ಒಳ ಮನಸು ವಿಸ್ತರಿಸಿದ‌ ಕತೆಗಾರ್ತಿ

ಒಳ ಮನಸು ವಿಸ್ತರಿಸಿದ‌ ಕತೆಗಾರ್ತಿ

ಬರವಣಿಗೆ ಮೂಲಕ  ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ’

ಸುನಂದಾ ಕಡಮೆ

ಕತೆಗಾರ್ತಿ  ಸುನಂದಾ ಕಡಮೆ 1967 ರಲ್ಲಿ ಉತ್ತರಕನ್ನಡದ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಜನಿಸಿದ್ದು.  ಪಕ್ಕದ ಭಾವಿಕೇರಿಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿಯ ನಂತರ ಕರ್ನಾಟಕ ವಿ.ವಿಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಕವಿ ಪ್ರಕಾಶ ಕಡಮೆಯವರೊಂದಿಗೆ  ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.   ಕಾವ್ಯಾ ಮತ್ತು ನವ್ಯಾ ಎಂಬಿಬ್ಬರು ಮಕ್ಕಳು. 1997ರಲ್ಲಿ ಬರವಣಿಗೆ ಆರಂಭಿಸಿದರು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಸುನಂದಕ್ಕ ಮೂಡಿಸಿದ್ದಾರೆ.   ಪುಟ್ಟ ಪಾದದ ಗುರುತು (2005),ಗಾಂಧೀ ಚಿತ್ರದ ನೋಟು (2008), ಕಂಬಗಳ ಮರೆಯಲ್ಲಿ (2013), ತುದಿ ಮಡಚಿಟ್ಟ ಪುಟ(2016) ಇವರ ಕಥಾ ಸಂಕಲನಗಳು. ಬರೀ ಎರಡು ರೆಕ್ಕೆ ಕನರ್ಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಕಾದಂಬರಿಯೂ ಸೇರಿದಂತೆ  13 ಸೃಜನಾತ್ಮಕ ಕೃತಿಗಳು ಈಗಾಗಲೇ ಹೊರಬಂದಿವೆ.

ಪ್ರಶಸ್ತಿಗಳು : ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಬಾಲ ವಿಕಾಸ ಅಕಾಡೆಮಿ ಬಹುಮಾನ, ಬೆಸಗರಹಳ್ಳಿ ರಾಮಣ್ಣ ಕಥಾ ಪುಸ್ತಕ ಪ್ರಶಸ್ತಿ,  ಡಿ.ಎಸ್.ಕರ್ಕಿ ಕಾವ್ಯ ಬಹುಮಾನ, ಶಾಂತಾದೇವಿ ಕಣವಿ ಕಥಾ ಪುರಸ್ಕಾರ, ಮಲ್ಲಿಕಾ ಪ್ರಶಸ್ತಿ, ಗೌರಮ್ಮ ಹಾರ್ನಹಳ್ಳಿ ಪ್ರಶಸ್ತಿ, ಸುಧಾ ಮೂರ್ತಿ ಕಥಾ ಪ್ರಶಸ್ತಿ, ಹಾಗೂ ಎಂ.ಕೆ.ಇಂದಿರಾ ಪ್ರಶಸ್ತಿ, ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ಕಾವ್ಯ ಬಹುಮಾನ, ಅನುಪಮಾ ನಿರಂಜನ ಕಥಾ ಪ್ರಶಸ್ತಿ, ಸೇರಿದಂತೆ  ಹದಿನೆಂಟು ಪುರಸ್ಕಾರಗಳು  ಕಥಾ,ಕವಿತೆ ಪುಸ್ತಕಗಳಿಗೆ ಸಂದಿವೆ. ಬರೀ ಎರಡು ರೆಕ್ಕೆ’ ಕಾದಂಬರಿಯು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಎಂ.ಎ ಮೊದಲ ವರ್ಷಕ್ಕೆ ಪಠ್ಯಪುಸ್ತಕವಾಗಿದೆ. ಮಹಾರಾಷ್ಟ್ರ ಸೆಕೆಂಡರಿ ಬೋರ್ಡನ ಕನ್ನಡ ಹತ್ತನೇ ವರ್ಗಕ್ಕೆ ಇವರ ‘ಪುಟ್ಟ ಪಾದದ ಗುರುತು’ ಕತೆಯೊಂದು ಪಠ್ಯವಾಗಿದೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿ.ವಿ ಬಿ.ಎ ಮೊದಲ ಸೆಮಿಸ್ಟರ್ ಗೆ ಇವರ ‘ಸರಸ್ವತಿಯ ಫೆಸ್ಬುಕ್ ಪ್ರಸಂಗ’ ಕತೆಯು ಪಠ್ಯವಾಗಿದೆ. ಇವರ ಹಲವು ಕತೆ, ಲೇಖನ ಹಾಗೂ ಕವನಗಳು- ಕೊಂಕಣಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಉರ್ದು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿವೆ. ಹಲವು ಮಕ್ಕಳ ಕತೆಗಳನ್ನು ಇವರು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಂದರ್ಶನ

ಪ್ರಶ್ನೆ : ಕತೆ ಗಳನ್ನು ಯಾಕೆ ಬರೆಯುತ್ತೀರಿ ?

ವರ್ಷಕ್ಕೊಮ್ಮೆಯಾದರೂ ಕಡಲಿನಲ್ಲಿ ಮಿಂದು ಬಂದರೆ ಯಾವುದೇ ಚರ್ಮದ ಖಾಯಿಲೆಗಳಿದ್ದರೂ ವಾಸಿಯಾರುತ್ತದೆ ಎಂಬ ನಂಬಿಕೆ ನಮ್ಮ ಕಡೆಯವರದು. ಅಂತೆಯೇ ನಮ್ಮ ಮನಸ್ಸಿನ ಹಲವು ಖಾಯಿಲೆಗಳಿಗೆ ಈ ಓದು ಹಾಗೂ ಬರೆವಣಿಗೆ ಒಂದು ಹಂತದಲ್ಲಿ ಔಷಧಿಯಂತೆ ಎರವಾಗುತ್ತಿದೆ ಎಂಬುದು ನನ್ನ ನಂಬಿಕೆ. ನನ್ನಿಂದ ಹುಟ್ಟಿದ ಆರಂಭಿಕ ಬರವಣಿಗೆಗಳು ಕೌಟುಂಬಿಕವಾಗಿ ನನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಮತ್ತು ಸಾಮಾಜಿಕವಾಗಿ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಮಾತ್ರ ಸೀಮಿತವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದೊಂದು ಅಪ್ಪಟ ಸಾಮಾಜಿಕ ಜವಾಬ್ದಾರಿಯೆಂದು ನನಗೆ ಮನವರಿಕೆಯಾಗುತ್ತ ಬಂತು. ಬರೆವಣಿಗೆ ಕೇವಲ ಮನರಂಜನೆಗಾಗಿ ಅಥವಾ ಮೈ ಮರೆಯುವದಕ್ಕಾಗಿ ಅಲ್ಲ, ಬರೆಹ ಒಂದು ಮನೋಧರ್ಮ. ಈ ವ್ಯವಸ್ಥೆ ನನಗೆ ಸುರುಳೀತ ಮಾತಾಡಲು ಬಿಡುತ್ತಿಲ್ಲ, ಹಾಗಾಗಿ ಬರೆವಣಿಗೆಯ ಮೂಲಕ ಆ ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ. ಈ ಕರಾಳ ವ್ಯವಸ್ಥೆಯ ಸಾಮಾಜಿಕ ಪರದೆಯ ಹಿಂದೆ ನಲುಗುತ್ತಿರುವ ಜೀವಿಗಳ ಚಿತ್ರಗಳನ್ನು ಎಳೆತಂದು ರಂಗಸ್ಥಳಕ್ಕೆ ಹಾಕುವುದಷ್ಟೇ ಸದ್ಯ ನನ್ನ ಕೈಯಲ್ಲಿ ಸಾಧ್ಯವಾಗುವ ಕೆಲಸ. ಆದರೆ ಜನಸಮುದಾಯದ ನಡುವೆ ಹೋಗಿ ನಿಂತು ಅವರ ಚಡಪಡಿಕೆ ಸಂಕಷ್ಟ ಆತಂಕಗಳಿಗೆ ಕಣ್ಣಾಗುವ ಕಿವಿಯಾಗುವ ಮಿಡಿಯುವ ಸಾಂತ್ವನದ ಮಡಿಲು ನೀಡುವ ಯಾವುದಾದರೂ ಸಹೃದಯಿ ಜೀವಿಯ ಮಾನವೀಯ ಮನಸ್ಸಿನ ಬದ್ಧತೆ ನಮ್ಮೆಲ್ಲ ಬರೆವಣಿಗೆಗಳಿಗಿಂತ ಬರಹಗಾರನಿಗಿಂತ ಮೀರಿದ ಒಂದು ಅನನ್ಯತೆ ಎಂಬ ಎಚ್ಚರದ ಸ್ಥಿತಿ ಕೂಡ ನನ್ನೊಳಗಿದೆ.

