ದಿಕ್ಸೂಚಿ

ಯೋಜನೆಯ ಮೇಲೆ ದೃಷ್ಟಿ ಇರಿಸಿ ದೊಡ್ಡ ಗೆಲುವು ಸಾಧಿಸಿ

Enjoying a Large Victory Stock Footage Video (100% Royalty-free ...

ಜಯಶ್ರೀ ಜೆ.ಅಬ್ಬಿಗೇರಿ

ಇದೀಗ ನಾ ಹೇಳ ಹೊರಟಿರುವುದು ಜಗತ್ಪ್ರಸಿದ್ಧ ತೇನ್ ಸಿಂಗನ ಕಥೆ ಆಗ ಆತ ಇನ್ನೂ ಚಿಕ್ಕವ. ಮನೆಯಂಗಳದಲ್ಲಿ ಕುಳಿತು ಸದಾ ಎವರೆಸ್ಟನ್ನೇ ದಿಟ್ಟಿಸುತ್ತಿದ್ದ. ಪುಟ್ಟ ಬಾಲಕನನ್ನು ಎವರೆಸ್ಟ್ ಪ್ರತಿದಿನವೂ ಪುಳಕಗೊಳಿಸುತ್ತಿತ್ತು. ಆತನನ್ನು ಕಂಡ ತಾಯಿ’ಅದೇಕೋ ದಿನವೂ ಎವರೆಷ್ಟನ್ನೇ ದಿಟ್ಟಿಸಿ ನೋಡುತ್ತಿಯಾ?’ ಎಂದು ಕೇಳಿದಳು.’ಅಮ್ಮಾ ಈ ನನ್ನ ಪುಟ್ಟ ಕಾಲುಗಳಿಂದ ಆ ದೊಡ್ಡ ಹಿಮಪರ್ವತದ ತುದಿಯನ್ನು ಮುಟ್ಟಬಲ್ಲೆನೆ? ಎಂದು ಯೋಚಿಸುತ್ತಿದ್ದೇನೆ.’ ಅದಕ್ಕೆ ತಾಯಿ ‘ಮಗೂ,ಅದು ಯಾವ ಹಕ್ಕಿಯೂ ಹಾರಲಾರದಷ್ಟು  ಎತ್ತರದ ಶಿಖರ ಆದರೆ ನೀನು ಮನಸ್ಸು ಮಾಡಿದರೆ ಅದರ ತುತ್ತ ತುದಿಯನ್ನು ಮುಟ್ಟಬಲ್ಲೆ.’ಎಂದಳು. ತಾಯಿಯ ಸ್ಪೂರ್ತಿಯ ಮಾತಿಗೆ ತೇನ್ ಸಿಂಗ್ ಹಿಮಾಲಯದ ನೆತ್ತಿಯ ಮೇಲೆ ನಿಂತು ನಗು ಚೆಲ್ಲಿದ್ದು ಈಗ ಇತಿಹಾಸ.

ಕೆಲಸಕ್ಕೆ ಅಡೆ ತಡೆ:

ಈ ಮೇಲಿನ ನಿಜ ಜೀವನದ ಕಥೆ ಯೋಜನೆಗೆ ಪೂರಕವಾದ ಯಶಸ್ಸಿಗೆ ಹಿಡಿದ ಕನ್ನಡಿ. ಯೋಜನೆ ಇಲ್ಲದೇ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಧಾವಂತದ ಕಾಯಿಲೆ . ‘ದಿನಾಲೂ ಅಂದು ಕೊಳ್ತಿನಿ ಇವತ್ತು ಆ ಕೆಲಸ ಮಾಡಬೇಕು, ಈ ಕೆಲಸ ಮಾಡಿಯೇ ಬಿಡಬೇಕು ಅಂತ ಹೀಗೇ ಎಷ್ಟೋ ದಿನಗಳಿಂದ ನೆನೆಗುದ್ದಿಗೆ ಬಿದ್ದ ಕೆಲಸಗಳ ಬುಟ್ಟಿ ಮನದ ಮೂಲೆಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುತ್ತೆ ಅದು ವಿಲೇವಾರಿಯಾಗುವ ಸಾಧ್ಯತೆ ಕಮ್ಮಿ. ವಿಪರ್ಯಾಸವೆಂಬಂತೆ ದಿನದಿಂದ ದಿನಕ್ಕೆ ಇನ್ನೂ ಹೆಚ್ಚುತ್ತಲೇ ಹೋಗುತ್ತದೆ ಹೊರತು ಕಡಿಮೆ ಆಗುವುದಿಲ್ಲ. ಇದೇಕೆ ಹೀಗಾಗುತ್ತಿದೆ ಎಂದು ವಿಚಾರ ಮಾಡಲು ಒಂದು ಕ್ಷಣವನ್ನು ವ್ಯಯಿಸಲೂ ಪುರುಸೊತ್ತಿಲ್ಲ. ಅಷ್ಟು ಕೆಲಸಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದೇವೆಯೇ? ಛೇ! ಇಲ್ಲವೇ ಇಲ್ಲ ರಾತ್ರಿ ಮಲಗುವ ಮುನ್ನ ಉಪಯುಕ್ತ ಕೆಲಸಗಳ ಪಟ್ಟಿ ಮಾಡಿದರೆ ದಿನಕ್ಕೊಂದೆರಡು ಮಾಡಿದ್ದರೆ ಅದು ಜಾಸ್ತಿನೇ ಅಂದುಕೊಂಡು ನಮಗೆ ನಾವೇ ಬೆನ್ನು ಚಪ್ಪರಿಸಿಕೊಳ್ಳಬೇಕು. ಆ ರೀತಿ ಕೆಲಸದ ಪ್ರೀತಿ. ಕೆಲಸದ ಪ್ರೀತಿ ಕಡಿಮೆ ಇದೆ ಅಂತೇನಿಲ್ಲ. ಮಾಡುವ ಕೆಲಸಗಳಿಗೆ ಅಡೆ ತಡೆ ಬಹಳ ಆಗುತ್ತಿವೆ ಅನ್ನೋದು ಕುಳಿತು ವಿಚಾರ ಮಾಡಿದಾಗ ತಿಳಿಯೋ ವಿಷಯ.’

ಮನೆ ಕಟ್ಟೋಕೆ ಯೋಜನೆ;

 ಹಾಗಿದ್ರೆ ದಿನದ ಬಹು ಸಮಯ ಅನುಪಯುಕ್ತ ಕೆಲಸಗಳಲ್ಲಿ ಜಾರಿ ಹೋಗುತ್ತಿದೆ ಅಂದಂಗಾಯ್ತು ಅಲ್ಲವೇ? ಯಾವ ಸಂಪತ್ತು ಕೊಟ್ಟರೂ ಮರಳಿ ಸಿಗದ ಅಮೂಲ್ಯ ಸಮಯ ಸಂಪತ್ತನ್ನು ಕಳೆದುಕೊಳ್ಳುವುದು ಮನಸ್ಸಿಗೆ ತಿಳಿಯುತ್ತಿದ್ದರೂ ಅದಕ್ಕೆ ಏನೂ ಕ್ರಮಗಳನ್ನು ತೆಗೆದುಕೊಳ್ಳದೇ ಅಸಹಾಯಕರಂತೆ ಕೈ ಕಟ್ಟಿ ಕುಳಿತಿರಲು ಕಾರಣವೇನು? ಎಂಬ ಪ್ರಶ್ನೆ ನಮ್ಮ ಮುಖಕ್ಕೆ ಮುಖ ಕೊಟ್ಟು ನಿಂತರೆ ನಿರುತ್ತರರಾಗುತ್ತೇವೆ. ಕೆಲವು ಬಾರಿ ಯೋಜನೆ ಹಾಕಿಕೊಂಡರೆ ಸರಿ ಹೋಗಬಹುದು ಎನ್ನುವ ಯೋಚನೆಯೂ ಹೊಳೆಯುತ್ತದೆ. ಆದರೆ ಮನೆ ಕಟ್ಟೋಕೆ ದೊಡ್ಡ ದೊಡ್ಡ ಭವನಗಳನ್ನು ಮತ್ತು ಆಣೆಕಟ್ಟು ಕಟ್ಟೋಕೆ ಮಾತ್ರ ಯೋಜನೆ ಬೇಕು ಎನ್ನುವುದು ಬಹಳಷ್ಟು ಜನರ ತಲೆಯಲ್ಲಿ ಬೇರೂರಿದ ನಂಬಿಕೆ. ಹೀಗಾಗಿ ಯೋಜನೆ ಇಲ್ಲದ ಬದುಕು ಮರಳುಗಾಡಿನ ಮರಳಿನಂತೆ ಬಿದ್ದಲ್ಲೇ ಬಿದ್ದು ಹೋಗುತ್ತದೆ. ಆರಕ್ಕೇರುವುದಿಲ್ಲ ಮೂರಕ್ಕಿಳಿಯುವುದಿಲ್ಲ. ಯೋಜನೆಗಳಿಲ್ಲದ ಬದುಕು ಗಾಳಿಗಿಟ್ಟ ದೀಪದಂತೆ ಅಲ್ಲಾಡುತ್ತಲೇ ಇರುತ್ತದೆ. ಬದುಕಿಗೆ ಭದ್ರ ಬುನಾದಿ ಹಾಕುವುದೇ ಯೋಜನೆ. ಹಾಗಾದರೆ  ಅಚ್ಚು ಕಟ್ಟಾದ ಕಾರ್ಯ ನಿರ್ವಹಣೆಗೆ, ಗೆಲುವಿಗೆ ಯೋಜನೆ ಅದೆಷ್ಟು ಮುಖ್ಯ ಅದನ್ನು ಅನುಷ್ಠಾನಕ್ಕೆ ತರುವುದು ಹೇಗೆ ಎಂಬುದನ್ನು ತಿಳಿಯಬೇಕೆ? ಹಾಗಿದ್ದರೆ ಮುಂದಕ್ಕೆ ಓದಿ.

