ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಮತ್ತು ಆಕಾಶ ಡಾ.ಧನಂಜಯ ಕುಂಬ್ಳೆ ಕವಿಮಿತ್ರ ಡಾ.ಧನಂಜಯ ಕುಂಬ್ಳೆಯವರ ‘ನಾನು ಮತ್ತು ಆಕಾಶ’ ವಿಮರ್ಶಾ ಸಂಕಲನದ ಬರಹಗಳನ್ನು ಮರುಓದುವ ಅವಕಾಶ ಲಭಿಸಿದೆ. ಹದಿನಾರು ವರ್ಷಗಳ ಹಿಂದೆ ಪುಟ ತಿರುವಿ ದೃಷ್ಟಿ ಹಾಯಿಸಿದ್ದೆ ಅಷ್ಟೆ. ಈಗ ಅನುಭವಿಸಿದ ಸಾರ್ಥಕ ಭಾವ. ೨೦೦೩ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪುಸ್ತಕ ಪ್ರಕಾಶನ ಧನಸಹಾಯ ಯೋಜನೆಯಲ್ಲಿ ಆಯ್ಕೆಯಾದ ಈ ಕೃತಿಯನ್ನು ಪುತ್ತೂರಿನ ಅನನ್ಯ ಪ್ರಕಾಶನ ಹೊರ ತಂದಿದೆ. ಧನಂಜಯ ಅವರ ಭಾವಗಳು, ಸಂವೇದನೆಗಳು, ಚಿಂತನೆಗಳು ತ್ರಿಮುಖಿ ಲಹರಿಗಳಾಗಿ ಇದರಲ್ಲಿ ಹರಿದಿದೆ. ಅವರ ಅನುವಭವಕ್ಕೆ ದಕ್ಕಿದ ಆಕಾಶದ ಆಕಾರ, ವಿಕಾರ ಬೆಡಗಿನೊಳಗೆ ಬೆರಗು ಮೂಡಿಸುತ್ತದೆ. ನೆಲದ ಧ್ಯಾನದಲ್ಲಿ ಎಲ್ಲವನ್ನೂ ಧೇನಿಸಿದ್ದಾರೆ. ವ್ಯಕ್ತಿ- ಕೃತಿ- ಪ್ರೀತಿ ಅಕ್ಷರಗಳಲ್ಲಿ ದಾಖಲಾಗಿದೆ. ಒಟ್ಟು ೨೫ ಬರಹಗಳಿರುವ ಈ ಪುಟ್ಟ ಸಂಕಲನಕ್ಕೆ ಪ್ರೊ.ತಾಳ್ತಜೆ ವಸಂತಕುಮಾರ್  ಮುನ್ನುಡಿ ಬರೆದಿದ್ದಾರೆ. “ತಮ್ಮ ಬರಹಗಳಲ್ಲಿ ಏಕತಾನತೆಯ ಬದಲಾಗಿ ವೈವಿಧ್ಯವನ್ನು ಆರಿಸಿಕೊಳ್ಳುವ ಧನಂಜಯರ ಹುರುಪು ಮೆಚ್ಚುಗೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ಕೃತಿಯಲ್ಲಿ ವ್ಯಕ್ತಿಚಿತ್ರಗಳೂ, ಸಾಹಿತ್ಯ ವಿಮರ್ಶೆಯೂ, ಸಮಕಾಲೀನ ವಿದ್ಯಮಾನಗಳೂ ಎಡೆಪಡೆಯುತ್ತವೆ.  ಇದರಿಂದಾಗಿ ಓದುಗರ ಆಸಕ್ತಿಯೂ ಕದಡದಂತೆ ಕಾಯ್ದುಕೊಳ್ಳುವುದರ ಜೊತೆಗೆ ಬರಹಗಳ ಬಂಧ ಗಟ್ಟಿಯಾಗಿರುವಂತೆ ಜಾಗ್ರತೆ ವಹಿಸುವ ವಸ್ತುವಿನ ಆಯ್ಕೆಯ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುವ ಸೌಲಭ್ಯಗಳನ್ನು ಅವರು ಕಲ್ಪಿಸಿಕೊಳ್ಳುತ್ತಾರೆ. ಆ ಮೂಲಕ ಆಪ್ತರಾಗುತ್ತಾರೆ” – ಇದು ತಾಳ್ತಜೆಯವರ ಮಾತು. ಆಕಾಶ ಸಾವಿರಾರು ನಕ್ಷತ್ರಗಳನ್ನು ಅರಳಿಸುತ್ತಿರುವಾಗ ಧನಂಜಯರು ಅವರೊಳಗಿನ ನಕ್ಷತ್ರ ಸದೃಶ ಸೃಜನಶೀಲತೆಯನ್ನು ಅರಳಿಸಿದ್ದಾರೆ. ಅವುಗಳು ಬರಹ ರೂಪದಲ್ಲಿ ಅಭಿವ್ಯಕ್ತವಾಗಿವೆ. ಸಾಹಿತ್ಯದ ದಾರಿಗನಿಗೆ ದೀಪಗಳಾಗಿ ಕಾಣಿಸಿಕೊಳ್ಳುತ್ತವೆ.    ‘ನಾನು ಮತ್ತು ಆಕಾಶ’ದಲ್ಲಿ ಕಲೆ ಹಾಕಿರುವ ಬರಹಗಳಲ್ಲಿ ಹೆಚ್ಚಿನವುಗಳು ಅಂಕಣಸ್ವರೂಪದವುಗಳು. ವಿಷಯವನ್ನು ಹಿಗ್ಗಿಸುವ ಜಾಣ್ಮೆ ಲೇಖಕರಿಗಿದ್ದರೂ ಅಂಕಣಬರಹಗಳ ಇತಿ ಮಿತಿಗಳಿಗನುಗುಣವಾಗಿ ಸಂಕ್ಷಿಪ್ತಗೊಳಿಸಿದ್ದಾರೆ. ಬರವಣಿಗೆ ಸರಳವಾಗಿದ್ದರೂ ಪ್ರಬುದ್ಧತೆ ಬಂದುಬಿಟ್ಟಿದೆ. ಸರಸ ನಿರೂಪಣೆ, ಬಿಚ್ಚು ಮನಸ್ಸಿನ ಅಭಿವ್ಯಕ್ತಿ. ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಅಪಾರವಾದ ಓದಿನಿಂದ ಪಡೆದ ಜ್ಞಾನ ಪ್ರಜ್ವಲಿಸುತ್ತದೆ. ಮುನ್ನುಡಿಯಲ್ಲಿ ಬರಹಗಳ ಅಂತರ್ದರ್ಶನವಿದ್ದರೆ ನಲ್ನುಡಿಗಳ ಮೂಲಕ ಡಾ. ಶ್ರೀಧರ ಎಚ್. ಜಿ.ಯವರು ಕುಂಬ್ಳೆಯವರ ವ್ಯಕ್ತಿತ್ವವನ್ನು ಸ್ಪರ್ಶಿಸಿದ್ದಾರೆ.  ಒಟ್ಟು ಬರಹಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಮೊದಲ ಭಾಗ ‘ಭಾವ ಲಹರಿ’ಯಲ್ಲಿ ಏಳು, ಎರಡನೇಯ ಭಾಗ ‘ವಿಮರ್ಶಾ ಲಹರಿ’ಯಲ್ಲಿ ಹತ್ತು, ಕೊನೆಯ’ವ್ಯಕ್ತಿ ಲಹರಿ’ಯಲ್ಲಿ ಎಂಟು ಲೇಖನಗಳಿವೆ. ‘ಜೀವನ ವನದಲ್ಲಿ ಕವನ ಮಯೂರ’ ಶೀರ್ಷಿಕೆಯ ಲೇಖನದಲ್ಲಿ ಕಾವ್ಯ ಮಿಮಾಂಸೆಯಿದೆ. ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಬರೆದದ್ದೆಲ್ಲ ಕಾವ್ಯ ಎಂದುಕೊಂಡವರು ಇದನ್ನು ಓದಲೇಬೇಕು. ವಿದ್ಯಾರ್ಥಿಗಳಿಗಂತೂ ಉಪಯುಕ್ತವಾದ ಲೇಖನವಿದು. ‘ಕಾಲದ ಅನಿರ್ವಚನೀಯತೆ’ಯಲ್ಲಿ ಕಾಲದ ಕುರಿತಾದ ವ್ಯಾಖ್ಯಾನವಿದೆ. ಸೇಡಿಯಾಪು ಅವರ ಬರಹಗಳನ್ನು ಇದು ನೆನಪಿಸುತ್ತದೆ. ‘ಬುದ್ಧ ಮತ್ತು ಅಕ್ಕ’ ಒಂದು ಸಂಶೋಧನಾ ಪ್ರಬಂಧಕ್ಕೆ ಅಗತ್ಯವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡುತ್ತದೆ. ಶ್ರೀಮಂತಿಕೆಯನ್ನು ತ್ಯಜಿಸಿ ಸಾಂಸಾರಿಕತೆಯನ್ನು ಹರಿದು ಆಧ್ಯಾತ್ಮವನ್ನು ಬಾಳಿದ ಗೌತಮ ಬುದ್ಧ ಮತ್ತು ಅಕ್ಕ ಮಹಾದೇವಿ ಭಾರತದ ಬೆಳಕಾದವರು.  ‘ಮನಸು ಹರಿದಾಗ’ ಸಾಹಿತ್ಯದ ಸ್ವಾನುಭವವನ್ನು ನಿವೇದಿಸುತ್ತದೆ. ಎರಡು ಮೂರು ಉಪಕಥೆಗಳ ಮೂಲಕ ಬದುಕಿನ ‘ಭಾವ- ಅಭಾವ’ವನ್ನು ಚಿತ್ರಿಸಿದ ಕುಂಬ್ಳೆಯವರು ರಮಣ ಮಹರ್ಷಿಯ ಸಂದೇಶವನ್ನು ಉಲ್ಲೇಖಿಸುತ್ತಾರೆ. ಸಾಕ್ರಟೀಸ್, ಪ್ಲೇಟೊ, ಕ್ರೀಟೊ ಆಸ್ಕ್ಲಿಪಿಯಸ್ ಮೊದಲಾದವರ ಬಗ್ಗೆ ಕುತೂಹಲ ಮೂಡಿಸುತ್ತಾರೆ. ನಾಟ್ಯ ಚಪಲವಿರುವವರಲ್ಲಿ ಕಾಪಟ್ಯವೂ ಇದೆ ಎನ್ನುವ ಸತ್ಯದ ಕುರಿತಾದ ಚರ್ಚೆ ‘ನಾಟ್ಯ ಲಹರಿ’ಯಲ್ಲಿದೆ. ನಾಟ್ಯ ಎನ್ನುವುದು ಬೇರೆ ಬೇರೆ ಸಂದರ್ಭಗಳಲ್ಲಿ ಅದನ್ನು ರೂಢಿಸಿಕೊಂಡ ಬೇರೆ ಬೇರೆ ವ್ಯಕ್ತಿಗಳಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುವುದನ್ನು ಗಮನಿಸಬಹುದು. ‘ಬೆಳಕಿನ ಹಾದಿ’ ಒಂದು ಸುಂದರ ರೂಪಕ. ಧನಂಜಯ ಅವರು ಪ್ರಾಚೀನ ತುಳು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದವರು. ಈ ಸಂಕಲನದಲ್ಲಿ ಅದಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ. ಅವುಗಳಲ್ಲಿ ಒಂದು ‘ತುಳು ಸಾಹಿತ್ಯ- ಕೆಲವು ಟಿಪ್ಪಣಿಗಳು’. ಇನ್ನೊಂದು ‘ತುಳು ಕಾವ್ಯಕ್ಕೆ ಕಾಸರಗೋಡಿನ ಕೊಡುಗೆ’. ತುಳುವಿಗೆ ಪ್ರಾಚೀನ ಲಿಖಿತ ಸಾಹಿತ್ಯ ಪರಂಪರೆಯಿತ್ತು ಎಂಬುದನ್ನು ಸಾಬೀತು ಪಡಿಸುವ ಬರಹಗಳಿವು. ಕುಂಬ್ಳೆಯವರ ವಿಮರ್ಶಾ ಪ್ರಜ್ಞೆಗೆ ಸಾಕ್ಷಿಯಾಗ ಬಲ್ಲ ಲೇಖನಗಳು ವ್ಯಕ್ತಿಚಿತ್ರಗಳಾಗಿಯೂ, ಕೃತಿ -ಸ್ಮೃತಿಗಳಾಗಿಯೂ ಇಲ್ಲಿ ದಾಖಲಾಗಿವೆ. ಬೇಂದ್ರೆ, ಕಾರಂತ, ಸೇಡಿಯಾಪು,  ಕಯ್ಯಾರ, ಏರ್ಯ, ಅಮೃತ, ಚಿತ್ತಾಲ, ವೇಣುಗೋಪಾಲ ಕಾಸರಗೋಡು, ಜನಾರ್ದನ ಎರ್ಪಕಟ್ಟೆ ಮೊದಲಾದವರ ಕೃತಿಗಳ ಅನನ್ಯತೆಯನ್ನು ಅಧ್ಯಯನಾತ್ಮಕವಾಗಿ  ವಿಶ್ಲೇಷಿಸಿದ್ದಾರೆ.  ‘ಹೊಸ ಕಾವ್ಯದ ಹೆಜ್ಜೆ’ ಲೇಖನದಲ್ಲಿ ನವೋದಯ, ನವ್ಯ,  ನವ್ಯೋತ್ತರ ಕಾಲಘಟ್ಟದ ಆಶಯ ಮತ್ತು ಆಕೃತಿಗಳ ಬಗ್ಗೆ ಚರ್ಚಿಸಲಾಗಿದೆ. ಅಡಿಗ, ಎಕ್ಕುಂಡಿ, ರಾಮಾನುಜನ್, ತಿರುಮಲೇಶ್ ಮೊದಲಾದವರ ಸತ್ವವನ್ನು ಮೈಗೂಡಿಸಿಕೊಂಡು ತನ್ನದೇ ಆದ ಹೊಸ ಕಾವ್ಯ ಮಾರ್ಗವನ್ನು ರೂಪಿಸಿದ ಡಾ. ರಾಧಾಕೃಷ್ಣ ಬೆಳ್ಳೂರು ಅವರ ‘ಅಗ್ನಿ ಜಿಹ್ವಾ’ ವನ್ನು ಪರಾಮರ್ಶಿಸಲಾಗಿದೆ. ಶಿವರಾಮ ಕಾರಂತರು ತಾವು ಪರಂಪರೆಯನ್ನು ಮುರಿಯುವುದರ ಮೂಲಕ ಪರಂಪರೆಯ ಬಗೆಗೆ ಹೊಸ ಎಚ್ಚರವನ್ನು ಮೂಡಿಸಿದವರು. ಈ ಮಾತಿಗೆ ಪೂರಕವಾಗುವಂತೆ ಕಾರಂತರು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಹೊಸ ಪ್ರಯೋಗಗಳ ಬಗ್ಗೆ ‘ಯಕ್ಷಗಾನ ಮತ್ತು ಕಾರಂತ’ ಲೇಖನದಲ್ಲಿ ತಿಳಿಸಲಾಗಿದೆ.   ‘ಸೇಡಿಯಾಪು: ಒಂದು ನೆನಪು’ ಲೇಖನದಲ್ಲಿ ಸೇಡಿಯಾಪು ಅವರ ಬರವಣಿಗೆಯನ್ನು ಸೃಜನಶೀಲ, ಶಾಸ್ತ್ರೀಯ ಮತ್ತು ವೈಯುಕ್ತಿಕ ನೆಲೆಯಲ್ಲಿ ಸ್ಥೂಲವಾಗಿ ಗುರುತಿಲಾಗಿದೆ.  ಆ ಪ್ರಖಾಂಡ ಪಂಡಿತನ ನೆನಪಿನಲ್ಲಿ ಕುಂಬ್ಳೆ ಬರೆದ ಭಾವನಾತ್ಮಕ ಕವನವನ್ನು ಅಳವಡಿಸಲಾಗಿದೆ. ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಬಿತ್ತರಗೊಂಡ ವಿಚಾರ ಲಹರಿಯ ಟಿಪ್ಪಣಿ ‘ವೃತ್ತ್ತಿ-ಪ್ರವೃತ್ತಿ’. ಡಾ. ನಾ ಮೊಗಸಾಲೆ, ಈಶ್ವರಯ್ಯ, ಚೊಕ್ಕಾಡಿ, ವೈದೇಹಿ,  ಮಾವಿನಕುಳಿ ಹೀಗೆ ಸಾಹಿತ್ಯ ಕಲಾ ಪ್ರಕಾರದ  ಪಂಚರನ್ನು ಪರಿಚಯಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಚುಟುಕು ಪ್ರಕಾರದ ಸ್ಥಾನ-ಮಾನ ಬಗೆಗಿನ ‘ಚುಟುಕು ಕನ್ನಡದ ಸ್ಫಟಿಕ’  ಅಧ್ಯಯನ ಯೋಗ್ಯ. ಕನ್ನಡ ಕಾವ್ಯ ಪ್ರಪಂಚವನ್ನು ಸಹೃದಯ ಭಾವ ಪ್ರಪಂಚಕ್ಕೆ ಧಾರೆಯೆರೆದ ಗಮಕಿ ಶಕುಂತಲಾಬಾಯಿ ಕುರಿತಾದ ಬರಹವೂ ರಸಾರ್ದ್ರವಾಗಿದೆ.  ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಫ್ರೊ.ವೇಣುಗೋಪಾಲ ಕಾಸರಗೋಡು ಗಡಿನಾಡಿನ ಎರಡು ಕಣ್ಣುಗಳು. ಸಾಹಿತ್ಯ ರಚನೆ ಮತ್ತು ಸಂಘಟನೆ, ಕನ್ನಡ ಹೋರಾಟಗಳಲ್ಲೂ ಬದುಕನ್ನು ಕಳೆದವರು. ಮಹತ್ವದ ಸಾಹಿತ್ಯ ಕೃತಿಗಳನ್ನು ರಚಿಸಿ ಅಖಿಲ ಕರ್ನಾಟಕದ ಗಮನ ಸೆಳೆದವರು. ಕಯ್ಯಾರರ ಶಿಶುಗೀತೆಗಳ ಬಗ್ಗೆ ಕುಂಬ್ಳೆಯವರು ಪರಾಮರ್ಶಿಸಿದ್ದಾರೆ. ಅದೇ ರೀತಿ ವೇಣುಗೋಪಾಲರ ‘ದೃಷ್ಟಿ ಮತ್ತು ಸೃಷ್ಟಿ’ಗಳ ಕುರಿತಾಗಿ ಹೊಸ ಬೆಳಕು ನೀಡಿದ್ದಾರೆ. ಔಚಿತ್ಯ ಪೂರ್ಣ ಮೌಲಿಕ ಬರಹಗಳಿವು.      ‘ನಾನು ಮತ್ತು ಆಕಾಶ’ ಪ್ರಕಟವಾದಾಗ ಡಾ.ಧನಂಜಯ ಕುಂಬ್ಳೆಯವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಆ ಬಳಿಕ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ಸೇರಿ ಅದೇ ವೃತ್ತಿಯಲ್ಲಿ ಮುಂದುವರಿದರು. ಈಗ ಕೆಲವು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಪ್ರಕೃತ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರು. ಬೋಧನೆ, ಶೋಧನೆ, ಸಂಘಟನೆ,  ಕಾರ್ಯಕ್ರಮಗಳ ಆಯೋಜನೆ, ನಿರೂಪಣೆ, ನಿರಂತರ ಸಾಹಿತ್ಯ ರಚನೆಯ ಮೂಲಕ ನಾಡಿನಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಲ್ಕು ಕವನ ಸಂಕಲನ, ವಿಮರ್ಶೆ, ವ್ಯಕ್ತಿಚಿತ್ರ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ಕ್ಕಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಸುದೀರ್ಘ ಕಾಲದ ಅಧ್ಯಯನ ಮತ್ತು ಅನುಭವದಿಂದ ಅವರ ಮನಸ್ಸು ಪಕ್ವವಾಗಿದೆ. ದೇಹ ಪುಷ್ಟವಾಗಿದೆ. ಸ್ನೇಹ (ವಲಯ) ವಿಸ್ತಾರವಾಗಿದೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ನೀಡುವ ಶಕ್ತಿ ಅವರಿಗಿದೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ –

ಪುಸ್ತಕ ಸಂಗಾತಿ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ನೆನಪು ಮರೆಯಲು ಮದಿರೆಯ ಸಂಗ ಮಾಡಿದ್ದೆ ಸಖಿವ್ಯಸನ ತೊರೆಯಲು ಸುರೆಯ ಹಂಗ ಬಿಡದಾಗಿದೆ ಸಖಿ ಮಧುವಿನ ದಾಸನಾಗಿ ದಾಸ್ಯದಿ ಬದುಕ ನೂಕುತಿರುವೆತುಟಿಯಂಚಿಗಿಟ್ಟ ಬಟ್ಟಲಿನಲ್ಲಿ ನೀನು ಕಾಣುತಿರುವೆ ಮರೆಯದಾಗಿದೆ ಸಖಿ ನೀರವ ಮೌನದ ಕತ್ತಲೆಯಲಿ ಸಿಗಬಹದೆಂದು ಹುಡುಕಿರುವೆಶರಾಬಿನ ಸಿಸೆಯೊಳಗೂ ನಿನ್ನದೆ ಬಿಂಬವ ಕಾಣುತಿದೆ ಸಖಿ ಮರೆಯಲಾಗದ ಹವ್ಯಾಸ ನನ್ನನು ಬೆಂಬಿಡದೆ ಕಾಡಿದೆಅವಳನು ಮರೆಯುವ ಮಾತಾಡಿಮಿಣುಕು ದೀಪದ ಮುಂದೆ ಕುಳಿತಿದ್ದೆ ಸಖಿ ಸುರಪಾನದ ಸುಖದಲಿ ತೇಲಾಡಿ ನೊಂದ ಮರುಳನು ಮರುಗುತಿರುವನುಆದದ್ದೇಲ್ಲ ಮರೆತು ಹೊಸಬಾಳ್ವೆಗೆ ಹೊಂದಿ ನಡೆಯ ಬೇಕೆಂದಿದ್ದೆ ಸಖಿ ***********

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಮರಳಿನ ಕಥೆ ರಮೇಶ್ ನೆಲ್ಲಿಸರ ತುಂಗಾನದಿಯ ನೀರನ್ನು ಕುಡಿದೊ ಅಥವಾ ಬೆಳೆಗಳಿಗೆ ಹಾಯಿಸಿ ಬದುಕು ಕಟ್ಟಿಕೊಂಡವರು ಹಲವರಾದರೆ ತುಂಗೆಯ ಒಡಲ ಬಗೆದು ಮರಳು ತೆಗೆಯುವುದರ ಮೂಲಕ ಸಿರಿತನದ ಸುಪ್ಪತ್ತಿಗೆಯನ್ನು ಅನುಭವಿಸುತ್ತಿರುವವರು ಕೆಲವೇ ಕೆಲವರು, ರಾಜಕೀಯದ ವಾಸನೆ ತುಂಗೆಯ ಎಡಬಲದ ಮರಳು ಕ್ವಾರಿಗಳ ಪ್ರತಿ ಮರಳಿನ ಕಣದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ. ಅಂದ ಹಾಗೆ ನಾನು ಹೇಳ ಹೊರಟಿದ್ದು ಈ ಮರಳು ಮಾಫಿಯಾದ ಕುರಿತು ಅಲ್ಲ!, ಈ ಮರಳು ದಂಧೆಗೆ ಅಂಟಿಕೊಂಡಿರುವ ಕೆಲಸಗಾರರ ಕುರಿತು, ಆಗ 2002-03 ರ ಸಮಯ ತೀರ್ಥಹಳ್ಳಿಯಿಂದ ಗಾಜನೂರು ಡ್ಯಾಮಿನ ಇಕ್ಕೆಲಗಳಲ್ಲಿಯೂ ಮರಳು ಕ್ವಾರಿಗಳ ಗಿಜಿಗಿಜಿ, ಪ್ರತಿ ಮರಳು ಕ್ವಾರಿಗಳಲ್ಲೂ ನೂರಾರು ಲಾರಿಗಳ ಸಾಲು, ಮರಳಿನ ಧೂಳಿಗೆ ಹಸಿರು ಬಿದಿರುಗಳ ಬಣ್ಣ ಮುಚ್ಚಿಹೋಗಿತ್ತು, ಪ್ರತಿ ಕ್ವಾರಿಯಲ್ಲೂ ಒಂದು ಟೀ- ಕಾಫಿ ಹಾಗೂ ಮೀನಿನ ಊಟದ ಹೋಟೆಲ್ಲುಗಳು. ಡ್ರೈವರ್ರುಗಳು ಲಾರಿಗಳನ್ನು ಲೋಡಿಗೆ ಬಿಟ್ಟು ಅರ್ಧರ್ಧ ಎಣ್ಣೆಯನ್ನು ಏರಿಸಿ ನೆರಳಿನ ಮರದ ಕೆಳಗೆ ಇಸ್ಪೀಟು ಎಲೆಗಳ ಆಟದಲ್ಲಿ ಮಗ್ನರಾಗುತ್ತಿದ್ದದ್ದು ಮಾಮೂಲು ನೋಟವಾಗಿತ್ತು, ಆಟದ ಮಧ್ಯಕ್ಕೆ ಜಗಳಗಳು ಎದ್ದು ಮಾರಿಮಾರಿಯಂತು ಸಾಮಾನ್ಯದ ದೃಶ್ಯ, ಮರಳು ಕ್ವಾರಿಯ ಮಾಲಿಕ ಯಾರೋ ಒಂದಿಷ್ಟು ಓದಿರುವ ಇಬ್ಬರು ಹುಡುಗರನ್ನು ಬಿಟ್ಟು ಮರಳಿನ ರಾಯಾಲ್ಟಿ ವಸೂಲಿ ಮಾಡುಸುತ್ತಿದ್ದರು. ಮರಳು ಕ್ವಾರಿಯ ಮಾಲಿಕರಿಗೂ ಲಾರಿಗಳ ಮಾಲಿಕರ ಒಳ ಒಪ್ಪಂದದಿಂದಾಗಿ ಸರ್ಕಾರದ ಪಾಲು ಸರ್ಕಾರಕ್ಕೆ ಮುಟ್ಟುವುದು ಅಷ್ಟಕಷ್ಟೆ!. ರಾತ್ರಿಹಗಲು ಮರಳು ನಗರಗಳ ಹೊಟ್ಟೆಯನ್ನು ಅನಾಮತ್ತಾಗಿ ಸೇರುತ್ತಲೇ ಇತ್ತು. ಮಂಡಗದ್ದೆಯ ನೆಲ್ಲಿಸರದ ಹದ್ದುಬಂಡೆಯ ಬಳಿ ಹೊಳೆಯ ಆಚೆ ಒಂದು ಮರಳು ಕ್ವಾರಿಯಿತ್ತು, ಅದು ಚಿಕ್ಕಮಗಳೂರಿಗೆ ಸೇರುತ್ತದೆಯಾದರೂ ಮರಳು ತುಂಬುವ ಲಾರಿಗಳು ಮತ್ತು ಅದರ ಮರಳು ಮಾತ್ರ ಶಿವಮೊಗ್ಗ ನಗರದ ಹೊಟ್ಟೆಗೆ ದಕ್ಕುತ್ತಿತ್ತು. ನಾವು ನೆಲ್ಲಿಸರದ ಮೀನುಗಾರಿಗೆ ಮರಳುಕ್ವಾರಿಯಿಂದ ಒಂದಿಷ್ಟು ಅನುಕೂಲವೇ ಇತ್ತು, ನಾವು ಹಿಡಿಯುವ ಮೀನಿಗೆ ಅರ್ಧ ನಶೆಯೇರಿದ ಡ್ರೈವರ್ರುಗಳು ಮತ್ತು ಮರಳು ಹೊರುವವರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದರಿಂದ ನಮಗೆ ಊರೂರು ತಿರುಗಿ ಮೀನು ಮಾರುವ ತಾಪತ್ರಯ ತಪ್ಪಿಹೋಗಿತ್ತು. ನಾನಾಗ ಪಿಯುಸಿ ಓದುತ್ತಿದ್ದೆ ಆಗಾಗ ಅಣ್ಣನ ಜೊತೆಗೆ ಕುಲಕಸುಬಾದ ಮೀನುಗಾರಿಕೆಗೆ ಹೋಗುತ್ತಿದ್ದೆ, ಆಗ ಮೀನು ಹಿಡಿದು ತೆಪ್ಪವನ್ನು ಮರಳಿನ ಮೇಲೆ ಎಳೆದು ಅಲ್ಲೆ ಕ್ವಾರಿಯಲ್ಲಿದ್ದ ಹೋಟೆಲ್ ನ ಬಳಿ ಹೋದರೆ ಸಾಕು ಮೀನಿಗಾಗಿ ಜನ ಮುತ್ತಿಕೊಳ್ಳುತ್ತಿದ್ದರು , ಆದರೆ ಮೀನೊ ಒಂದೋ ಎರಡೋ ಕೆಜಿ ಇರುತ್ತಿದ್ದವು,ಹೆಚ್ಚಿನ ಬೆಲೆಗೆ ಅವನು ಕೊಟ್ಟು ಹೋಟೆಲ್ಲಿನಲ್ಲಿ ತಿಂಡಿ ಕಾಫಿ ಮುಗಿಸುತ್ತಿದ್ದೆವು. ಅಣ್ಣ ಕೆಲವೊಮ್ಮೆ ಪರಿಚಯದ ಡ್ರೈವರ್ರುಗಳ ಜೊತೆ ಯಾವುದಾದರೂ ಲಾರಿಯನ್ನು ಹತ್ತಿಕೊಂಡು ಶಿವಮೊಗ್ಗಕ್ಕೆ ಹೋಗುತ್ತಿದ್ದ, ಮರಳು ಅನ್‍ಲೋಡ್ ಮಾಡಿ ಬರುವ ಬಾ ಎಂದು ಅವನನ್ನು ಕರೆಯುತ್ತಿದ್ದರು ನಾನು ಅವನು ಬರುವವರೆಗೆ ಅಲ್ಲೇ ಹೋಟೆಲ್‍ನಲ್ಲಿ ಕೂತಿರುತ್ತಿದ್ದೆ. ಹೀಗೆ ಹೀಗೆ ಕೂತಿರುವಾಗ ಹಲವು ಜನರು ಮಾತನಾಡಿಸುತ್ತಿದ್ದರು, ಅಣ್ಣನ ಪರಿಚಯದ ಡ್ರೈವರ್ರುಗಳು ಏನಾದರು ತಿಂಡಿ ಕೊಡಿಸುತ್ತಿದ್ದರು, ಹೀಗೆ ಬೇಸಿಗೆ ರಜೆಯಲ್ಲಿ ನನಗೂ ಹಲವರು ಪರಿಚಯವಾದರು ಅವರಲ್ಲಿ ರಾಜಣ್ಣ ಕೂಡ ಒಬ್ಬರು ಮಧ್ಯವಯಸ್ಕರಾದ ಅವರು ನನ್ನನ್ನು ಮಗನಂತೆಯೇ ಕಾಣುತ್ತಿದ್ದರು, ನನಗೋ ಅವರಿವರ ಕಥೆಗಳನ್ನು ಕೇಳುವುದು ಎಂದರೆ ಇಷ್ಟ. ಅವರ ಊರಿನ ಬಗ್ಗೆ ಹಾಗೂ ಮನೆಯವರ ಕುರಿತು ಕೇಳುತ್ತಿದ್ದೆ, ಪ್ರಾರಂಭದಲ್ಲಿ ಏನನ್ನೂ ಹೇಳದಿದ್ದರೂ ನಂತರ ಅವರಾಗೆ ಮಾತನಾಡುತ್ತಿದ್ದರು. ರಾಜಣ್ಣನ ಊರು ಗದಗದ ಬಳಿಯ ರೋಣದ ಬಳಿಯ ಯಾವುದೋ ಹಳ್ಳಿ, ಹದಿನಾರು ತುಂಬುವಾಗಲೇ ಅವರಿಗೆ ಮೊದಲನೇ ಮದುವೆಯಾಯ್ತಂತೆ, ಗಂಡ- ಹೆಂಡತಿ ಇಬ್ಬರೂ ಸಣ್ಣವರು ತಾಯಿ ಇರುವವರೆಗೆ ಎಲ್ಲವೂ ಸರಿಯಿತ್ತು , ಅಬ್ಬೇಪಾರಿ ತಿರುಗುತ್ತಿದ್ದ ಇವರು, ತಾಯಿ ಸತ್ತಾಗ ದುಡಿಯಲು ಹೋಗಲೇ ಬೇಕಾಯ್ತು! ಆದರೆ ಹೊಲದಲ್ಲಿ ಗೇಯಲು ಬರದು ಹಲವು ತಿಂಗಳುಗಳು ಹೀಗೆ ಕಳೆದವು ಹೆಂಡತಿಗೆ ಅದೇನು ಅನಿಸಿತೋ ಏನೋ ಗಾರೆ ಕೆಲಸದವನ ಜೊತೆ ಓಡಿ ಹೋದವಳ ಸುಳಿವೇ ಸಿಗಲಿಲ್ಲ, ಮರ್ಯಾದೆಗೆ ಅಂಜಿ ಸಿಕ್ಕಿದ ಲಾರಿಯನ್ನು ಹತ್ತಿ ಶಿವಮೊಗ್ಗಕ್ಕೆ ರಾಜಣ್ಣ ತಲುಪಿದ, ಅದೇ ಲಾರಿಯ ಕ್ಲೀನರ್ ಆಗಿ ಸೇರಿಕೊಂಡ ,ಮಂಡಿಗೆ ಅಡಿಕೆ ಸಾಗಿಸುವ ಲಾರಿ ಅದು ,ಅವನಿಂದಲೇ ರಾಜಣ್ಣ ಡ್ರೈವಿಂಗ್ ಮಾಡುವುದನ್ನೂ ಕಲಿತ. ಲಾರಿಯ ಮಾಲಿಕ ಅಲ್ಲಿಲ್ಲಿ ಸಾಲಮಾಡಿಕೊಂಡು ಫೈನಾನ್ಸ್ ನಿಂದ ಹಣ ಪಡೆದು ಲಾರಿ ಕೊಂಡಿದ್ದ, ಸರಿಯಾಗಿ ಲಾರಿಯ ಸಾಲದ ಕಂತನ್ನೂ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ, “ಇಂದು ಒಮ್ಮೆಗೆ ಎಲ್ಲ ಸಾಲವನ್ನು ತೀರಿಸುತ್ತೇನೆ” ಎಂದು ಹೋದವನು ಹೆಣವಾಗಿಯೇ ಹಿಂದಿರುಗಿದ್ದು. ಶಿವಮೊಗ್ಗದ ತುಂಗಾ ಸೇತುವೆಯ ಮೇಲಿಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಪಾಪ ಆತ. ಹೇಗೂ ಲಾರಿಯನ್ನು ಓಡಿಸಿ ಮಾಲಿಕರ ಮನೆಗೆ ಹಣ ಕೂಡಿಸಿಕೊಡುವುದು ಎಂದು ರಾತ್ರಿ – ಹಗಲು ದುಡಿಯುತ್ತಿದ್ದವನಿಗೆ ಮಾಲಿಕನ ಹೆಂಡತಿಯ ಜೊತೆಗೆ ಸಂಬಂಧವೂ ಬೆಳೆದೋಯ್ತು!, ಎಲ್ಲರಿಗೂ ವಿಷಯ ತಿಳಿದು ರಾಜಣ್ಣನನ್ನು ಓಡಿಸಿದರು. ಅದಾಗಲೇ ಶಿವಮೊಗ್ಗ ಬೆಳೆಯುತ್ತಿತ್ತು ಮರಳು ಲಾರಿಗಳು ಎಗ್ಗಿಲ್ಲದೆ ಓಡಾಡುವುದಕ್ಕೆ ಪ್ರಾರಂಭ ಮಾಡಿದವು, ರಾಜಣ್ಣ ಮಂಡ್ಲಿಯ ಹುಸೇನ್ ಸಾಬರ ಬಳಿ ಕೆಲಸಕ್ಕೆಂದು ಸೇರಿದನಂತೆ , ಒಂದೆರಡು ವರ್ಷದ ಬಳಿಕ ಸಾಬರೆ ಒಂದು ಹುಡುಗಿಯನ್ನು ಇವನಿಗೆ ಕಟ್ಟಿ ಸಕ್ರೆಬೈಲಿನಲ್ಲಿ ಒಂದು ಬಾಡಿಗೆ ಮನೆ ಗೊತ್ತುಮಾಡಿ ಬಿಟ್ಟರು, ರಾಜಣ್ಣ ಆಗಲೇ ಕುಡಿತದ ದಾಸನಾಗಿದ್ದ ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಈ ನಡುವೆ ಒಂದು ಹೆಣ್ಣು ಮಗವೂ ಆಯಿತು, ಆದರೂ ರಾಜಣ್ಣ ಬದಲಾಗಲಿಲ್ಲ, ಈ ವಿಷಯ ಅದು ಹೇಗೋ ಹುಸೇನ್ ಸಾಬರಿಗೆ ತಿಳಿದು ಇವನಿಗೆ ನಾಲ್ಕು ಬಾರಿಸಿ ಬುಧ್ದಿ ಹೇಳಿ ಹೋದರು. ರಾಜಣ್ಣನಿಗೆ ಅವಮರ್ಯಾದೆ ಆದಂತಾಗಿ ಹೆಂಡತಿಗೂ ಮಗುವಿಗೂ ಕೂಡಿ ಹಾಕಿ ಮನಸೊ ಇಚ್ಚೆ ಹೊಡೆದ, ರಾತ್ರಿ ಬೆಳಗಾಗುವ ವರೆಗೆ ಇವನ ಹೆಂಡತಿ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು. ಪೋಲಿಸರು ರಾಜಣ್ಣನಿಗೆ ಒದ್ದು ನಾಲ್ಕಾರು ನಾಲ್ಕಾರು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದವನಿಗೆ ಹುಸೇನ್ ಸಾಬರು ಕೈಬಿಡಲಿಲ್ಲ, ಡ್ರೈವರ್‍ಗಳು ಸಿಗುವುದೇ ಅಪರೂಪವಾಗಿದ್ದರಿಂದ ಮತ್ತೆ ಮರಳುಲಾರಿಯ ಪಯಣವೂ ಆರಂಭವಾಯಿತು, ಹೆಂಡತಿ-ಮಗುವನ್ನು ನೆನೆದು ಈಗಲೂ ಕಣ್ಣೀರಾಗುತ್ತಾರೆ. ದುಡಿದ್ದದ್ದು ಏನು ಮಾಡುತ್ತೀರಿ ಕೇಳಿದೆ? ಕುಡಿಯುವುದು, ತಿನ್ನುವುದು ಸಾಯಲೂ ಆಗದೆ ಬದುಕಲೂ ಆಗದೆ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟರು. ರಾಜಣ್ಣನ ಹಾಗೆ ಕ್ವಾರಿಯ ಪ್ರತಿಯೊಬ್ಬರದು ಒಂದೊಂದು ಕಥೆ ಸಿಗಬಹುದು, ರಾತ್ರಿ- ಹಗಲು ಕೆಲಸ ಹಲವರು ಮನಗೇ ಹೋಗುತ್ತಿರಲಿಲ್ಲ, ಕ್ವಾರಿಯಲಿ ರಾತ್ರಿ ಕೈಬಳೆಗಳ ಸದ್ದು ಸಾಮಾನ್ಯವಾಯಿತು! , ಅಕ್ರಮ ಮರಳುಗಾರಿಕೆ ಆರಂಭವಾಗಿ ನದಿಯ ಒಡಲಿನಿಂದಲೇ ಮೋಟಾರುಗಳ ಮೂಲಕ ಮರಳು ತೆಗೆಯುವುದು ಆರಂಭವಾಯಿತು, ವರುಷಗಳು ಕಳೆದವು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರೋ ಹೇಳಿದರು, ಏಕೆ? ಹೇಗೆ? ಯಾರ ಬಳಿಯೂ ಉತ್ತರವಿರಲಿಲ್ಲ, ಖಿನ್ನತೆಯೆಂಬ ಖಾಯಿಲೆ ರಾಜಣ್ಣನ ಅಂಗಾಂಗವೆಲ್ಲ ವ್ಯಾಪಿಸಿತ್ತು! ಈಗಲೂ ಮರಳು ಮಾಫಿಯಾದ ಸುದ್ಧಿಗಳು ಪೇಪರ್‍ನಲ್ಲಿ ಕಂಡಾಗ ಹಳೆಯ ನೆನಪುಗಳು ಒತ್ತರಿಸಿ ಬರುತ್ತದೆ. ತುಂಗೆಯ ಒಡಲ ಮರಳ ಬಗೆದು ಶ್ರೀಮಂತರಾಗುತ್ತಿರುವ ಜನರ ನಡುವೆ ಅವರಿಗಾಗಿಯೇ ಹಗಲಿರುಳು ದುಡಿದು ಅಳಿದು ಹೋಗುವವರು ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ, ಅಂದ ಹಾಗೆ ಇವರ ಲೆಕ್ಕ ಯಾರಿಗೂ ಬೇಕಾಗಿಯೂ ಇಲ್ಲ… ************

ಕಥಾಯಾನ Read Post »

You cannot copy content of this page

Scroll to Top