ಪ್ರಶ್ನೆ : ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ?

ಅನುದಿನವೂ ಸವೆದು ಸುಕ್ಕಾಗುವ ಮಾನವತೆಯ ಬಿಕರಿ, ಭಾವನೆಗಳ ವಿಕ್ರಯ, ಎಂಥದೋ ಬಿಕ್ಕಳಿಕೆ, ಯಾರದೋ ಚಿತ್ಕಾರಗಳು ಮನಸ್ಸಿನ ಮೂಲೆಯಲ್ಲೆಲ್ಲೋ ಅಡಗಿಕೊಂಡು ಇರಿಯುತ್ತಿರುತ್ತದೆ. ಆಗ ನಾನು ಏನು ಮಾಡಲೂ ತೋಚದ ಸಂದಿಗ್ಧತೆಯಲ್ಲಿ ಅಸಹಾಯಕಳಾಗಿ ನಿಂತು ಈ ಬರೆವಣಿಗೆ ಮುಂದುವರೆಸುತ್ತೇನೆ, ಇದು ನನಗೆ ಅನಿವಾರ್ಯದ ಪಯಣ. ಸಮಾಜದ ಆಗುಹೋಗುಗಳ ಕುರಿತು ಚಿಂತನೆ ಮತ್ತು ಮನುಷ್ಯ ಸಂಬಂಧಗಳ ಕುರಿತಾದ ಆರ್ದ್ರತೆ ಇಲ್ಲದೇ ಹೋದರೆ ಬರೆವಣಿಗೆ ಸಾಧ್ಯವಿಲ್ಲ. ಯಾವುದೇ ಕಲೆಗಳಲ್ಲಿ ತೊಡಗಿಕೊಳ್ಳುವುದು ಅಥವಾ ಸಮಾಜಸೇವೆ ಕೂಡ ಅಂಥ ಆರ್ದ್ರ ಮನಸ್ಸಿನ ಲಕ್ಷಣವೇ ಆಗಿದೆ. ನಮ್ಮ ಅನುಭವದಾಳದಲ್ಲಿ ತಳಮಳಿಸುತ್ತಿರುವ ಭಾವಗಳು ಹೊರಬರಲು ಒಂದು ಸಂದರ್ಭಕ್ಕಾಗಿ ಕಾಯುತ್ತಿರುತ್ತವೆ. ಇಲ್ಲವಾದರೆ ಬರೆಯಲು ಕೂತೊಡನೆ ಅವೆಲ್ಲ ಯಾಕೆ ಅಷ್ಟು ದರ್ದನಲ್ಲಿ ಹೊರಬರಬೇಕು? ಇಳಿಜಾರಿಗೆ ನೀರು ಯಾವ ಅಡೆತಡೆಯೂ ಇಲ್ಲದೇ ರಭಸದಲ್ಲಿ ಹರಿದಷ್ಟೇ ಸಹಜ ಕ್ರಿಯೆ ಅದು. ಮೇಲಿನಿಂದ ನೀರು ಇನ್ನೂ ಹರಿದು ಬರುತ್ತಲೇ ಇದ್ದರೆ ಅದು ತಾನೇ ತನ್ನ ಅವಕಾಶವನ್ನು ಹಿಗ್ಗಿಸಿಕೊಳ್ಳುತ್ತ ಬೆಳೆಯುತ್ತದೆ ಕಾದಂಬರಿಯೊಂದು ಹೀಗೆ ರೂಪುಗೊಳ್ಳುತ್ತದೆ ಅಂದುಕೊಂಡಿರುವೆ.

ಪ್ರಶ್ನೆ: ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?