ಯೋಜನೆ ಎಂದರೆ. . . .?

ಯೋಜನೆಯ ಅಂತರ್ಗತ ಪ್ರಯೋಜನೆಗಳನ್ನು ಉತ್ತಮವಾಗಿ ವಿವರಿಸುವ ಹಳೆಯ ಮಾತೊಂದಿದೆ. ಅದು ‘ನೀವು ಯೋಜಿಸಲು ವಿಫಲರಾದರೆ, ನೀವು ವಿಫಲರಾಗಲು ಯೋಜಿಸುತ್ತೀರಿ.’ ಎಷ್ಟು ಮಾರ್ಮಿಕ ನುಡಿಯಲ್ಲವೇ? ಬದುಕಿನ ಚಂಡಮಾರುತಗಳಿಂದ ಪ್ರವಾಹಗಳಿಂದ ರಕ್ಷಿಸಲು ಯೋಜನೆಯೊಂದು ವಿಮೆಯಿದ್ದಂತೆ. ಭದ್ರತಾ ವ್ಯವಸ್ಥೆ ಸ್ಥಾಪಿಸಿದಂತೆ. ನಿತ್ಯದ ಜೀವನ ಮನಸೋ ಇಚ್ಛೆ ಬಾಲಂಗೋಚಿಯಿಲ್ಲದ ಗಾಳಿ ಪಟದಂತೆ ಹಾರಾಡುತ್ತಿದ್ದರೆ ಭವಿಷ್ಯವು ಸುರಕ್ಷಿತವಾಗಿರಲಾರದು ಎಂದು ಹೇಳಲು ಬ್ರಹ್ಮವಿದ್ಯೆ ಏನೂ ಬೇಕಿಲ್ಲ. ಆದರೆ ಯೋಜಿಸುವುದನ್ನು ಪರಿಗಣಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವವರ ಮತ್ತು ಉಪೇಕ್ಷಿಸುವವರ ಸಾಲೇ ದೊಡ್ಡದಾಗಿದೆ. ಇದು ಸಮಯ ತೆಗೆದು ಕೊಳ್ಳುವ ಪ್ರಕ್ರಿಯೆಯಂತೆ ತೋರುತ್ತದೆಯಾದರೂ ಅನುಕ್ರಮ ಯೋಜನೆ ಬದುಕಿಗೆ ಪ್ರಯೋಜನಕಾರಿಯಂತೂ ಸತ್ಯ ಎಂಬುದು ಈಗಾಗಲೇ ಸಾಬೀತಾದ ಸಂಗತಿ.

