ಕಾವ್ಯ ಸಂಗಾತಿ
ರತ್ನರಾಯಮಲ್ಲ
ಗಜಲ್


ನಿನ್ನ ಅನುಪಸ್ಥಿತಿ ಆಗಸದಂತೆ ಎಲ್ಲದರಲ್ಲೂ ಹರಡಿದೆ ಸುಮಲ್ಲಿ
ಮಲ್ಲಿಗೆಯ ಸುಮ ಅರಳದೆ ಜೀವನೊತ್ಸಾಹವೆ ಕರಗಿದೆ ಸುಮಲ್ಲಿ
ಕಂಗಳು ಸದಾ ನಿನ್ನನೇ ಹುಡುಕುತಿರುತವೆ ಕಣ್ಣು ತುಂಬಿಕೊಳ್ಳಲು
ಬೇಕೆನಿಸಿದಾಗ ನಿನ್ನನು ನೋಡಲಾಗದ ನೋಟ ಒಡೆದಿದೆ ಸುಮಲ್ಲಿ
ನನ್ನ ಎದೆಯಂಗಳದಲಿ ಕೂಸುಮರಿ ಆಟವಾಡಲು ಕಾಯುತಿರುವೆ
ನಿನ್ನನು ಬಿಗಿದಪ್ಪಲಾಗದೆ ಹೃದಯದ ಬಡಿತವು ನರಳಿದೆ ಸುಮಲ್ಲಿ
ನಿನ್ನ ಮಿಲನದ ಅಮೃತಧಾರೆಗೆ ಚಾತಕ ಪಕ್ಷಿಯಂತೆ ಹಂಬಲಿಸಿರುವೆ
ನಿನ್ನ ಸೇರಲಾಗದೆ ಆಯಸ್ಸು ಹೆಚ್ಚಿದಂತೆ ವಯಸ್ಸು ಬಳಲಿದೆ ಸುಮಲ್ಲಿ
ದಿನವೂ ನಿನ್ನ ಕೈ ಹಿಡಿದು ಸುತ್ತುವ ಕನಸು ಕನಸಾಗಿಯೇ ಉಳಿದಿದೆ
ಕಾಲದ ಅಂತರವು ಮಲ್ಲಿಯ ಮೈ ಮನವನು ಸುಡುತಿದೆ ಸುಮಲ್ಲಿ
————
ರತ್ನರಾಯಮಲ್ಲ