ಸ್ತ್ರೀಯಾಗಿರುವದಕ್ಕೆ ಮೊದಲು ಕಾಡುವುದು ಸ್ತ್ರೀ ಸಂವೇದನೆಯ ಸಂಗತಿಗಳೇ. ಮೊದಲೆಲ್ಲ ಕೌಟುಂಬಿಕ ನೆಲೆಯಲ್ಲೇ ಏನಾದರೂ ಆಳವಾದದ್ದನ್ನು ಹೇಳಬೇಕು ಅಂದುಕೊಳ್ಳುತ್ತಿದ್ದೆ. ಕೌಟುಂಬಿಕತೆಯನ್ನೇ ಪ್ರಧಾನವಾಗಿರುವ ಕತೆಗಳು, ಆಪ್ತವಾದ ಗ್ರಹಿಣೀಗೀತ ಅಂತೆಲ್ಲ ಕೆಲವು ವಿಮರ್ಶೆಗಳು ಬಂದವು, ಆ ಮಾದರಿಯನ್ನು ಮುರಿಯಬೇಕು ಅಂತಲೇ ಆನಂತರದ ಕತೆಗಳನ್ನು ಮುದ್ದಾಮಾಗಿ ಹೊರಜಗತ್ತಿನಲ್ಲೇ ನಡೆಯುವಂತೆ ಕಟ್ಟತೊಡಗಿದೆ. ನನ್ನನ್ನು ಸದಾ  ಕಾಡುವ ವಿಷಯವೆಂದರೆ ಮುದ್ದು ಬಾಲಕಿಯರ ಮೇಲೆ ಹೃದಯವಿದ್ರಾವಕವಾಗಿ ನಡೆವ ಅತ್ಯಾಚಾರ ಪ್ರಕರಣಗಳು. ಬರೀ ಕಾನೂನಿನಿಂದ ಇದರ ಸಂಪೂರ್ಣ ಪರಿಹಾರ ಸಾಧ್ಯವಿಲ್ಲ, ಅದಕ್ಕೆ ತುತ್ತಾಗುವವರಿಗೆ ಅರಿವು ಮೂಡಿಸುವದರ ಜೊತೆಗೆ, ಅದನ್ನು ಎಸಗುವವರ ಮನಸ್ಥಿತಿಗಳನ್ನು ತಿದ್ದುವುದು ಹೇಗೆ ಎಂಬ ಕುರಿತು ನಾವಿಂದು ಯೋಚಿಸಬೇಕಾಗಿದೆ. ಅವರವರ ಸ್ವತಂತ್ರ ಅವರವರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಭಿನ್ನ ಭಿನ್ನವಾಗಿರುವುದು ಪ್ರಕೃತಿ ಧರ್ಮವನ್ನು ಬಾಲ್ಯದಲ್ಲೇ ಬಾಲಕರಿಗೂ ಮನದಟ್ಟುಮಾಡಿಕೊಡಬೇಕಿದೆ. ಹೀಗೇ ಕಾಡುವ ಇನ್ನೊಂದು ಪ್ರಕರಣವೆಂದರೆ, ನಮ್ಮ ಹುಬ್ಬಳ್ಳಿಯಲ್ಲಿ ಎಸ್ಸೆಸೆಲ್ಸಿ ಹಾಗೂ ಪಿಯೂಸಿ ವಾರ್ಷಿಕ ಪರೀಕ್ಷೆಯ ರಿಸಲ್ಟ್ ಹೊರಬೀಳುವ ದಿನ ನಗರದ ಎಲ್ಲ ಕೆರೆ ಬಾವಿಗಳಿಗೆ ಪೊಲೀಸ್ ಕಾವಲು ಹಾಕುತ್ತಾರೆ! ಅಂದರೆ ನಾವು ನಮ್ಮ ಮಕ್ಕಳ ಸುಮಧುರ ಬಾಲ್ಯವನ್ನು ಯಾವ ದಾರುಣತೆಗೆ ಒಯ್ದು ನಿಲ್ಲಿಸಿದ್ದೇವೆ ? ನಮ್ಮ ಪಾಲಕರ ಶಿಕ್ಷಕರ ಒಟ್ಟಾರೆ ಸಾಮಾಜಿಕ ಮನಸ್ಥಿತಿಗಳು ಎಲ್ಲಿಗೆ ಹೋಗಿ ತಲುಪಿವೆ? ಅಥವಾ ಇದು ಇಂದಿನ ಶಿಕ್ಷಣ ಪದ್ದತಿಯ ಲೋಪವೋ? ಈ ಕಾರಣಕ್ಕಾಗಿ ಇತ್ತೀಚೆಗೆ ನಮ್ಮ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಶಾಲಾ-ಕಾಲೇಜು ಮಕ್ಕಳಿಗೆ ‘ಅರಿವಿನ ಪಯಣ’ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಮಾಜದಲ್ಲಿರುವ ಅನೇಕ ತಾರತಮ್ಯ ಹಾಗೂ ಅಸಮಾನತೆಗಳೇ ಈ ಎರಡು ಸಮಸ್ಯೆಗಳ ಮೂಲ ಬೇರಾಗಿರುವದರಿಂದ, ಆ ಕುರಿತು ಮಕ್ಕಳಲ್ಲಿ ಕಿಂಚಿತ್ತಾದರೂ ಅರಿವಿನ ಬೆಳಕನ್ನು ಮೂಡಿಸುವದು ನಮ್ಮ ಅರಿವಿನ ಪಯಣದ ಉದ್ದೇಶ.

ಪ್ರಶ್ನೆ : ಕತೆ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ?

ಬಾಲ್ಯದ ಅನುಭವಗಳು ನನ್ನ ಬಹದೊಡ್ಡ ಆಸ್ತಿ. ಕಾಲೇಜು ದಿನಗಳು ಹಾಗೂ ಮದುವೆಯಾದ ನಂತರದ ದಿನಗಳೂ ಆಯಾ ಕಾಲಕ್ಕೆ ಆಯಾ ಸಂದರ್ಭದಲ್ಲಿ ಕತೆಯ ಹೂರಣಕ್ಕೆ ಅಗತ್ಯವಿದ್ದರೆ ಅವುಗಳು ನನಗೆ ಗೊತ್ತಾಗದೇ ನುಸುಳುತ್ತವೆ. ಎಷ್ಟೆಂದರೂ ನಮ್ಮ ಕತೆಯ ವಿವರಗಳು ನಮ್ಮ ನಮ್ಮ ಅನುಭವ ಲೋಕದ ಗಾಣದಿಂದಲೇ ಕಟ್ಟಿಕೊಳ್ಳಬೇಕಲ್ಲವೇ, ಕಥನ ಕ್ರಿಯೆಯಲ್ಲಿ ಬರಿಯ ನೋಡಿದ ಕೇಳಿದ ವಿಷಯಗಳೇ ವಿವರಗಳಾಗಿ ಒಡಮೂಡಿದರೆ ಕತೆಯ ಹಂದರವು ಶುಷ್ಕವಾಗಿಬಿಡುವ ಅಪಾಯವಿದೆ. ವಿಶೇಷವಾಗಿ ಕತೆ ಕಾದಂಬರಿಗಳಲ್ಲಂತೂ ಯಾವುದೇ ವಸ್ತುವಿನ ಅಸ್ತಿಪಂಜರಕ್ಕೆ ರಕ್ತ ಮಾಂಸ ತುಂಬಲು ಬಾಲ್ಯ ಮತ್ತು ಹರೆಯದ ಅನುಭವಲೋಕವೇ ಮುಖ್ಯ ಅನಿಸುತ್ತದೆ. ಅದರ ಉಸಿರು ಮತ್ತು ಆತ್ಮ ನಿಸ್ಸಂಶಯವಾಗಿ ಮಾನವತೆಯೇ. ಉದಾಹರಣೆಗೆ ಭೂಮಿಯ ಪಸೆ ಬತ್ತದಿರಲು ಇಂಗು ಗುಂಡಿಗಳು ಅವಶ್ಯಕವಾಗಿರುವಂತೆಯೇ ಸಮಾಜದಲ್ಲಿ ಮಾನವೀಯತೆಯೆಂಬ ಪಸೆ ಬತ್ತದಿರಲು ಸಾಹಿತ್ಯ ಅಗತ್ಯ. ಮೂಲ ತಳಪಾಯವನ್ನು ಮಾನವೀಯಗೊಳಿಸುವದು, ನಮ್ಮ ಬರೆವಣಿಗೆಗಳೆಲ್ಲ ನಮ್ಮ ನಮ್ಮ ಮನೆಯ ಸಣ್ಣ ಸಣ್ಣ ಇಂಗು ಗುಂಡಿಗಳೇ. ನಮ್ಮ ಛಾವಣಿಗೆ ಬಿದ್ದ ಮಳೆಯ ನೀರು ಇಂಗುಗುಂಡಿಯಲ್ಲಿಳಿದು ಸಾಹಿತ್ಯದ ಒರತೆಗೆ ಹನಿ ನೀರು ಸೇರಿಕೊಂಡಂತೆ, ಇಡೀ ಭೂಮಿಯನ್ನು ತಂಪಾಗಿಡಲು ಒಂದೇ ಮನೆಯ ಛಾವಣಿಯ ನೀರು ಸಾಕಾಗದು. ಹಾಗೆ ಜಗತ್ತಿನಾದ್ಯಂತ ಅಸಂಖ್ಯ ಬರಹಗಾರರು ಬರೆಯುತ್ತಿದ್ದೇವೆ.

ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ದೇಶ ಆಳುವ ರಾಜಕಾರಣಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಮಾಜ ಸೇವಕರು ಇವರುಗಳೆಲ್ಲ ಮೂಲತಃ ಸಮಾಜವಾದಿ ಮನಸ್ಥಿತಿಯವರಾಗಿರಬೇಕು ಎಂದು ವಿದ್ವಾಂಸ ಡಾ. ಗೌರೀಶ ಕಾಯ್ಕಿಣಿಯವರು ಹೇಳುತ್ತಿದ್ದರು. ಅಂತೆಯೇ ಸಮಾಜವಾದಿ ನಿಲುವಿನಿಂದ ಆಡಳಿತ ಮಾಡುವ ಮನಸ್ಸಿರುವ ಯಾವ ಆಡಳಿತ ಪಕ್ಷವಾದರೂ ಸೂಕ್ತವೇ. ಆದರೆ ಇಂದು ರಾಜಕೀಯಕ್ಕೆ ಸೇರುವುದೇ ಹಣ ಮಾಡಲು ಎಂಬಂತಾದ ಸ್ವಾರ್ಥ ರಾಜಕಾರಣಿಗಳಿಂದ ದೇಶದ ಉದ್ದಾರ ಹೇಗೆ ಬಯಸುವುದು? ಈಗಂತೂ ಮಠಾದೀಶರು, ಬಂಡವಾಳಶಾಹಿಗಳೇ ದೇಶವನ್ನು ಆಳುತ್ತಿದ್ದಾರೋ ಅನಿಸುತ್ತಿದೆ. ಲಾಲಬಹಾದ್ದೂರ ಶಾಸ್ತ್ರಿ, ಅಬ್ದುಲ ಕಲಾಂ ನಂಥವರ ಅಗತ್ಯ ಇಂದು ದೇಶವನ್ನು ಆತ್ಯಂತಿಕವಾಗಿ ಕಾಡುತ್ತಿದೆ. ಯಾವುದೇ ಪ್ರಚಾರದ ಗೀಳಿಲ್ಲದೇ ನಿಸ್ವಾರ್ಥ ಸೇವೆಗೆ ಬದ್ಧರಾಗಿರುವ ಒಂದು ಗುಂಪು ರೂಪುಗೊಳ್ಳಬೇಕಾಗಿದೆ. ಯಾವುದೇ ಸಂದರ್ಭದಲ್ಲೂ ದೇಶಕ್ಕಾಗಿ ಮಣಿಯುವ ಮನಸ್ಸುಗಳು ಇಂದಿನ ರಾಜಕೀಯದಲ್ಲಿ ಒಟ್ಟಾಗುವ ಅಗತ್ಯವಿದೆ,

ಪ್ರಶ್ನೆ : ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ಧರ್ಮ ಸಂಪ್ರದಾಯ ಸಮಸ್ಕೃತಿಯ ಕುರಿತು ನಂಬಿಕೆ ಇದ್ದವರು ಅವರವರ ಮನೆಯಲ್ಲಿ ವೈಯಕ್ತಿಕವಾಗಿ ಆಚರಿಸಿದರೆ ಯಾವ ಅಪಾಯವೂ ಇಲ್ಲ. ಧರ್ಮ ಬೀದಿಗೆ ಬಂದರೆ ತುಂಬ ಕಷ್ಟ. ಇನ್ನೊಬ್ಬ ಜೀವಿಯನ್ನು ಕೊಂದು ನೀನು ಬದುಕು ಅಂತ ಯಾವ ಧರ್ಮದಲ್ಲೂ ಹೇಳಿಲ್ಲ. ಮಾನವೀಯತೆಗಿಂತ ಮಿಗಿಲಾದ ಧರ್ಮ ಯಾವುದಿದೆ? ಭಕ್ತಿಯೂ ಒಂದು ಗುಲಾಮಗಿರಿಯ ಲಕ್ಷಣವೇ ಎಂಬ ಅರಿವಿದ್ದವರಿಗೆ ದೇವರ ಅಸ್ತಿತ್ವವನ್ನು ನಂಬುವುದು ಬಹಳ ಕಷ್ಟ. ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲ ಜಾತಿ ಧರ್ಮದ ಜನವೂ ಸಮತೆಯಿಂದ ಬದುಕುತ್ತ ಬಂದ ಬಹುದೊಡ್ಡ ಪರಂಪರೆಯಿದೆ. ‘ನಮ್ಮ ಮಾನಸಿಕ ಒತ್ತಡವನ್ನು ಹೊರಲು ಯಾರಾದರೊಬ್ಬರು ಬೇಕು ಅನ್ನಿಸಿದರೆ ಅದು ದೇವರೇ ಯಾಕಾಗಬಾರದು? ದೇವರಿಲ್ಲ ಎಂಬ ನಂಬಿಕೆಯಿದ್ದರೆ ದೇವರನ್ನು ನಿರ್ಮಿಸಿಕೊಳ್ಳಬೇಕು, ಚಹ ಕಾಫಿ ಮಾಡಿಕೊಂಡ ಹಾಗೆಯೇ ದೇವರನ್ನೂ ಮಾಡಿಕೊಳ್ಳಬೇಕು’ ಎಂದಿದ್ದರಂತೆ ಮಾಸ್ತಿ. ದೇವರು ದಿಂಡಿರನ್ನೂ ಅಷ್ಟೇ ನಮ್ಮ ನಮ್ಮ ಮನೆಯ ದೇವರ ಕೋಣೆಯಲ್ಲಷ್ಟೇ ಬೀಗ ಹಾಕಿಟ್ಟರೆ ಚೆನ್ನ. ನಾನು ದೇವರನ್ನು ನಂಬದೇ ಇದ್ದರೂ ಪ್ರತೀ ಕತೆ ಬರೆಯುವಾಗಲೂ ಏಕಾಗ್ರತೆಗಾಗಿ ನನಗೆ ಕೊಂಚ ಧ್ಯಾನದ ಅಗತ್ಯವಿದೆ ಅನಿಸುತ್ತಿದೆ. ಏನೆಂದರೆ ಏನೂ ಹೊಳೆಯದೇ ಇದ್ದ ಸಂದರ್ಭದಲ್ಲಿ ಹದಿನೈದು ನಿಮಿಷಗಳ ಕಾಲ ಮಾಡುವ ಧ್ಯಾನದಲ್ಲಿ ನನಗೆ ಏನಾದರೂ ಒಂದು ಹೊಳೆದುಬಿಟ್ಟಿದ್ದಿದೆ. ಹಾಗಾಗಿ ಧ್ಯಾನವನ್ನು ನಾನು ನಂಬುತ್ತೇನೆ, ನನಗೆ ಧ್ಯಾನವೇ ದೇವರು.

ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ ?

ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಇಡಿಯಾಗಿ ವಾಟ್ಸ್ಆಪ್ , ಫೇಸ್ಬುಕ್ಗಳನ್ನೇ ಅವಲಂಬಿಸಿದೆ. ಎಲ್ಲರಿಗೂ ಎಲ್ಲ ವಿಷಯಗಳೂ ಬಹುಬೇಗ ಸುಲಭದಲ್ಲಿ ತಲುಪಿ ಹೊಸ ಮಾದರಿಯ ಯುವ ತಲೆಮಾರು ಸೃಷ್ಟಿಯಾಗಿದೆ. ಟೀವಿ ಮಾಧ್ಯಮಗಳಂತೂ ಕೃತಕತೆ ಹಾಗೂ ಸುಳ್ಳುಗಳನ್ನೇ ವಿಜೃಂಭಿಸುತ್ತಿವೆ. ಆ ಮೂಲಕ ಜನರಲ್ಲಿ ಮೌಢ್ಯಗಳನ್ನೂ ವ್ಯವಸ್ಥಿತವಾಗಿ ಹಂಚಲಾಗುತ್ತಿದೆ. ಸಂಸ್ಕೃತಿಯ ಹೆಸರಲ್ಲಿ ಎಲ್ಲ ಜಾತಿ ಧರ್ಮದವರೂ ಸೇರಿ ಆಚರಿಸುವ ಸಾಹಿತ್ಯ ಸಮ್ಮೇಳನಗಳಂತಹ ಸೌಹಾರ್ದದ ತಾಣಗಳಲ್ಲಿ ನಮ್ಮ ಅಮಾಯಕ ನಿರಕ್ಷರಿ ಬಡ ಹೆಣ್ಣುಮಕ್ಕಳನ್ನು ಹಿಡಿದು ಒಂದು ಸೀರೆಯ ಆಮಿಷ ತೋರಿಸಿ ಸುಮಂಗಲಿಯರ ಪೂರ್ಣಕುಂಭ ಮೆರವಣಿಗೆಯ ಹೆಸರಲ್ಲಿ ಸುಡು ಬಿಸಿಲ ರಸ್ತೆಯಲ್ಲಿ ಬರಿಗಾಲಲ್ಲಿ ನಾಲ್ಕು ಕಿ.ಮಿ ನಡೆಸಲಾಗುತ್ತಿದೆ. ಜನಜೀವನ ಎಲ್ಲಿಗೆ ಹೋಗಿ ತಲುಪುತ್ತದೋ ಗೊತ್ತಿಲ್ಲ.

ಪ್ರಶ್ನೆ :  ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ ?

ಒಂದು ಸಿದ್ಧಾಂತದ ಲೇಖಕರು ಇನ್ನೊಂದು ಸಿದ್ಧಾಂತದ ಲೇಖಕರ ಮೇಲೆ ಅಥವಾ ಅವರ ಬರಹಗಳ ಮೇಲೆ ಕೆಸರೆರಚಾಟದಂತಹ ರಾಜಕೀಯವನ್ನು ಗಮನಿಸುತ್ತಿದ್ದೇನೆ. ಅವರವರ ನಂಬಿಕೆಗಳು ಅವರವರಿಗೆ ಅಂದುಕೊಂಡು ಸುಮ್ಮನಿದ್ದರೂ ಮಾನವ ವಿರೋಧಿ ನಂಬಿಕೆಗಳು ಯಾವತ್ತೂ ಕ್ಷಮೆಗೆ ಅರ್ಹವಾದುವುಗಳಲ್ಲ. ಆದರೆ ಬರೆವಣಿಗೆಯಲ್ಲಿ ಏನೇ ಆದರೂ ಕೊನೆಯಲ್ಲಿ ಬಹುಕಾಲ ಉಳಿಯುವದು ಗಟ್ಟಿ ಕಾಳುಗಳು ಮಾತ್ರ. ಗೇರಿದರೆ ಜೊಳ್ಳು ಹಾರಿಹೋಗುತ್ತವೆ. ಬರಹಗಾರ ಕ್ಷಣಿಕದ ಮಿಂಚಾದರೆ ಪ್ರಯೋಜನವಿಲ್ಲ, ಶಾಶ್ವತ ಬೆಳಕಾಗುವತ್ತ ಅವರ ನಿರಂತರ ಪರಿಶ್ರಮ ಇರಬೇಕು ಎಂಬುದನ್ನು ನಾವೆಲ್ಲ ಗ್ರಹಿಸಬೇಕು ಅನಿಸುತ್ತದೆ.

ಪ್ರಶ್ನೆ : ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ ?

ಸಧ್ಯದ ರಾಜಕಾರಣದ ನಿಲುವುಗಳು ಜನವಿರೋಧಿಯಾಗಿವೆ ಎಂಬುದಂತೂ ಕಣ್ಣಿಗೆ ಕಾಣುವ ಸತ್ಯ. ಪೌರತ್ವ ಕಾಯ್ದೆ ಜಾರಿಯಾದಲ್ಲಿ ನಮ್ಮ ಮಹಿಳೆಯರಿಗೆ ಅಧಿಕ ಸಂಖ್ಯೆಯಲ್ಲಿ ತೊಂದರೆಯಿದೆ. ಸಾಮಾಜಿಕವಾಗಿಯೂ ಇನ್ನೊಂದು ಮತಾಂಧ ದೇಶವಾಗುವ ಗಂಡಾಂತರವಿದೆ. ಮನುಷ್ಯರೊಳಗೆ ಅನ್ಯೋನ್ಯ ಸಂಬಂಧ ಕಟ್ಟುವ ಬದಲು ದ್ವೇಷವನ್ನು ಬಿತ್ತುತ್ತಿದೆ ಮತ್ತು ಬಹುಸಂಸ್ಕೃತಿಯ ಪರಿಸರವನ್ನು ಏಕಸಂಸ್ಕೃತಿಯ ತಾಣ ಮಾಡಲು ಹೊರಟಂತಿದೆ. ಯುದ್ಧವಿರೋಧೀ ನೀತಿಯನ್ನು ಅನುಷ್ಠಾನಗೊಳಿಸುವದರ ಜೊತೆಗೆ ದೇಶದ ಬೆನ್ನೆಲುಬಾಗಿರುವ ರೈತನ ಅಭಿವೃದ್ದಿಯ ಬಗ್ಗೆ ದೇಶ ಚಿಂತಿಸಬೇಕಾಗಿದೆ. ಅವರವರ ಸಂಸ್ಕೃತಿಯನ್ನು ಸಂಪ್ರದಾಯವನ್ನು ಅವರವರು ಮುಕ್ತವಾಗಿ ಆಚರಿಸುತ್ತ ಭೀತಿಯಿಲ್ಲದೆ ಬದುಕುವ ಹಾಗೆ ತಿಳಿವಳಿಕೆ ಕೊಡುವದನ್ನು ಬಿಟ್ಟು ಇಂದಿನ ಸರಕಾರ ಬೇರೆಲ್ಲವನ್ನೂ ಮಾಡುತ್ತಿದೆ, ಪ್ರಜಾಪ್ರಭುತ್ವದಲ್ಲಿ ಒಬ್ಬ ಸಾಮಾನ್ಯನಿಗೂ ಮಾತನಾಡುವ ಅವಕಾಶ ಇರಬೇಕು ಆದರೆ ಅಸಮಾನ ಆಡಳಿತದ ವಿರುದ್ಧ ದನಿಯೆತ್ತಿ ಕವಿತೆ ಬರೆದರೂ ಜೈಲಿಗೆ ಹಾಕುವ ಈ ತುರ್ತುಪರಿಸ್ಥಿತಿಯ ವಾತಾವರಣದಲ್ಲಿ, ಸಂವಿಧಾನದಲ್ಲಿ ಅಂಬೇಡ್ಕರ್ ಹೇಳುವ ಸಮಾನತೆಗೆ ಬೆಲೆಯೆಲ್ಲಿದೆ? ಆದರೂ ದೇಶವನ್ನಾಳುವವರ `ಎಲ್ಲವೂ ಸುರಕ್ಷಿತವಾಗಿದೆ’ ಎನ್ನುವ ಮಾತಿನ ಹಿಂದೆ ಯುದ್ಧಭಾರತದ ಛಿದ್ರ ಪ್ರತಿಮೆಗಳು ಅಡಗಿ ಕೂತು ಅಣಕಿಸಿದಂತೆ ಭಾಸವಾಗುತ್ತಿದೆ.