ಇರಲಿ ಕೆಲಸದ ಪಟ್ಟಿ

ಮಾಡುವ ಕೆಲಸದ ಪಟ್ಟಿಯನ್ನು ಯೋಜಿಸಿಕೊಂಡು ಕೆಲಸ ಮಾಡಲು ನಿರ್ಧರಿಸಿದರೆ ಎಲ್ಲ ಕೆಲಸವೂ ಹೂವಿನಷ್ಟು ಹಗುರವೆನಿಸುತ್ತವೆ. ಮತ್ತೆ ಹೊಸ ಕೆಲಸಗಳಿಗೂ ಕೈ ಹಾಕುವಷ್ಟು ಸಮಯ ಕೈಯಲ್ಲಿ ಉಳಿಯುತ್ತದೆ. ವರ್ಕಟೈಂ ಎನ್ನುವ ಟ್ರ್ಯಾಕಿಂಗ್ ಸಾಫ್ಟವೇರ್ ನೀವು ಮಾಡುವ ಕೆಲಸಗಳಿಗೆ ಸರಿಯಾದ ಸಮಯವನ್ನು ನಿಗದಿಗೊಳಿಸಿ ಹೇಳುತ್ತದೆ. ಕೆಲಸ ಮುಗಿದ ನಂತರ ನೀವು ನಿಗದಿತ ಸಮಯದಲ್ಲಿ ಮುಗಿಸಿದ್ದಿರೋ ಅಥವಾ ತುಂಬಾ ಹೆಚ್ಚು ಸಮಯ ತೆಗೆದುಕೊಂಡಿದ್ದಿರೋ ಎನ್ನುವುದನ್ನು ವಿಶ್ಲೇಸಿಸುತ್ತದೆ.  ಇದು ಕಾರ್ಯ ಉತ್ಪಾದಕತೆ ಮತ್ತು ಆರೋಗ್ಯಕ್ಕೂ ಸಹಕಾರಿ. ನಿಮ್ಮ ಸಂಪೂರ್ಣ ಕಾರ್ಯ ಪ್ರಕ್ರಿಯೆಯನ್ನು ನೀವು ಕಾರ್ಯ ಮಾಡುವ ವಿಧಾನಕ್ಕೆ  ಅದು ಕನ್ನಡಿ ಹಿಡಿಯುತ್ತದೆ.

ಇರಲಿ ಆದ್ಯತೆಯ ಪಟ್ಟಿ:

ತಲುಪಬೇಕಾದ ಗುರಿಯ ಯೋಜನೆಯು ನಿತ್ಯ ಸ್ವಲ್ಪ ಸ್ವಲ್ಪ ತುಂಡರಿಸಿ ನಿರ್ವಹಿಸುತ್ತ ಹೋದರೆ ಒಂದು ದಿನ ಗಮ್ಯವನ್ನು ತಲುಪಲು ಸಾಧ್ಯ. ಮಾಡಬೇಕಾದ ಕೆಲಸಗಳನ್ನು ಆದ್ಯತೆಯ ಮೇಲೆ ಪಟ್ಟಿ ಮಾಡಿ.ಆಗ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಷ್ಟೇ ಅಲ್ಲ ಎಲ್ಲವನ್ನೂ ನೆನಪಿಡುವ ಅವಶ್ಯಕತೆ ಇಲ್ಲ. ಏನೇನೋ ನೆನಪು ಮರೆತಿದಿನೇನೋ ಎಂಬ ಚಿಂತೆಯೂ ಇಲ್ಲ. ಸಣ್ಣ ಸಣ್ಣ ಮಾಹಿತಿಗಳ ಬಗೆಗೆ ತಲೆ ಕೆಡಿಸಿಕೊಳ್ಳುವ ಗೋಜಲು ಇಲ್ಲ. ತತ್ಪರಿಣಾಮ ನಿಮ್ಮ ಮೆದುಳು ಶಕ್ತಿಯುತವಾಗುತ್ತದೆ. ನಿರ್ದಿಷ್ಟ ಕಾರ್ಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ಕ್ಯಾಲೆಂಡರ್ ನಿಂದ ಮೂರ್ಖರಾಗುವುದು ಬೇಡ.

