ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಆತ್ಮೀಯರೇ,ಹಿರಿಯರೇ, ಸ್ನೇಹಿತರೇ,ಹಿರಿ ಕಿರಿಯ ಲೇಖಕ ಲೇಖಕಿಯರೇ,ಮಾನ್ಯರೇ,
ಎಲ್ಲರಿಗೂ ಗೌರವದ ವಂದನೆಗಳು.ದಿನಾಂಕ ೩೦-೧೦-೨೬ ರಂದು ಮಧ್ಯಾಹ್ನ ಮಾನ್ಯ ಸಂಸ್ಕೃತಿ ಸಚಿವರು ಪ್ರೆಸ್ ಮೀಟ್ ಮಾಡಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡುತಿದ್ದಂತೆಯೇ ನಾಡಿನ ಸಾಕ್ಷಿಪ್ರಜ್ಞೆಯಂತಹ ಹಿರಿಯ ಲೇಖಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸರ್ ಅವರು ಒಳಗೊಂಡಂತೆ ನೂರಾರು ಹಿರಿಯ ಹಾಗೂ ಯುವ ಸಾಧಕರಾದ ತಾವೆಲ್ಲರೂ ಖುಷಿಯಿಂದ ಫೋನ್, ಹಾಗೂ ಸಂದೇಶಗಳ ಮೂಲಕ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿನಂದನೆಗಳ ಮಳೆ ಸುರಿಸಿ ನನಗೆ ಹರಸಿ ಹಾರೈಸಿದ್ದೀರಿ. ನಿಮ್ಮೆಲ್ಲರ ಸೌಜನ್ಯಕ್ಕೆ ಶರಣು ಶರಣಾರ್ಥಿಗಳು.

ನಮ್ಮ ಮಾಧ್ಯಮಗಳ ಸ್ನೇಹಿತರು ಫೋನ್ ಮಾಡಿದರು, ಅಭಿನಂದನೆಗಳು ಹೇಳಿದರು.ಸಂದೇಶ ಹಾಕಿ ನನ್ನ ಕೆಲವು ವಿವರ ಹಾಗೂ ಅನೇಕ ಭಾವಚಿತ್ರ ಕೇಳತೊಡಗಿದ್ದರು. ಆ ಒತ್ತಡದಲ್ಲಿ ೪-೫ ವರ್ಷಗಳ ಹಿಂದಿನ ಅನೇಕ ಪ್ರಮುಖ ಭಾವಚಿತ್ರಗಳು ಸಹ ನನಗೆ ಗ್ಯಾಲರಿ ಹೋಗಿ ಹುಡುಕಿ ಕೊಡಲು ಆಗದೇ ಕ್ಷಮೆ ಕೇಳಬೇಕಾಯಿತು.ಕಳೆದ ಹತ್ತಾರು ವರ್ಷಗಳಿಂದ ನಮ್ಮ ಯಾದಗಿರಿ ಜಿಲ್ಲೆಯ ಪತ್ರಕರ್ತರು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಒಂದಷ್ಟು ನಮ್ಮಗಳ ಭಾವಚಿತ್ರ ಹಾಕಿ ಯಾರಿಗೆ ಒಲಿಯಲಿದೆ ಈ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಎಂದು ಸುದ್ದಿ ಮಾಡುತ್ತಾ ಇದ್ದರು. ಅಂತೂ ಅವರ ಹಾರೈಕೆಯಂತೆ ಈ ಸಲ ನನಗೆ ಒಲಿದಿದೆ. ಆ ಪತ್ರಕರ್ತ ಮಿತ್ರರಿಗೆ ವಂದನೆಗಳು. ಅವರ ಫೋನ್ ಬಂದಾಕ್ಷಣ ನನ್ನ ಗ್ಯಾಲರಿ ಹುಡುಕಾಟ ಕಟ್ ಆಗುತ್ತಿತ್ತು.ಸರಿಯಾಗಿ ಯಾವ ಭಾವಚಿತ್ರ ಕೊಡಲು ಆಗಲೇ ಇಲ್ಲ. ಅವರೆಲ್ಲರ ಪ್ರೀತಿ ದೊಡ್ಡದು. ಅಪಾರ ಕವರೇಜ್ ನೀಡಿದ ಎಲ್ಲಾ ಮಾಧ್ಯಮಗಳ ಮಿತ್ರರಿಗೂ ಕೃತಜ್ಞತೆಗಳು.

ಸಹಸ್ರಾರು ಜನ ಆತ್ಮೀಯರು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಪೋಸ್ಟ್ ಹಂಚಿಕೊಂಡಿದ್ದೀರಿ. ನಮ್ಮ ಜಿಲ್ಲೆಯ ಹಾಗೂ ಇಡೀ ಕಲ್ಯಾಣ ಕರ್ನಾಟಕ ಹಾಗೂ ನಾಡಿನಾದ್ಯಂತ ಇರುವ ಆತ್ಮೀಯ ಲೇಖಕ ಲೇಖಕಿಯರ ಸಂಭ್ರಮ ಹೇಳತೀರದು. ತಮಗೆ ಬಂದಷ್ಟು ಖುಷಿ ಹಂಚಿಕೊಂಡಿದ್ದೀರಿ. ಸ್ಟೇಟಸ್ ಇಟ್ಟು ಸಂತಸ ಪಟ್ಟಿರಿ. ನಿಮಗೆಲ್ಲರಿಗೂ ವೈಯಕ್ತಿಕವಾಗಿ ಉತ್ತರಿಸಲಾಗದ ಆ ದಿನಗಳ ಒತ್ತಡ ತಮಗೆ ಅರ್ಥ ಆಗಿರುತ್ತದೆ ಅಂದುಕೋತೇನೆ. ಅನೇಕರ ಫೋನ್ ಗಳಿಗೆ ಹಾಗೂ ಸಂದೇಶಗಳಿಗೆ ಈಗಲೂ ಉತ್ತರಿಸುತ್ತಾ ಇದ್ದೇನೆ. ಕೆಲವರು ನಮ್ಮ ಫೋನ್ ತೆಗೆದಿಲ್ಲ. ಮೆಸೇಜ್ ಗೆ ಉತ್ತರಿಸಿಲ್ಲ ಎಂದು ನೊಂದು ಹೇಳಿರಿ.ನಿಜ. ಅಂದು ನೂರಾರು ಆತ್ಮೀಯರ ಪೋಸ್ಟ್ ಗಳು ಗಮನಿಸಿಲ್ಲ.ಎಲ್ಲರ ಫೋನ್ ಸ್ವೀಕರಿಸಲು ಆಗಲಿಲ್ಲ. ನಿಜ. ನನ್ನನ್ನು ಕ್ಷಮಿಸಿರಿ. ತಪ್ಪು ಭಾವಿಸಬೇಡಿ. ಬೆಳಗಿನ ನಾಲ್ಕು ಗಂಟೆಯವರೆಗೆ ಸಾಧ್ಯ ಆದಷ್ಟು ಜನ ಆತ್ಮೀಯರಿಗೆ ರಿಪ್ಲೈ ಮಾಡಿದ್ದೇನೆ. ನೀವು ನನಗೆ ಟ್ಯಾಗ್ ಮಾಡಿದವುಗಳು ಮಾತ್ರ ನನ್ನ ಕಣ್ಣ ಮುಂದೆ ಬರುತ್ತವೆ. ಸಾಧ್ಯ ಆದಷ್ಟು ನೋಡಿದಾಗ ಧನ್ಯವಾದಗಳು ಹೇಳಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿ ಬಂತು, ಉತ್ತರ ಕೊಡಲಾಗದಷ್ಟು ದೊಡ್ಡವರು ಆದರೇನೋ ಅಂದುಕೋಬೇಡಿ. ದಯವಿಟ್ಟು ಕ್ಷಮಿಸಿರಿ.

ನಾಡಿನಲ್ಲಿ ನನಗಿಂತ ಹಿರಿಯರು,ಸಾಧಕರು ಸಾಕಷ್ಟು ಜನ ಲೇಖಕ ಲೇಖಕಿಯರು ಇದ್ದಾರೆ. ಯಾವುದೇ ಪ್ರಶಸ್ತಿ ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯದ ಹಿನ್ನೆಲೆಯಲ್ಲಿ ಆಯ್ಕೆ ಆಗುತ್ತವೆ. ನನ್ನ ಸಾಧನೆಯ ಜೊತೆಗೆ ಬಹಳ ವರ್ಷಗಳಿಂದ ಯಾದಗಿರಿ ಜಿಲ್ಲೆಗೆ ಸಾಹಿತ್ಯ ಕ್ಷೇತ್ರದಲ್ಲಿ ಬಂದಿರಲಿಲ್ಲ ಎಂಬ ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನನಗೆ ಲಭಿಸಿದೆ ಎಂಬ ವಿನಯ ನನ್ನದು. ನಾನು ಹಿಂದೆ ಅಕಾಡೆಮಿಯ ಸದಸ್ಯನಾಗಿ ಕೆಲಸ ಮಾಡುತ್ತಾ ಇದ್ದಾಗಲೂ ಇದೇ ಮಾನದಂಡದಿಂದ ಆಯ್ಕೆ ಮಾಡುತ್ತಾ, ಹೆಸರು ಸೂಚಿಸುತ್ತಾ ಇದ್ದೇವು.ಅಂತಿಮ ತೀರ್ಮಾನ ನಮ್ಮ ಮಾನ್ಯ ಅಧ್ಯಕ್ಷರು ಹಾಗೂ ಮಾನ್ಯ ರಿಜಿಸ್ಟ್ರಾರ್ ಅವರು ಇದೇ ನ್ಯಾಯದ ಅಡಿಯಲ್ಲಿ ಅರ್ಥಪೂರ್ಣವಾಗಿ ತಗೋತಿದ್ದರು.

ಇಲ್ಲಿಯ ರಾಜ್ಯೋತ್ಸವ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮಾನ್ಯ ಮುಖ್ಯಮಂತ್ರಿಗಳು, ಸಂಸ್ಕೃತಿ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಅಧಿಕಾರಿಗಳು ಫೈನಲ್ ಮಾಡುತ್ತಾರೆ. ಅದು ಸಹಜ. ಹೀಗಾಗಿ ಪ್ರಶಸ್ತಿ ಬಂತು ಅಂದಾಕ್ಷಣ ನಾನು ದೊಡ್ಡ ಸಾಧಕ ಎಂದು ಭಾವಿಸಲಾರೆ. ಖಂಡಿತಾ ಬದಲಾಗಲಾರೆ. ಇನ್ನಷ್ಟು ವಿನಯದಿಂದ ಇರುತ್ತೇನೆ. ಇದು ಸಂದಿರೋದು ನನಗಲ್ಲ. ಕಲ್ಯಾಣ ಕರ್ನಾಟಕಕ್ಕೆ, ಆ ಮೂಲಕ ಗಿರಿ ನಾಡಿನ ಯಾದಗಿರಿ ಜಿಲ್ಲೆಗೆ, ಸಗರ ನಾಡಿನ ಎಲ್ಲಾ ಹಿರಿ ಕಿರಿಯ ಲೇಖಕರಿಗೆ, ಹಾಗೂ ನಾಡಿನಾದ್ಯಂತ ಇರುವ ಆತ್ಮೀಯ ಹಿರಿಯ ಹಾಗೂ ಯುವ ಲೇಖಕ ಲೇಖಕಿಯರಿಗೆ ಎಂದು ಭಾವಿಸಿ ಅತ್ಯಂತ ಸಂಕೋಚದಿಂದ ಈ ಪ್ರಶಸ್ತಿ ಸ್ವೀಕರಿಸಿದ್ದೇನೆ. ಇದೋ ನಿಮಗೆಲ್ಲರಿಗೂ ಕೃತಜ್ಞತೆಗಳು.ನಿಮ್ಮ ಎಲ್ಲರ ಪ್ರೀತಿ ಎಂದಿನಂತೆ ಇರಲಿ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ನಾಡಿನ ಮುಖ್ಯಮಂತ್ರಿಗಳು ಆದ ಮಾನ್ಯ ಶ್ರೀ ಡಿಕೆ ಸಾಹೇಬರಿಂದ, ಮಾನ್ಯ ಸಂಸ್ಕೃತಿ ಸಚಿವರು ಆದ ಮಾನ್ಯ ಶ್ರೀ ಶಿವರಾಜ್ ತಂಗಡಗಿ ಸಾಹೇಬರಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಅಧಿಕಾರಿಗಳಾದ ಮಾನ್ಯ ಕಾರ್ಯದರ್ಶಿಗಳು, ಮಾನ್ಯ ನಿರ್ದೇಶಕರಿಂದ ಆರು ಕೋಟಿ ಕನ್ನಡಿಗರ ಆಶೀರ್ವಾದದಿಂದ ನವೆಂಬರ ಒಂದರಂದು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸಂತಸ ನನ್ನದು.

ಯಾರು ನಮಗೆ ಸ್ಪಂದಿಸಿಲ್ಲ ಎಂದು ದಯವಿಟ್ಟು ಭಾವಿಸಬೇಡಿ. ಒಮ್ಮೆಲೇ ಹೇಗೆ ಸ್ಪಂದಿಸಲಿ. ನೀವೇ ಯೋಚಿಸಿ. ನಿಮ್ಮ ಎಲ್ಲರ ಪ್ರೀತಿ ಸ್ನೇಹ ಮೆಚ್ಚುಗೆ ಪಡೆದ ನಾನು ಧನ್ಯನು ಎಂದು ನಿಮಗೆಲ್ಲರಿಗೂ ಈ ಪೋಸ್ಟ್ ಮೂಲಕ ಅನಂತ ಧನ್ಯವಾದಗಳು ಅರ್ಪಿಸುತ್ತಿದ್ದೇನೆ. ಇದು ನಿಮಗೆ ಸಂದ ಗೌರವ ಅಂದುಕೊಳ್ಳಿ.ಆ ಕಾರಣ ಪ್ರಶಸ್ತಿಯ ಮೊತ್ತವನ್ನು ಸಹ ದತ್ತಿನಿಧಿ ಆಗಿ ಇಟ್ಟು ಪ್ರತಿವರ್ಷ ವಿವಿಧ ಕ್ಷೇತ್ರಗಳ ಐದು ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಈ ನೆಲದ ನಿಮ್ಮ ಎಲ್ಲರ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಋಣವನ್ನು ತೀರಿಸಲು ಯತ್ನಿಸುತ್ತೇನೆ. ನಿಮ್ಮ ಎಲ್ಲರ ಪ್ರೀತಿ ವಿಶ್ವಾಸ ಸಲಹೆ ಸಹಕಾರ ಎಂದಿನಂತಿರಲಿ. ಯಾರು ದಯವಿಟ್ಟು ತಪ್ಪು ಭಾವಿಸಬೇಡಿ ಎಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ.