ಪ್ರಶ್ನೆ : ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?

ಸುಮಾರು ಐನೂರು ಪುಟಗಳ ಮಹತ್ವಾಕಾಂಕ್ಷೆಯ ಕಾದಂಬರಿಯೊಂದನ್ನು ಬರೆಯಬೇಕು ಎಂಬ ಕನಸಿದೆ. ಅದಕ್ಕೆ ಬೇಕಾದ ಏಕಾಗ್ರತೆ ಸಿಗುತ್ತಿಲ್ಲ. ಬರಿಯ ಕಾರ್ಯಕ್ರಮಗಳು ಭಾಷಣಗಳು ಚಿಕ್ಕಪುಟ್ಟ ಬರೆಹಗಳು, ಇತರರ ಕೃತಿಗಳ ಓದಿನ ಕುರಿತು ಅಭಿಪ್ರಾಯ ಹಂಚಿಕೆ, ಮುನ್ನುಡಿ ಬೆನ್ನುಡಿಗಳಂತಹ ಕಿರುಬರೆಹಗಳ ಮುಲಾಜಿನ ದೈನಿಕದಲ್ಲಿ ಕಳೆದುಹೋಗುತ್ತಿದ್ದೇನೆ ಅನಿಸುತ್ತಿದೆ. ಒಂದೆಡೆ ಕೂತು ಕನ್ನಡದಲ್ಲಿ ಇತ್ತೀಚೆಗೆ ಬರೆಯುತ್ತಿರುವ ಎಲ್ಲ ಹೊಸಬರಹಗಾರರ ಕೃತಿಗಳನ್ನೂ ಗುಡ್ಡೆ ಹಾಕಿಕೊಂಡು ಓದುವ ಮನಸ್ಸಿದೆ ಮತ್ತು ಒರ್ಹಾನ್ ಪಾರ್ಮಕ್ ರಂತಹ ಹಲವು ಲೇಖಕರ ಸಮಗ್ರವನ್ನು ಓದುವ ಹಂಬಲ ಹೆಚ್ಚುತ್ತಿದೆ. ಇವು ಬಿಟ್ಟರೆ ಬೇರೆ ಯಾವ ಆಸೆ ಆಕಾಂಕ್ಷೆಗಳಿಲ್ಲ.

ಪ್ರಶ್ನೆ: ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಸಾಹಿತಿ ಯಾರು ?

ಕನ್ನಡದಲ್ಲಿ ನಾನು ಇಷ್ಟಪಡುವಂತಹ ತುಂಬಾ ಜನ ಬರಹಗಾರರಿದ್ದಾರೆ, ಒಬ್ಬರ ಹೆಸರನ್ನು ಹೇಳಿ ಇನ್ನೊಬ್ಬರನ್ನು ಬಿಟ್ಟರೆ ವೈಮನಸ್ಸಿಗೆ ಕಾರಣವಾದೀತು. ಆದರೆ ನಾನು ಕತೆಗಳನ್ನು ಬರೆಯಲು ಆರಂಭಿಸುವ ಪೂರ್ವದಲ್ಲಿ ನನ್ನನ್ನು ಪ್ರಭಾವಿಸಿದ್ದು ಕಾಯ್ಕಿಣಿ ಜಯಂತಣ್ಣನ ಅಮೃತಬಳ್ಳಿ ಕಷಾಯ ಎಂಬ ಕಥಾಸಂಕಲನ. ನಂತರ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಹಿರಿಕಿರಿಯ ಬರಹಗಾರರೂ ನನಗೆ ಅಚ್ಚುಮೆಚ್ಚಿನವರೇ. ಕುವೆಂಪು ಎರಡು ಕಾದರಿಂಬರಿಗಳು ನನಗೆ ಆಲ್ ಟೈಮ್ ಫೇವರಿಟ್, ಕಾರಂತ, ತೇಜಸ್ವಿ, ಚಿತ್ತಾಲ, ಲಂಕೇಶ, ಅನಂತಮೂರ್ತಿ, ಕುಂ.ವೀ, ವೈದೇಹಿ, ಗೀತಾ ನಾಗಭೂಷಣ ಮುಂತಾದವರ ಗದ್ಯ ಇಷ್ಟವಾಗುತ್ತವೆ, ಅಂತೆಯೇ ನನ್ನ ತಲೆಮಾರಿನ ಬರಹಗಾರರ ಬಹುತೇಕ ಕೃತಿಗಳು ನಮ್ಮ ಸಂಗ್ರಹದಲ್ಲಿವೆ. ಯಾರ ಬರಹ ಬಡವರ ಕುರಿತು ಅಂತಃಕರಣ ಮಿಡಿಸುತ್ತದೆಯೋ, ಯಾರ ಬರಹದಲ್ಲಿ ದಲಿತರ ಕುರಿತು ಕಾಳಜಿಯಿರುತ್ತದೆಯೋ, ಯಾರ ಬರಹಕ್ಕೆ ಮಹಿಳೆಯರ ಸಮಾನತೆಯ ಕುರಿತು ಅರಿವು ಇರುತ್ತದೆಯೋ, ಯಾರ ಬರಹದಲ್ಲಿ ಅಲ್ಪ ಸಂಖ್ಯಾತರ ಕುರಿತು ಸಹಾನುಭೂತಿಯಿರುತ್ತದೆಯೋ, ಅಂಥ ಎಲ್ಲ ಬರಹಗಳು ಕಲಾತ್ಮಕತೆಯಲ್ಲಿ ಚೂರು ವ್ಯತ್ಯಯವಿದ್ದರೂ ಗೌರವಿಸಲು ಯೋಗ್ಯವೆಂದೇ ನಾನು ನಂಬಿದ್ದೇನೆ. ಆದರೆ ಯಾವುದೇ ವಸ್ತುವನ್ನು ನಿರ್ವಹಿಸುವಾಗ ಪರಿಣಾಮಕಾರಿಯಾಗಿ, ಹಸೀ ಗೋಡೆಗೆ ಹರಳು ಹೊಡೆದಷ್ಟೇ ತೀವ್ರವಾಗಿರುವ ಬರೆವಣಿಗೆಗಳೆಂದರೆ ಎಲ್ಲಿದ್ದರೂ ಹುಡುಕಿ ಓದುವೆ. ನನಗೆ ಸದಾ ಬೇರೆ ಭಾಷೆಯ ಅನುವಾದಗಳ ಓದಿನ ಹುಚ್ಚು. ಅವು ನನಗೆ ಗೊತ್ತಿಲ್ಲದೇ ಇರುವ ಬೇರೊಂದೇ ಬಗೆಯ ಜನಜೀವನ ಪರಿಸರ ಸಂಸ್ಕೃತಿಯನ್ನು ಕಾಣಿಸಬಲ್ಲವು ಎಂಬ ಕಾರಣಕ್ಕೋ ಏನೋ. ಇಂಗ್ಲೀಷಿನ ಹಲವರ ಕೃತಿಗಳನ್ನು ಈ ಮೊದಲು ಅನುವಾದಿತ ಕನ್ನಡದಲ್ಲೇ ಓದುತ್ತಿದ್ದೆ. ಆದರೆ ಸಧ್ಯ ಮಗಳ ಹೆರಿಗೆಗೆ ಹೋದಾಗ ಅಲ್ಲಿ ಯುವಲ್ ನೋವಾ ಹರಾರಿಯವರ ದಿ ಸೇಪಿಯನ್ಸ್ ತುಂಬು ಕುತೂಹಲದಿಂದ ಓದಿದೆ. ಮನುಕುಲದ ಹುಟ್ಟಿನ ಸತ್ಯಗಳನ್ನು ನಿಖರವಾಗಿ ತೆರೆದಿಡುವ ಮತ್ತು ಆ ಮೂಲಕ ನಮ್ಮ ಸಂಕುಚಿತ ಮನಸ್ಥಿತಿಗಳನ್ನು ಶುದ್ಧೀಕರಿಸುವ ಅತ್ಯುತ್ತಮ ಕೃತಿ ಅನಿಸಿತು. ಹಾಗೆಯೇ ಕೋರಿಯನ್ ಲೇಖಕಿ ಹೆನ್ ಕಾಂಗ್ ರಚಿಸಿದ ದಿ ವೆಜಿಟೇರಿಯನ್, ನೂರಕ್ಕೆ ನೂರು ಮಾಂಸಾಹಾರಿಗಳ ನಾಡಲ್ಲಿ ಇದ್ದಕ್ಕಿದ್ದಂತೆ ಮಾಂಸಾಹಾರ ನಿಲ್ಲಿಸಿದ ಅಮಾಯಕಳೊಬ್ಬಳ ವಿಲಕ್ಷಣ ಮಾನಸಿಕ ತುಮುಲಗಳನ್ನು ಕಟ್ಟಿಕೊಡುವ ನೋವಿನ ಕಥನ.

