನುವ ಟ್ರ್ಯಾಕಿಂಗ್ ಸಾಫ್ಟವೇರ್ ನೀವು ಮಾಡುವ ಕೆಲಸಗಳಿಗೆ ಸರಿಯಾದ ಸಮಯವನ್ನು ನಿಗದಿಗೊಳಿಸಿ ಹೇಳುತ್ತದೆ. ಕೆಲಸ ಮುಗಿದ ನಂತರ ನೀವು ನಿಗದಿತ ಸಮಯದಲ್ಲಿ ಮುಗಿಸಿದ್ದಿರೋ ಅಥವಾ ತುಂಬಾ ಹೆಚ್ಚು ಸಮಯ ತೆಗೆದುಕೊಂಡಿದ್ದಿರೋ ಎನ್ನುವುದನ್ನು ವಿಶ್ಲೇಸಿಸುತ್ತದೆ. ಇದು ಕಾರ್ಯ ಉತ್ಪಾದಕತೆ ಮತ್ತು ಆರೋಗ್ಯಕ್ಕೂ ಸಹಕಾರಿ. ನಿಮ್ಮ ಸಂಪೂರ್ಣ ಕಾರ್ಯ ಪ್ರಕ್ರಿಯೆಯನ್ನು ನೀವು ಕಾರ್ಯ ಮಾಡುವ ವಿಧಾನಕ್ಕೆ ಅದು ಕನ್ನಡಿ ಹಿಡಿಯುತ್ತದೆ. ಇರಲಿ ಆದ್ಯತೆಯ ಪಟ್ಟಿ: ತಲುಪಬೇಕಾದ ಗುರಿಯ ಯೋಜನೆಯು ನಿತ್ಯ ಸ್ವಲ್ಪ ಸ್ವಲ್ಪ ತುಂಡರಿಸಿ ನಿರ್ವಹಿಸುತ್ತ ಹೋದರೆ ಒಂದು ದಿನ ಗಮ್ಯವನ್ನು ತಲುಪಲು ಸಾಧ್ಯ. ಮಾಡಬೇಕಾದ ಕೆಲಸಗಳನ್ನು ಆದ್ಯತೆಯ ಮೇಲೆ ಪಟ್ಟಿ ಮಾಡಿ.ಆಗ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಷ್ಟೇ ಅಲ್ಲ ಎಲ್ಲವನ್ನೂ ನೆನಪಿಡುವ ಅವಶ್ಯಕತೆ ಇಲ್ಲ. ಏನೇನೋ ನೆನಪು ಮರೆತಿದಿನೇನೋ ಎಂಬ ಚಿಂತೆಯೂ ಇಲ್ಲ. ಸಣ್ಣ ಸಣ್ಣ ಮಾಹಿತಿಗಳ ಬಗೆಗೆ ತಲೆ ಕೆಡಿಸಿಕೊಳ್ಳುವ ಗೋಜಲು ಇಲ್ಲ. ತತ್ಪರಿಣಾಮ ನಿಮ್ಮ ಮೆದುಳು ಶಕ್ತಿಯುತವಾಗುತ್ತದೆ. ನಿರ್ದಿಷ್ಟ ಕಾರ್ಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಕ್ಯಾಲೆಂಡರ್ ನಿಂದ ಮೂರ್ಖರಾಗುವುದು ಬೇಡ. ವರ್ಷದಲ್ಲಿ ನೀವು ಎಷ್ಟು ದಿನ ಉಪಯೋಗಿಸಿಕೊಳ್ಳುತ್ತಿರೋ ಅಷ್ಟು ದಿನಗಳಿರುತ್ತವೆ. ಒಬ್ಬ ಒಂದು ವರ್ಷದಲ್ಲಿ ಒಂದು ವಾರದ ಮೌಲ್ಯ ಮಾತ್ರ ಗಳಿಸಿದರೆ ಮತ್ತೊಬ್ಬ ಒಂದು ವಾರದಲ್ಲಿ ಒಂದು ವರ್ಷದ ಮೌಲ್ಯ ಪಡೆಯಬಹುದು. ಅದು ಹೇಗೆ ಎಂಬ ಅಚ್ಚರಿಯ ಪ್ರಶ್ನೆಗೆ ಉತ್ತರ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು. ಗಮನ ಹೆಚ್ಚಿದಷ್ಟು ನೋಡ ನೋಡುತ್ತಿದ್ದಂತೆ ಉತ್ಪಾದಕತೆಯೂ ಹೆಚ್ಚುತ್ತದೆ. ‘ಉಚಿತವಾಗಿ ಬಂದಿದ್ದಕ್ಕೆ ಬೆಲೆ ಕಡಿಮೆ.’ ವಿಶೇಷವಾಗಿ ಸಲಹೆಗಳಿಗೆ ಉಪದೇಶದ ಮಾತುಗಳಿಗೆ ಇದು ಅನ್ವಯವಾಗುತ್ತದೆ. ಯೋಜನೆಯ ವಿಷಯದಲ್ಲಿ ನುರಿತವರು ಹೇಳಿದ್ದನ್ನು ಆಲಿಸಿ ನಿರ್ವಹಿಸಿದರೆ ಉತ್ಪಾದಕತೆ ಹೆಚ್ಚುವುದು ಖಚಿತ. ಸ್ಪಷ್ಟತೆಯ ಸೆಲೆ ಈಗಾಗಲೇ ಹೇಳಿದಂತೆ ಯೋಜನಾ ಪಟ್ಟಿಯು ಯಾವ ಕೆಲಸ ಎಷ್ಟು ಸಮಯ ಆದ್ಯತೆಯ ಬಗೆ ಹೇಗೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರವನ್ನು ಒದಗಿಸುತ್ತದೆ.ಬೇರೆ ಪದಗಳಲ್ಲಿ ಹೇಳುವುದಾದರೆ ಆದ್ಯತೆಯ ಪಟ್ಟಿ ನಿಮ್ಮ ಕೆಲಸಗಳಿಗೆ ಸೂಕ್ತ ದಿಕ್ಕಿನಲ್ಲಿ ಚಲಿಸಲು ಸಹಾಯ ಮಾಡುತ್ತವೆ.ನೀವು ಸಾಧಿಸಲೇಬೇಕಾದ ಉದ್ದೇಶಗಳನ್ನು ನಿರ್ದಿಷ್ಟ ಸಮಯದಲ್ಲಿ ಸಾಧಿಸಲು ಪ್ರೇರಕವಾಗುತ್ತದೆ. ಸ್ಪಷ್ಟತೆಯ ಸೆಲೆ ಇರುವಾಗ ಗೊಂದಲದ ಗೂಡಿನ ಗೊಡವೆಯೇ ಇಲ್ಲದಂತಾಗುತ್ತದೆ. ಸ್ಪೂರ್ತಿಯ ಹಾದಿಯ ಮೇಲೆ ನಡೆಯಲು ಸಾಧ್ಯವಾಗುವುದು. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ದಿನ ನಿತ್ಯದ ಕಾರ್ಯಾಚರಣೆಗಳಲ್ಲಿ ತುಂಬಾ ಕಾರ್ಯನಿರತರಾಗಿ ಅನುಕ್ರಮ ಯೋಜನೆಯನ್ನು ಆದ್ಯತೆಯನ್ನಾಗಿ ಮಾಡಲು ವಿಫಲರಾಗುವ ಸಾಧ್ಯತೆಯೇ ಹೆಚ್ಚು ಆದ್ದರಿಂದ ಅದರಿಂದ ಹೊರ ಬರುವುದು ಮುಖ್ಯ. ಯೋಜನೆಯಿಲ್ಲದೇ ಕಾರ್ಯ ನಿರ್ವಹಿಸುವ ಬಗೆ ಯಾವುದೇ ಸನ್ನಿವೇಶಗಳನ್ನು ಅನನ್ಯವಾಗಿ ದುರ್ಬಲಗೊಳಿಸಬಹುದು. ಕೌಶಲ್ಯಗಳನ್ನು ಅದೆಷ್ಟೇ ಕರತಲಾಮಲಕ ಮಾಡಿಕೊಂಡಿದ್ದರೂ ನಿರ್ಣಾಯಕ ಯೋಜನೆ ಇರದಿದ್ದರೆ ಸಿದ್ಧಿಸಿಕೊಂಡ ಕಲೆಗಳೆಲ್ಲ ನೀರಲ್ಲಿ ಹುಣಸೆಹಣ್ಣು ತೊಳೆದಂತೆ ವ್ಯರ್ಥ ಎಂಬುದನ್ನು ಗಮನದಲ್ಲಿಟ್ಟು ಯೋಜನೆಗೆ ಮುಂದಾಗಿ. ಅರಿಯದೆ, ನೋಡದೆ, ಯೋಚಿಸದೆ, ಕಾರ್ಯ ಮಾಡಬಾರದು ಎಂದಿದ್ದಾನೆ ವಿಶ್ಣು ಶರ್ಮ. ವಿಶ್ರಾಂತಿಯ ನೆಲೆ ಗಡಿಬಿಡಿ ಜೀವನದಲ್ಲಿ ಸಮಯ ವೇಗದ ರೇಸ್ ಕುದುರೆಯಂತೆ ಓಡುತ್ತಿದೆ ಎನಿಸುತ್ತದೆ. ಅದರ ಪರಿವೆಯಿಲ್ಲದೇ ನಾವು ಕುರುಡರಂತೆ ಸಿಕ್ಕ ಸಿಕ್ಕಲ್ಲಿ ಸಮಯ ವ್ಯಯ ಮಾಡಿ ಯೋಜನೆಯಿಲ್ಲದೇ ಕಳಪೆ ಸಮಯ ನಿರ್ವಹಣೆ ಮಾಡಿ ಬಿಡುತ್ತೇವೆ. ಸಮಸ್ಯೆಗಳನ್ನು ನಾವೇ ಕೈ ಬೀಸಿ ಕರೆಯುತ್ತೇವೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಓಡಾಡುತ್ತೇವೆ. ಅದು ನಿಷ್ಪ್ರಯೋಜಕವಾಗುವುದು. ಸರಿಯಾದ ಕೆಲಸದ ಯೋಜನೆಯು ಜೀವನದ ಗತಿಯನ್ನೇ ಬದಲಿಸಬಲ್ಲುದು ಎಂಬುದು ಸಂಶೋಧನೆಗಳು ಹೊರಗೆಡುಹಿದ ಸಂಗತಿ. ನಿದ್ರಾವಸ್ಥೆಯಲ್ಲಿರುವ ಕೆಲಸಗಳನ್ನು ಎಬ್ಬಿಸಬಹುದು. ಕೆಸರು ಗದ್ದೆಯ ಹುಳು ಹುಪ್ಪಡಿಯಂತಾಗಿರುವ ಎಲ್ಲ ಕೆಲಸಗಳನ್ನು ಉಪಯುಕ್ತ ಯೋಜನೆಯ ಮೂಲಕ ಮುಗಿಸಬಹುದು.ಅದು ನಿಮ್ಮ ಒತ್ತಡದ ಮಟ್ಟವನ್ನು ಪೂರ್ಣ ಕೆಳಕ್ಕಿಳಿಸುತ್ತದೆ.ಅಷ್ಟೇ ಅಲ್ಲ ವಿಶ್ರಾಂತಿಯ ನೆಲೆಗೂ ಭೇಟಿ ನೀಡಲು ಅವಕಾಶ ಲಭಿಸುವುದು.ನಿಮಗೆ ನೀವು ಯೋಜನೆಯ ಸೂಕ್ಷ್ಮದರ್ಶಕದ ಕೆಳಗೆ ಇರಿಸಿಕೊಳ್ಳಲು ಹೆದರಬೇಡಿ. ಗೆಲುವು ಯೋಜನೆಯಿಲ್ಲದೇ ಬರಲಾರದು ಬಂದರೂ ಬಹು ದಿನ ನಿಲ್ಲಲಾರದು. ಗೆಲುವು ಮತ್ತು ಯೋಜನೆ ಅಭೇದ್ಯವಾಗಿ ಬೆಸೆದುಕೊಂಡಿವೆ. ದೊಡ್ಡ ಗೆಲುವನ್ನು ನಿರೀಕ್ಷಿಸಿ ಯೋಜನೆಯಿಂದ ಮುಂದಡಿ ಇಡಿ. ಈ ಬೆಸುಗೆಯ ಮುಗುಳ್ನಗು ತಮ್ಮ ಮುಖದ ಮೇಲೆ ಮೂಡಲಿ. ********