ವರ್ಷದಲ್ಲಿ ನೀವು ಎಷ್ಟು ದಿನ ಉಪಯೋಗಿಸಿಕೊಳ್ಳುತ್ತಿರೋ ಅಷ್ಟು ದಿನಗಳಿರುತ್ತವೆ. ಒಬ್ಬ ಒಂದು ವರ್ಷದಲ್ಲಿ ಒಂದು ವಾರದ ಮೌಲ್ಯ ಮಾತ್ರ ಗಳಿಸಿದರೆ ಮತ್ತೊಬ್ಬ ಒಂದು ವಾರದಲ್ಲಿ ಒಂದು ವರ್ಷದ ಮೌಲ್ಯ ಪಡೆಯಬಹುದು. ಅದು ಹೇಗೆ ಎಂಬ ಅಚ್ಚರಿಯ ಪ್ರಶ್ನೆಗೆ ಉತ್ತರ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು. ಗಮನ ಹೆಚ್ಚಿದಷ್ಟು ನೋಡ ನೋಡುತ್ತಿದ್ದಂತೆ ಉತ್ಪಾದಕತೆಯೂ ಹೆಚ್ಚುತ್ತದೆ. ‘ಉಚಿತವಾಗಿ ಬಂದಿದ್ದಕ್ಕೆ ಬೆಲೆ ಕಡಿಮೆ.’ ವಿಶೇಷವಾಗಿ ಸಲಹೆಗಳಿಗೆ ಉಪದೇಶದ ಮಾತುಗಳಿಗೆ ಇದು ಅನ್ವಯವಾಗುತ್ತದೆ. ಯೋಜನೆಯ ವಿಷಯದಲ್ಲಿ ನುರಿತವರು ಹೇಳಿದ್ದನ್ನು ಆಲಿಸಿ ನಿರ್ವಹಿಸಿದರೆ ಉತ್ಪಾದಕತೆ ಹೆಚ್ಚುವುದು ಖಚಿತ.  

ಸ್ಪಷ್ಟತೆಯ ಸೆಲೆ 

ಈಗಾಗಲೇ ಹೇಳಿದಂತೆ ಯೋಜನಾ ಪಟ್ಟಿಯು ಯಾವ ಕೆಲಸ ಎಷ್ಟು ಸಮಯ ಆದ್ಯತೆಯ ಬಗೆ ಹೇಗೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರವನ್ನು ಒದಗಿಸುತ್ತದೆ.ಬೇರೆ ಪದಗಳಲ್ಲಿ ಹೇಳುವುದಾದರೆ ಆದ್ಯತೆಯ ಪಟ್ಟಿ ನಿಮ್ಮ ಕೆಲಸಗಳಿಗೆ ಸೂಕ್ತ ದಿಕ್ಕಿನಲ್ಲಿ ಚಲಿಸಲು ಸಹಾಯ ಮಾಡುತ್ತವೆ.ನೀವು ಸಾಧಿಸಲೇಬೇಕಾದ ಉದ್ದೇಶಗಳನ್ನು ನಿರ್ದಿಷ್ಟ ಸಮಯದಲ್ಲಿ ಸಾಧಿಸಲು ಪ್ರೇರಕವಾಗುತ್ತದೆ. ಸ್ಪಷ್ಟತೆಯ ಸೆಲೆ ಇರುವಾಗ ಗೊಂದಲದ ಗೂಡಿನ ಗೊಡವೆಯೇ ಇಲ್ಲದಂತಾಗುತ್ತದೆ. ಸ್ಪೂರ್ತಿಯ ಹಾದಿಯ ಮೇಲೆ ನಡೆಯಲು ಸಾಧ್ಯವಾಗುವುದು. 

 ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ

ದಿನ ನಿತ್ಯದ ಕಾರ್ಯಾಚರಣೆಗಳಲ್ಲಿ ತುಂಬಾ ಕಾರ್ಯನಿರತರಾಗಿ ಅನುಕ್ರಮ ಯೋಜನೆಯನ್ನು ಆದ್ಯತೆಯನ್ನಾಗಿ ಮಾಡಲು ವಿಫಲರಾಗುವ ಸಾಧ್ಯತೆಯೇ ಹೆಚ್ಚು ಆದ್ದರಿಂದ ಅದರಿಂದ ಹೊರ ಬರುವುದು ಮುಖ್ಯ. ಯೋಜನೆಯಿಲ್ಲದೇ ಕಾರ್ಯ ನಿರ್ವಹಿಸುವ ಬಗೆ ಯಾವುದೇ ಸನ್ನಿವೇಶಗಳನ್ನು ಅನನ್ಯವಾಗಿ ದುರ್ಬಲಗೊಳಿಸಬಹುದು. ಕೌಶಲ್ಯಗಳನ್ನು ಅದೆಷ್ಟೇ ಕರತಲಾಮಲಕ ಮಾಡಿಕೊಂಡಿದ್ದರೂ ನಿರ್ಣಾಯಕ ಯೋಜನೆ ಇರದಿದ್ದರೆ ಸಿದ್ಧಿಸಿಕೊಂಡ ಕಲೆಗಳೆಲ್ಲ ನೀರಲ್ಲಿ ಹುಣಸೆಹಣ್ಣು ತೊಳೆದಂತೆ ವ್ಯರ್ಥ ಎಂಬುದನ್ನು ಗಮನದಲ್ಲಿಟ್ಟು  ಯೋಜನೆಗೆ ಮುಂದಾಗಿ. ಅರಿಯದೆ, ನೋಡದೆ, ಯೋಚಿಸದೆ, ಕಾರ್ಯ ಮಾಡಬಾರದು ಎಂದಿದ್ದಾನೆ ವಿಶ್ಣು ಶರ್ಮ.