ಸುದ್ದಿ ತಿಳಿದಾಗಿನಿಂದ ಎಲ್ಲಿದ್ದೀರಿ ಸರ್,ನಿಮಗೆ ಗೌರವಿಸಲು ಊರಿಗೆ ಬರುತ್ತಿದ್ದೇವೆ ಎಂದು ಫೋನ್ ಮೇಲೆ ಫೋನ್.ನಾನು ಜಾಸ್ತಿ ಊರಲ್ಲಿ ಇರೋಲ್ಲ ಎಂಬ ಅವರ ಸಂದೇಹ ಸಹ ನಿಜ. ನಾನು ಊರಲ್ಲಿ ಇಲ್ಲ.ತಮ್ಮ ಈ ಹಾರೈಕೆ ಸಾಕು.ದಯವಿಟ್ಟು ಈ ಶಾಲು ಹಾರ ಬೇಡಿ.ದೂರದಿಂದಲೇ ಆಶೀರ್ವಾದ ಮಾಡಿರಿ.ಶುಭ ಕೋರಿರಿ.ನಿಮ್ಮ ಪ್ರೀತಿ ಸಾಕು ಎಂದು ಹೇಳುತ್ತಾ ಬಂದಿದ್ದೇನೆ. ಈಗಲೂ ಅದೇ ಮಾತು.ದಯವಿಟ್ಟು ಅಲ್ಲಿಂದಲೇ ನನಗೂ ನಮ್ಮ ಕುಟುಂಬಕ್ಕೆ ನಿಮ್ಮ ಶುಭ ಹಾರೈಕೆಗಳು ಇರಲಿ ಸಾಕು.ನನಗೆ ಅದೇ ದೊಡ್ಡದು.ಆದರೂ ಸ್ಥಳಿಯರ ಕೈಯಲ್ಲಿ ಸಿಕ್ಕು ಅವರ ಪ್ರೀತಿಗೆ ಮಣಿದಿದ್ದೇನೆ.ಅದು ಅನಿವಾರ್ಯ.

೨೦೧೩ ರಲ್ಲಿ ಯಾದಗಿರಿ ಜಿಲ್ಲೆಯ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,೨೦೧೭ ರಲ್ಲಿ ಶಹಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ,೨೦೧೮ ರಲ್ಲಿ ಯಾದಗಿರಿ ಜಿಲ್ಲಾ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ, ೨೦೨೨ ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನ ನಡೆದ ೧೦ ನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೨೩ ರಲ್ಲಿ ಕಲಬುರ್ಗಿಯಲ್ಲಿ ನಡೆದ ಕಲ್ಯಾಣ ನಾಡಿನ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಹೀಗೆ ಅನೇಕ ಗೌರವದ ಸ್ಥಾನ ಮಾನಗಳು ಬಂದಾಗ, ಪುರಸ್ಕಾರ ಸಂದಾಗ, ಸಹಸ್ರಾರು ಜನ ಆತ್ಮೀಯರಿಂದ ನಿತ್ಯ ನಿರಂತರವಾಗಿ ಸನ್ಮಾನಗೊಂಡಿದ್ದೇನ. ಏನಿತು ಜನ್ಮಗಳಲ್ಲಿ ಏನಿತು ಜೀವಿಗಳಿಗೆ ನಾವು ಋಣಿಯೋ,ಈ ಜನ್ಮವೆಂಬುದು ಹಲವು ಋಣಗಳ ರತ್ನಗಣಿಯೋ ಅನ್ನುವಂತಾಗಿದೆ.ದಯವಿಟ್ಟು ಬೇಡಿ…ಈ ಸಲ ಆದರೂ ದೂರದಿಂದ ಹಾರೈಸಿ ಎಂದು ಕೋರುತ್ತೇನೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗೆ ಮುಂದೆ ಸರ್ಕಾರದ ಅನೇಕ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ತಗೋತಾರೆ ಎಂಬ ಮಾತಿದೆ. ಹಾಗೇನಾದ್ರೂ ನನಗೆ ಮುಂದೆಅಂತಹ ಆ ಅವಕಾಶ ಬಂದರೆ ಖಂಡಿತಾ ಸಾಧಕರನ್ನು ನಮ್ಮ ಭಾಗದಲ್ಲಿ ಹಾಗೂ ನಾಡಿನಾದ್ಯಂತ ಗುರುತಿಸುವ ಪ್ರಾಮಾಣಿಕ ಪ್ರಯತ್ನ ಕಾಳಜಿ ನನ್ನದು ಸದಾ ಇರುತ್ತದೆ. ನಮಸ್ಕಾರಗಳು.

————

About The Author

Leave a Reply

You cannot copy content of this page

Scroll to Top