ಕಾವ್ಯ ಸಂಗಾತಿ
ಹನಿಬಿಂದು ಅವರಕವಿತೆ “ಹೆಮ್ಮರ”


ಅಲ್ಲೊಂದು ಹಳೆಯ ದೊಡ್ಡ ಮರವಿತ್ತು
ಎತ್ತರ ಬೆಳೆಯಬೇಕೆಂಬ ಆಸೆಯಿತ್ತು
ಹಲವರಿಗೆ ಹೂ ಹಣ್ಣು ಕೊಟ್ಟಿತ್ತು
ಇನ್ನಿತರ ಜೀವಿಗಳಿಗೆ ಆಶ್ರಯವಾಗಿತ್ತು
ಹಿರಿ ಮರಕ್ಕೊಂದು ಹಮ್ಮು ಬೆಳೆಯಿತು
ನನ್ನಿಂದಲೇ ಇವೆಲ್ಲಾ ಇಲ್ಲಿ ಬದುಕುತ್ತಿವೆ
ನನ್ನಿಂದಲೇ ನೆರಳು ಹೂ ಹಣ್ಣು ಸಿಗುತ್ತಿವೆ
ಮೊದಲು ತನ್ನ ಎಲೆಗಳ ಎಲ್ಲಾ ಉದುರಿಸಿತು
ನಂತರ ಒಂದೊಂದೇ ಕೊಂಬೆಗಳ ಬೀಳಿಸಿತು
ಆಗ ಒಂದೊಂದೇ ಗೆಲ್ಲುಗಳು ತಂತಾನೇ ಬಿದ್ದವು
ಮುಂದೊಂದು ದಿನ ಪಕ್ಷಿ ಕೀಟ ಹುಳಗಳಿಲ್ಲ
ಹಸಿರಿಲ್ಲ, ಹೂವಿಲ್ಲ , ಹಣ್ಣಿಲ್ಲ ಎಲೆಯಿಲ್ಲ
ಕೇಳುವವರು ಯಾರಿಲ್ಲ, ಕೂರುವವರಿಲ್ಲ
ನೆರಳಿಲ್ಲ, ಮೋಡ ತಡೆಯಲೂ ಆಗುತ್ತಿಲ್ಲ
ಮರ ಹಿಂದಿರುಗಿ ನೋಡಿ, ಪಕ್ಕದ ಮರಕ್ಕೆ ಕೇಳಿತು
ಕೊಂಬೆ ರೆಂಬೆ ಎಲೆ ಎಲ್ಲಾ ನನಗೆ ಕೊಡುವೆಯಾ
ಕೊಡಲಾರೆ ಎಂದಾಗ ಹೊಸದು ತರುವೆನೆಂದಿತು !
ಮಳೆಗಾಲಕ್ಕಾಗಿ ಕಾಯುತ್ತಿತ್ತು, ಹೊಸದಾಗಿ ಚಿಗುರೆ !
ನೀರು ಸಿಕ್ಕರೂ ಮಣ್ಣು ಫಲಿಸಲಿಲ್ಲ ಅಲ್ಲಿ
ಮತ್ತೆ ಚಿಗುರಲಾಗಲಿಲ್ಲ, ಕೊಂಬೆಗಳು ಬಿಟ್ಟು ಒಣಗಿತ್ತು
ಮತ್ತೆ ಹಸಿರಾಗಲಿಲ್ಲ, ಚಳಿಗಾಲ ಬಂದಿತ್ತು!
ಹೂ ಬಿಡಲಾಗಲಿಲ್ಲ, ಚಿಟ್ಟೆ ಹಾರಿ ಬರಲಿಲ್ಲ
ಕಾಯಿ ಹಣ್ಣಾಗಲಿಲ್ಲ, ಬೋಳು ಬೋಳು ಎಲ್ಲಾ
ಮತ್ತೆ ದೇವರಿಗೆ ಮೊರೆ ನೀನೇಕೆ ಹೀಗೆ ಮಾಡಿದೆ?
ದೇವರು ಕೇಳಿಸಿಕೊಂಡರೂ ‘ನಿನ್ನ ಕರ್ಮ ‘ ಎಂದಿರಬಹುದು!
ಹಿಂದಿನ ಜನ್ಮದ ಪಾಪವೂ ಸುತ್ತಿ ಬಂದಿರಬಹುದು
ಮರದ ಗುಣದ ದುರುಪಯೋಗವೋ ಪಾಪವೋ
ತನ್ನಲ್ಲಿರುವ ಸಂಪತ್ತಿನ ಅಹಮ್ಮಿಕೆಯೋ, ಗರ್ವವೋ
ಪರರಿಂದ ಹೀರಿಕೊಂಡ ನೀರು ಗೊಬ್ಬರದ ಮದವೋ
ಅಪಾರ ಜ್ಞಾನ ತನ್ನಲ್ಲಿದೆ ಎಂಬ ಅಲ್ಪ ಜ್ಞಾನದ ಪರಿಯೋ?
ಪರಿಸ್ಥಿತಿಯ ಕೈಗೊಂಬೆಯೋ, ದೊಡ್ಡವನ ಸಣ್ಣತನವೋ
ತನ್ನ ಮೇಲೆ ತನಗಿರುವ ಅಧಿಕ ಆತ್ಮವಿಶ್ವಾಸವೋ ..
ನಾನೇ ಎಲ್ಲಾ ಎಂಬ ಅಹಂಕಾರವೋ
ಅಂತೂ ಮರ ಬೋಳಾಯಿತು, ಸತ್ತು ಹೋಯಿತು
ಜನ ಕಡಿದರು, ತುಂಡು ತುಂಡಾಗಿಸಿ
ಉರುವಲಿಗೆ ಬಳಸಿ ಬೂದಿ ಮಾಡಿದರು..
ಇಲ್ಲಿಗೆ ಮರದ ಕಥೆ ಮುಗಿಯಿತು…
————
ಹನಿಬಿಂದು