ವಿಶ್ರಾಂತಿಯ ನೆಲೆ

ಗಡಿಬಿಡಿ ಜೀವನದಲ್ಲಿ ಸಮಯ ವೇಗದ ರೇಸ್ ಕುದುರೆಯಂತೆ ಓಡುತ್ತಿದೆ ಎನಿಸುತ್ತದೆ. ಅದರ ಪರಿವೆಯಿಲ್ಲದೇ ನಾವು ಕುರುಡರಂತೆ ಸಿಕ್ಕ ಸಿಕ್ಕಲ್ಲಿ ಸಮಯ ವ್ಯಯ ಮಾಡಿ ಯೋಜನೆಯಿಲ್ಲದೇ ಕಳಪೆ ಸಮಯ ನಿರ್ವಹಣೆ ಮಾಡಿ ಬಿಡುತ್ತೇವೆ. ಸಮಸ್ಯೆಗಳನ್ನು ನಾವೇ ಕೈ ಬೀಸಿ ಕರೆಯುತ್ತೇವೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಓಡಾಡುತ್ತೇವೆ. ಅದು ನಿಷ್ಪ್ರಯೋಜಕವಾಗುವುದು. ಸರಿಯಾದ ಕೆಲಸದ ಯೋಜನೆಯು ಜೀವನದ ಗತಿಯನ್ನೇ ಬದಲಿಸಬಲ್ಲುದು ಎಂಬುದು ಸಂಶೋಧನೆಗಳು ಹೊರಗೆಡುಹಿದ ಸಂಗತಿ. ನಿದ್ರಾವಸ್ಥೆಯಲ್ಲಿರುವ ಕೆಲಸಗಳನ್ನು ಎಬ್ಬಿಸಬಹುದು. ಕೆಸರು ಗದ್ದೆಯ ಹುಳು ಹುಪ್ಪಡಿಯಂತಾಗಿರುವ ಎಲ್ಲ ಕೆಲಸಗಳನ್ನು ಉಪಯುಕ್ತ ಯೋಜನೆಯ ಮೂಲಕ ಮುಗಿಸಬಹುದು.ಅದು ನಿಮ್ಮ ಒತ್ತಡದ ಮಟ್ಟವನ್ನು ಪೂರ್ಣ ಕೆಳಕ್ಕಿಳಿಸುತ್ತದೆ.ಅಷ್ಟೇ ಅಲ್ಲ ವಿಶ್ರಾಂತಿಯ ನೆಲೆಗೂ ಭೇಟಿ ನೀಡಲು ಅವಕಾಶ ಲಭಿಸುವುದು.ನಿಮಗೆ ನೀವು ಯೋಜನೆಯ ಸೂಕ್ಷ್ಮದರ್ಶಕದ ಕೆಳಗೆ ಇರಿಸಿಕೊಳ್ಳಲು ಹೆದರಬೇಡಿ. ಗೆಲುವು ಯೋಜನೆಯಿಲ್ಲದೇ ಬರಲಾರದು ಬಂದರೂ ಬಹು ದಿನ ನಿಲ್ಲಲಾರದು. ಗೆಲುವು ಮತ್ತು ಯೋಜನೆ ಅಭೇದ್ಯವಾಗಿ ಬೆಸೆದುಕೊಂಡಿವೆ. ದೊಡ್ಡ ಗೆಲುವನ್ನು ನಿರೀಕ್ಷಿಸಿ ಯೋಜನೆಯಿಂದ ಮುಂದಡಿ ಇಡಿ. ಈ ಬೆಸುಗೆಯ ಮುಗುಳ್ನಗು ತಮ್ಮ ಮುಖದ ಮೇಲೆ ಮೂಡಲಿ.

********

One thought on “ದಿಕ್ಸೂಚಿ

  1. Very good Article. Probably this digital world may leading us to under utilisation of our valuable time. But, this article is eye opener. Superb

Leave a Reply

Back To Top