ಪ್ರಶ್ನೆ : ನಿಮ್ಮ ಇಷ್ಟದ ಸಿನೆಮಾಗಳು ಯಾವುವು ?

ಹಿಂದೆ ಸಂಸ್ಕಾರ, ತಬರನ ಕತೆ, ಮೌನಿ, ಹರಕೆಯ ಕುರಿ, ಬರ, ತಾಯಿ ಸಾಹೇಬ, ಹಸೀನಾ, ಪುಟ್ಟಕ್ಕನ ಹೈವೆ, ಕನಸೆಂಬೋ ಕುದುರೆಯನೇರಿ, ಗುಲಾಬಿ ಟಾಕೀಸಿನಂತಹ ಸಾಹಿತ್ಯ ಕೃತಿಗಳ ಆಧಾರಿತ ಸಿನಿಮಾಗಳನ್ನು ಇಷ್ಟಪಟ್ಟು ನೋಡಿದ್ದೆ. ಇತ್ತೀಚೆಗೆ ತಿಥಿ, ರಾಮಾರಾಮಾರೆ ದಂತಹ ಕೆಲವು ಸಿನೆಮಾಗಳು ಇಷ್ಟವಾಗಿದ್ದಿದೆ. ಕನ್ನಡದ ಒಳ್ಳೆಯ ಕೃತಿಗಳು ಹೆಚ್ಚು ಹೆಚ್ಚು ದೃಶ್ಯ ಮಾಧ್ಯಮಕ್ಕೆ ಒಳಪಡಬೇಕು, ಯಾಕೆಂದರೆ ಸಿನೆಮಾ ಅಥವಾ ದಾರಾವಾಹಿಗಳ ಮಾಧ್ಯಮ ಬಹಳಷ್ಟು ಜನರನ್ನು ಆಕರ್ಷಿಸುವ ಕಾಲಘಟ್ಟದಲ್ಲಿ ನಾವಿರುವದರಿಂದ, ಒಳ್ಳೆಯದೇನಾದರೂ ಇದ್ದರೆ ಅದು ದೃಶ್ಯ ಮಾಧ್ಯಮದ ಮೂಲಕವೇ ಜನಸಮುದಾಯವನ್ನು ಅದರಲ್ಲೂ ಅನಕ್ಷರಸ್ಥರನ್ನೂ ನೇರವಾಗಿ ತಲುಪಬಹುದು ಅನಿಸುತ್ತದೆ. ಯಾಕೆಂದರೆ ಒಂದು ಪುಸ್ತಕವನ್ನು ಎಷ್ಟು ಜನ ಓದುತ್ತಾರೆ ? ಅದೇ ಕೃತಿ ದೃಶ್ಯ ಮಾಧ್ಯಮಕ್ಕೆ ಒಳಪಟ್ಟರೆ ಎಷ್ಟು ಜನ ನೋಡುತ್ತಾರೆ ? ಅನುಪಾತದಲ್ಲಿ ತುಂಬಾ ವ್ಯತಾಸವಿದೆ. ನಾವೀಗ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ಕೊಟ್ಟು ಓದಿಕೊಂಡು ಬನ್ನಿ ಅಂದರೆ ಎಷ್ಟು ಮಕ್ಕಳು ಇಷ್ಟಪಟ್ಟು ಓದಬಲ್ಲರು? ಅದೂ ಆಂಗ್ಲ ಮಾಧ್ಯಮದ ಮಕ್ಕಳಲ್ಲಿ ಅವರ

ಮಾತೃ ಭಾಷೆಯ ಒಲವನ್ನು ನಾವು ಹೇಗೆ ಹೆಚ್ಚಿಸಬಹುದು? ಓದುವ ಹವ್ಯಾಸವಿಲ್ಲದ ಮಕ್ಕಳಲ್ಲೂ ಒಳ್ಳೆಯ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಬಿತ್ತುವುದು ಹೇಗೆ ? ನನ್ನ ಸಲಹೆ ಒಂದೇ. ರಾಜ್ಯದ ಪ್ರತೀ ಶಾಲೆಯಲ್ಲೂ ವಾರಕ್ಕೊಂದು ಒಳ್ಳೆಯ ಅಭಿರುಚಿಗಳ ಸಿನೆಮಾಗಳನ್ನು ತೋರಿಸಬೇಕು. ತಿಂಗಳಿಗೆ ನಾಲ್ಕು ಸಿನೆಮಾ ವಿದ್ಯಾರ್ಥಿಗಳು ನೋಡಿದರೆ ಅವರಿಗೆ ನಾಲ್ಕು ಪುಸ್ತಕಗಳನ್ನು ಓದಿದ ಪ್ರಯೋಜನ ದೊರೆತಿರಬೇಕು. ಶಾಲಾ ಮಕ್ಕಳಿಗಾಗಿಯೇ ಅವರ ಮನಸ್ಸನ್ನು ಬುದ್ದಿಯನ್ನು ಹರಿತಗೊಳಿಸುವಂತಹ, ಕ್ರಿಯಾಶೀಲತೆಯನ್ನು ಹೆಚ್ಚಿಸುವಂತಹ ಅತ್ಯುತ್ತಮ ಗುಣಮಟ್ಟದ ಸಿನೆಮಾಗಳನ್ನು ಸರ್ಕಾರವೇ ನಿರ್ಮಿಸಬೇಕು. 

ಪ್ರಶ್ನೆ : ನೀವು ಮರೆಯಲಾಗದ ಘಟನೆಗಳು ಯಾವುವು ?

ನನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ದು ಬಿಡುವ, ಕರೆತರುವ ದಿನಗಳಲ್ಲಿ ರಸ್ತೆ ಬದಿಯ ತಿರುವಿನಲ್ಲಿ ಸುಮಾರು ಮೂವತ್ತೈದು ನಲವತ್ತರ ಆಸುಪಾಸಿನ ಕೆದರಿದ ಕೂದಲ ಚಿಂದಿಯಂತಹ ಮಾಸಿದ ಉಡುಗೆಯ ಅನಾಮಿಕ ಹೆಂಗಸೊಬ್ಬಳು ತನ್ನ ಕೈಬೆರಳ ಉಗುರಿನಲ್ಲೇ ನೆಲದ ಮಣ್ಣು ಅಗೆಯುತ್ತ ಜೊಲ್ಲು ಸುರಿಸುತ್ತ ಸಣ್ಣಗೆ ನರಳುತ್ತ ಪೇಲವ ಕಣ್ಣುಗಳ ಹೊತ್ತು ಕಾಲಗಲಿಸಿ ಕೂತಿದ್ದಳು. ಆಕೆ ಯಾರು ಏನು ಯಾಕಲ್ಲಿ ಒಂಟಿಯಾಗಿ ಕೂತು ನರಳುತ್ತಿದ್ದಾಳೆ ಎಂದು ವಿಚಾರಿಸುವ ಅಥವಾ ಅದರ ಕುರಿತು ಯೋಚಿಸುವ ವ್ಯವಧಾನವೂ ಇಲ್ಲದೇ ಅವಳನ್ನು ದಾಟಿ ಹೋಗುತ್ತಿತ್ತು ಈ ಪಟ್ಟಣದ ಜನಸಾಗರ. ಆ ಜನಮಾನಸದೊಂದಿಗೆ ಎಂಥದೋ ಅವ್ಯಕ್ತತೆಯಲ್ಲಿ ನಾನೂ ಸುಮ್ಮನೇ ಸರಿದು ಹೋಗಿಬಿಟ್ಟೆನಲ್ಲ ? ಯಕಶ್ಚಿತ್ ಒಳ್ಳೆಯ ಮನುಷ್ಯಳಾಗದೇ ಒಬ್ಬ ಒಳ್ಳೆಯ ಕತೆಗಾತರ್ಿ ಹೇಗಾದೇನು ? ಪ್ರಾಣ ಹಿಂಡುವ ಈ ವೇದನೆಯೇ ಸದಾ ನನ್ನ ಮನಸ್ಸಿನಾಳದಲ್ಲಿ ಜಾಗ್ರತವಾಗಿದ್ದು ನನ್ನನ್ನು ಅನುದಿನ ಮಾನವೀಯಗೊಳಿಸುತ್ತ ಸಾಗುತ್ತಿದೆ.

……………….

ಸುನಂದಾ ಕಡಮೆಯವರ ಪುಸ್ತಕಗಳ ಆಲ್ಬಂ

************

ನಾಗರಾಜ್ ಹರಪನಹಳ್ಳಿ

ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

6 thoughts on “ಒಳ ಮನಸು ವಿಸ್ತರಿಸಿದ‌ ಕತೆಗಾರ್ತಿ

  1. ಸೂಕ್ಷ್ಮ ಸಂವೇದನೆಯ ಪ್ರಬುದ್ಧ ಬರಹಗಾರ್ತಿ ಸುನಂದ ಕಡಮೆ ಅವರು. ಅವರ ಹೆಚ್ಚಿನಂಶ ಕಥೆಗಳನ್ನು ಓದಿದ್ದೇನೆ. ಕಾದಂಬರಿಗಳನ್ನು ಓದಿಲ್ಲ .. ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಂದರ್ಶಕರಿಗೂ ಲೇಖಕಿ ಅವರಿಗೂ ಅಭಿನಂದನೆಗಳು

  2. ಥ್ಯಾಂಕ್ಯೂ ಸುಜಾತಾ,
    ಥ್ಯಾಂಕ್ಯೂ ನಾಗರಾಜ್
    ಥ್ಯಾಂಕ್ಯೂ ಸಂಗಾತಿ ಬಳಗ.

  3. ಸುನಂದಾ ಕಡಾಮೆಯವರ ಬಗ್ಗೆ ಸಾಕಷ್ಟು ಅವರ ಅನುಭವ ಸಾರ ಬಿಚ್ಚಿಟ್ಟಿದ್ದಕ್ಕೆ ತುಂಬು ಹೃದಯ ಅಭಿನಂದನೆಗಳು….. ಸಂದರ್ಶಿಸಿದ ನಾಗರಾಜ ರವರಿಗೆ…ಧನ್ಯವಾದಗಳು

  4. ಯಾರ ಬರಹದಲ್ಲಿ ಮಹಿಳೆಯರ ಸಮಾನತೆ ಕುರಿತು ಅರಿವು ಇರುತ್ತದೆಯೊ, ದಲಿತರ ಕುರಿತು ಕಾಳಜಿ ಇರುತ್ತದೆಯೊ ಅದು ಗೌರವಕ್ಕೆ ಅರ್ಹವಾಗಿದ್ದು ಎಂದು ಉತ್ತರಿಸಿದ್ದು ಅರ್ಥ ಪೂರ್ಣ ವಾಗಿದೆ ಮೇಡಂ. ಹಾಗೆ ನಾಗರಾಜ ಸರ್ ಸುನಂದಾ
    ಕಡಮೆಯವರಿಗೆ ಮಾಡಿದ ಸಂದರ್ಶನ ಚೆನ್ನಾಗಿದೆ.

    1. ಯಾರ ಬರಹದಲ್ಲಿ ಮಹಿಳೆಯರ ಸಮಾನತೆ ಕುರಿತು ಅರಿವು ಇರುತ್ತದೆಯೊ, ದಲಿತರ ಕುರಿತು ಕಾಳಜಿ ಇರುತ್ತದೆಯೊ ಅದು ಗೌರವಕ್ಕೆ ಅರ್ಹವಾಗಿದ್ದು ಎಂದು ಉತ್ತರಿಸಿದ್ದು ಅರ್ಥ ಪೂರ್ಣ ವಾಗಿದೆ ಮೇಡಂ. ಹಾಗೆ ನಾಗರಾಜ ಸರ್ ಸುನಂದಾ
      ಕಡಮೆಯವರಿಗೆ ಮಾಡಿದ ಸಂದರ್ಶನ ಚೆನ್ನಾಗಿದೆ.

  5. ಮೇಡಂ ಸುನಂದಾ ಕಡಮೆ ಅವರ ಸಂದರ್ಶನ ಹಲವು ವಿಚಾರಗಳಲ್ಲಿ ಬೆಳಕು ಚೆಲ್ಲುತ್ತದೆ. ನಿಜ ಶಿಕ್ಷಣ ಬದುಕಿನ ಒಂದು ಭಾಗ ಆದರೆ ಬದುಕೇ ಶಿಕ್ಷಣ ಎಂಬತಾಗಿ ಮುಗ್ದ ಜೀವಗಳ ದಾರುಣ ಅಂತ್ಯವಾಗುತ್ತಿದೆ .ಒಬ್ಬ ಬರಹಗಾರನಿಗೆ ,ದಲಿತ,ಮಹಿಳಾ ಸಮಾನತೆ ಕಾಳಜಿ,ಅಲ್ಪಸಂಖ್ಯಾತ ರ ಬಗ್ಗೆ ಅನುಭೂತಿ .ಎಲ್ಲವು ಇರಬೇಕು ಎಂಬ ಅವರ ಮನದಾಳದ ಮಾತು ಅಕ್ಷರಸಹ ನಿಜ .ಧನ್ಯವಾದಗಳು ಮೇಡಂ .
    ಸಂದರ್ಶಕರಿಗೂ ಧನ್ಯವಾದಗಳು .

Leave a Reply

Back To Top